ಸದ್ದೆ ಇಲ್ಲದಿರುಳಿನಲ್ಲಿ

ನಿದ್ದೆ ಹೆಣ್ಣು ಬಂದು ಎನ್ನ
ಮುಗ್ಧನೇತ್ರಗಳಿಗೆ ತನ್ನ
ಮುದ್ದುಮುತ್ತ ಕೊಡುವ ಮುನ್ನ,
ಲೋಲಬಾಲೆ ನೆನಪು ಬಂದು
ಹೋದ ಬಾಳ ಬೆಳಕ ತಂದು
ಚಿತ್ತಭಿತ್ತಿಯಲ್ಲಿ ನಿಂದು
ನಲಿದು ಕುಣಿದು ಹಿಂದುಮುಂದು,
ನಲ್ಮೆದೋರಿ ಮೆರೆವಳು;
ಒಲ್ಮೆದೋರಿ ಕರೆವಳು!
ಅಂದಿನಾಟ,
ಚೆಂದದೂಟ,
ಅಂದಿನೋಟ,
ಕೂಟ, ನೋಟ,
ಕಣ್ಣನೀರು, ಮಂದಹಾಸ,
ಅಣುಗತನದ ಹುಚ್ಚುವೇಷ,
ಅಂದು ಮೆರೆದ ಬೇಟವು,
ಅಂದು ಹೊಳೆದು
ಒಲಿದು ನಲಿದು,
ಇಂದು ಮಣ್ಣು
ಕವಿದ ಕಣ್ಣು;
ಅಂದು ಹರುಷದಿಂದ ನಡೆದು
ಇಂದು ಶೋಕದರೆಗೆ ಬಡಿದು,
ಒಡೆದ ಎದೆಯ ಕೂಟವು!

ಸದ್ದೆ ಇಲ್ಲದಿರುಳೊಳಿಂತು
ನಿದ್ದೆ ಹೆಣ್ಣು ಬಂದು ಎನ್ನ
ಮುಗ್ಧನೇತ್ರಗಳಿಗೆ ತನ್ನ
ಮುದ್ದುಮುತ್ತ ಕೊಡುವ ಮುನ್ನ,
ಖಿನ್ನವದನೆ ನೆನಪು ಬಂದು
ಹೋದಬಾಳ ಬೆಳಕ ಬಂದು
ಚಿತ್ತಭಿತ್ತಿಯಲ್ಲಿ ನಿಂದು
ನಲಿದು ಕುಣಿದು ಹಿಂದುಮುಂದು,
ನಲ್ಮೇದೋರಿ ಮೆರೆವಳು;
ಒಲ್ಮೆದೋರಿ ಕರೆವಳು!

ಹಗಲು ಇರುಳು ಆಟವಾಡಿ
ದಿನವು ಮುದ್ದು ಮಾತನಾಡಿ,
ಒಂದೆ ಜೀವದುಸಿರನೆಳೆದು,
ಒಂದೆ ಬಾಳಿನಲ್ಲಿ ಬೆಳೆದು,
ಮಾಗಿ ಚಳಿಯ ಗಾಳಿ ಬೀಸೆ,
ಮಾಗಿ, ಭೂಮಿಗುದುರುವಂತೆ,
ಯಾಗಿ ಭೂಮಿಗುದುರುವಂತೆ,
ಸಾಗಿ ಉದುರಿ ಮಾಯವಾದ
ಗೆಳೆಯರನ್ನು ನೆನೆಯಲು,
ಎಳೆಯರನ್ನು ನೆನೆಯಲು;
ಬೆಳಕ ಕಳೆದು
ಸೊಬಗನುಳಿದು
ಕತ್ತಲಾಗಿ
ಬತ್ತಲಾಗಿ,
ತೋರಣಂಗಳಲ್ಲಿ ಕೋದ
ತಳಿರು ಹೂವು ಬಾಡಿ ಹೋದ
ಬಿಟ್ಟ ಮದುವೆಮನೆಯೊಳು,
ಜೊತೆಯ ನೀಗಿ
ಒಂಟಿಯಾಗಿ,
ಬೇಸರಿಂದ,
ಭೀತಿಯಿಂದ,
ಪಾಳುಬಿದ್ದ ಮನೆಯ, ಬಾಡಿ
ನೇತುಬಿದ್ದ ಸೊಬಗ ನೋಡಿ
ಅಳುವ ನೆಂಟನಾಗುವೆ!

ಸದ್ದ ಇಲ್ಲದಿರುಳೊಳಿಂತು
ನಿದ್ದೆ ಹೆಣ್ಣು ಬಂದು ಎನ್ನ
ಮುಗ್ಧ ನೇತ್ರಗಳಿಗೆ ತನ್ನ
ಮುದ್ದು ಮುತ್ತು ಕೊಡುವ ಮುನ್ನ,
ಖಿನ್ನವದನೆ ನೆನಪು ಬಂದು
ಹೋದ ಬಾಳ ಬೆಳಕ ತಂದು
ಚಿತ್ತಭಿತ್ತಿಯಲ್ಲಿ ನಿಂದು
ನಲಿದು ಕುಣಿದು ಹಿಂದುಮುಂದು,
ನಲ್ಮೆದೋರಿ ಮೆರೆವಳು;
ಒಲ್ಮೆದೋರಿ ಕರೆವಳು.


* ಥಾಮಸ್ ಹುಡ್ ಕವಿಯ ‘ದಿ ಲೈಟ್ ಅಫ್ ಅದರ ಡೇಸ್’ ಎಂಬ ಕವನದ ಅನುವಾದ