ಶ್ರೀ ಗುರು ಭೂಸನೂರುಮಠದ ಸಂಗಮದೇವರು

ಯಾರೋ ಯಾರೋ ಮೈ ಬಂಗಾರದ ಜಂಗಮರಿವರ‍್ಯಾರೋ |
ಸೈನನ ಸದ್ಗುರು ಸಂಗಮದೇವರು ಬಾ ಶಿವನೇ ಬಾರೋ ||

ಗಾಳಿ ಬಿಸಿಲು ಮಳೆ ನೆರಳಿನ ಜೊತೆ ಕೈಕೂಡಿಸಿ ನಡೆದವರೋ
ಹಸಿಯ ಮಣ್ಣು ಹುಸಿಯಲ್ಲವೆಂದು ಹಸಿರಿಗೆ ಖುಷಿಯಾದವರೋ
ಆದರೂ ಹೂವೂ ಹಸಿರು ಕಣ್ಣಿನ ಕೊಡುಗೆಗಳೆಂದವರೋ
ಇರವು ತೋರಿಕೆಯ ಮಧ್ಯೆ ಇರುವ ನಿಜ ಹುಡುಕಲು ಹೋದವರೋ ||

ಅಧೋಲೋಕಗಳ ಕದಾ ತೆರೆದು ಕರಿರಾತ್ರಿಯ ಕರೆದವರೋ
ಎದುರು ಬದುರಿನಲಿ ಕುಳಿತು ಕತ್ತಲೆಯ ಗುಟ್ಟ ನುಡಿಸಿದವರೋ
ಕಪ್ಪು ಗುಟ್ಟುಗಳ ಹೆಪ್ಪು ಹಾಕಿ ಕಡೆ ಕಡೆದು ನೋಡಿದವರೋ
ತೇಲಿ ಬಂದ ಬಳಿ ಕುದುರೆ ಏರಿ ಆಕಾಶಕೆ ನೆಗೆದವರೋ ||

ಹದ್ದಿನ ಕಣ್ಣಿನ ಸರಹದ್ದಿನ ಸಾಮ್ರಾಜ್ಯವಾಳಿದವರೋ
ಸೊನ್ನೆಯ ಸೂರ್ಯನ ಕರಗಿಸಿ ನೆತ್ತಿಯ ಕಣ್ಣಲಿ ಕುಡಿದವರೋ
ನಂಬಿದ ಮಣ್ಣಿನ ನೆನಪಾದರೆ ಹೊಂಬೆಳಗುತ ಇಳಿದವರೋ
ಸರಳ ಸತ್ಯಗಳ ಪ್ರತಿಮೆ ಉಪಮೆಗಳ ಉಡಿಯಲಿ ತಂದವರೋ ||

ನಾವೋ ಪ್ರತಿಮೆಗಳ ಅರಿಯದೆ ಕೋಶದ ಶಬ್ದಗಳೆಂದವರೋ
ಪಶುವಿನ ಮಾಂಸದ ಹಾಡಿ ಹೊಗಳಿ ವೈಭವಿಸುವ ಲೌಕಿಕರೋ
ನಮಗೆ ಉಂಟು ರಕ್ಕಸರು ನಮ್ಮ ಜೊತೆ ಕೂಡಿ ಬದುಕಲಿಕ್ಕೆ
ನಮ್ಮ ಭವಿಷ್ಯಕ್ಕೆ ಕಾದಿರುವರು ಬಿಡಿ; ಅದೇ ಬೇರೆಯ ಕಥೆ ||[1]

ಮೇಲಿನ ಕವಿತೆಯನ್ನು ಈ ಗ್ರಂಥದ ಆರಂಭದಲ್ಲಿ ಕೊಡುವುದಕ್ಕೆ ಒಂದು ಮುಖ್ಯವಾದ ಕಾರಣವಿದೆ. ಈ ಕವಿತೆ ಪ್ರೊ. ಎಸ್.ಎಸ್. ಭೂಸನೂರಮಠ ಅವರ ಮಹಾಂತ ಜೀವನಕ್ಕೆ ಬರೆದ ಸುಂದರ ಮತ್ತು ಅರ್ಥಪೂರ್ಣವಾದ ಭಾಷ್ಯದಂತಿದೆ. ಜೊತೆಗೆ ಈ ಪದ್ಯವನ್ನು ಬರೆದ ಡಾ. ಚಂದ್ರಶೇಖರ ಕಂಬಾರ ಅವರು ಭೂಸನೂರಮಠರ ನೇರ ಮತ್ತು ಆತ್ಮೀಯ ಶಿಷ್ಯರಾಗಿದ್ದಾರೆ.

ಪ್ರೊ. ಭೂಸನೂರಮಠ : ವ್ಯಕ್ತಿತ್ವ ವಿಶಿಷ್ಟತೆ

ಗ್ರಂಥಸಂಪಾದನೆ, ವ್ಯಾಖ್ಯಾನ, ಅನುವಾದ ಮತ್ತು ಸೃಜನಶೀಲ ಬರವಣಿಗೆ ಈ ನಾಲ್ಕು ಕ್ಷೇತ್ರಗಳಲ್ಲಿ ಪ್ರೊ. ಭೂಸನೂರಮಠ ಅವರು ಏಕ ಪ್ರಕಾರವಾದ ಮತ್ತು ಗಣನೀಯವಾದ ಸಾಧನೆ ಮಾಡಿದ್ದಾರೆ. ಅವರು ಪ್ರಕಟಿಸಿದ ಒಟ್ಟು ಕೃತಿಗಳು ಹದಿನಾಲ್ಕು. ಉಳಿದ ಕೃತಿಗಳ ಮಾತಿರಲಿ; ‘ಶೂನ್ಯ ಸಂಪಾದನೆಯ ಪರಾಮರ್ಶೆ’ ಮತ್ತು ‘ಭವ್ಯ ಮಾನವ’ ಮಹಾಕಾವ್ಯ – ಈ ಎರಡು ಕೃತಿಗಳು ಸಾಕು – ಅವರ ಕ್ರತುಶಕ್ತಿ ಎಂಥ ಅದ್ಭುತವಾದುದು ಎಂಬುದನ್ನು ಮನಗಾಣಿಸಲು. ಈ ಎರಡೂ ಕೃತಿಗಳು ಆಧುನಿಕ ಕನ್ನಡ ಸಾಹಿತ್ಯದ ಹಿರಿಮೆಯನ್ನು ಜಾಗತಿಕ ಮಟ್ಟದಲ್ಲಿ ಸಾರುವ ಎರಡು ಮಹಾನ್ ಸ್ಮಾರಕಗಳಂತಿವೆ. ಈ ದೃಷ್ಟಿಯಿಂದ ಪ್ರೊ. ಭೂಸನೂರಮಠ ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಮರೆಯಲಾಗದ ಬಹು ದೊಡ್ಡ ಹೆಸರು. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಬಹುಪಾಲು ಜನರಿಗೆ ಭೂಸನೂರಮಠರ ‘ಸಾಮಾನ್ಯ ಪರಿಚಯ’ವೂ ಇಲ್ಲದಿರುವುದು ಈ ಕ್ಷೇತ್ರದ ದಾರಿದ್ರ‍್ಯ ಮತ್ತು ದುರಂತವನ್ನು ಸೂಚಿಸುತ್ತದೆ. ಪುನಃ ಇಲ್ಲಿಯೂ ಕೂಡ ನಾವು ಭೂಸನೂರಮಠರ ವ್ಯಕ್ತಿತ್ವದ ವಿಶಿಷ್ಟತೆಯನ್ನು ಗುರುತಿಸಲು ಅವಕಾಶವಿದೆ. ಅದೇನೆಂದರೆ ಅವರ ಸಾಧನೆಯ ಮಾರ್ಗ ನೇರ, ನಿರಾಡಂಬರ ಮತ್ತು ಗುಂಪುಗಾರಿಕೆಯಿಂದ ದೂರ. ಹೀಗಾಗಿ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯ ಎಷ್ಟೇ ಉದಾತ್ತವಾಗಿದ್ದರೂ – ‘ಲೌಕಿಕವಾಗಿ’ – ಅವರು ಬರಬೇಕಾದಷ್ಟು ಬೆಳಕಿಗೆ ಬರಲಿಲ್ಲ. ಆದರೆ ಅವರು ಅಖಂಡವಾದ ಆಧ್ಯಾತ್ಮಿಕ ಬೆಳಕಿನ ಮಹಾಸಾಮ್ರಾಜ್ಯದಲ್ಲಿ ಬಾಳಿದರು – ಆ ಮಾತು ಬೇರೆ.

