ಶೂನ್ಯ ಸಂಪಾದನೆಯ ಪರಾಮರ್ಶೆ : ಒಂದೆರಡು ಅಭಿಪ್ರಾಯಗಳು

ಶೂನ್ಯ ಸಂಪಾದನೆಯ ಪರಾಮರ್ಶೆ ಪ್ರೊ. ಎಸ್.ಎಸ್. ಭೂಸನೂರಮಠ ಅವರಿಗೆ ೧೯೭೨ನೆ ಸಾಲಿನ ಕೇಂದ್ರ ಸಾಹಿತ್ಯ ಅಕಾದಮಿಯ ಪ್ರಶಸ್ತಿಯನ್ನು ತಂದುಕೊಟ್ಟ ಕೃತಿ. ಜೊತೆಗೆ ನಾಡಿನ ಮಹಾನ್ ಮಹಾನ್ ಕವಿ – ದಾರ್ಶನಿಕ – ವಿದ್ವಾಂಸರ ಅಖಂಡವಾದ ಪ್ರೀತಿ – ಗೌರವ – ಆದರಗಳನ್ನು ಸಂಪಾದಿಸಿದ ಕೃತಿ. ಇಲ್ಲಿ ಅಂತಹ ಎರಡು – ಮೂರು ಅಭಿಪ್ರಾಯಗಳನ್ನು ಗಮನಿಸಬಹುದು.

೧. “…..ಇಲ್ಲಿಯವರೆಗೆ ವಚನ ಸಾಹಿತ್ಯದ ಸೌಂದರ್ಯ, ಸಾಮಾಜಿಕ ಸಾಧನೆಗಳು, ಅಚ್ಚುಗನ್ನಡ ಭಾಷೆಯ ಬೆಡಗು ಬಿನ್ನಾಣಗಳ ವಿಚಾರ ಅಷ್ಟಷ್ಟು ಮಾಡಿದ್ದೇವೆ. ಆದರೆ ಎಲ್ಲ ಶರಣರ ಎಲ್ಲ ವಚನಗಳ ಏಕಸೂತ್ರವಾದ ವಿಚಾರಗಳು, ತತ್ವ – ವೇದಾಂತ ವೈಭವ, ಅನುಭಾವದ ಔನ್ನತ್ಯಗಳನ್ನು ಅತ್ಯಾಶ್ಚರ್ಯಕರವಾಗಿ ಎತ್ತಿ ತೋರಿಸುತ್ತದೆ ಈ ಪರಾಮರ್ಶೆ. ಈ ನಿಟ್ಟಿನಿಂದ ಇದು ಏಕಮೇವಾ ದ್ವಿತೀಯವಾದ ಕೃತಿ.

ಪ್ರೊ. ಭೂಸನೂರಮಠ ಅವರು ಅದೆಷ್ಟು ಪ್ರಾಚ್ಯ, ಪಾಶ್ಚಾತ್ಯ ತಾತ್ವಿಕ ಗ್ರಂಥಗಳನ್ನು ಸಮೀಕ್ಷಿಸಿದ್ದಾರೆ! ಅದೆಷ್ಟು ಅತ್ಯಾಧುನಿಕ ವಿಚಾರಗಳನ್ನು ಅಳವಡಿಸಿಕೊಂಡಿದ್ದಾರೆ! ಅಷ್ಟೇ ಅಲ್ಲದೆ ಶೂನ್ಯ ಸಂಪಾದನೆಯ ವಿಚಾರಗಳನ್ನು ಮತೀಯ, ಕಾಲದೇಶಿಯ ಕೋಟೆಗಳನ್ನು ದಾಟಿ, ಶಿಖರದ ಮೇಲೆ ನಿಂತು, ಆ ‘ಬಯಲಿ’ನಲ್ಲಿ ನಿಟ್ಟಿಸಿ, ವಿಚಾರಿಸಿ, ವಿವರಿಸುವ ಪ್ರಯತ್ನ ಮಾಡಿದ್ದಾರೆ…..

ಶ್ರೀ ಭೂಸನೂರಮಠರು ಆಕಾಶದಲ್ಲಿ ಹಾರಾಡಿಸಿದರೂ ನಮಗೆ ‘ಭೂಮಿ’ಯ ಪರಿಚಿತ ಸ್ಪರ್ಶದ ಭರವಸೆಯನ್ನು ಕೊಡುತ್ತಾರೆ. ಆದ್ದರಿಂದ ಈ ಪರಾಮರ್ಶೆ ಶುಷ್ಕ ತಾತ್ವಿಕ ಗ್ರಂಥವಾಗದೆ ಸದಭಿರುಚಿ ಪ್ರೇರಕ ಸಾಂಸ್ಕೃತಿಕ ಸಾಹಸವಾಗದೆ….

ಇದು ಇಂದಿನ ನನ್ನ ತಾತ್ಕಾಲಿಕ ಅಭಿಪ್ರಾಯ. ಇದರ ಕೊನೆಯಲ್ಲಿ ‘ಪೂರ್ಣವಿರಾಮ’ ಹಾಕಬೇಡಿ ಅರ್ಧವಿರಾಮವಿರಲಿ. ಈ ಹಣ್ಣಿನ ಬಣ್ಣ, ವಾಸನೆ, ಒಂದಿಷ್ಟು ರುಚಿ ನೋಡಿದ್ದೇನೆ. ಇನ್ನು ಪೂರ್ಣ ಸವಿದಾಗ – ಸಾಧ್ಯವಾದರೆ ಮತ್ತೆ ‘ಅಭಿಪ್ರಾಯ’ ಬರೆದು ಪೂರ್ಣವಿರಾಮ ಹಾಕೋಣ. ಅಥವಾ ಈ ವಿಚಾರ ವಿವೇಚನೆಗೆ ಪೂರ್ಣವಿರಾಮ ಹಾಕದಿರುವುದೆ ಸರಿ….”
– ಶ್ರೀ ಕುವೆಂಪು
ಶೂನ್ಯ ಸಂಪಾದನೆ : ಪರಾಮರ್ಶೇಯ ವಿಮರ್ಶೆ, ಪು – ೩ – ೫

೨. “…..ಪರಾಮರ್ಶೆ ಇಪ್ಪತ್ತನೆಯ ಶತಮಾನದ ಒಂದು ಮೇರು ಕೃತಿ. ಪ್ರಭುದೇವರ ವಚನಗಳು ವಚನ ವಾಙ್ಮಯದ ಉತ್ತುಂಗ ಶಿಖರವೆನಿಸಿದರೆ; ಪರಾಮರ್ಶೆ ವಚನ ಸಾಹಿತ್ಯ ವಿಮರ್ಶೆ ಸುವರ್ಣ ಕಲಶವಾಗಿದೆ…. ಪರಾಮರ್ಶೆ ಗದ್ಯರೂಪದ ಮಹಾಕಾವ್ಯವೆನಿಸಿದೆ…. ಪ್ರೊ. ಭೂಸನೂರಮಠ ಅವರು ಇಪ್ಪತ್ತನೆಯ ಶತಮಾನದ ಪ್ರಭುದೇವರಂತೆ ಇಡೀ ಗ್ರಂಥದಲ್ಲಿ ಮಿಂಚಿನ ಹೊಳೆ ಸಂಚಲಿಸುವಂತೆ ಮಾಡಿರುವರು. ಅವರ ತತ್ವಜ್ಞಾನದ ಆಳ, ವಿಚಾರದ ಔನ್ನತ್ಯ, ಭಾವದ ಬೆಡಗು, ಶೈಲಿಯ ಸೊಗಸು ಈ ಬೃಹತ್ ಗ್ರಂಥಕ್ಕೆ ಅಪೂರ್ವ ವೈಶಿಷ್ಟ್ಯವನ್ನಿತ್ತಿವೆ. ಈ ಕೃತಿಯಿಂದ ಭಾರತೀಯ ತತ್ವಜ್ಞಾನ ಮತ್ತು ಕನ್ನಡ ಭಾಷೆಗಳ ಶ್ರೀಮಂತಿಕೆ ಹೆಚ್ಚಿದೆ.”
ಡಾ. ಆರ್. ಸಿ. ಹಿರೇಮಠ
ಪರಾಮರ್ಶೆಯ ವಿಮರ್ಶೆ, ಪು – ೩೭೨

೩. “….ಕನ್ನಡ ಭಾಷೆಯು ಎಷ್ಟು ಸಮರ್ಥವಾದದ್ದು, ಎಷ್ಟು ಸಮೃದ್ಧವಾದದ್ದು, ಎಂಥ ಗಹನ – ಸೂಕ್ಷ್ಮ ವಿಷಯಗಳಿಗಾದರೂ ಸಶಕ್ತ ರಸನೆಯಾಗಬಲ್ಲದು. ಅದು ಯಾವ ಭಾಷೆಗೂ, ಯಾವ ವಿಷಯದಲ್ಲಿಯೂ ಬಿಟ್ಟುಕೊಡುವುದಿಲ್ಲವೆಂಬುದು ಈ ಗ್ರಂಥದಿಂದ ವ್ಯಕ್ತವಾಗುತ್ತದೆ.

….ಕನ್ನಡದ ವ್ಯಾಖ್ಯಾನ ಗ್ರಂಥಗಳಲ್ಲಿ ಇದಕ್ಕೆ ಅಗ್ರಸ್ಥಾನ ಮೀಸಲೆಂಬುದರಲ್ಲಿ ಅನುಮಾನವಿಲ್ಲ. ವಿಶ್ವದ ಯಾವ ಗ್ರಂಥದೊಡನೆಯಾದರೂ ಸರಿಸಮನಾಗಿ ನಿಲ್ಲಬಲ್ಲ ಉದ್ಘಕೃತಿ; ಎಂಥ ಸಂಭಾವನೆ, ಎಂಥ ಪ್ರಶಸ್ತಿಗಾದರೂ ಅರ್ಹವಾದ, ಕನ್ನಡಕ್ಕೆ ಶ್ರೀಮಂತಿಕೆಯನ್ನೊದಗಿಸಿರುವ ಮೇರು ಕೃತಿ.”

