ಸಾಹಿತ್ಯ ಕೃಷಿ:

ಪ್ರೊ. ಕುಂದಣಗಾರ ಅವರ ಸಾಹಿತ್ಯಕೃಷಿ ಬಹುಮುಖವಾದುದು. ಅವರು ಹಲವಾರು ಅಮೂಲ್ಯವಾದ ಕೃತಿಗಳನ್ನು ಕನ್ನಡಸಾಹಿತ್ಯ ಪ್ರಪಂಚಕ್ಕೆ ಇತ್ತಿದ್ದಾರೆ. ಈವರೆಗೆ ಅವರವು ಕೇವಲ ಒಂಬತ್ತು ಗ್ರಂಥಗಳು ಎಂದು ನಂಬಲಾಗಿತ್ತು. ಇತ್ತೀಚಿನ ಶೋಧನೆಯಿಂದ ಅವರ ಒಟ್ಟು ೨೧ ಕೃತಿಗಳು ದೊರೆತಿವೆ. ಅವುಗಳಲ್ಲಿ ಮೊದಲ ೧೬ ಉಪಲಬ್ಧ, ಕೊನೆಯ ೫ ಅನುಪಲಬ್ದ. ಅವು ಹೀಗಿವೆ:

೧. Notes on Sri Mahalaxmi Temple

೨. Inscription in Northern Karnataka and the Kolhapur State

೩. ರಟ್ಟ ಶಾಸನ ಪದಗುಚ್ಛ

೪. ಹರಿಹರ

೫. ಆದಿಪುರಾಣ

೬. ಕುಮುದೇಂದು ರಾಮಾಯಣ

೭. ಪೂರ್ವಪುರಾಣ

೮. ಚಿನ್ಮಯ ಚಿಂತಾಮಣಿ

೯. ಜ್ಞಾನಭಾಸ್ಕರ ಚರಿತೆ

೧೦. ಮಹಾದೇವಿಯಕ್ಕ

೧೧. ಸರಸ್ವತಿ

೧೨. ಸಮ್ಯಕ್ತ್ವಾ ದರ್ಶ

೧೩. ಲೀಲಾವತೀ ಪ್ರಬಂಧ (೯-೧೦ ಎರಡು ಆಶ್ವಾಸ)

೧೪. ಕನ್ನಡ ಸಾಹಿತ್ಯ ಪ್ರವೇಶ (ಭಾಗ ೧, ೨, ೩)

೧೫. ಗದ್ಯಮಂಜರಿ

೧೬. ಇಂದ್ರಿಯ ವಿಜ್ಞಾನವೂ ಆರೋಗ್ಯಶಾಸ್ತ್ರವೂ

೧೭. ನಿರಂಜನಸ್ತ್ರೋತ್ರ

೧೮. ದಾಸಕೂಟ

೧೯. ಭರತೇಶ ವೈಭವ (ಮರಾಠಿ)

೨೦. ಸುಕುಮಾರ ಸಾಹಿತ್ಯ ಸಂಗ್ರಹ

೨೧. ಕನ್ನಡ ಸಾಹಿತ್ಯದಲ್ಲಿ ಮೂವರು ಕ್ರಾಂತಿಕಾರರು.

ಇವಲ್ಲದೆ ಇವರು ೧೧೭ ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದಾರೆ. ಅವುಗಳಲ್ಲಿ ೧೪ ದೊರೆತಿಲ್ಲ. ದೊರೆತವುಗಳಲ್ಲಿ ೮೩ ಕನ್ನಡದಲ್ಲಿದ್ದರೆ, ೨೦ ಇಂಗ್ಲೀಷಿನಲ್ಲಿವೆ. ವಿಷಯಕ್ಕನುಗುಣವಾಗಿ ಅವನ್ನು ಹೀಗೆ ವರ್ಗೀಕರಿಸಬಹುದು.

    ಕನ್ನಡ ಲೇಖನಗಳು ಇಂಗ್ಲೀಷ್‌ಲೇಖನಗಳು
೧. ಜೈನ ಧರ್ಮಕ್ಕೆ ಸಂಬಂಧಿಸಿದವು ೨೫ ೦೩
೨. ವೀರಶೈವ ಧರ್ಮಕ್ಕೆ ಸಂಬಂಧಿಸಿದವು ೧೮ ೦೧
೩. ಶಾಸನಗಳಿಗೆ ಸಂಬಂಧಿಸಿದವು ೦೮ ೦೫
೪. ವ್ಯಾಕರಣ ಛಂದಸ್ಸು ಸಂಬಂಧಿಸಿದವು ೦೪ ೦೩
೫. ನಾಣ್ಯಗಳಿಗೆ ಹಾಗೂ ಪ್ರಾಚ್ಯಶಾಸ್ತ್ರಗಳಿಗೆ ಸಂಬಂಧಿಸಿದವು ೦೩ ೦೩
೬. ಇತರ ೨೫ ೦೫
  ಒಟ್ಟು ೮೩ ೨೦