ಕನ್ನಡದೊಡನೆ ಸಂಸ್ಕೃತ, ಮರಾಠಿ ಮತ್ತು ಇಂಗ್ಲಿಷ್ ಭಾಷೆ ಸಾಹಿತ್ಯವನ್ನು ಅವರು ಆಳವಾಗಿ ಅಭ್ಯಾಸ ಮಾಡಿದ್ದರು. ಜೊತೆಗೆ ಗಣಿತ ಮತ್ತಿತರ ವಿಜ್ಞಾನದ ವಿಷಯಗಳನ್ನು ಕುರಿತೂ ಅವರು ತಕ್ಕಷ್ಟು ವ್ಯಾಸಂಗ ಮಾಡಿದ್ದರು. ಅಲ್ಲದೆ ವೈಜ್ಞಾನಿಕ – ವೈಚಾರಿಕ ವಿಚಾರಧಾರೆಯ ಬಗೆಗೆ ಅವರು ಪ್ರೀತಿ – ಗೌರವ ಇಟ್ಟುಕೊಂಡಿದ್ದರು. ತತ್ವಜ್ಞಾನ ಮತ್ತು ವಿಜ್ಞಾನ ಎರಡೂ ಒಂದು ಆರೋಗ್ಯಪೂರ್ಣವಾದ ಹದದಲ್ಲಿ ಅವರ ವ್ಯಕ್ತಿತ್ವದಲ್ಲಿ ಸೇರಿಕೊಂಡಿದ್ದವು. ಇದರ ಪರಿಣಾಮವಾಗಿ ನಿಜವಾದ ಅರ್ಥದಲ್ಲಿ ಅವರೊಬ್ಬ ಪ್ರಕಾಂಡ ಪಂಡಿತರಾಗಿದ್ದರು. ಆಶ್ಚರ್ಯಕರವಾದ ಸಂಗತಿಯೆಂದರೆ ಭೂಸನೂರಮಠ ಅವರು ಕೇವಲ ಪಾಂಡಿತ್ಯಕ್ಕೆ ಎಂದೂ ಬೆಲೆ ಕೊಡುತ್ತಿರಲಿಲ್ಲ. ಅದಕ್ಕೆ ಜೀವಕಳೆ ಅಥವಾ ಬೆಲೆ ಬರಬೇಕಾದರೆ ಅದು ಪರಿಶುದ್ಧವಾದ ಮಾನವೀಯತೆಯಿಂದ ಕೂಡಿರಬೇಕು ಎಂದು ನಂಬಿದ್ದ ಅವರು ಹಾಗೆಯೇ ಬದುಕಿದ್ದರು ಕೂಡ. ಅವರು ತಮ್ಮ ಬದುಕಿನಲ್ಲಿ ರೂಢಿಸಿಕೊಂಡು ಬಂದಿದ್ದ ಸದಾಚಾರ, ಸಮಯ ಸದುಪಯೋಗ ಮತ್ತು ಸಮಯ ಪರಿಪಾಲನೆ, ಕಾಯಕ ನಿಷ್ಠೆ, ಸದಾ ಸರ್ವರಿಗೂ ಸುಖ – ಕಲ್ಯಾಣವನ್ನು ಬಯಸುವ ಉದಾತ್ತ ಗುಣಗಳಿಂದಾಗಿ ಅವರ ಪಾಂಡಿತ್ಯಕ್ಕೆ ವಿಶಿಷ್ಟವಾದ ಅರ್ಥ ಬಂದಿತ್ತು. ವರ್ಣ ವರ್ಗ, ಲಿಂಗ ವಯೋಮಾನ ಭೇದ ಮಾಡದೆ ಗುಣವನ್ನು ಗೌರವಿಸುವ ವಿಶಾಲಾಂತಃಕರಣ ಅವರ ವ್ಯಕ್ತಿತ್ವದ ಮತ್ತೊಂದು ಹಿರಿಯ ಗುಣವಾಗಿತ್ತು. ಇವೆಲ್ಲವುಗಳಿಗೆ ಕಿರೀಟಪ್ರಾಯವಾಗಿ ಅವರ ವ್ಯಕ್ತಿತ್ವದಲ್ಲಿ ಎದ್ದು ಕಾಣುತ್ತಿದ್ದ ಪ್ರಮುಖವಾದ ಅಂಶವೆಂದರೆ – ಸರಳ, ಸಹಜ ಮತ್ತು ನಿರಾಡಂಬರವಾದ ಅವರ ಸ್ವಭಾವ. ‘ಪರಾಮರ್ಶೆ’, ‘ಭವ್ಯಮಾನವ’ಗಳಂತಹ ಅವರ ಮೇರು ಕೃತಿಗಳನ್ನು ಕಂಡವರು ಅವರನ್ನು ಪ್ರತ್ಯಕ್ಷವಾಗಿ ಮೊದಲ ಬಾರಿಗೆ ಕಂಡಾಗ ‘ಇವರೇನ? ಆ ಭೂಸನೂರಮಠರು?’ ಎಂದು ಅವರ ಸರಳತೆಗೆ ಬೆರಗಾಗುತ್ತಿದುದನ್ನು ನಾನು ಹಲವು ಬಾರಿ ಕಂಡಿದ್ದೇನೆ; ಕೇಳಿದ್ದೇನೆ.

ಅವರ ಶ್ರೇಷ್ಠ ಕೃತಿಗಳಾದ ‘ಶೂನ್ಯ ಸಂಪಾದನೆಯ ಪರಾಮರ್ಶೆ’ ಹಾಗೂ ‘ಭವ್ಯ ಮಾನವ’ ಕಾವ್ಯವನ್ನು ಕುರಿತು ಸಾಹಿತ್ಯ ವಲಯದಲ್ಲಿ ಆಗಬೇಕಾದಷ್ಟು ಪ್ರಮಾಣದ ಚರ್ಚೆ ಆಗಲಿಲ್ಲ ಎಂದು ನಾವು ನೋವಿನಿಂದ ಮಾತನಾಡಿಕೊಳ್ಳುತ್ತಿದ್ದಾಗ ಅವರು ಎಂದೂ ಕೊರಗುತ್ತಿರಲಿಲ್ಲ. ಅದರ ಬಗ್ಗೆ ಚಿಂತೆ ಬೇಡ; ಸತ್ವ ಇದ್ದರೆ ಅವು ಬದುಕುತ್ತವೆ ಇಲ್ಲವಾದರೆ ಸಾಯುತ್ತವೆ ಎಂದು ನಿರ್ಲಿಪ್ತವಾಗಿ ಪ್ರತಿಕ್ರಿಯಿಸುತ್ತಿದ್ದರು.

ಧಾರವಾಡದಲ್ಲಿ ‘ಕಲ್ಯಾಣಕೂಟ’ ಎಂಬುದೊಂದು ಸಂಘಟನೆ ಇದೆ. ಶರಣರ ಜೀವನ – ವಿಚಾರಧಾರೆಯನ್ನು ಅರ್ಥೈಸಿಕೊಳ್ಳುವ ಮತ್ತು ಅದನ್ನು ವ್ಯವಸ್ಥಿತವಾದ ರೀತಿಯಲ್ಲಿ ಪ್ರಚಾರ ಮಾಡುವುದು ಅದರ ಮುಖ್ಯ ಧ್ಯೇಯ. ಪ್ರೊ. ಎಸ್.ಎಸ್. ಭೂಸನೂರಮಠರು ಅದರ ಕೇಂದ್ರ ವ್ಯಕ್ತಿ – ಶಕ್ತಿ ಆಗಿದ್ದರು. ಸಮಾನ ಮನಸ್ಸಿನ ಸುಮಾರು ಅರವತ್ತು ಸದಸ್ಯರನ್ನುಳ್ಳ ಈ ಸಂಘ ಒಂದು ಅಪರೂಪದ ಚಟುವಟಿಕೆಯನ್ನು ಇಂದಿಗೂ ಸಹ ನಡೆಸಿಕೊಂಡು ಬರುತ್ತಿದೆ. ಅದೇನೆಂದರೆ – ಪ್ರತಿ ಭಾನುವಾರ ಸಂಜೆ ಏಳು ಗಂಟೆಯಿಂದ ಎಂಟುವರೆವರೆಗೆ ನಡೆಯುವ ವಚನವಾಚನ ಮತ್ತು ವಚನವ್ಯಾಖ್ಯಾನ ಕಾರ್ಯಕ್ರಮ. ಇದು ಪ್ರತಿ ಭಾನುವಾರ ಒಬ್ಬೊಬ್ಬ ಸದಸ್ಯರ ಮನೆಯಲ್ಲಿ ನಡೆಯುತ್ತದೆ. ಪ್ರಾರಂಭದಲ್ಲಿ ಸದಸ್ಯರೆಲ್ಲ ಸಾಮೂಹಿಕವಾಗಿ “ಶ್ರೀಗುರು ವಚನುಪದೇಶವನಾಲಿಸಿದಾಗಳಹುದು ನರರಿಗೆ ಮುಕುತಿ”…. ಎಂಬ ನಿಜಗುಣ ಶಿವಯೋಗಿಗಳ ತತ್ವಪದವನ್ನು ಹಾಡುತ್ತಾರೆ. ಅನಂತರ ಅಂದು ಕಾರ್ಯಕ್ರಮ ನಡೆಯುವ ಮನೆಯ ಸದಸ್ಯರು ಭೂಸನೂರಮಠರು ಸಂಪಾದಿಸಿದ ‘ವಚನ ಸಾಹಿತ್ಯ ಸಂಗ್ರಹ’ದಲ್ಲಿನ – ಹಿಂದಿನ ವಾರ ಬೇರೆಯವರ ಮನೆಯಲ್ಲಿ ಚರ್ಚಿತವಾದ ವಚನದ ನಂತರದ – ವಚನವನ್ನು ಓದುತ್ತಾರೆ. ಓದಿದ ವಚನದ ಮೇಲೆ ಸೇರಿದ ಸದಸ್ಯರೆಲ್ಲ ಮುಕ್ತವಾಗಿ ಸಂವಾದ ನಡೆಸುತ್ತಾರೆ. ಸಂದೇಹ ಬಂದಾಗ ಅವುಗಳನ್ನು ಬಿಡಿಸುತ್ತ ಕೊನೆಯದಾಗಿ ಮತ್ತು ಒಟ್ಟಾರೆಯಾಗಿ ಭೂಸನೂರಮಠ ಅವರು ವಚನದ ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಸಾಹಿತ್ಯಿಕ ಮುಖಗಳನ್ನು ಕುರಿತು ಅರ್ಥಪೂರ್ಣವಾದ ವ್ಯಾಖ್ಯಾನ ಮಾಡುತ್ತಿದ್ದರು. ಮಹಿಳೆಯರು, ಪುರುಷರು, ಇಂಜಿನಿಯರ್, ಡಾಕ್ಟರ್, ಪ್ರೊಫೆಸರ್, ಅಧಿಕಾರಿ, ವ್ಯಾಪಾರಿ ಹೀಗೆ ವಿಭಿನ್ನ ಕ್ಷೇತ್ರದ, ವಿಭಿನ್ನ ಮನೋಧರ್ಮದ ಸದಸ್ಯರ ನಡುವೆ ಭೂಸನೂರಮಠರ ಉಪಸ್ಥಿತಿಯಲ್ಲಿ ಅರ್ಥಪೂರ್ಣವಾದ ರೀತಿಯಲ್ಲಿ ಗೋಷ್ಠಿ ನಡೆಯುತ್ತಿತ್ತು. ಕೊನೆಯಲ್ಲಿ ನಿಜಗುಣರ “ಜ್ಯೋತಿ ಬೆಳಗುತಿದೆ….” ಎಂಬ ತತ್ವ ಪದವನ್ನು ಸಾಮೂಹಿಕವಾಗಿ ಹಾಡಲಾಗುತ್ತದೆ. ಇಂಥ ಕಾರ್ಯಕ್ರಮದಲ್ಲಿ ಎರಡು ವರ್ಷ ಭಾಗವಹಿಸಿದ ನನ್ನ ಅನುಭವ ಅವಿಸ್ಮರಣೀಯ. ಭೂಸನೂರಮಠರು – ತೀರ ಅನಿವಾರ‍್ಯವಾದ ಪ್ರಸಂಗ ಬಿಟರೆ – ಆ ಕಾರ್ಯಕ್ರಮವನ್ನು ತಪ್ಪಿಸುತ್ತಿರಲಿಲ್ಲ. ಆಸಕ್ತಿಯುಳ್ಳ ಕೆಲವರಲ್ಲಾದರೂ ಶರಣರ ವಿಚಾರಧಾರೆಯು ರಕ್ತಗತವಾಗಬೇಕು; ಅನುಷ್ಠಾನಗೊಳ್ಳಬೇಕು ಎಂಬ ತೀವ್ರ ಹಂಬಲ ಅವರಲ್ಲಿತ್ತು. ಈ ವಾರದ ಗೋಷ್ಠಿಗಳ ಜೊತೆಗೆ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮಯ್ಯ ಮೊದಲಾದ ಶರಣರ ಜಯಂತಿಗಳನ್ನು ಅವರು ತಮ್ಮ ಮನೆ ‘ಪರಂಜ್ಯೋತಿ’ಯ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಅತ್ಯಂತ ಕ್ರಿಯಾಶೀಲವಾಗಿ ತಮ್ಮ ಇಳಿವಯಸ್ಸಿನಲ್ಲಿಯೂ ಆಸಕ್ತಿಯಿಂದ ದುಡಿಯುತ್ತಿದುದನ್ನು ನಾನು ಕಂಡಿದ್ದೇನೆ.