ಡಾ. ದೇಜಗೌ.
ಪರಾಮರ್ಶೆಯ ವಿಮರ್ಶೆ – ಪು – ೩೭೩ – ೭೪

‘ಭವ್ಯ ಮಾನವ’ ಮಹಾಕಾವ್ಯ

೧೮ ಮತ್ತು ೧೯ನೆಯ ಶತಮಾನಗಳಲ್ಲಿ ನಾನಾ ಕಾರಣಗಳಿಂದಾಗಿ ಗ್ರಹಣಪೀಡಿತವಾಗಿದ್ದ ಕನ್ನಡ ಸಾಹಿತ್ಯವು ಈ ಶತಮಾನದ ಉದಯದೊಂದಿಗೆ ಹೊಸ ಬೆಳಕನ್ನು ಪಡೆದುಕೊಂಡು ಬೆಳೆದುದು ಈಗ ಇತಿಹಾಸವಾಗಿದೆ. ಭಾವಗೀತೆಯು ಉದಯವಾದ ಕೆಲ ಹೊತ್ತಿನಲ್ಲಿಯೇ ಉಕ್ಕು ಪಡೆದು ಹರಿಯತೊಡಗಿತು. ಆ ಕಾಲದಲ್ಲಿ ಕಾದಂಬರಿ ಮತ್ತು ಕಥಾಸಾಹಿತ್ಯ ಕೂಡ ರಾಶಿ ರಾಶಿಯಾಗಿ ಬೆಳೆಯುತ್ತಲೇ ಇತ್ತು. ಅಂಥ ಸಂದರ್ಭದಲ್ಲಿ ಹಿಂದಿನ ಕಾಲದ ಹಾಗೆ ಮಹಾಕಾವ್ಯ ಮತ್ತೆ ಆಧುನಿಕ ಕಾಲದ ಕನ್ನಡದಲ್ಲಿ ಮೂಡಿಬರಬಹುದು ಎಂಬುದನ್ನು ಕನ್ನಡ ಸಾರಸ್ವತ ಪ್ರಪಂಚ ಊಹಿಸಿಯೂ ಇರಲಿಲ್ಲವೇನೋ? ಅಂಥ ಸಂದರ್ಭದಲ್ಲಿ ಕುವೆಂಪು ಅವರು ‘ಶ್ರೀ ರಾಮಾಯಣದರ್ಶನಂ’ ಮಹಾಕಾವ್ಯವನ್ನು ಬರೆದು ಕೇವಲ ಕನ್ನಡ ನಾಡಿಗಷ್ಟೆ ಅಲ್ಲ ಇಡೀ ಭರತವರ್ಷಕ್ಕೇ ಅಚ್ಚರಿಯನ್ನೂ ಮತ್ತು ಆನಂದವನ್ನೂ ಉಂಟುಮಾಡಿದರು. ‘ಶ್ರೀ ರಾಮಾಯಣದರ್ಶನಂ’ ಬಂದ ಮೇಲೆ ಸುಮಾರು ಇಪ್ಪತ್ತೆಂಟು ವರ್ಷಗಳ ನಂತರ ಡಾ. ವಿ.ಕೆ. ಗೋಕಾಕ ಅವರ ‘ಭಾರತ ಸಿಂಧು ರಶ್ಮಿ’ ಪ್ರಕಟವಾಯಿತು. ಅವರ ಬೆನ್ನ ಹಿಂದೆಯೇ ಪ್ರೊ. ಎಸ್.ಎಸ್. ಭೂಸನೂರಮಠ ಅವರ ‘ಭವ್ಯ ಮಾನವ’ ಮಹಾಕಾವ್ಯ ಮೂಡಿಬಂದಿತು. ಆಮೇಲೆ ‘ನೆಲದ ಜೋಗುಳ’ ಮತ್ತು ಈಚೆಗೆ ‘ಚಕೋರಿ’ ಆ ಪಂಕ್ತಿಗೆ ಸೇರಿವೆ. ಈ ಶತಮಾನ ಕಳೆಯುವುದರೊಳಗೆ ಇನ್ನೂ ಒಂದೆರಡು ಮಹಾಕಾವ್ಯಗಳನ್ನು ಕಾಣುವ ಸಾಧ್ಯತೆಯೂ ಇದೆ. ಇದು ಕನ್ನಡ ನಾಡು – ನುಡಿಯ ಪುಣ್ಯ.

‘ಬೆಲೆಯಿಂದಕ್ಕುಮೆ ಕೃತಿ ಗಾ
ವಿಲ ಭುವನದ ಭಾಗ್ಯದಿಂದಮಕ್ಕುಂ
ಬೆಲೆಗೊಟ್ಟು ತಾರ ಮಧುವಂ
ಮಲಯಾನಿಲಮಂ ಮನೋಜಮಂ’ – ಎಂಬ

ನೇಮಿಚಂದ್ರನ ಮಾತು ಕನ್ನಡ ನೆಲದ ಪುಣ್ಯವನ್ನು ಸಾರಿ ಹೇಳುವಂತಿದೆ. ಬಹುಶಃ ಇಷ್ಟು ಮಹಾಕವ್ಯಗಳು ಆಧುನಿಕ ಭಾರತದ ಬೇರೆ ಯಾವ ಭಾಷೆಗಳಲ್ಲಿಯೂ ಬಂದಿರಲಿಕ್ಕಿಲ್ಲವೆಂಬುದು ನನ್ನ ತಿಳಿವಳಿಕೆ.

‘ಭವ್ಯಮಾನವ’ದ ಸಂದರ್ಭದಲ್ಲಿ ಗಮನಾರ್ಹವಾದ ಒಂದು ವಿಚಾರವೆಂದರೆ – ಕುವೆಂಪು, ಗೋಕಾಕ, ಚಂದ್ರಶೇಖರ ಕಂಬಾರ ಮೊದಲದವರು ಕಾವ್ಯ ರಚನೆಯ ಮೂಲಕವೇ ಸಾಹಿತ್ಯ ಕೃಷಿಯನ್ನು ಆರಂಭಿಸಿದವರು. ಭೂಸನೂರಮಠರು ಹಾಗಲ್ಲ. ಭವ್ಯ ಮಾನವಕ್ಕೆ ಮೊದಲು ಅವರು ಬರೆದದ್ದು ‘ಶೂನ್ಯ ಸಂಪಾದನೆಯ ಪರಾಮರ್ಶೆ’ಯಂತಹ ಗದ್ಯ ಕೃತಿಯನ್ನು. ಒಂದು ಬಿಡಿ ಪದವನ್ನೂ ಬರೆಯದ ವ್ಯಕ್ತಿ ಸರಳ ರಗಳೆಯ ಛಂದಸ್ಸಿನಲ್ಲಿ ೨೬,೫೦೦ ಪಂಕ್ತಿಗಳುಳ್ಳ; ೮೩೨ ಪುಟಗಳ ಬೃಹತ್ ಕಾವ್ಯವೊಂದನ್ನು ಬರೆದುದು ಅತ್ಯಂತ ಆಶ್ಚರ್ಯದ ಸಂಗತಿ. ಇನ್ನೊಂದು ಆಶ್ಚರ್ಯದ ಸಂಗತಿಯೆಂದರೆ – ಈ ಮಹಾಕಾವ್ಯಕ್ಕೆ ರಾಮಾಯಣ ಮಹಾಭಾರತ ಕಥೆಗಳಂತಹ ಯಾವುದೇ ಸಿದ್ಧವಸ್ತು (Ready made plot) ಇಲ್ಲದಿರುವುದು. ಇಲ್ಲಿ ಪ್ರಧಾನವಾಗಿ ಆಧ್ಯಾತ್ಮವನ್ನು ಕಾವ್ಯ ಮಾಡುವ ವಿಶಿಷ್ಟ ಸಾಹಸ ಮಾಡಲಾಗಿದೆ.

೧೯೫೭ ಧಾರವಾಡದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಅಧ್ಯಾತ್ಮ ಕಾವ್ಯವಾಗಬಲ್ಲುದು?’ ಎಂಬ ವಿಷಯ ಕುರಿತು ಭೂಸನೂರಮಠರು ಪ್ರಬಂಧ ಮಂಡಿಸಿದರಂತೆ. “ಆಕಾಶದೊಳಗೆ ತಿರುಗುತ್ತಿರುವ ‘ಯತ್ ಕಿಂಚ ಜಗತ್ಕಾಂ ಜಗತ್’ ನಲ್ಲಿ ಯಾವುದೇ ವಸ್ತು ವಿಷಯ, ಸಂಗತಿ, ಘಟನೆ – ಏನೆಲ್ಲ ಕಾವ್ಯದ ಹಿಡಿತಕ್ಕೆ ಸಿಕ್ಕು ಕಾವ್ಯ ವಸ್ತುವಾಗಬಲ್ಲುದು. ಬಹಿರಂಗದ ಪ್ರಪಂಚವಷ್ಟೇ ಅಲ್ಲ ವಿಶ್ವವಿಷಯಾಂತರಂಗದಲ್ಲಿ ನಡೆದ ಸಂಗತಿಗಳೂ ಕಾವ್ಯದ ಆಲಿಂಗನಕ್ಕೆ ಹೊರಗಲ್ಲ. ವಸ್ತು ಸ್ಥಿತಿ ಹೀಗಿರುವಾಗ ಕಾವ್ಯ ಸಾಮ್ರಾಜ್ಯಕ್ಕೆ ಆಧ್ಯಾತ್ಮ ಹೊರತೆ? ಲೌಕಿಕ ಅಥವಾ ಧಾರ್ಮಿಕ ವಿಷಯಗಳ ಅನುಭೂತಿಗಿಂತ ‘ಆತ್ಮವನ್ನು ಅಧಿಕರಿಸಿ’ ನಡೆವ ನುಡಿವ ಅನುಭಾವ ಹೆಚ್ಚು ತೀವ್ರ ತೀಕ್ಷ್ಣ, ವಿಶಾಲ ಗಂಭೀರ ಮತ್ತು ಉನ್ನತೋನ್ನತವೆಂದು ಹೇಳಿದರೆ ಎಳ್ಳಷ್ಟೂ ತಪ್ಪಲ್ಲ….” (೧. ಭೂಸನೂರಮಠ ಎಸ್. ಎಸ್. ಭವ್ಯಮಾನವ – ಪು – xii) ಎಂದು ಆಧ್ಯಾತ್ಮ ಕಾವ್ಯದ ವಸ್ತುವಾಗಬಲ್ಲುದು ಮಾತ್ರವಲ್ಲ ಅದು ಕಾವ್ಯದ ಸರ್ವಶ್ರೇಷ್ಠವಸ್ತು ಮತ್ತು ಮನುಷ್ಯನ ಲೌಕಿಕದಂತೆಯೇ ಸಹಜವಾದ ಅನುಭವ ಎಂದು ತಮ್ಮ ವಿಚಾರವನ್ನು ಪ್ರತಿಪಾದಿಸುತ್ತಾರೆ. ಅನಂತರ ಈ ವಿಷಯವನ್ನು ಪ್ರತಿಪಾದಿಸಿದರೆ ಆಯ್ತೆ? ಎಂದು ತಮ್ಮನ್ನೇ ಪ್ರಶ್ನಿಸಿಕೊಂಡು ಅದನ್ನು ಪ್ರಾಯೋಗಿಕವಾಗಿ ಸಿದ್ಧಮಾಡಿ ತೋರಿಸುವ ಸಂಕಲ್ಪ ಮಾಡಿದರು. ಅದರ ಪ್ರತಿಫಲವೆ ‘ಭವ್ಯ ಮಾನವ’ ಮಹಾಕಾವ್ಯಕ್ಕೆ ಪ್ರೇರಣೆಯಾಯಿತು.

ಭವ್ಯಮಾನವನ ಕಥಾವಸ್ತು ಚಾರಿತ್ರಿಕ ವ್ಯಕ್ತಿಗಳಾದ ಅಲ್ಲಮಪ್ರಭು, ಅಕ್ಕಮಹಾದೇವಿ ಹಾಗೂ ಇತರ ಶಿವಶರಣರ ಜೀವನ ದರ್ಶನವನ್ನು ಅವಲಂಬಿಸಿದೆ. ‘ವಿಶ್ವಪ್ರಪಂಚವೇ ತನ್ನ ಮಹಾಮನೆಯಾಗಿರುವ ಮಾನವ – ಮಹಾದೇವನೇ ಸರ್ವೋತ್ತಮ’ ಎಂಬುದು ಈ ಕಾವ್ಯದ ಪ್ರತಿಜ್ಞೆಗಳಲ್ಲಿ ಒಂದು. ಕವಿಯೇ ಹೇಳುವಂತೆ – “ಸಕೃದರ್ಶನಕ್ಕೆ ಭವ್ಯಮಾನವ ಕಾವ್ಯದ ಕಥಾನಾಯಿಕೆ ಮಹಾದೇವಿಯಕ್ಕನೆಂದು ತೋರಬಹುದು. ಆದರೆ ಕಾವ್ಯದೊಳಗೆ ಪ್ರವೇಶಮಾಡಿ ಅಪೂರ್ಣವಾಗಿ ಓದಿದರೆ ಮಾನವನೆ ಕಾವ್ಯದ ಮಹಾನಾಯಕನೆಂಬ ಮಾತು ತಾನೆ ಮನವರಿಕೆಯಾಗುತ್ತದೆ.”

[1])

ಸಮರ್ಪಣೆಯಿಲ್ಲದೆ ಸರ್ವಶ್ರೇಷ್ಠವಾದುದೊಂದು ಸಂಭವಿಸಲು ಸಾಧ್ಯವಿಲ್ಲ. ‘ವೀರ ನಾರಾಯಣನೆ ಕವಿ ಲಿಪಿಕಾರ ಕುಮಾರ ವ್ಯಾಸ’ ಎಂಬ ನಾರಾಯಣಪ್ಪನ ಮಾತನಿಲ್ಲಿ ಗಮನಿಸಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಉದಾಹರಣೆಗಳನ್ನು ಕೊಡಬಹುದು. ಭವ್ಯ ಮಾನವ ಕೂಡ ಅಂಥ ಸಮರ್ಪಣ ಭಾವದಿಂದ ಸಾಧ್ಯವಾಗಿರುವುದು.

ಪರಮ ಭವ್ಯವೆ ದಿವ್ಯ ಗಂಭೀರವೆ
ಪರಿಶಿವ ಪರಬ್ರಹ್ಮ ಪರಮಾತ್ಮಲಿಂಗವೆ
ನಿತ್ಯ ನಿಜ ಪರಿಪೂರ್ಣ ಕಾವ್ಯಾನಂದವೆ
ಬಾರಯ್ಯ ಬಾರೆನ್ನ ಹೃದಯಾಂತರಂಗದೊಳು
ನೆಲಸಿ ನೀ ರಚಿಸಯ್ಯ ಭವ್ಯದ ಮಹಾಕೃತಿಯ[2]

ಕಾವ್ಯಾರಂಭದ ಪೂರ್ವಪೀಠಿಕೆಯಲ್ಲಿ ಬರುವ ಈ ಸಾಲುಗಳು ಮೇಲಿನ ಅಭಿಪ್ರಾಯಕ್ಕೆ ಸಾಕ್ಷಿಯಾಗಿವೆ. ಪ್ರಾರಂಭದಲ್ಲಿಯೇ ಈ ಕೃತಿ ಸ್ವರೂಪ ಮತ್ತು ಧೇಯೋದ್ದೇಶಗಳನ್ನು ಹೀಗೆ ಸಾದರಪಡಿಸುತ್ತದೆ.

ದ್ಯಾವಾ ಪೃಥಿವಿಯರೆ
ಪರಮ ಗಂಭೀರಾಂತರಂಗದೊಳು ನಿಮ್ಮ
ಬ್ರಹ್ಮಗೋಪ್ಯವು ಹುದುಗಿ ಮಾತಿಲ್ಲ ಕಥೆಯಿಲ್ಲ
ಬೀಜ ಮಂತ್ರದ ಮಹಾಮೌನದೊಳಗಿರ್ದು
ಜಗವ ಕಾಡಿಹಿರೇಕೆ ನುಡಿಯಬಾರದೆ ಒಮ್ಮೆ
ಸತ್ಯ ಗಂಭೀರ ನಿಜ ನಿತ್ಯ ಪರಿಪೂರ್ಣವನು
ಕೆದಕಿರುವ ಈ ಮಹಾ ಸಾಹಸದ ಕೃತಿಯೊಳಗೆ
ಕೋಟಿ ಕಾಲದ ನಿಮ್ಮ ಮೌನವನು ಮುರಿದು
ಬಿಚ್ಚಿ ಮಾತಾಡಿದರೆ ಜಗಕೇಸು ಕಲ್ಯಾಣ?[3] – ಹೀಗೆ

ಪಂಚಭೂತ ಪ್ರಕೃತಿಯೊಂದಿಗೆ ಮುಖಾಮುಖಿಯಾಗುವ ಈ ಕಾವ್ಯ ಮುಂದೆ ಇದೆಲ್ಲವನ್ನು ಒಳಗೊಂಡು ಅತ್ತಾಚೆ ಮೆರೆದಿರುವ ಪರತತ್ವದೊಂದಿಗೆ ಅಥವಾ ಪರಮಾತ್ಮ ತತ್ವದೊಂದಿಗೆ ಮುಖಾಮುಖಿಯಾಗಿ ಬೆಳೆಯುತ್ತ ಹೋಗುತ್ತದೆ.

ಪೂರ್ವಪೀಠಿಕೆಯ ಕೊನೆಯಲ್ಲಿ ಕಾವ್ಯ ನಾಯಿಕೆಯಾದ ಅಕ್ಕಮಹಾದೇವಿಯನ್ನು ತಮ್ಮಲ್ಲಿ; ಆ ಮೂಲಕ ಕಾವ್ಯದಲ್ಲಿ ಅವತರಿಸಲು ಕವಿ ಈ ರೀತಿಯಾಗಿ ಆಹ್ವಾನಿಸುತ್ತಾರೆ.

ಎಲೆ ಮಹಾಭವ್ಯದೆ
ಎಲೆ ವಿಶ್ವಲೋಕದ ಮಹಾ ಭವಿಷ್ಯಂತಿಯೆ
ಎದ್ದೇಳು ಎದ್ದೇಳು ಎಲೆ ಮಹಾದೇವಿ
ಮಲಗಿರುವ ಹೃದಯ ಗಂಭೀರವನು ಎಚ್ಚರಿಸಿ
ಎನ್ನೊಳಗೆ ನೀ ತುಂಬಿ ನಿನ್ನೊಳಗೆ ನಾ ತುಂಬಿ
ಬೆಳಗಿ ನೀನೆನ್ನೊಳಗೆ ಬೆಳಗು ಬೆಳಗಾಗಿ
ಸಮಹೃದಯ ಸೀಮೆಯೊಳು ನಿನ್ನೊಡನೆ ನಾನಿರ್ದು
ಹಾಡಿಸಲೆ ತಾಯೆ ನಿನ್ನನೆನ್ನೊಳಗೆ
ನುಡಿಸ ತಾಯೆ ನನ್ನ ಜೀವಂತ ವೀಣೆಯನು
ಮಿಡಿದಂತೆ ನುಡಿಯದಿರೆ ಕಾವ್ಯತಂತಿ
ಮುರಿದು ಬೀಳಲಿ ವೀಣೆ ಹರಿದು ಹೋಗಲಿ ತಂತಿ[4]

ಎಂಥ ಅಚಲವಾದ ನಿಷ್ಠೆಯೊಂದಿಗೆ ಭೂಸನೂರಮಠ ಅವರು ಈ ಕಾವ್ಯದ ಬರವಣಿಗೆಗೆ ತೊಡಗಿದರು ಎಂಬುದನ್ನು ಮೇಲಿನ ಪಂಕ್ತಿಗಳು ನಿರೂಪಿಸುತ್ತವೆ. ನಿಜ ಜೀವನದಲ್ಲೂ ಇದೇ ನಿಷ್ಠುರತೆ ನೇರ ನಡೆ – ನುಡಿಯನ್ನು ಅವರು ಪಾಲಿಸಿಕೊಂಡು ಬಂದಿದ್ದರು.