ಅವರ ಒಟ್ಟು ಈ ಸಾಹಿತ್ಯಕೃತಿಯನ್ನು ಸಂಶೋಧನೆ, ಸೃಜನ, ವಿಮರ್ಶೆ, ಜನಪದ ಸಾಹಿತ್ಯ, ಪಠ್ಯ ಮುಂತಾಗಿ ವಿಭಜಿಸಿ ಅಭ್ಯಾಸಿಸಬಹುದು

೧. ಸಂಶೋಧನೆ:

ಪ್ರೊ. ಕುಂದಣಗಾರ ಅವರು ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಸೇವೆ ಸಲ್ಲಿಸಿರುವುದಾದರೂ ಅವರನ್ನು ಕನ್ನಡ ವಿದ್ವತ್‌ಪ್ರಪಂಚ ಸಂಶೋಧಕರೆಂದೇ ಗುರುತಿಸಿದೆ. ಅವರು ಬಿ.ಎ. ಓದುತ್ತಿರುವಾಗಲೆ ಸಂಶೋಧನೆ-ಕ್ಷೇತ್ರಕಾರ್ಯಗಳ ಗೀಳು ಹೊಂದಿ, ಹಲವಾರು ಗುಡಿ ಗುಂಡಾರ, ಮಠ-ಮಾನ್ಯಗಳನ್ನು ಸುತ್ತಿ ಶಿಲಾಶಾಸನ, ತಾಮ್ರಶಾಸನ, ನಾಣ್ಯಗಳು, ತಾಡೋಲೆ, ಇತ್ಯಾದಿ ಪ್ರಾಚ್ಯ ವಸ್ತುಗಳನ್ನು ಸಂಗ್ರಹಿಸುವತ್ತ ಗಮನ ಹರಿಸಿದರು. ಕನ್ನಡ ಇಂಗ್ಲೀಷ ಜೊತೆಗೆ ಸ್ವಪ್ರಯತ್ನದಿಂದ ಸಂಸ್ಕೃತ, ಪ್ರಾಕೃತ, ಅರ್ಧಮಾಗಧಿ ಮತ್ತು ಮರಾಠಿ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಗಳಿಸಿದರು. ಇವುಗಳ ಅಧ್ಯಯನದ ಫಲವಾಗಿ ಬಂದ ಅವರ ಸಂಶೋಧನೆಯ ಕಾರ್ಯಗಳನ್ನು-ಸಂಸ್ಕೃತಿಸಂಶೋಧನೆ, ಸಾಹಿತ್ಯ ಸಂಶೋಧನೆ, ಶಾಸನಸಂಶೋಧನೆ, ಭೂಗರ್ಭಸಂಶೋಧನೆ ಎಂದು ವಿಭಜಿಸಿ ಅವಲೋಕಿಸಬಹುದು. ಇವನ್ನು ಅವರ ಸಂಶೋಧನೆಯ ಚತುರ್ಮುಖ ಬ್ರಹ್ಮಸ್ವರೂಪ ಎಂದು ಗುರುತಿಸಲಾಗುತ್ತಿದೆ.

i) ಸಂಸ್ಕೃತಿಸಂಶೋಧನೆ:

ಪ್ರೊ. ಕುಂದಣಗಾರ ಅವರ ಸಂಸ್ಕೃತಿ ಸಂಶೋಧನೆಯಲ್ಲಿ ಕೊಲ್ಲಾಪುರದ ಮಹಾಲಕ್ಷ್ಮೀದೇವಾಲಯದ ಅಧ್ಯಯನ ಬಹು ಮಹತ್ವಪೂರ್ಣವಾದುದು. ಅವರು ಕೊಲ್ಲಾಪುರಕ್ಕೆ ಹೋಗುತ್ತಲೆ ಅಲ್ಲಿಯ ನಗರ ದೇವತೆಯಾದ ಅಂಭಾಭವಾನಿಯ ಪೂರ್ವಾಪರಗಳತ್ತ ಗಮನ ಹರಿಸಿ Notes on Sri Mahalaxmi Temple, Kolhapur ಎಂಬ ಕೃತಿ ರಚಿಸಿದರು (೧೯೨೯). ಇದು ಅವರ ಸಂಸ್ಕೃತಿಸಂಶೋಧನೆಗೆ ಅಡಿಗಲ್ಲನ್ನಿಟ್ಟಿತು. ಈ ಕೃತಿಯನ್ನು ರಚಿಸಲು ಕುಂದಣಗಾರ ಅವರು ಸ್ಥಳ ಪುರಾಣ, ಐತಿಹ್ಯ, ಶಾಸನ, ಗ್ರಂಥಗಳು ಹೀಗೆ ಸುಮಾರು ೧೩ ಆಕರ ಸಾಮಗ್ರಿಗಳನ್ನು ಬಳಸಿಕೊಂಡದ್ದು ಒಬ್ಬ ಸಂಶೋಧಕ ಸತ್ಯವನ್ನೇ ಹೇಳಬೇಕು ಎಂಬ ಮಾತಿಗೆ ಸಾಕ್ಷಿಯೆನ್ನುವಂತೆ, ‘ಈಗ ಈ ದೇವಾಲಯ ಶೈವಮತಕ್ಕೆ ಸೇರಿದ್ದರೂ ಅದು ರಟ್ಟರಕಾಲದಲ್ಲಿ ಜೈನರ ಪದ್ಮಾವತಿ ದೇವಾಲಯಗಳಾಗಿ ರೂಪಾಂತರಗೊಂಡಿತು. ಮತ್ತೆ ದೇವಗಿರಿಯ ಯಾದವರ ಕಾಲದಲ್ಲಿ ಅದು ಹಿಂದೂ ದೇವಾಲಯವಾಗಿ ತನ್ನ ಮೊದಲಿನ ಸ್ಥಿತಿ ಪಡೆಯಿತು’ ಎಂಬ ವಿಚಾರವನ್ನು ಸಾಧಾರ ನಿರೂಪಿಸಿದರು. ಅಲ್ಲದೆ ಆ ದೇವಾಲಯದ ರಚನೆ, ವಾಸ್ತುಶಿಲ್ಪ, ಅಲ್ಲಿರುವ ಇತರ ಗುಡಿಗಳು ಮೊದಲಾದವುಗಳ ಬಗೆಗೂ ಸಾಕಷ್ಟು ಅಧ್ಯಯನ ಮಾಡಿ ಸಮಗ್ರ ಮಾಹಿತಿಯನ್ನು ಆ ಗ್ರಂಥದಲ್ಲಿ ಕಲೆ ಹಾಕಿದರು.

