ಜೈನಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು:

ಪ್ರೊ. ಕುಂದಣಗಾರ ಅವರ ದೊರೆತಿರುವ ೧೦೩ ಲೇಖನಗಳಲ್ಲಿ ಜೈನಧರ್ಮಕ್ಕೆ ಸಂಬಂಧಿಸಿದ ಲೇಖನಗಳು ೨೮. ಅವರು ಇಡಿಯಾಗಿ ಜೈನಸಾಹಿತ್ಯಕ್ಕೆ ಸಂಬಂಧಿಸಿ ನಾಲ್ಕು ಲೇಖನಗಳನ್ನು ಬರೆದಿದ್ದಾರೆ. ‘ಜೈನ ಸಾಹಿತ್ಯದ ವೈಶಿಷ್ಟ್ಯ’ ಎಂಬ ಲೇಖನದಲ್ಲಿ-ಜೈನರು ಕನ್ನಡ ಸಾಹಿತ್ಯದ ಆದ್ಯ ಪ್ರವರ್ತಕರೆಂದು ಹೇಳಿ, ಅವರು ಹೇರಳವಾಗಿ ಸಾಹಿತ್ಯ ಸೃಷ್ಟಿಸಿ, ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ ಎಂದಿದ್ದಾರೆ. ಇವರಿಂದಲೆ ಕನ್ನಡವು ಗ್ರಂಥಸ್ಥ ಭಾಷೆಯಾಯಿತೆಂದು ಹೇಳಿ, ಅವರು ತಮ್ಮ ಚಂಪೂಕಾವ್ಯಗಳಲ್ಲಿ ಬಳಸಿದ ಪರಿಯಕ್ಕರ, ರಗಳೆ, ತ್ರಿಪದಿ, ಷಟ್ಪದಿ, ಲಲಿತಪದ, ತ್ರಿಪುಡೆ ಮೊದಲಾದವುಗಳ ಪ್ರಸ್ತಾಪ ಮಾಡಿದ್ದಾರೆ. ಇದೇ ವಿಷಯವನ್ನು ಕುರಿತು ಇಂಗ್ಲೀಷಿನಲ್ಲಿ `Contribution of Jains to Kannada Language and Literature’ ಎಂಬ ಲೇಖನವನ್ನು  ಬರೆದಿದ್ದಾರೆ. ಅಲ್ಲಿ ಜೈನರು ಭಾಷೆ, ಸಾಹಿತ್ಯ, ವ್ಯಾಕರಣ, ಕಾವ್ಯ, ತತ್ವಜ್ಞಾನ, ವ್ಯಾಖ್ಯಾನ, ಗಣಿತ, ವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ದುಡಿದಿರುವುದನ್ನು ಹೇಳಿ, ಅವರು ರಾಜಾಶ್ರಯ ಪಡೆದುದನ್ನು ವಿವರಿಸಿದ್ದಾರೆ. ‘ಕುರುವಂಶದ ಬಗ್ಗೆ ಜೈನ ವಿಚಾರವು’ ಎಂಬ ಲೇಖನದಲ್ಲಿ ಜೈನ ಭಾರತ-ವ್ಯಾಸ ಭಾರತಗಳು ಪಾತ್ರ ಚಿತ್ರಣ-ವಸ್ತು ವಿಷಯಗಳಲ್ಲಿ ಹೊಂದಿರುವ ವ್ಯತ್ಯಾಸವನ್ನು ಎತ್ತಿ ಹೇಳಿದ್ದಾರೆ. ‘ತೀರ್ಥಕಂರರ ಪುರಾಣಗಳು’ ಎಂಬ ಮತ್ತೊಂದು ಲೇಖನದಲ್ಲಿ ತೀರ್ಥಂಕರರ ಚರಿತ್ರೆ ಹೊಂದಿದ ಕೃತಿಗಳ ಪಟ್ಟಿಕೊಟ್ಟು, ೧೧ ಜನ ತೀರ್ಥಂಕರರ ಚರಿತ್ರೆಗಳು, ೨೫ ಪುರಾಣಕಾವ್ಯಗಳ ರಚನೆಗೆ ಎಡೆ ಮಾಡಿಕೊಟ್ಟವು ಎಂದಿದ್ದಾರೆ.

ಇವಲ್ಲದೆ ಒಬ್ಬೊಬ್ಬ ಕವಿಯನ್ನು ಕುರಿತು ಕುಂದಣಗಾರ ಅವರು ಹಲವಾರು ಲೇಖನಗಳನ್ನು ಬರೆದಿದ್ದಾರೆ. ಅದರಲ್ಲಿ ಅವರಿಗೆ ಪಂಪನೆಂದರೆ ಎಲ್ಲಿಲ್ಲದ ಆದರಾಭಿಮಾನ ಎಂಬುದು ಅವರ ಲೇಖನಗಳಿಂದ ಸ್ಪಷ್ಟವಾಗುತ್ತಿದೆ. ಹೀಗಾಗಿ ಅವನ ಜೀವನ-ಕೃತಿ ಕುರಿತು ಆರು ಲೇಖನಗಳನ್ನು ಅವರು ಬರೆದಿದ್ದಾರೆ.

೧೯೫೧ರಲ್ಲಿ ಲಕ್ಷ್ಮೇಶ್ವರದ ಆದಿಕವಿ ಪಂಪ ಸ್ಮಾರಕ ಸಮಿತಿಯವರು ಹೊರತಮದ ‘ಪಂಪಮಹಾಕವಿ’ ಎಂಬ ಕೃತಿಗೆ ಬರೆದ ಲೇಖನ ‘ಪಂಪನ ಹಿನ್ನೆಲೆ’ ಎಂಬುದು. ಇಲ್ಲಿ ಅವರು ಪಂಪನ ಹಿಂದೆ ಆಗಿಹೋದ ಜೈನ ಪುರಾಣಕಾರರು, ಅವರ ಪುರಾಣಗ್ರಂಥಗಳ ಪ್ರಭಾವ ಪಂಪನ ಮೇಲೆ ಎಷ್ಟಾಗಿದೆ, ಆತನ ಪಾಂಡಿತ್ಯವೆಷ್ಟು, ಆತನ ಧಾರ್ಮಿಕ ಭಾವನೆಗಳು ಹೇಗಿದ್ದವು. ಅವುಗಳ ಪರಿಣಾಮ ಮುಂದೆ ಜೈನಾಗಮದ ಮೇಲೆ ಎಷ್ಟಾಯಿತು, ಹೇಗಾಯಿತು, ಅವನ ಭಾಷೆ ಮಾರ್ಪಾಟುಗೊಂಡುದೆಂತು ಇವೇ ಮುಂತಾದ ವಿಷಯಗಳನ್ನು ಇಲ್ಲಿ ಚರ್ಚಿಸಿದ್ದಾರೆ. ‘ಆದಿಕವಿ ಪಂಪ’ ಎಂಬ ಅಪ್ರಕಟಿತ ಲೇಖನದಲ್ಲಿ ಪಂಪನ ಕವಿತಾಶಕ್ತಿ, ಪ್ರತಿಭಾಶಕ್ತಿಗಳ ವಿವೇಚನೆ ಇದೆ. ಪಂಪನ ಹಿನ್ನೆಲೆಯ ವಿಚಾರ ಇಲ್ಲಿಯೂ ಇದ್ದು, ಆತನ ಕೃತಿಗಳ ಮೇಲೆ ಜಿನಸೇನ, ವ್ಯಾಸ ಮೊದಲಾದವರ ಪ್ರಭಾವವಾಗಿರುವುದನ್ನು ಗುರುತಿಸಿದ್ದಾರೆ. ಜೊತೆಗೆ ರನ್ನ, ನಾಗಚಂದ್ರ ಮೊದಲಾದವರು ಈತನಿಂದ ಪ್ರಭಾವಿತವಾಗಿರುವ ವಿಚಾರವೂ ಇಲ್ಲಿದೆ.

