ಜನಪದ ಸಾಹಿತ್ಯ:

ಈಗಿನ ಹಾಗೆ ಜಾನಪದ ಸಾಹಿತ್ಯ ಒಂದು ಪ್ರತ್ಯೇಕ ಅಧ್ಯಯನವಾಗಿರದಿದ್ದರೂ ಪ್ರೊ. ಕುಂದಣಗಾರ ಅವರು ಅದಕ್ಕೆ ಒಂದು ಶಾಸ್ತ್ರೀಯ ಚೌಕಟ್ಟನ್ನು ಒದಗಿಸಲು ತಮ್ಮ ವಿದ್ಯಾರ್ಥಿ ಡಾ. ಬಿ.ಎಸ್‌. ಗದ್ದಗಿಮಟ ಅವರ ಮಹಾಪ್ರಬಂಧದ ಮೂಲಕ ಪ್ರಯತ್ನಿಸಿದರು. ಅಲ್ಲಿಂದ ಆ ಅಧ್ಯಯನ ಹರವು ವಿಸ್ತಾರಗೊಳ್ಳುತ್ತ ನಡೆಯಿತೆಂದು ಹೇಳಬಹುದು. ಪ್ರೊ. ಕುಂದಣಗಾರ ಅವರು ‘ಶಿರ್ಸಿ ತಾಲೂಕಿನಲ್ಲಿ ಪ್ರಚಲಿತವಾದ ಕೆಲವು ದಂತಕಥೆಗಳು’ ಮೊದಲಾದ ಲೇಖನಗಳನ್ನು ಬರೆದು  ಈ ಕ್ಷೇತ್ರವನ್ನು ಸಮೃದ್ಧಗೊಳಿಸಿದರು.

ಪಠ್ಯಪುಸ್ತಕಗಳು:

ಪ್ರೊ. ಕುಂದಣಗಾರ ಅವರ ಸಾಹಿತ್ಯಕೃಷಿ ಕೇವಲ ಸಂಶೋಧನೆಗೆ ಮಾತ್ರ ಮೀಸಲಾಗಿರದೆ ವಿದ್ಯಾರ್ಥಿಗಳಿಗೆ ಉಪಯೋಗಕಾರಿಯಾದ ಹಲವಾರು ಒಳ್ಳೆಯ ಪಠ್ಯಗಳನ್ನು ಸಿದ್ಧಪಡಿಸುವವರೆಗೆ ವ್ಯಾಪಿಸಿತ್ತು. ಅವುಗಳಲ್ಲಿ ಲೀಲಾವತಿ ಪ್ರಬಂಧ, ಗದ್ಯಮಂಜರಿ, ಕನ್ನಡ ಸಾಹಿತ್ಯ ಪ್ರವೇಶ ಭಾಗ ೧ ರಿಂದ ೩, ಅಲ್ಲದೆ ಇಂದ್ರಿಯ ವಿಜ್ಞಾನವು ಆರೋಗ್ಯ ಶಾಸ್ತ್ರವೂ ಎಂಬ ಕೃತಿಗಳು ಬೆಳಕು ಕಂಡವು. ಇವುಗಳಲ್ಲಿ ಕೊನೆಯದು ಮಹತ್ವ ಪೂರ್ಣವಾದುದು.

ಪ್ರೊ. ಕುಂದಣಗಾರ ಅವರು ಬಿ.ಎ. ಪದವಿಗಾಗಿ ಅಭ್ಯಸಿಸುತ್ತಿದ್ದಾಗ ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಇಂಗ್ಲೀಷ ವಿಷಯಗಳನ್ನು ಆಯ್ದುಕೊಂಡಿದ್ದರು. ಆ ಅಭ್ಯಾಸದ ಅನುಭವದ ಫಲವಾಗಿ ೧೯೩೩ರಲ್ಲಿ “ಇಂದ್ರಿಯ ವಿಜ್ಞಾನವೂ ಆರೋಗ್ಯಶಾಸ್ತ್ರವೂ” ಎಂಬ ಕೃತಿಯನ್ನು ರಚಿಸಿದರು. ಇದು ಅಂದಿನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿಗೆ ಪಠ್ಯಪುಸ್ತಕವಾಗಿತ್ತು. ಈ ಕೃತಿಗೆ ಮುನ್ನುಡಿ ಬರೆದ ಡಾ. ಎ.ಜೆ. ಪಾಟೀಲ ಎಂಬ ಸರ್ಜನರು “ವಿಷಯ ಪ್ರತಿಪಾದನೆಗೆ ತಕ್ಕಂತೆ ವಿಷಯಗಳನ್ನು ವಿಭಾಗಿಸಿ ಅಲ್ಲಲ್ಲಿ ಬೇಕಾಗುವ ಪ್ರಯೋಗಗಳನ್ನು ಹೇಳಿಕೊಟ್ಟ…. ಮನೋರಂಜಕವಾಗುವಂತೆ ಹದಗೊಳಿಸಿ ಓದುಗರ ಮುಂದಿರಿಸಿರುವುದರಿಂದ ಶಾಸ್ತ್ರೀಯ ವಿಷಯಗಳನ್ನು ಹೊಸದಾಗಿ ಕಲಿಯುವವರಿಗೂ ಕೂಡ ವಿಷಯ ಪ್ರವೇಶಕ್ಕೆ ಎಳ್ಳಷ್ಟು ಕಷ್ಟವಿಹುವುದಿಲ್ಲವೆಂದು ಧೈರ್ಯವಾಗಿ ಹೇಳಬಹುದು” ಎಂದಿದ್ದಾರೆ.

