ಸೂಕ್ಷ್ಮಾಣುಜೀವಿಗಳದ್ದು ತಮ್ಮದೇ ಒಂದು ಅದ್ಭುತ ಲೋಕ. ಆ ಲೋಕದಲ್ಲಿ ಪುಟ್ಟ ಪುಟ್ಟ ಕಣ್ಣಿಗೆ ಕಾಣದ ಸಸ್ಯಗಳು, ಪ್ರಾಣಿಗಳು, ಸಸ್ಯ – ಪ್ರಾಣಿಯ ಸಮ್ಮಿಲನದಂತಿರುವ ಜೀವಿಗಳು ಯಥೇಚ್ಛ ಬಗೆಯಲ್ಲಿ ಲಭ್ಯ. ಇದೇ ಸೂಕ್ಷ್ಮಾಣುಜೀವಿಗಳ ಜಗತ್ತಿನ ಪುಟ್ಟ ಪ್ರಾಣಿಗಳನ್ನು ‘ಪ್ರೋಟೋಝೋವಾ’ ಎನ್ನುತ್ತೇವೆ. ಗ್ರೀಕ್ ಭಾಷೆಯಲ್ಲಿ ಇದರ ಅರ್ಥ ‘ಮೊದಲ ಪ್ರಾಣಿ’ ಎಂದು; ಇವನ್ನು ಈ ಹೆಸರಿನಿಂದ ಕರೆಯಲು ಕಾರಣ, ಭೂಮಿಯ ಮೇಲೆ, ಪ್ರಾಣಿಗಳದ್ದು ಎಂದು ವರ್ಗೀಕರಿಸಲಾದ ಗುಣಲಕ್ಷಣಗಳನ್ನು ಹೊತ್ತು, ಹುಟ್ಟಿದ ಮೊದಲ ಜೀವಿಗಳು ಇವೇ! ಮನುಷ್ಯರಲ್ಲಿ, ಪ್ರಾಣಿಗಳಲ್ಲಿ ಹಲವಾರು ಬಗೆಯ ರೋಗಗಳನ್ನು ಉಂಟುಮಾಡುವ ಈ ‘ಪ್ರೋಟೋಝೋವಾ’ವನ್ನು ನಾವು ಸಿಹಿನೀರಿನ ಮತ್ತು ಉಪ್ಪುನೀರಿನ ಜಲಪಾತ್ರಗಳಲ್ಲಿ ಕಾಣಬಹುದು. ಸಾಮಾನ್ಯವಾಗಿ ಸಮುದ್ರ, ನದಿ ತೊರೆಗಳಲ್ಲಿ ಈಜುತ್ತಾ ತೇಲುತ್ತಾ ಕಂಡುಬರುವ ಪ್ರೋಟೋಝೋವಾ ಬಗ್ಗೆ, ಸ್ಥೂಲ ಪರಿಚಯ ಇಲ್ಲಿದೆ.

ವರ್ಗೀಕರಣ:

