Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಪ್ರೊ. ಕೆ.ಎಸ್. ನಾರಾಯಣಾಚಾರ್ಯ

ಕಲಿತದ್ದು, ಬೋಧಿಸಿದ್ದು ಆಂಗ್ಲ ಸಾಹಿತ್ಯವನ್ನಾದರೂ ಗಮಕಿಗಳಾಗಿಯೂ ಹೆಸರು ಮಾಡಿದವರು ಕೆ.ಎಸ್.ನಾರಾಯಣಾಚಾರ್ಯ ಅವರು.
ಕನಕಪುರದಲ್ಲಿ ೧೯೩೩ರಲ್ಲಿ ಜನನ. ತಂದೆ ಬಹುದೊಡ್ಡ ವೇದ ವಿದ್ವಾಂಸರು. ಪ್ರಾರಂಭಿಕ ಶಿಕ್ಷಣ ಪಡೆದಿದ್ದು ಹುಟ್ಟೂರಿನಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಬಿಎ ಆನ‌, ಆಂಗ್ಲ ಎಂಎ ಪದವಿ. ‘ಡಬ್ಲ್ಯೂ.ಬಿ.ಯೇಟ್ಸ್, ಟಿ.ಎಸ್.ಎಲಿಯೆಟ್ ಅವರ ಕಾವ್ಯದ ಮೇಲೆ ಭಾರತೀಯ ತತ್ವಶಾಸ್ತ್ರದ ಪ್ರಭಾವ’ ವಿಷಯ ಕುರಿತು ಸಂಶೋಧನಾ ಪ್ರಬಂಧ ಮಂಡನೆ. ಉಪನ್ಯಾಸಕರಾಗಿ ಅಧ್ಯಾಪನ ವೃತ್ತಿ ಆರಂಭ. ಪ್ರಾಚಾರ್ಯರಾಗಿ ನಿವೃತ್ತಿ.
ವೇದಗಳನ್ನು ಕುರಿತು ೧೦ ಸಂಪುಟಗಳ ಕೃತಿಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ ಸೇರಿದಂತೆ ೧೩೦ಕ್ಕೂ ಹೆಚ್ಚು ಗ್ರಂಥಗಳು ಶ್ರೀಯುತರಿಂದ ರಚನೆ. ನೂರಾರು ಉಪನ್ಯಾಸಗಳನ್ನು ನೀಡಿದ ಹೆಗ್ಗಳಿಕೆ ಅವರದು. ಕನ್ನಡ, ಆಂಗ್ಲ ತಮಿಳು, ಸಂಸ್ಕೃತ ಭಾಷೆಗಳಲ್ಲಿ ಪ್ರಾವೀಣ್ಯತೆ.
ಶ್ರೀಯುತರಿಂದ ಕೌಟಿಲ್ಯ ರಾಷ್ಟ್ರೀಯ ಅಧ್ಯಯನ ಸಂಸ್ಥೆ ಸ್ಥಾಪನೆ. ೨೦೦೫ರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳು ಅವರಿಗೆ ಸಂದಿವೆ. ಗಮಕ ಪರಿಷತ್ತಿನ ಸಮ್ಮೇಳನದಲ್ಲಿ ಅಧ್ಯಕ್ಷತೆಯ ಗೌರವದ ಜತೆಗೆ ಗಮಕ ರತ್ನಾಕರ ಬಿರುದಿಗೆ ಅವರು ಪಾತ್ರರು.
ವೃತ್ತಿ ಮತ್ತು ಪ್ರವೃತ್ತಿ ಎರಡರಲ್ಲೂ ಸಮಾನ ಸಾಧನೆ ಮಾಡಿದವರು ಶ್ರೀ ಕೆ.ಎಸ್.ನಾರಾಯಣಾಚಾರ್ಯ.