ಪ್ರೊ. ಕುಂದಣಗಾರ ಅವರು ಬಿ.ಎ. ಪದವಿಗಾಗಿ ಅಭ್ಯಸಿಸುತ್ತಿದ್ದಾಗ ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಇಂಗ್ಲೀಷ ವಿಷಯಗಲನ್ನು ಆಯ್ದುಕೊಂಡಿದ್ದರು. ಆ ಅಭ್ಯಾಸದ ಅನುಭವದ ಫಲವಾಗಿ ೧೯೩೩ರಲ್ಲಿ “ಇಂದ್ರಿಯ ವಿಜ್ಞಾನವೂ ಆರೋಗ್ಯಶಾಸ್ತ್ರವೂ” ಎಂಬ ಕೃತಿಯನ್ನು ರಚಿಸಿದರು. ಇದು ಅಂದಿನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿಗೆ ಪಠ್ಯಪುಸ್ತಕವಾಗಿತ್ತು. ಈ ಕೃತಿಗೆ ಮುನ್ನುಡಿ ಬರೆದ ಡಾ. ಎ.ಜೆ. ಪಾಟೀಲ ಎಂಬ ಸರ್ಜನರು “ವಿಷಯ ಪ್ರತಿಪಾದನೆಗೆ ತಕ್ಕಂತೆ ವಿಷಯಗಳನ್ನು ವಿಭಾಗಿಸಿ ಅಲ್ಲಲ್ಲಿ ಬೇಕಾಗುವ ಪ್ರಯೋಗಗಳನ್ನು ಹೇಳಿಕೊಟ್ಟ…. ಮನೋರಂಜಕವಾಗುವಂತೆ ಹದಗೊಳಿಸಿ ಓದುಗರ ಮುಂದಿರಿಸಿರುವುದರಿಂದ ಶಾಸ್ತ್ರೀಯ ವಿಷಯಗಳನ್ನು ಹೊಸದಾಗಿ ಕಲಿಯುವವರೆಗೂ ಕೂಡ ವಿಷಯ ಪ್ರವೇಶಕ್ಕೆ ಎಳ್ಳಷ್ಟು ಕಷ್ಟವಿಹುವುಲ್ಲವೆಂದು ಧೈರ್ಯವಾಗಿ ಹೇಳಬಹುದು” ಎಂದಿದ್ದಾರೆ.

ಪ್ರೊ. ಕುಂದಣಗಾರ ಅವರು “ಶರೀರವನ್ನು ನಿರೋಗಿಯಾಗಿಟ್ಟುಕೊಳ್ಳುವುದು ಮನುಷ್ಯನ ಕರ್ತವ್ಯವು ಎಂದು ಹೇಳಿ, ಮಾನವನ ಶರೀರದಲ್ಲಿ ಎಂಟು ಹತ್ತು ಒಳಯಂತ್ರಗಳಿವೆ. ಅವುಗಳಲ್ಲಿ ಒಂದು ಕೆಟ್ಟಿತೆಂದರೆ ಇಡೀ ಯಂತ್ರವು ನಿಂತು ಹೋಗುವದು. ಆ ಯಂತ್ರವು ನಿರಾತಂಕವಾಗಿ ನಡೆಯಬೇಕು. ಆದ್ದರಿಂದ ಎಲ್ಲ ಭಾಗಗಳ ಜ್ಞಾನ ಇರಬೇಕು” ಎಂದು ಶರೀರ ರಚನೆ, ಅದರ ವಿವಿಧ ಅಂಗಗಳ ಪರಿಚಯ, ಇಂದ್ರಿಯ ವ್ಯವಸ್ಥೆಗಳ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟಿದ್ದಾರೆ.

ಸಂಶೋಧನ ಮಾರ್ಗದರ್ಶಿ:

ಪ್ರೊ. ಕುಂದಣಗಾರ ಅವರ ವಿದ್ವತ್ತು, ಪಾಂಡಿತ್ಯಗಳನ್ನು ಗಮನಿಸಿ, ಮುಂಬೈ ವಿಶ್ವವಿದ್ಯಾಲಯ, ಅವರಿಗೆ ಪಿಎಚ್‌.ಡಿ. ಪದವಿ ಇರದೇ ಇದ್ದರೂ ಪಿಎಚ್‌.ಡಿ. ಮಾರ್ಗದರ್ಶಿ ಎಂದು ಮನ್ನಿಸಿ ಗೌರವಿಸಿತು. ಅವರು ತಮ್ಮ ಅನುಭವದ ಹಿನ್ನೆಲೆಯಲ್ಲಿ ಸಂಶೋಧನೆಯ ಹಲವಾರು ಮಾರ್ಗಗಳನ್ನು ರೂಪಿಸಿಕೊಂಡು ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಅವರ ಮಾರ್ಗದರ್ಶನದ ರೀತಿಯನ್ನು ಕುರಿತು ಅವರ ಪಿಎಚ್‌.ಡಿ. ವಿದ್ಯಾರ್ಥಿಯಾಗಿದ್ದ ಡಾ.ಎಂ.ಜಿ. ಬಿರಾದಾರ ಅವರು ಈ ರೀತಿ ಅಭಿಪ್ರಾಯಪಟ್ಟಿದ್ದಾರೆ. ಪ್ರೊ. ಕುಂದಣಗಾರರು ಶಿಕ್ಷಣ ಕ್ಷೇತ್ರದ ಹಿರಿಯರಾಗಿ ತಮ್ಮ ಕಡೆಗೆ ಬಂದ ಕನ್ನಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ (Guide) ಅವರವರ ಅಭಿರುಚಿಗನುಗುಣವಾಗಿ ಮುನ್ನಡೆಸಿದರು. ಅವರು ನಿವೃತ್ತರಾಗಿ ಆರ್.ಪಿ.ಡಿ. ಕಾಲೇಜಿನಲ್ಲಿ ಗೌರವ ಪ್ರಾಧ್ಯಾಪಕರಾಗಿ ಬಂದೊಡನೆ ಕರ್ನಾಟಕ ವಿಶ್ವವಿದ್ಯಾಲಯ ಅವರನ್ನು ಕನ್ನಡ ಪಿಎಚ್‌.ಡಿ. ಅಧ್ಯಯನಕ್ಕೆ ಮಾರ್ಗದರ್ಶಕ ಎಂದು ಪರಿಗಣಿಸಿತು. ಅದರ ಪರಿಣಾಮವಾಗಿ ಪಿಎಚ್‌.ಡಿ. ಮಾಡಲು ಸೌಲಭ್ಯ ಬಹಳ ಜನರಿಗೆ ದೊರೆಯಿತು. ಕನ್ನಡದಲ್ಲಿ ಪಿಎಚ್‌.ಡಿ. ಗಳೇ ಇರದಿದ್ದ ಆ ಕಾಲದಲ್ಲಿ ಪಿಎಚ್‌.ಡಿ. ಆಗಿರದ ಪ್ರೊ. ಕುಂದಣಗಾರರನ್ನು `He was professor of Doctors’ ಎಂದು ಕರೆಯಲಾಗುತ್ತಿತ್ತು. ಅವರು ಪಿಎಚ್‌.ಡಿ. ಎಂದರೆ ಪುಟ ತುಂಬುವದಲ್ಲ. `One should add something to the world’s knowledge’ ಎಂದು ಹೇಳಿದ ಮಾತು ನನ್ನ ಕಿವಿಯಲ್ಲಿ ಇಂದೂ ಇದೆ. ಅವರಲ್ಲಿ ಪಿ.ಎಚ್‌.ಡಿ. ಗಾಗಿ ರಜಿಸ್ಟರ್ ಮಾಡಿದಂದೇ ಆ ಅಭ್ಯರ್ಥಿಯನ್ನು ‘ಡಾಕ್ಟರ್’ ಎಂದು ಕರೆಯುತ್ತಿದ್ದರು. ಇಂಥ ಸಮರ್ಥ ಮಾರ್ಗದರ್ಶಕರು ಅವರಾಗಿದ್ದರು.