ಎತ್ತರದ ಪ್ರದೇಶ ಮತ್ತು ಬಯಲು ಅವರಿಗೆ ಬಲು ಪ್ರಿಯ. ಹೀಗಾಗಿ ಮನೆಯಲ್ಲಿ ಓದುವುದಕ್ಕೆ, ಮಲಗುವುದಕ್ಕೆ, ಧ್ಯಾನಿಸುವುದಕ್ಕೆ ಮಹಡಿಯನ್ನೇ ಬಳಸುತ್ತಿದ್ದರು. ಬಯಲಿನ ಹಂಬಲಕ್ಕಾಗಿ ಮುಂಜಾನೆ ಆರರಿಂದ ಎಂಟು ಮತ್ತು ಸಂಜೆ ಆರರಿಂದ ಏಳು – ಹೀಗೆ ಎರಡು ಹೊತ್ತು ನಿಯಮಿತವಾಗಿ ವಾಯುವಿಹಾರ ನಡೆಸುತ್ತಿದ್ದರು. ಧೋ ಧೋ ಎಂದು ಮಳೆ ಸುರಿಯುತ್ತಿದ್ದರೂ ಕೊಡೆಯ ಸಹಾಯದಿಂದ ಬಯಲಲ್ಲಿ ತಿರುಗಾಡಿ ಬಂದರೇ ಅವರಿಗೆ ಸಮಾಧಾನ. ರಾಗ ತಾಳಗಳ ಪ್ರಾಯೋಗಿಕ ಸಂಗೀತಜ್ಞಾನ ಅವರಿಗಿತ್ತು. ವಚನ, ತತ್ವಪದಗಳನ್ನಲ್ಲದೆ ತಮ್ಮ ‘ಭವ್ಯ ಮಾನವ’ ಕಾವ್ಯದ ಭಾಗಗಳನ್ನು ಪೂಜಾ ಸಮಯದಲ್ಲಿ ಮತ್ತು ವಿರಾಮಕಾಲದಲ್ಲಿ ಅತ್ಯಂತ ಸುಶ್ರಾವ್ಯವಾಗಿ ಹಾಡುತ್ತಿದ್ದರು.

ಒಟ್ಟಾರೆಯಾಗಿ – ವಿಜ್ಞಾನ ತತ್ವಜ್ಞಾನ, ಲೌಕಿಕ ಆಧ್ಯಾತ್ಮಿಕ ಜೀವನ ಮತ್ತು ಜ್ಞಾನವನ್ನು ಸಮನ್ವಯಗೊಳಿಸಿಕೊಂಡು ಪರಿಪೂರ್ಣದೆಡೆಗೆ ಸಾಗಿದ ಅವರ ಜೀವನ ಮತ್ತು ಸಾಹಿತ್ಯವನ್ನು ತಿಳಿದುಕೊಳ್ಳುವುದೆಂದರೆ ಮನಸ್ಸಿಗೆ ಉದಾತ್ತವಾದ ಸಂಸ್ಕಾರದ ಹೆಚ್ಚುವರಿ ‘ಚೈತನ್ಯ’ವನ್ನು ದಕ್ಕಿಸಿಕೊಂಡಂತೆ ಎಂದೇ ನನ್ನ ಭಾವನೆ. ಈ ಹಿನ್ನೆಲೆಯಲ್ಲಿ ಅವರನ್ನು ಕುರಿತ ಅಧ್ಯಯನ ಹೆಚ್ಚು ಪ್ರಸ್ತುತ ಮತ್ತು ಆವಶ್ಯಕ.

ಜೀವನ ಪರಿಚಯ

ಸಂಗಯ್ಯ ಶಿವಮೂರ್ತೆಯ್ಯ ಭೂಸನೂರಮಠರು ಧಾರವಾಡ ಜಿಲ್ಲೆ ರೋಣ ತಾಲೂಕಿನ ನಿಡಗುಂದಿ ಗ್ರಾಮದವರು. ಅವರು ಹುಟ್ಟಿದ್ದು ದಿನಾಂಕ ೭ – ೧೧ – ೧೯೧೦ ರಂದು. ತಮ್ಮ ಹಳ್ಳಿಯಲ್ಲಿ ಅವರು ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಮುಂದಿನ ಓದಿಗಾಗಿ ಅವರು ದೂರದ ಗದಗ ಪಟ್ಟಣಕ್ಕೆ ಹೋದರಾದರೂ ಮನೆಯ ವಾತಾವರಣವನ್ನು ಅಗಲಿ ಅವರಿಗೆ ಇರಲಾಗಲಿಲ್ಲ. ಒಂದು ತಿಂಗಳು ಗದಗಿನಲ್ಲಿ ಇದ್ದರೆ ಮೂರು ತಿಂಗಳು ಮನೆಯಲ್ಲಿಯೇ ಉಳಿಯುತ್ತಿದ್ದರು. ಇದೇ ವೇಳೆಗೆ ಅವರಿಗೆ ಸಂಗೀತ ಕಲಿಯುವ ಹುಚ್ಚು ಹತ್ತಿಕೊಂಡು ಶಾಲೆಯಿಂದ ದೂರ ಉಳಿದರು. ಶಾಲೆ ದೂರವಾದರೂ ಮನೆಯಲ್ಲಿ ಅಭ್ಯಾಸ ನಿಲ್ಲಲಿಲ್ಲ. ಇಂಗ್ಲಿಷ್, ಸಂಸ್ಕೃತ, ಮರಾಠಿ ಹಾಗೂ ಗಣಿತದ ಅಭ್ಯಾಸ ನಿರಂತರವಾಗಿ ಅವರಿಗೆ ದೊರೆಯಿತು.