೧೭೩೫ರಲ್ಲಿ ಕಾರೋಲಾಸ್ ಲಿನೆಯಸ್ ಪ್ರತಿಪಾದಿಸಿದ ‘ಎರಡು ಸಾಮ್ರಾಜ್ಯದ ವರ್ಗೀಕರಣ’ದಲ್ಲಿ ಈ ‘ಪ್ರೋಟೋಝೋವಾ’ಗೆ ಎಡೆಯಿರಲಿಲ್ಲ; ನಂತರ ೧೮೬೦ರಲ್ಲಿ ಹೆಕೆಲ್ ಪ್ರತಿಪಾದಿಸಿದ ‘ಮೂರು ಸಾಮ್ರಾಜ್ಯದ ವರ್ಗೀಕರಣ’ದಲ್ಲಿ, ‘ಅನಿಮೇಲಿಯ’, ‘ಪ್ಲಾಂಟೆ’ ಅಲ್ಲದೇ ‘ಪ್ರೋಟಿಸ್ಟಾ’ ಎಂಬ ಮೂರನೆಯ ಸಾಮ್ರಾಜ್ಯವು, ಎಲ್ಲಾ ಸೂಕ್ಷ್ಮಾಣುಜೀವಿಗಳ ಸಾಮ್ರಾಜ್ಯ ಎನಿಸಿತು. ವೈಜ್ಞಾನಿಕ ಕ್ಷೇತ್ರದಲ್ಲಿ ಹೆಚ್ಚೆಚ್ಚು ನವೀನ ತಂತ್ರಜ್ಞಾನದ ಬಳಕೆಯು ಸಾಧ್ಯವಾದ ಕಾರಣ, ಸೂಕ್ಷ್ಮಾಣುಜೀವಿಗಳ ಬಗ್ಗೆ ಹೆಚ್ಚು ತಿಳಿಯುವುದು ಸಾಧ್ಯವಾಯಿತು; ಹೀಗೆ ಸೂಕ್ಷ್ಮಾಣುಜೀವಿಗಳ ಗುಣಲಕ್ಷಣಗಳ ಬಗ್ಗೆ ಹೆಚ್ಚೆಚ್ಚು ವಿವರಗಳು ದೊರೆಯುತ್ತಾ ಸಾಗಿದ ಹಾಗೆ, ಸೂಕ್ಷ್ಮಾಣುಜೀವಿಗಳಿಗೆ ಕೇವಲ ‘ಪ್ರೋಟಿಸ್ಟಾ’ ಎಂಬ ಒಂದೇ ಸಾಮ್ರಾಜ್ಯ ಸಾಲದು ಎನಿಸಿ, ೧೯೬೯ರಲ್ಲಿ ವಿಟೇಕರ್ ‘ಐದು ಸಾಮ್ರಾಜ್ಯದ ವರ್ಗೀಕರಣ’ವನ್ನು ಪ್ರತಿಪಾದಿಸಿದರು. ಈ ವರ್ಗೀಕರಣದ ಆಧಾರದ ಮೇಲೆ, ಬಹುಕೊಶೀಯ ಸಸ್ಯಗಳು ‘ಪ್ಲಾಂಟೆ’ ಸಾಮ್ರಾಜ್ಯದಲ್ಲಿ ಹಾಗೂ ಬಹುಕೊಶೀಯಪ್ರಾಣಿಗಳು ‘ಅನಿಮೇಲಿಯ’ ಸಾಮ್ರಾಜ್ಯದಲ್ಲೇ ಉಳಿದುಕೊಂಡವು; ಇನ್ನು ಮಿಕ್ಕ ಮೂರು ಸಾಮ್ರಾಜ್ಯಗಳು ಕೇವಲ ಸೂಕ್ಷ್ಮಾಣುಜೀವಿಗಳಿಗೆ ಮೀಸಲಾಗಿದ್ದು, ಬಹುಕೊಶೀಯಶಿಲೀಂಧ್ರಗಳು ‘ಫಂಗೈ’ ಸಾಮ್ರಾಜ್ಯಕ್ಕೆ ಸೇರಿದರೆ, ಅತ್ಯಂತ ಮೂಲಭೂತ ಕೊಶೀಯ ಗುಣಲಕ್ಷಣಗಳನ್ನು ಹೊಂದಿರುವ, ಸ್ಪಷ್ಟ ನ್ಯೂಕ್ಲಿಯಸ್ ಇಲ್ಲದ ಬ್ಯಾಕ್ಟೀರಿಯ, ಕೆಳಮಟ್ಟದ ಪಾಚಿ ಇನ್ನಿತರ ಶೈವಲಗಳು  ‘ಮೊನೇರ’ ಸಾಮ್ರಾಜ್ಯಕ್ಕೆ ಸೇರಿದವು. ‘ಪ್ರೋಟೋಝೋವಾ’  ಏಕಕೊಶೀಯ ಜೀವಿಗಳಾಗಿದ್ದರೂ, ಸ್ಪಷ್ಟ ನ್ಯೂಕ್ಲಿಯಸನ್ನು ಹೊಂದಿದ್ದ, ಸುಧಾರಿತ ಪ್ರಾಣಿಕೋಶವನ್ನುಳ್ಳ ಸೂಕ್ಷ್ಮಾಣುಜೀವಿ ಎಂಬ ಕಾರಣದಿಂದ, ‘ಪ್ರೋಟಿಸ್ಟಾ’ ಸಾಮ್ರಾಜ್ಯದ ಮುಖ್ಯ ಸದಸ್ಯರು ಎನಿಸಿವೆ. ‘ಪ್ರೋಟಿಸ್ಟಾ’ ಸಾಮ್ರಾಜ್ಯವು ಮೂರು ಉಪವಿಭಾಗಗಳನ್ನು ಹೊಂದಿದ್ದು,  ಮೊದಲ ಉಪವಿಭಾಗವು ‘ ಪ್ರೋಟೋಝೋವಾ’ಗೆ ಮೀಸಲಾಗಿದ್ದು, ಮತ್ತೆರಡು ಉಪವಿಭಾಗಗಳು ಏಕಕೊಶೀಯ ಶಿಲೀಂಧ್ರ ಮತ್ತು ಏಕಕೊಶೀಯಶೈವಲಕ್ಕೆ ಮೀಸಲು.