ವಿಷಯದ ಆಯ್ಕೆ, ಅದರ ವ್ಯಾಪ್ತಿ ಈ ವರೆಗೆ ಆ ವಿಷಯದಲ್ಲಾದ ಬೆಳವಣಿಗೆ, ಈಗಿರುವ ಸಮಸ್ಯೆಗಳು, ಅವುಗಳ ಪರಿಹಾರಕ್ಕೆ ಇರುವ ಆಕರಗಳು, ಪ್ರಬಂಧದ ಪ್ರಯೋಜನಾತ್ಮಕ ಉದ್ದೇಶ ಇವೆಲ್ಲವುಗಳ ಸಮಗ್ರ ಕಲ್ಪನೆ ಅವರಿಗಿರುತ್ತಿತ್ತು. ಕನ್ನಡ ಸಾಹಿತ್ಯ, ಸಂಸ್ಕೃತಿ ಮೊದಲಾದ ಎಲ್ಲ ವಿಷಯಗಳಲ್ಲಿ ಸಂಶೋಧನ ಕ್ಷೇತ್ರದ ಸಂಪೂರ್ಣ ಅರಿವಿದ್ದ ಮಾರ್ಗದರ್ಶಕರಾದವರು. ಯಾವುದೇ ಸಮಸ್ಯೆಗೆ ಅವರಿಗೆ ಆಕರಗಲೆಲ್ಲ ಗೊತ್ತಿದ್ದವು. ಅಲ್ಲಿ ಇಷ್ಟನ್ನೇ ‘ಓದಿ ನೋಡಿ’ ಎಂದು ಬೆರಳಿಟ್ಟು ಹೇಳುವ ಧೈರ್ಯ ಅವರದು. ಇಂದಿನಂತೆ ಪಿಎಚ್‌.ಡಿ. ಮಾರ್ಗದರ್ಶಕರಾಗುವ ಕಾಗದದ ಯಾವ ಅರ್ಹತೆಯೂ ಅವರಿಗಿರಲಿಲ್ಲ. ಆದರೂ ಅವರೊಬ್ಬ ಅರ್ಹ ಸಮರ್ಥ ಮಾರ್ಗದರ್ಶಕರಾಗಿದ್ದರು. ಯಾವುದೇ ವಿಷಯದ ವ್ಯಾಪಕ ಪರಿಜ್ಞಾನವಿದ್ದ ಅವರಂಥ ಮಾರ್ಗದರ್ಶಕರನ್ನು ಬಹಳಜನ ಅಭ್ಯರ್ಥಿಗಲು ನೋಡಿರುವ ಸಾಧ್ಯತೆ ತೀರ ಕಡಿಮೆ. ತಮ್ಮ ಅಭ್ಯರ್ಥಿಗಳು ಇನ್ನೊಬ್ಬ ಮಾರ್ಗದರ್ಶಕ ಪರಿಣತರ ಕಡೆಗೆ ಹೋಗಿ, ಸಮಸ್ಯೆಗಳನ್ನು ಕುರಿತು ಚರ್ಚಿಸಿ ಬಂದರೆ ಬಹಳ ಸಂತೋಷಪಡುವವರು. ಅದರಂತೆ ಅನ್ಯರ ವಿದ್ಯಾರ್ಥಿಗಳು ತಮ್ಮಲ್ಲಿ ಬಂದರೆ, ತಮ್ಮಗೆ ತಿಳಿದುದನ್ನೆಲ್ಲ ನಿರ್ವಂಚನೆಯಿಂದ ಹೇಳಿಕೊಡುವವರು… ತಮಗೆ ಸಂಶಯ ಬಂದ ವಿಷಯದಲ್ಲಿ ತಮ್ಮ ವಿದ್ಯಾರ್ಥಿಗಳ ಮನೆಗೆ ಹೋಗಿ ವಿಷಯವನ್ನು ಚರ್ಚಿಸಿಕೊಂಡು ಬರುವ ತೆರೆದ ಮನಸ್ಸಿನವರು ಅವರು. ಅವರ ಸಮರ್ಥ ಮಾರ್ಗದಶ್ನದಲ್ಲಿ ಡಾ.ಡಿ.ಎಸ್‌.ಕರ್ಕಿ ೧೯೪೯ರಲ್ಲಿ “ಕನ್ನಡ ಛಂದೋ ವಿಕಾಸ’’ ಎಂಬ ವಿಷಯದ ಮೇಲೆ ಪಿಎಚ್‌.ಡಿ. ಪದವಿ ಪಡೆದರು. ಇದು ಮುಂಬೈ ವಿಶ್ವವಿದ್ಯಾಲಯದ ಮೊದಲ ಕನ್ನಡ ಮಹಾಪ್ರಬಂಧ ಎಂಬ ಮನ್ನಣೆಗೆ ಪಾತ್ರವಾಯಿತು. ಡಾ.ಬಿ.ಎಸ್‌. ಗದ್ದಗಿಮಠ ಅವರ ‘ಕನ್ನಡ ಜನಪದಗೀತೆಗಳು’ ಎಂಬ ಮಹಾಪ್ರಬಂಧ ಕರ್ನಾಟಕ ವಿಶ್ವವಿದ್ಯಾಲಯದ ಮೊದಲ ಮಹಾಪ್ರಬಂಧ ಎಂಬ ಗೌರವ ಗಳಿಸಿತು. ಇವಲ್ಲದೆ ಡಾ.ಎಂ.ಎಸ್‌. ಸುಂಕಾಪುರ (ಕನ್ನಡ ಸಾಹಿತ್ಯದಲ್ಲಿ ಹಾಸ್ಯ) ಡಾ.ಎಂ.ಜಿ. ಬಿರಾದಾರ (ರತ್ನಾಕರ ವರ್ಣಿ ಮತ್ತು ಅವನ ಕೃತಿಗಳು) ಅವರೂ ಕುಂದಣಗಾರ ಅವರ ಮಾರ್ಗದರ್ಶದಲ್ಲಿ ಪಿಎಚ್‌.ಡಿ. ಪದವಿಯನ್ನು ಪಡೆದರು. ಹೀಗೆ ಪ್ರೊ. ಕುಂದಣಗಾರ ಅವರು ಅಧಿಕೃತವಾಗಿ ನಾಲ್ಕು ಜನರಿಗೆ ಪಿಎಚ್‌.ಡಿ. ಮಾರ್ಗದರ್ಶನ ಮಾಡಿದ್ದರೂ ಎಚ್‌.ಟ.ಸಾಸನೂರ ಆರ್.ಸಿ. ಹಿರೇಮಠ ಮೊದಾಲಾದವರಿಗೂ ಅಧಿಕೃತವಾಗಿ ಮಾರ್ಗದಶ್ನ ನೀಡಿದರು. ಇವೆಲ್ಲವುಗಳಿಂದ ಇವರು ಉತ್ತರ ಕರ್ನಾಟಕದ ಮೊಟ್ಟಮೊದಲ ಪಿಎಚ್‌.ಡಿ. ಮಾರ್ಗದರ್ಶಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸಂಘ-ಸಂಸ್ಥೆಗಳ ಸಂಬಂಧ:

ಪ್ರೊ. ಕುಂದಣಗಾರ ಅವರು ಕೊಲ್ಲಾಪುರದಲ್ಲಿದ್ದಾಗ ‘ಗೆಳೆಯರ ಬಳಗ’, ‘ಬಸವನ ಬಳಗ’ ಹಾಗೂ ‘ಕರ್ನಾಟಕ ಸಂಘ’ಗಳನ್ನು ಸ್ಥಾಪಿಸಿ, ಕನ್ನಡ ಸಾಹಿತ್ಯ-ಸಂಸ್ಕೃತಿಗಳ ಅಧ್ಯಯನಕ್ಕೆ ಒಳ್ಳೆಯ ಬುನಾದಿಯನ್ನು ಹಾಕಿದರು. ಕರ್ನಾಟಕ ಸಂಘವು ಕೊಲ್ಲಾಪುರದಂಥ ಹೊರನಾಡಿನಲ್ಲಿ ಕನ್ನಡದ ಚಟುವಟಿಕೆಗಳನ್ನು ನಡೆಸಿತು. ಈ ಸಂಘದ ಆಶ್ರಯದಲ್ಲಿ ಬಿ.ಎಂ.ಶ್ರೀ., ಜಿ.ಪಿ. ರಾಜರತ್ನಂ, ಡಿ.ವ್ಹಿ. ಗುಂಡಪ್ಪ, ಎಂ.ಆರ್.ಶ್ರೀ, ಅನಕೃ, ಗುಬ್ಬಿ ವೀರಣ್ಣ, ಆಲೂರ ವೆಂಕಟರಾಯರು, ರಂ.ಶ್ರೀ.ಮುಗಳಿ, ಶಿವರಾಮ ಕಾರಂತ, ದಿನಕರ ದೇಸಾಯಿ, ಎಸ್‌.ಸಿ. ನಂದಿಮಠ, ವಿ.ಕೃ.ಗೋಕಾಕ, ಟಿ.ಪಿ. ಕೈಲಾಸಂ, ಮುಂತಾದ ನಾಡಿನ ಹಿರಿಯ ವಿದ್ವಾಂಸರ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು. ಅಲ್ಲದೆ ಹರಿಹರದೇವ, ಹೂಗೊಂಚಲು, ದಿ ಲೈಫ್‌ಆಫ್‌ಲಾರ್ಡ್ ಬಸವ ಎಂಬ ಕೃತಿಗಳನ್ನು ಪ್ರಕಟಿಸಿದ್ದು ಬಹುದೊಡ್ಡ ಸಾಧನೆ. ಕೊಲ್ಲಾಪುರದಿಂದ ಬೆಳಗಾವಿಗೆ ಬಂದ ಕುಂದಣಗಾರ ಅವರು ಅಲ್ಲಿಯ ಕನ್ನಡ ಸಂಗದ ಚಟುವಟಿಕೆಗಳಿಗೂ ವಿಶೇಷ ಕಳೆ ನೀಡಿ ಅಲ್ಲಿ ನಾಡಹಬ್ಬದ ಆಚರಣೆಗೆ ನಾಂದಿ ಹಾಡಿದರು. ಕರ್ನಾಟಕದ ಪ್ರಾಚೀನ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಪ್ರೊ. ಕುಂದಣಗಾರ ಅವರು ಅವಿನಾಭಾವ ಸಂಬಂಧ ಹೊಂದಿ, ಕನ್ನಡದ ಸ್ಥಾನಮಾನ, ಏಕೀಕರಣ ಹಾಗೂ ಕನ್ನಡ ಜಾಗೃತಿಯ ಕಾರ್ಯಗಳಲ್ಲಿ ತಮ್ಮನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಂಡರು. ಕನ್ನಡ ಸಾಹಿತ್ಯಪರಿಷತ್ತಿನ ಅಜೀವ ಸದಸ್ಯರಾಗಿ, ಪರಿಷತ್ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ, ಕಾರ್ಯನಿರ್ವಾಹಕ ಮಂಡಳಿಯ ಸದಸ್ಯರಾಗಿ, ಉತ್ತರ ಕರ್ನಾಟಕ ಪ್ರಾಂತೀಯ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದರು. ಪರಿಷತ್ತಿನ ಕನ್ನಡ-ಕನ್ನಡ ನಿಘಂಟು ರಚನಾ ಸಮಿತಿಯ ಸದಸ್ಯರಾಗಿ ಅವಿಸ್ಮರಣೀಯ ಸೇವೆ ಸಲ್ಲಿಸಿದರು.

