Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ|| ಬಿ.ರಾಜಶೇಖರಪ್ಪ

ಕನ್ನಡ ಪ್ರಾಧ್ಯಾಪಕರು, ಇತಿಹಾಸ ಸಂಶೋಧಕರು, ಶಾಸನತಜ್ಞರೂ ಆಗಿರುವ ಡಾ. ಬಿ.ರಾಜಶೇಖರಪ್ಪ ಕ್ರಿಯಾಶೀಲ ಸಾಧಕರು.ದಣಿವರಿಯದ ಸಾಹಿತ್ಯ ಸೇವಕರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಕ್ಕನೂರಿನಲ್ಲಿ ೧೯೪೭ರ ಜೂನ್ ೧೫ರಂದು ಜನಿಸಿದ ರಾಜಶೇಖರಪ್ಪ ಸ್ನಾತಕೋತ್ತರ ಪದವೀಧರರು. ಚಿತ್ರದುರ್ಗ, ಹೊಸದುರ್ಗ, ಹಿರಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಪ್ರಾಧ್ಯಾಪಕರು, ಅಧ್ಯಯನ, ಅಧ್ಯಾಪನ, ಸಾಹಿತ್ಯ ರಚನೆ ಮತ್ತು ಸಂಶೋಧನೆಯಲ್ಲಿ ಸತತ ನಿರತರು. ಭಾಷಾ- ವಿಜ್ಞಾನ, ಗ್ರಂಥ ಸಂಪಾದನೆ, ಶಾಸನಲಿಪಿ, ಹಸ್ತಪ್ರತಿ ಲಿಪಿ ಮುಂತಾದ ಕ್ಷೇತ್ರಗಳಲ್ಲಿ ಕ್ರಿಯಾಶೀಲರು. ಚಿತ್ರದುರ್ಗ ಸುತ್ತಮುತ್ತ ೬೫೦ ಅಪ್ರಕಟಿತ ಶಾಸನಗಳ ಅನ್ವೇಷಕರು. ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದ ಸಂಶೋಧಕರು, ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ೨೦೦ಕ್ಕೂ ಹೆಚ್ಚು ವಿದ್ವತ್ಪಬಂಧಗಳನ್ನು ಮಂಡಿಸಿರುವ ರಾಜಶೇಖರಪ್ಪ ಹತ್ತಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಸಂಶೋಧನಾಶ್ರೀ ಪ್ರಶಸ್ತಿ, ರಾಷ್ಟ್ರೀಯ ಹಂಡೆಶ್ರೀ ಪ್ರಶಸ್ತಿ, ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮುಂತಾದ ಗೌರವಗಳ ಪುರಸ್ಕೃತ ಸಾಧಕರು.