ಮತ್ತೆರಡು ಲೇಖನಗಳು i)ಆದಿಪಂಪನ ಆದಿಪುರಾಣ ii) ಪಂಪನು ಜಿನಸೇನರನ್ನು ಅನುಸರಿಸಿದ್ದಾನೆ ಎಂಬಿವು ಆದಿಪುರಾಣದ ವಿವೇಚನೆಗೆ ಮೀಸಲಾಗಿವೆ. ಮೊದಲ ಲೇಖನದಲ್ಲಿ ಆದಿಪುರಾಣದಲ್ಲಿ ಒಂದು ಮೂರಾಂಶಭಾಗ ಕಾವ್ಯವಿದ್ದರೆ ಎರಡುಮೂರಾಂಶಭಾಗ ಧಾರ್ಮಿಕ ವಿಷಯ ತುಂಬಿದೆ ಎಂದು ಹೇಳಿ, ಅಲ್ಲಿಯ ಧಾರ್ಮಿಕವಿಷಯಗಳ ವಿವೇಚನೆ ಮಾಡಿದ್ದಾರೆ. ಎರಡನೆಯ ಲೇಖನದಲ್ಲಿ ಪಂಪನು ಭವಾವಳಿ, ಚರಿತ್ರೆ, ಶಾಸ್ತ್ರ, ಭಾಷೆ, ಊಹೆ, ಭಾವ, ಅಲಂಕಾರ ಮುಂತಾದ ಸಂದರ್ಭದಲ್ಲಿ ಚಾಚೂತಪ್ಪದೆ ಜಿನಸೇನರನ್ನು ಅನುಸರಿಸಿದ್ದಾನೆ ಎಂದಿದ್ದಾರೆ.

ಪಂಪನು ಜಿನಸೇನರನ್ನು ಅನುಸರಿಸಿದಂತೆ ಮಾಘನಂದ್ಯಾಚಾರ್ಯರು  ತಮ್ಮ ‘ಶಾಸ್ತ್ರಸಾರ ಸಮುಚ್ಚಯ’ದಲ್ಲಿ ಪಂಪನನ್ನು ಹೇಗೆ ಅನುಸರಿಸಿದ್ದಾರೆ ಎಂಬುದನ್ನು ‘ಆದಿಪಂಪನೂ ಸಮುದಾಯದ ಮಾಘನಂದಿಯಾ’ ಎಂಬ ಲೇಖನದಲ್ಲಿ ವಿವೇಚಿಸಿದ್ದಾರೆ. ಹೀಗೆ ಕವಿತಾ ಗುಣಾರ್ಣವ ಪಂಪನನ್ನು ಮಾಘನಂದ್ಯಾಚಾರ್ಯರು ಅನುಸರಿಸಿರುವ ವಿಷಯವನ್ನು ಮೊಟ್ಟಮೊದಲು ಪಂಡಿತರ ಗಮನಕ್ಕೆ ತಂದವರು ಪ್ರೊ. ಕುಂದಣಗಾರ ಅವರು. ಇಲ್ಲೆಲ್ಲ ಕುಂದಣಗಾರ ಅವರ ಅಧ್ಯಯನ ಆಳ, ಹರವು, ತೌಲನಿಕದೃಷ್ಟಿ ಎದ್ದುಕಾಣುತ್ತಿದೆ.

ಅದೇ ರೀತಿ ರತ್ನಾಕರವರ್ಣಿಯನ್ನು ಕುರಿತು ಕುಂದಣಗಾರ ಅವರು ಎರಡು ಲೇಖನಗಳನ್ನು ಬರೆದಿದ್ದಾರೆ. ‘ರತ್ನಾಕರವರ್ಣಿಯ ಭರತೇಶ’ ಎಂಬ ಲೇಖನದಲ್ಲಿ ಜಿನಸೇನರು ಪೂರ್ವಪುರಾಣದಲ್ಲಿ ಭರತನ ಚರಿತ್ರೆಯನ್ನು ಸಂಕ್ಷೇಪಗೊಳಿಸಿ ಅನ್ಯಾಯವೆಸಗಿದ್ದರೆ ರತ್ನಾಕರ ಅವನನ್ನು ಕಥಾನಾಯಕನನ್ನಾಗಿಸಿ ಒಬ್ಬ ಆದರ್ಶವ್ಯಕ್ತಿಯಾಗಿ ಚಿತ್ರಿಸಿದ್ದಾನೆ ಎಂದಿದ್ದಾರೆ, ಆ ಪಾತ್ರದ ಒಳ್ಳೆಯ ಗುಣಗಳನ್ನೆಲ್ಲ ಎತ್ತಿ ಹೇಳಿದ್ದಾರೆ. ‘ಭರತೇಶನು ಅಣ್ಣನಾಗಿ’ ಎಂಬ ಲೇಖನದಲ್ಲಿ ರತ್ನಾಕರವರ್ಣಿ ಭರತನನ್ನು ಉದಾತ್ತನಾಯಕನನ್ನಾಗಿ ಚಿತ್ರಿಸಿದ್ದಾನೆ ಎಂದು ಹೇಳಿ, ಅವನು ಬಾಹುಬಲಿಯಾದಿಯಾಗಿ ತನ್ನ ಸಹೋದರರ ಬಗೆಗೆ ಹೊಂದಿದ್ದ ಒಳ್ಳೆಯ ಭಾವನೆಗಳನ್ನು ಚಿತ್ರಿಸಿದ್ದಾರೆ.

‘ಜನ್ನ ಮತ್ತು ನೇಮಿಚಂದ್ರ-ಕಾವ್ಯ ಕಲ್ಪನೆ’ ಎಂಬ ಲೇಖನದಲ್ಲಿ ‘ನೇಮಿಜನ್ನಮರೀರ್ವರೆ ಕರ್ಣಾಟ ಕೃತಿಗೆ ಸೀಮಾಪುರುಷರ್’ ಎಂಬ ಮಧುರನ ಮಾತಿಗೆ ಅವರೀರ್ವರ ಕಾವ್ಯಗಳು ಶೃಂಗಾರರಸಭರಿತವಾಗಿದ್ದು ಸಹೃದಯರಿಗೆ ಆನಂದವನ್ನು ಕೊಡುತ್ತಿದ್ದುದೇ ಕಾರಣವಾಗಿರಬೇಕು ಎಂದಿದ್ದಾರೆ. ‘ನೇಮಿಚಂದ್ರ’ ಎಂಬ ಮತ್ತೊಂದು ಲೇಖನದಲ್ಲಿ ಕವಿಯ ಇತಿವೃತ್ತ ಹಾಗೂ ಕೃತಿಗಳನ್ನು ಪರಿಚಯಿಸಿದ್ದಾರೆ. ಲೀಲಾವತಿ ಕಾವ್ಯದ ಮೇಲೆ ಪ್ರಭಾವ ಬೀರಿದ ಕೃತಿಗಳ ವಿಶ್ಲೇಷಣೇಯಲ್ಲಿ ಕುಂದಣಗಾರ ಅವರು ತಮ್ಮ ಅಪೂರ್ವಪಾಂಡಿತ್ಯ ತೋರಿದ್ದಾರೆ. ಅಲ್ಲದೆ ಈತನಿಂದ ಷಡಕ್ಷರದೇವ, ಆಂಡಯ್ಯ ಮೊದಲಾದವರು ಪ್ರಭಾವಿತರಾಗಿರುವುದನ್ನು ಗುರುತಿಸಿ ನೇಮಿಚಂದ್ರನ ಹಿರಿಮೆಯನ್ನು ವ್ಯಕ್ತಗೊಳಿಸಿದ್ದಾರೆ.