‘ಪ್ರೋಟೋಝೋವಾ’ದ ರೂಪವಿಜ್ಞಾನ

‘ಪ್ರೋಟೋಝೋವಾ’ದ ಇಡಿಯ ದೇಹವೇ ಕೇವಲ ಒಂದು ಜೀವಕೋಶವಷ್ಟೇ ಎಂದರೆ ಆಶ್ಚರ್ಯವಲ್ಲವೇ. ಈ ಪುಟ್ಟ ಪ್ರಾಣಿಗಳು ಸಾಮಾನ್ಯವಾಗಿ ೧ ಮೈಕ್ರೊಮೀಟರ್ನಿಂದ ಮೊದಲ್ಗೊಂಡು ಕೆಲವು ಮಿಲಿಮೀಟರ್ನಷ್ಟು ಗಾತ್ರವಿರುತ್ತವೆ. ಸಮುದ್ರದಲ್ಲಿ ವಾಸಿಸುವ ‘ಝೆನೋಫೈಯೋಫೋರ್’ ಎಂಬುದು ಅತ್ಯಂತ ದೊಡ್ಡ ‘ಪ್ರೋಟೋಝೋವಾ’ ಆಗಿದ್ದು, ೨೦ ಸೆಂಟಿಮೀಟರ್ ಗಾತ್ರ ಹೊಂದಿರುತ್ತದೆ. ಇವುಗಳ ಜೀವಕೋಶವು ಪ್ರಾಣಿಗಳ ಜೀವಕೋಶವನ್ನೇ  ಹೋಲುತ್ತಿದ್ದು, ಹೊರಕವಚವಾಗಿ ಕೋಶಗೋಡೆಯಿಲ್ಲದೆ, ಕೇವಲ ಕೋಶ ಪೊರೆ ಮಾತ್ರ ಇದ್ದು, ಸ್ಪಷ್ಟವಾದ ನ್ಯೂಕ್ಲಿಯಸ್ ಅನ್ನು ಹೊಂದಿರುತ್ತವೆ. ಕೆಲವು ಪ್ರಭೇದಗಳಲ್ಲಿ ಎರಡೆರಡು ನ್ಯೂಕ್ಲಿಯಸ್ ಇದ್ದು, ಒಂದು ದೊಡ್ಡ ನ್ಯೂಕ್ಲಿಯಸ್ ಮತ್ತೊಂದು ಅತ್ಯಂತ ಸೂಕ್ಷ್ಮವಾದ ಪುಟ್ಟ ನ್ಯೂಕ್ಲಿಯಸ್ ಇರುತ್ತವೆ. ಕೋಶಗೋಡೆ ಇಲ್ಲದಿರುವ ಕಾರಣ, ಜೀವಕೋಶಕ್ಕೆ ಹೊರಗಿನ ವಾತಾವರಣದಿಂದ ರಕ್ಷಣೆ ನೀಡಲು, ಕೆಲವು ‘ಪ್ರೋಟೋಝೋವಾ’ ಪ್ರಭೇದಗಳಲ್ಲಿ ‘ಪೆಲಿಕಲ್’ ಎಂಬ ಪದರವಿರುತ್ತದೆ; ಈ ಪದರವು ಸಾಮಾನ್ಯವಾಗಿ ಪ್ರೋಟೀನ್ಯುಕ್ತವಾಗಿದ್ದು, ಕೆಲವೊಮ್ಮೆ ನಮ್ಯತೆಯಿಂದ ಕೂಡಿರುತ್ತದೆ, ಮತ್ತೂ ಕೆಲವೊಮ್ಮೆ ಬಹಳ ಕಠಿಣವಾಗಿರುತ್ತದೆ.  ‘ಪ್ರೋಟೋಝೋವಾ’ ಒಂದೆಡೆಯಿಂದ ಮತ್ತೊಂದೆಡೆ ಚಲಿಸುವ ಸಲುವಾಗಿ ಕಶಾಂಗ (ಫ್ಲಜೆಲ್ಲಾ), ಸ್ಪಂದನ ಲೋಮಾಂಗ (ಸೀಲಿಯಾ) ಅಥವಾ ಸ್ಯೂಡೋಪೋಡಿಯದಂತಹ ಯಾವುದಾದರೂ ಒಂದು ಕ್ರಮಣ ಅಂಗವನ್ನು ಹೊಂದಿರುತ್ತವೆ. ಈ ಕ್ರಮಣ ಅಂಗದ ಸಹಾಯದಿಂದ ತಮ್ಮ ಆವಾಸಸ್ಥಾನಗಳಲ್ಲಿ ಚಲಿಸುತ್ತಾ ಆಹಾರವನ್ನು ಗಳಿಸಿಕೊಳ್ಳುತ್ತವೆ ಅಥವಾ ಜಲಚರಗಳಿಗೆ ಆಹಾರವಾಗುತ್ತವೆ. ಅಮೀಬಾ ಮತ್ತಿತರ ಯಾವುದೇ ನಿಶ್ಚಿತ ಆಕಾರವಿಲ್ಲದ ‘ಪ್ರೋಟೋಝೋವಾ’, ಸಾಮಾನ್ಯವಾಗಿ ಸ್ಯೂಡೋಪೋಡಿಯ ಎಂಬ ಪಾದದಂತಹಾ ಮೈಯ ಹೊರಚಾಚುವಿಕೆಯ ಸಹಾಯದಿಂದ ಚಲಿಸುತ್ತವೆ. ‘ಪ್ಯಾರಮೀಸಿಯಂ’ನಂತಹ ‘ಪ್ರೋಟೋಝೋವಾ’, ಸಿಲಿಯ ಎಂಬ ರೋಮದಂತಹಾ ಕೋಶೀಯ ಹೊರಚಾಚುವಿಕೆಯ ಸಹಾಯದಿಂದ ಚಲಿಸುತ್ತವೆ. ‘ಯುಗ್ಲೀನಾ’ದಂತಹ ‘ಪ್ರೋಟೋಝೋವಾ’, ಫ್ಲಜೆಲ್ಲಾ ಎಂಬ ಚಲನೆಗಾಗಿಯೇ ವಿಶೇಷವಾಗಿ ರೂಪುಗೊಂಡ ಚಾಟಿಯಂತಹಾ ರಚನೆಯ ಸಹಾಯದಿಂದ ಚಲಿಸುತ್ತವೆ.

‘ಪ್ರೋಟೋಝೋವಾ’ದ ಆಹಾರ ಕ್ರಮ

ಬಹಳವೇ ಆಸಕ್ತಿಕರ ಆಹಾರ ಕ್ರಮವನ್ನು ಹೊಂದಿರುವ ‘ಪ್ರೋಟೋಝೋವಾ’, ಸಾಮಾನ್ಯವಾಗಿ ಭಿನ್ನಪೋಷಿತ ಅಥವಾ ಪರಪೋಷಿತ ಜೀವಿಗಳು ಎನಿಸಿಕೊಳ್ಳುತ್ತವೆ. ಇವು ಸೂಕ್ಷ್ಮಾಣು ಲೋಕದ ಪ್ರಾಣಿಗಳೇ ಆಗಿದ್ದು, ಪ್ರಾಣಿಗಳಂತೆಯೇ ಹೊರಗಿನಿಂದ ಆಹಾರವನ್ನು ಸಂಪಾದಿಸಿಕೊಂಡು, ಸೇವಿಸಿ ಅರಗಿಸಿಕೊಳ್ಳುತ್ತವೆ. ಹೊರಗಿನಿಂದ ತಯಾರಾದ ಆಹಾರವನ್ನು ತಮ್ಮ ದೇಹದೊಳಗೆ ಸೇರಿಸಿಕೊಳ್ಳಲು ಕೆಲವು ‘ಪ್ರೋಟೋಝೋವಾ’ ಬಾಯಿಯಂತಹ ರಚನೆಯನ್ನು ಬಳಸುತ್ತವೆ; ಈ ಬಾಯಿಯಂತಹ ರಂಧ್ರವನ್ನು ‘ಸೈಟೋಸೋಮ್’ ಎಂದೂ, ಈ ರೀತಿಯ ಆಹಾರಕ್ರಮಕ್ಕೆ ‘ಫಾಗೊಸೈಟೋಸಿಸ್’ ಎಂದೂ ಕರೆಯುತ್ತೇವೆ. ಇಂತಹ ಆಹಾರಕ್ರಮವನ್ನು ಪಾಲಿಸುವ ‘ಪ್ರೋಟೋಝೋವಾ’ಕ್ಕೆ ಅತ್ಯುತ್ತಮ ಉದಾಹರಣೆ ‘ಪ್ಯಾರಾಮೀಸಿಯಂ’.