ಹಿರಿಯರ ಒತ್ತಾಯಕ್ಕೆ ಮಣಿದು ಅವರು ಹದಿನೇಳನೆಯ ವಯಸ್ಸಿಗೆ ಮದುವೆಯಾದರು. ಮಡದಿಯ ಒತ್ತಾಸೆಯಿಂದ ಅವರು ಹುಬ್ಬಳ್ಳಿಯಲ್ಲಿ ಪ್ರೌಢಶಿಕ್ಷಣ ಮುಂದುವರಿಸಿದರು. ಅವರೇ ಹೇಳಿಕೊಂಡಂತೆ ಇದು ಅವರ ಜೀವನದಲ್ಲಿ ಒಂದು ಮಹತ್ವದ ತಿರುವು. ಇಲ್ಲಿಂದ ಅವರ ಓದು ನಿರಾತಂಕವಾಗಿ ಮತ್ತು ಅರ್ಥಪೂರ್ಣವಾಗಿ ಮುಂದುವರಿಯಿತು. ಅವರು ಬಿ.ಎ. ಪದವಿ ವ್ಯಾಸಂಗ ಮಾಡಿದ್ದು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ. ಈ ವೇಳೆಯಲ್ಲಿ ಅವರು ಸಂಪೂರ್ಣವಾಗಿ ತಮ್ಮನ್ನು ಅಭ್ಯಾಸಕ್ಕಾಗಿ ಸಮರ್ಪಿಸಿಕೊಂಡಿದ್ದರು. ತಮ್ಮ ಕಾಲೇಜ್ ವಿದ್ಯಾಭ್ಯಾಸ ಕ್ರಮವನ್ನು ಕುರಿತು ಅವರು ಹೇಳಿಕೊಂಡಿರುವ ಮಾತೊಂದು ಇಲ್ಲಿ ಉಲ್ಲೇಖನೀಯ. “ಇಲ್ಲಿಯೂ ನಾನು ನನ್ನ ವೈಶಿಷ್ಟ್ಯವನ್ನು ಉಳಿಸಿಕೊಂಡೇ ಅಭ್ಯಾಸ ನಡೆಸಿದೆ. ನಾಟಕ, ಖಂಡಕಾವ್ಯ ಮತ್ತು ಸಂಸ್ಕೃತ ಸಂಗ್ರಹಗಳನ್ನು ಕಾಲೇಜಿನಲ್ಲಿ ಶಿಕ್ಷಕರು ಕಲಿಸಿದರೂ ಆ ಶಿಕ್ಷಣ ಹೆಚ್ಚಾಗಿ ನನ್ನ ತಲೆಯೊಳಗೆ ಹೋಗುತ್ತಿರಲಿಲ್ಲ. ಸಂಸ್ಕೃತ ವ್ಯಾಕರಣದ ನಿಕಟ ಪರಿಚಯ ನನಗಿಲ್ಲದಿದ್ದರೂ ಈ ಎಲ್ಲಾ ಗ್ರಂಥಗಳನ್ನು ನಾನೇ ಮೂಲದಲ್ಲಿ ಓದಬೇಕು. ಮೂಲ ಪಠ್ಯಗಳ ತಿಳಿವಳಿಕೆಯಾಗದಿದ್ದರೆ ಅದಕ್ಕೆ ಬರೆದ ಸಂಸ್ಕೃತ ಟೀಕೆ – ಟಿಪ್ಪಣಿಗಳನ್ನು ಓದಬೇಕು. ಇದಕ್ಕೂ ಅರ್ಥ ಬಗೆ ಹರಿಯದಿದ್ದರೆ ಅವಕ್ಕೆ ಕೊಟ್ಟ ಇಂಗ್ಲಿಷ್ ಭಾಷಾಂತರಗಳನ್ನು ಓದಿ ತಿಳಿದುಕೊಳ್ಳಬೇಕು. ಕಾಲೇಜಿನ ಶಿಕ್ಷಣದುದ್ದಕ್ಕೂ ಈ ಸ್ವತಃ ತಿಳಿವಳಿಕೆಯ ಕ್ರಮವನ್ನು ಛಲದಿಂದ ಮುಂದುವರಿಸಿದೆ. ಇದರಿಂದ ನನಗೆ ಲಾಭವಾಯಿತು. ಈ ಛಲದ ವಿಸ್ತರಣೆ ಉಳಿದ ವಿಷಯಗಳ ಪಠ್ಯ ಪುಸ್ತಕಗಳಿಗೂ ಹಬ್ಬಿಕೊಂಡಿತು. ಹೀಗೆ ಸ್ವತಂತ್ರ ವಿಚಾರ ಮಾಡುವ ಪ್ರವೃತ್ತಿಗೆ ಅದೇ ವರ್ಷ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಲನಕ್ಕೆ ಆಗಮಿಸಿದ ಮಹಾ ವ್ಯಕ್ತಿ ಸಿ.ಆರ್. ರೆಡ್ಡಿ ಅವರಿಂದ ಪ್ರಾಣಕಳೆ ಏರಿತು. ಅವರು ತಮ್ಮ ಅಂದಿನ ಅತಿಥಿ ಭಾಷಣದುದ್ದಕ್ಕೂ Independent thinkingದ ವಿಷಯವನ್ನು ಪುಷ್ಟೀಕರಿಸಿ ಮಾತನಾಡಿದರು. ಅವರು ತಿಳಿಸಿದ Independent thinking ಇಂದಿಗೂ ನನ್ನ ವಿದ್ಯಾಬುದ್ಧಿಯ ಮಾನಕ್ಕೆ ಬ್ರಹ್ಮ ಸೂತ್ರವಿದ್ದಂತಿದೆ. ಕಲಿಸಿದರೆ ತಿಳಿದುಕೊಂಡು ಕಲಿವ ಸ್ವಭಾವ ನನ್ನದಲ್ಲ. ನನ್ನೊಳಗಿನಿಂದಲೇ ನನಗೆ ತಿಳಿವಳಿಕೆ ಮೂಡಬೇಕು. ಇದೇ ನನ್ನ ಶಾಶ್ವತ ವಿಶ್ವಾಸ. ಏಕೈಕ ನಿಷ್ಠೆ ಗೌರ.”[2]

ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಈಗಿರುವಷ್ಟು ಸೌಲಭ್ಯಗಳು ಆ ಕಾಲದಲ್ಲಿ ಇರಲಿಲ್ಲ. ಧಾರವಾಡದ ಕಡೆಯವರು ಎಂ.ಎ. ಓದಬೇಕೆಂದರೆ ದೂರದ ಕೊಲ್ಲಾಪುರಕ್ಕೆ ಹೋಗಬೇಕಾಗುತ್ತಿತ್ತು. ಭೂಸನೂರಮಠರು ಕೊಲ್ಲಾಪುರಕ್ಕೆ ಹೋಗಿ ಆಧುನಿಕ ಕನ್ನಡದ ಮೊದಲನೆಯ ತಲೆ ಮಾರಿನ ಹಿರಿಯ ವಿದ್ವಾಂಸರಾಗಿದ್ದ ಪ್ರೊ. ಕೆ.ಜಿ. ಕುಂದಣಗಾರ ಅವರ ಮಾರ್ಗದರ್ಶನದಲ್ಲಿ ಎಂ.ಎ. ವ್ಯಾಸಂಗ ಮಾಡಿದರು. ಆಗ ಪ್ರೊ. ಕುಂದಣಗಾರರು ತಮಗೆ ನೀಡಿದ ಪ್ರೋತ್ಸಾಹವನ್ನು, ತಮ್ಮ ಮೇಲೆ ಬೀರಿದ ಪ್ರಭಾವವನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸಿಕೊಂಡಿದ್ದಾರೆ. “ಪ್ರೊ. ಕುಂದಣಗಾರರ ಶಿಕ್ಷಣಕ್ಕಿಂತ ಅನ್ಯಾದೃಶವಾದ ಅವರ ಸಾತ್ವಿಕ, ಸರಳ, ಉದಾರ, ವಿನಮ್ರ ಜೀವನದ ಪ್ರಬಲವಾದ ಪ್ರಭಾವ ಇಂದಿಗೂ ನನ್ನೊಳಗೆ ಗುನುಗುನಿಸುತ್ತ ನಿನಾದ ಮಾಡುತ್ತಿದೆ. ಅವರಂಥವರು ಅವರು. ಯಾವಾಗಲೂ ಮೊಗದಲ್ಲಿ ನಗೆ, ಮಾತಿನಲ್ಲಿ ಜೇನು, ಕೈಯಲ್ಲಿ ಉಪಕಾರ – ಇಂಥ ಸಾತ್ವಿಕ ವ್ಯಕ್ತಿಗಳ ವಂಶ ಇಂದು ಕ್ರಮೇಣ ಕ್ಷಯವಾಗುತ್ತ ನಡೆದಿದೆ ಎಂದು ಹೇಳಬಹುದು. ಕಾಲೇಜಿನ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ನನಗೆ ಉಪಯುಕ್ತವಾಗುವ ನಾಲ್ಕೆಂಟು ದೊಡ್ಡ ದೊಡ್ಡ ಪುಸ್ತಕಗಳನ್ನು ಹೊತ್ತುಕೊಂಡು ನಮ್ಮ ಹಾಸ್ಟೆಲ್‌ಗೆ ಬಂದು; ಆ ಗ್ರಂಥಗಳಲ್ಲಿ ನಾನು ಓದಬೇಕಾದ ವಿಷಯಗಳನ್ನು ಗುರುತು ಹಾಕಿಕೊಟ್ಟು ತಮ್ಮ ಮನೆಗೆ ಹೋಗುತ್ತಿದ್ದರು. ಎರಡು ಮೂರು ನಾಲ್ಕು ದಿನಗಳಲ್ಲಿ ಒಮ್ಮೆಯಾದರೂ ಸಾಯಂಕಾಲ ನಾನು ಅವರ ಮನೆಗೆ ಹೋಗಿ ಅವರ ಸಲಹೆ ಪಡೆದು ಬರುತ್ತಿದ್ದ.”[3] ಹೀಗೆ ಗುರುಗಳ ಮಾರ್ಗದರ್ಶನ, ಕಠಿಣ ಪರಿಶ್ರಮ ಮತ್ತು ಸ್ವತಂತ್ರ ಮನೋಧರ್ಮಗಳ ಸಹಾಯದಿಂದ ಅವರು ಒಟ್ಟಾರೆ ತಮ್ಮ ವಿದ್ಯಾರ್ಥಿ ಜೀವನವನ್ನು ಅತ್ಯಂತ ಸಾರ್ಥಕವಾದ ರೀತಿಯಲ್ಲಿ ರೂಪಿಸಿಕೊಂಡರು.