ಕಲ್ಯಾಣಕಾಂಡ, ಶ್ರೀಶೈಲಕಾಂಡ, ಕತ್ತಲೆಯಕಾಂಡ, ಉದಯಕಾಂಡ, ಉಜ್ವಲಕಾಂಡ, ಹಾಗೂ ಭವ್ಯಕಾಂಡಗಳೆಂಬ ಆರು ಕಾಂಡಗಳಲ್ಲಿ ಈ ಕಾವ್ಯ ಹಬ್ಬಿಕೊಂಡಿದೆ. ಅಕ್ಕಮಹಾದೇವಿ, ಗುರುಚೆನ್ನಮಲ್ಲಯ್ಯ ಗಿರಿಮಲ್ಲ – ಇವು ಈ ಕಾವ್ಯದ ಪ್ರಧಾನ ಪಾತ್ರಗಳು. ಅಕ್ಕನನ್ನುಳಿದರೆ ಮಿಕ್ಕೆರಡು ಕಾಲ್ಪನಿಕ ಪಾತ್ರಗಳು. ಅಕ್ಕಮಹಾದೇವಿಯ ಪಾತ್ರ ಕೂಡ ಕಾವ್ಯದುದ್ದಕ್ಕೂ ಚಾರಿತ್ರಿಕ ಪಾತ್ರವಾಗಿ ಬರುವುದಿಲ್ಲ. ಮೊದಲನೆಯದಾದ ಕಲ್ಯಾಣಕಾಂಡದಲ್ಲಿ ಮಾತ್ರ ಅಕ್ಕಮಹಾದೇವಿಯ ನೇರ ಚಾರಿತ್ರಿಕ ವಿಷಯ ಬರುತ್ತದೆ. ಇಲ್ಲಿಯೂ ಗಮನಾರ್ಹವಾದ ಸಂಗತಿಯೆಂದರೆ – ಆಕೆಯ ಜನನಕ್ಕೆ ಸಂಬಂಧಿಸಿದ ಅವತಾರದ ಕಲ್ಪನೆಯನ್ನು, ವಿವಾದಾತ್ಮಕವಾಗಿರುವ ವಿವಾಹದ ವಿಷಯವನ್ನು ಭೂಸನೂರಮಠ ಅವರು ಮತ್ತೂ ಜಟಿಲಗೊಳಿಸಿದೆ; ಮನುಷ್ಯ ಸಹಜವಾದ ನೆಲೆಯಲ್ಲಿ ಈ ಪ್ರಸಂಗಗಳನ್ನು ಅತ್ಯಂತ ಸೂಕ್ತವಾದ ರೀತಿಯಲ್ಲಿ ಬಿಡಿಸಿ ಕೊಂಡಿದ್ದಾರೆ.

* ಗೆಳತಿ ಚೆಂಪೆಯೊಂದಿಗಿನ ಗಂಡ ಹೆಂಡತಿಯರಾಟದಲ್ಲಿ ಬಾಲಕಿ ಮಹಾದೇವಿಯು ಚೆನ್ನಮಲ್ಲಿಕಾರ್ಜುನನ ಮಡದಿಯಾಗುತ್ತಾಳೆ. ಬಾಲ್ಯದ ಈ ಆಟ ಆಕೆಗೆ ಸ್ವಭಾವಗತವಾಗಿ, ಹೃದಯಗತವಾಗಿ ಮುಂದೆ ಆಕೆಯು ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆನ್ನಮಲ್ಲಿ ಕಾರ್ಜುನನ ಹುಚ್ಚಿಗೆ ಒಳಗಾಗುತ್ತಾಳೆ ಎನ್ನುವ ರೀತಿ,

* ಬಾಲ್ಯದಲ್ಲಿಯೇ ಗುರುಚೆನ್ನಮಲ್ಲಯ್ಯನು ಆಕೆಯಲ್ಲಿ ಅನುಭಾವದ ದೀಪ್ತಿಯನ್ನು ಉದ್ದೀಪನಗೊಳಿಸಿದ್ದ ಎನ್ನುವ ರೀತಿ,

* ಕೌಶಿಕನೊಂದಿಗಿನ ಆಕೆಯ ಮದುವೆಯ ವಿಷಯವಾಗಿಯೂ ಬೇಕಾದಷ್ಟು ವಿವಾದಗಳಿವೆ. ಇಲ್ಲಿ ಅಕ್ಕಮಹಾದೇವಯು ತನ್ನ ದೃಢವಾದ ಆತ್ಮತೇಜಸ್ಸಿನಿಂದ ಕೌಶಿಕನನ್ನು ಎದುರಿಸಿ; ಆತನಲ್ಲಿರುವ ವಿಷಯಾಂಧ ದೃಷ್ಟಿಯನ್ನು ಅವನಿಗೆ ಮನವರಿಕೆ ಮಾಡಿ ಕೊಡುತ್ತಾಳೆ.

ನಾಡವರ ದೊರೆ ನೀನು ಅವರ ತಾಯ್ ತಂದೆ
ನಾಡವರ ಕಣ್ಣುಸಿರು ನಾಡವರ ಸೌಭಾಗ್ಯ
ನಾಡಿಗೊದಗುವ ಕಷ್ಟವಾಪದ್ವಿಪತ್ತುಗಳ
ಆಕ್ರಮಣವ ನ್ಯಾಯ ಪರಹಿಂಸೆ ಪೀಡೆಗಳ
ಪರಿಹರಿಸಿ ರಕ್ಷಿಸುವ ವೀರ ಕ್ಷತ್ರಿಯ ನೀನು[5] – ಎಂದು

ಅವನ ಜವಾಬ್ದಾರಿಯನ್ನು ನೆನಪಿಸುವುದರ ಮೂಲಕ;

ಭಂಡಾರವಿರಬಹುದು ಬೊಕ್ಕಸವು ಇರಬಹುದು
ಎದೆಯೊಳಗೆ ವಾತ್ಸಲ್ಯ ಸತ್‌ಪ್ರೇಮ ನೀತಿಗಳ
ಭಂಡಾರ ಬಂದಿರಲು ಅರಸನವನೆಂಥ (೨. ಅದೇ, ಪು – ೬೦) – ಎಂದು

ಅವನ ನೈತಿಕತೆಯನ್ನು ವ್ಯಂಗ್ಯ ಮಾಡುವುದರ ಮೂಲಕ;

ಚೆನ್ನನಪ್ಪಿರುವೆನ್ನ ತನುವೆನ್ನ ತುಂಬಿಹುದು
ಚೆನ್ನನಾಲಿಂಗಿಸಿದ ಮನವೆಲ್ಲ ತುಳುಕಿಹುದು
ಚೆನ್ನಕೂಟದಿ ಭಾವ ನಿರ್ವಾಣವಾಗಿಹುದು (೩. ಎಸ್.ಎಸ್. ಭೂಸನೂರಮಠ, ಭವ್ಯಮಾನವ, ಪು – ೬೦) – ಎಂದು

ತಾನು ಚೆನ್ನನೆಂಜಲು ಎಂದು ಸಾರುವುದರ ಮೂಲಕ;

ಬಿಚ್ಚಿ ವಿವರಿಸಿ ನೋಡು ಹುರುಳಿಲ್ಲವೀ ದೇಹ
ಹೊಂದೊವಲ ಮರೆಗೆಲುವು ಹಾಕಿರ್ದ ಹಂದರ
ಸುಡುಗಾಡಿನೊಳು ನೀನು ಸುಳಿದಿಲ್ಲವೇನರಸ?
ಹಂದರವ ಬಿಗಿದಿಹುದು ನರ ಜಾಲ ಜಾಲ
ಹರಿವ ರಕ್ತದ ಮಡು ಮಲ ಮೂತ್ರ ಭಾಂಡ
………….. ………… ……………..
ಕಂದೆರೆದು ನೋಡರಸ ಕಾಯ ಹುರುಳಿಲ್ಲ
ಕಂದೆರೆದು ನೋಡರಸ ನಿನ್ನ ಕಾಮವನು
ಸುಖ ಸುಖವನೆರೆದಂತೆ ಹಸಿವೆದ್ದು ಥೈ ಎಂಬ (೧. ಅದೇ, ಪು – ೬೫)

– ಎಂದು ಜಿಗುಪ್ಸೆ ಹುಟ್ಟಿಸುವ ರೀತಿಯಲ್ಲಿ ದೇಹದ ಮತ್ತು ತೀರದ ದಾಹವಾದ ಕಾಮದ ಕುರಿತು ಅರಿವು ಮೂಡಿಸುವ ಮೂಲಕ – ಹೀಗೆ ನಾನಾ ರೀತಿಯಿಂದ ಅಕ್ಕ ಕೌಶಿಕನ ಮನಸ್ಸನ್ನು ಶಿಥಿಲಗೊಳಿಸಿ; ಅವನ ಕಾಮವನ್ನು ತಿದ್ದಿ; ಅವನಿಗೆ ಬುದ್ಧಿ ಹೇಳಿ ಅವನಿಂದ ಮನಃಪೂರ್ವಕವಾಗಿ ಬೀಳ್ಕೊಂಡು ನಡೆಯುತ್ತಾಳೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಅಕ್ಕಮಹಾದೇವಿ ಸಾಂಪ್ರದಾಯಿಕ ಅಕ್ಕಮಹಾದೇವಿಗಿಂತ ವಿನೂತನವಾಗಿ ಮತ್ತು ಔಚಿತ್ಯಪೂರ್ಣವಾಗಿ ಚಿತ್ರಿತವಾಗಿರುವುದು ಗಮನಾರ್ಹ.

