ಇದು ೧೩೩ ಸಾಂಗತ್ಯ ಪದ್ಯಗಳುಳ್ಳ ಒಂದು ಪುಟ್ಟ ಜೈನ ಧಾರ್ಮಿಕ ಕಾವ್ಯ. ಇಲ್ಲಿಯೂ ಪ್ರೊ. ಕುಂದಣಗಾರ ಅವರು ಪ್ರೊ. ಉಪಾಧ್ಯೆ ಅವರನ್ನು ಸಹ ಸಂಪಾದಕರೆಂದು ಸೇರಿಸಿಕೊಂಡಿದ್ದಾರೆ. ಮೂರು ಹಸ್ತಪ್ರತಿಗಳಿಂದ ಇದನ್ನು ಸಂಪಾದಿಸಿದ್ದಾರೆ. ಆದರೂ ಪಾಠಾಂತರಗಳನ್ನು ಕೊಟ್ಟಿಲ್ಲ. ನಾಲ್ಕು ಪುಟಗಳ ಮುನ್ನುಡಿಯಲ್ಲಿ ಕವಿ-ಕಾಲ ವಿಚಾರವಿಲ್ಲ. ಕೇವಲ ಕೃತಿ ಸಮೀಕ್ಷೆ ಇದೆ. ೧೯೬೭ರಲ್ಲಿ ಇದನ್ನು ಬಿ.ಬಿ. ಮಹೀಶವಾಡಿ ಅವರು ಪುನಃ ಪ್ರಕಟಿಸಿದ್ದರೂ ಕುಂದಣಗಾರ ಅವರ ಪರಿಷ್ಕರಣೆಯನ್ನು ಪ್ರಸ್ತಾಪಿಸಿಲ್ಲ. ಈ ಎರಡು ಪರಿಷ್ಕರಣೆಗಳನ್ನು ತೌಲನಿಕವಾಗಿನೋಡಿದರೆ ಮಹೀಶವಾಡಿಯವರ ಪರಿಷ್ಕರಣೆ ಬಹಳಷ್ಟು ಅಶುದ್ಧವಾಗಿರುವುದು ಸ್ಪಷ್ಟವಾಗುತ್ತಿದೆ. ಹ್ರಸ್ವ-ದೀರ್ಘ, ಅಲ್ಪಪ್ರಾಣ – ಮಹಾಪ್ರಾಣ, ಏಕವಚನ-ಬಹುವಚನ, ಈ ಕಾರಾಂತ-ಆ ಕಾರಾಂತ ಶ > ಸ ಭೇದ, ಪ್ರಾಸಾಕ್ಷರ ಮೊದಲಾದ ದೋಷಗಳು ಮಹೀಶವಾಡಿಯವರ ಪ್ರತಿಯಲ್ಲಿ ಹೇರಳವಾಗಿವೆ; ಪಾಠಶುದ್ಧಿಯ ದೃಷ್ಟಿಯಿಂದ ಕುಂದಣಗಾರ ಅವರ ಪ್ರತಿಯೇ ಮೌಲಿಕವಾದುದು ಎಂದು ಹೇಳಬಹುದಾಗಿದೆ.

ಇವೆಲ್ಲವುಗಳಿಂದ ಪ್ರೊ. ಕುಂದಣಗಾರ ಅವರ ಗ್ರಂಥ ಸಂಪಾದನ ಶಾಸ್ತ್ರ ಅಷ್ಟಾಗಿ ಬೆಳೆಯಿದಿದ್ದ ಕಾಲದಲ್ಲಿ ಒಳ್ಳೆಯ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ, ಆಳವಾದ ಅಭ್ಯಾಸದ ಹಿನ್ನೆಲೆಯಲ್ಲಿ ಹಲವಾರು ಮೌಲಿಕ ಕೃತಿಗಳನ್ನು ಸಂಪಾದಿಸಿ ಕನ್ನಡ ಸಾಹಿತ್ಯ ಕಣಜವನ್ನು ತುಂಬಿದರು ಎಂದು ಹೇಳಬಹುದು.

ಶಾಸನ ಸಂಶೋಧನೆ:

ಪ್ರೊ. ಕುಂದಣಗಾರ ಅವರ ಅತ್ಯಂತ ಆಸಕ್ತಿಯ ಹಾಗೂ ಪ್ರೀತಿಯ ಕ್ಷೇತ್ರ ಇದು. ಶಾಸನಗಳು ಒಂದು ನಾಡಿನ ಐತಿಹಾಸಿಕ, ಸಾಂಸ್ಕೃತಿಕ, ಸಾಹಿತ್ಯಿಕ ಮಹತ್ವವನ್ನು ಸಾರುವ ಅಧಿಕೃತ ದಾಖಲೆಗಳು ಎಂಬುದನ್ನು ಮನಗಂಡು ಆ ಕ್ಷೇತ್ರದಲ್ಲಿ ವ್ಯಾಪಕವಾಗಿ ಕಾರ್ಯ ಮಾಡಿದರು. ಹೀಗಾಗಿ ಇವರನ್ನು ವಿದ್ವಾಂಸರು ಫೀಟರ ಉತ್ತರಾಧಿಕಾರಿ ಎಂದು ಕರೆದಿದ್ದಾರೆ. ಊರೂರು ತಿರುಗಿ ಶಾಸನಗಳನ್ನು ಹುಡುಕಿ ಅವುಗಳ ಪಡಿಯಚ್ಚು ತಗೆದರು. ಮಠ-ಮಾನ್ಯಗಳನ್ನೆಲ್ಲ ಸುತ್ತಾಡಿ ತಾಮ್ರಶಾಸನಗಳನ್ನು ಸಂಗ್ರಹಿಸಿದರು. ಅವುಗಳ ಅಕ್ಷರಗಳನ್ನು ಓದುವ ಬಗೆಯನ್ನು ತಾವೇ ಪರಿಶ್ರಮದಿಂದ ಕಲಿತುಕೊಂಡರು. ಅವುಗಳನ್ನು ಕುರಿತು ಇಂಗ್ಲೀಷ ಹಾಗೂ ಕನ್ನಡ ಪತ್ರಿಕೆಗಳಲ್ಲಿ ಲೇಖನ ಬರೆದು ಅವುಗಳ ಮೇಲೆ ವಿಶೇಷ ಬೆಳಕು ಚೆಲ್ಲಿದರು. ಅದರಿಂದ ಸ್ವಾದಿ, ಗೋಕಾಕ, ಶಿರಸಂಗಿ, ರಾಯಭಾಗ, ಕೊಕಟನೂರ ಶಾಸನಗಳು ಬೆಳಕು ಕಂಡವು. ಅಲ್ಲದೆ ‘ರಟ್ಟರ ಶಾಸನಪದ ಗುಚ್ಛವು’ ಎಂಬ ಪುಸ್ತಕವನ್ನು ೧೯೨೮ರಷ್ಟು ಹಿಂದೆಯೇ ಪ್ರಕಟಿಸಿದರು. ಇಲ್ಲಿ ಸವದತ್ತಿ ರಟ್ಟರ ಕಾಲದ ಆರು ಶಾಸನಗಳನ್ನು ಸಂಗ್ರಹಿಸಿ ಅವುಗಳಲ್ಲಿ ಸಾಹಿತ್ಯಿಕ ಅಂಶಗಳುಳ್ಳ ಪದ್ಯಗಳನ್ನು ಕೊಟ್ಟು ಈ ಶಾಸನಗಳತ್ತ ಸಾಹಿತಿಗಳ ಗಮನವನ್ನು ಸೆಳೆದಿದ್ದಾರೆ.