ಧಾರವಾಡದಲ್ಲಿ ಕನ್ನಡ ಸಂಶೋಧನ ಸಂಸ್ಥೆ ತಲೆ ಎತ್ತಲು ಕುಂದಣಗಾರರು ಕಾರಣರಾದರು. ಕನ್ನಡ ಸಂಸ್ಕೃತಿ ಮತ್ತು ಪ್ರಾಚೀನ ಅವಶೇಷಗಳ ದಾಖಲೀಕರಣದ ಉದ್ದೇಶವನ್ನಿಟ್ಟುಕೊಂಡು ಸ್ಥಾಪನೆಗೊಂಡ ಈ ಸಂಸ್ಥೆಯ ಆರಂಭದ ದಿನದಿಂದ ೧೯೫೬ರ ವರೆಗೆ ಅದರ ಸಲಹಾ ಮಂಡಳಿಯ ಸದಸ್ಯರಾಗಿ ಆ ಸಂಸ್ಥೆಯ ಏಳ್ಗೆಗಾಗಿ ಶ್ರಮಿಸಿದರು.

ಕರ್ನಾಟಕ ವಿಶ್ವವಿದ್ಯಾಲಯವು ಧಾರವಾಡದಲ್ಲಿ ಸ್ಥಾಪಿತವಾಗುವುದಕ್ಕೆ ಕಾರಣರಾದವರಲ್ಲಿ ಪ್ರೊ. ಕುಂದಣಗಾರ ಅವರೂ ಒಬ್ಬರು. ಅಂದು ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಯ ಬೇಡಿಕೆಯನ್ನೊಯ್ದ ನಿಯೋಗದಲ್ಲಿ ಇವರೇ ಹಿರಿಯ ಸದಸ್ಯರಾಗಿದ್ದರು. ಮುಂಬೈ ವಿಶ್ವವಿದ್ಯಾಲಯದ ಸಿನೇಟ ಸದಸ್ಯರಾಗಿ, ಅಧಿಕೃತ ಪಿಎಚ್‌.ಡಿ. ಮಾರ್ಗದರ್ಶಕರಾಗಿ, ಪರೀಕ್ಷಕರಾಗಿ ಸೇವೆ ಸಲ್ಲಿಸಿದ್ದ ಪ್ರೊ. ಕುಂದಣಗಾರ ಅವರಿಗೆ ಆ ವಿಶ್ವವಿದ್ಯಾಲಯದಲ್ಲಿ ವಿಶೇಷ ಗೌರವವಿತ್ತು. ಇವರ ಪ್ರಯತ್ನದ ಫಲವಾಗಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡಲ್ಲಿ ಅಸ್ತಿತ್ವಕ್ಕೆ ಬಂದಿತು. ಮುಂದೆ ಇವರು ಆ ವಿಶ್ವವಿದ್ಯಾಲಯದ ಕನ್ನಡದ ಹಿರಿಯ ನೇತಾರರಾಗಿ ಕೆಲಸ ಮಾಡಿದರು.

ಅಲ್ಲದೆ ಮುಂಬೈ, ಮೈಸೂರು, ಕೇರಳ, ಉಸ್ಮಾನಿಯಾ, ಮದ್ರಾಸ ಮೊದಲಾದ ವಿಶ್ವವಿದ್ಯಾಲಯಗಳೊಂದಿಗೆ ಆತ್ಮೀಯ ಸಂಬಂಧವನ್ನಿಟ್ಟುಕೊಂಡು, ಆ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಪಠ್ಯಕ್ರಮ ಅಭ್ಯಾಸ ಪತ್ರಿಕೆಗಳನ್ನು ರೂಪಿಸಿದರು. ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿದ ಇಂಗ್ಲೀಷ-ಕನ್ನಡ ನಿಘಂಟುವಿನ ಸಂಪಾದಕ ಸಮಿತಿಯಲ್ಲಿದ್ದು ಉಪಯುಕ್ತ ಸೇವೆ ಸಲ್ಲಿಸಿದರು.

ಹೀಗೆ ಪ್ರೊ. ಕುಂದಣಗಾರ ಅವರು ಕನ್ನಡ ಸಂಘ-ಸಂಸ್ಥೆಗಳೊಂದಿಗೆ ಮಾತ್ರವಲ್ಲದೆ, ಮಹಾರಾಷ್ಟ್ರದ ಸಂಘ ಸಂಸ್ಥೆಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದರು ಮತ್ತು ಅವುಗಳೊಂದಿಗೆ ಮಧುರ ಬಾಂಧವ್ಯ ಹೊಂದಿ, ಅವುಗಳ ಎಲ್ಲಾ ಚಟುವಟಿಕೆಗಳಿಗೆ ಬೆನ್ನಲುಬಾಗಿದ್ದರು.