ಇಷ್ಟಾದ ನಂತರ ಮಹಾದೇವಿಯು ಕಲ್ಯಾಣಕ್ಕೆ ಬಂದು ಶರಣರ ಮನವೊಲಿಸಿ; ಕೆಲಕಾಲ ಅನುಭವ ಮಂಟಪದಲ್ಲಿದ್ದು, ಮುಂದೆ ತನ್ನ ಮನದೊಡೆಯ ಮಲ್ಲಿಕಾರ್ಜುನನಲ್ಲಿ ಬೆರೆತು ಬಯಲಾಗುಲು ಶ್ರೀಶೈಲಕ್ಕೆ ನಡೆಯುತ್ತಾಳೆ. ಅಲ್ಲಿ ಕದಳಿಯಲ್ಲಿ ಆಕೆ ಐಕ್ಯವಾದಳು ಎಂಬಲ್ಲಿಗೆ ಮಹಾದೇವಿಯಕ್ಕನ ಚರಿತ್ರೆಯನ್ನು ನಿರೂಪಿಸುವ ಪ್ರಾಚೀನ ಗ್ರಂಥಗಳಲ್ಲಿ ಆಕೆಯ ಜೀವನ ಚರಿತ್ರೆ ಮುಕ್ತಾಯವಾಗುತ್ತದೆ. ಆದರೆ ಈ ಕಾವ್ಯದಲ್ಲಿ ಅಕ್ಕನ ಚರಿತ್ರೆ ಅಲ್ಲಿಗೆ ಮುಗಿಯದೆ; ಹೊಸದೊಂದು ತಿರುವು ಪಡೆದುಕೊಂಡು ಅಲ್ಲಿಂದ ಕತ್ತಲೆ, ಉದಯ, ಉಜ್ವಲ ಮತ್ತು ಭವ್ಯಕಾಂಡಗಳಲ್ಲಿ ಮುಂದುವರಿಯುತ್ತದೆ. ಐತಿಹಾಸಿಕ ದೃಷ್ಟಿಯಿಂದ ಇಂಥ ಬದಲಾವಣೆಯನ್ನು ಪ್ರಶ್ನಿಸಬಹುದಾದರೂ; ತಮ್ಮ ದರ್ಶನ ಕ್ಕನುಸಾರವಾಗಿ ಬದಲಾವಣೆ ಅಥವಾ ಹೊಸ ಸೃಷ್ಟಿ ಮಾಡಿಕೊಳ್ಳುವ ವಿಶೇಷವಾದ ಸ್ವಾತಂತ್ರ‍್ಯ ಕವಿಗೆ ಇರುವುದರಿಂದ ಭೂಸನೂರಮಠರ ಈ ಬದಲಾವಣೆಯನ್ನು ಹಾಗೆ ಪ್ರಶ್ನಿಸುವಂತಿಲ್ಲ. ಮತ್ತು ಅವರಿಗೆ ಈ ಪ್ರಶ್ನೆ ಅನಿರೀಕ್ಷಿತವೂ ಅಲ್ಲ, ಕಾವ್ಯಾರಂಭದ ಪೂರ್ವಪೀಠಿಕೆಯಲ್ಲಿ ಇದಕ್ಕೆ ಅವರ ಪ್ರತಿಕ್ರಿಯೆ ಇದೆ –

ಯಾರೇನನೆಲ್ಲಲಿ
ಚರತೇತಿಹಾಸ ಜೀವನ ಪುರಾಣ
ಏನನೆನ್ನಲಿ ಮತ್ತೆ ಯಾರೇನನೆನ್ನಲಿ
ಕಾವ್ಯಾನುಭಾವ ದರ್ಶನ ಕಂಡ ಮಾಳ್ಕೆ
ನಡೆಯಲಿ ಮಹಾಭವ್ಯದಿಚ್ಛೆ ಕಾವ್ಯ
ಹಂಗೇಕೆ ಹರಿಯೇಕೆ ಕಟ್ಟು ನಿಟ್ಟೇಕೆ
ವ್ಯಾಕರಣ ಛಂದಸ್ಸಲಂಕಾರ ಕವಿಸಮಯ
ಗಣ ಮಾತ್ರೆ ಪ್ರಾಸ ನಿಯತಿಯ ಭಂಗ ಭಯವೇಕೆ
ನೇಮ ನಿತ್ಯವ ಮೀರಿ ಕಾವ್ಯ ಹರಿಯಲಿ ತನ್ನ
ಸೀಮೆ ಸಂಬಂಧವನು ದಾಂಟಿ ದಿವ್ಯಕ್ಕೆ[6]

– ಅಕ್ಕಮಹಾದೇವಿಯ ಜೀವನೇತಿಹಾಸದಲ್ಲಿ ಮಾತ್ರವಲ್ಲದೆ ವ್ಯಾಕರಣ ಛಂದಸ್ಸು ಅಲಂಕಾರ ಕವಿಸಮಯ ಮುಂತಾದ ಸಂಗತಿಗಳಲ್ಲಿಯೂ ತಮ್ಮದು ಸ್ವತಂತ್ರಮಾರ್ಗ ಎಂದು ಅವರು ಸ್ವಯಂ ಘೋಷಿಸಿಕೊಂಡಿರುವರು. ಜೊತೆಗೆಯೇ ಅವರು ‘ತಪ್ಪೆನ್ನದು ಕ್ಷಮೆ ನಿಮ್ಮದಯ್ಯ’ ಎಂಬ ವಿನಯಶೀಲತೆಯನ್ನೂ ವ್ಯಕ್ತಪಡಿಸಿರುವುದು ಇಲ್ಲಿ ಗಮನಾರ್ಹ.

ಮುಂದಿನದು ಶ್ರೀಶೈಲ ಕಾಂಡ. ಅಕ್ಕ ಕದಳಿಯ ಕಡೆಗೆ ನಡೆಯುವಾಗ ಅತ್ಯಂತ ಅನಿರೀಕ್ಷತವಾಗಿ ಆಕೆಗೆ ಆಕೆಯ ದೀಕ್ಷಾಗುರು ಗುರುಚೆನ್ನಮಲ್ಲಯ್ಯ ಮತ್ತು ಆತನ ಶಿಷ್ಯ ಗಿರಿಮಲ್ಲ ಇವರ ಭೇಟಿಯಾಗುತ್ತದೆ. ಕೈಹಿಡಿದ ಮಡದಿ ಗಂಗಮ್ಮ ಮತ್ತು ಮಗು ಬಾಲಸಂಗಯ್ಯ ಇವರ ಮರಣಾಘಾತದಲ್ಲಿ ನರಳುವ ಗುರುಚೆನ್ನಮಲ್ಲಯ್ಯನ ಕರುಣಾಜನಕ ಸ್ಥಿತಿಯನ್ನು ಕಂಡು ಆಕೆಗೆ ದುಃಖ – ದಿಗ್‌ಭ್ರಮೆ ಒಮ್ಮಿಗೆ ಮೂಡುತ್ತವೆ. ಸಜ್ಜನ – ಶರಣರಿಗೂ ಇಂಥ ಆಘಾತಗಳು ಒದಗಿ ಬರುವುದು ಎಂತು? ಹೇಗೆ? ಎಂದು ಈ ಜಗದ ಲೀಲೆಯ ಅರ್ಥವನ್ನೇ ಅಕ್ಕ ಸಂದೇಹದಿಂದ ನೋಡುತ್ತಾಳೆ. ಅಲ್ಲಿಂದ ಗುರುಚೆನ್ನ, ಗಿರಿಮಲ್ಲ ಮತ್ತು ಅಕ್ಕ ‘ಮೂವರು ಮೃತ್ಯುದೇವತೆಗೆ ಉತ್ತರದ ಕೊಡಬಲ್ಲ ಕಲಿ ಯಾರು?’ ಎಂದು ಜೀವಕುಲಕೋಟಿಯನ್ನು ಬೆನ್ನಟ್ಟಿ ಕಾಡುತ್ತಿರುವ ಮರಣ ಮತ್ತು ಅದರ ಜೊತೆಗೆ ಮನುಷ್ಯ ನಿರಂತರವಾಗಿ ನಡೆಸಿರುವ ಸಂಘರ್ಷದ ತಾತ್ತ್ವಿಕ ಜಿಜ್ಞಾಸೆಗೆ ತೊಡಗುತ್ತಾರೆ. ಕೊನೆಗೆ ಗುರುಚೆನ್ನಮಲ್ಲಯ್ಯನು –

‘ಏಕೆ ಬಂದಿಹೆ ಮಗಳೆ ಏನು ಮಣಿಹ
ಎಲೆ ತಾಯೆ ಚೆನ್ನನ ಮಹಾಭಾಗ್ಯಸೌಭಾಗ್ಯ
ಸತಿಪತಿಯ ಸಮರಸಾನಂದಕ್ಕೆ ಓಲಾಡಿ
ಒಬ್ಬಳೇ ನಿಬ್ಬೆರಗಿನೊಳು ನಿಂದು ಮಲಗಿದರೆ
ನಿನ್ನ ರೂಪವ ಹಡೆದು ನಿನಗೆ ಹೆಸರಿಟ್ಟು
ನಿನ್ನ ಭಕ್ತಿಗೆ ತನ್ನ ಚೈತನ್ಯವನು ಕೊಟ್ಟು
ಸಾಕಿ ಸಲಹಿದ ಹೊತ್ತು ಹೊರೆದ
ಭುವನ ಮಾತೆಯ ಲೋಕಸಂತತಿಯ ಗತಿಯೇನು?’[7]