ಅಮೀಬಾದಂತಹ ಮತ್ತೂ ಕೆಲವು  ‘ಪ್ರೋಟೋಝೋವಾ’, ಬಾಯಿಯಂತಹಾ ವಿಶೇಷ ರಂಧ್ರವಿಲ್ಲದಿದ್ದರೂ, ಸ್ಯೂಡೋಪೊಡಿಯದಂತಹ ರಚನೆಯನ್ನು ಬಳಸಿಕೊಂಡು, ತಮ್ಮ ಬೇಟೆಯನ್ನು ತಮ್ಮ ದೇಹಕ್ಕೆ ಹತ್ತಿರ ತಳ್ಳಿಕೊಂಡು, ಎಲ್ಲಾ ದಿಕ್ಕುಗಳಿಂದ ಸುತ್ತುವರೆದು, ಆ ಕ್ಷಣಕ್ಕೆ ಒಂದು ತಾತ್ಕಾಲಿಕ ಬಟ್ಟಲಿನಂತೆ ಸೃಷ್ಟಿಸಿಕೊಂಡು, ಬೇಟೆಯನ್ನು ಜೀರ್ಣಿಸಿಕೊಳ್ಳುತ್ತವೆ. ಇಂತಹ ತಾತ್ಕಾಲಿಕ ಬಟ್ಟಲು ಸೃಷ್ಟಿಯ ಮೂಲಕ ಆಹಾರ ಸಂಪಾದಿಸುವ ಕ್ರಮಕ್ಕೆ ‘ಸರ್ಕಂವಲ್ಲೆಶನ್’ ಎನ್ನುತ್ತೇವೆ.

ಕೆಲವು ‘ಪ್ರೋಟೋಝೋವಾ’, ತಾವು ವಾಸಿಸುವ ನದಿ ಅಥವಾ ಸಮುದ್ರದ ನೀರಿನಲ್ಲಿ ತೇಲುತ್ತಿರುವ ಪೋಷಕಾಂಶಗಳ ಸೂಕ್ಷ್ಮಕಣಗಳನ್ನು, ಹೊರಗಿನಿಂದಲೇ ಪರಾಸರಣ ಪ್ರಕ್ರಿಯೆಯ ಮೂಲಕ ಒಳಗೆಳೆದುಕೊಳ್ಳುತ್ತವೆ. ಜೀವಕೋಶ ಪೊರೆಯ ಸಣ್ಣ ಸಣ್ಣ ಸೂಕ್ಷ್ಮ ರಂಧ್ರಗಳ ಮೂಲಕ, ಈ ಪೋಷಕಾಂಶ ಅಣುಗಳು ‘ಪ್ರೋಟೋಝೋವಾ’ದ ದೇಹ ಸೇರುತ್ತವೆ.

‘ಪ್ಲಾಸ್ಮೊಡಿಯಂ’ನಂತಹ ಕೆಲವು ಪರಾವಲಂಬಿ ‘ಪ್ರೋಟೋಝೋವಾ’, ತಮ್ಮ ಒಂದೇ ಜೀವಿತಾವಧಿಯಲ್ಲಿ ಎರೆಡೆರಡು ಬಗೆಯ ಆಹಾರಕ್ರಮವನ್ನು ಪಾಲಿಸುತ್ತವೆ; ತಮ್ಮ ಅಪಕ್ವ ಸ್ಥಿತಿಯಲ್ಲಿ, ಹೊರಗಿನಿಂದ ಪರಾಸರಣದ ಮೂಲಕ ಪೋಷಕಾಂಶಗಳನ್ನು ಹೀರಿಕೊಂಡು ಬದುಕುತ್ತವೆ. ಅತಿಥೇಯ ಜೀವಕೋಶದ ಒಳಗೆ ಪಕ್ವವಾಗುತ್ತಾ ಬೆಳೆದ ಹಾಗೆ, ತಮ್ಮ ಆಹಾರಕ್ರಮವನ್ನು ಬದಲಾಯಿಸಿಕೊಂಡು, ಆಹಾರ ಸೇವಿಸುವ ಸಲುವಾಗಿ ವಿಶೇಷ ‘ಸೈಟೋಸೋಮ್’ ಅನ್ನು ಬೆಳೆಸಿಕೊಳ್ಳುತ್ತವೆ. ನಂತರ ‘ಫಾಗೊಸೈಟೋಸಿಸ್’ ಮೂಲಕ ಈ ಬಾಯಿಯಂತಹ ರಂಧ್ರವನ್ನು ಬಳಸಿಕೊಂಡು ಬೇಟೆಯನ್ನು ನುಂಗಿ, ದೇಹದ ಒಳಗೆ ಅದನ್ನು ಅರಗಿಸಿಕೊಳ್ಳುತ್ತವೆ.