ಹಸ್ತಿಮಲ್ಲನ ಆದಿಪುರಾಣ, ನಿಂಬಸಾಮಂತಚರಿತೆಯ ಕರ್ತೃವನ್ನು ಕುರಿತ ‘ಪಾರ್ಶ್ವ’ಎಂಬ ಲೇಖನಗಳು ಪರಿಚಯಾತ್ಮಕವಾಗಿವೆ. ಶಾಮಕುಂದಾಚಾರ್ಯ-ತುಂಬಳೂರಾಚಾರ್ಯ-ಮತ್ತು ಸಂತ ಭದ್ರಾಚಾರ್ಯ ಎಂಬ ಲೇಖನ ‘ಕೇಶವ’ ಎಂಬ ಹೆಸರಿನಲ್ಲಿದ್ದು-ಇಲ್ಲಿ ಇಂದ್ರನಂದಿಭಟ್ಟಾರಕರ ಶ್ರುತಾವತಾರ, ಚಾವುಂಡರಾಯನ ಚಾವುಂಡರಾಯ ಪುರಾಣಗಳ ಆಧಾರ ಮೇಲೆ ಇವರ ಕಾಲವನ್ನು ಕಂಡು ಹಿಡಿಯುವ ಮೊದಲ ಪ್ರಯತ್ನ ಮಾಡಿದ್ದಾರೆ. ‘ವಡ್ಡಾರಾಧನೆಯ ಕಾಲ, ದೇಶ’ ಎಂಬ ಲೇಖನದಲ್ಲಿ ಆಪೂರ್ವದ ಎಲ್ಲ ಸಂಶೋಧಕರ ಅಭಿಪ್ರಾಯಗಳನ್ನು ಗಮನಿಸಿ ಅದರ ಕಾಲ ಕ್ರಿ.ಶ. ೯೨೦ ಎಂದಿದ್ದಾರೆ. ಭಾಷೆ, ಶೈಲಿ, ಶಬ್ದ ಸಂಪತ್ತಿನ ಆಧಾರದಿಂದ ಅದು ಮಲೆನಾಡು ಪ್ರದೇಶದ್ದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಅದೇ ರೀತಿ ವಚನ ಸಾಹಿತ್ಯಕ್ಕೆ ಸಂಬಂಧಿಸಿಯೂ ಹಲವಾರು ಲೇಖನಗಳನ್ನು ಬರೆದಿದ್ದಾರೆ. ‘ವಚನ ಸಾಹಿತ್ಯ’ ಮತ್ತು ‘ವಚನಕಾರರಲ್ಲಿ ಭಕ್ತಿ’ ಎಂಬೆರಡು ಪ್ರಬಂಧಗಳಲ್ಲಿ ಪ್ರಮುಖ ವಚನಕಾರರ ಪರಿಚಯದ ಜೊತೆಗೆ ಜೈನ ಸಾಹಿತ್ಯಕ್ಕೂ, ವಚನ ಸಾಹಿತ್ಯಕ್ಕೂ, ಕೀರ್ತನೆಗಳಿಗೂ ಇರುವ ಸಾಮಾನ್ಯ ವ್ಯತ್ಯಾಸಗಳನ್ನೂ, ವಚನ ಸಾಹಿತ್ಯದ ಭಾಷೆಯ ಸ್ವರೂಪವನ್ನೂ ಎತ್ತಿ ಹೇಳಿದ್ದಾರೆ. ಇವುಗಳಿಂದ ಕುಂದಣಗಾರ ಅವರಿಗೆ ವೀರಶೈವ ಸಾಹಿತ್ಯದ ಮೇಲಿರುವ ಭಕ್ತಿ, ಶ್ರದ್ಧೆಗಳು ಸ್ಪಷ್ಟವಾಗುತ್ತಿವೆ. ‘ಶಿವಶರಣರ ವಚನ’ಗಳಲ್ಲಿ, ಅನುಭವಪದಗಳಲ್ಲಿ ತತ್ವಜ್ಞಾನವಿದ್ದರೂ ಅವು ಕಾವ್ಯಗಳೆ ಎಂಬುದು ಕುಂದಣಗಾರ ಅವರ ಇನ್ನೊಂದು ಲೇಖನ. ಇಲ್ಲಿ ಬಸವಣ್ಣ, ಅಕ್ಕಮಹಾದೇವಿ, ಪ್ರಭುದೇವರ ವಚನಗಳಲ್ಲಿ ತತ್ವಜ್ಞಾನ ತುಂಬಿರುವುದನ್ನು ಉದಾಹರಣೆ ಸಹಿತ ವಿವರಿಸಲಾಗಿದೆ. ಜೊತೆಗೆ ತತ್ವಪದಕಾರರಾದ ದಾಡಿಬೀಡಿ ಮಲ್ಲಪ್ಪ, ಮುಪ್ಪಿನ ಷಡಕ್ಷರಿ, ನಿಜಗುಣರು, ಬಾಲಲೀಲಾ ಮಹಾಂತ ಶಿವಯೋಗಿ ಮುಂತಾದವರ ಹಾಡುಗಳಲ್ಲಿ ಮಡುಗಟ್ಟಿರುವ ತಾತ್ವಿಕಾಂಶಗಳ ವಿವರಣೆಯ ಜೊತೆಗೆ ಅವು ಶ್ರೇಷ್ಠ ಮಟ್ಟದ ಹಾಡುಗಳು ಎಂಬುದನ್ನೂ ಎತ್ತಿತೋರಿದ್ದಾರೆ.

ಕೆಲವೊಂದು ಕಾಲಖಂಡದ ಸಾಹಿತ್ಯ ಕೃಷಿಯನ್ನು ಕುರಿತು ಕುಂದಣಗಾರ ಅವರು ಲೇಖನಗಳನ್ನು ಬರೆದಿದ್ದಾರೆ. ಅವುಗಳಲ್ಲಿ ‘ವಿಜಯನಗರ ಅರಸರ ಕಾಲದ ಕನ್ನಡ ಸಾಹಿತ್ಯ’ ಎಂಬ ಲೇಖನ ೧೯೩೯ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಮಾರಕ ಮಹೋತ್ಸವವು ಪ್ರಕಟಿಸಿದ ‘ಅರುಣೋದಯ’ದಲ್ಲಿ ಪ್ರಕಟವಾಗಿದೆ. ಆ ಎರಡುನೂರು ವರ್ಷಗಳ ಅವಧಿಯಲ್ಲಿ ಮೂಡಿಬಂದ ವೀರಶೈವ, ಬ್ರಾಹ್ಮಣ, ಜೈನ ಸಾಹಿತ್ಯದ ವಿಶ್ಲೇಷಣೆಯ ಜೊತೆಗೆ ಆ ಕಾಲದ ಶಾಸನದ ಸಾಹಿತ್ಯದ ಪರಿಚಯವೂ ಇದೆ. ಇಂಥದೆ ಮತ್ತೊಂದು ಲೇಖನ ‘ಕೊಲ್ಹಾಪುರ ಸಂಸ್ಥಾನದೊಳಗಿನ ಕನ್ನಡ ಕವಿಗಳು’ ೧೯೨೮ರಲ್ಲಿ ಬೆಳಗಾವಿಯ ‘ಶ್ರೀ ಜಿನವಿಜಯ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇಲ್ಲಿ ಕುಂದಣಗಾರ ಅವರು ಕೊಲ್ಹಾಪುರವು ಪೂರ್ವದಲ್ಲಿ ಕನ್ನಡದ ಪ್ರದೇಶವಾಗಿದ್ದಿತು ಎಂಬುದನ್ನು ಹಲವಾರು ಆಧಾರಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಈ ಪ್ರದೇಶದಲ್ಲಿ ಆಗಿಹೋದ ರಾಜಾದಿತ್ಯ, ಕರ್ಣಪಾರ್ಯ, ಎರಡನೆಯ ಗುಣವರ್ಮ ಹಾಗೂ ಕಮಲಭವ ಈ ಕವಿ ಕಾವ್ಯಗಳ ಚರ್ಚೆ ಇಲ್ಲಿದೆ.