ಈ ಕೃತಿ ರಚನೆಯಿಂದಾಗಿ ಕುಂದಣಗಾರ ಅವರ ಹೆಸರು ಮಹಾರಾಷ್ಟ್ರದ ವಿದ್ವಾಂಸರ, ಜನಸಾಮಾನ್ಯರ ಮನೆಮಾತಾಯಿತು. ಇದಕ್ಕೆ ಫಾದರ್ ಹೇರಾಸ್‌ಅವರು ಮುನ್ನುಡಿ ಬರೆಯುತ್ತ ಕುಂದಣಗಾರ ಅವರನ್ನು ಆರ್. ನರಸಿಂಹಾಚಾರ್ ಮೊದಲಾದವರ ಸಾಲಿನಲ್ಲಿ ಸೇರಿಸಿ ಕೊನಗೆ “The Rajaram College is to be congratulated on having such a deligent investigater in the field of epigraphy and archaeology’ ಎಂದೂ “This monograph is valuable contribution to the Archaeological studied of Southern India” ಎಂದೂ ಪ್ರಶಂಸಿಸಿದರು. ಆ ದೇವಾಲಯವನ್ನು ಅಭ್ಯಾಸ ಮಾಡುವವರಿಗೆ ಇದು ಇವೊತ್ತಿಗೂ ಒಂದು ಒಳ್ಳೆಯ ಆಕರ ಗ್ರಂಥವೆಂದು ಮನ್ನಣೆ ಗಳಿಸಿದೆ; ಆ ದಿಸೆಯಲ್ಲಿ ಸಂಶೋಧನೆ ಮಾಡುವವರಿಗೆ ಒಳ್ಳೆಯ ಮಾರ್ಗದರ್ಶಿಯಾಗಿದೆ.

ಇಲ್ಲಿಂದ ಪ್ರೊ. ಕುಂದಣಗಾರ ಅವರ ಸಂಶೋಧನೆಯ ಹೆಬ್ಬಾಗಿಲೇ ತೆರೆದಂತಾಯಿತು. ಅವರು ಕಲೆ, ವಾಸ್ತುಶಿಲ್ಪ, ನೃತ್ಯ, ಭಾಷಾಬಾಂಧವ್ಯ, ಧರ್ಮ, ರಾಜಕೀಯಗಳನ್ನು ಕುರಿತು, ಅಂದಿನ ಪ್ರಮುಖ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದರು. ಅವುಗಳಲ್ಲಿ ಕೆಲವು ಲೇಖನಗಳ ಮೂಲಕ ಕನ್ನಡ ಸಾಹಿತ್ಯದ ಕೃತಿಗಳನ್ನು ಕೇವಲ ಸಾಹಿತ್ಯದ ದೃಷ್ಟಿಯಿಂದ ಮಾತ್ರ ನೋಡದೆ, ಸಾಮಾಜಿಕ – ಸಾಂಸ್ಕೃತಿಕ ದೃಷ್ಟಿಗಳಿಂದಲೂ ಅಭ್ಯಾಸಿಸಬಹುದು ಎಂಬುದನ್ನು ಎತ್ತಿತೋರಿದರು. ಉದಾಹರಣೆಗೆ “ಹರಿಹರನ ರಗಳೆಗಳೊಳಗಿನ ಸಾಮಾಜಿಕ ಸಂಗತಿಗಳು” ಎಂಬ ಲೇಖನದಲ್ಲಿ -ಬಸವರಾಜದೇವರ ರಗಳೆ, ಮಹಾದೇವಿಯಕ್ಕನ ರಗಳೆ, ಏಕಾಂತರಾಮಯ್ಯನ ರಗಳೆ ಮುಂತಾದವುಗಳಲ್ಲಿಯ ವೀರವೃತ್ತಿ, ಆತ್ಮಾರ್ಪಣಭಾವ, ಲೋಕಕಲ್ಯಾಣದ ವಿಚಾರಗಳೊಂದಿಗೆ ಅಂದಿನ ಕಾಲದ ಸಾಮಾಜಿಕ ಆಚರಣೆಗಳು, ವಿಧಿ ವಿಧಾನಗಳು, ರೂಢಿ-ಪದ್ಧತಿಗಳು, ವೈಶಿಷ್ಟ ವಾದ್ಯಗಳು, ಆಟ-ಪಾಟಗಳು, ಅಡುಗೆಯ ಪದಾರ್ಥಗಳು, ಆಭರಣಗಳು, ಅಂದಿನ ವಿಶಿಷ್ಟ ಕಾಯಕ, ಸಂಗೀತ, ನೃತ್ಯ, ಶಕುನ ಮೊದಲಾದವನ್ನು ಸುಲಭವಾದ ಶೈಲಿಯಲ್ಲಿ ವಿವರಿಸಿದ್ದಾರೆ.

