ಕರ್ನಾಟಕದ ದೈಹಿಕ ಶಿಕ್ಷಣ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದ ಪ್ರಮುಖರಲ್ಲಿ ಒಬ್ಬರಾದ ಪ್ರೊ. ಎನ್ ಸಿ ಪರಪ್ಪ ಅವರು ೧೯೨೬ರಲ್ಲಿ ಜನಿಸಿದರು.
ತಮ್ಮ ಕಾಲೇಜು ಶಿಕ್ಷಣದ ಸಂದರ್ಭದಲ್ಲಿ ಕುಸ್ತಿ ಮತ್ತು ಬ್ಯಾಸ್ಕೆಟ್ ಬಾಲ್ ಆಟಗಾರರಾಗಿ, ಮೈಸೂರು ವಿಶ್ವವಿದ್ಯಾನಿಲಯದ ತಂಡಗಳ ನಾಯಕರಾಗಿ ಹೆಸರು ಮಾಡಿದ ಪರಪ್ಪನವರು ೧೯೪೬-೪೭ರಲ್ಲಿ ನಡೆದ ಅಖಿಲಭಾರತ ಕುಸ್ತಿ ಪಂದ್ಯಾಟದಲ್ಲಿ ಬೆಳ್ಳಿ ಪದಕ ಪಡೆದ ನಮ್ಮ ನಾಡಿನ ಏಕೈಕ ಕುಸ್ತಿ ಪಟು ಎಂಬುದು ಹೆಮ್ಮೆಯ ಸಂಗತಿಯಾಗಿದೆ.
ದೈಹಿಕ ಶಿಕ್ಷಣ ಕಾಲೇಜಿನ ಸ್ಥಾಪನೆಗೆ ಒಬ್ಬ ಮುಖ್ಯ ಕಾರಣಕರ್ತರಾದ ಪ್ರೊ. ಪರಪ್ಪನವರು ಈ ಕ್ಷೇತ್ರದಲ್ಲಿ ಇಪ್ಪತ್ತೆಂಟು ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಬಿ.ಪಿ.ಇಡಿ., ಎಂ.ಪಿ.ಇಡಿ. ಮತ್ತು ದೈಹಿಕ ಶಿಕ್ಷಣದಲ್ಲಿ ಪಿಎಚ್.ಡಿ. ಈ ಕೋರ್ಸುಗಳ ಪ್ರಾರಂಭಕ್ಕೆ ಒತ್ತಾಸೆಯಾದ ಇವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ದೈಹಿಕ ಶಿಕ್ಷಣವನ್ನು ಜನಪ್ರಿಯಗೊಳಿಸಲು ನಿರಂತರವಾಗಿ ಶ್ರಮಿಸಿದ್ದಾರೆ. (
‘ಕರ್ನಾಟಕ ರಾಜ್ಯದ ಕ್ರೀಡಾ ಬೆಳವಣಿಗೆಗೆ ಹತ್ತು ಸೂತ್ರಗಳು’ ಎಂಬ ಕ್ರಿಯಾ ಯೋಜನೆಯೊಂದನ್ನು ಪ್ರೊ. ಪರಪ್ಪನವರು ಸರ್ಕಾರಕ್ಕೆ ಸಲ್ಲಿಸಿ ಅದರ ಅನುಷ್ಠಾನಕ್ಕೂ ಪ್ರೇರಣೆ ಒದಗಿಸಿದ್ದಾರೆ. ‘ದೈಹಿಕ ಶಿಕ್ಷಣ, ಸಂಘಟನೆ ಮತ್ತು ಮನೋಲ್ಲಾಸ’ ಎಂಬ ಇವರ ಕೃತಿ ಒಂದು ಮಾರ್ಗದರ್ಶಕ ಪುಸ್ತಕವಾಗಿದೆ.
ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ, ದೈಹಿಕ ಶಿಕ್ಷಣದ ಪ್ರಮುಖರಾಗಿ ಪ್ರೊ. ಪರಪ್ಪನವರು ಸಲ್ಲಿಸಿರುವ ಸೇವೆ ಸದಾ ಪ್ರಶಂಸನೀಯವಾದುದು.