ಚುರುಕಾದ ವಿಮರ್ಶನಾ ಪ್ರಜ್ಞೆಗೆ ಹೆಸರಾದ, ಬರಹ ಭಾಷಣಗಳಲ್ಲಿ ಅಪರೂಪದ ಒಳನೋಟಗಳನ್ನು ನೀಡಬಲ್ಲ ಜಾನಪದ ತಜ್ಞರು ಪ್ರೊ. ಡಿ. ಲಿಂಗಯ್ಯ ಅವರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪೀಹಳ್ಳಿಯಲ್ಲಿ೧೯೩೯ ರಲ್ಲಿ ಜನಿಸಿದ ಪ್ರೊ. ಡಿ. ಲಿಂಗಯ್ಯನವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದು, ಬೆಂಗಳೂರು ವಿಶ್ವೇಶ್ವರಪುರ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ, ಕನ್ನಡ ಪ್ರಾಧ್ಯಾಪಕ, ಕಾಲೇಜಿನ ಪ್ರಾಚಾರ್ಯ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ, ವಿದ್ಯಾರ್ಥಿ ಕ್ಷೇಮಾಧಿಕಾರಿ, ಬೆಂಗಳೂರು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯ, ಹೀಗೆ ವಿವಿಧ ಪದಗಳಲ್ಲಿ ಸೇವೆ ಸಲ್ಲಿಸಿ ೧೯೯೭ ರಲ್ಲಿ ನಿವೃತ್ತಿ ಹೊಂದಿದರು.
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೬೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಎರಡು ಕಾದಂಬರಿಗಳು, ಎರಡು ವ್ಯಕ್ತಿಚಿತ್ರಗಳು, ಹನ್ನೊಂದು ಕವನಸಂಗ್ರಹಗಳು, ಮೂರು ಕಥಾಸಂಗ್ರಹಗಳು, ನಾಲ್ಕು ನಾಟಕಗಳು, ಮೂರು ಚರಿತ್ರೆ (ಸ್ವಾತಂತ್ರ್ಯ ಚಳುವಳಿ), ಮೂರು ವಿಮರ್ಶೆ, ಐದು ಜೀವನಚರಿತ್ರೆ, ೧೬ ಜಾನಪದ ಕೃತಿಗಳನ್ನು ರಚಿಸಿರುವುದಲ್ಲದೆ ೧೪ ಕೃತಿಗಳನ್ನು ಸಂಪಾದಿಸಿದ್ದಾರೆ. ಶ್ರೀಯುತರ ಲೇಖನಗಳು ಪತ್ರಿಕೆಗಳಲ್ಲಿ, ಸಂಭಾವನಾ ಗ್ರಂಥಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಅಲ್ಲದೆ ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಪ್ರೊ. ಡಿ. ಲಿಂಗಯ್ಯ ಅವರು ಕರ್ನಾಟಕ ಲೇಖಕರ ಸಂಘದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನದ ವ್ಯವಸ್ಥಾಪಕ ಕಾರ್ಯದರ್ಶಿಯಾಗಿ — ಹೀಗೆ ಅನೇಕ ಸಂಘ ಸಂಸ್ಥೆಗಳಲ್ಲಿ ವಿವಿಧ ಪದಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಬಯಲು ಸೀಮೆಯ ಜನಪದ ಗೀತೆಗಳು’ ಕೃತಿಗೆ ಸಾಹಿತ್ಯ ಅಕಾಡೆಮಿ ಬಹುಮಾನ, ‘ಕರ್ನಾಟಕ ಜಾನಪದ ಕಾವ್ಯಗಳು’ ಕೃತಿಗೆ ರಾಜ್ಯ ಸರ್ಕಾರದ ದೇವರಾಜ್ ಬಹದ್ದೂರ್ ಪ್ರಶಸ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಬಹುಮಾನ, ಡಾ. ಜೀ.ಶಂ.ಪ. ಪ್ರಶಸ್ತಿ, ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯಿಂದ ‘ಜಾನಪದ ತಜ್ಞ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಶ್ರೀಯುತರಿಗೆ ಸಂದಿವೆ.
ಜಾನಪದ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ, ಜಾನಪದ ವಿದ್ವಾಂಸರು ಪ್ರೊ. ಡಿ. ಲಿಂಗಯ್ಯ ಅವರು.
Categories
ಪ್ರೊ. ಡಿ. ಲಿಂಗಯ್ಯ