– ಎಂದು ಅಕ್ಕನನ್ನು ವ್ಯಕ್ತಿಕಲ್ಯಾಣದ ಶಿವಯೋಗ ಸಮಾಧಿಯಿಂದ ಲೋಕಕಲ್ಯಾಣದ ಮಹಾಯೋಗದ ಕಡೆಗೆ ಕರೆತರುತ್ತಾನೆ. ತಾನು ಕಂಡ ಬೆಳಗು, ಪಡೆದ ಜ್ಞಾನ, ಅನುಭವಿಸಿದ ಶಿವಯೋಗದ ಸುಖವನ್ನು ಲೋಕದ ಕತ್ತಲೆ, ಅಜ್ಞಾನ, ದುಃಖಗಳ ಕಡೆಗೆ ತಿರುಗಿಸಿದಾಗಲೇ ಅಕ್ಕನ ಸಾಧನೆಗೆ ಸಾರ್ಥಕತೆ ಬರುತ್ತದೆ ಎಂಬ ವಿಷಯವನ್ನು ಆಕೆಗೆ ಗುರುಚೆನ್ನಮಲ್ಲ ಮನವರಿಕೆ ಮಾಡಿಕೊಡುತ್ತಾನೆ. ಇದರ ಪರಿಣಾಮವಾಗಿ ಆಕೆಯು ಕದಳಿಯ ಐಕ್ಯ ಸುಖವನ್ನು ತೊರೆದು ಪುನಃ ಲೋಕದ ಕಡೆಗೆ ಹಿಂದಿರುಗಿ ಬರುತ್ತಾಳೆ – ಅದರ ಉದ್ಧಾರಕ್ಕಾಗಿ.

ಗುರುಚೆನ್ನಮಲ್ಲಯ್ಯನು ಅಕ್ಕಮಹಾದೇವಿ ಮತ್ತು ಗಿರಿಮಲ್ಲರನ್ನು ಲೋಕದರ್ಶನ ಮಾಡಿಸಲು ಕರೆತರುವನು. ಆಗ ಕಾಣುವದೇನು? ಎಲ್ಲೆಲ್ಲೂ ತಾಂಡವವಾಡುತ್ತಿರುವ ದುಃಖ – ದಾರಿದ್ರ‍್ಯ, ಅಜ್ಞಾನ – ದುರಹಂಕಾರ, ಅಳಿಯಾಸೆ, ಸ್ವಾರ್ಥ, ವಿನಾಶಬುದ್ಧಿಗಳೆಂಬ ಬ್ರಹ್ಮ ಗತ್ತಲೆ. ಆದುದರಿಂದಲೇ ಕವಿ ಇದನ್ನು ಕತ್ತಲೆಯ ಕಾಂಡವೆಂದು ಕರೆದಿರುವರು. ಭೂತ – ವರ್ತಮಾನಗಳ ಮಾನವನು ಸಹಸ್ರಾರು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ನರಳುತ್ತಿರುವ ಹೃದಯ ಸ್ಪರ್ಶಿ ನಿರೂಪಣೆಗಳಿಂದ ಕೂಡಿದ ಈ ಭಾಗ ಕಾವ್ಯಕ್ಕೆ ಹೆಚ್ಚು ಪ್ರಸ್ತುತತೆಯನ್ನು ಒದಗಿಸಿದೆ.

ಪಂಚಮಹಾಭೂತಗಳು, ಭೂಮಿಯ ಮೇಲಿನ ಮಾನವಲೋಕ ಮತ್ತು ಇವೆಲ್ಲವುಗಳನ್ನು ಒಳಗೊಂಡ ಬ್ರಹ್ಮಬಯಲು – ಇವುಗಳು ಸ್ವಯದ ಅರಿವನ್ನೂ, ಪರಸ್ಪರ ಅರಿವನ್ನೂ ಪಡೆಯಲಾರದೆ ಕತ್ತಲೆಯಲ್ಲಿ ತೊಳಲುವ ಭೂಮಚಿತ್ರಗಳು ಇಲ್ಲಿ ಬರುತ್ತವೆ. ಹೊನ್ನು – ಹೆಣ್ಣು – ಮಣ್ಣುಗಳ, ಕೀರ್ತಿ – ವಾರ್ತೆ – ಪ್ರತಿಷ್ಠೆಗಳ ತೀರದ ಬಯಕೆಯಿಂದ ಮಾನವನು ಮಾಡಬಾರದ ಅನ್ಯಾಯ – ಅತ್ಯಾಚಾರಗಳನ್ನು ಮಾಡುತ್ತ ಕಾಲನ ಬಾಯಿಗೆ ತುತ್ತಾಗಿ ಹೋಗುತ್ತಿರುವ ಎದೆ ಬಿರಿಯುವ ಚಿತ್ರಗಳು ಇಲ್ಲಿವೆ.

* ದೊಡ್ಡಮನೆ ವೀರಣ್ಣನ ಮಗ ಚೆನ್ನರಾಯನ ಅನಿಯಂತ್ರಿತ ಕಾಮದ ಎದೆಯೊಡೆಯುವ ಕಥೆ.

* ಏನೂ ಅರಿಯದ ಹಸುಗಳು ಹುಲ್ಲಿನಾಸೆಗೆ ಗಡಿಯನ್ನು ಮೀರಲು ಹಿರಿಯೂರು
ಗಾವುಂಡ ಚಿಕ್ಕೂರ ಸೆಟ್ಟಿ ಇವರ ನಡುವೆ ನಡೆದ ಹೊಡೆದಾಟದ ಕಥೆ.

* ಸಾತ್ವಿಕ ಮೂರ್ತಿ ಮುದ್ದಣ್ಣನ ಹೊಟ್ಟೆಯಲ್ಲಿ ರಾಕ್ಷಸ ಪ್ರವೃತ್ತಿಯ ಮಾರ ಹುಟ್ಟಿ
ಜನರಿಗೆ ಭಯಾನಕನಾಗಿ ವರ್ತಿಸುವುದು. ಮಾರ ಮತ್ತು ಕೆಂಚ ಅಣ್ಣ
ತಮ್ಮಿಂದಿರಲ್ಲೇ ನಡೆಯುವ ಕಾಳಗದ ಕಥೆ.

* ಸೌಂದರ್ಯ ಚಂದ್ರಿಕೆ ಎಂಬ ಕನ್ಯೆಗಾಗಿ ಕಾಮದೇವನು ಸೊಯಿದೇವನೊಡನೆ ನಡೆಸುವ ಭೀಕರ ಯುದ್ಧ ಎರಡೂ ರಾಜ್ಯಗಳ ಅಪಾರ ಸೈನಿಕರ, ಆನೆ ಕುದುರೆಗಳ ಪ್ರಾಣ ಹಾನಿಯೊಂದಿಗೆ ರಕ್ತದ ಕಾಲುವೆಯು ಹರಿದ ಘನ ಘೋರ ಹೋರಾಟ ಇಂಥ ಹತ್ತಾರು ಕಥೆಗಳ ಮೂಲಕ ಮನುಕುಲವು ಮೃತ್ಯುಮುಖವಾಗಿ ಅಥಃಪತನಗೊಳ್ಳುತ್ತಿರುವುದನ್ನು ಅತ್ಯಂತ ಅರ್ಥಪೂರ್ಣವಾಗಿ ನಿರೂಪಿಸಲಾಗಿದೆ.

ಒಟ್ಟಾರೆಯಾಗಿ ಇಡೀ ವಾತಾವರಣವನ್ನೇ ವಾಸಯೋಗ್ಯವಲ್ಲದ ರೀತಿಯಲ್ಲಿ ಹದಗೆಡಿಸುತ್ತಿರುವ ಮಾನವನ ಆತಂಕಕಾರಿ ಪ್ರವೃತ್ತಿಯನ್ನು ಕಂಡ ಅಕ್ಕ –

ಇರಬಾರದಿಲ್ಲಿ ಸತ್ಯ ಸಜ್ಜನರು
ನೋಡಬಾರದು ಕಣ್ಣು ಕೇಳಬಾರದು ಕಿವಿ
ಇರಬಾರದಿಲ್ಲಿ ಈ ಭೂಲೋಕದಲ್ಲಿ
ಇರಬಾರದಿಲ್ಲಿ ಈ ಯಮಲೋಕದಲ್ಲಿ (೧. ಭವ್ಯಮಾನವ, ಪು – ೪೨೪)

– ಎಂದು ನಿರಾಸೆಯ ನಿಲವಿಗೆ ಬರುತ್ತಾಳೆ. ಆದರೆ ಗುರುಚೆನ್ನಮಲ್ಲಯ್ಯನಲ್ಲಿ ಈ ನಿರಾಸೆಯ ಭಾವಕ್ಕೆ ಎಡೆಯಿಲ್ಲ. ಅವನು ಸಂಪೂರ್ಣ ಆಶಾವಾದಿ.

ನೆಲದೊಳಗೆ ದೇವಕುಲ ಹುಟ್ಟಿ ಬರಲಿದೆ ತಾಯಿ
ಭಯವಿಲ್ಲ ಭಯವಿಲ್ಲ ತಾಯೆ ಗಿರಿಮಲ್ಲ
ಬಸವಣ್ಣ ಬಂದಿಹನು ಕತ್ತಲೆಯನೆತ್ತಿ ಬೆಳಗಿನ
ನಾಡಿಗೊಯ್ಯಲಿಕೆ…..

– ಎಂಬ ಅವನ ಮಾತುಗಳು ಶರಣ ಸಂದೇಶದ ಹಿನ್ನೆಲೆಯಲ್ಲಿ ತುಂಬ ಗಮನಾರ್ಹವಾಗಿ ಕಾಣುತ್ತವೆ.