ಪುಸ್ತಕ ಪ್ರೇಮಿ:

ಉತ್ಕಟ ಪುಸ್ತಕಪ್ರೇಮಿಯಾಗಿದ್ದ ಕುಂದಣಗಾರ ಅವರ ಬಳಿ ಪುಸ್ತಕಗಳ ಬೃಹತ್‌ಭಂಡಾರವೇ ಇತ್ತು. ಅವರು ಎಲ್ಲಿಯೇ ಹೋದರೂ ಕೈಯಲ್ಲೊಂದು ಪುಸ್ತಕವಿರುತ್ತಿತ್ತು. ಯಾವುದೇ ಪುಸ್ತಕಾಲಯಗಳಿಗೆ ಭೇಟಿ ಕೊಟ್ಟರೂ ತಮಗೆ ಹಿಡಿಸಿದ ಪುಸ್ತಕಗಳನ್ನು ಹೊತ್ತುಕೊಂಡೆ ಬರುತ್ತಿದ್ದರು. ಕೈಯಲ್ಲಿ ಹಣವಿಲ್ಲದಿದ್ದರೂ ಸಾಲಮಾಡಿಯಾದರೂ ಪುಸ್ತಕಗಳನ್ನು ಕೊಂಡು ತರುತ್ತಿದ್ದರು. ಹಾಗೆ ತಂದ ಪುಸ್ತಕಗಳನ್ನೆಲ್ಲ ಮನೆಯಲ್ಲಿ ಅಂದವಾಗಿ, ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದರು. ಆ ಸಂಗ್ರಹದಲ್ಲಿ ಕನ್ನಡದೊಂದಿಗೆ ಇಂಗ್ಲೀಷ್‌, ಸಂಸ್ಕೃತ, ಮರಾಠಿ, ಅರ್ಧಮಾಗಧಿ ಮುಂತಾದ ಭಾಷೆಯ ಅಮೂಲ್ಯ ಗ್ರಂಥಗಳಿದ್ದವು. ಅಲ್ಲದೆ ಅಂದು ಪ್ರಕಟವಾಗುತ್ತಿದ್ದ ಅಮೂಲ್ಯ ಪತ್ರಿಕೆಗಳನ್ನು ಬಿಟ್ಟೂಬಿಡದೆ, ತಮ್ಮ ನಿವೃತ್ತಿಯನಂತರವೂ ನಿವೃತ್ತಿ ವೇತನದ ೭೫ ರೂಪಾಯಿಯಲ್ಲಿಂದ ತರಿಸಿಕೊಳ್ಳುತ್ತಿದ್ದರು. ಆದರೆ ಅವು ಅಲ್ಲಿ ಕೇವಲ ಅಲಂಕಾರಕ್ಕಾಗಿ, ಪ್ರತಿಷ್ಠೆಯ ಪ್ರತೀಕಕ್ಕಾಗಿ ಇರಲಿಲ್ಲ. .ಅದರಲ್ಲಿಯ ಯಾವುದೇ ಪುಸ್ತಕವನ್ನು ತೆರೆದು ನೋಡಿದರೂ ಅವರು ಓದಿ ಗುರುತು ಹಾಕಿದ, ಸಂದಿಗ್ಧತೆ-ಸಮಸ್ಯೆಗಳಿಗೆ ಟಿಪ್ಪಣೆ ಬರೆದ ಅಂಶಗಳಿರುತ್ತಿದ್ದವು. ಕಾದಂಬರಿ, ಕಥಾ ಸಂಕಲನ, ಶಾಸ್ತ್ರಗ್ರಂಥಗಳನ್ನೆಲ್ಲ ಓದಿ, ಅವುಗಳ ಮಧ್ಯೆ ಮತ್ತು ಕೊನೆಯಲ್ಲಿ ತಮ್ಮ ಅನಿಸಿಕೆಗಳನ್ನು ಬರೆದಿಡುತ್ತಿದ್ದರು. ಹೀಗಾಗಿ ಅವರ ಸಂಗ್ರಹದ ಒಂದೊಂದು ಪುಸ್ತಕವ?ಊ ಸಂಶೋಧಿಸಿಟ್ಟ ಆಕರಗಳಂತಿದ್ದವು.

ಕುಂದಣಗಾರ ಅವರ ಪುಸ್ತಕ ಪ್ರೀತಿ ಎಷ್ಟಿತ್ತು ಎಂಬುದಕ್ಕೆ ಈ ನಿದರ್ಶನಗಳನ್ನು ನೋಡಬಹುದು. ಇಳಿವಯಸ್ಸಿನಲ್ಲಿ ರಕ್ತದೊತ್ತಡದಿಂದ ಬಳಲುತ್ತಿದ್ದ ಅವರಿಗೆ ವೈದ್ಯರು ಪುಸ್ತಕಗಳನ್ನು ಓದದಿರಲು, ಬರೆಯದಿರಲು ಕಟ್ಟಪ್ಪಣೆ ಮಾಡಿದ್ದರು. ಆದರೂ ಪ್ರೊ. ಕುಂದಣಗಾರ ಅವರ ತಮ್ಮ ಪತ್ನಿಯ ಕಣ್ತಪ್ಪಿಸಿ, ಯಾರೂ ಎಲ್ಲದ ಸ್ಥಳದಲ್ಲಿ ಕುಳಿತು ಅವುಗಳನ್ನು ಓದುತ್ತಿದ್ದರು. ಅಕಸ್ಮಾತ್‌ಅದು ಅವರ ಶ್ರೀಮತಿಯವರಿಗೆ ಗೊತ್ತಾಗಿ ಅವರು ಪುಸ್ತಕವನ್ನು ಕಸಿದುಕೊಂಡರೆ ‘ಓದುವುದು ಬ್ಯಾಡಂದ್ರ ಬದುಕುವುದಾದ್ರೂ ಯಾಕ’ ಎಂದು ಉದ್ಗಾರ ತೆಗೆಯುತ್ತಿದ್ದರು.