ಅದೇ ರೀತಿ ಬಸವಣ್ಣನವರ ವ್ಯಕ್ತಿತ್ವವನ್ನು-ಬಸವಣ್ಣನವರ ಕಾರ್ಯದ ಗುಟ್ಟು, ಬಸವಣ್ಣನವರ ಸಾಮಾಜಿಕ ವಿಚಾರಗಳು, ಬಸವೇಶ್ವರರ ಸಮಾಜಕಲ್ಪನೆ ಎಂಬ ಲೇಖನಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. ಬಸವಣ್ಣನವರು ಕೇವಲ ತತ್ವಶೋಧಕರಾಗದೆ, ಅವುಗಳನ್ನು ಆಚರಣೆಯಲ್ಲಿ ತರಲು, ಪ್ರಚುರಗೊಳಿಸಲು ಎಂತ ಹರಸಾಹಸ ಮಾಡಿದರು ಎಂಬುದನ್ನು ಎತ್ತಿ ಹೇಳಿದ್ದಾರೆ. ಅಲ್ಲದೆ ಅವರು ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯ, ಅನಾಚಾರ, ಅಧರ್ಮ, ಅತ್ಯಾಚಾರಗಳನ್ನು ಹೊಡೆದೋಡಿಸಿ ಸದಾಚಾರ ಸಂಪನ್ನವಾದ ಸಮಾಜ ಕಟ್ಟಲು ಮಾಡಿದ ಪ್ರಯತ್ನವನ್ನು ವಿವರಿಸಿದ್ದಾರೆ. ಮೇಲು-ಕೀಳು, ಅಗ್ರಜ-ಅಂತ್ಯಜ ಮೊದಲಾದ ಕಂದಾಚಾರಗಳನ್ನು ತೊಡೆದುಹಾಕಿ ಬಸವಣ್ಣ ಸಾಮಾಜಿಕ ಐಕ್ಯವನ್ನು ಕಾಪಾಡಲು ಮಾಡಿದ ಕಾರ್ಯವನ್ನು ನಿರೂಪಿಸಿದ್ದಾರೆ.

ಹಾಗೆಯೇ ಜೈನ ಪುರಾಣಗಳಲ್ಲಿ ಸಾಂಸ್ಕೃತಿಕ ಅಧ್ಯಯನಕ್ಕೂ ತೊಡಗಿ Culture in Kannada Jaina Puranas’ ಎಂಬ ಲೇಖನವನ್ನು ಬರೆದಿದ್ದಾರೆ. ಆದಿಪುರಾಣ, ವರ್ಧಮಾನ ಪುರಾಣ, ಭರತೇಶ ವೈಭವ ವಡ್ಡಾರಾಧನೆ ಮೊದಲಾದ ಕೃತಿಗಳಲ್ಲಿ ಪ್ರಸ್ತಾಪವಾದ ಕಲೆ, ಚಿತ್ರಕಲೆ ವಾಸ್ತುಶಿಲ್ಪ, ಶಿಕ್ಷಣ, ಸಂಗೀತ, ನೃತ್ಯ ಮುಂತಾದ ಅರವತ್ತು ನಾಲ್ಕು ಕಲೆಗಳು, ಆಟಗಳು, ವಾದ್ಯಗಳು, ಪೂಜಾ-ವಿಧಿ-ವಿಧಾನ, ಮದುವೆ ಅಧಿಕಾರಿ ವರ್ಗ, ಅಸಿ-ಮಸಿ-ಕೃಷಿ-ವಾಣಿಜ್ಯ ಮೊದಲಾದವುಗಳನ್ನು ಬಹು ರಸವತ್ತಾಗಿ ವಿವರಿಸಲಾಗಿದೆ. ‘ಚಾಲುಕ್ಯರ ಆರಂಭದಲ್ಲಿ ಕಲೆಗಳು’ ಎಂಬ ಲೇಖನದಲ್ಲಿ ಗುಪ್ತರ ಕಾಲದಿಂದ ಚಾಲುಕ್ಯರ ವರೆಗೆ ಶಿಲ್ಪ, ಚಿತ್ರ, ಸಂಗೀತ ಮೊದಲಾದವು ಬೆಳೆದು ಬಂದ ಬಗೆಯ ವಿವರವಿದೆ.