ಮುಂದಿನದು ಉದಯ ಕಾಂಡ. ಉದಯ ಕಾಂಡವು ಹೆಸರಿಗೆ ತಕ್ಕಂತೆ ಮಾನವ ಕುಲದ ಉದ್ಧಾರದ ಆಶಯವನ್ನು ಚಿತ್ರಿಸುತ್ತದೆ. ಗುರುಶಿಷ್ಯರು ಕತ್ತಲೆಯ ಪ್ರಪಂಚವನ್ನು ದಾಟಿ ಇದೀಗ ಬೆಳಕಿನ ಸಾಮ್ರಾಜ್ಯದ ಆರಂಭದ ಅಂಚಿಗೆ ಆಗಮಿಸಿದ್ದಾರೆ.

ಸೃಷ್ಟಿಯಲ್ಲಿ ಕಾಣುವ ವೈವಿಧ್ಯತೆ ತಾರತಮ್ಯಗಳು ತೋರಿಕೆಯವೆ ಹೊರತು ನಿಜವಾದವುಗಳಲ್ಲ. ನಮಗೆ ತೋರುವ ಈ ಅನಂತವಿಧವಾದ ಪ್ರಪಂಚವೆಲ್ಲ ಒಂದೆ. ಒಂದೇ ಅಖಂಡ ಚೈತನ್ಯದ ಅಸಂಖ್ಯ ರೂಪವಾಗಿದೆ. ಒಂದು ತಾನಾಗಿರುವ “ಒಂದೇ ಪರವಸ್ತು….” ಎಂಬ ದರ್ಶನ ಇಲ್ಲಿ ವಿರಾಟ್‌ಸ್ವರೂಪದಲ್ಲಿ ನಿರೂಪಿತವಾಗಿವೆ. ಈ ಎಲ್ಲ ತಾನೊಂದಾಗಿರುವ ಪರಮ ತತ್ವದ ಅನುಭವವು ಮಾನವನಿಗೆ ನಿಲುಕಿದರೆ ಪ್ರಪಂಚದಲ್ಲಿ ಈಗ ನಡೆದಿರುವ ಹಿಂಸೆ ಅನ್ಯಾಯ ಸ್ವಾರ್ಥ – ವಂಚನೆಗಳೆಲ್ಲ ಮಾಯವಾಗಿಬಿಡುವವು. ದ್ವೈತಭಾವ ಭಿನ್ನಬುದ್ಧಿಯಿಂದಾಗಿಯೇ ಈ ಪ್ರಪಂಚವು ದುಃಖದಲ್ಲಿ ಮುಳುಗಿದೆ ಎಂಬುದಾಗಿ ಗುರುಚೆನ್ನಮಲ್ಲಯ್ಯ ತಿಳಿಸುತ್ತಾನೆ. ಜೊತೆಗೆ ಆ ಅಖಂಡ ಪರವಸ್ತುವೇ ತನ್ನ ಸಂಕಲ್ಪದಿಂದಾಗಿ ಅನಂತರೂಪ ಧರಿಸಿ ನಿಂತ ಸೃಷ್ಟಿಯ ವಿಕಾಸವನ್ನೆ ಆತ ಇಲ್ಲಿ ಬಿಚ್ಚಿಟ್ಟಿರುವನು. ಈ ವಿಕಸನದ ಪರಮೋಚ್ಛ ಹಂತವಾದ ಮಾನವ ತನ್ನ ಮೂಲದ ಸಚ್ಚಿದಾನಂದ ಸ್ವರೂಪವನ್ನು ಮರೆತು; ಹೆಣ್ಣು ಗಂಡಾಗಿ; ಕುಲ ಜಾತಿಯಾಗಿ; ದೇಶ ಭಾಷೆಯಾಗಿ ಒಡೆದು ಛಿದ್ರಗೊಂಡಿದ್ದಾನೆ. ಇಲ್ಲಿ ಮನುಕುಲದ ದುಃಖದ ಮೂಲಕಾರಣಗಳನ್ನು ಅತ್ಯಂತ ಸೂಕ್ಷ್ಮವಾಗಿ ವಿವರಿಸಲಾಗಿದೆ. ದುಃಖದ ಕಾರಣ ಹೊರಗೆ ಇಲ್ಲ; ಅದು ಮಾನವನಲ್ಲಿರುವ ‘ನಾನು’ (ಪ್ರತ್ಯೇಕ ಭಾವ) ದಲ್ಲಿದೆ. ತಾನೊಬ್ಬ ಬೇರೆ ಉಳಿದ ಜಗತ್ತೆಲ್ಲ ಬೇರೆ ಎಂಬ ಸಂಕುಚಿತ ತಿಳಿವಳಿಕೆಯೇ ಈ ಎಲ್ಲ ಅನರ್ಥಕ್ಕೆ ಮೂಲ ಕಾರಣವೆಂಬುದನ್ನು ತಿಳಿದುಕೊಂಡು ಮಾನವ ಮಹಾ ದೇವನಾಗಬೇಕು. ಮರ್ತ್ಯಲೋಕವೇ ಸತ್ಯ – ನಿತ್ಯ ಲೋಕವಾಗಬೇಕು ಎಂಬುದನ್ನು ಈ ಕಾವ್ಯ ಸಾರಿ ಹೇಳುತ್ತದೆ. ಇದಕ್ಕಾಗಿ ಬುದ್ಧ, ಏಸು, ಪೈಗಂಬರ, ತೀರ್ಥಂಕರ, ಶಿವಶರಣರು ನುಡಿದು, ನಡೆದು ತೋರಿಸಿದ ಕಲ್ಯಾಣದ ಹಾದಿಯು ಮಾದರಿ ಎಂದು ಮನಗಾಣಿಸುತ್ತ ಉದಯಕಾಂಡ ಮುಗಿಯುತ್ತದೆ.

ಹನ್ನೆರಡನೆಯ ಶತಮಾನದ ಶಿವಶರಣರು ಮತ್ತು ವಿಶ್ವದ ಇತರ ದೃಷ್ಟಾರರು ಸಾರಿ ಹೇಳಿದ ಅಹಿಂಸೆ, ಕಾಯಕ, ದಾಸೋಹ, ಭಕ್ತಿ – ಪ್ರೇಮ, ಶಿವಯೋಗಗಳೆಂಬ ಸೂತ್ರಗಳನ್ನು ಅನುಸರಿಸಿ ಮಾನವ ಕುಲವು ತನ್ನ ಮರೆಯಲ್ಲಿ ಹುದುಗಿರುವ ಚೈತನ್ಯಶಕ್ತಿಯನ್ನು ಊರ್ಧ್ವ ಮುಖಗೊಳಿಸಿಕೊಂಡು ಭವ್ಯ ಮಾನವನಾಗಿ ಬಾಳಬೇಕೆಂಬ ಆಶಯವನ್ನು ಉಜ್ವಲ ಮತ್ತು ಭವ್ಯಕಾಂಡಗಳು ಸಾರುತ್ತವೆ. ಕತ್ತಲೆಯ ಕಾಂಡದಲ್ಲಿ ಎತ್ತಲಾಗಿರುವ ಪ್ರಶ್ನೆಗಳಿಗೆ ಇಲ್ಲಿ ಶರಣರ ಜೀವನದ ಕಥೆಗಳೊಂದಿಗೆ ಪರಿಹಾರವನ್ನೂ ಸೂಚಿಸಲಾಗಿದೆ. ಈ ವೇಳೆಗೆ ಅಕ್ಕಮಹಾದೇವಿಯು ತನ್ನ ಬದುಕಿನ ನೂತನ ಗುರಿಯನ್ನು ಕಂಡುಕೊಳ್ಳುತ್ತಾಳೆ –

ಬಿಡಲಾರೆನಯ್ಯ ಮರ್ತ್ಯಲೋಕವನು
ಮರ್ತ್ಯಲೋಕವು ಮಹಾಮನೆಯಾಗದನ್ನಕ್ಕ
………. ……………. ………………..
ದೇಹ ಬಿದ್ದರು ಹರಣ ಹಾರಿದರು ಮನವಾರಿ
ಹೋದರೂ ಹೋಗಲಿ ಬಿಡಲಾರೆ ಮರ್ತ್ಯವನು[8]

ಶ್ರೀಶೈಲದ ಕದಳಿಯಲ್ಲಿ ಐಕ್ಯವಾಗುವ ಅಕ್ಕನಿಗಿಂತಲೂ ಇಲ್ಲಿಯ ಅಕ್ಕನ ನಿರ್ಧಾರ ಅತ್ಯಂತ ರೋಮಾಂಚನಕಾರಿಯಾದುದಾಗಿದೆ. ಮತ್ತು ಇದು ಅತ್ಯಂತ ಪ್ರಸ್ತುತವೂ ಎನಿಸುತ್ತದೆ.