ಕನ್ನಡ ಅಧ್ಯಾಪಕರಾಗಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅವರು ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಮೂರು ವರ್ಷ ಅರೆಕಾಲಿಕ ಪ್ರಾಧ್ಯಾಪಕರಾಗಿ ಅವರು ಅಲ್ಲಿ ಸೇವೆ ಸಲ್ಲಿಸಿದರು. ತಾಂತ್ರಿಕ ಕಾರಣದಿಂದಾಗಿ ಅವರಿಗೆ ಅಲ್ಲಿ ಬಹುಕಾಲ ಮುಂದುವರಿಯಲಾಗಲಿಲ್ಲ. ಮುಂದೆ ಅವರು ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆಗೆ ಸೇರಿಕೊಂಡರು. ಅಲ್ಲಿ ಅವರು ನಿವೃತ್ತರಾಗುವವರೆಗೆ ಇಪ್ಪತ್ತು ಮೂರು ವರ್ಷ ಕೆಲಸ ಮಾಡಿದರು. ಈ ವೇಳೆಗಾಗಲೇ ದಕ್ಷ ಅಧ್ಯಾಪಕರೆಂದು, ಶ್ರೇಷ್ಠ ವಿದ್ವಾಂಸರೆಂದು, ಪ್ರಭುದ್ಧ ಚಿಂತಕರೆಂದು ಅವರು ತಮ್ಮ ಅಧ್ಯಾಪನ ಮತ್ತು ವೈಶಿಷ್ಟ್ಯ ಪೂರ್ಣವಾದ ಗ್ರಂಥಗಳಿಂದ ಹೆಸರುವಾಸಿಯಾಗಿದ್ದರು. ವಿದ್ಯಾರ್ಥಿ ಸಮುದಾಯಕ್ಕೆ ಮತ್ತು ನಾಡಿಗೆ ಭೂಸನೂರಮಠರ ವಿದ್ವತ್ತು ಪ್ರಯೋಜನಕಾರಿಯಾಗಬೇಕು ಎಂಬ ಸದುದ್ದೇಶದಿಂದ ಕರ್ನಾಟಕ ವಿಶ್ವವಿದ್ಯಾನಿಲಯದ ಅಂದಿನ ಕುಲಪತಿ ಡಾ. ಡಿ.ಸಿ. ಪಾವಟೆ ಅವರು ಭೂಸನೂರಮಠ ಅವರನ್ನು ಕನ್ನಡ ವಿಭಾಗಕ್ಕೆ ಪ್ರಾಧ್ಯಾಪಕರೆಂದು ನೇಮಿಸಿಕೊಂಡರು. ಐದು ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ಮತ್ತೆ ಐದು ವರ್ಷಗಳಿಗಾಗಿ ಅವರು ಯುಜಿಸಿ ಪ್ರಾಧ್ಯಾಪಕರಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದರು. ಮೂವತ್ಮೂರು ವರ್ಷಗಳ ಸುದೀರ್ಘ ಅವಧಿಯಲ್ಲಿ ಮತ್ತು ನಿವೃತ್ತಿಯ ಅನಂತರ ಕೂಡ ಅವರು ಸದಾ ತಮ್ಮನ್ನು ವ್ಯಾಪಕವಾದ ಅಧ್ಯಯನಕ್ಕೆ ಉದಾತ್ತವಾದ ಚಿಂತನೆಗೆ ಗಂಭೀರವಾದ ಬರವಣಿಗೆಗೆ ತೊಡಗಿಸಿಕೊಂಡಿದ್ದರು. ಈ ಅವಧಿಯಲ್ಲಿ ಅವರು ಹಲವು ಮೌಲಿಕ ಗ್ರಂಥಗಳನ್ನು ರಚಿಸಿ ಕನ್ನಡ ಸಾಹಿತ್ಯದ ಕಣಜವನ್ನು ಸಮೃದ್ಧಗೊಳಿಸಿದ್ದಾರೆ.

ಕರ್ನಾಟಕ ಸಾಹಿತ್ಯ ಅಕ್ಯಾಡಮಿ, ಕೇಂದ್ರಸಾಹಿತ್ಯ ಅಕ್ಯಾಡಮಿಗಳು ಮತ್ತು ಹಲವು ಮಠಮಾನ್ಯಗಳು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ.

ಸಂಪಾದಿತ ಕೃತಿಗಳು

ಭಕ್ತಿಸುಧಾಸಾರ : ಭೂಸನೂರಮಠರು ಒಟ್ಟು ಹದಿನಾಲ್ಕು ಕೃತಿಗಳನ್ನು ಸಂಪಾದಿಸಿದ್ದಾರೆ. ಈ ಕೃತಿಗಳ ಪಟ್ಟಿಯನ್ನು ಅನುಬಂಧದಲ್ಲಿ ಕೊಟ್ಟಿದೆ. ಇವೆಲ್ಲವೂ ವೀರಶೈವ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳು. ಅವರು ಸಂಪಾದಿಸಿದ ಮೊದಲ ಕೃತಿ ಘನಮಠ ಶಿವಯೋಗಿಗಳ ‘ಭಕ್ತಿ ಸುಧಾಸಾರ’. ಧಾರವಾಡದ ಮುರುಘಾಮಠದಿಂದ ೧೯೪೫ರಲ್ಲಿ ಈ ಕೃತಿ ಪ್ರಟವಾಗಿದೆ. “ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಲು ನನ್ನನ್ನು ತೊಡಗಿಸಿದವರು ಧಾರವಾಡದ ಮುರುಘಾಮಠದ ಪರಮಪೂಜ್ಯ ಮೃತ್ಯುಂಜಯ ಸ್ವಾಮಿಗಳವರು”[4] ಎಂದು ಶ್ರೀಯುತರು ತಮ್ಮ ಸಾಹಿತ್ಯ ಕೃಷಿಯ ಆರಂಭದ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ಪ್ರಥಮ ಪ್ರಯತ್ನದಲ್ಲಿಯೇ ಗ್ರಂಥ ಸಂಪಾದನೆಯ ಕಾರ್ಯವನ್ನು ಭೂಸನೂರಮಠರು ಎಷ್ಟು ಜವಾಬ್ದಾರಿಯಿಂದ ನಿರ್ವಹಿಸಿದರು ಎಂಬುದಕ್ಕೆ ಇಲ್ಲಿ ಒಂದು ನಿದರ್ಶನ ಗಮನಿಸಬಹುದು. ‘ಭಕ್ತಿ ಸುಧಾಸಾರ’ಕ್ಕೆ ಬರೆದ ವಿವರವಾದ ಪ್ರಸ್ತಾವನೆಯಲ್ಲಿ ಕವಿ – ಕಾಲ ನಿರ್ಣಯ ಮಾಡುತ್ತ ಅದುವರೆಗೂ ಘನಮಠದ ಶಿವಯೋಗಿಗಳೇ ‘ಕೃಷಿಜ್ಞಾನ ಪ್ರದೀಪಿಕೆ’ಯ ಕರ್ತೃ ಎಂದು ಹೇಳುತ್ತ ಬಂದಿದ್ದ ರಾ.ಪಿ.ಜಿ. ಹಳಕಟ್ಟಿ ಮತ್ತು ರಾ.ಆರ್. ನರಸಿಂಹಾಚಾರ್ ಅವರ ಅಭಿಪ್ರಾಯವನ್ನು ಆಧಾರಸಹಿತ ಅಲ್ಲಗಳೆದು ಕುನ್ನಾಳದ ಸಿದ್ರಾಮಪ್ಪ ಅದರ ಕರ್ತೃ ಎಂದು ಸಾಬೀತು ಪಡಿಸಿದರು. ಭೂಸನೂರಮಠ ಅವರು ಮಂಡಿಸಿದ ಈ ಅಭಿಪ್ರಾಯವು ವಿದ್ವಾಂಸರಿಂದ ಮಾನ್ಯವಾಯಿತು. ಹೀಗೆ ಸಂಶೋಧನ ದೃಷ್ಟಿಯಿಂದ ಆರಂಭವಾದ ಅವರ ಗ್ರಂಥ ಸಂಪಾದನ ಕಾರ್ಯ ಮೊದಲ ಪ್ರಯತ್ನದಲ್ಲಿಯೇ ಯಶಸ್ಸನ್ನು ಕಂಡದ್ದು ಇಲ್ಲಿ ಗಮನಾರ್ಹ.