ಕುಂದಣಗಾರ ಅವರ ಇನ್ನೊಂದು ಆಸಕ್ತಿಯ ಕ್ಷೇತ್ರ ಛಂದಸ್ಸು ಇವಕ್ಕೆ ಸಂಬಂಧಿಸಿ ಅವರು ೧೩ ಲೇಖನಗಳನ್ನು ಬರೆದಿದ್ದಾರೆ. ಕುಮದೇಂದು ರಾಮಾಯಣದ ಪೂರ್ವಭಾಗ (೧ ರಿಂದ ೮ ಆಶ್ವಾಸ)ವನ್ನು ಸಂಪಾದಿಸುವ ಸಮಯದಲ್ಲಿ ಅದರೊಳಗಿನ ಪರಿವರ್ಧಿನಿಷಟ್ಪದಿಗಳಲ್ಲಿ ಅಧಿಕ ಮಾತ್ರೆಗಳಿದ್ದುದನ್ನು ನೋಡಿ ‘ಪರಿವರ್ಧಿನಿಷಟ್ಪದಿಯ ಲಕ್ಷಣವೇನು’? ಎಂಬ ಲೇಖನವನ್ನು ಬರೆದರು. ಇದು ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ಎರಡು ಕಂತುಗಳಲ್ಲಿ ಪ್ರಕಟವಾಯಿತು (೨೧ -೧, ೩). ಮೊದಮೊದಲು ಕುಂದಣಗಾರ ಅವರು ನಾಗವರ್ಮನ ಪರಿವರ್ಧಿನಿ ಷಟ್ಪದಿಯ ಲಕ್ಷ್ಯ ಲಕ್ಷಣಗಳ ಹಿನ್ನೆಲೆಯಲ್ಲಿ ಇವನ್ನು ತಿದ್ದಲು ಮುಂದಾದಾಗ ತಿಗಡೊಳ್ಳಿಯ ಚಂದ್ರಕಾಂತ ನಿಂಗರಾಜ ಪಾಟೀಲ ಎಂಬುವವರು ಅವನ್ನು ತಿದ್ದದಿರಲು ಸಲಹೆ ನೀಡಿದರು. ಮುಂದೆ ಕುಂದಣಗಾರ ಅವರು ಮ.ಪ್ರ. ಪೂಜಾರ ಅವರೊಂದಿಗೆ ಚರ್ಚಿಸಿ ಅದನ್ನು ಯಥಾವತ್ತಾಗಿ ಪ್ರಕಟಿಸಿದರು. ಈ ಎಲ್ಲ ಹಿನ್ನೆಲೆ ಹೇಳಿ ಲೇಖನದ ಕೊನೆಯಲ್ಲಿ “ನಾನು ಸರ್ವಜ್ಞನಲ್ಲ. ಕನ್ನಡ ಸಾಹಿತ್ಯದ ಅಭ್ಯಾಸ ಮಾಡುತ್ತಿರುವ ಒಬ್ಬ ವಿದ್ಯಾರ್ಥಿ. ಆದುದರಿಂದ ಈ ವಿಷಯದಲ್ಲಿ ಪಂಡಿತರ ಅಭಿಪ್ರಾಯವನ್ನು ದೊರಕಿಸಬೇಕೆಂದು ಅವರ ಮುಂದೆ ನನ್ನ ಹಿತಚಿಂತಕರ ಅಭಿಪ್ರಾಯವನ್ನಿಟ್ಟಿದ್ದೇನೆ” ಎಂದು ವಿನಮ್ರವಾಗಿ ಹೇಳಿಕೊಂಡು, ಆ ಬಗ್ಗೆ ಚರ್ಚಿಸಲು ಪಂಡಿತರಲ್ಲಿ ಕೇಳಿಕೊಂಡಿದ್ದಾರೆ.

ಛಂದಸ್ಸಿಗೆ ಸಂಬಂಧಿಸಿದ ಇನ್ನೂ ಮೂರು ಲೇಖನಗಳನ್ನು ಕುಂದಣಗಾರ ಅವರು ಇಂಗ್ಲೀಷಿನಲ್ಲಿ ಬರೆದಿದ್ದಾರೆ. `Nagavarma and Jayakirti on Kannada metres’ ಎಂಬ ಲೇಖನದಲ್ಲಿ ನಾಗವರ್ಮ ಹಾಗೂ ಜಯಕೀರ್ತಿಯವರು ಪ್ರಸ್ತಾಪಿಸಿರುವ ಕರ್ನಾಟಕ ವಿಷಯ ಜಾತಿ, ವೃತ್ತಿ ಮೊದಲಾದವನ್ನು ಲಕ್ಷ್ಯ-ಲಕ್ಷಣ ಸಹಿತ ವಿವರಿಸಿದ್ದಾರೆ. ಅವಶ್ಯವಿದ್ದಲ್ಲಿ ಅವನ್ನು ರೇಖಾ ಚಿತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ. ಗುರು-ಲಘುಗಳನ್ನು ಹಾಕಿ ಆಯಾ ಪ್ರಭೇದವನ್ನು ವರ್ಣಿಸಿದ್ದಾರೆ. ಜಯಕೀರ್ತಿ-ನಾಗವರ್ಮರ ಕೃತಿಗಳಲ್ಲಿರುವ ಸಾಮ್ಯವನ್ನು ಎತ್ತಿ ತೋರಿಸುವ ಒಂದು ಪರಿಪೂರ್ಣ ಸಂಶೋಧನಾತ್ಮಕ ಲೇಖನ ಇದಾಗಿದೆ.

ಅದೇ ರೀತಿ `Karnataka-Vishaya-Jati’ ಮತ್ತು `Sangatya and Satpadi Metres in Kannada Literature’ ಎಂಬ ಲೇಖನಗಳು ದೇಶಿಪದ್ಯಜಾತಿಗಳಿಗೆ ಸಂಬಂಧಿಸಿದೆ. ಇವುಗಳಲ್ಲಿ ಮೊದಲನೆಯ ಲೇಖನ ಬಾಂಬೆ ಯುನಿವರ್ಸಿಟಿ ಜರ್ನಲ್‌(ix-ii) ದಲ್ಲಿ ಪ್ರಕಟವಾಗಿದೆ. ಇಲ್ಲಿ ಅಚ್ಚಗನ್ನಡದ ದೇಶಿಯ ಪದ್ಯಜಾತಿಗಳಾದ ಮದನವತಿ, ಅಕ್ಕರ, ಚೌಪದಿ, ಗೀತಿಕೆ, ತ್ರಿಪದಿ, ಉತ್ಸಾಹ, ಷಟ್ಪದಿ, ಅಶ್ಕರ ಹಾಗೂ ಛಂದೋವತಂಸ ಇವು ಮೂಲತಃ ಅಂಶಗಣಾನ್ವಿತವಾಗಿದ್ದವು, ಬರುಬರುತ್ತ ಅವುಗಳಲ್ಲಿ ಕೆಲವು ಮಾತ್ರಾಗಣಕ್ಕೆ ಪರಿವರ್ತನೆಯಾದವು ಎಂದಿದ್ದಾರೆ. ಅಲ್ಲದೆ ಬ್ರಹ್ಮ, ವಿಷ್ಣು, ರುದ್ರಗಣಗಳು ಬೇರೆ ಬೇರೆ ಕೃತಿ-ಭಾಷೆಗಳಲ್ಲಿ ಪ್ರಯೋಗವಾಗಿರುವ ರೀತಿಯನ್ನು ಇಲ್ಲಿ ಚರ್ಚಿಸಿದ್ದಾರೆ. ಇನ್ನು ಎರಡನೆಯ ಲೇಖನದ ಮೊದಲರ್ಧ ಭಾಗದಲ್ಲಿ ಸಾಂಗತ್ಯದ ಬಗ್ಗೆ, ಉಳಿದರ್ಧ ಭಾಗದಲ್ಲಿ ಷಟ್ಪದಿಯ ಬಗ್ಗೆ ಚರ್ಚಿಸಿದ್ದಾರೆ. ಷಟ್ಪದಿಯ ಬಗ್ಗೆ ಚರ್ಚಿಸುವಾಗ ಅದರ ಉಗಮ-ವಿಕಾಸ ಹೇಳಿ, ಅದರ ಪ್ರಕಾರಗಳಾದ ಶರ-ಕುಸುಮ, ಭೋಗ-ಭಾಮಿನಿಗಳನ್ನು ರೇಖಾಚಿತ್ರದ ಮೂಲಕ ಗುರುತಿಸಿದ್ದಾರೆ. ಶರದ ದುಪ್ಪಟ್ಟು, ಪರಿವರ್ಧಿನಿ ಕುಸುಮದ ದುಪ್ಪಟ್ಟು ವಾರ್ಧಕಗಳಾದರೆ ಭೋಗ ಮತ್ತು ಭಾಮಿನಿಯ ದುಪ್ಪಟ್ಟು ಷಟ್ಪದಿಗಳು ಯಾವವು ಎಂಬ ಪ್ರಶ್ನೆಯೆನ್ನಿತ್ತಿದ್ದಾರೆ.