ಹತ್ತು ವರ್ಷಗಳ ನಂತರ ಅಂದರೆ ೧೯೩೯ರಲ್ಲಿ `Inseriptions in Northern Karnataka and Kolhapur state’ ಎಂಬ ಮಹತ್ವದ ಕೃತಿಯನ್ನು ಪ್ರಕಟಿಸಿದರು. ೪೩ ಶಾಸನಗಳುಳ್ಳ ಇದರಲ್ಲಿ ಕುಂದಣಗಾರ ಅವರೇ ಶೋಧಿಸಿದ ಹಲವು ಶಾಸನಗಳಿವೆ. ೧೨ನೆಯ ಶತಮಾನದಲ್ಲಿದ್ದ ಕಲ್ಯಾಣ ಚಾಲುಕ್ಯರು, ಶಿಲಾಹಾರರು, ಕಲಚುರಿ ಅರಸರ ಈ ಶಾಸನಗಳು ತತ್ಕಾಲಿನ ಸಾಹಿತ್ಯಕ್ಕೆ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸವನ್ನು ಕಟ್ಟಿಕೊಡುತ್ತವೆ.

ಕೃತಿಯ ಪೀಠಿಕಭಾಗದಲ್ಲಿ ಕುಂದಣಗಾರ ಅವರು Dates and size of Inscriptions ಎಂಬ ತಲೆಬರಹದಡಿಯಲ್ಲಿ ಶಾಸನಗಳಲ್ಲಿ ಉಕ್ತವಾದ ಶಕವರ್ಷ ಕ್ರಿ.ಶ. ದ ದಿನಾಂಕ ಹಾಗೂ ವರ್ಷಗಳನ್ನೂ ಗುರುತಿಸುವಲ್ಲಿ ಬಹುಶ್ರಮಪಟ್ಟಿದ್ದಾರೆ. ಇಲ್ಲಿ ಆಪ್ಟೆ ಅವರ ನೆರವಿನೊಂದಿಗೆ ಸ್ವಾಮಿ ಕಣ್ಣು ಪಿಳ್ಳೆ ಅವರ ಪಂಚಾಂಗದ ಹಿನ್ನಲೆಯಲ್ಲಿ ಅವುಗಳ ದಿನಾಂಕವನ್ನು ಗುರುತಿಸಿದ್ದಾರೆ. ಕೆಲವು ಶಾಸನಗಳಲ್ಲಿ ಕಾಲದ ಪ್ರಸ್ತಾಪವಿಲ್ಲದಿದ್ದರೂ ಅವು ಯಾವ ಅರಸು ಮನೆತನವನ್ನು ಸೇರಿದವು ಎಂಬುದನ್ನು ಗುರುತಿಸುವಲ್ಲಿ ಕುಂದಣಗಾರ ಅವರ ಬಹುಮುಖ ಪಾಂಡಿತ್ಯ ಗೋಚರಿಸಿದೆ.

ಇಲ್ಲಿಯ ಒಟ್ಟು ೪೩ ಶಾಸನಗಳನ್ನು ದಾನಶಾಸನ, ವೀರಗಲ್ಲುಗಳು, ನಿಷಧಿಗಲ್ಲುಗಳು ಹಾಗೂ ಮಹಾಸತಿ ಕಲ್ಲುಗಳು ಎಂದು ವಿಭಜಿಸಿ ಅವುಗಳ ವಿವರವನ್ನಿತ್ತಿದ್ದಾರೆ. ದಾನಶಾಸನದಲ್ಲಿ ಉಕ್ತರಾದ ರಾಜರ ಮತ್ತು ಇತರ ಗಣ್ಯವ್ಯಕ್ತಿಗಳ ಬಿರುದು ಬಾವಲಿಗಳು, ದಂಡನಾಥ ಮಂತ್ರಿಮಹೋದಯರು ಸಾಮಂತರು, ವ್ಯಾಪಾರಸ್ಥರು , ದೇವಾಲಯ ನಿರ್ಮಾಣ, ದಾನಿಗಳು, ದಾನ ನೀಡಿದವರ ಹಾಗೂ ಸ್ವೀಕರಿಸಿದವರ ವ್ಯಕ್ತಿತ್ವ, ಧಾರ್ಮಿಕ ಪಂಥಗಳು ಹಾಗೂ ಶೈವಪದ್ಧತಿ, ಸಾಮಾಜಿಕ ಕಟ್ಟಳೆಗಳು ಮತ್ತು ವಿಧಿ ವಿಧಾನಗಳು, ಶಾಸನಗಳಲ್ಲಿನ ಸಾಹಿತ್ಯ ಮತ್ತು ಭಾಷೆ ಮುಂತಾದ ಎಲ್ಲ ಸಂಗತಿಗಳನ್ನು ಆಧಾರಗಳ ಮೂಲಕ ವಿವರಿಸಿದ್ದಾರೆ. ಮುಂದೆ ಇಲ್ಲಿಯೇ ಈ ೪೩ ಶಾಸನಗಳ ಇಂಗ್ಲೀಷ ಅನುವಾದವನ್ನು ಕೊಟ್ಟಿದ್ದಾರೆ. ಇದರಿಂದ ಇವರೆ ಅನುವಾದಕರೆಂದು ಗೋಚರವಾಗುತ್ತಿದೆ.