ಸರಳ ರಗಳೆಯ ಛಂದಸ್ಸಿನಲ್ಲಿ ಮೈದಳೆದ ಈ ಕಾವ್ಯದ ಭಾಷೆಯಲ್ಲಿ ಕೃತಕವಾದ ಯಾವ ಬೆಡಗು ಬಿನ್ನಾಣಗಳೂ ಇಲ್ಲ. ಇಲ್ಲಿನ ಭಾಷೆ ದೇಸೀಯ ಸೊಗಡಿನಿಂದ ಕೂಡಿದ್ದು ಅತ್ಯಂತ ಸರಳವಾಗಿದೆ. ಶೈಲಿಯೂ ಅಷ್ಟೆ ಸರಳ ಮತ್ತು ನಿರಾಡಂಬರ. ಜೀವಮಾನವಿಡೀ ವಚನ ಸಾಹಿತ್ಯವನ್ನು ಅಧ್ಯಯನ ಮಾಡುತ್ತ ಬಂದುದರ ಫಲವಾಗಿ ಇಲ್ಲಿ ಅನಾಯಾಸವಾಗಿ ವಚನಕಾರರ ಭಾಷೆ ಶೈಲಿ ಮತ್ತು ಹರಿಹರನ ರಗಳೆಯ ಶೈಲಿಗಳು ಭೂಸನೂರಮಠ ಅವರ ಬರವಣಿಗೆಯ ಮೇಲೆ ವಿಶೇಷವಾಗಿ ಪ್ರಭಾವ ಬೀರಿವೆ. ಹರಿಹರನ ರಗಳೆಗಳಲ್ಲಿ ಕಂಡುಬರುವ ಪುನರಾವರ್ತನೆಯ ಶೈಲಿ ಇಲ್ಲಿ ಹೆಚ್ಚು ಕಂಡುಬರುತ್ತದೆ. ಮೇಲುನೋಟಕ್ಕೆ ಅದು ದೋಷವೆಂಬಂತೆ ಭಾಷವಾಗುತ್ತದೆಯಾದರೂ; ವಸ್ತುವನ್ನು ಕುರಿತು ಕವಿಗಿರುವ ಭಾವ ತೀವ್ರತೆ ಮತ್ತು ಅಮೂರ್ತವನ್ನು ಬಿಡಿಸುವ ಹವಣಿಕೆಯಾಗಿ ಪುನರಾವರ್ತನೆಯ ಶೈಲಿಗೆ ಕವಿ ಮಾರುಹೋದಂತಿದೆ ಎಂಬುದೆನ್ನು ಇಲ್ಲಿ ಮರೆಯುವಂತಿಲ್ಲ.

ಶ್ರೇಷ್ಠ ವಿದ್ವಾಂಸರೂ, ಪ್ರಸಿದ್ಧ ಅನುವಾದಕರೂ ಮತ್ತು ಎಡಪಂಥೀಯ ವಿಚಾರ ಧಾರೆಯಲ್ಲಿ ವಿಶೇಷ ಆಸಕ್ತಿ ಹೊಂದಿದವರೂ ಆಗಿದ್ದ ಅಹೋಬಲ ಶಂಕರ ಅವರು ವಿಶ್ರಾಂತ ಜೀವನ ಕಳೆಯಲು ಧಾರವಾಡಕ್ಕೆ ಬಂದ ಸಂದರ್ಭ. (೧೯೮೨ – ೮೫) ಆಗ ಅವರು ಭೂಸನೂರಮಠ ಅವರ ‘ಶೂನ್ಯ ಸಂಪಾದನೆಯ ಪರಾಮರ್ಶೆ’ಯನ್ನು ಓದಿ ಬೆರಗುಗೊಂಡು ‘ಪ್ರಪಂಚದ ಸಾಹಿತ್ಯದಲ್ಲಿಯೇ ಇದೊಂದು ಅದ್ಭುತವಾದ ಕೃತಿ’ ಎಂದು ಕೃತಿಕಾರರನ್ನು ಕಾಣಲು ಬಂದರು. ಆಗ ಅದಾಗ ತಾನೆ ‘ಭವ್ಯ ಮಾನವ’ದ ಪ್ರೂಫ್ ನೋಡುವ ಕಾರ್ಯ ಪ್ರಾರಂಭವಾಗಿತ್ತು. ಪರಸ್ಪರ ಪರಿಚಯವಾದ ಮೇಲೆ ಭೂಸನೂರಮಠ ಅವರು ಹಸ್ತಪ್ರತಿಯ ಹಂತದಲ್ಲಿದ್ದ ಭವ್ಯಮಾನವ ಕಾವ್ಯವನ್ನು ಅವರಿಗೆ ತೋರಿಸಿದರು. ಅದರ ಕೆಲವು ಭಾಗಗಳನ್ನು ಅದೇ ಭೈಠಕ್‌ನಲ್ಲಿ ಓದಿ ಅಹೋಬಲ ಶಂಕರ ಅವರು ಮತ್ತೂ ವಿಸ್ಮಯಗೊಂಡರಲ್ಲದೆ; ಸ್ವಯಂಪ್ರೇರಣೆಯಿಂದ ಸಂಪೂರ್ಣ ಉತ್ಸಾಹದಿಂದ ಕಾವ್ಯದ ಪ್ರೂಫ್ ನೋಡುವ ಕಾರ್ಯದಲ್ಲಿ ಭಾಗಿಯಾದರು. ವರ್ಷಪರ‍್ಯಂತರ ನಡೆದ ಆ ಕಾರ್ಯದಲ್ಲಿ ಅವರು ‘ಭವ್ಯ ಮಾನವ’ವನ್ನು ಆಮೂಲಾಗ್ರವಾಗಿ ಓದಿ, ಪರಾಮರ್ಶಿಸಿ, ಪ್ರಪಂಚದ ಮಹಾಕಾವ್ಯ ಗಳೊಂದಿಗೆ ಹೋಲಿಸಿ ಆನಂದ ತುಂದಿಲರಾದರು; ಕೌತುಕಗೊಂಡರು. ಹಲವು ಮಹಾಕಾವ್ಯಗಳನ್ನು ಓದಿಕೊಂಡದ್ದಲ್ಲದೆ, ಮನನ ಮಾಡಿಕೊಂಡಿದ್ದ ಅವರು ಈ ಕಾವ್ಯವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಅವರ ಅಭಿಪ್ರಾಯ ಇಲ್ಲಿ ಗಮನಾರ್ಹ – “Bhavya Manava is one of the great epics of the world including Ramayana, Mahabharat, Itiad, Odyssey, Divine comedy and paradise lost. Its uniqueness is that in tune with the evolution and progress of thought and culture over the years, its hero is not man, one class or clan or one nation but Man, the chief hero of the world’s Drama. It is a saga of Mankind…. (೧. ಭವ್ಯಮಾನವ, ರಕ್ಷಾ ಕವಚ) ಅಹೋಬಲ ಶಂಕರ ಅವರ ಈ ತೂಕದ ಮಾತುಗಳು ‘ಭವ್ಯ ಮಾನವ’ದ ಹಿರಿಮೆಗೆ ಹಿಡಿದ ಕನ್ನಡಿಯಾಗಿದೆ.

ಈ ಕೃತಿಯನ್ನು ಕುರಿತು ಮೊದಲು ಮಾತನಾಡಿದವರು ಡಾ. ಕೀರ್ತಿನಾಥ ಕುರ್ತಕೋಟಿ ಅವರು. ‘ಭವ್ಯ ಮಾನವ’ದ ಅನನ್ಯತೆಯನ್ನು ಕುರಿತು ಮನತುಂಬಿ ಆಡಿರುವ ಅವರ ಮಾತುಗಳೂ ಇಲ್ಲಿ ಉಲ್ಲೇಖಾರ್ಹ – “ಸಾಹಿತ್ಯ ವಿಮರ್ಶಕನಿಗೆ ಹೊಸಕಣ್ಣು ಕೊಡಬಲ್ಲ ಇಂಥ ಕೃತಿಗಳ ಅಭ್ಯಾಸದಿಂದ ವಿಮರ್ಶಕನಿಗೆ ಲಾಭವೇ ಹೊರತು ಕವಿಗೆ ಅಲ್ಲ. ಕಾವ್ಯ ಸೂತ್ರಗಳನ್ನು ಮೊಟ್ಟಮೊದಲಿನಿಂದ ಅಭ್ಯಾಸ ಮಾಡಲು ಹಚ್ಚುವ ಇಂಥ ಕೃತಿಗಳು ಕಾವ್ಯದ ಬಗೆಗಿನ ನಮ್ಮ ತಿಳಿವಳಿಕೆಯನ್ನು ಹೆಚ್ಚು ಮಾಡುತ್ತವೆ. ಭವ್ಯ ಮಾನವ ಈ ದೃಷ್ಟಿಯಿಂದ ಅಂಥ ಒಂದು ಮಹತ್ವದ ಕೃತಿ ಎಂದು ನಾನು ತಿಳಿದಿದ್ದೇನೆ.”[9]

ವಿರಳವಾದ ಇಂಥ ಅಧ್ಯಯನಶೀಲ ಅಭಿಪ್ರಾಯಗಳನ್ನು ಹೊರತುಪಡಿಸಿದರೆ; ನಿಜಕ್ಕೂ ಈ ಕೃತಿಯ ಬಗ್ಗೆ ನಡೆಯಬೇಕಾದ ವ್ಯಾಪಕ ಚರ್ಚೆ – ಜಿಜ್ಞಾಸೆಗಳು ನಡೆದಿಲ್ಲವೆಂದೆ ಅನಿಸುತ್ತದೆ. ಇಂಥ ಚರ್ಚೆ – ಜಿಜ್ಞಾಸೆಗಳ ಮೂಲಕ ಈ ಕೃತಿಯ ಅಂತಃಸತ್ತ್ವ ಮತ್ತು ಬೆಳಕು ಸಮಾಜಕ್ಕೆ ತಲುಪಬೇಕಿದೆ.

 

[1]ಎಸ್. ಎಸ್. ಭೂಸನೂರಮಠ, ಭವ್ಯಮಾನವ – ಪು – XLii

[2]ಅದೇ ಪು – ೫

[3]ಎಸ್.ಎಸ್. ಭೂಸನೂರಮಠ, ಭವ್ಯಮಾನವ, ಪು – ೫

[4]ಅದೇ, ಪು – ೭ ಎಸ್.ಎಸ್. ಭೂಸನೂರಮಠ, ಭವ್ಯಮಾನವ, ಪು – ೫೯

[5] [6]ಎಸ್.ಎಸ್. ಭೂಸನೂರಮಠ, ಭವ್ಯಮಾನವ, ಪು – ೬೦

[7]ಎಸ್.ಎಸ್. ಭೂಸನೂರಮಠ, ಭವ್ಯಮಾನವ, ಪು – ೨೧೪

[8]ಭವ್ಯಮಾನವ, ಪು – ೮೩೧ ಗೌರವ, ಪು – ೭೭

[9]ಗೌರವ, ಪು – ೭೭