ಛಂದಸ್ಸಿಗೆ ಸಂಬಂಧಿಸಿದ ಇನ್ನೂ ಹಲವಾರು ಮೌಲಿಕ ವಿಚಾರಗಳನ್ನು ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾದ ಡಾ. ಡಿ. ಎಸ್‌.ಕರ್ಕಿ ಅವರ ‘ಕನ್ನಡ ಛಂದೋವಿಕಾಸ’ ಎಂಬ ಮಹಾಪ್ರಬಂಧದಲ್ಲಿ ಕಾಣಬಹುದು.

ಇವರು ವ್ಯಾಕರಣದ ವಿಷಯವಾಗಿ ಲೇಖನ ಬರೆಯದಿದ್ದರೂ ವೈಯ್ಯಾಕರಣಗಳನ್ನು ಕುರಿತು ಲೇಖನಗಳನ್ನು ಬರೆದಿದ್ದಾರೆ. ಅವುಗಳಲ್ಲಿ “ಕೇಶಿರಾಜನು ಜೈನನೇ?” ಮತ್ತು “ಕೇಶಿರಾಜನು ಜೈನನಲ್ಲ, ಬ್ರಾಹ್ಮಣನು’ ಎಂಬೆರಡು ಲೇಖನಗಳು ಕುಂದಣಗಾರ ಅವರ ಸಂಶೋಧನೆಯ ರೀತಿಯನ್ನು ಪರಿಚಯಿಸುತ್ತಿವೆ. ಡಾ. ಶಾಮಾಶಾಸ್ತ್ರಿಗಳವರು ಮಿಥಿಕ್‌ಸೊಸಾಟಿಯ ತ್ರೈಮಾಸಿಕದಲ್ಲಿ (೨೨-೧) ಕೇಶಿರಾಜನು ಜೈನನಾಗಿರದೆ ಸ್ಮಾರ್ಥ ಬ್ರಾಹ್ಮಣನೆಂದು ಸಾಧಿಸಲು ಪಂ. ಶ್ರೀನಿವಾಸ ರಂಗಾಚಾರ್ಯರ ಸಂಶೋಧನೆಯ ಮೇಲಿಂದ ಎಂಟು ಆಧಾರಗಳನ್ನು ಕೊಟ್ಟಿದ್ದರು. ಕುಂದಣಗಾರ ಅವರು ಪ್ರಾರಂಭದಲ್ಲಿ ಈ ಎಂಟೂ ಆಧಾರಗಳನ್ನು ಸಂಕ್ಷೇಪವಾಗಿ ವಿವರಿಸಿ ನಂತರ ಅವುಗಳಿಗೆ ಒಂದೊಂದಾಗಿ ಉತ್ತರವನ್ನು ಕೊಟ್ಟು ಆ ವಾದವನ್ನು ಅಲ್ಲಗೆಳೆಯುತ್ತ ಹೋಗಿದ್ದಾರೆ. ಇಲ್ಲಿ ಅವರು ಕೊಡುವ ಆಧಾರಗಳು, ಆಕರಗಳು, ದೃಷ್ಟಾಂತಗಳನ್ನು ನೋಡಿದರೆ ಎಂಥವರಿಗಾದರೂ ಆಶ್ಚರ್ಯವಾಗುತ್ತಿದೆ. ಹೀಗೆ ಶಾಮಾಶಾಸ್ತ್ರಿಗಳ ವಾದವನ್ನು ಅಲ್ಲಗೆಳೆದು ಕೇಶಿರಾಜನು ಜೈನನೆಂಬ ವಾದವನ್ನು ಅತ್ಯಂತ ಬಲವಾಗಿ ಪ್ರತಿಪಾದಿಸಿದ್ದಾರೆ. ಅದೇ ರೀತಿ ಮತ್ತೊಂದು ಲೇಖನ ‘ಕೇಶಿರಾಜನು ಜೈನನಲ್ಲ’ ಬ್ರಾಹ್ಮಣ’ -ಮೇಲ್ನೋಟಕ್ಕೆ ಕೇಶಿರಾಜನು ಬ್ರಾಹ್ಮಣನೆಂದು ಹೇಳಿರುವಂತೆ ಕಾಣುತ್ತಿದೆಯಾದರೂ ಅಲ್ಲಿಯೂ ಕುಂದಣಗಾರ ಅವರು ಕೇಶಿರಾಜನು ಜೈನನಂದೇ ಪ್ರತಿಪಾದಿಸಿರುವರು. ಈ ವಿಷಯದ ಬಗ್ಗೆ ಸಾಕಷ್ಟು ಚರ್ಚೆ ನಡೆದು ಕೊನೆಗೆ ಕುಂದಣಗಾರ ಅಭಿಪ್ರಾಯಕ್ಕೇ ಮನ್ನಣೆ ದೊರೆತುದು ಅವರ ಪಾಂಡಿತ್ಯ, ಪ್ರತಿಭೆಯ ದ್ಯೋತಕ.

‘ವೈಯ್ಯಾಕರಣಿ ಭೀಮ ಅಥವಾ ಭೀಮಸೇನ’ ಎನ್ನುವದು ಕುಂದಣಗಾರ ಅವರ ಇನ್ನೊಂದು ಲೇಖನ. ಕ್ರಿ.ಶ. ೬೦೦ ಕ್ಕಿಂತ ಹಿಂದೆ ಬಾಳಿದ್ದ ಭೀಮನು ಸಂಸ್ಕೃತದಲ್ಲಿ ಧಾತುಪಾಠ ರಚಿಸಿದ್ದು, ಕೇಶಿರಾಜನು ತನ್ನ ದರ್ಪಣದಲ್ಲಿ ಧಾತುಕೋಶ ರಚಿಸುವಲ್ಲಿ ಈತನನ್ನು ಅನುಸರಿಸಿದ್ದಾನೆ ಎಂದಿದ್ದಾರೆ. ಇಲ್ಲಿ ಭೀಮನ ಕಾಲದ ಬಗೆಗಿನ ಚರ್ಚೆ ವಿಶೇಷವಾಗಿದೆ.

ಗ್ರಂಥ ಸಂಪಾದನೆ:

ಪ್ರೊ. ಕುಂದಣಗಾರ ಅವರ ಇನ್ನೊಂದು ಆಸಕ್ತಿಯ ಕ್ಷೇತ್ರ ಗ್ರಂಥ ಸಂಪಾದನೆ. ಅವರು ಸಂಶೋಧನೆಯ ಹಾಗೆ ಪ್ರಾಚೀನ ಕೃತಿಗಳ ಸಂಪಾದನೆಯಲ್ಲಿಯೂ ಒಳ್ಳೆಯ ಹೆಸರು ಮಾಡಿದ್ದಾರೆ. ಅವರು ತಾವೊಬ್ಬರೆ ಎರಡು ಕೃತಿಗಳನ್ನೂ, ಇತರರೊಂದಿಗೆ ಮೂರು ಕೃತಿಗಳನ್ನೂ ಸಂಪಾದಿಸಿ ಪ್ರಕಟಿಸಿದ್ದಾರೆ. ಅವುಗಳ ಉದ್ದಕ್ಕೂ ಕುಂದಣಗಾರ ಅವರ ಗ್ರಂಥ ಸಂಪಾದನೆಯ ಪರಿಣತಿ ಎದ್ದು ಕಾಣುತ್ತಿದೆ.