ಅವರು ಸಂಪಾದಿಸಿ ‘ಪ್ರಭುದೇವರ ಶೂನ್ಯಸಂಪಾದನೆ’ ಹಾಗೂ ‘ವಚನ ಸಾಹಿತ್ಯ ಸಂಗ್ರಹ’ ಈ ಎರಡು ಕೃತಿಗಳನ್ನು ಪ್ರಾತಿನಿಧಿಕವಾಗಿ ಇಲ್ಲಿ ಒಂದು ಸಂಕ್ಷಿಪ್ತವಾದ ಚರ್ಚೆಗೆ ಎತ್ತಿಕೊಳ್ಳಬಹುದು. ಜೊತೆಗೆ ಇಂಗ್ಲೀಷಿಗೆ ಭಾಷಾಂತರಿಸಿದ ಶೂನ್ಯ ಸಂಪಾದನೆಯನ್ನೂ ಕುರಿತು ಒಂದಿಷ್ಟು ವಿಷಯಗಳನ್ನು ಗಮನಿಸಬಹುದು.

ಪ್ರಭುದೇವರ ಶೂನ್ಯ ಸಂಪಾದನೆ : ಪ್ರೊ. ಭೂಸನೂರಮಠರು ಸಂಪಾದಿಸಿದ ಕೃತಿಗಳಲ್ಲಿ ‘ಪ್ರಭುದೇವರ ಶೂನ್ಯ ಸಂಪಾದನೆ’ ಅತ್ಯಂತ ಮಹತ್ವದ ಕೃತಿ. ರಾವೂರ ಶ್ರೀ ಸಿದ್ಧಲಿಂಗೇಶ್ವರ ಮಠ ಮತ್ತು ಆದವಾನಿಯ ಕಲ್ಲುಮಠದ ಅಧಿಪತಿಗಳು ಈ ಕೃತಿಯನ್ನು ಸಂಪಾದಿಸಲು ಪ್ರೇರಣೆ ನೀಡಿದ್ದಲ್ಲದೆ; ಅವರೇ ಇದರ ಪ್ರಕಾಶಕರೂ ಆದರು. ಅವರ ಉಪಕಾರವನ್ನು ಮತ್ತು ಈ ಕೃತಿಯ ಸಂಪಾದನಕಾರ್ಯವು ತಮ್ಮ ಮುಂದಿನ ಚಿಂತನ – ವ್ಯಾಖ್ಯಾನ ಮತ್ತು ಸೃಜನಶೀಲತೆಗಳಿಗೆ ಹೇಗೆ ಕಾರಣೀಭೂತವಾಯಿತು ಎಂಬುದನ್ನು ಭೂಸನೂರಮಠರು ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ದಾಖಲಿಸಿಕೊಂಡಿದ್ದಾರೆ – “ಇವರ ಮಹೋಪಕಾರವನ್ನು ನಾನೆಂದಿಗೂ ನೆನೆಯಬೇಕು. ನನ್ನ ಸಾಹಿತ್ಯ ಕೃಷಿಯಲ್ಲಿ ಒಂದು ಹೊಸ ತಿರುವನ್ನು, ಒಂದು ಪರಿವರ್ತನೆಯನ್ನು ತಂದು ಕೊಟ್ಟಿತು ಈ ಸಲಹೆ. ‘ಶೂನ್ಯ ಸಂಪಾದನೆಯ ಪರಾಮರ್ಶೆ’ಗೆ ಮೂಲಾಧಾರವಾಯಿತು ಈ ಮಹಾ ಕೃತಿ.”[5]

ಕನ್ನಡದಲ್ಲಿ ಒಟ್ಟು ಐದು ‘ಶೂನ್ಯ ಸಂಪಾದನೆ’ಗಳಿವೆ. ಶಿವಗಣಪ್ರಸಾದಿ ಮಹಾದೇವಯ್ಯ (೧೪೨೦), ಗುಮ್ಮಳಾಪುರದ ಸಿದ್ಧಲಿಂಗ (೧೫೦೦), ಗೂಳೂರು ಸಿದ್ಧವೀರಣ್ಣೊಡೆಯ (೧೫೧೦), ಕೆಂಚವೀರಣ್ಣೊಡೆಯ ಮತ್ತು ಹಲಗೆದೇವ – ಇವರು ಐದು ಶೂನ್ಯ ಸಂಪಾದನೆಗಳ ಐವರು ಕರ್ತೃಗಳು. ಕಾಲದ ದೃಷ್ಟಿಯಿಂದ ಶಿವಗಣಪ್ರಸಾದಿಯದೆ ಮೊದಲ ಶೂನ್ಯ ಸಂಪಾದನೆ. ಮತ್ತು ಮೊದಲ ಮೂರು ಸಂಪಾದನೆಗಳು ಶುದ್ಧ ಮತ್ತು ಸ್ಪಷ್ಟ ಸ್ವರೂಪದಲ್ಲಿವೆ. ಕೊನೆಯವೆರಡು ಅಪ್ರಬುದ್ಧ ಕೃತಿಗಳು. ಶುದ್ಧವಾದ ಮೂರು ಸಂಪಾದನೆಗಳಲ್ಲಿ ಗೂಳೂರ ಸಿದ್ಧವೀರಣ್ಣೊಡೆಯ ಸಂಪಾದನೆಯನ್ನೇ ತಾವು ಆಯ್ದುಕೊಂಡುದೇಕೆ? ಎಂಬುದರ ಕುರಿತು ಅವರ ಅಭಿಪ್ರಾಯ ಹೀಗಿದೆ – ಶೂನ್ಯಸಂಪಾದನೆಗಳಲ್ಲಿ ಗೂಳೂರ ಸಿದ್ಧವೀರಣ್ಣೊಡೆಯನ ಸಂಪಾದನೆಯೇ ಉತ್ತಮ ಹಾಗೂ ವಿಶ್ವಾಸಾರ್ಹ ಅನ್ನಿಸುತ್ತದೆ. ಶಿವಗಣ ಪ್ರಸಾದಿ ಮತ್ತು ಗುಮ್ಮಳಾಪುರದ ಸಿದ್ಧಲಿಂಗರಲ್ಲಿ ಕಂಡ ಹಲವು ದೋಷಗಳನ್ನು ದೂರ ಮಾಡಿದ್ದಾನೆ ಗೂಳೂರು ಸಿದ್ಧವೀರಣ್ಣೊಡೆಯ. ಈತ ಅಜ್ಜನ ಹೆಗಲೇರಿದ ಮೊಮ್ಮಗ. ಅಜ್ಜನಿಗಿಂತ ಹೆಚ್ಚು ದೂರ ನೋಡಿದ್ದಾನೆ. ನೋಡಿರುವುದಷ್ಟೇ ಅಲ್ಲ ರಚನೆಯಲ್ಲೂ ತನ್ನ ಪರಿಣತಿಯನ್ನು ಸಾಬೀತು ಮಾಡಿ ತೋರಿಸಿದ್ದಾನೆ.[6] ಭೂಸನೂರಮಠರ ಈ ಅಭಿಪ್ರಾಯಕ್ಕೆ ವಿದ್ವಾಂಸರ ವಲಯದಲ್ಲಿ ಮಾನ್ಯತೆಯಿದೆ. ಈ ಶುದ್ಧ – ಸ್ಪಷ್ಟ ಕೃತಿಯನ್ನು ಪ್ರೊ. ಭೂಸನೂರಮಠ ಅವರು ಕಠಿಣ ಪರಿಶ್ರಮ, ನಿಷ್ಠೆ, ಪ್ರಾಮಾಣಿಕತೆ ಮತ್ತು ಪ್ರೀತಿಯಿಂದ ಅತ್ಯಂತ ಅಚ್ಚುಕಟ್ಟಾಗಿ ಸಂಪಾದಿಸಿದ್ದಾರೆ. ಇಪ್ಪತ್ತೊಂದು ಹಸ್ತಪ್ರತಿಗಳನ್ನು ಸಂಗ್ರಹಿಸಿ ಈ ಸಂಪಾದನ ಕಾರ್ಯಕ್ಕೆ ಬಳಸಿಕೊಂಡಿದ್ದಾರೆ.

ಈಗ ನಮ್ಮಲ್ಲಿ ಗ್ರಂಥಸಂಪಾದನ ಶಾಸ್ತ್ರ ಬೇಕಾದಷ್ಟು ಬೆಳೆದಿದೆ. ಈಗ್ಗೆ ನಲವತ್ತು ಐವತ್ತು ವರ್ಷಗಳ ಹಿಂದೆ ಗ್ರಂಥಸಂಪಾದನ ಶಾಸ್ತ್ರದ ಪರಿಚಯವೂ ಆಗಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಶೂನ್ಯ ಸಂಪಾದನೆ ಮತ್ತು ಅದಕ್ಕು ಮೊದಲು ಕೂಡ ಆರೇಳು ಕೃತಿಗಳನ್ನು ಸಂಪಾದಿಸಿದ್ದು ಭೂಸನೂರಮಠ ಅವರ ಸಾಹಸ ಮತ್ತು ಸಾರ್ಥಕವಾದ ಪ್ರಯತ್ನವೆಂದೇ ಹೇಳಬೇಕು. ಅವರು ಸಂಪಾದಿಸಿದ ‘ಪ್ರಭುದೇವರ ಶೂನ್ಯಸಂಪಾದನೆ’ ಮೂರು ಮುದ್ರಣಗಳನ್ನು ಕಂಡಿದೆ. ಇದು ಆ ಕೃತಿಯ ಅಚ್ಚುಕಟ್ಟುತನ ಮತ್ತು ಜನಪ್ರಿಯತೆಯನ್ನು ಸೂಚಿಸುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ಈ ಸಂದರ್ಭದಲ್ಲಿ ಗಮನಾರ್ಹವಾದ ಮುಖ್ಯ ಸಂಗತಿ ಯೆಂದರೆ – ಭೂಸನೂರಮಠರೂ ಅದನ್ನು ತಿಳಿಸಿರುವಂತೆ – ಈ ಕೃತಿಯ ಸಂಪಾದನ ಕಾರ್ಯದಿಂದಾಗಿ ಅವರಿಗೆ ‘ಪರಾಮರ್ಶೆ’ಯನ್ನು ಬರೆಯಲು ಪ್ರೇರಣೆ ದೊರೆತದ್ದು. ಇಲ್ಲವಾದಲ್ಲಿ ಈ ಶತಮಾನದ ಮೇರುಕೃತಿ ಎನಿಸಿಕೊಂಡ ಪರಾಮರ್ಶೆ ಬರಬಹುದಿತ್ತೆ? ಎಂದು ಸಂದೇಹ ಮೂಡುತ್ತದೆ.