ಈ ಶಾಸನಗಳ ವಿಶ್ಲೇಷಣೆಯನ್ನೊಳಗೊಂಡ ೫೮ ಪುಟಗಳ ದೀರ್ಘವಾದ ಉಪೋದ್ಘಾತ ಕುಂದಣಗಾರ ಅವರ ವಿದ್ವತ್ತು, ತೌಲನಿಕ ದೃಷ್ಟಿ, ತೂಕತಪ್ಪದ ನಿರ್ಣಾಯಾತ್ಮಕ ವಿವೇಚನೆ, ತಲಸ್ಪರ್ಶಿಯಾದ ಸಂಶೋಧನ ವಿಚಾರಗಳಿಗೆ ನಿದರ್ಶನವೆನ್ನುವಂತಿದೆ.

ಇನ್ನು ಶಾಸನಗಳನ್ನು ಕುರಿತು ರಾಜ್ಯ ಮಟ್ಟದ, ರಾಷ್ಟ್ರಮಟ್ಟದ ಹಲವಾರು ಪ್ರಸಿದ್ಧ ಪತ್ರಿಕೆಗಳಲ್ಲಿ ವಿದ್ವತ್ಪೂರ್ಣ ಲೇಖನಗಳನ್ನು ಪ್ರೊ. ಕುಂದಣಗಾರ ಅವರ ಬರೆದಿದ್ದಾರೆ. ಸಧ್ಯ ದೊರೆತಿರುವ ೧೩ ಲೇಖನಗಳಲ್ಲಿ ೮ ಕನ್ನಡದಲ್ಲಿದ್ದರೆ, ೫ ಇಂಗ್ಲೀಷಿನಲ್ಲಿವೆ. ಇವುಗಳಲ್ಲಿ ‘ಉತ್ತರ ಕರ್ನಾಟಕದ ಶಾಸನಗಳು’ ಶಿಲಾಲಿಪಿಗಳ ಮಹತ್ವ, ಶಿಲಾಲಿಪಿ ಹಾಗೂ ‘ಚಂಪೂ ಕಾವ್ಯಗಳಲ್ಲಿರುವ ಗದ್ಯದ ಸ್ವರೂಪ’ ಎಂಬ ಲೇಖನಗಳಲ್ಲಿ ಶಾಸನ ಎಂದರೇನು? ಅವುಗಳಲ್ಲಿ ಪ್ರಕಾರಗಳೆಷ್ಟು? ಅವು ಒಳಗೊಂಡಿರುವ ವಿಷಯ ಏನು? ಎಂಬೀ ಸಾಮಾನ್ಯ ವಿಷಯಗಳನ್ನು ಚರ್ಚಿಸಿದ್ದಾರೆ. ಇನ್ನುಳಿದ ಐದು ಲೇಖನಗಳು ಒಂದೊಂದು ಶಾಸನದ ವಿವೇಚನೆಯನ್ನೊಳಗೊಂಡಿವೆ. ಉದಾಹರಣೆಗೆ ಗೋಕಾಕದ ತಾಮ್ರ ಶಾಸನ, ಕೊಕಟನೂರ ಚಂದ್ರೇಶ್ವರ ದೇವಾಲಯದೊಳಗಿನ ಶಿಲಾಶಾಸನ ಇತ್ಯಾದಿ ಇವುಗಳಲ್ಲಿ ಬಹುಮಹತ್ವದ್ದು. “ಸ್ವಾದೀಯ ತಾಮ್ರ ಶಾಸನಗಳು” ಎಂಬ ದೀರ್ಘಲೇಖನ ಜಯಕರ್ನಾಟಕ (ಸಂ. ೪-೧, ೨,೪,೬)ನಾಲ್ಕು ಸಂಚಿಕೆಗಳಲ್ಲಿ ಪ್ರಕಟವಾಗಿದ್ದು “ಕುಂದಣ” ಅಭಿನಂದನ ಗ್ರಂಥದಲ್ಲಿ ಪುನರ್ಮುದ್ರಣಗೊಂಡಿದೆ. ಇದನ್ನು ಕುರಿತು ಡಾ.ಆರ್.ಸಿ. ಹಿರೇಮಠ ಅವರು “ಸ್ವಾದಿ ಕರ್ನಾಟಕದ ಚಿಕ್ಕ ರಾಜಮನೆತನಗಳಲ್ಲಿ ಒಂದಾದರೂ ಸಾಂಸ್ಕೃತಿಕ ಬೆಳವಣಿಗೆಯ  ದೃಷ್ಟಿಯಿಂದ ಅದು ಮಾಡಿದ ಸೇವೆ ಅಪ್ರತಿಮವಾದುದು. ಆ ಮನೆತನದವರು ಕೊಟ್ಟ ದಾನವನ್ನು ವಿವರಿಸುವ ತಾಮ್ರಪಟಗಳನ್ನು ಓದಿ, ಪ್ರಕಟಿಸಿ, ಆ ಕಾಲದ ಸಾಮಾಜಿಕ ಜೀವನದ ಮೇಲೆ ಬೆಳಕು ಬೀರಿರುವರು” ಎಂದಿದ್ದಾರೆ. ಕುಂದಣಗಾರ ಅವರು ಮೊದಲು ಇಲ್ಲಿ ೧೬ನೆಯ ಶತಮಾನದ ನಾಣ್ಯಗಳು, ಧರ್ಮ, ಅಗ್ಗಳಿಕೆಗಳ ಬಗ್ಗೆ ಚರ್ಚಿಸಿ ಆಮೇಲೆ ಶಾಸನಪಾಠ ಕೊಟ್ಟಿದ್ದಾರೆ. ‘ಐತಿಹಾಸಿಕ ಸಂಗತಿಗಳು’ ಎಂಬ ಭಾಗದಲ್ಲಿ ನಗರ ಪ್ರದೇಶದ ಮತ್ತು ಬಿಳಗಿಯ ಅರಸರು ಹಾಗೂ ಭಟ್ಟಾಕಳಂಕದೇವನ ಗುರು ಪರಂಪರೆ ಹಾಗೂ ಸ್ವಾದಿಯ ಅರಸರ ವಂಶಾವಳಿ ಕೊಟ್ಟಿದ್ದಾರೆ. ಸಾಳ್ವದೇವನ ವಂಶಾವಳಿಯನ್ನು ಸಾಳ್ವಭಾರತ ಹಾಗೂ ಶಾಸನಗಳ ಆಧಾರದಿಂದ ಚರ್ಚಿಸಿ-ಸಾಳ್ವದೇವರಾಯನು ೧೬ನೆಯ ಶತಮಾನದ ಆದಿಭಾಗದಲ್ಲಿದ್ದನೆಂಬುದನ್ನು ಖಚಿತಪಡಿಸಿದ್ದಾರೆ. ಹೀಗೆ ಕುಂದಣಗಾರ ಅವರು ಪ್ರಕಟಿಸಿರುವ ಈ ಶಾಸನಗಳಿಂದ ಸ್ವಾದಿಯ ಅರಸರ ಹಾಗೂ ಮುನಿಗಳ ಪರಂಪರೆಯ ಮೇಲೆ ವಿಶೇಷವಾದ ಬೆಳಕು ಬಿದ್ದಿದೆಯೆಂದು ಹೇಳಬಹುದು.