ಪಂಪ ಮಹಾಕವಿ ವಿರಚಿತಂ ಆದಿಪುರಾಣಂ: (೧೯೫೩)

ಆ ಪೂರ್ವದಲ್ಲಿ ಈ ಕೃತಿಯನ್ನು ಎಸ್‌.ಜಿ. ನರಸಿಂಹಾಚಾರ್ ಅವರು ಸಂಪಾದಿಸಿ ಪ್ರಕಟಿಸಿದ್ದರು (೧೯೦೦). ಕುಂದಣಗಾರ ಅವರ ಕಾಲಕ್ಕೆ ಇದರ ಪ್ರತಿಗಳು ಮುಗಿದು ಹೋಗಿ ಗ್ರಂಥ ದುರ್ಲಭವಾದುದರಿಂದ ಈ ಪರಿಷ್ಕರಣೆಯ ಕಾರ್ಯಕ್ಕೆ ತೊಡಗಿದುದಾಗಿ ಹೇಳಿಕೊಂಡಿದ್ದಾರೆ. ಬೆಳಗಾವಿಯ ಜೈನ ವಿದ್ವಾಂಸರಾದ ಎ.ಪಿ. ಚೌಗಲೆಯವರು ಮೂಡಬಿದರೆಯ ಜೈನಬಸದಿಯ ಶ್ರುತಭಂಡಾರದೊಳಗಿನ ಎರಡು ಪ್ರತಿಗಳನ್ನು ದೊರಕಿಸಿ ಕೊಟ್ಟು, ಜೈನ ಪಾರಿಭಾಷಿಕ ಪದಗಳ ವಿಶ್ಲೇಷಣೆಯಲ್ಲಿ ನೆರವಾದುದರಿಂದ ಇವರನ್ನು ಕುಂದಣಗಾರ ಅವರು ಸಹಸಂಪಾದಕರೆಂದು ಸೇರಿಸಿಕೊಂಡಿದ್ದಾರೆ. ಗ್ರಂಥ ಪರಿಷ್ಕರಣೆಯ ಸಮಯದಲ್ಲಿ ಸಹಕರಿಸಿದ ಡಾ. ಎ.ಎನ್‌. ಉಪಾಧ್ಯೆ, ಪಾರಿಭಾಷಿಕ ಪದಕೋಶ ರಚಿಸುವಲ್ಲಿ ಸಹಕರಿಸಿದ ಜಿನದಾಸ ಫಡುಕಲೆ, ಉಪೋದ್ಘಾತ ತಯಾರಿಸುವಲ್ಲಿ ಸಹಕರಿಸಿದ ಡಾ.ಎಸ್‌.ಸಿ. ನಂದಿಮಠ ಮೊದಲಾದವರನ್ನು ಪ್ರಾರಂಭದಲ್ಲಿ ನೆನೆದಿದ್ದಾರೆ.

ಪಾಠ ಪರಿಷ್ಕರಣೆಯಲ್ಲಿ ತತ್ಪಾರ್ಥಸೂತ್ರ, ಪೂರ್ವಪುರಾಣ, ಯಶಸ್ತಿಲಕಚಂಪು, ಚಂದ್ರಪ್ರಭು ಪುರಾಣ, ಶಾಂತಿ ಪುರಾಣ ಮುಂತಾದ ಗ್ರಂಥಗಳ ಸಹಾಯ ಪಡೆದು ಸಂಶಯಿತ ಪಾಠಗಳನ್ನು ತಿದ್ದಲು ಪ್ರಯತ್ನಿಸಲಾಗಿದೆ. ಬೇರೆ ಬೇರೆ ಹಸ್ತಪ್ರತಿಗಳನ್ನು ನೋಡಿ ಆದಿಪುರಾಣದ ಶುದ್ಧಪಾಠವನ್ನು ಕೊಡಲು ಹೆಣಗಿದ್ದಾರೆ. ಪಾಠಾಂತರಗಳನ್ನು ಅಡಿಯಲ್ಲಿ ಕೊಟ್ಟಿದ್ದಾರೆ. ಹೀಗೆ ಎಸ್‌.ಜಿ. ನರಸಿಂಹಾಚಾರ್ ಪ್ರತಿಯಲ್ಲಿ ಉಳಿದಿದ್ದ ಹಲವಾರು ದೋಷಗಳನ್ನು ಇಲ್ಲಿ ತಿದ್ದಲು ಪ್ರಯತ್ನಿಸಲಾಗಿದೆ. ಅರ್ಥವಾಗದ ಪಾಠಗಳನ್ನು ಹಾಗೆಯೇ ಇಟ್ಟಿದ್ದಾರೆ.

ಪ್ರಾರಂಭದಲ್ಲಿ ೨೦ ಪುಟಗಳ ದೀರ್ಘವಾದ ಹಾಗೂ ಮೌಲಿಕವಾದ ಉಪೋದ್ಘಾತವನ್ನು ಬರೆದಿದ್ದಾರೆ. ಅದರಲ್ಲಿ ಕವಿಚರಿತೆ, ಕವಿಪ್ರಶಸ್ತಿ, ಪ್ರಸಕ್ತ ಗ್ರಂಥ ಭಾಗಗಳಿಗೆ ಸಮವಾದಿಯಾದ ಇತರ ಸಂಸ್ಕೃತ, ಕನ್ನಡ ಗ್ರಂಥ ಭಾಗಗಳು, ಗ್ರಂಥದಲ್ಲಿ ಪ್ರಯೋಗವಾದ ಛಂದಸ್ಸು, ಜೈನ ಪಾರಿಭಾಷಿಕ ಪದಗಳು ಮೊದಲಾದವನ್ನು ಚರ್ಚಿಸಲಾಗಿದೆ. ಇದರಿಂದ ಕುಂದಣಗಾರ ಅವರ ಆಳವಾದ ಅಧ್ಯಯನದ ಹರವು ಗೋಚರವಾಗುತ್ತಿದೆ.

ಅನುಬಂಧದಲ್ಲಿ-ಆದಿಪುರಾಣದ ನಾಮಕೋಶ, ಜೈನಪಾರಿಭಾಷಿಕ ಶಬ್ದಕೋಶ, ಕಠಿಣ ಶಬ್ದಗಳ ಕೋಶ, ವೃತ್ತಗಳು ಹಾಗೂ ಅವುಗಳ ಸಂಖ್ಯೆ ಹಾಗೂ ಪದ್ಯಗಳ ಅನುಕ್ರಮಣಿಕೆ ಕೊಟ್ಟಿರುವುದು ಈ ದಿಸೆಯಲ್ಲಿ ಅಧ್ಯಯನ ಮಾಡುವವರಿಗೆ ಸಹಾಯಕವಾಗಿವೆ. ಒಟ್ಟಾರೆ “ಪ್ರಸಕ್ತ ಗ್ರಂಥದ ಪ್ರಕಟನೆಯಿಂದ ಕನ್ನಡ ಸಾಹಿತ್ಯಾಭ್ಯಾಸಿಗಳಿಗೆ ವಿಶೇಷ ಪ್ರಯೋಜನವುಂಟಾಗಿದೆ” (ಎನ್‌. ಅನಂತರಂಗಾಚಾರ, ಪ್ರ.ಕ. ೨೪.೪.).

ಶ್ರೀ ಕುಮದೇಂದು ಮುನೀಶ್ವರ ವಿರಚಿತ ಮ.ಪ್ಪ.ಶ್ರೀ ಕಮದೇಂದು ರಾಮಾಯಣಂ (ಪೂರ್ವಭಾಗ-ಸಂಧಿಗಳು ೧-೮) ೧೯೩೬.

ಜೈನ ರಾಮಾಯಣವನ್ನು ಮೊದಲ ಬಾರಿಗೆ ಷಟ್ಪದಿಯಲ್ಲಿ ಬರೆದ ಕವಿ ಕುಮದೇಂದು. ಇದನ್ನು ಸಂಪಾದಿಸಿ ಪ್ರಕಟಿಸಿ ಮೊದಲಬಾರಿಗೆ ಕನ್ನಡಿಗರಿಗೆ ಪರಿಚಯಿಸಿದ ಶ್ರೇಯಸ್ಸು ಪ್ರೊ. ಕುಂದಣಗಾರ ಅವರದು.