‘ಸ್ತ್ರೀ’ ಪ್ರಸಾದನ’ ಎಂಬುದು ಕುಂದಣಗಾರ ಅವರ ಇನ್ನೊಂದು ಮಹತ್ವದ ಲೇಖನ. ಇದರಲ್ಲಿ ಕುಂದಣಗಾರ ಅವರು ಒಡವೆಯ ಮೇಲಿನ ಸ್ತ್ರೀಯರ ವ್ಯಾಮೋಹ ಪ್ರಾಚೀನ ಕಾಲದಲ್ಲಿ ಇತ್ತು ಎಂಬುದನ್ನು ಎತ್ತಿ ಹೇಳಿದ್ದಾರೆ. ರನ್ನನು ಗದಾಯುದ್ಧ ಮತ್ತು ಅಜಿತಪುರಾಣಗಳಲ್ಲಿ ಹೇಳಿದ ಹದಿನಾರು ರೀತಿಯ ಸ್ತ್ರೀ ಅಲಂಕಾರಗಳನ್ನು ಹೆಸರಿಸಿ ಸ್ತ್ರೀಯರು ಹೇಗೆ ಅಲಂಕಾರಕ್ಕೆ ಶರಣಾಗಿದ್ದರು ಎಂಬ ಸಂಗತಿಯನ್ನು ಬಿಚ್ಚಟ್ಟಿದ್ದಾರೆ.

‘ಅಲಂಕಾರಗಳನ್ನು ಧರಿಸುವ ಪದ್ಧತಿಯು ಕಾಲಕಾಲಕ್ಕೆ ಬದಲಾಗುತ್ತ ಸುವರ್ಣ ಲೇಪದಿಂದ ಅವು ಕೊರಗುತ್ತ ಬಡವಾಗಹತ್ತಿವೆ. ಗಟ್ಟಿಬಳೆ, ಕಡಗ, ಹರಡೆ ಕಂಕಣ, ತೋಡೆ, ತೋಳಬಂದಿ, ಸರಿಗೆ, ಡಾಬು ಮುಂತಾದ ಆಭರಣಗಳು ಇಪ್ಪತ್ತು ವರ್ಷಗಳಲ್ಲಿಯೇ ಕಾಣದಾಗಿವೆ’ ಎಂದು ಪ್ರಾಚೀನ ಸಂಸ್ಕೃತಿಯ ಬಗೆಗೆ ಕಳಕಳಿ ತೋರಿದ್ದಾರೆ. ಇದಕ್ಕೆ ಪೂರಕವೆಂಬುದು ‘ಆಧುನಿಕ ಮತ್ತು ಪಂಪನ ಕಾಲದ ವಸ್ತ್ರಾಭರಣಗಳು’ ಎಂಬ ಲೇಖನ ಬಂದಿದೆ.

ಇನ್ನು ಕರ್ನಾಟಕದ ಶಿಲ್ಪಕಲೆಯನ್ನು ಕುರಿತು Kopeshwara Temple at Kidrapura, Antiquities of Hukkeri ಮುಂತಾದ ಲೇಖನಗಳನ್ನು ಬರೆದಿದ್ದಾರೆ. ಮೊದಲನೆಯ ಲೇಖನವು ಖಿದ್ರಾಪುರದಲ್ಲಿರುವ ಕೊಪ್ಪೇಶ್ವರದೇವಾಲಯದ ಮಾಹಿತಿ ಒದಗಿಸಿದರೆ ಎರಡನೆಯ ಲೇಖನವು ಹುಕ್ಕೇರಿ ಪ್ರಾಂತದ ಶಾಸನ ಹಾಗೂ ಪ್ರಾಚೀನ ಅವಶೇಷಗಳ ವಿವರ ಹೊಂದಿದೆ. Arches, Domes and Vimanas ಎಂಬ ಲೇಖನವು ದಕ್ಷಿಣಭಾರತದ ವಾಸ್ತುಶಿಲ್ಪವನ್ನು ಕುರಿತು ಹೇಳುತ್ತಿದೆ. ‘ಪ್ರಾಚೀನಕಾಲದ ಸೇತುವೆಗಳು’ ಎಂಬ ಲೇಖನವು ಜಿನಸೇನರಿಗಿಂತ ಪೂರ್ವದಲ್ಲಿಯೇ ಕರ್ನಾಟಕದಲ್ಲಿ ಸೇತುಬಂಧದ ಕಲ್ಪನೆ ಇದ್ದಿತು ಎಂಬುದನ್ನು ಸ್ಪಷ್ಟಪಡಿಸಿದೆ.