ಇನ್ನು ಇಂಗ್ಲೀಷ ಲೇಖನಗಳಲ್ಲಿ ವಿಜಯನಗರದ ಅರಸ ಎರಡನೆಯ ಹರಿಹರನ ಶಾಸನ, ಮುಧೋಳ ಸಂಸ್ಥಾನದ ಮಂಟೂರಿನ ರಾಯತರ ಒಡೆತನಕ್ಕೆ ಸೇರಿದ ಶಾಸನ ಮತ್ತು ಅಕಾಲವರ್ಷದೇವನು ಶಕ ೮೮೨ (ಕ್ರಿ.ಶ. ೯೬೦)ರಲ್ಲಿ ಗೋವಿಂದಭಟ್ಟನಿಗೆ ದತ್ತಿ ನೀಡಿದ ಶಾಸನಗಳಿವೆ. ಶಿರಸಂಗಿ ಶಾಸನವನ್ನು ಕುರಿತ ಲೇಖನದಲ್ಲಿಕ – ಆ ಶಾಸನವು ಗ್ರಾಮೇಶ್ವರ ದೇವಾಲಯದ ಇತಿಹಾಸವನ್ನು ಹೇಳುತ್ತದೆ ಎಂದು ಹೇಳಿ, ತಾವೇ ಇದನ್ನು ಮೊದಲಬಾರಿಗೆ ಬೆಳಕಿಗೆ ತಂದುದಾಗಿ ಸ್ಪಷ್ಟಪಡಿಸಿದ್ದಾರೆ.

ಹೀಗೆ ಶಾಸನಗಳಿಗೆ ಸಂಬಂಧಿಸಿದ ೧೩ ಲೇಖನಗಳು ಕುಂದಣಗಾರ ಅವರ ಶಾಸನಶಾಸ್ತ್ರ ಪ್ರಾವಿಣ್ಯಕ್ಕೆ, ವಿದ್ವತ್ತಿಗೆ ಕನ್ನಡಿ ಹಿಡಿದಂತಿವೆ.

v. ಭೂಗರ್ಭ ಶೋಧನೆ:

ಪ್ರೊ. ಕುಂದಣಗಾರ ಅವರಿಗೆ ಮೊದಲಿನಿಂದಲೂ ಪ್ರಾಕ್ತನ ಶಾಸ್ತ್ರದಲ್ಲಿ ಅಭಿರುಚಿ. ಅವರು ಈ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯಿಂದ ಅವರೊಬ್ಬ ಇತಿಹಾಸ ಪ್ರಾಧ್ಯಾಪಕರೋ ಎಂಬ ಸಂದೇಹವನ್ನುಂಟು ಮಾಡುತ್ತಿತ್ತಂತೆ.

ಇವರು ಕೊಲ್ಲಾಪುರ ರಾಜಾರಾಮ ಕಾಲೇಜಿಗೆ ಹೋದ ಮೇಲೆ ಅಲ್ಲಿಯ ಪ್ರಾಚ್ಯವಸ್ತು ಸಂಗ್ರಹಾಲಯದ ನಿರ್ದೇಶಕರಾಗಿ ಕೆಲಕಾಲ ಕೆಲಸ ಮಾಡಿದರು. ೧೯೨೯ರಲ್ಲಿ ಈ ಪ್ರಾಚ್ಯವಸ್ತು ವಿಭಾಗವನ್ನು ಪ್ರಾಚ್ಯವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿ ಅದನ್ನೊಂದು ಸ್ವತಂತ್ರ ಸಂಸ್ಥೆಯಾಗಿಸಿದರು. ಎರಡೇ ವರ್ಷಗಳಲ್ಲಿ ಆ ಸಂಗ್ರಹಾಲಯ ಹಿಡಿಸದಷ್ಟು ವಸ್ತುಗಳ ಸಂಗ್ರಹವಾಯಿತು.

ಅವರ ಪ್ರಾಚ್ಯಶಾಸ್ತ್ರಕ್ಕೆ ಸಂದ ಕೊಡುಗೆಗಳಲ್ಲಿ ಕೊಲ್ಲಾಪುರದ ಬಳಿ ಬ್ರಹ್ಮಪುರಿಯಲ್ಲಿ ಸತತ ೧೫ ವರ್ಷಗಳವರೆಗೆ ಸ್ವಂತ ಖರ್ಚಿನಿಂದ, ಸ್ವಂತ ಗುದ್ದಲಿ ಹಿಡಿದು ನಡೆಸಿದ ಭೂಶೋಧನೆ ಬಹುಮಹತ್ವ ಪೂರ್ಣವಾದುದು. ಅಲ್ಲಿ ದೊರೆತ ನಿತ್ಯ ಜೀವನದ ವಸ್ತುಗಳು, ಕಂಚಿನ ಪಾತ್ರೆಗಳು ‘ಅಮಲಪುತನ ಚೆಂದನ್‌’ ಎಂಬ ಬ್ರಾಹ್ಮಿ ಅಕ್ಷರವುಳ್ಳ ಮಣ್ಣಿನ ಪಾತ್ರೆ, ನಾಣ್ಯಗಳು ಮೊದಲಾದವು ಕುಂದಣಗಾರ ಅವರ ಇತಿಹಾಸ ಶೋಧಕ್ಕೆ ಹೊಸ ಕೊಡುಗೆಗಳಾದವು. ಅಲ್ಲಿಯ ನಾಣ್ಯಗಳನ್ನು ಓದಿ ಸಾತವಾಹನರ ಕಾಲದ ಕನ್ನಡಿಗರ ಜನಜೀವನವನ್ನು ಸ್ಪಷ್ಟಪಡಿಸಿದರು. ದೊರೆತ ಇತರ ವಸ್ತುಗಳ ವಿಶ್ಲೇಷಣೆ ನಡೆಸಿ ಅವುಗಳನ್ನು ಕುರಿತು ‘Archeological finds in Brahmpuri Excavations, Kolhapur’ ಎಂಬ ವಿದ್ವತ್ತೂರ್ಣ ಲೇಖನವನ್ನು ಬರೆದರು. ಇವನ್ನೆಲ್ಲ ನೋಡಿ ಮಾರ್ಟಿಮೆರ್ ವ್ಹೀಲರ್ ಎಂಬ ಪಾಶ್ಚಾತ್ಯ ಪಂಡಿತ ‘ಅದ್ಭುತ, ಆಶ್ಚರ್ಯ’ ಎಂಬ ಉದ್ಘಾರ ತೆಗೆದರು. ಹೀಗೆ ಪ್ರೊ. ಕುಂದಣಗಾರ ಅವರು ನೆಲ ಬಗೆದು ತೆಗೆದ ಈ ಪುರಾತನ ವಸ್ತುಗಳು ಇಂದು ಕೊಲ್ಲಾಪುರದ ವಸ್ತು ಸಂಗ್ರಹಾಲಯದ ಬೆಲೆಬಾಳುವ ಸಂಪತ್ತಾಗಿವೆ.