ಇಲ್ಲಿ ಪೀಠಿಕಾಸಂಧಿ ಹಾಗೂ ಮೊದಲ ಎಂಟು ಸಂಧಿಗಳನ್ನೊಳಗೊಂಡ ಪೂರ್ವಭಾಗ ಮಾತ್ರವಿದೆ. ಇದನ್ನು ಬೇರೆ ಬೇರೆ ಮೂರು ಹಸ್ತಪ್ರತಿಗಳ ಸಹಾಯದಿಂದ ಸಂಪಾದಿಸಲಾಗಿದೆ. ಆದರೆ ಈ ಪರಿಷ್ಕರಣೆ ಕಾರ್ಯಗೊಂಡಾಗ ಕುಂದಣಗಾರ ಅವರಿಗೆ ಹಲವಾರು ಸಮಸ್ಯೆಗಳು ತಲೆದೋರಿದವು. ಅವುಗಳಲ್ಲಿ ಬಹುಮುಖ್ಯವಾದುದು ಈ ಕೃತಿಯಲ್ಲಿ ಪ್ರಯೋಗಗೊಂಡ ಪರಿವರ್ಧಿನಿಯಷಟ್ಪಧಿ ಲಕ್ಷಣ ಕುರಿತಾದುದು. ಅಲ್ಲಿಲಯ ಆರನೆಯ ಚರಣದಲ್ಲಿ ಕಂಡು ಬರುವ ಹೆಚ್ಚಿನ ಮಾತ್ರೆ ಕುರಿತಬೇಕೋ ಎಂಬ ಪ್ರಶ್ನೆ ಉದ್ಭವಿಸಿದಾಗ ಮ. ಪ್ರ. ಪೂಜಾರ, ಚದ್ರಕಾಂತ ನಿಂಗರಾಜ ಪಾಟೀಲ, ಆರ್. ನರಸಿಂಹಾಚಾರ್ ಮೊದಲಾದವರ ಅಭಿಪ್ರಾಯ ಪಡೆದು ಅದನ್ನು ಹಾಗೆಯೇ ಇಟ್ಟಿದ್ದಾರೆ. ಅದೇ ರೀತಿ ‘ಱೆ’ ಮತ್ತು ‘ಱ’ಕಾರ ಪ್ರಯೋಗಗಳ ಬಗೆಗೆ ವಿವೇಚಿಸಿ ಇವರೆಡನ್ನೂ ಈ ಕಾವ್ಯದಲ್ಲಿ ತರಲು ಪ್ರಯತ್ನಿಸಿದ್ದಾರೆ. ಇನ್ನು ಪಾಠಾಂತರಗಳನ್ನು ಕೊಡುವಾಗ “ಛಂದೋನಿಯಮವನ್ನು ಮೀರಿ ಹೆಚ್ಚು ಮಾತ್ರೆಗಳನ್ನು ಇಟ್ಟುಕೊಳ್ಳುವಾಗ ಪಾಠಾಂತರಗಳನ್ನೆಲ್ಲ ಅಡಿಟಿಪ್ಪಣೆಯಲ್ಲಿ ಕೊಟ್ಟಿದ್ದೇನೆ. ಮಿಕ ಪಾಠಾಂತರಗಳನ್ನೂ ಅಡಿಟಿಪ್ಪಣೆಯಲ್ಲಿ ಕೊಡಲಾಗಿದೆ. ಗ್ರಂಥಪಾತ ವಾದಲ್ಲಿ ನನ್ನ ಸೂಚನೆಗಳನ್ನೂ ಇನ್ನಿತರ ಸೂಚನೆಗಳನ್ನೂ ಚೌಕಕಂಸದಲ್ಲಿ ಹಾಕಿದ್ದೇನೆ” ಎಂದಿದ್ದಾರೆ.

ಕುಂದಣಗಾರ ಅವರು ಪಾಠ ನಿಷ್ಕರ್ಷಿಸುವಾಗ ಎಷ್ಟೊಂದು ಪರಿಶ್ರಮ ವಹಿಸಿದ್ದಾರೆ ಎಂಬುದನ್ನು ಅವರು ಕೊಟ್ಟಿರುವ ಪಠ್ಯಭಾಗದಿಂದಲೇ ತಿಳಿದುಕೊಳ್ಳಬಹುದು. ಒಂದು ಪಾಠವನ್ನು ನಿರ್ಣಯಿಸುವಾಗ ಅದು ಇತರೆಡೆ ಹೇಗೆ ಪ್ರಯೋಗವಾಗಿದೆ ಎಂಬುದನ್ನು ವಿಚಾರಿಸಿ ನಿರ್ಣಯಿಸಿರುವುದು ಅವರ ಗ್ರಂಥ ಸಂಪಾದನ ಶಾಸ್ತ್ರದ ಆಳವಾದ ಜ್ಞಾನಕ್ಕೆ ಸಾಕ್ಷಿ ನುಡಿಯುತ್ತಿದೆ. ಇವೆಲ್ಲವುಗಳಿಂದ ಪ್ರಾಚೀನ ಪಾಠಾಂತರಗಳನ್ನೂ ಅವುಗಳಿಗೆ ವಿವರಣೆಯನ್ನೂ ಕೊಟ್ಟು ಪರಿಷ್ಕರಿಸಿದ ಕುಂದಣಗಾರ ಅವರ ಈ ಕುಮುದೇಂದು ರಾಮಾಯಣವು ಒಳ್ಳೆಯ ಸಂಪಾದಿತ ಕೃತಿ ಎಂಬ ಪ್ರಶಂಸೆಗೆ ಪಾತ್ರವಾಗಿದೆ.

ಪ್ರಾರಂಭದ ಮುನ್ನುಡಿಯಲ್ಲಿ ಕವಿ, ಕಾಲ, ಕಥಾಸಾರವನ್ನಿತ್ತಿದ್ದಾರೆ. ಕೃತಿಯ ಕೊನೆಯ ಪರಿಶಿಷ್ಟದಲ್ಲಿ ಒಪ್ಪೋಲೆಯನ್ನು ಕೊಟ್ಟು ಅದರಲ್ಲಿ ಉಪಯುಕ್ತವಾದ ಕೆಲವು ತಿದ್ದುಪಡೆಗಳನ್ನು ಸೂಚಿಸಿದ್ದಾರೆ. ಆದರೆ ಶಬ್ದಾರ್ಥಕೋಶ, ಪಾರಿಭಾಷಿಕ ಪದಕೋಶ ಮೊದಲಾದವು ಇಲ್ಲಿ ಇಲ್ಲ.

ಮಲ್ಲಿಷೇಣಾಚಾರ್ಯ ವಿರಚಿತಂ ಪೂರ್ವಪುರಾಣಂ-೧೯೪೩:

ಕವಿಚರಿತೆಕಾರರಿಗೆ ದೊರೆಯದೆ ಇದ್ದ ಪೂರ್ವಪುರಾಣವನ್ನು ಪ್ರೊ. ಕುಂದಣಗಾರ ಅವರು ಡಾ.ಎ.ಎನ್‌.ಉಪಾಧ್ಯೆ ಅವರ ಮುಖಾಂತರ ದೊರಕಿಸಿಕೊಂಡು, ಇದನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ತಮಗೆ ದೊರೆತ ಹಸ್ತಪ್ರತಿಯ ಮೊದಲೆರಡು ಪುಟ ಇಲ್ಲವಾದ್ದರಿಂದ ಅದಕ್ಕೆ ಸಂಬಂಧಿಸಿದ ಬೇರೆ ಪ್ರತಿಗಳೂ ದೊರೆಯದ್ದರಿಂದ ಆ ಎರಡು ಪುಟಗಳಲ್ಲಿನ ವಿಷಯವನ್ನು ಪಂಪನ ಆದಿಪುರಾಣ ಮತ್ತು ನಾಗಚಂದ್ರನ ರಾಮಾಯಣಗಳ ಆಧಾರದಿಂದ ತುಂಬಿಕೊಟ್ಟಿದ್ದಾರೆ. ಅದರ ಶೈಲಿ ಮೂಲಕ್ಕಿಂತ ಭಿನ್ನವಲ್ಲ ಎನ್ನುವಷ್ಟರಮಟ್ಟಿಗಿದ್ದು ಕುಂದಣಗಾರ ಅವರು ಹಸ್ತಿಮಲ್ಲನ ಶೈಲಿಯನ್ನು ಎಷ್ಟರ ಮಟ್ಟಿಗೆ ಕರಗತ ಮಾಡಿಕೊಂಡಿದ್ದರು ಎಂಬುದಕ್ಕೆ ಸಾಕ್ಷಿ ನುಡಿಯುತ್ತಿದೆ. ಕುಂದಣಗಾರ ಅವರು ಪಠ್ಯಭಾಗದಲ್ಲಿ ಇಟ್ಟುಕೊಂಡಿರುವ ಪಾಠಗಳು ಸಮರ್ಪಕವೂ ಸರಿಯಾದವೂ ಇದ್ದು ಅವನ್ನೇ ಮುಂದೆ ಈ ಕೃತಿಯನ್ನು ಸಂಪಾದನೆ ಮಾಡಿರುವವರು ಅನುಸರಿಸಿದ್ದಾರೆ. ೧೦ ಪುಟದ ಪ್ರಸ್ತಾವನೆಯಲ್ಲಿ ಇಡೀ ಗ್ರಂಥವನ್ನು ಆದಿಪುರಾಣದೊಂದಿಗೆ ತುಲನಾತ್ಮಕವಾಗಿ ಅಭ್ಯಸಿಸಿದ್ದಾರೆ. ಪಾಠಭಿನ್ನತೆಯನ್ನು ಎತ್ತಿತೋರಿದ್ದಾರೆ. ಅಲ್ಲದೆ ಕವಿ-ಕಾಲವನ್ನು ಚರ್ಚಿಸಿದ್ದಾರೆ.