ಕುಂದಣಗಾರ ಅವರ ಮೌಲಿಕ ಲೇಖನಗಳಲ್ಲಿ `Development of the Kannada Drama’ ಎಂಬ ಲೇಖನ ಮಹತ್ವ ಪೂರ್ಣವಾದುದು. ಇಲ್ಲಿ ಕುಂದಣಗಾರ ಅವರು ಕನ್ನಡ ನಾಟಕ ಹಾಗೂ ರಂಗಭೂಮಿಯ ಇತಿಹಾಸವನ್ನು ಚರ್ಚಿಸುವುದರ ಜೊತೆಗೆ ಕನ್ನಡ ಪ್ರಮುಖ ನಾಟಕಗಳ ಪರಿಕಚಯವನ್ನು ಮಾಡಿಕೊಟ್ಟಿದ್ದಾರೆ. ಆದಿಪುರಾಣ, ಶಾಂತಿಪುರಾಣ, ಗದಾಯುದ್ಧಗಳಲ್ಲಿ ನಾಟಕೀಯ ಅಂಶಗಳಿರುವುದನ್ನು ಎತ್ತಿ ಹೇಳಿದ್ದಾರೆ. ರತ್ನಾಕರವರ್ಣಿಯ ಸಂಗೀತ-ನೃತ್ಯಶಾಸ್ತ್ರದಲ್ಲಿಯ ನಿಪುಣತೆಯನ್ನು ಎತ್ತಿತೋರುವುದಕ್ಕಾಗಿ ‘ನೃತ್ಯರತ್ನಾಕರ’ ಎಂಬ ೨೮ಪುಟ ವ್ಯಾಪ್ತಿಯ ಲೇಖನವನ್ನು ಬರೆದಿದ್ದಾರೆ.

ಪ್ರೊ. ಕುಂದಣಗಾರ ಅವರು ‘ಕರ್ನಾಟಕದಲ್ಲಿ ನಾಥಪಂಥೀಯರು’ ಎಂಬ ಲೇಖನ ಚಿಕ್ಕದಾಗಿದ್ದರೂ ಬಹಳಷ್ಟು ಮಾಹಿತಿಯನ್ನೊಳಗೊಂಡಿದೆ. ಇವರು ಉತ್ತರದಿಂದ ಬಂದರೆಂಬ ಸಾರ್ವತ್ರಿಕ ಅಭಿಪ್ರಾಯವನ್ನು ಒಪ್ಪಿ, ಅದರ ಕುರುಹುಳಿರುವ ಸ್ಥಳಗಳ ಪರಿಚಯ ಮಾಡಿದ್ದಾರೆ. ಹಾಗೆಯೇ `Pashupati and Saiva Sects in Karnataka’ ಎಂಬ ಲೇಖನವನ್ನು ೧೯೩೮ರಲ್ಲಿ ಬರೆದು ಅದರಲ್ಲಿ ಬಿಜಾಪುರ ಮತ್ತು ಬೆಳಗಾವಿ ಜಿಲ್ಲೆಯ ಶಾಸನಗಳಲ್ಲಿ ಬಂದಿರುವ ಪ್ರಸ್ತಾಪವನ್ನು ವಿವೇಚಿಸಿದ್ದಾರೆ.

ಹಾಗೆಯೇ ತಾವು ಮಹಾರಾಷ್ಟ್ರ ಪ್ರದೇಶದಲ್ಲಿ ವಾಸಿಸುತ್ತಿದ್ದರೂ ‘ಬೆಳಗಾವಿಯು ಕನ್ನಡ ಪ್ರಾಂತವೋ’ ಎಂಬ ಸಮಸ್ಯೆಯನ್ನು ೧೯೨೮ರಲ್ಲಿಯೇ ಎತ್ತಿ ಅದು ಕರ್ನಾಟಕಕ್ಕೇ ಸೇರಿದ್ದು ಎಂಬುದನ್ನು ಹಲವಾರು ನಿದರ್ಶನಗಳ ಮೂಲಕ ಖಡಾಖಂಡಿತವಾಗಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ‘ಕನ್ನಡದ ಮೇಲೆ ಮರಾಠಿಯ ಪ್ರಭಾವ’, ‘ಕೊಲ್ಲಾಪುರವು ಅಂದು ಇಂದು’ ಎಂಬ ಮೌಲಿಕ ಲೇಖನಗಳನ್ನು ಬರೆದಿದ್ದಾರೆ.