ಪ್ರೊ. ಕುಂದಣಗಾರ ಅವರು ಬ್ರಹ್ಮಪುರಿಯ ಉತ್ಖನನ ಕಾರ್ಯವನ್ನು ಮುಗಿಸಿ ಕೊಲ್ಲಾಪುರದ ಪಂಚಗಂಗಾ ನದಿ ತೀರದತ್ತ ಲಕ್ಷ್ಯಹರಿಸಿದರು. ಅಲ್ಲಿ ಅಸಂಖ್ಯಾತ ಬೆಲೆಬಾಳುವ ವಸ್ತುಗಳು ದೊರೆತವು. ಅವುಗಳಿಂದ ಕನ್ನಡಿಗರ ಮೂಲಗಳ ಮೇಲೆ ಬೆಳಕು ಬೀಳುವಂತಾಯಿತು. ಅಲ್ಲಿ ರೋಮನ್‌ಸಮುದ್ರದೇವತೆಯ ಹಿತ್ತಾಳೆಯ ಅಪರೂಪದ ಮೂರ್ತಿಯೊಂದು ದೊರೆತು ಕೊಲ್ಲಾಪುರಕ್ಕೂ ಗ್ರೀಕರಿಗೂ ಇದ್ದ ಸಂಬಂಧದ ಮೇಲೆ ಬೆಳಕು ಬೀಳುವಂತಾಯಿತು.

ಅಲ್ಲದೆ ಇವರು ಕೊಲ್ಲಾಪುರದ ಬಳಿ ಇರುವ ಗಗನಬಾವಡಾ, ಪಾವಲೆ, ಅಳತೆ, ಫನ್ಹಾಳ ಮತ್ತು ಕರ್ಹಾಡಗಳಲ್ಲಿ ಬೌದ್ಧ ಗುಹೆಗಳನ್ನು ಗುರುತಿಸಿ ಅವುಗಳ ಹಿರಿಮೆಯನ್ನು ಸಾರಿದರು. ಜೊತೆಗೆ ಕರ್ನಾಟಕದಲ್ಲಿ ಬೌದ್ಧ ಧರ್ಮ ಹಬ್ಬಿಕೊಂಡಿದ್ದಿತು ಎಂಬ ಪ್ರಮುಖ ನಿರ್ಣಯಕ್ಕೆ ಬಂದ ಮೊದಲ ಸಂಶೋಧಕರೂ ಇವರಾಗಿದ್ದಾರೆ.

ನಾಣ್ಯಶಾಸ್ತ್ರಜ್ಞ:

ಪ್ರೊ. ಕುಂದಣಗಾರ ಅವರು ಒಬ್ಬ ಶ್ರೇಷ್ಠ ನಾಣ್ಯಶಾಸ್ತ್ರಜ್ಞರೂ ಆಗಿದ್ದರು. ಈ ಶಾಸ್ತ್ರವನ್ನು ಮೊಟ್ಟಮೊದಲ ಬಾರಿ ಅಭ್ಯಸಿಸಿದ ದೇಶಿ ವಿದ್ವಾಂಸರು ಇವರೇ ಆಗಿದ್ದರು. ಅವರು ಬರೆದ ‘ಪ್ರಾಚೀನ ಕನ್ನಡ ನಾಡಿನ ನಾಣ್ಯಪದ್ಧತಿ’ ಎಂಬ ಲೇಖನ ತುಂಬಾ ಅಪರೂಪದ್ದು. ಇದು ಹಲವಾರು ಗೊತ್ತಿಲ್ಲದ ನಾಣ್ಯಗಳ ಪರಿಚಯ ಮಾಡಿಕೊಡುತ್ತಿದೆ. ‘ಕೊಲ್ಲಾಪುರದೊಳಗಿನ ಪ್ರಾಚೀನಕಾಲದ ನಾಣ್ಯಪದ್ಧತಿ’ ಎಂಬ ಲೇಖನ ೧೫ನೆಯ ಕರ್ನಾಟಕ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲಾದ ಪ್ರಬಂಧ. ಬ್ರಹ್ಮಪುರಿಯ ಸಮೀಪ ಪಂಚಗಂಗೆಯ ಬಳಿ ದೊರೆತ ನಾಣ್ಯಗಳ ಇತಿಹಾಸವನ್ನು ಇಲ್ಲಿ ಕೊಡಲಾಗಿದೆ. ಇವುಗಳನ್ನು ಸೂಕ್ಷ್ಮವಾಗಿ ಅಭ್ಯಸಿಸಿ ಶಾತವಾಹನರ ಕಾಲದ ಕರ್ನಾಟಕದ ಜನಜೀವನದ ಮೇಲೆ ಹೊಸಬೆಳಕು ಚೆಲ್ಲಿದ್ದಾರೆ. ಈ ನಾಣ್ಯಗಳಲ್ಲಿರುವ ರಾಜರ ಹೆಸರು ಬ್ರಾಹ್ಮಿಲಿಪಿ, ನಾಣ್ಯದ ಮಧ್ಯದಲ್ಲಿರುವ ಚೈತ್ಸ ಅದರ ಮೇಲಿದ್ದ ಸ್ವಸ್ತಿಕ, ಬಲಗಡೆ ಬೋಧಿವೃಕ್ಷ ಮುಂತಾದ ಕುರುಹುಗಳಿಂದ ಕೊಲ್ಲಾಪುರ ಪ್ರಾಂತ್ಯದಲ್ಲಿ ಬೌದ್ಧ ಧರ್ಮವು ಆ ಕಾಲದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿತ್ತು ಎಂಬ ನಿರ್ಣಯಕ್ಕೆ ಬಂದಿದ್ದಾರೆ. ‘ಆಂಧ್ರದ ನಾಣ್ಯಗಳು’ ಎಂಬ ಇಂಗ್ಲೀಷ ಲೇಖನವನ್ನು ೧೯೩೦ರಲ್ಲಿ ಕಲ್ಕತ್ತೆಯ ನ್ಯುಮಿಸ್ಯಾಟಿಕ್‌ಸೊಸಾಟಿಯಲ್ಲಿ ಸಾದರ ಪಡಿಸಿದಾಗ ಇಡೀ ಭಾರತದ ವಿದ್ವಜ್ಜನ ತಲೆದೂಗಿದರು. ಅದೇ ವರ್ಷ ಆ ಸಂಸ್ಥೆ ತನ್ನ ಮುಖ ಪತ್ರಿಕೆಯಲ್ಲಿ ಆ ಲೇಖನವನ್ನು ಪ್ರಕಟಿಸಿ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿತು. ಇವೆಲ್ಲವುಗಳಿಂದ ಇವರೊಬ್ಬ ಉನ್ನತಮಟ್ಟದ ನಾಣ್ಯಶಾಸ್ತ್ರಜ್ಞ ಎಂಬ ಮಾತು ರುಜುವಾತಾಯಿತಲ್ಲದೆ ಈಗ ಆ ಕ್ಷೇತ್ರದಲ್ಲಿ ಕಾರ್ಯ ಮಾಡುವವರು ಪ್ರೊ. ಕುಂದಣಗಾರ ಅವರನ್ನು ನೆನೆಯದೆ ಒಂದಡಿ ಇಡಲು ಅಸಾಧ್ಯವಾಗಿದೆ.