ಲೀಲಾವತಿ ಪ್ರಬಂಧ (೯, ೧೦ ಆಶ್ವಾಸಗಳು)-೧೯೩೬:

ಆ ಪೂರ್ವದಲ್ಲಿ ಎಸ್‌.ಜಿ. ನರಸಿಂಹಾಚಾರ್ ಮತ್ತು ಎಂ.ಎ. ರಾಮಾನುಜಯ್ಯಂಗಾರ ಅವರು ಸೇರಿ ಸಮಗ್ರ ಲೀಲಾವತಿ ಪ್ರಬಂಧವನ್ನು ಪ್ರಕಟಿಸಿದ್ದರೂ ಕುಂದಣಗಾರ ಅವರು ಎರಡು ಹಸ್ತ ಪ್ರತಿಗಳನ್ನು ಉಪಯೋಗಿಸಿ ಆ ಕೃತಿಯ ಎರಡು ಆಶ್ವಾಸಗಳನ್ನು ಮಾತ್ರ ವಿದ್ಯಾರ್ಥಿಗಳ ಸೌಲಭ್ಯಕ್ಕೆಂದೇ ಸಂಪಾದಿಸಿದಂತಿದೆ. ಹೀಗಾಗಿ ಇಲ್ಲಿ ಪಾಠಾಂತರಗಳಿಲ್ಲ. ಆದರೂ ಬಹಳಷ್ಟು ಕಡೆ ಸರಿಯಾದ ಮೂಲ ಪಾಠವನ್ನಿಟ್ಟುಕೊಂಡಿರುವ ಈ ಕೃತಿಯ ವಿಶೇಷತೆ. ಇಲ್ಲಿ ಅತ್ಯವಶ್ಯವಾಗಿಬೇಕಿದ್ದ ಕವಿ-ಕೃತಿ-ಕಥಾಸಾರವೂ ಇಲ್ಲದೆ ಇರುವುದು ದೊಡ್ಡ ಕೊರತೆಯನ್ನೆಸಿದೆ. ಬೇರೆ ಕಡೆ ತಾವೇ ಬರೆದಿದ್ದ ಲೇಖನವನ್ನು (ದಿ. ರಾಜಾರಾಮಿಯನ್‌೨೩-೨) ಇಲ್ಲಿ ಕೊಟ್ಟಿದ್ದರೂ ಈ ಕೊರತೆಯನ್ನು ನೀಗಬಹುದಿತ್ತು.

ಚಿನ್ಮಯ ಚಿಂತಾಮಣಿ-೧೯೩೦:

ಕಲ್ಯಾಣಕೀರ್ತಿ ಕೃತ ಚಿನ್ಮಯ ಚಿಂತಾಮಣಿಯನ್ನು ಪ್ರೊ. ಕುಂದಣಗಾರ ಅವರು ಎರಡು ಹಸ್ತಪ್ರತಿಗಳ ಸಹಾಯದಿಂದ ಸಿದ್ಧಪಡಿಸಿದ್ದಾರೆ. ಇದು ಅವರ ಮೊದಲ ಪರಿಷ್ಕೃತ ಗ್ರಂಥ. ಅದೇ ತಾನೇ ಅರ್ಧ ಮಾಗಿಧಿ ಉಪನ್ಯಾಸಕರಾಗಿ ಬಂದ ಪ್ರೊ. ಎ.ಎನ್‌. ಉಪಾಧ್ಯ ಅವರನ್ನು ಪ್ರೋತ್ಸಾಹಿಸಲೆಂದು ಅವರನ್ನು ಸಹಸಂಪಾದಕರೆಂದು ಸೇರಿಸಿಕೊಂಡಿದ್ದಾರೆ. ಉಪೋದ್ಭಾತದಲ್ಲಿ ಕವಿಯ ವಿಷಯವಾಗಿ ಏನನ್ನೂ ಹೇಳಿಲ್ಲ. ಆದರೆ ಇದರ ಭಾಷೆಯನ್ನು ಕುರಿತು “ಜೀವಂತ ಕನ್ನಡದ ಹೊಳಪು ಅಲ್ಲಲ್ಲಿ ಕಾಣುತ್ತದೆ. ಆಧ್ಯಾತ್ಮ ದೃಷ್ಟಿಯಿಂದ ಈ ಗ್ರಂಥದ ಮಹತ್ವವು ಹೆಚ್ಚಿರುತ್ತದೆ, ಎಂದಿದ್ದಾರೆ. ಕಲ್ಯಾಣಕೀರ್ತಿ ಸಂಸ್ಕೃತ, ಪ್ರಾಕೃತ, ಅಪಭ್ರಂಶ ಭಾಷೆಗಳಿಂದ ಎರವಲು ಪಡೆದಿರುವುದನ್ನು ಎತ್ತಿ ಹೇಳಿ ತಮ್ಮ ಆಳವಾದ ಅಭ್ಯಾಸದ ಹರವನ್ನು ವ್ಯಕ್ತಗೊಳಿಸಿದ್ದಾರೆ. ಜೊತೆಗೆ ಕನ್ನಡಕ್ಕೆ ಜೈನರಿತ್ತ ಕೊಡುಗೆಯನ್ನು, ಕನ್ನಡ ಭಾಷೆ ಸಮೃದ್ಧಗೊಳ್ಳಬೇಕಾಗಿರುವ ಬಗೆಯನ್ನು ವಿವರಿಸಿದ್ದಾರೆ.

ಕುಂದಣಗಾರ ಅವರ ತರುವಾಯ ಈ ಕೃತಿಯನ್ನು ಮಿರ್ಜಿ ಅಣ್ಣಾರಾಯರು, ಹ.ಕ. ರಾಜೇಗೌಡರು ಸಂಪಾದಿಸಿರಿವರಾದರೂ ಪಠ್ಯದ ದೃಷ್ಟಿಯಿಂದ ಕುಂದಣಗಾರ ಅವರ ಸಂಪಾದನೆಯೇ ಯೋಗ್ಯವಾದುದು ಎನ್ನಿಸಿದೆ. ��}�>���� P� ು ಮಹತ್ಕಾರ್ಯವನ್ನು ಸಾಧಿಸಿದ ಶ್ರೇಯ ಪ್ರೊ. ಕುಂದಣಗಾರ ಅವರದು.

 

ಇದಲ್ಲದೆ ಕವಿ-ಕಾವ್ಯವನ್ನು ಕುರಿತು ಪ್ರೊ.ಕುಂದಣಗಾರ ಅವರು ವಿದ್ವತ್ಪೂರ್ಣ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಅವನ್ನು ಜೈನ-ವೀರಶೈವ ಕವಿ ಕಾವ್ಯಗಳಿಗೆ ಸಂಬಂಧಿಸಿದ ಲೇಖನಗಳೆಂದು ವಿಭಜಿಸಿ ಅವಲೋಕಿಸಬಹುದು.