ಶೂನ್ಯ ಸಂಪಾದನೆ (ಇಂಗ್ಲಿಷ್ ಭಾಷಾಂತರ) : ಪ್ರೊ. ಭೂಸನೂರಮಠ ಅವರಿಗೆ ಕನ್ನಡದಂತೆ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಒಳ್ಳೆಯ ಗತಿ ಇತ್ತು. ಅವರು ಇಂಗ್ಲಿಷ್‌ನಲ್ಲಿ ಸಂಭಾಷಣೆ ನಡೆಸುತ್ತಿದ್ದಾಗ ಅವರ ಮಾತುಗಳನ್ನು ಕೇಳಿಕೊಂಡವರಿಗೆ ಅವರು ಕನ್ನಡ ಅಧ್ಯಾಪಕರೆಂದು ಅನಿಸುತ್ತಿರಲೇ ಇಲ್ಲ. ಅಷ್ಟು ಉತ್ತಮ ರೀತಿಯಲ್ಲಿ ಅವರು ಇಂಗ್ಲಿಷನ್ನು ಅರಗಿಸಿಕೊಂಡಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪಾವಟೆ ಅವರು ಕುಲಪತಿಯಾಗಿದ್ದಾಗ ಆರಂಭವಾಗಿದ್ದ ಶೂನ್ಯ ಸಂಪಾದನೆಯ ಇಂಗ್ಲಿಷ್ ಭಾಷಾಂತರ ಯೋಜನೆಯು ಬಾಲಗ್ರಹಕ್ಕೊಳಗಾಗಿ ನಿಷ್ಕ್ರಿಯವಾಗಿದ್ದ ಕಾಲದಲ್ಲಿ ಭೂಸನೂರಮಠ ಅವರು ಈ ಯೋಜನೆಗೆ ನೇಮಿಸಲ್ಪಟ್ಟರು. ಅವರ ಸಾಮರ್ಥ್ಯ, ಹಿಡಿದ ಕೆಲಸವನ್ನು ನಿಷ್ಠೆಯಿಂದ ಮಾಡುವ ಛಲ ಮತ್ತು ಅವರ ಬಹುಶ್ರುತ ಪಾಂಡಿತ್ಯವನ್ನು ಬಲ್ಲ ಮಾನ್ಯ ಪಾವಟೆಯವರು ಉದ್ದೇಶಪೂರ‍್ವಕವಾಗಿ ಭೂಸನೂರಮಠರನ್ನು ಆ ಯೋಜನೆಯ ಕರ್ಣಧಾರತ್ವ ವಹಿಸಿಕೊಳ್ಳಲು ನೇಮಕ ಮಾಡಿದ್ದರು. ಇಂಗ್ಲಿಷ್‌ನ ಉತ್ಸಾಹಿ – ಮೇಧಾವಿ ವಿದ್ವಾಂಸರಾಗಿದ್ದ ಪ್ರೊ. ಮೆನೆಝಿಸ್‌ರವರ ಜೊತೆಗೂಡಿ ಭೂಸನೂರಮಠರು ಶೂನ್ಯ ಸಂಪಾದನೆಯ ಇಂಗ್ಲಿಷ್ ಭಾಷಾಂತರದ ಎರಡು, ಮೂರು ಮತ್ತು ಒಂಭತ್ತನೆಯ ಸಂಪುಟಗಳನ್ನು ಪ್ರಕಟಿಸಿದರು. ಈ ಯೋಜನೆಯು ಸಂಪೂರ್ಣ ಸ್ಥಗಿತಗೊಂಡಂತ್ತಿದ್ದ ಕಾಲದಲ್ಲಿ ಭೂಸನೂರಮಠರು ಅದಕ್ಕೆ ಕಾಯಕಲ್ಪವಾಗಿ ಬಂದರು. ಈ ಯೋಜನೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೊತ್ತುಕೊಂಡು ತಮ್ಮ ಸಿಬ್ಬಂದಿಯೊಂದಿಗೆ ಬೆವರು ಸುರಿಸಿ ದುಡಿದರು. ಭೂಸನೂರಮಠರ ದುಡಿಮೆ, ಸಹಕಾರ, ಮಾರ್ಗದರ್ಶನಗಳನ್ನು ಪ್ರೊ. ಮೆನೆಝಿಸ್ (Prof. Armando Meneses) ಅತ್ಯಂತ ಪ್ರೀತಿಯಿಂದ ಸ್ಮರಿಸಿ ಕೊಂಡಿದ್ದಾರೆ. “We must express our thanks to Prof. S.S. Bhusanurmath, former preofessor of veerashaiva literature and philosophy, Dept. of Kannada, who was for many years incharge of the suny sampadane scheme, and as such, was responsible for bringing out the previous volumes. Most of the work of this present volume, too, was done under his guidance”[1] ಪ್ರೊ. ಮೆನೆಝಿಸ್ ಅವರ ಈ ಅಭಿಪ್ರಾಯವು ಭೂಸನೂರಮಠ ಅವರ ಕಾರ್ಯ ಕ್ಷಮತೆಯನ್ನು ಎತ್ತಿ ತೋರಿಸುತ್ತದೆ.

ಹಾಗೆ ನೋಡಿದರೆ ಯಾವುದೇ ಭಾಷೆಯಲ್ಲಿ ಸ್ವತಂತ್ರ ಕೃತಿ ರಚನೆ ಸುಲಭ. ಆದರೆ ಒಂದು ಭಾಷೆಯಲ್ಲಿಯ ಕೃತಿಯನ್ನು ಮತ್ತೊಂದು ಭಾಷೆಗೆ ಸಜೀವವಾಗಿ ಭಾಷಾಂತರಿಸುವುದು ತುಂಬ ಕಷ್ಟದ ಕೆಲಸ. ಅದರಲ್ಲೂ ಆಧ್ಯಾತ್ಮ ಪ್ರಧಾನವಾದ ಶೂನ್ಯ ಸಂಪಾದನೆಯಂತಹ ಗಂಭೀರ ಕೃತಿಯನ್ನು ಅನುವಾದಿಸುವುದು ಪರಮ ಕಷ್ಟದ ಕೆಲಸ. ಆದರೆ – “ಉಭಯ ಪಂಡಿತರ ಅಪಾರ ಪಾಂಡಿತ್ಯ, ಕವಿತ್ವ ಮತ್ತು ಭಾಷಾ ಪ್ರಭುತ್ವದ ಪ್ರಯೋಜನ ಪಡೆದು ಭಾಷಾಂತರ ಕಾರ್ಯ ಸುಗಮವಾಗಿ ಪೂರ್ಣಗೊಂಡಿತು. ಭಾಷಾಂತರ ಸಂಪುಟಗಳು ಸೃಜನಶೀಲವೂ ಪಾಂಡಿತ್ಯಪೂರ್ಣವೂ ಆಗಿ ಹೊರಬಂದವು. ಶೂನ್ಯ ಸಂಪಾದನೆಯ ಮೂಲ ಆಕಾರ ಕೆಡದಿರಲು, ಅದರ ಸೊಂಪು ಇಮ್ಮಡಿಗೊಳ್ಳಲು ಪ್ರೊ. ಭೂಸನೂರಮಠ ಅವರು ಮುಖ್ಯ ಕಾರಣ. ಒಟ್ಟಿನಲ್ಲಿ ಭಾಷಾಂತರ ಯೋಜನೆಯ ಯಶಸ್ಸಿನ ಶ್ರೇಯಸ್ಸಿನಲ್ಲಿ ಪ್ರೊ. ಭೂಸನೂರಮಠರಿಗೆ ಸಿಂಹಪಾಲು ಸಲ್ಲತಕ್ಕದ್ದು.[2] ಎನ್ನುವ ಡಾ. ಸಿ.ಆರ್. ಯರವಿನ ತೆಲಿಮಠ ಅವರ ಅಭಿಪ್ರಾಯ ಇಲ್ಲಿ ಗಮನಾರ್ಹವಾಗಿದೆ.