ಅವರ ಕೊನೆಗಾಲದಲ್ಲಿ ಆರ್ಥಿಕಸ್ಥಿತಿ ತೀರ ಹದಗೆಟ್ಟಿತ್ತು. ಊಟ, ಔಷಧೋಪಚಾರಕ್ಕೂ ಅವರಲ್ಲಿ ಹಣವಿರಲಿಲ್ಲ. ಅದನ್ನರಿತ ಡಾ. ಆರ್.ಸಿ. ಹಿರೇಮಠ, ಡಾ. ಸುಂಕಾಪುರ, ಶ್ರೀ ಒಡೆಯರ್ ಮುಂತಾದವರು ಡಾ.ಡಿ.ಸಿ. ಪಾವಟೆ ಅವರ ಆದೇಶದ ಮೇರೆಗೆ ಬೆಳಗಾವಿಯ ಕುಂದಣಗಾರ ಅವರ ಮನೆಗೆ ಹೋಗಿ,ಮನೆಯಲ್ಲಿನ ಎಲ್ಲ ಪುಸ್ತಕಗಳನ್ನು ಕನ್ನಡ ಅಧ್ಯಯನ ಪೀಠಕ್ಕೆ ನೀಡಲು ಕೋರಿ, ಇಪ್ಪತ್ತು ಸಾವಿರ ರೂಪಾಯಿಯ ಚೆಕ್ಕನ್ನು ಅವರ ಮುಂದೆ ಹಿಡಿದರು. ಅದನ್ನು ನೋಢಿ ಕುಂದಣಗಾರ ದಳದಳನೆ ಕಣ್ಣೀರು ಸುರಿಸಿ, ಈ ಸರಸ್ವತಿಯನ್ನು ಮಾರಿಕೊಂಡು ಬದುಕುವಂತೆ ಹೇಳಲು ಬಂದಿರುವಿರಾ? ಎಂದು ಪ್ರಶ್ನಿಸಿ ಅವರನ್ನೆಲ್ಲ ಹಾಗೆಯೇ ಕಳಿಸಿದರಂತೆ. ಹೀಗೆ ಪುಸ್ತಕ, ಪ್ರಾಣಕ್ಕಿಂತ ಮಾನಕ್ಕಿಂತ ಮೌಲಿಕ ಎಂದು ಅವರು ನಂಬಿದವರಾಗಿದ್ದರು.

ಪ್ರೊ. ಕುಂದಣಗಾರ ಅವರು ತಮ್ಮ ಬಳಿ ಇದ್ದ ಪುಸ್ತಕಗಳನ್ನು ತಾವಷ್ಟೇ ಓದದೆ, ಕೇಳಲು ಬಂದವರಿಗೆಲ್ಲ ಕೊಟ್ಟು ಅವನ್ನು ಓದಲು ಪ್ರೇರೇಪಿಸುತ್ತಿದ್ದರು. ಒಮ್ಮೊಮ್ಮೆ ಅವನ್ನು ಅವರ ಮನೆಯವರೆಗೆ ಹೋಗಿ ಮುಟ್ಟಿಸಿ ಬರುತ್ತಿದ್ದರು. ಅಕಸ್ಮಾತ್‌ಆ ಪುಸ್ತಕ ತಮ್ಮ ಬಳಿ ಇರದೆ ಇದ್ದರೆ ಅದು ದೊರೆಯುವಲ್ಲಿಗೆ ಸ್ವತಃ ಹೋಗಿ ತಂದುಕೊಡುತ್ತಿದ್ದರು. ಒಮ್ಮೆ ಪ್ರೊ.ಎಂ.ಜಿ. ಬಿರಾದಾರ ಅವರಿಗೆ ಬೇಕಾದ ಜಿನಸೇನಾಚಾರ್ಯರ ಪೂರ್ವಪುರಾಣವನ್ನು ಬೆಳಗಾವಿಯ ಸಮೀಪದ ಜೈನ ಮಠವೊಂದರಿಂದ ಮಳೆಯಲ್ಲಿಯೇ ತೋಯಿಸಿಕೊಳ್ಳುತ್ತ ತಂದು ಕೊಟ್ಟಿದ್ದನ್ನು ಹೃದಯ ಸ್ಪರ್ಶಿಯಾಗಿ ನಿರೂಪಿಸಿದ್ದಾರೆ.

ಬಹುಭಾಷಾ ಪಾಂಡಿತ್ಯ:

ಅಂದಿನ ಪಂಡಿತರ ವಿಶಿಷ್ಟ ಗುಣದಂತಿದ್ದ ಬಹುಭಾಷಾ ಪಾಂಡಿತ್ಯವು ಕುಂದಣಗಾರ ಅವರಲ್ಲಿ ವಿಶೇಷವಾಗಿತ್ತು. ಅವರು ಸ್ವಪರಿಶ್ರಮದಿಂದ ಕನ್ನಡವನ್ನಲ್ಲದೆ ಇಂಗ್ಲೀಷ, ಮರಾಠಿ, ಪಾಲಿ, ಪ್ರಾಕೃತ, ಸಂಸ್ಕೃತ ಅರ್ಧಮಾಗದಿ ಮುಂತಾದ ಭಾಷೆಗಳನ್ನು ಬಲ್ಲವರಾಗಿದ್ದರು. ಅವರ ಇಂಗ್ಲೀಷ ಭಾಷೆಯ ಮೇಲಿನ ಪ್ರಭುತ್ವಕ್ಕಾಗಿ ಅವರ Notes on Sri Mahalaxmi Temple, Kolhapur ಮತ್ತು Inseriptions in Northern Karnataka and the Kolhapur State ಎಂಬ ಕೃತಿಗಳನ್ನೂ ಮತ್ತು ೨೮ ಲೇಖನಗಳನ್ನೂ ನೋಡಬಹುದು. ಮರಾಠಿ ಭಾಷೆಯಿಂದ ಕನ್ನಡಕ್ಕೆ, ಕನ್ನಡದಿಂದ ಮರಾಠಿಗೆ ಕೆಲವು ವಿದ್ವತ್‌ಕೃತಿಗಳನ್ನು ಅನುವಾದಿಸಿ ತಮ್ಮ ಮರಾಠಿ ಭಾಷೆಯ ಮೇಲಿನ ಪ್ರಭುತ್ವವನ್ನು ಅವರು ತೋರಿದ್ದಾರೆ. ಪಾಲಿ, ಪ್ರಾಕೃತ, ಅರ್ಧಮಾಗದಿ ಭಾಷೆಗಳಲ್ಲಿನ ಜ್ಞಾನ ಅವರು ಜೈನ ಕೃತಿಗಳನ್ನು ಸಮರ್ಥ ರೀತಿಯಿಂದ ಸಂಪಾದಿಸಲು ಸಾಧ್ಯವಾಯಿತು. ಹೀಗೆ ಹಲವು ಭಾಷೆಗಳಲ್ಲಿ ಪಾಂಡಿತ್ಯ ಪಡೆದು ಆ ಮೂಲಕ ಅಗಾಧವಾದ ಸಾಹಿತ್ಯ ಸೇವೆಯನ್ನು ಪ್ರೊ. ಕುಂದಣಗಾರ ಅವರು ನೆರವೇರಿಸಿದರು.

