Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಪ್ರೊ. ಎಚ್ ಎಚ್ ಅಣ್ಣಯ್ಯಗೌಡ

ಇಂಗ್ಲಿಷ್ ಬೋಧನೆ ಹಾಗೂ ಕನ್ನಡ ಸಾಹಿತ್ಯ ರಚನೆ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿರುವ ಹಿರಿಯ ಪ್ರಾಧ್ಯಾಪಕರು ಪ್ರೊ. ಎಚ್ ಎಚ್ ಅಣ್ಣಯ್ಯಗೌಡರು.

ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇರಿದ ಶ್ರೀ ಅಣ್ಣಯ್ಯಗೌಡರು ಹಿರಿಯ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲೆಂಡ್‌ನ ದರ್‌ ಹ್ಯಾಂ ವಿಶ್ವವಿದ್ಯಾನಿಲಯದಿಂದ ಎಂ.ಲಿಟ್. ಪದವಿ ಪಡೆದ ಶ್ರೀಯುತರು ದೇಶ ವಿದೇಶಗಳಲ್ಲಿ ಅನೇಕ ಸಭೆ ಸಮ್ಮೇಳನಗಳಲ್ಲಿ ಭಾಗವಹಿಸಿ ವಿವಿಧ ವಿಷಯಗಳ ಬಗ್ಗೆ ವಿದ್ವತ್‌ ಪೂರ್ಣ ಪ್ರಬಂಧಗಳನ್ನು ಮಂಡಿಸಿದ ಖ್ಯಾತಿ ಪಡೆದಿದ್ದಾರೆ. ಇಂಗ್ಲೆಂಡ್‌ ಸ್ಟಾರ್ಟ್‌ ಫರ್ಡ್ ಅಪಾನ್ ಏವನ್‌ ಶೇಕ್ಸ್‌ಪಿಯ‌ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಪ್ರಬಂಧ ಮಂಡಿಸಿದ ಕೀರ್ತಿ ಇವರದು. ಫುಲ್‌ ಬೈಟ್ ಅಧ್ಯಾಪಕರಾಗಿ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಬೋಧನೆ. ಆಫ್ರಿಕಾ, ಆಸ್ಟ್ರೇಲಿಯಾ, ಕೆನಡಾ ವಿಶ್ವವಿದ್ಯಾಲಯಗಳಲ್ಲಿ ಕಾಮನ್‌ವೆಲ್ತ್‌ ವೇತನ ಪಡೆದು ಭಾಷಣ ಮಾಡಿದ ಹಿರಿಮೆ ಇವರದು. ೧೯೭೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕಲಾವಿಭಾಗದ ಡೀನ್ ಆಗಿ, ಕಾಮನ್‌ವೆಲ್ತ್ ಸಂಸ್ಥೆಯ ಸ್ಥಾಪಕ, ಅಧ್ಯಾಪಕರಾಗಿ ಹೀಗೆ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಪಡೆದಿದ್ದಾರೆ. ಇವರ ಮೊದಲ ಕೃತಿ ‘ಮೃಗ ಪ್ರಭುತ್ವ’ ೧೯೫೦ರಲ್ಲಿ ಪ್ರೌಢಶಾಲೆಯ ಪಠ್ಯಗ್ರಂಥವಾಗಿತ್ತು.

‘ಡ್ರಾಮೆಟಿಕ್ ಪೊಯಿಟ್ರಿ ಫ್ರಂ ಮೆಡಿವಲ್ ಟು ಮಾಡರ್ನ್ ಟೈಮ್ಸ್’ ಕೃತಿಗೆ ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಪ್ರಶಸ್ತಿ ದೊರೆತಿದೆ.

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಪಾರಂಗತರಾದ ಹಲವಾರು ಉತ್ತಮ ಕೃತಿಗಳನ್ನು ರಚಿಸಿರುವ ಬಹುಸಂಖ್ಯೆಯ ಸಾಹಿತ್ಯಕ ಮತ್ತು ವಿಮರ್ಶಾತ್ಮಕ ಲೇಖನಗಳನ್ನು ಬರೆದಿರುವ ಪ್ರೊ. ಎಚ್ ಎಚ್ ಅಣ್ಣಯ್ಯಗೌಡ ಅವರ ಕೊಡುಗೆ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯವಾದದ್ದು.