ಶೂನ್ಯ ಸಂಪಾದನೆಯ ಪರಾಮರ್ಶೆ

ಜಾಗತಿಕ ಸಾಹಿತ್ಯದಲ್ಲಿಯೇ ಒಂದು ಅಪರೂಪದ ಕೃತಿ ಶೂನ್ಯ ಸಂಪಾದನೆ. ವಚನ ಸಾಹಿತ್ಯದಲ್ಲಿ ಚದುರಿಹೋಗಿದ್ದ ಶರಣರ ತತ್ವಜ್ಞಾನವನ್ನು ಒಂದು ಅರ್ಥಪೂರ್ಣವಾದ ಸೂತ್ರದಲ್ಲಿ ಹೊಂದಿಸಿ ಅದಕ್ಕೊಂದು ಅಖಂಡ ಸ್ವರೂಪವನ್ನು ಸಾಧಿಸಿಕೊಟ್ಟ ಕೃತಿ ಇದಾಗಿದೆ. ಈ ಹಿಂದೆ ಹೇಳಿದಂತೆ ಉಪಲಬ್ದವಿದ್ದ ಹಲವು ತಾಡವೊಲೆಯ ಪ್ರತಿಗಳ ಸಹಾಯದಿಂದ ೧೯೫೮ ರಲ್ಲಿ ಭೂಸನೂರಮಠ ಅವರು ಈ ಕೃತಿಯನ್ನು ಸಂಪಾದಿಸಿದ್ದರು. ಶೂನ್ಯ ಸಂಪಾದನೆಯು ಒಳಗೊಂಡ ತತ್ವ ಅತ್ಯಂತ ಗಹನ ಮತ್ತು ಗಂಭೀರ. ಸಾಮಾನ್ಯರಿಗೆ ಅದರ ತಿರುಳು ತಲುಪುವುದು ತೀರ ಕಷ್ಟಕರ. ಈ ಸಂಗತಿಯನ್ನು ಆ ಕೃತಿ ಸಂಪಾದಿಸುವ ಸಂದರ್ಭದಲ್ಲಿಯೇ ಮನಗಂಡ ಅವರು ಅದಕ್ಕೆ ವ್ಯಾಖ್ಯಾನವೊಂದನ್ನು ಬರೆವ ಸಂಕಲ್ಪ ಮಾಡಿದರು. ಮುಂದೆ ಹಲವು ವರ್ಷಗಳ ಕಾಲ ಅತ್ಯಂತ ಪರಿಶ್ರಮ ವಹಿಸಿ ಅದನ್ನು ಇಂಗ್ಲಿಷ್‌ಗೆ ಭಾಷಾಂತರಿಸುವ ಯೋಜನೆಯ ಸೂತ್ರಧಾರರೂ, ಅವರಾದರು. ಹೀಗೆ ಹತ್ತಾರು ವರ್ಷ ಅವರು ಶೂನ್ಯ ಸಂಪಾದನೆಯ ‘ಹುಚ್ಚಿನಲ್ಲಿ’ ಮುಳುಗಿದರು. ಆ ಸುದೀರ್ಘ ತಪಸ್ಸಿನ ಫಲವಾಗಿಯೇ ಶೂನ್ಯ ಸಂಪಾದನೆಯ ಪರಾಮರ್ಶೆ ಎಂಬ ಸಾವಿರ ಪುಟಗಳ ಬೃಹತ್ ಕೃತಿ ಮೂಡಿಬಂದಿತು.

ಶೂನ್ಯ ಸಂಪಾದನೆಯ ಪರಾಮರ್ಶೆ ಪ್ರಕಟವಾದದ್ದು ೧೯೬೯ರಲ್ಲಿ ಈ ವೇಳೆಗಾಗಲೇ ಶೂನ್ಯ ಸಂಪಾದನೆಯನ್ನು ಕುರಿತು ಡಾ. ಎಚ್. ತಿಪ್ಪೇರುದ್ರಸ್ವಾಮಿಯವರ ‘ಶೂನ್ಯತತ್ವ ವಿಕಾಸ ಮತ್ತು ಶೂನ್ಯ ಸಂಪಾದನೆ’ ಹಾಗೂ ಡಾ. ಎಂ. ಚಿದಾನಂದಮೂರ್ತಿಯವರ ‘ಶೂನ್ಯ ಸಂಪಾದನೆಯನ್ನು ಕುರಿತು’ ಎಂಬ ಕೃತಿಗಳು ಪ್ರಕಟವಾಗಿದ್ದವು. ಅವುಗಳಿಗಿಂತ ಭಿನ್ನವಾಗಿ ಮತ್ತು ಪರಿಣಾಮಕಾರಿಯಾಗಿ ಈ ಕೃತಿ ಮೂಡಿಬಂದಿದೆ. ಗೂಳೂರ ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆಯಲ್ಲಿ ಇರುವಂತೆ ಪರಾಮರ್ಶೆಯಲ್ಲಿಯೂ ಇಪ್ಪತ್ತೊಂದು ಗತಿಗಳಿವೆ. ಪರಾಮರ್ಶೆಯಲ್ಲಿಯ ಗತಿಯ ವಿವರಗಳನ್ನು ಹೀಗೆ ಸಂಗ್ರಹಿಸಬಹುದು.

೧. ಇಂದಿನ ನಾಳೆ : ಇಡೀ ಗ್ರಂಥಕ್ಕೆ ಈ ಗತಿ ಭದ್ರವಾದ ಬುನಾದಿಯಂತಿದೆ. ಇಲ್ಲಿ ಇಂದಿನ ಮಾನವನ ವೈಜ್ಞಾನಿಕ ಸಾಧನೆಗಳನ್ನು ವಿವರಿಸುತ್ತ ಅವುಗಳ ಮಿತಿಯನ್ನು ಗುರುತಿಸಿ; ಶಾಂತಿ ಸಾಮ್ರಾಜ್ಯದ ಸ್ಥಾಪನೆಗೆ ಆತ್ಮಜ್ಞಾನ ಎಷ್ಟು ಅಗತ್ಯ ಎಂಬುದನ್ನು ಪ್ರತಿಪಾದಿಸಲಾಗಿದೆ. ಇದರರ್ಥ ಪರಾಮರ್ಶೆ ವಿಜ್ಞಾನಕ್ಕೆ ವಿಮುಖವಾಗಿದೆ ಎಂದಲ್ಲ. ಆದರೆ ಕೇವಲ ವೈಜ್ಞಾನಿಕ ಪ್ರಗತಿಯ ಭರದಲ್ಲಿ ‘ವೇಗದ ಬೆನ್ನು ಹತ್ತಿ ಎತ್ತಲೋ ಧಾವಿಸುತ್ತಿರುವ ಮಾನವ ಕ್ಷಣಕಾಲ ನಿಲ್ಲಬೇಕು. ಜೀವನದ ಅರ್ಥವೇನು? ಜೀವನದಲ್ಲಿ ಪರಮಾರ್ಥವನ್ನು ಸಾಧಿಸುವ ಬಗೆ ಯಾವುದು? ಎಂದು ವಿಚಾರ ಮಾಡಬೇಕು… ಜ್ಞಾನ, ಶಕ್ತಿ, ಯೌವನ, ಧನ, ಕೀರ್ತಿ ಈ ಯಾವುದೇ ರೂಪದ ಸಂಪತ್ತು ಎಷ್ಟೇ ಇರಲಿ ಬುದ್ಧಿ ಉನ್ಮತ್ತವಾಗಬಾರದು… ಯುಗ ಧರ್ಮದ ಕೋಟೆಯನ್ನು ಕೆಡವಬೇಕು ಮುಚ್ಚಿದ ದಿಕ್ಕುಗಳೆಲ್ಲವನ್ನೂ ತೆರೆಯಬೇಕು. ಭೂತಕಾಲದ ಮಹಾದ್ವಾರವನ್ನು ತೆಗೆದು ಅಲ್ಲಿ ಅನುಭವ – ಜ್ಞಾನ – ಜೀವನ ಕೌಶಲ – ಬುದ್ಧಿವಂತಿಕೆ ಇದ್ದರೆ ಅವನ್ನೆಲ್ಲ ಸ್ವಾಗತಿಸಬೇಕು; ಸ್ವೀಕರಿಸಬೇಕು…. ಭೂತ ವರ್ತಮಾನ ದಂತೆ ಭವಿಷ್ಯದ ಮಹಾಕಾಶವನ್ನೂ ನೋಡಬೇಕು. ಭವಿಷ್ಯದಲ್ಲಿಯೂ ನಡೆಯಬೇಕು. ಮಾನವನ ಪರಮಾಭ್ಯುದಯಕ್ಕೆ ಯಾವುದೂ, ಎಲ್ಲಿಯೂ, ಯಾವ ಕಾಲದಲ್ಲಿಯೂ ಅಡ್ಡಿಯಾಗಬಾರದು’[3] ಹೀಗೆ ಪೂರ್ಣ ದೃಷ್ಟಿಯೊಡನೆ ಮೂಲಭೂತವಾದ ಪ್ರಶ್ನೆ ಮತ್ತು ಧೋರಣೆಗಳನ್ನು ಪರಾಮರ್ಶೆಕಾರರು ಒಡ್ಡಿ; ಏನೇನೋ ಅರಿಯಲು ಹೊರಟ ಮಾನವನನ್ನು ಕ್ಷಣಕಾಲ ನಿಲ್ಲಿಸಿ; ತನ್ನ ತಾನರಿಯುವಂತೆ ತಡೆದಿದ್ದಾರೆ ಇಲ್ಲಿ.