ಹೀಗೆ ಈ ಎಲ್ಲ ಶಾಸ್ತ್ರಗಳು ಬೆಳೆಯದೆ ಇದ್ದ ಕಾಲದಲ್ಲಿ ಪ್ರೊ. ಕುಂದಣಗಾರ ಅವರು ಸ್ವಸಾಮರ್ಥ್ಯದಿಂದ, ಸ್ವಅಧ್ಯಾಯದಿಂದ ಈ ಶಾಸ್ತ್ರ ಶ್ರೀರೋಹಣಗಿರಿಯನ್ನು ಸುಲಭವಾಗಿ ಏರಿ ಮಹತ್ವದ ಸಾಧನೆಯನ್ನು ಮಾಡಿದರು.

ಸೃಜನ ಸಾಹಿತ್ಯ:

ಪ್ರೊ. ಕುಂದಣಗಾರ ಅವರ ಬಹುಮುಖ ವ್ಯಕ್ತಿತ್ವಕ್ಕೆ ಅವರ ಸೃಜನಶೀಲ ಬರಹವೂ ಸಾಕ್ಷಿ ನುಡಿಯುತ್ತಿದೆ. ಶ್ರೀಜಿನವಿಜಯ ಪತ್ರಿಕೆಯಲ್ಲಿ ೧೯೨೮ರಿಂದ ಎರಡು ವರ್ಷಗಳವರೆಗೆ ಧಾರವಾಹಿಯಾಗಿ ‘ಸರಸ್ವತಿ’ ಎಂಬ ತಮ್ಮ ಒಂದು ನೀಳತೆಯನ್ನು ಅವರು ಪ್ರಕಟಿಸಿದರು.‘ಕೇಶವ’ ಎಂಬ ಅಂಕಿತದಲ್ಲಿ ಬರೆಯಲಾದ ಈ ನೀಳ್ಗತೆ ನೈಜ ಘಟನಾವಳಿ, ಒಳ್ಳೆಯ ಪಾತ್ರಸೃಷ್ಟಿ, ಸರಳ ನಿರೂಪಣೆಯಿಂದ ಓದುಗರನ್ನು ಆಕರ್ಷಿಸುತ್ತಿದೆ.

ಪ್ರೊ. ಕುಂದಣಗಾರ ಅವರು ೧೯೩೭ರಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಕೃತಿ ‘ಮಹಾದೇವಿಯಕ್ಕ’ ಎಂಬ ಜೀವನಚರಿತ್ರೆಯನ್ನು ಬರೆದರು. ಇದು ಅವರ ಆತ್ಮಬಲವನ್ನು ಪರೀಕ್ಷಿಸಿ, ವಿಮರ್ಶಕರ ಗಮನವನ್ನು ಸೆಳೆಯಿತು. ಇದನ್ನು ಬರೆಯಲು ತೊಡಗಿದಾಗ ಕುಂದಣಗಾರ ಅವರಿಗೆ ಹಲವಾರು ತೊಡಕುಗಳು ಎದುರಾದವು . ಅವುಗಳಲ್ಲಿ ಮುಖ್ಯವಾದುದು ಅಕ್ಕನ ಚರಿತ್ರೆಯ ತೊಡಕು. ಅದನ್ನು ಬಿಡಿಸಹೋಗಿ ವೀರಶೈವನಲ್ಲದುದರಿಂದ ವೀರಶೈವರ ಅವಕೃಪೆ, ನಿಂದೆ, ಅಪಮಾನಗಳಿಗೆ ಪಾತ್ರನಾಗಬಹುದೆಂಬ ಭಯ. ಆದರೂ ಚರಿತ್ರೆಗೆ ಸಂಬಂಧಿಸಿದ ಎಲ್ಲ ಆಕರಗಳನ್ನು ಗಮನಿಸಿ, ಸಮಕಾಲೀನ ವಿದ್ವಾಂಸರ-ಸ್ವಾಮಿಗಳ ಜೊತೆ ಚರ್ಚಿಸಿ, ಸಮಾಲೋಚಿಸಿ ಮಹಾದೇವಿಯಕ್ಕನಿಗೆ ಮದುವೆಯಾಗಿತ್ತು ಎಂಬ ವಾದವನ್ನು ಸ್ಪಷ್ಟವಾದ ಆಧಾರಗಳಿಂದ ಮಂಡಿಸಿರುವುದು ಇಲ್ಲಿಯ ವಿಶೇಷತೆ.