ವಚನ ಸಾಹಿತ್ಯ ಸಂಗ್ರಹ : ಪ್ರೊ. ಭೂಸನೂರಮಠ ಅವರ ಸಂಪಾದಿತ ಕೃತಿಗಳಲ್ಲಿ ಮತ್ತೊಂದು ಗಮನಾರ್ಹವಾದ ಕೃತಿ ವಚನ ಸಾಹಿತ್ಯ ಸಂಗ್ರಹ. ಇದರ ಮೊದಲ ಮುದ್ರಣ ಬಂದದ್ದು ೧೯೬೫ರಲ್ಲಿ. ಆಗಿನ ಮೈಸೂರು ಸರ್ಕಾರದ ವಿದ್ಯಾಭ್ಯಾಸ ಇಲಾಖೆ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾನ್ಯವಾಗಿ ಒಬ್ಬೊಬ್ಬ ವಚನಕಾರನ ವಚನಗಳನ್ನು ಸಂಗ್ರಹಿಸುವ ರೂಢಿ ನಮ್ಮಲ್ಲಿ ಮೊದಲಿನಿಂದಲೂ ಇದೆ. ಮತ್ತು ಇದು ಅಷ್ಟೇನು ಕಷ್ಟದ ಕೆಲಸವೂ ಅಲ್ಲ. ಹನ್ನೆರಡನೆಯ ಶತಮಾನದ ಶರಣರ ಸಮಗ್ರ ಸಂದೇಶವನ್ನು ತನ್ನ ಉಡಿಯಲ್ಲಿ ತುಂಬಿಕೊಂಡಿರುವ ಶೂನ್ಯಸಂಪಾದನೆಯಂತಹ ಅಭೂತಪೂರ್ವವಾದ ಕೃತಿಯನ್ನು, ಜೊತೆಗೆ ಹಲವಾರು ವೀರಶೈವ ಗ್ರಂಥಗಳನ್ನು ಸಂಪಾದಿಸುವುದರ ಮೂಲಕ ಶರಣರ ಜೀವನ ಮತ್ತು ಸಾಹಿತ್ಯವನ್ನು ಅತ್ಯಂತ ಆಳವಾಗಿ ಮತ್ತು ವ್ಯಾಪಕವಾಗಿ ಅಧ್ಯಯನ ಮಾಡಿದ ಭೂಸನೂರಮಠ ಅವರಿಗೆ ಒಬ್ಬ ವಚನಕಾರನ ವಚನಗಳನ್ನು ಸಂಪಾದಿಸುವುದಕ್ಕಿಂತಲೂ ಹಲವು ಶರಣರ ವಚನಗಳನ್ನು ಸಂಪಾದಿಸುವುದೇ ಪ್ರಿಯವಾಗಿ ಕಂಡಿರಬೇಕು – ನಿಜವಾದ ಕುಸ್ತಿಪಟು ತನಗೆ ಸಮಬಲನಾದ ಎದುರಾಳಿಯನ್ನೇ ಆಯ್ದುಕೊಳ್ಳುವಂತೆ. ಇದು ತುಂಬ ಕಷ್ಟದ ಕೆಲಸವಾದರೂ; ಶರಣರ ಸಮಗ್ರ ವಿಚಾರಧಾರೆಯನ್ನು ಕಟ್ಟಿಕೊಡಬಹುದಾದ ಮುಖ್ಯ ವಚನಗಳನ್ನು ಒಂದೆಡೆ ಸೇರಿಸಿದ ಸಾಹಸದ ಸಂತೋಷ ಇಲ್ಲಿದೆ. ಆದ್ಯ ವಚನಕಾರನಾದ ಜೇಡರದಾಸಿಮಯ್ಯನಿಂದ ಮೊದಲುಗೊಂಡು ಹದಿನೇಳನೆಯ ಶತಮಾನದ ಷಣ್ಮುಖ ಸ್ವಾಮಿಯವರೆಗೆ ಅಂದರೆ ಬಸವಯುಗ ಮತ್ತು ಬಸವೋತ್ತರ ಯುಗದ ಒಟ್ಟು ವಚನಕಾರರಲ್ಲಿ ಅರವತ್ತಾರು ಜನ ವಚನಕಾರರ ೨೧೩೯ ವಚನಗಳನ್ನು ಆಯ್ದು ಸಂಪಾದಿಸಲಾಗಿದೆ. ಸಾವಿರಕ್ಕೂ ಮಿಗಿಲಾಗಿರುವ ಬಸವಣ್ಣನ ವಚನಗಳಿಂದ ಕೇವಲ ೨೮೬ ವಚನಗಳನ್ನು ಇಲ್ಲಿ ಆಯ್ದುಕೊಳ್ಳಲಾಗಿದೆ. ಬಸವಣ್ಣನವರ ವಚನಗಳ ಸತ್ವವನ್ನು ಬಲ್ಲ ಯಾರಿಗಾದರೂ ಈ ಆಯ್ಕೆ ಎಷ್ಟು ಕಷ್ಟಕರ ಎಂದು ಒತ್ತಿ ಹೇಳಬೇಕಾಗಿಲ್ಲ. ಸಾಗರದಂತಿರುವ ಎಲ್ಲ ಶರಣರ ವಚನಗಳನ್ನು ಓದುವುದೇ ಕಷ್ಟದ ಕೆಲಸ. ಅವುಗಳನ್ನು ಅರ್ಥೈಸಿಕೊಳ್ಳುವುದು ಇನ್ನೂ ಕಷ್ಟದ ಕೆಲಸ. ಅವುಗಳಲ್ಲಿ ಕೆಲವನ್ನು ಆಯ್ದುಕೊಳ್ಳುವುದು ಮತ್ತೂ ಕಷ್ಟದ ಕೆಲಸ. ಈ ಎಲ್ಲ ಕಷ್ಟಗಳನ್ನು ಸಹಿಸಿ ಭೂಸನೂರಮಠ ಅವರು ‘ವಚನಸಾಹಿತ್ಯ ಸಂಗ್ರಹ’ದ ಸಾಹಸದ ಕಾರ್ಯವನ್ನು ಪೂರೈಸಿದ್ದಾರೆ. ಕಾಲೇಜಿನ ಪಾಠ ಪ್ರವಚನಗಳನ್ನು ಮಾಡುತ್ತಲೇ ಈ ಕೆಲಸ ಆಗು ಮಾಡಿರುವುದು ಮತ್ತೆ ಆಶ್ಚರ್ಯದ ಸಂಗತಿ! ಹಗಲು ರಾತ್ರಿಯೆನ್ನದೆ, ಹಬ್ಬ ಹುಣ್ಣಿಮೆ ಯೆನ್ನದೆ, ರಜಾದಿನವೆನ್ನದೆ ನಿರಂತರವಾಗಿ ವಚನಗಳ ತಾಡೋಲೆಯ ಕಟ್ಟುಗಳಲ್ಲಿ ಮುದ್ರಿತ ಗ್ರಂಥಗಳಲ್ಲಿ ತಾವು ಮತ್ತು ತಮ್ಮೊಂದಿಗೆ ಈ ಕಾರ್ಯದಲ್ಲಿ ಮೊದಲಿನಿಂದ ಕೊನೆಯವರೆಗೆ ಅತ್ಯಂತ ಆಸಕ್ತಿ ಮತ್ತು ಶ್ರದ್ಧೆಯಿಂದ ದುಡಿದ ಡಾ. ಚಂದ್ರಶೇಖರ ಕಂಬಾರ ಮೊದಲಾದವರು ಮುಳುಗಿ ಹೋಗಿದ್ದ ದಿನಗಳನ್ನು ಹಲವು ಬಾರಿ ನನ್ನೊಂದಿಗೆ ಅವರು ನೆನಪಿಸಿಕೊಂಡಿದ್ದಾರೆ. ಬೇರೆ ಬೇರೆ ವಚನಕಾರರ ಗ್ರಂಥಗಳು, ಅವುಗಳಿಂದ ಆಯ್ದ ವಚನಗಳು, ೨೧ ಅಧ್ಯಾಯಗಳಲ್ಲಿ ಆ ವಚನಗಳನ್ನು ಜೋಡಿಸಲು ಮಾಡಿದ ವ್ಯವಸ್ಥೆ – ಹೀಗೆ ಒಟ್ಟಾರೆಯಾಗಿ ಅವರ ಬರಹದ ಕೋಣೆ ಒಂದು ಕಾರ್ಖಾನೆಯಂತಾಗಿತ್ತು ಎನ್ನುತ್ತ ಊಟ ನಿದ್ದೆಯ ಕೆಲವೇ ಗಂಟೆಗಳನ್ನು ಬಿಟ್ಟರೆ ಹಗಲು – ರಾತ್ರಿಯ ಬಹುಪಾಲು ವೇಳೆಯನ್ನು ತಾವು ಮತ್ತು ಡಾ. ಚಂದ್ರಶೇಖರ ಕಂಬಾರರು ಈ ಕಾರ್ಖಾನೆಯಲ್ಲಿ ಕಳೆದುದಾಗಿ ಸಾರ್ಥಕತೆಯ ದನಿಯಲ್ಲಿ ನೆನಪಿಸಿ ಕೊಳ್ಳುತ್ತಿದ್ದರು.