೨. ಹಗಲು ಹತ್ತಲೆ : ಪ್ರಾಣಿ ಸಸ್ಯ ಮತ್ತು ಮನುಷ್ಯನ ಹಗಲು ಕತ್ತಲೆಯಲ್ಲಿ; ಮನುಷ್ಯನಲ್ಲಿಯೇ ಕರ್ಮೇಂದ್ರಿಯ ಮತ್ತು ಜ್ಞಾನೇಂದ್ರಿಯಗಳಿಗನುಗುಣವಾಗಿ ಹಗಲು ಕತ್ತಲೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಮತ್ತೆ ಭಾವನಾತ್ಮಕ ಪಾತಳಿಯ ಹಗಲು ಕತ್ತಲು ಬೇರೆ. ಅಂತೂ ಈ ಹಗಲು ಕತ್ತಲೆ ಅಂದರೆ ಅರಿವು ಸಾಪೇಕ್ಷ ಸ್ವರೂಪದ್ದು. ಕೇವಲ ಇಂದ್ರಿಯಾತ್ಮಕ ದೃಷ್ಟಿಯುಳ್ಳ ವ್ಯಕ್ತಿಯ ಹಗಲು ಕತ್ತಲೆಗು ಮತ್ತು ಅರಿಮೆಯ ದೃಷ್ಟಿಯುಳ್ಳ ವ್ಯಕ್ತಿಯ ಹಗಲು ಕತ್ತಲೆಗೆ ಮತ್ತೆ ವ್ಯತ್ಯಾಸ. ಇಲ್ಲಿ ಇಂದ್ರಿಯಾತ್ಮಕವಾದ ದೃಷ್ಟಿಗೆ ಮಿತಿ ಇರುವುದನ್ನು ಪರಾಮರ್ಶೆಕಾರರು ಸೂಚಿಸುತ್ತಾರೆ. ಈ ವ್ಯಕ್ತಿ ಯಾವುದನ್ನು ಹಗಲೆಂದು ಕೊಂಡಿರುತ್ತಾನೊ ಅದು ಹಗಲಾಗಿರಲಿಕ್ಕಿಲ್ಲ. ಹಗಲಾಗಿದ್ದರೂ ಹಗಲಿನ ಸಾಮ್ರಾಜ್ಯ ಅದಾಗಿರಲಿಕ್ಕಿಲ್ಲ. ಸಾಮಾನ್ಯವಾಗಿ ತಾನು ಕಂಡದ್ದೆ, ತಾನು ಉಂಡದ್ದೆ, ತಾನು ತಿಳಿದದ್ದೇ ಸರಿಯೆಂದು ಮನುಷ್ಯ ಬೀಗುವುದು ಹೆಚ್ಚು. ಇದನ್ನೆ ಲೇಖಕರು ಹಗಲು ಕತ್ತಲೆ ಎಂದು ಕರೆದಿರುವುದು. ಇಂದ್ರಿಯಾತ್ಮಕ ದೃಷ್ಟಿ ಇದ್ದರೂ ಕಾಗೆ, ಗೂಬೆ, ಬೆಕ್ಕು ಮತ್ತು ಮನುಷ್ಯ ಇವರಲ್ಲಿ ಹಗಲು ಕತ್ತಲೆ ವಿಚಿತ್ರ ಸ್ವರೂಪದಲ್ಲಿರುವುದನ್ನು; ‘ನಿನ್ನಂತೆ ಎಲ್ಲರನ್ನು ಪ್ರೀತಿಸು’ ಎಂದು ನಂಬಿದ ಏಸು, ನಿಜಗುಣರ ಭಾವನಾತ್ಮಕ ನೆಲೆಯ ಹಗಲು ಕತ್ತಲೆಯ ಸ್ವರೂಪವನ್ನು ಇಲ್ಲಿ ಅತ್ಯಂತ ಮಾರ್ಮಿಕವಾಗಿ ವಿವರಿಸಲಾಗಿದೆ. ಜೊತೆಗೆ ಹಗಲಿನ ಪರಿಪೂರ್ಣ ಸ್ವರೂಪವನ್ನು ಅಂದರೆ ಸ್ವಯಂಪೂರ್ಣ ಅರಿವಿನ ಸ್ವರೂಪವನ್ನು ನಿಜಗುಣರು ಕೊಡುವ ರಾಜಾಸ್ಥಾನದ ನರ್ತಕಿಯ ಸನ್ನಿವೇಶವನ್ನು ವಿವರಿಸಿ; ರಂಗಸ್ಥಳದ ಬಳಿ ಬೆಳಗುವ ದೀಪ ಇಡೀ ಕಾರ್ಯಕ್ರಮಕ್ಕೆ ಹೇಗೆ ಕಾರಣೀಭೂತವೋ ಹಾಗೆ ಇಡೀ ಪ್ರಪಂಚದ ರಂಗಸ್ಥಳಕ್ಕೆ ಈ ‘ಅರಿವುದೀಪ’ ಮೂಲಕಾರಣ ಎಂದು ವ್ಯಾಖ್ಯಾನಿಸಲಾಗಿದೆ. ಇದು ನಿಜವಾದ ಹಗಲಿನ ಸಾಮ್ರಾಜ್ಯ. ಈ ದೃಷ್ಟಿ ಕುರುಡಾಗಿದ್ದರೆ ‘ಹಗಲು ಕತ್ತಲೆ’ ಎಂಬುದು ಲೇಖಕರ ಅಭಿಪ್ರಾಯ.

೩. ಜಾಗರದಾಚೆ ಜಾಗರ : ಸಾಮಾನ್ಯವಾಗಿ ಮನುಷ್ಯ ಅಹಂಭಾವಿಯಾದ ಜೀವಾತ್ಮ. ಅವನು ತನ್ನ ಅಹಂಭಾವ ಪ್ರಪಂಚದಲ್ಲಿ ಜೀವಿಸುವುದೇ ಹೆಚ್ಚು. ‘ಈ ಆತ್ಮನ ಚಿತ್ – ಚೈತನ್ಯ ಅಂದರೆ ಅರಿವಿನ ಚೈತನ್ಯದಿಂದಲೇ ಅಹಂಭಾವಕ್ಕೆ ಅಂಕುರಿಸುವ ಗುಣವಿದೆ.’ ಹೀಗಾದಾಗ್ಯೂ ದೇಹ – ಕರಣ – ಇಂದ್ರಿಯಗಳಿಂದ ಸೀಮಿತವಾದ ಅಹಂಭಾವವನ್ನು ಆಮೂಲಾಗ್ರವಾಗಿ ಬಯಲು ಮಾಡಿ ಒಳಗೆ ನೋಡಿದರೆ ಅಖಂಡವಾದ ಆತ್ಮ ಸಾಕ್ಷಾತ್ಕಾರವಾಗುತ್ತದೆ. ಅರಿವಿನ ಬೆಳಗಿನಲ್ಲಿ ಪ್ರಜ್ವಲಿಸುವ ಇದು ಪರಮಾತ್ಮನ ಅಂಶ. ಈ ಪರಮಾತ್ಮವೇ ಜಾಗರದಾಚೆಯ ಜಾಗರ ಎಂದು ಪ್ರಪಂಚದ ಹಲವು ಅನುಭಾವಿಗಳ ದರ್ಶನದ ಹಿನ್ನೆಲೆಯಲ್ಲಿ ವಿವರಿಸಲಾಗಿದೆ.

೪. ಏನಿದೆ ಅಲ್ಲಿ : ಈ ಗತಿಯು ಶೂನ್ಯ ಸಂಪಾದನೆಯಲ್ಲಿ ಅಡಕವಾಗಿರುವ ಮುಖ್ಯ ತತ್ವವನ್ನು ವಿವರಸುತ್ತದೆ. ‘ಅಹಂ’ ‘ನಾನು ಯಾರು’ ಪರಾ ಮತ್ತು ಅಪರಾವಿದ್ಯೆಯ ಸ್ವರೂಪ ಹಾಗೂ ಶೂನ್ಯತತ್ವದ ಸುದೀರ್ಘವಾದ ವಿವೇಚನೆ ಇಲ್ಲಿದೆ. ಉಪನಿಷತ್ತು, ಭಗವದ್ಗೀತೆ, ಸಿದ್ಧಾಂತ ಶಿಖಾಮಣಿ; ಆಲ್ಲಮಪ್ರಭು ಹಾಗೂ ಹಾಗೂ ಇತರ ಶರಣರ ವಚನಗಳು, ನಿಜಗುಣ ಶಿವಯೋಗಿಗಳ ಹಾಡು – ಇವುಗಳ ಬೆಳಕಿನಲ್ಲಿ ಮೇಲಿನ ವಿಷಯಗಳ ತಾತ್ವಿಕ ಚಿಂತನೆಯ ದರ್ಶನ ಮಾಡಿಸಲಾಗಿದೆ.

೫. ಒಂದು ಎರಡು : ಹಿಂದಿನ ಅಧ್ಯಾಯದಲ್ಲಿ ಬೀಜಾರೋಪಣಗೊಂಡ ಶೂನ್ಯ ತತ್ವದ ವಿವೇಚನೆ ಈ ಅಧ್ಯಾಯದಲ್ಲಿ ನಿಶ್ಚಿತ ಸ್ವರೂಪವನ್ನು ಪಡೆದು ಚಿಗುರೊಡೆದಿದೆ. “ಶೂನ್ಯ ಒಂದು ಅದ್ವಯ. ಅದರಿಂದ ಬಣ್ಣ ಬೆಡಗು ಪಡೆದ ಸೃಷ್ಟಿವಿಲಾಸ ಎರಡು; ಹಲವು…. ನವಿಲಿನ ತತ್ತಿಯಲ್ಲಿ ನವಿಲಿನ ಆಕಾರ, ಬಣ್ಣ ಬೆಡಗುಗಳೆಲ್ಲ ಹುದುಗಿರುವಂತೆ ಅಮೂರ್ತ ಚೈತನ್ಯವೆನಿಸುವ ಶೂನ್ಯದಲ್ಲಿ ವಿಶ್ವದ ಅನಂತ ವೈಭವ ಹುದುಗಿಕೊಂಡಿದೆ. ಆ ಚಿತ್ ಚೈತನ್ಯ ಪ್ರಕಾಶದಲ್ಲಿ ದೇಹ – ಕರಣ – ಇಂದ್ರಯಗಳೂ, ಮನೆ – ಮಠಗಳು, ದೇಶ – ಕೋಶಗಳು ರೂಪತಾಳಿ ಬೆಳಗುತ್ತಿವೆ. ಕೊನೆಗೆ ಅವುಗಳೆಲ್ಲ ಆ ಪ್ರಕಾಶದಲ್ಲಿಯೇ ಲಯ ಹೊಂದುತ್ತವೆ”[4] ಹೀಗೆ ಒಂದು ಎರಡಾಗುವ, ಎರಡು ಒಂದಾಗುವ ಶೂನ್ಯದ ಲೀಲಾವಿಲಾಸವನ್ನು ಶರಣರ ವಚನಗಳ ನಿದರ್ಶನಗಳಿಂದ ವಿವರಿಸಲಾಗಿದೆ. ಒಂದು ರೀತಿಯಲ್ಲಿ ಇದು ಜೀವಾತ್ಮದ ಮೂಲಸ್ಥಲವನ್ನು ಅರಿಯುವ ಮಂಥನಕ್ರಿಯೆ. ಶೂನ್ಯವೆಂದರೆ ಖಾಲಿ ಅಲ್ಲ. ಎಲ್ಲವನ್ನೂ ಒಳಗೊಂಡ ಒಂದು ಅಖಂಡ ಚೈತನ್ಯವೆಂಬ ವಿಚಾರವನ್ನು ಮನವರಿಕೆಯಾಗುವಂತೆ ಇಲ್ಲಿ ವ್ಯಾಖ್ಯಾನಿಸಲಾಗಿದೆ.