ಹೀಗೆ ಕುಂದಣಗಾರ ಅವರು ಕನ್ನಡ ಸಾಹಿತ್ಯ ಶಾಸನಗಳನ್ನು ಒಳಹೊಕ್ಕು, ಅವುಗಳಲ್ಲಿ ಹುದುಗಿರುವ ಅಪರೂಪದ ಸಾಂಸ್ಕೃತಿಕ ಅಂಶಗಳನ್ನು ತಮ್ಮ ಲೇಖನದ ಮೂಲಕ ಸ್ಪಷ್ಟಪಡಿಸಿದ್ದಾರೆ. ಸತ್ಯವನ್ನು ಹೇಳಬೇಕಾಗಿ ಬಂದ ಪ್ರಸಂಗದಲ್ಲಿ ಎದೆಗಾರಿಕೆಯನ್ನು ತೋರಿದ್ದಾರೆ.

೨) ಸಾಹಿತ್ಯ ಸಂಶೋಧನೆ:

ಕುಂದಣಗಾರ ಅವರ ಸಾಹಿತ್ಯಸಂಶೋಧನೆಯಲ್ಲಿ ಅವರು ಸಂಪಾದಿಸಿದ ಹರಿಹರದೇವ ಎಂಬ ಕೃತಿಯೂ, ಮಿಕ್ಕಿದ ಲೇಖನಗಳೂ ಬಹುಮಹತ್ವಪೂರ್ಣವಾದವು.

‘ಹರಿಹರದೇವ’ ಕೃತಿ ಮಹಕವಿ ಹರಿಹರನನ್ನು ಕುರಿತ ಮೊದಲ ಪ್ರಶಸ್ತಿ ಗ್ರಂಥ. ಪ್ರೊ.. ಕುಂದಣಗಾರ  ಅವರು ರಾಜಾರಾಮಕಾಲೇಜಿನ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದಾಗ ೧೯೩೭ರಲ್ಲಿ ಇದನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಆ ತರುವಾಯ ಹರಿಹರನನ್ನು ಕುರಿತು ಮತ್ತೆ ಎರಡು ಪ್ರಶಸ್ತಿ ಗ್ರಂಥಗಳು, ಸುಮಾರು ೬೦ಕ್ಕೂ ಹೆಚ್ಚು ಕೃತಿಗಳು, ೨೪೦ಕ್ಕೂ ಮಿಕ್ಕಿ ಲೇಖನಗಳು ಬಂದಿದ್ದರೂ ಈ ಕೃತಿಯ ಮಹತ್ವ ಕಡಿಮೆಯಾಗಿಲ್ಲ. ೧೯೭೯ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇದನ್ನು ಮರುಮುದ್ರಣಗೊಳಿಸಿರುವುದೇ ಇದಕ್ಕೆ ಸಾಕ್ಷಿ.

ಈ ಕೃತಿಯಲ್ಲಿ ಡಾ. ಶಿ.ಚೆ. ನಂದಿಮಠ ಅವರ ಮುನ್ನುಡಿ ಸೇರಿ ೧೧ ವಿದ್ವತ್ಪೂರ್ಣ ಲೇಖನಗಳಿವೆ. ಕುಂದಣಗಾರ ಅವರು ಬರೆದ ೪೮ಪುಟದ ‘ಮಹಾಕವಿ ಹರಿಹರ ಚರಿತ್ರೆ’ ಈ ಗ್ರಂಥದ ಮೊದಲ ಲೇಖನ. ಇದು ಹರಿಹರನ ವೈಯಕ್ತಿಕ ಬದುಕಿಗೆ ಸಂಬಂಧಿಸಿದಂತೆ ರಾಘವಾಂಕ, ಸೋಮದೇವ, ಸಿದ್ಧನಂಜೇಸ, ಶಾಂತಲಿಂಗದೇಶಿಕ ಹಾಗೂ ಪದ್ಮಣಾಂಕರ ಕೃತಿಗಳ ಆಧಾರದ ಮೇಲಿಂದ ಹೊಸ ಬೆಳಕು ಚೆಲ್ಲಲೂ ಪ್ರಯತ್ನಿಸಿದ್ದಾರೆ. ಅವನ ತಂದೆ-ತಾಯಿ-ಅಕ್ಕ, ಅಳಿಯ ರಾಘವಾಂಕ, ಗುರು ಪರಂಪರೆ ಮೊದಲಾದವರನ್ನು ಕುರಿತು ಹಲವಾರು ಆಧಾರಗಳ ಮೂಲಕ ವಿಸ್ತೃತವಾಗಿ ವಿವೇಚಿಸಿದ್ದಾರೆ. ಅವನ ಮತವನ್ನು ಕುರಿತು ‘ಮೊದಲಲ್ಲಿ ಶೈವಮಾರ್ಗದ ಆರಾಧ್ಯಬ್ರಾಹ್ಮಣನಾಗಿದ್ದನು; ವೀರಶೈವನಾಗಿರಲಿಲ್ಲ. ವೀರಶೈವಮತವು ಹೆಚ್ಚು ಪ್ರಚಾರಕ್ಕೆ ಬಂದ ಮೇಲೆ ಅದರ ತತ್ವಗಳನ್ನು ಆಳವಾಗಿ ಅಭ್ಯಾಸ ಮಾಡಿ ಆ ಮತವನ್ನು ಸ್ವೀಕರಿದನು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ತರುವಾಯ ಕುಂದಣಗಾರ ಮತ್ತು ಮಾಳವಾಡ ಅವರು ಸೇರಿ ಬರೆದ ‘ಹರಿಹರನಕಾಲ’ ಎಂಬ ಲೇಖನದಲ್ಲಿ ಅವನ ಕಾಲವನ್ನು ಕ್ರಿ.ಶ. ೧೨೧೬ ಎಂದು ನಿರ್ಣಯಿಸಿದ್ದಾರೆ. ಈ ಲೇಖನವನ್ನು ಕುರಿತು ಡಾ. ಆರ್.ಸಿ. ಹಿರೇಮಠ ಅವರು ‘ಹರಿಹರನ ಕಾಲ ವಿಚಾರವನ್ನು ಕುರಿತು ಬರೆದಿರುವ ಈ ಲೇಖನವು ನಮ್ಮ ಸಾಹಿತ್ಯ ಚರಿತ್ರೆಯಲ್ಲಿಯೇ ಆದರ್ಶಪ್ರಾಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನಾ.ಶ್ರೀ. ರಾಜಪುರೋಹಿತ, ಡಿ.ಎಲ್‌. ನರಸಿಂಹಾಚಾರ್, ಗೋವಿಂದ ಪೈ, ಎಸ್‌.ಸಿ. ನಂದಿಮಠ ಅವರು ಕುಂದಣಗಾರ ಅವರ ಅಭಿಪ್ರಾಯವನ್ನು ಒಪ್ಪಿದ್ದಾರೆ.