ಕುಂದಣಗಾರ ಅವರು ಒಳ್ಳೆಯ ಸಂಶೋಧಕರೂ ಗ್ರಂಥ ಸಂಪಾದಕರೂ ಆಗಿರುವಂತೆ ಹಲವಾರು ಒಳ್ಳೆಯ ಪ್ರಬಂಧಗಳನ್ನು ಬರೆದಿದ್ದಾರೆ. ಅವು ಹರಟೆ, ವ್ಯಕ್ತಿಚಿತ್ರಣ, ಕಾವ್ಯ ಹಾಗೂ ಮಠಗಳು ಎಂದು ವಿಭಜಿಸಬಹುದಾಗಿದೆ. ಹರಟೆಗಳಲ್ಲಿ ಚಹಾದ ಮಹಾತ್ಮೆ, ಕಾಲೇಜು ವಿದ್ಯಾರ್ಥಿ, ಕಣ್ಣು ಮೊದಲಾದವು ತಮ್ಮ ಸೊಗಸಾದ ಶೈಲಿಯಿಂದ ಆಕರ್ಷಿಸುತ್ತಿವೆ. ದಿ.ಭ. ಚೌಗಲೆಯವರ ಸಾಹಿತ್ಯ ಸಂಶೋಧಕ ಜೀವನ, ಮರುಘಾಮಠದ ಪ್ರಸಾದ ನಿಲಯ ಅನ್ನದ ರೂಪದಲ್ಲಿ ಅಮೃತವನ್ನೂ ಕೊಟ್ಟಿದೆ. ಮೊದಲಾದ ಲೇಖನಗಳೂ ಪ್ರೊ. ಕುಂದಣಗಾರ ಅವರ ಸೊಗಸಾದ ನಿರೂಪಣೆಗೆ ಒಳ್ಳೆಯ ಉದಾಹರಣೆಯಾಗಿವೆ.

ವಿಮರ್ಶೆ:

ಪ್ರೊ. ಕುಂದಣಗಾರ ಅವರು ತಾವು ಸಂಪಾದಿಸಿದ ಕೃತಿಗಳ ಪ್ರಸ್ತಾವನೆಯಲ್ಲಿ ಆ ಕೃತಿಗಳ ಆಮೂಲಾಗ್ರ ವಿಮರ್ಶೆಮಾಡಿ ತಮ್ಮ ವಿಮರ್ಶೆಯ ಸೂಕ್ಷ್ಮದೃಷ್ಟಿಯನ್ನು ತೆರೆದು ತೋರಿದರೆ ಬೇರೆಯವರು ಸಂಪಾದಿಸಿದ ಕೃತಿಗಳನ್ನು ಪತ್ರಿಕೆಗಳಲ್ಲಿ ಕುರಿತು ಸ್ವತಂತ್ರವಾದ ವಿಮರ್ಶಾತ್ಮಕ ಲೇಖನಗಳನ್ನು ಬರೆದು ಆಯಾಕೃತಿಗಳ ಮೇಲೆ ಕ್ಷಕಿರಣ ಬೀರಲು ಪ್ರಯತ್ನಿಸಿದ್ದಾರೆ. ಅವರ ಒಟ್ಟು ಲೇಖನಗಳಲ್ಲಿ ೧೪ ವಿಮರ್ಶೆಯನ್ನೊಳಗೊಂಡಿವೆ. ಪ್ರೊ. ಟಿ.ಎಸ್‌. ವೆಂಕಣ್ಣಯ್ಯ, ಡಿ.ಎಲ್‌. ನರಸಿಂಹಾಚಾರ್ ಸಂಪಾದಿಸಿದ ರಾಘವಾಂಕಕವಿಯ ಸಿದ್ಧರಾಮ ಚರಿತ್ರೆ, ಪ್ರೊ. ಶಿ.ಶಿ. ಬಸವನಾಳ ಸಂಪಾದಿಸಿದ ಕೈವಲ್ಯ ದರ್ಪಣ, ತಿರುವಳ್ಳೂರು ಶ್ರೀನಿವಾಸ ರಾಘವಾಚಾರ್, ಡಿ.ಎಲ್‌. ನರಸಿಂಹಾಚಾರ್ ಸಂಪಾದಿಸಿದ ಪಂಪರಾಮಾಯಣ ಸಂಗ್ರಹ, ಧೋಂಡೋನರಸಿಂಹ ಮುಳಬಾಗಲ ಮತ್ತು ಪಂಜೆರಾಮಾಚಾರ್ಯ ಅನುವಾದಿಸಿದ ಮೇಣೀಸಂಹಾರ ನಾಟಕವು-ಇವೇ ಮೊದಲಾದ ಕೃತಿಗಳು. ಪ್ರೊ. ಕುಂದಣಗಾರ ಅವರ ವಿಮರ್ಶೆಗೆ ಒಳಗಾಗಿರುವ ಕೃತಿಗಳು ಇವುಗಳನ್ನು ವಿಮರ್ಶಿಸುವಾಗ ಪ್ರೊ. ಕುಂದಣಗಾರ ಅವರು ಕೇವಲ ಪ್ರಶಂಸೆಯ ಮಾತುಗಳನ್ನಾಡದೆ ಅವುಗಳಲ್ಲಿಯ ದೋಷಗಳನ್ನು ಎತ್ತಿಹೇಳಿರುವುದು ಅವರ ಅಗಾಧ ಪಾಂಡಿತ್ಯದ ದ್ಯೋತಕವಾಗಿದೆ.

ಇವಲ್ಲದೆ ಹೊಸಗನ್ನಡದ ಕರ್ಣನ ಮೂರು ಚಿತ್ರಗಳು (ಶಂ.ಬಾ. ಜೋಶಿ) ಭಗವಾನ್‌ಮಹಾವೀರ (ಜಿ.ಪಿ. ರಾಜರತ್ನಂ), ಶ್ರೀ ಗೋಮಟೇಶ್ವರ (ಜಿ.ಪಿ. ರಾಜರತ್ನಂ) ಕಾಮದಹನ (ಶ್ರೀನಿವಾಸ ಕುಲಕರ್ಣಿ) ಮೊದಲಾದ ಪುಸ್ತಕಗಳನ್ನು ವಿಮರ್ಶೆಯನ್ನು ಮಾಡಿ ಅವುಗಳ ಗುಣದೋಷಗಳನ್ನು ಪ್ರಾಂಜಲಮನಸ್ಸಿನಿಂದ ಎತ್ತಿ ಹೇಳಿದ್ದಾರೆ. ಹೀಗಾಗಿ ವಿಮರ್ಶಾಕ್ಷೇತ್ರದಲ್ಲಿಯೂ ಪ್ರೊ. ಕುಂದಣಗಾರ ಅವರಿಗೆ ವಿಶೇಷ ಸ್ಥಾನವಿದೆಯೆಂದು ಹೇಳಬಹುದು.