೬. ಎಚ್ಚರಿಸಿದ ಗುರು ತಂದೆ : ಈ ಭಾಗದಲ್ಲಿ “ಪಿಂಡಸ್ಥಲ (ಮಾನವಸ್ಥಲ) ಪಿಂಡಜ್ಞಾನ ಸ್ಥಲ, ಸಂಸಾರ ಹೇಯ ಸ್ಥಲ, ಮಾಯ ವಿಡಂಬನ ಸ್ಥಲ ಮತ್ತು ಗುರುಕರುಣಸ್ಥಲ – ಇವುಗಳ ವಿವರಣೆ ಬಂದಿದೆ. “ಆಯಿತ್ತೆ ಉದಯ ಮಾನ ಹೋಯಿತ್ತೆ ಅಸ್ತಮಾನ” ಎಂಬ ಪ್ರಭುವಿನ ವಚನದಿಂದ ಈ ಗತಿ ಆರಂಭವಾಗುತ್ತದೆ. ಆ ವಚನವನ್ನು ವಿವರಿಸುತ್ತ ಪ್ರೊ. ಭೂಸನೂರಮಠ ಅವರು ಮಾನವನು ಪ್ರಪಂಚದಲ್ಲಿ ಹುಟ್ಟುವುದೇಕೆ? ಸಾಯುವುದೇಕೆ ಎಂಬ ಪ್ರಶ್ನೆಗಳನ್ನು ಹಾಕಿಕೊಂಡು ಬೇರೆ ಬೇರೆ ವಚನಗಳ ಬೆಳಕಿನಲ್ಲಿ ಉತ್ತರ ಕೊಡುತ್ತ ಪಿಂಡಸ್ಥಲ, ಪಿಂಡಜ್ಞಾನ ಸ್ಥಲ ಇತ್ಯಾದಿ ಪಂಚಸ್ಥಲಗಳ ವಿವರಣೆ ನೀಡಿದ್ದಾರೆ”[5] ಶೂನ್ಯ ಸಂಪಾದನೆಯಲ್ಲಿ ಬರುವ ಪ್ರಭುದೇವರ ವಚನಗಳ ಜೊತೆಗೆ ‘ಲಿಂಗಲೀಲಾವಿಲಾಸ ಚಾರಿತ್ರ’, ‘ಪ್ರಭುದೇವರ ವಚನಗಳು’, ಅಲ್ಲಮನ ವಚನಚಂದ್ರಿಕೆ ಮೊದಲಾದ ಗ್ರಂಥಗಳಲ್ಲಿ ಬಂದಿರುವ ಪ್ರಭುವಿನ ವಚನಗಳನ್ನೂ ಅಲ್ಲದೆ ಹಲವು ಸಂಸ್ಕೃತ ಮತ್ತು ಕನ್ನಡ ಗ್ರಂಥಗಳನ್ನು ಬಳಸಿಕೊಂಡು ಈ ಗತಿಯನ್ನು ಸಾದ್ಯಂತವಾಗಿ ವಿವರಿಸಲಾಗಿದೆ.

೭. ಬೆಳಗೆದ್ದು ಪೂಜೆ : ಶಿವಾಪೇಕ್ಷೆಯುಳ್ಳ ಜೀವಾತ್ಮನು ಶ್ರೀಗುರುವಿನ ಕರುಣೆಯಿಂದ ಶೂನ್ಯ ಸಂಪಾದನೆಯ ಮಹಾಮಣಿಹಕ್ಕೆ ಮುಖ ಮಾಡುತ್ತಾನೆ. ಅವನ ಸಾಧನ ಮಾರ್ಗದ ವಿವಿಧ ಹಂತಗಳನ್ನೆ ವೀರಶೈವ ಶರಣರು ಷಟ್ ಸ್ಥಲ ಎಂದು ಕರೆದಿರುವರು. ಈ ಗತಿಯಲ್ಲಿ “ವೀರಶೈವ ದರ್ಶನದ ಸಾರ ಸಾರಾಯದ ಭಕ್ತ ಮಹೇಶ ಪ್ರಸಾದ ಪ್ರಾಣಲಿಂಗ ಶರಣ ಮತ್ತು ಐಕ್ಯ ಎಂಬ ಷಟ್ ಸ್ಥಲಗಳ ವಿವೇಚನೆಯಿದೆ. ಭಕ್ತಿ ಜ್ಞಾನ ವೈರಾಗ್ಯ ಮತ್ತು ಯೋಗಗಳ ಸೂಕ್ಷ್ಮಗಳನ್ನೆಲ್ಲ ಸಮನ್ವಯಗೊಳಿಸುವ ಒಂದು ಸಮಷ್ಟಿ ದರ್ಶನವು ಷಟ್‌ಸ್ಥಲಗಳಲ್ಲಿ ಮೈವೆತ್ತು ನಿಂತಿವೆ. ಸ್ಥಲದಿಂದ ಸ್ಥಲಕ್ಕೆ ಇಲ್ಲಿ ನಡೆಯುವ ಪ್ರಜ್ಞಾವಿಕಾಸದ ಅನುಭಾವಲೋಕದ ಅವ್ಯಕ್ತ ಸೀಮೆಯದು. ಈ ಅತೀಂದ್ರಿಯ ಲೋಕದ ದಿವ್ಯಯಾತ್ರೆಗೆ ಓದುಗರನ್ನು ಅತ್ಯಂತ ಆತ್ಮೀಯತೆಯಿಂದ ಸಲುಗೆಯಿಂದ ಕೈಹಿಡಿದು ನಡೆಸಿ ಕೃತಾರ್ಥರಾಗಿದ್ದಾರೆ ಪರಾಮರ್ಶೆಕಾರರು. ನನಗೆ ತಿಳಿದ ಮಟ್ಟಿಗೆ ಷಟ್ ಸ್ಥಲಗಳ ವಿವೇಚನೆ ಇಷ್ಟು ಉಜ್ವಲವಾಗಿ ಕನ್ನಡದಲ್ಲಿ ಬೇರೆ ಎಲ್ಲಿಯೂ ಮೈವೆತ್ತಿಲ್ಲ.”[6] ಈ ಜ್ಞಾನ ಕೇವಲ ಪಾಂಡತ್ಯದಿಂದ ಸಿದ್ಧಿಸಿದ್ದಲ್ಲ; ಸಿದ್ಧಿಸುವುದೂ ಇಲ್ಲ. ಭೂಸನೂರಮಠರು ಸ್ವತಃ ಎಲ್ಲ ಸಂಕಲ್ಪ – ಸಿದ್ಧತೆಗಳೊಂದಿಗೆ ಪ್ರಾಯೋಗಿಕವಾಗಿ ತಮ್ಮ ಜೀವನವನ್ನು ಇದರ ಅನುಸಂಧಾನಕ್ಕಾಗಿ ಸಮರ್ಪಿಸಿ ಕೊಂಡಿದ್ದರೆಂಬುದು ಇಲ್ಲಿ ಗಮನಾರ್ಹವಾದ ವಿಷಯ.