ವಚನಗಳ ಆಯ್ಕೆಯಲ್ಲಿ ಭೂಸನೂರಮಠರು ದೈತ್ಯರಂತೆ ದುಡಿದರೆ; ಅವುಗಳನ್ನು ಸಂಯೋಜಿಸುವಲ್ಲಿ ಸೂಕ್ಷ್ಮತೆ, ಹೊಂದಾಣಿಕೆ ಮತ್ತು ಜೀವಕಳೆಯನ್ನು ಸಾಧಿಸಿ ‘ಸೃಷ್ಟಿಕರ್ತನ’ ಹಿರಿಮೆಯನ್ನು ತೋರಿಸಿದ್ದಾರೆ. ಆರು ಸ್ಥಲಗಳಲ್ಲಿ, ನೂರೊಂದು ಸ್ಥಲಗಳಲ್ಲಿ ವಚನಗಳನ್ನು ಜೋಡಿಸುವ ಸಾಂಪ್ರದಾಯಿಕ ಪದ್ಧತಿಯನ್ನು ಬಿಟ್ಟು ಶ್ರೀಯುತರು ಇಪ್ಪತ್ತೊಂದು ಸ್ಥಲಗಳಲ್ಲಿ ವಚನಗಳನ್ನು ಸಂಯೋಜಿಸಿದ್ದಾರೆ. ಭಕ್ತಿ – ಜ್ಞಾನ – ಕ್ರಿಯಾ ಸಮನ್ವಿತವಾದ, ಲೌಕಿಕ – ಆಧ್ಯಾತ್ಮಿಕ ಸಮನ್ವಿತವಾದ ಶರಣರ ತತ್ವಜ್ಞಾನವನ್ನು ಈ ಸಂಯೋಜನೆಯ ಮೂಲ ಸೂತ್ರವನ್ನಾಗಿ ಇಟ್ಟುಕೊಳ್ಳಲಾಗಿದೆ. ಶೂನ್ಯದಿಂದ ಪ್ರಾರಂಭವಾಗಿ ಪರಮಾತ್ಮ ಪಂಚಭೂತ ಪ್ರಕೃತಿ, ಜೀವಾತ್ಮರ ಉದಯ, ಈ ಜೀವಾತ್ಮ ವಿಶ್ವಚೈತನ್ಯದಲ್ಲಿ ಲೀನವಾಗುವವರೆಗಿನ ಅವನ ದೈವೀಯಾತ್ರೆಯ ಅಖಂಡ – ಭೂಮ ಕಲ್ಪನೆಯು ಈ ಸಂಯೋಜನ ಕ್ರಿಯೆಯಲ್ಲಿ ಹಾಸು ಹೊಕ್ಕಾಗಿರುವುದನ್ನು ಗುರುತಿಸಬಹುದಾಗಿದೆ. ಇದು ಭೂಸನೂರಮಠ ಅವರ ಆಧ್ಯಾತ್ಮಿಕ ಪ್ರತಿಭೆಗೆ ಹಿಡಿದ ಕನ್ನಡಿಯೆಂದು ಹೇಳಬಹುದು.

ಸೃಷ್ಟಿಯ ನಿರ್ಮಾಣ, ಮಾನವ ಜನ್ಮ, ಸುತ್ತ ಮುತ್ತಿರುವ ಪ್ರಪಂಚ, ಮಾಯೆ, ಭಕ್ತಿ – ಪೂಜೆ – ಪ್ರಸಾದ – ಕಾಯಕ – ದಾಸೋಹ – ಶಿವಯೋಗ – ಲಿಂಗಾಂಗ ಸಾಮರಸ್ಯ – ಬಯಲು – ಶರಣರ ವಿಚಾರಧಾರೆಯಲ್ಲಿನ ಈ ಮುಖ್ಯ ವಿಷಯಗಳ ತಿಳಿವಳಿಕೆಗೆ ಪೂರಕವಾಗುವಂತಹ ೧೨೦ ಪುಟಗಳ ಸುದೀರ್ಘವಾದ ಪ್ರಸ್ತಾವನೆಯು ಈ ಸಂಗ್ರಹದ ಪ್ರಾರಂಭದಲ್ಲಿದೆ. ಮೌಲಿಕವಾದ ಇಲ್ಲಿನ ಪ್ರಸ್ತಾವನೆಯಿಂದ ಸಂಗ್ರಹಕ್ಕೆ ವಿಶೇಷ ತೂಕ ಮತ್ತು ಕಳೆ ಪ್ರಾಪ್ತವಾಗಿವೆ. ಸಂಗ್ರಹದ ಕೊನೆಯಲ್ಲಿ ವಚನಕಾರರ ಅಂಕಿತ, ಆಯ್ದುಕೊಂಡ ವಚನಗಳು ಸಂಖ್ಯೆ ಹಾಗೂ ವಚನಗಳ ವರ್ಣನಾನುಕ್ರಮಣಿಕೆಯನ್ನು ಕೊಟ್ಟು ಅಭ್ಯಾಸಕ್ಕೆ ಅನುಕೂಲ ಮಾಡಿ ಕೊಡಲಾಗಿದೆ. ಒಟ್ಟಾರೆಯಾಗಿ “ಪ್ರೊ ಭೂಸನೂರಮಠ ಅವರು ವಚನಸಾಹಿತ್ಯ ಸಂಗ್ರಹದ ಸಂಪಾದಕತ್ವವನ್ನು ಶ್ರದ್ಧಾಸಕ್ತಿಗಳಿಂದ ನೆರವೇರಿಸಿ ಈ ಗ್ರಂಥವನ್ನು ಸರ್ವಾಂಗ ಸುಂದರವನ್ನಾಗಿ ಮಾಡಿರುತ್ತಾರೆ. ವಚನಸಾಹಿತ್ಯ ರತ್ನಾಕರವನ್ನು ಮಥಿಸಿ ಕನ್ನಡಿಗರಿಗೆ ಅಮೃತದ ಸವಿಯೂಟವನ್ನು ಉಣಬಡಿಸಿದ್ದಾರೆ. ಆ ರತ್ನಾಕರದೊಳಗಿನ ಅಮೂಲ್ಯ ರತ್ನಗಳನ್ನು ಆರಿಸಿ ತೆಗೆದು ಜಾಣ್ಮೆಯಿಂದ ಜೋಡಿಸಿ ಕನ್ನಡ ಸಾಹಿತ್ಯದೇವಿಗೆ ಅಲಂಕರಣ ಮಣಿಹಾರವನ್ನು ಅರ್ಪಿಸಿದ್ದಾರೆ. ವಚನಸಾಹಿತ್ಯದಲ್ಲಿ ಸಿದ್ಧಹಸ್ತರಾಗಿರುವ ಪ್ರೊ. ಭೂಸನೂರಮಠ ಅವರ ಈ ಕಾರ್ಯವು ಅಭಿನಂದನೀಯವಾಗಿದೆ.[7] ಎಂಬ ಕೆ.ಎಸ್. ಧರಣೇಂದ್ರಯ್ಯ ಅವರ ಅಭಿಪ್ರಾಯ ಇಲ್ಲಿ ಗಮನಾರ್ಹವಾಗಿದೆ. ಒಟ್ಟಿನಲ್ಲಿ ಸಮಗ್ರತೆಯನ್ನೊಳಗೊಂಡೂ ಸಂಕ್ಷಿಪ್ತ ಸ್ವರೂಪದಲ್ಲಿರುವ ಇದು ವಚನ ಸಾಹಿತ್ಯವನ್ನು ಅಧ್ಯಯನ ಮಾಡುವುದಕ್ಕೆ ಒಂದು ಮಾದರಿ ಕೃತಿಯಾಗಿದೆ ಎಂದು ಹೇಳಬಹುದು.

 

[1]ರಚನೆ : ಡಾ. ಚಂದ್ರಶೇಖರ ಕಂಬಾರ, ಗೌರವ ಗ್ರಂಥದಿಂದ ಈ ಪದ್ಯ ಪಡೆದುಕೊಂಡಿದೆ.

[2]ಡಾ. ಬಿ.ವಿ. ಶಿರೂರ – ‘ಗೌರವ’ ಪು – ೩೧-೩೨

[3]ಡಾ. ಬಿ.ವಿ. ಶಿರೂರ – ‘ಗೌರವ’ ಪು – ೩೫-೩೬

[4]ಡಾ. ಬಿ.ವಿ. ಶಿರೂರ – ‘ಗೌರವ’ ಪು – ೪೬

[5]ಡಾ. ಬಿ.ವಿ. ಶಿರೂರ – ‘ಗೌರವ’ ಪು – ೪೬

[6]ಅದೇ ಪು – ೧೧೧

[7]ಕೆ. ಎಸ್. ಧರಣೇಂದ್ರಯ್ಯ, ವಚನ ಸಾಹಿತ್ಯ ಸಂಗ್ರಹದ ಮುನ್ನುಡಿ