‘ದೈನೋಫಯ್ಸಿಸ್’, ‘ಮಿರಿಯೊನೆಕಟ’, ‘ಹಟೆನಾ’, ‘ಪ್ಯಾರಾಮೀಸಿಯಂ’ನ ಕೆಲವು ಪ್ರಭೇದಗಳು ಇತರೆ ಸೂಕ್ಷ್ಮಾಣುಜೀವಿಗಳೊಂದಿಗೆ ಸಹಜೀವನ ನಡೆಸುವುದೂ ಕಂಡುಬಂದಿದೆ. ಆಗ, ಆ ಜೊತೆಗಾರ ಜೀವಿಯ ಆಹಾರಕ್ರಮದ ಮೂಲಕ ತಮ್ಮ ಉದರಪೋಷಣೆ ನಡೆಸಿಕೊಳ್ಳುತ್ತವೆ ಈ ‘ಪ್ರೋಟೋಝೋವಾ’. ಉದಾಹರಣೆಗೆ, ‘ಪ್ಯಾರಾಮೀಸಿಯಂ’ನ ಜೀವಕೋಶದೊಳಗೆ ಸಹಜೀವನ ನಡೆಸಲು ಬಂದ ‘ಕ್ಲೋರೆಲ್ಲಾ’ ಎಂಬ ಸೂಕ್ಷ್ಮ ಶೈವಲವು, ಪತ್ರಹರಿತ್ತನ್ನು ಹೊಂದಿದ್ದು, ದ್ಯುತಿಸಂಶ್ಲೇಷಣೆಯ ಮೂಲಕ ಆಹಾರ ತಯಾರಿಸಿಕೊಳ್ಳುತ್ತದೆ. ತನಗೆ ಇರಲು ತಾವು ಒದಗಿಸಿದ  ಪ್ಯಾರಾಮೀಸಿಯಂಗೆ ಪ್ರತ್ಯುಪಕಾರ ಎಂಬಂತೆ, ಹೀಗೆ ತಯಾರಿಸಿಕೊಂಡ ಆಹಾರವನ್ನು ಕೊಡಮಾಡುತ್ತದೆ ಮತ್ತು ಪ್ಯಾರಾಮೀಸಿಯಂನ ಉದರಪೋಷಣೆ ಸಲೀಸಾಗಿ ನಡೆದುಹೋಗುತ್ತದೆ.

ಮಾನವರಲ್ಲಿ, ಕೆಲವು ದೊಡ್ಡ ಪ್ರಾಣಿಗಳಲ್ಲಿ ಕಳ್ಳರಿರುವುದು ನಮಗೆಲ್ಲಾ ಗೊತ್ತೇ ಇರುವ ಕಹಿ ಸತ್ಯ. ಯಾವುದೋ ಪಕ್ಷಿಯ ಗೂಡಿನಿಂದ ಮೊಟ್ಟೆ ಕದಿಯುವ ಮತ್ಯಾವುದೋ ಪಕ್ಷಿ, ಯಾವುದೋ ಪ್ರಾಣಿ ಬೇಟೆಯಾಡಿ ತಂದಿಟ್ಟ ಆಹಾರವನ್ನು, ಆ ಪ್ರಾಣಿಗೆ ತಿಳಿಯದಂತೆ ಅಪಹರಿಸುವ ಮತ್ತೊಂದು ಪ್ರಾಣಿ – ಇಂತಹಾ ಉದಾಹರಣೆಗಳನ್ನು ಬೇಕಾದಷ್ಟು ಕಂಡು, ಕೇಳಿ ತಿಳಿದಿರುತ್ತೇವೆ. ಆದರೆ, ಸೂಕ್ಷ್ಮಾಣು ಜೀವಿಗಳ ಲೋಕದಲ್ಲೂ ಕಳ್ಳರೇ ಎಂದು ಹುಬ್ಬೆರಿಸುತ್ತೀರಾ? ಹೌದು, ಕೆಲವು ‘ಪ್ರೋಟೋಝೋವಾ’ ಬಹಳ ನುರಿತ ಕಳ್ಳರೇ ಸರಿ. ‘ಮೆಸೋಡಿನಿಯಂ’ನಂತಹಾ ‘ಪ್ರೋಟೋಝೋವಾ’ ತಮ್ಮ ಬಳಿಸಾರಿದ ಸ್ವಯಂಪೋಷಿತ ಜೀವಿಗಳಿಂದ ಪತ್ರಹರಿತ್ತನ್ನು ಕದ್ದು, ನಂತರ ಆ ಜೀವಿಯನ್ನು ಉಪಾಯವಾಗಿ ಬೇಟೆಯಾಡಿ, ಸೇವಿಸಿ ಅರಗಿಸಿಕೊಂಡು ಬಿಡುತ್ತವೆ. ಹೀಗೆ ಬೇಟೆಗೆ ಮುನ್ನ ಕದ್ದ ಪತ್ರಹರಿತ್ತನ್ನು ಜೋಪಾನವಾಗಿರಿಸಿಕೊಂಡು, ಅದರ ಸಹಾಯದಿಂದ ತಾವೂ ದ್ಯುತಿಸಂಶ್ಲೇಷಣೆಯನ್ನು ನಡೆಸಿ, ತಮ್ಮ ಜೀವಿತಾವಧಿಯಲ್ಲಿ ಒಮ್ಮೊಮ್ಮೆ ಸ್ವಪೋಷಕ ಜೀವಿಗಳಾಗಿಯೂ, ಮತ್ತೊಮ್ಮೆ ಭಿನ್ನಪೋಷಕ ಜೀವಿಗಳಾಗಿ ಹೊರಗಿನ ಆಹಾರದಮೇಲೆ ಅವಲಂಬಿತರಾಗಿಯೂ ಬದುಕುತ್ತವೆ. ಇಂತಹಾ ಪತ್ರಹರಿತ್ತಿನ ಕಳ್ಳತನಕ್ಕೆ ‘ಕ್ಲೆಪ್ಟೋಪ್ಲಾಸ್ಟಿ’ ಎನ್ನುತ್ತೇವೆ.