೮. ಸುಳಿದಾಡುವ ಲಿಂಗ : ವಚನ ಸಾಹಿತ್ಯದಲ್ಲಿ ವರ್ಣಿತವಾಗಿರುವ ಜಂಗಮ ಸ್ವರೂಪವನ್ನು ಅಥವಾ ಷಟ್‌ಸ್ಥಲ ಸಿದ್ಧಾಂತದಲ್ಲಿ ಬರುವ ಶರಣಸ್ಥಲವನ್ನು ಹೀಗೆ ಸುಳಿದಾಡುವ ಲಿಂಗವೆಂದು ವರ್ಣಿಸಲಾಗಿದೆ. ‘ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು’ ಎಂಬ ವಚನದ ಹಿನ್ನೆಲೆಯಲ್ಲಿ ಈ ಶೀರ್ಷಿಕೆ ಅತ್ಯಂತ ಅರ್ಥಪೂರ್ಣವೆನಿಸುತ್ತದೆ. ಶ್ರೀ ಅರವಿಂದರ ‘The Life Divine’ ಗ್ರಂಥದ ಭಾಗ ಮತ್ತು ಚೆನ್ನಬಸವಣ್ಣನವರ ಎರಡು ವಚನಗಳನ್ನು ಈ ಗತಿಯ ಆರಂಭದಲ್ಲಿ ಉದ್ಧರಿಸಲಾಗಿದೆ. ಈ ಗತಿಯ ಪೂರ್ವಾರ್ಧದಲ್ಲಿ ಶರಣ ಅಥವಾ ಜಂಗಮ ಸ್ಥಲದ ಸ್ವರೂಪ, ಹಿರಿಮೆ ಗರಿಮೆಗಳನ್ನು ವಿವರಿಸಲಾಗಿದೆ. ಶರಣಸ್ಥಲಕ್ಕೇರುವ ಸಾಧನೆಯ ಮಾರ್ಗದಲ್ಲಿ ಸಾಧಕನು ಎದುರಿಸುವ ಎಡರು, ತೊಡರು, ದ್ವಂದ್ವ, ಕ್ಷೋಭೆ ಮೊದಲಾದ ವಿವರಗಳು ಉತ್ತರಾರ್ಧದಲ್ಲಿ ಮಾರಿಸ್ ಮ್ಯಾಟರ್ ಲಿಂಕ್, ಸರ್ ಆರ್ಥರ್ ಎಡಿಂಗ್ ಟನ್ ಮೊದಲಾದ ದಾರ್ಶನಿಕರ ಮತ್ತು ವಿಜ್ಞಾನಿಗಳ ವಿಚಾರಧಾರೆಯನ್ನು ಇಲ್ಲಿ ವ್ಯಾಖ್ಯಾನಕ್ಕೆ ಬಳಸಿಕೊಂಡಿದೆ.

೯. ಅನಿಮಿಷ ನೋಟ : ಈ ಗತಿಯಲ್ಲಿ ಅಲ್ಲಮಪ್ರಭುವಿನ ಪೂರ್ವಾಪರದ ಶರಣಜೀವನದ ಪರಾಮರ್ಶೆಯಿದೆ, ಅಲ್ಲಮಪ್ರಭುವಿನ ಜನನಕ್ಕೆ ಸಂಬಂಧಿಸಿದಂತೆ ಹರಿಹರ ಹೇಳುವ ಶಾಪದ ಕಾರಣವನ್ನು ಶೂನ್ಯಸಂಪಾದನೆಕಾರರು ಅಲ್ಲಗಳೆದು ಅಲ್ಲಮನ ಜನನ ಅವತಾರವೆನ್ನುತ್ತಾರೆ. ಭೂಸನೂರಮಠರು ಇನ್ನೂ ಸ್ವಲ್ಪ ಮುಂದೆ ಹೋಗಿ ಪ್ರಭು ಸ್ವರೂಪವು ಶರಣ ಸಂಪ್ರದಾಯಕ್ಕೆ ಅನುಗುಣವಾಗಿದೆ ಎಂದು ಸಕ್ರಮವಾಗಿ ವಿವರಿಸಿದ್ದಾರೆ. ಜೊತೆಗೆ ಗುರುಶಿಷ್ಯರಾದ ಅನಿಮಿಷಯ್ಯ ಹಾಗೂ ಪ್ರಭುದೇವರಲ್ಲಿ ನಡೆದ ಗುರುಶಿಷ್ಯಭಾವದ ಬೆಡಗನ್ನು ಹೃದಯಸ್ಪರ್ಶಿಯಾಗಿ ಚಿತ್ರಿಸಲಾಗಿದೆ. ಅಲ್ಲಮಪ್ರಭು ಕೃಷಿಕಾಯಕದ ಶರಣ ಗೊಗ್ಗಯ್ಯನ ಭಕ್ತಿಯನ್ನು ಜ್ಞಾನಮಾರ್ಗಕ್ಕೆ ತಿರುಗಿಸಿ; ಆತನಲ್ಲಿ ಅದ್ವೈತಭಕ್ತಿ ಬೆಳೆಯುವಂತೆ ಪ್ರೇರೇಪಿಸಿದ ಪರಿಯನ್ನೂ ಇಲ್ಲಿ ಮನನೀಯವಾಗಿ ಪರಾಮರ್ಶಿಸಲಾಗಿದೆ.

೧೦. ಕೂಡಲಿಲ್ಲ ಅಗಲಲಿಲ್ಲ : ಈ ಗತಿಯಲ್ಲಿ ಶೂನ್ಯಸಂಪಾದನೆಯಲ್ಲಿ ಬರುವ ಮುಕ್ತಾಯಕ್ಕಗಳ ಸಂಪಾದನೆಯ ಪರಾಮರ್ಶೆ ಬಂದಿದೆ. ಅಜಗಣ್ಣನು ಗುಪ್ತಭಕ್ತಿಯೂ ಮಾರ್ಗದ ಮಹಾನ್ ಸಾಧಕ, ಅವನು ಮುಕ್ತಾಯಕ್ಕನಿಗೆ ಸಹೋದರನೂ ಅದಕ್ಕೂ ಮಿಗಿಲಾಗಿ ಗುರುವೂ ಆಗಿದ್ದನು. ಅಜಗಣ್ಣ ಲಿಂಗೈಕ್ಯನಾದ ಸಂದರ್ಭದಲ್ಲಿ ಅಲ್ಲಿಗೆ ಬಂದ ಪ್ರಭುವು ಪ್ರಲಾಪಿಸುತ್ತಿದ್ದ ಮುಕ್ತಾಯಕ್ಕನಿಗೆ ಅಜಗಣ್ಣ ಇದ್ದ ಎಲ್ಲಿ? ಹೋದ ಎಲ್ಲಿಗೆ? ಎನ್ನುತ್ತ ಕೂಡಲೂ, ಅಗಲಲೂ ಬಾರದ ಅಖಂಡವಾದ ಪರವಸ್ತುವಿನ ಮತ್ತು ಅದರಿಂದ ಮೂಡಿದ ಜೀವಾತ್ಮದ ಸ್ವರೂಪವನ್ನು ವಿವರಿಸಿದ್ದನ್ನು ಇಲ್ಲಿ ಪರಮಾರ್ಶಿಸಲಾಗಿದೆ. ಅಜಗಣ್ಣ ಮುಕ್ತಾಯಕ್ಕ ಮತ್ತು ಪ್ರಭುದೇವ ಈ ಮೂವರ ಮಹೋನ್ನತ ವ್ಯಕ್ತಿತ್ವಗಳನ್ನು ಇಲ್ಲಿ ಪರಿಸ್ಫುಟವಾಗಿ ಚಿತ್ರಿಸಲಾಗಿದೆ.

೧೧. ಒಳಗೆ ಯೋಗ ಹೊರಗೆ ಯೋಗ : ಮುಕ್ತಾಯಕ್ಕಗಳ ಪ್ರಲಾಪವನ್ನು ಕೆಣಕಿ ಅವಳಲ್ಲಿರುವ ಮಹಾನುಭಾವವನ್ನು ಎಚ್ಚರಿಸಿ, ಐಕ್ಯಸ್ಥಲದ ಪರಿಯನ್ನು ಅರಿವುಗತ ಮಾಡಿ ತೋರಿಸಿ ಪ್ರಭುದೇವ ಸೊನ್ನಲಾಪುರಕ್ಕೆ ಬರುತ್ತಾನೆ. ಕೆರೆ ಬಾವಿ ತೋಡಿಸುವ, ಗುಡಿ ಕಟ್ಟುವ ಲೋಕಸಂಸಾರದಲ್ಲಿ ನಿರತವಾಗಿದ್ದ ಮತ್ತು ಹಠಯೋಗ, ಲಯಯೋಗಗಳಂತಹ ಸಾಂಪ್ರದಾಯಿಕ ಯೋಗಸಾಧನೆಯಲ್ಲಿ ತೊಡಗಿದ್ದ ಸಿದ್ಧರಾಮನನ್ನು ಈ ಮಾರ್ಗದಿಂದ ಮುಕ್ತಗೊಳಿಸಿ ಕಲ್ಯಾಣದ ಶರಣರು ಸಾಧಿಸಿದ ಶಿವಯೋಗದ ಕಡೆಗೆ, ಸಹಜಯೋಗದ ಕಡೆಗೆ ಕರೆತರಲು ಪ್ರಭುದೇವರು ಅವನೊಂದಿಗೆ ನಡೆಸಿದ ಸಂವಾದದ ವಿವರಗಳನ್ನು ಈ ಗತಿಯಲ್ಲಿ ಪರಾಮರ್ಶಿಸಲಾಗಿದೆ. ಶರಣರ ಸಾಧನೆಯ ಮಾರ್ಗದಲ್ಲಿ ಇರುವ ಕೊರತೆಗಳನ್ನು ಗುರುತಿಸಿ ಅವರನ್ನು ಪರಿಪೂರ್ಣದೆಡೆಗೆ ಕರೆದೊಯ್ಯುವ ಅಲ್ಲಮಪ್ರಭುವಿನ ಧೀರೋದಾತ್ತವಾದ ಭವ್ಯ ವ್ಯಕ್ತಿತ್ವವನ್ನು ಇಲ್ಲಿ ಉಜ್ವಲವಾಗಿ ಚಿತ್ರಿಸಲಾಗಿದೆ.