ಪತ್ರಿಕಾರಂಗ:

ಪ್ರೊ. ಕುಂದಣಗಾರ ಅವರು ಪತ್ರಿಕಾರಂಗಕ್ಕೂ ಅಪೂರ್ವವಾದ ಸೇವೆಯನ್ನು ಸಲ್ಲಿಸಿದ್‌ಆರೆ. ಅವರು ೧೯೨೫ರಲ್ಲಿ ಧಾರವಾಡಕ್ಕೆ ಪ್ರಾಧ್ಯಾಪಕರಾಗಿ ಬಂದ ಮೇಲೆ ಕರ್ನಾಟಕ ವಿದ್ಯಾವರ್ಧಕ ಸಂಘದವರು ಅವರನ್ನು ಆ ಸಂಘದ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡರಲ್ಲದೆ, ಆ ಸಂಸ್ಥೆಯ ಮುಖಪತ್ರಿಕೆ ‘ವಾಗ್ಭೂಷಣ’ದ ಸಂಪಾದನೆಯ ಜವಾಬ್ದಾರಿಯನ್ನು ವಹಿಸಿದರು. ಅಂದಿನಿಂದ ಇವರು ಸಂಘದ ಏಳ್ಗೆಗಾಗಿ ಪತ್ರಿಕೆಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. ಅವರು ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾಗ ಕನ್ನಡ ಜಾಗೃತಿ, ರಾಷ್ಟ್ರಪ್ರೇಮ, ರಾಷ್ಟ್ರಾಭಿಮಾನ ಉಕ್ಕಿಸುವ ಲೇಖನಗಳು ಪ್ರಕಟವಾದವಲ್ಲದೆ ಅನೇಕ ಹರಟೆ, ವಿಡಂಬನಾತ್ಮಕ ಪ್ರಬಂಧಗಳು ಪ್ರಕಟವಾದವು.

ಪ್ರೊ. ಕುಂದಣಗಾರ ಅವರು ಬೆಳಗಾವಿಯ ಶ್ರೀ ಜಿನವಿಜಯ ಪತ್ರಿಕೆಯ ಸಂಪಾದಕಮಂಡಳಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದರು. ಈ ಪತ್ರಿಕೆ ಪ್ರೊ. ಕುಂದಣಗಾರ ಅವರ ಜೈನಧರ್ಮದ ಬಗೆಗಿನ ಆಸಕ್ತಿಗೆ ಒಳ್ಳೆಯ ಮಾಧ್ಯಮವಾದಂತಾಯಿತು.

ಇವಲ್ಲದೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿದ್ದೂ ಅಪೂರ್ವ ಸಲಹೆ ಸೂಚನೆಗಳನ್ನು ಕೊಡುತ್ತಿದ್ದರು.

ಪ್ರೊ. ಕುಂದಣಗಾರ ಅವರು ತಾವು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಧಾರವಾಡದ ಕರ್ನಾಟಕ ಕಾಲೇಜು, ಕೊಲ್ಲಾಪುರದ ರಾಜಾರಾಮ ಕಾಲೇಜ ಹಾಗೂ ಬೆಳಗಾವಿಯ ಆರ್.ಪಿ.ಡಿ. ಕಾಲೇಜುಗಳಲ್ಲಿಯ ವಾರ್ಷಿಕ ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದರು. ಅವುಗಳಿಗೆ ಅಂದಿನ ಶ್ರೇಷ್ಠ ವಿದ್ವಾಂಸರ ಲೇಖನಗಳನ್ನು ತರಿಸಿ ಪ್ರಕಟಿಸುತ್ತಿದ್ದುದಲ್ಲದೆ ವಿದ್ಯಾರ್ಥಿಗಳಿಗೆ ಲೇಖನಗಳನ್ನು ಬರೆಯುವಂತೆ ಸೂಕ್ತ ಮಾರ್ಗದರ್ಶನ ಮಾಡುತ್ತಿದ್ದರು.

ಮೇಲಿನ ಪತ್ರಿಕೆಗಳಲ್ಲದೆ ಅಂದು ನಾಡಿನಲ್ಲಿ ಪ್ರಸಿದ್ಧಿ ಪಡೆದಿದ್ದ ಪ್ರಬುದ್ಧ ಕರ್ನಾಟಕ, ಜಯ ಕರ್ನಾಟಕ, ಜಯಂತಿ, ಶಿವಾನುಭವ, ಸರ್ವಧರ್ಮ ದೀಪಿಕೆ ಶರಣ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ಕನ್ನಡ ನುಡಿಗಳೊಂದಿಗೂ ಆಂಗ್ಲಪತ್ರಿಕೆಗಳಾದ ದಿ ಕರ್ನಾಟಕ ಹಿಸ್ಟಾರಿಕಲ್‌ರಿವೂ, ಜರ್ನಲ್‌ಆಫ್‌ಬಾಂಬೆ ಬ್ಯ್ರಾಂಚ್‌ರಾಯಲ್‌ಏಷಿಯಾಟಿಕ್‌ಸೊಸಾಯಿಟಿ, ಜರ್ನಲ್‌ಆಫ್‌ದಿ ಬಾಂಬೆ ಹಿಸ್ಟಾರಿಕಲ್‌ಸೊಸಾಯಿಟಿ, ಜರ್ನಲ್‌ಆಫ್‌ಯುನಿವ್ಹರ್ಸಿಟಿ ಆಫ್‌ಬಾಂಬೆ, ಇಂಡಿಯಾ ಓರಿಯಂಟಲ್‌ಕಾನ್‌ಫರೆನ್ಸ್, ದಿ ಜೈನ ಎಂಟಿಕ್ವರಿ, ದಿ ರಾಜಾರಾಮಯನ್‌ಮೊದಲಾದವುಗಳೊಂದಿಗೂ ನಿಕಟ ಸಂಪರ್ಕ ಹೊಂದಿ, ತಮ್ಮ ಮೌಲಿಕ ಲೇಖನಗಳನ್ನು ಪ್ರಕಟನೆಗಾಗಿ ಅವುಗಳಿಗೆ ಕಳಿಸಿಕೊಡುತ್ತಿದ್ದರು.