ಕೆಲವು ಪ್ರೋಟೋಝೋವ, ಪೂತಿಜೀವಿಗಳಾಗಿ ಬದುಕುತ್ತವೆ. ಸತ್ತ ಜೀವಿಗಳ ಕೊಳೆಯುತ್ತಿರುವ ಜೀವಕೋಶಗಳ ಮೇಲೆ, ರಾಸಾಯನಿಕ  ದಾಳಿ ನಡೆಸಿ, ಅವುಗಳಿಂದ ತಮಗೆ ಬೇಕಾದ ಪೋಷಕಾಂಶ ಪಡೆದು ಬದುಕುತ್ತವೆ.

‘ಪ್ರೋಟೋಝೋವಾ’ದ ಸಂತಾನೋತ್ಪತ್ತಿ ಹಾಗೂ ಜೀವನಚಕ್ರ

‘ಪ್ರೋಟೋಝೋವಾ’ ಉಪವಿಭಾಗದ ಸದಸ್ಯರು ಸಾಮಾನ್ಯವಾಗಿ ಅಲೈಂಗಿಕ ಸಂತಾನೋತ್ಪತ್ತಿ ಕ್ರಮಗಳನ್ನು ಪಾಲಿಸುತ್ತವೆ. ಅದರಲ್ಲೂ ಪ್ರಮುಖವಾಗಿ, ಯುಗ್ಮ ವಿದಳನ ಅಥವಾ ದ್ವಿವಿದಳನದ ಮೂಲಕ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ; ಈ ವಿಧಾನದಲ್ಲಿ, ಮೊದಲು ಒಂದು ಪ್ರೋಟೋಝೋವದ ಜೀವಕೋಶದೊಳಗೆ ಇರುವ ನ್ಯೂಕ್ಲಿಯಸ್ ಇಬ್ಭಾಗವಾಗುತ್ತದೆ. ಈ ಪ್ರಕ್ರಿಯೆಯನ್ನು ಅನುಸರಿಸಿ, ಕೋಶವಸ್ತುವೂ ಇಬ್ಭಾಗವಾಗಿ, ನಿಧಾನವಾಗಿ ಒಂದು ಜೀವಕೋಶವು ಎರಡು ಜೀವಕೋಶಗಳಾಗಿ ಮಾರ್ಪಾಡಾಗುತ್ತದೆ. ಈ ಪ್ರಕ್ರಿಯೆಯು ಹೀಗೇ ಮುಂದುವರೆಯುತ್ತಾ, ಆ ಎರಡು ಜೀವಕೋಶಗಳು ನಾಲ್ಕಾಗಿ, ನಾಲ್ಕು ಎಂಟಾಗಿ, ಕ್ಷಣಮಾತ್ರದಲ್ಲಿ ಇಡಿಯ ಜನಸಂಖ್ಯೆಯೇ ದ್ವಿಗುಣಗೊಳ್ಳುವತ್ತ ಸಾಗುತ್ತದೆ.

ಹೀಗೆ, ದ್ವಿವಿದಳನದ ಫಲವಾಗಿ ಹುಟ್ಟಿದ ಪ್ರೋಟೋಝೋವ, ತಮ್ಮ ಆವಾಸಸ್ಥಾನದಲ್ಲಿನ ಪ್ರಸ್ತುತ ವಾತಾವರಣದ ಆಧಾರದ ಮೇಲೆ, ತಮ್ಮ ಜೀವನಚಕ್ರದ ಯಾವ ಸ್ಥಿತಿಗೆ ತಾವು ತಲುಪಬೇಕು ಎಂಬುದನ್ನು ನಿರ್ಧರಿಸುತ್ತವೆ. ಸುತ್ತಲಿನ ವಾತಾವರಣ ಜೀವಪೂರಕವಾಗಿದ್ದರೆ, ಈ ಅಪಕ್ವ ಜೀವಕೋಶಗಳು, ತಮ್ಮ ಪ್ರಭೇದಕ್ಕೆ ಅನುಗುಣವಾಗಿ, ಆಹಾರ ಸಂಪಾದಿಸಿಕೊಂಡು, ಚಲಿಸುತ್ತಾ, ಬೆಳೆಯುತ್ತಾ ಪಕ್ವಗೊಳ್ಳುತ್ತವೆ. ಪಕ್ವವಾದ ನಂತರ ಸಂತಾನೋತ್ಪತ್ತಿಯ ಮೂಲಕ ತಮ್ಮ ವಂಶವನ್ನು ಮುಂದುವರೆಸಿಕೊಳ್ಳುತ್ತಾ ಇನ್ನಿಲ್ಲವಾಗುತ್ತವೆ ಅಥವಾ ಸಂತಾನೋತ್ಪತಿಗೂ ಮೊದಲೇ ಇತರೆ ದೊಡ್ಡ ಜೀವಿಗಳಿಗೆ ಆಹಾರವಾಗುತ್ತವೆ.

ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಈ ಜೀವಕೋಶಗಳ ಜನನವಾದಾಗ, ಪೋಷಕಾಂಶಗಳ ಕೊರತೆ, ನೀರಿನ ಅಲಭ್ಯತೆ, ಪೂರಕ ತಾಪಮಾನ ಇಲ್ಲದಿರುವುದು – ಮುಂತಾದ ಕಾರಣಗಳಿಂದ ಜೀವಪೂರಕ ವಾತಾವರಣ ಇರದೇ ಹೋದರೆ, ಇವು ಸುಪ್ತ ಚೀಲಗಳ ರೂಪ ತಾಳುತ್ತವೆ ಮತ್ತು ವರ್ಷಾನುಗಟ್ಟಲೆ ತಮ್ಮೊಳಗೆ ತಾವೇ ಬಂಧಿಯಾಗಿ, ಪೂರಕ ವಾತಾವರಣ ಸಿಗುವವರೆಗೂ ಕಾಯುತ್ತವೆ; ತಮ್ಮ ಆವಾಸಸ್ಥಾನವು ಪೂರಕ ವಾತಾವರಣದ ಚಿನ್ಹೆಗಳನ್ನು ತೋರ್ಪಡಿಸಿದಾಗ, ತಮ್ಮ ಸುಪ್ತಾವಸ್ಥೆಯಿಂದ ಹೊರಬಂದು, ಸಾಮಾನ್ಯ ಜೀವನಚಕ್ರದಲ್ಲಿ ಪಾಲ್ಗೊಳ್ಳುತ್ತವೆ.

ಇತ್ತೀಚಿನ ಸಂಶೋಧನೆಗಳ ಪ್ರಕಾರ, ಪ್ರೋಟೋಝೋವ ಉಪವಿಭಾಗದಲ್ಲೂ ಲೈಂಗಿಕ ಸಂತಾನೋತ್ಪತ್ತಿ ಪ್ರಕ್ರಿಯೆ ಇರಬಹುದು ಎಂಬ ಸಂದೇಹ ಹೆಚ್ಚಾಗುತ್ತಿದೆ. ವಂಶವಾಹಿಗಳ ಪತ್ತೆಗೆ ಸಂಬಂಧಿಸಿದಂತೆ ಹಲವು ಸುಧಾರಿತ ವಿಧಾನಗಳು, ತಂತ್ರಜ್ಞಾನಗಳು ಈಗ ಲಭ್ಯವಿರುವ ಕಾರಣ, ಪ್ರೋಟೋಝೋವದ ವಂಶವಾಹಿಗಳ ಬಗ್ಗೆ ತಿಳುವಳಿಕೆ ಹೆಚ್ಚುತ್ತಿದ್ದು, ದಿನೇ ದಿನೇ ಈ ಸಂದೇಹಕ್ಕೆ ಪುಷ್ಟಿ ದೊರೆಯುತ್ತಿದೆ. ಗಿಯಾರ್ದಿಯ, ಲೆಷ್ಮಾನಿಯ, ಅಮೀಬಾ, ಟ್ರೈಕೊಮೊನಾಸ್, ಟೋಕ್ಸೋಪ್ಲಾಸ್ಮದ ಕೆಲವು ಪ್ರಭೇದಗಳಲ್ಲಿ ಅವುಗಳದ್ದಲ್ಲದ ಜೀನ್ಗಳು ಕಂಡುಬಂದಿದ್ದು, ಇವು ಅಧ್ಯಯನಗಳಿಗೆ ಇಂಧನವಾಗಿವೆ.

ಪ್ರೋಟೋಝೋವ – ನಮಗೆ ಉಪಯುಕ್ತವೂ ಹೌದು! ಅಪಾಯಕಾರಿಯೂ ಹೌದು!

ಎಲ್ಲಾ ಸೂಕ್ಷ್ಮಾಣು ಜೀವಿಗಳಂತೆ, ಪ್ರೋಟೋಝೋವ ಉಪವಿಭಾಗದ ಹಲವಾರು ಸದಸ್ಯ ಪ್ರಭೇದಗಳು ಕೂಡ, ನಮ್ಮಜೀವನದಲ್ಲಿ ಋಣಾತ್ಮಕ ಹಾಗೂ ಧನಾತ್ಮಕವಾಗಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ;

ಸಾಮಾನ್ಯವಾಗಿ ನದಿ – ಸಮುದ್ರಗಳಲ್ಲಿ ತೇಲುತ್ತಿರುವ ‘ಝೂ ಪ್ಲಾಂಕ್ತನ್’ ಎಂಬ ಹೆಸರಿನ ಪ್ರೋಟೋಝೋವದ ಗುಂಪು ಆಮೆ, ಮೀನು, ತಿಮಿಂಗಲ ಇತ್ಯಾದಿ ಜಲಚರಗಳಿಗೆ ಪ್ರಮುಖ ಆಹಾರ. ಇಂತಹಾ ಜಲಚರಗಳನ್ನು ಸಾಕುಪ್ರಾಣಿಯಾಗಿಸಿಕೊಂಡಾಗ ಅಥವಾ ವಾಣಿಜ್ಯಿಕ ಉದ್ದೇಶದಿಂದ ಬೆಳೆಸುವಾಗ, ಇವೇ ‘ಝೂ ಪ್ಲಾಂಕ್ತನ್’ ಆಹಾರವನ್ನು ನೀಡಲಾಗುತ್ತದೆ.

ಬ್ಯಾಕ್ಟೀರಿಯಾ, ಶಿಲೀಂಧ್ರದಂತೆ ಕೆಲವು ಪ್ರೋಟೋಝೋವ ಕೂಡ ಪೂತಿಜೀವಿಗಳಾಗಿದ್ದು, ಕೊಳಚೆ ನಿಯಂತ್ರಣ ಮತ್ತು ನಿರ್ಮೂಲನೆಗೆ ಸಹಕಾರಿ. ತ್ಯಾಜ್ಯವನ್ನು ಜೈವಿಕವಾಗಿ ವಿಘಟಿಸಿ ಅವುಗಳಿಂದ ಮುಕ್ತಿ ಪಡೆಯಲು, ತ್ಯಾಜ್ಯದ ಮೇಲೆ ಪ್ರೋಟೋಝೋವವನ್ನು ಸಿಂಪಡಿಸಿದಾಗ, ಅವು ತಮ್ಮ ಹೊಟ್ಟೆಹೊರೆಯಲು ಆಹಾರವನ್ನಾಗಿ ಸ್ವೀಕರಿಸುವ ಪ್ರಕ್ರಿಯೆಯಲ್ಲಿ, ಕೊಳೆಯುತ್ತಿರುವ ಜೈವಿಕ ತ್ಯಾಜ್ಯವನ್ನು ಇನ್ನಿಲ್ಲವಾಗಿಸುತ್ತವೆ.