೧೨. ಕರಸ್ಥಲದ ಪರಬ್ರಹ್ಮ : ಶೂನ್ಯ ಸಂಪಾದನೆಯಲ್ಲಿಯ “ಬಸವೇಶ ಚೆನ್ನ ಬಸವೇಶಂಗನುಗ್ರಹ ಮಾಡಿದ ಸಂಪಾದನೆ”ಯಲ್ಲಿಯ ವಿಚಾರಗಳನ್ನು ಪರಾಮರ್ಶಿಸಿದ ಈ ಭಾಗಕ್ಕೆ ಭೂಸನೂರಮಠರು ‘ಕರಸ್ಥಲದ ಪರಬ್ರಹ್ಮ’ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಶರಣ ಸಂಪ್ರದಾಯದಲ್ಲಿ ಮುಮುಕ್ಷುವಿನ ಸಾಧನೆಯ ಮೂಲ ಆಸರೆಯೇ ಇಷ್ಟಲಿಂಗ. ಇದನ್ನೇ ಪರಾಮರ್ಶೆಕಾರರು ಕರಸ್ಥಲದ ಪರಬ್ರಹ್ಮ ಎಂದು ವರ್ಣಿಸಿದ್ದಾರೆ. ಇಲ್ಲಿ ಚೆನ್ನಬಸವಣ್ಣನು ಬಸವಣ್ಣನಿಂದ ಇಷ್ಟಲಿಂಗೋಪದೇಶವನ್ನು ಪಡೆದ, ಬಸವಣ್ಣನು ಚೆನ್ನಬಸವಣ್ಣನಿಂದ ಪ್ರಾಣಲಿಂಗಸ್ಥಲವನ್ನು ತಿಳಿದುಕೊಂಡ ಮತ್ತು ಲಿಂಗಾಂಗ ಸಾಮರಸ್ಯದ ಸಾಕ್ಷಾತ್ಕಾರಕ್ಕಾಗಿ ಹಂಬಲಿಸುತ್ತಿರುವ ಬಸವಣ್ಣನ ಅನುಭಾವ ಜೀವನದ ವಿಚಾರದ ಚರ್ಚೆಯು ಎಂದಿನ ಹಾಗೆ ಇಲ್ಲಿಯೂ ಕೂಡ ಬಂದಿದೆ. ಆದರೆ ಪುರಾಣ ಮತ್ತು ಪವಾಡಗಳ ಸಾಂಪ್ರದಾಯಿಕ ದೃಷ್ಟಿಯನ್ನು ಬಿಟ್ಟುಕೊಟ್ಟು ವಾಸ್ತವದ ನೆಲೆಯಿಂದೆ ವಿಚಾರಗಳನ್ನು ಮಂಡಿಸಲಾಗಿದೆ. ಗುರು ಶಿಷ್ಯ ಸಂಬಂಧ, ಇಷ್ಟಲಿಂಗ, ದೀಕ್ಷೆ, ಉಪಾಸನೆ, ಯೋಗ – ಇವುಗಳ ವಿವರಣೆಯಲ್ಲೂ ಭೂಸನೂರಮಠರು ವಾಸ್ತವಿಕತೆ ಮತ್ತು ವೈಜ್ಞಾನಿಕತೆಗಳ ಪಾತಳಿಯನ್ನು ಅನುಸರಿಸಿ ನಡೆಯಲು ಪ್ರಯತ್ನಿಸಿರುವುದು ಗಮನಾರ್ಹವಾಗಿದೆ.

೧೩. ಮಹಾಮನೆ : ಪ್ರಭುದೇವರು ಸಿದ್ಧರಾಮಯ್ಯನನ್ನು ಕೂಡಿಕೊಂಡು ಕಲ್ಯಾಣಕ್ಕೆ ಬಸವಣ್ಣನ ಮಹಾಮನೆಗೆ ಬಂದ ಚಿತ್ರದೊಂದಿಗೆ ಈ ಗತಿ ಪ್ರಾರಂಭವಾಗುತ್ತದೆ. ಕಲ್ಯಾಣ ಪಟ್ಟಣದ ವೈಭವ; ಅಲ್ಲಿ ಬಸವಣ್ಣ ಕಟ್ಟಿದ ಮಹಾಮನೆ; ಅಲ್ಲಿ ನಡೆದ ಶರಣರ ಧಾರ್ಮಿಕ ಆಧ್ಯಾತ್ಮಿಕ ಚಟುವಟಿಕೆಗಳ ವಿವರಗಳು ಇಲ್ಲಿವೆ. ಜೊತೆಗೆ ಭಕ್ತ, ಲಿಂಗ, ಜಂಗಮ – ಇವುಗಳ ತಾತ್ವಿಕ ನೆಲೆಯನ್ನು ವಿವೇಚಿಸಲಾಗಿದೆ. ಮತ್ತು ಬಸವಣ್ಣ, ಚೆನ್ನಬಸವಣ್ಣ, ಹಡಪದ ಅಪ್ಪಣ್ಣ, ಸೊಡ್ಡಳ ಬಾಚರಸ, ಕಿನ್ನರಿ ಬೊಮ್ಮಣ್ಣ, ಮಡಿವಾಳ ಮಾಚಯ್ಯ – ಮೊದಲಾದ ಶರಣರ ಆಧ್ಯಾತ್ಮಿಕ ಚಟುವಟಿಕೆಗಳನ್ನು ಇಲ್ಲಿ ಮಾಡಿಕೊಡಲಾಗಿದೆ.

೧೪. ಪ್ರಸನ್ನ ಪ್ರಸಾದ : ಶೂನ್ಯ ಸಂಪಾದನೆಯಲ್ಲಿಯ ಮರುಳ ಶಂಕರ ದೇವರ ಸಂಪಾದನೆಯನ್ನು ಇಲ್ಲಿ ಪ್ರಸನ್ನ ಪ್ರಸಾದ ಎಂದು ಕರೆಯಲಾಗಿದೆ. ಮರುಳ ಶಂಕರದೇವ ಈ ಗತಿಯ ಕೇಂದ್ರಚೇತನ. ಇವನೊಬ್ಬ ಗುಪ್ತಭಕ್ತ, ಮಹಾಪ್ರಸಾದಿ. ಬಸವಣ್ಣನದು ಆಡಂಬರದ ಭಕ್ತಿಯಾದರೆ ಮರುಳ ಶಂಕರನದು ನಿರಾಡಂಬರವಾದ ಗುಪ್ತಭಕ್ತಿ. ಹನ್ನೆರಡು ವರ್ಷಗಳ ಕಾಲ ಬಸವಣ್ಣನ ಮಹಾಮನೆಯ ‘ಪ್ರಸಾದ ಕುಂಡದ’ ಬಳಿಯಲ್ಲಿಯೇ ವಾಸವಾಗಿದ್ದು; ಶರಣರ ಒಕ್ಕು ಮಿಕ್ಕ ಪ್ರಸಾದವನ್ನು ಸೇವಿಸಿ ಪ್ರಸಾದಿಯೇ ಆಗಿದ್ದನಾದರೂ ಬಸವಾದಿ ಶರಣರಿಗಾರಿಗೂ ಕಂಡಿರಲಿಲ್ಲ. ಅಲ್ಲಮಪ್ರಭುವನ್ನು ಬಸವಣ್ಣ ಭಕ್ತಿಯ ಆಡಂಬರದಲ್ಲಿ ಬರಮಾಡಿಕೊಳ್ಳುತ್ತಿದ್ದ ಪ್ರಸಂಗದಲ್ಲಿ; ಲೋಕದ ಕಣ್ಣಿಗೆ ಮರುಳನಂತಿದ್ದ ಈ ಶಂಕರದೇವನನ್ನು ಪ್ರಭುದೇವರೇ ಗುರುತಿಸುತ್ತಾರೆ. ಅವರ ಗುಪ್ತಭಕ್ತಿ ಪ್ರಸಾದಿಯ ನಿಲವು ಕಂಡು ಪ್ರಭುದೇವರು ಬೆರಗಾಗುತ್ತಾರೆ. “ಬೀದಿಯಲ್ಲಿ ಬಿದ್ದ ಮಾಣಿಕ್ಯ, ಹೂಳಿರ್ದ ನಿಧಾನ” ಎಂದು ಪ್ರಭು ಮರುಳ ಶಂಕರದೇವನನ್ನು ಕೊಂಡಾಡಿ; ಅಲ್ಲಿ ನೆರೆದ ಶರಣರಿಗೂ ಅವನ ಮಹಾತ್ಮೆಯನ್ನು ಸಾರುವ ಪ್ರಸಂಗ ಇಲ್ಲಿ ವ್ಯಾಖ್ಯಾನಗೊಂಡಿದೆ.