ಇಲ್ಲಿಯ ಉಳಿದ ಲೇಖನಗಳು, ಈ ಕೃತಿ ಪ್ರಕಟನೆಯ ಕಾಲಕ್ಕೆ ಕನ್ನಡ ಸಾರಸ್ವತ ಪ್ರಪಂಚದಲ್ಲಿ ಪ್ರಕಾಂಡಪಂಡಿತರೆಂದು ಖ್ಯಾತಿಗಳಿಸಿದವರವುಗಳಾಗಿವೆ. ಇವರುಗಳಿಂದ ಲೇಖನಗಳನ್ನು ತರಿಸುವಲ್ಲಿ ಕುಂದಣಗಾರ ಪಟ್ಟ ಪರಿಶ್ರಮವನ್ನು ಅ.ನ.ಕೃಷ್ಣರಾಯರು ಈ ರೀತಿ ಚಿತ್ರಿಸಿದ್ದಾರೆ. “ಕುಂದಣಗಾರರ ಪರಮಪ್ರಯತ್ನದಿಂದ ೧೯೩೭ರಲ್ಲಿ ಹರಿಹರದೇವ ಪ್ರಶಸ್ತಿ ಹೊರಬಿತ್ತು. ಹದಿನಾಲ್ಕು ಜನ ಕನ್ನಡ ವಿದ್ವಾಂಸರ ನೆರವಿನಿಂದ ಕುಂದಣಗಾರರು ಹರಿಹರನ ಜೀವನ, ಕಾಲ, ಧರ್ಮ, ಕಾವ್ಯಪ್ರತಿಭೆಯ ಸಮಗ್ರ ಪರಿಚಯ ಮಾಡಿಕೊಟ್ಟರು. ಇದಕ್ಕಾಗಿ ಅವರು ನಾಲ್ಕುವರ್ಷ ಸತತವಾಗಿ ದುಡಿಯಬೇಕಾಯಿತು. ಕೊಲ್ಹಾಪುರದ ಒಂದು ಮಹಾರಾಷ್ಟ್ರ ಮುದ್ರಣಾಲಯಕ್ಕೆ ಕನ್ನಡದ ಅಚ್ಚುಮೊಳೆಗಳನ್ನು ತರಿಸಿಕೊಟ್ಟು, ಅವರಿಗೆ ಜೋಡಣೆ ಅಭ್ಯಾಸ ಮಾಡಿಸಿ, ಗ್ರಂಥ ಅಚ್ಚು ಹಾಕಿಸಬೇಕಾಯಿತು.” ಹೀಗೆ ಹಲವು ಹತ್ತು ತೊಂದರೆ ಎದುರಿಸಿ, ಅಂಥದೊಂದು ಮಹತ್ಕಾರ್ಯವನ್ನು ಸಾಧಿಸಿದ ಶ್ರೇಯ ಪ್ರೊ. ಕುಂದಣಗಾರ ಅವರದು.

ಇದಲ್ಲದೆ ಕವಿ-ಕಾವ್ಯವನ್ನು ಕುರಿತು ಪ್ರೊ.ಕುಂದಣಗಾರ ಅವರು ವಿದ್ವತ್ಪೂರ್ಣ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಅವನ್ನು ಜೈನ-ವೀರಶೈವ ಕವಿ ಕಾವ್ಯಗಳಿಗೆ ಸಂಬಂಧಿಸಿದ ಲೇಖನಗಳೆಂದು ವಿಭಜಿಸಿ ಅವಲೋಕಿಸಬಹುದು.