ಸಂದ ಪುರಸ್ಕಾರಗಳು:

ಕನ್ನಡ ಸಾಹಿತ್ಯ ಸಂಸ್ಕೃತಿಗೆ ಅಪರೂಪದ ಸೇವೆ ಸಲ್ಲಿಸಿದ ಪ್ರೊ. ಕುಂದಣಗಾರ ಅವರನ್ನು ಸರಕಾರ, ಸಂಘ ಸಂಸ್ಥೆಗಳು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನಿತ್ತು ಗೌರವಿಸಿವೆ. ೧) ೧೯೪೧ರಲ್ಲಿ ಹೈದರಾಬಾದದಲ್ಲಿ ಜರುಗಿದ ಅಖಿಲಭಾರತ ೨೬ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಾಹಿತ್ಯಗೋಷ್ಠಿಯ ಅಧ್ಯಕ್ಷರಾಗಿದ್ದರು. ೨) ೧೯೪೬ರಲ್ಲಿ ಮುಂಬೈಯಲ್ಲಿ ಜರುಗಿದ ಅಖಿಲ ಭಾರತ ಪ್ರಾಚ್ಯ ಮಹಾಸಭೆಯ ಕನ್ನಡ ದ್ರಾವಿಡ ವಿಭಾಗದ ಅಧ್ಯಕ್ಷತೆ ವಹಿಸಿದ್ದರು. ೩) ೧೯೫೭ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ೨೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚರ್ಚಾ ಸಮಿತಿಯ ಅಧ್ಯಕ್ಷರಾಗಿದ್ದರು. ೪) ೧೯೬೧ರಲ್ಲಿ ಗದಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಲನದ ಸರ್ವಾಧ್ಯಕ್ಷರಾಗಿದ್ದರು. ಆಗ ಅವರ ವಿದ್ಯಾರ್ಥಿ ಬಳಗ ಅವರಿಗೆ ‘ಕುಂದಣ’ ಎಂಬ ಅಭಿನಂದನ ಗ್ರಂಥವನ್ನರ್ಪಿಸಿತು. ಸಮ್ಮೇಳನಾಧ್ಯಕ್ಷರಾಗಿ ಮಾಡಿದ ಅವರ ಭಾಷಣದಲ್ಲಿ ಅವರ ಕನ್ನಡಪರ ಕಾಳಜಿ, ಅಭಿಮಾನಗಳು ವ್ಯಕ್ತವಾಗಿವೆ.

ಸಮಾರೋಪ:

ಹೀಗೆ ಪ್ರೊ. ಕುಂದಣಗಾರ ಅವರು ಒಬ್ಬ ಆದರ್ಶ ಶಿಕ್ಷಕರಾಗಿ ವಿದ್ಯಾರ್ಥಿಗಳ ಪಾಲನೆ ಪೋಷಣೆಯ ಇಡೀ ಜವಾಬ್ದಾರಿಯನ್ನು ಹೊಂದಿ, ಅವರ ಕ್ಷೇಮಾವೃದ್ಧಿಯತ್ತರೂ ಲಕ್ಷ್ಯ ವಹಿಸಿ ಕನ್ನಡದ ಒಂದು ಪಡೆಯನ್ನೇ ಸಿದ್ಧಪಡಿಸಿದರು. ಕನ್ನಡದ ಒಬ್ಬ ಕಟ್ಟಾಳುವಾಗಿ ಕರ್ನಾಟಕದಲ್ಲಿ ಮಾತ್ರವಲ್ಲ, ಹೊರನಾಡಿನಲ್ಲಿಯೂ ಕನ್ನಡದ ಕಂಪು ಹರಡುವಂತೆ ಮಾಡಿದರು. ಹೊರನಾಡಿನ ಜನರ ಮನವನ್ನು ಗೆದ್ದು ಅವರ ಮತ್ತು ಕರ್ನಾಟಕದ ಸಂಸ್ಕೃತಿಯ ಸಮಗ್ರ ಪರಿಚಯ ಮಾಡಿಕೊಟ್ಟರು. ಒಬ್ಬ ಹಿರಿಯ ಸಂಶೋಧಕರಾಗಿ ಹಲವು ಹತ್ತು ಶಾಸನಗಳನ್ನು ಹುಡುಕಿ, ಪ್ರಕಟಿಸಿ ಅವುಗಳಲ್ಲಿ ಹುದುಗಿದ್ದ ರಾಜಕೀಯ, ಸಾಹಿತ್ಯಿಕ್ಕ ಸಾಂಸ್ಕೃತಿಕ ಅಂಶಗಳ ಮೇಲೆ ಬೆಳಕು ಚೆಲ್ಲಿದರು. ಭೂಗರ್ಭ ಶೋಧ ಮಾಡಿ ಹುದುಗಿ ಹೋಗಿದ್ದ ಮಹತ್ವದ ಚಾರಿತ್ರಿಕ ಸಂಗತಿಗಳನ್ನು ಬೆಳಕಿಗೆ ತಂದರು. ಸಂಶೋಧನೆ ಎಂದರೆ ಹೇಗಿರಬೇಕು ಎಂಬುದಕ್ಕೆ ಮಾದರಿಯಾದರು. ಹಲವಾರು ಅಪ್ರಕಟಿತ ಗ್ರಂಥಗಳನ್ನು ಶಾಸ್ತ್ರೋಕ್ತವಾಗಿ ಸಂಪಾದಿಸಿ ಗ್ರಂಥ ಸಂಪಾದನ ಶಾಸ್ತ್ರಕ್ಕೊಂದು ರೂಪ ಒದಗಿಸಿದರು.

ಒಟ್ಟಾರೆ ಒಬ್ಬ ಮನುಷ್ಯ ತನ್ನ ಪರಿಶ್ರಮ ಪ್ರವೃತ್ತಿಯಿಂದ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಪ್ರೊ. ಕುಂದಣಗಾರ ಅವರು ಒಳ್ಳೆಯ ಮಾದರಿಯಾದರು.

* * *