೧೫. ಶರಣರ ಗೋಷ್ಠಿ : ಪ್ರಭುದೇವರು ಬಸವಣ್ಣ, ಚೆನ್ನಬಸವಣ್ಣ ಮಡಿವಾಳ ಮಾಚಯ್ಯ ಮೊದಲಾದ ಶರಣರೊಡನೆ ಅನುಭಾವ ಗೋಷ್ಠಿಯನ್ನು ನಡೆಸಿದ ಪ್ರಸಂಗಕ್ಕೆ ಇಲ್ಲಿ ಇಡಿಯಾಗಿ ಶರಣರ ಗೋಷ್ಠಿ ಎಂದು ಕರೆಯಲ್ಪಟ್ಟಿದೆ. ಪ್ರಭು ಮತ್ತು ಬಸವಣ್ಣನವರ ಜಿಜ್ಞಾಸೆಗೊಳಗಾದ ಆದಿ ಅನಾದಿಯ ಸಮಸ್ಯೆ ಅಥವಾ ಭಕ್ತ – ಜಂಗಮ ತತ್ವದಲ್ಲಿ ಯಾವುದು ಮೊದಲು ಯಾವುದು ಅನಂತರ ಎಂಬ ಜಿಜ್ಞಾಸೆ, ಚೆನ್ನಬಸವಣ್ಣನಿಗೆ ಪ್ರಭುದೇವರು ಪ್ರಾಣಲಿಂಗ – ಸಾಮರಸ್ಯದ ರಹಸ್ಯ ಬೋಧನೆ, ಮಡಿವಾಳಯ್ಯನ ಸಾಧನೆಯ ಪರೀಕ್ಷೆ – ಈ ವಿಷಯಗಳ ವಿವೇಚನೆಯಿದೆ. ಒಟ್ಟಾರೆಯಾಗಿ ಇಲ್ಲಿ ಅಲ್ಲಮಪ್ರಭು ಬಸವಣ್ಣ, ಚೆನ್ನಬಸವಣ್ಣ, ಮಡಿವಾಳ ಮಾಚಿದೇವರುಗಳ ಸ್ವಾನುಭಾವದ ಅಗಲ – ಆಳ – ಔನ್ನತ್ಯಗಳನ್ನು ಉಜ್ವಲವಾಗಿ ನಿರೂಪಿಸಲಾಗಿದೆ.

೧೬. ಕಣ್ಣು ಕಂಡ ಲಿಂಗಪೂಜೆ : ಈ ಗತಿಯಲ್ಲಿ ಶೂನ್ಯ ಸಂಪಾದನೆಯಲ್ಲಿಯ ಸಿದ್ಧರಾಮಯ್ಯನ ದೀಕ್ಷಾಪ್ರಸಂಗವನ್ನು ಪರಾಮರ್ಶಿಸಲಾಗಿದೆ. ಇಷ್ಟಲಿಂಗಕ್ಕೆ ಸಂಬಂಧಿಸಿದ ಮಗ್ಗೆಯ ಮಾಯಿದೇವರ ಶತಕತ್ರಯದ ಪದ್ಯಭಾಗ ಹಾಗೂ ನಿಜಗುಣರ ಪದ್ಯವೊಂದನ್ನು ಈ ಗತಿಯ ಆರಂಭದಲ್ಲಿ ಕೊಡಲಾಗಿದೆ. ಸಿದ್ಧರಾಮಯ್ಯನ ದೀಕ್ಷಾ ಪ್ರಸಂಗ ಇಷ್ಟಲಿಂಗೋಪದೇಶದ ಮಹತ್ವವನ್ನು ತಿಳಿಸುತ್ತದೆ. ಮೋಳಿಗೆಯ ಮಾರಯ್ಯ, ದೇವರ ದಾಸಿಮಯ್ಯ, ಮೆರೆಮಿಂಡದೇವ, ಉರಿಲಿಂಗ ಪೆದ್ದಿ ಮಂಚಣ್ಣ, ಡಕ್ಕೆಯ ಬೊಮ್ಮಣ್ಣ, ಅಮುಗೆದೇವಯ್ಯ, ಶಿವನಾಗಮಯ್ಯ, ತೆಲುಗು ಬೊಮ್ಮಣ್ಣ ಮೊದಲಾದ ಶರಣರು ನೆರೆದ ಅನುಭಾವ ಗೋಷ್ಠಿಯಲ್ಲಿ ಅಲ್ಲಮಪ್ರಭು – ಸಿದ್ಧರಾಮಯ್ಯನಂತಹ ಮಹಾನ್ ಸಾಧಕನಿಗೆ ಇಷ್ಟಲಿಂಗೋಪದೇಶದ ಆವಶ್ಯಕತೆ ಇದೆಯೇ? ಪ್ರಾಣಲಿಂಗದ ಪರಿ ಎಂತು? ಭಾವಲಿಂಗದ ಬಗೆ ಹೇಗೆ? ಇದನ್ನೆಲ್ಲ ಕರುಣಿಸುವ ಗುರುವಿನ ಸ್ವರೂಪವೇನು? ಎಂಬಿತ್ಯಾದಿ ಪ್ರಶ್ನೆಗಳನ್ನು ಎತ್ತುತ್ತಾನೆ. ಅದಕ್ಕೆ ಚೆನ್ನಬಸವಣ್ಣ ಸಮರ್ಪಕವಾದ ಉತ್ತರ ಹೇಳುತ್ತಾನೆ. ಒಟ್ಟು ಈ ಸಂವಾದದಿಂದ ವೀರಶೈವ ದರ್ಶನದ ಮುಖ್ಯ ಸೂತ್ರಗಳಾದ ಷಟ್‌ಸ್ಥಲ, ಅಷ್ಟಾವರಣ, ಪಂಚಾಚಾರಗಳಿಗೆ ಸಂಬಂಧಿಸಿದ ವಿಷಯಗಳನ್ನು ಪರಿಣಾಮಕಾರಿಯಾಗಿ ವಿವರಿಸಲಾಗಿದೆ.

೧೭. ಸತ್ಯಶುದ್ಧ ಕಾಯಕ : ವೀರಶೈವ ದರ್ಶನಕ್ಕೆ ಸಾರ್ವತ್ರಿಕತೆ ಮತ್ತು ಪ್ರಸ್ತುತತೆಯನ್ನು ತಂದುಕೊಟ್ಟ ಸಂಗತಿಯೆಂದರೆ ಅದರಲ್ಲಿ ಮುಖ್ಯವಾಗಿ ಪ್ರತಿಪಾದಿತವಾಗಿರುವ ಕಾಯಕತತ್ವ. ಭಕ್ತಿ – ಜ್ಞಾನ – ಕರ್ಮಗಳ ತ್ರಿವೇಣಿ ಸಂಗಮದಂತಿರುವ ಈ ಸಿದ್ಧಾಂತವನ್ನು ಬಹು ಮಾರ್ಮಿಕವಾಗಿ ಈ ಗತಿಯಲ್ಲಿ ವಿವೇಚಿಸಲಾಗಿದೆ. ನುಲಿಯ ಚಂದಯ್ಯ, ಮೋಳಿಗೆಯ ಮಾರಯ್ಯ, ಆಯ್ದಕ್ಕಿ ಮಾರಯ್ಯ ಇವರ ಕಾಯಕಜೀವನಕ್ಕೆ ಸಂಬಂಧಿಸಿದಂತೆ ಹಲವು ಪವಾಡಗಳೇ ರೂಢಿಯಲ್ಲಿವೆ. ಭೂಸನೂರಮಠ ಅವರು ಪವಾಡಗಳನ್ನು ಹೆಚ್ಚು ವೈಭವೀ ಕರಿಸದೆ ಅವುಗಳ ಹಿಂದಿರುವ ಮುಖ್ಯ ಆಶಯದ ಕಡೆಗೇ ಹೆಚ್ಚು ಒತ್ತು ಕೊಟ್ಟು ವ್ಯಾಖ್ಯಾನ ಮಾಡಿರುವರು.

೧೮. ನಿರ್ಭಯದ ನಿಲವು ಚೆಲುವು : ಮಹಾದೇವಿಯಕ್ಕ ಮತ್ತು ಘಟ್ಟಿವಾಳಯ್ಯ ಇವರ ಭಕ್ತಿ – ಜ್ಞಾನ – ವೈರಾಗ್ಯಮಯವಾದ ಅನುಭಾವ ಜೀವನದ ಔನ್ನತ್ಯವನ್ನು ಇಲ್ಲಿ ಪರಾಮರ್ಶಿಸಲಾಗಿದೆ.

೧೯. ಸ್ವಯಮೇವ : ಬಸವಣ್ಣನ ಅನುಭಾವ ಮಂಟಪದಲ್ಲಿ ಕೆಲಕಾಲ ಇದ್ದು; ಬಸವಾದಿ ಶರಣ ಶರಣೆಯರಿಗೆ ಐಕ್ಯಸ್ಥಲದ ಪರಿಯನ್ನರುಹಿ, ಕಲ್ಯಾಣವನ್ನು ತೊರೆದು, ಹನ್ನೆರಡು ವರ್ಷಗಳ ಕಾಲ ದೇಶಾಂತರ ಹೋಗಿ ಪುನಃ ಕಲ್ಯಾಣಕ್ಕೆ ಬರುವ ಅಲ್ಲಮ ಪ್ರಭುವಿನ ಲೀಲಾಮಯ ಪ್ರಸಂಗದೊಡನೆ ಈ ಗತಿ ಆರಂಭವಾಗುತ್ತದೆ. ಬಸವಣ್ಣನ ಅನುಭಾವ ಪಕ್ವಗೊಂಡ ಬಗೆ, ಬಹಿರಂತರಂಗದಲ್ಲಿ ಅವನು ಪ್ರಭುವಿಗಾಗಿ ರಚಿಸಿದ ಶೂನ್ಯಸಂಪಾದನೆ, ಪ್ರಭುದೇವರು ಮಾರು ವೇಷದಲ್ಲಿ ಆರೋಹಣ ಮಾಡುವುದು, ಜಂಗಮರ ಅತೃಪ್ತಿ, ಪ್ರಭು ದೇವರ ಆರೋಗಣೆ, ಬಹಿರಂಗದ ಆರೋಗಣೆಯಿಂದ ತಣಿಯದ ಪ್ರಭುವನ್ನು ಅಂತರಂಗದ – ಆತ್ಮಸಮರ್ಪಣೆಯ ಆರೋಗಣೆಯಿಂದ ಬಸವ ತೃಪ್ತಿಪಡಿಸುವುದು – ಈ ಎಲ್ಲ ವಿಷಯಗಳನ್ನು ಇಲ್ಲಿ ಸೊಗಸಾಗಿ ವಿವರಿಸಲಾಗಿದೆ.

೨೦. ನಿಂದರೆ ನಿರಾಳ : ಮರ್ತ್ಯದ ಮಣಿಹವನ್ನು ಪೂರೈಸಿ, ಅಖಂಡ ನಿಷ್ಠೆಯಿಂದ ಲಿಂಗಾನುಸಂಧಾನ ಮಾಡಿ ಲಿಂಗಾಂಗ ಸಾಮರಸ್ಯದ ಅಥವಾ ಐಕ್ಯಸ್ಥಲದ ನಿಲವನ್ನು ತಲುಪಿದ ಅಲ್ಲಮ ಪ್ರಭು, ಬಸವಣ್ಣ, ಚೆನ್ನಬಸವಣ್ಣ, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ ಮೊದಲಾದ ಕಲ್ಯಾಣದ ಶರಣರ ಅನುಭಾವ ಜೀವನ ಮಂಗಳವಾಗುವ ಪೂರ್ವಭಾವಿ ವಿವರಗಳು ಇಲ್ಲಿವೆ.

೨೧. ಆಡಂಬರವಿದೇನೋ? :ಶಿವಶರಣರು ಕಂಡುಕೊಂಡ ಆತ್ಯಂತಿಕ ಸತ್ಯ – ದರ್ಶನವಾದ ‘ಬಯಲು’ ಪರಾಮರ್ಶಿತವಾಗಿದೆ. ಈ ಬಯಲನ್ನು ಅಥವಾ ನಿರ್ಬಯಲನ್ನು ಸಾಕ್ಷಾತ್ಕರಿಸಿಕೊಂಡ ಅಲ್ಲಮಪ್ರಭು ಹಡಪದ ಅಪ್ಪಣ್ಣ ತೋಂಟದ ಸಿದ್ಧಲಿಂಗೇಶ್ವರ ಮೊದಲಾದ ಶರಣರ ವಚನಗಳ ಹಿನ್ನೆಲೆಯಲ್ಲಿ; ಎಲ್ಲಕ್ಕೂ ಮೂಲವಾಗಿರುವ, ಎಲ್ಲೆಲ್ಲಿಯೂ ಇದ್ದೂ ಇಲ್ಲದಂತಿರುವ ಸರ್ವತಂತ್ರ ಸ್ವತಂತ್ರವಾದ ನಿರವಯಲಿನ ಭವ್ಯತೆಯನ್ನು ಮನೋಜ್ಞವಾಗಿ ವರ್ಣಿಸುತ್ತ ಬಯಲಿನ ಮಹಿಮೆಗೆ ತಮ್ಮನ್ನು ಸಂಪೂರ್ಣ ಸಮರ್ಪಣ ಗೊಳಿಸಿಕೊಳ್ಳುತ್ತ ‘ಶಬ್ದದ ಶರಣು ಶರಣಾರ್ಥಿ, ನಿಶಬ್ದದ ಶರಣು ಶರಣಾರ್ಥಿ….’[7] ಎಂದು ಪ್ರೊ. ಭೂಸನೂರಮಠರು ಇಡೀ ಪರಾಮರ್ಶೆಗೆ ಮಂಗಲ ಹಾಡಿದ್ದಾರೆ.

ಶೂನ್ಯ ಸಂಪಾದನೆಯಂತಹ ಗಹನ – ಗಂಭೀರ ಕೃತಿಯ ಮಂಥನ ಅಷ್ಟು ಸುಲಭದ ಕಾರ್ಯವಲ್ಲ. ವೀರಶೈವ ದರ್ಶನ ಕರತಲಾಮಲಕವಾಗದ ಹೊರತು ಸಾಧ್ಯವಾಗುವ ಕೆಲಸವಲ್ಲ ಇದು. ಇದಕ್ಕಾಗಿ ಅವರು ಪಟ್ಟ ಪಾಡನ್ನು ಒಂದೆಡೆ ದಾಖಲಿಸಿದ್ದಾರೆ – ‘ವೀರಶೈವ ಧರ್ಮ – ತತ್ವಗಳ ಸತ್ಯಾರ್ಥಗಳನ್ನು ತಿಳಿದುಕೊಳ್ಳಲು ಅನೇಕ ಮಠಾಧೀಶರನ್ನು, ಶಾಸ್ತ್ರಿಗಳನ್ನು ತಜ್ಞರಾದ ಅನುಭವಿಕರನ್ನು ಕೇಳಿದೆ. ಅವರೆಲ್ಲರ ಉತ್ತರ ನನಗೆ ಒಣ ಶಾಸ್ತ್ರದ ಸುದ್ಧಿ, ಷಟ್‌ಸ್ಥಲದ ಕೋಷ್ಟಕ, ಶಬ್ದಗಳಲ್ಲಿ ತೇಲುವ ಅರ್ಥ ಸಮಾಧಾನವಾಗಲಿಲ್ಲ, ಯಾರ ಉತ್ತರವೂ ಸಮರ್ಪಕವೆನಿಸಲಿಲ್ಲ. ವಚನ ಸಾಹಿತ್ಯದ ಆಳವಾದ ಅಭ್ಯಾಸವನ್ನು, ಜಗತ್ತಿನ ಬೇರೆ ಬೇರೆ ಧರ್ಮ ತತ್ವಜ್ಞಾನಿಗಳ ಪರಿಚಯ ಮಾಡಿಕೊಂಡ ನನಗೆ ಮತ್ತು ಇದಕ್ಕೆ ಸರಿದೊರೆಯೆನಿಸುವ ವಿಜ್ಞಾನದ ಶ್ರೇಷ್ಠ ಗ್ರಂಥಗಳನ್ನು ಓದಿಕೊಂಡಿದ್ದ ನನ್ನೊಳಗೆ ಧರ್ಮಯುದ್ಧ ನಡೆಯಿತು. ವೀರಶೈವದ ಗಂಭೀರವನ್ನು ಮನವರಿಕೆ ಮಾಡಿಕೊಳ್ಳುವ ಹೋರಾಟ ಇನ್ನೂ ನಿಂತಿಲ್ಲ.’[8] ಪ್ರೊ. ಭೂಸನೂರಮಠ ಅವರ ಬರವಣಿಗೆಯ ಹಿಂದಿರುವ ಪರಿಶ್ರಮ ಮತ್ತು ಪ್ರಾಮಾಣಿಕತೆಗಳಿಗೆ ಈ ಮಾತು ಕನ್ನಡಿ ಹಿಡಿಯುತ್ತದೆ.

 

[1]. ಡಾ. ಬಿ.ವಿ. ಶಿರೂರ – ‘ಗೌರವ’ ಪು – ೬೨

[2]ಡಾ. ಬಿ.ವಿ. ಶಿರೂರ – ‘ಗೌರವ’ ಪು – ೬೮

[3]ಎಸ್. ಎಸ್. ಭೂಸನೂರಮಠ – ಪರಾಮರ್ಶೆ – ಪು – ೧೨, ೧೩

[4]ಎಸ್. ಎಂ. ವೃಷಭೇಂದ್ರಸ್ವಾಮಿ ಹಾಗೂ ಚಂದ್ರಶೇಖರ ಕಂಬಾರ, ಶೂನ್ಯ ಸಂಪಾದನೆ ಪರಾಮರ್ಶೆಯ ವಿಮರ್ಶೆ – ಪು – ೧೨೧ – ೧೨೪ ಡಾ. ಜಿ.ಎಸ್. ಕಾಪಸೆ

[5]ಅದೇ ಪು – ೧೩೦ ಡಾ. ಬಿ.ವಿ. ಮಲ್ಲಾಪುರ

[6]ಶೂನ್ಯ ಸಂಪಾದನೆ, ಪರಾಮರ್ಶೆಯ ವಿಮರ್ಶೆ. ಡಾ. ವೃಷಭೇಂದ್ರಸ್ವಾಮಿ ಮತ್ತು ಚಂದ್ರಶೇಖರ ಕಂಬಾರ – ಪು – ೧೪೨, ಡಾ. ಎಂ.ಬಿ. ಕೊಟ್ರಶೆಟ್ಟಿ ಅವರ ಲೇಖನದಿಂದ.

[7]ಎಸ್.ಎಸ್. ಭೂಸನೂರಮಠ ಶೂನ್ಯ ಸಂಪಾದನೆ : ಪರಾಮರ್ಶೆ : ಪು –

[8]ಡಾ. ಬಿ.ವಿ. ಶಿರೂರ – ಗೌರವ – ಪು – ೪೮