ಕೆಲವು ಪ್ರೋಟೋಝೋವ, ಗೆದ್ದಲು ಹುಳುಗಳ ಹೊಟ್ಟೆಯೊಳಗೆ ಸಹಜೀವನ ನಡೆಸುತ್ತಿದ್ದು, ಗೆದ್ದಲು ಹುಳುಗಳ ಆಹಾರವಾದ ಮರಮುಟ್ಟುಗಳಲ್ಲಿ ಪ್ರಮುಖವಾಗಿರುವ ‘ಸೆಲ್ಯುಲೋಸ್’ಅನ್ನು ಸರಳ ಶರ್ಕರಪಿಷ್ಟವಾಗಿ ಮಾರ್ಪಡಿಸಿ, ಅವುಗಳಿಗೆ ಪೋಷಕಾಂಶ ಒದಗಿಸುತ್ತವೆ. ಹಾಗಾಗಿ, ಗೆದ್ದಲು ಹುಳುಗಳು ನಮ್ಮ ಬಾಗಿಲು, ಕಿಟಕಿ, ಪೀಠೋಪಕರಣಗಳನ್ನು ಹಾಳುಗೆಡವಲು ಪರೋಕ್ಷವಾಗಿ ಈ ಪ್ರೋಟೋಝೋವ ಕೂಡ ಕಾರಣವೇ.

ಹಲವು ಶೈವಲಗಳು ಮತ್ತು ಜಲಚರಗಳ ನಡುವೆ ಆಹಾರಚಕ್ರದ ಕೊಂಡಿಯಾಗಿ, ಪ್ರೋಟೋಝೋವ ಕಾರ್ಯನಿರ್ವಹಿಸುತ್ತವೆ ಹಾಗೂ ಪರೋಕ್ಷವಾಗಿ ನಮ್ಮ ಉದರವನ್ನೂ ಸೇರಿ, ನಮ್ಮ ಆಹಾರಚಕ್ರದ ಭಾಗವೂ ಆಗುತ್ತವೆ.

ಪ್ರೋಟೋಝೋವ ಹಲವು ಅಪಾಯಕಾರಿ ಬ್ಯಾಕ್ಟೀರಿಯಾವನ್ನು ಆಹಾರವಾಗಿ ಸ್ವೀಕರಿಸುತ್ತಾ, ಅವುಗಳ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಟ್ಟು, ನಮ್ಮ ಆರೋಗ್ಯ ಕಾಪಾಡುವಲ್ಲಿ ಸಹಕಾರಿ ಎನಿಸಿಕೊಳ್ಳುತ್ತವೆ. ಅಷ್ಟೇ ಅಲ್ಲದೇ, ಸಸ್ಯಗಳಲ್ಲಿ ರೋಗಗಳನ್ನುಉಂಟುಮಾಡೋ ಬ್ಯಾಕ್ಟೀರಿಯಾವನ್ನು ಇನ್ನಿಲ್ಲವಾಗಿಸಿ, ಸಸ್ಯಗಳನ್ನೂ ಕಾಪಾಡುತ್ತವೆ. ಪೂತಿಜೀವಿ ಪ್ರೋಟೋಝೋವ, ಜೈವಿಕವಾಗಿ ವಿಘಟನೆಯಾಗಬಲ್ಲ ಹಣ್ಣು ತರಕಾರಿಗಳ ಸಿಪ್ಪೆ, ಒಣಗಿದ ಎಲೆಗಳನ್ನು ಸಣ್ಣ ಸಣ್ಣ ಪೋಷಕಾಂಶ ಕಣಗಳಾಗಿಸಿ, ಮಣ್ಣಿನ ಫಲವತ್ತತೆಯನ್ನೂ, ಗುಣಮಟ್ಟವನ್ನೂ ಹೆಚ್ಚಿಸುತ್ತವೆ.

ಹೀಗೆ, ಇನ್ನೂ ಬಹಳಷ್ಟು ಉಪಯೋಗಗಳನ್ನುಳ್ಳ ಪ್ರೋಟೋಝೋವ, ಸಸ್ಯ, ಪ್ರಾಣಿ ಮತ್ತು ಮನುಷ್ಯರಲ್ಲೂ ಹಲವಾರು ರೋಗಗಳನ್ನು ಉಂಟುಮಾಡುತ್ತವೆ;  ಸಸ್ಯಗಳಲ್ಲಿ ಆಹಾರ ಕೊಳವೆಯ ಕ್ಷಯ, ನಾಯಿ, ಹಸು, ಹಂದಿ ಮುಂತಾದ ಪ್ರಾಣಿಗಳಲ್ಲಿ ಬಾಬ್ಸಿಯಾಸಿಸ್, ಪಿರೋಪ್ಲಾಸ್ಮಾಸಿಸ್,ಟೆಕ್ಸಾಸ್ ಜ್ವರ, ಟಿಕ್ ಜ್ವರ ಮತ್ತು ಟ್ರೈಸ್ಟೀಜಾದಂತಹ ಅಪಾಯಕಾರಿ ರೋಗಗಳಿಗೆ  ಪ್ರೋಟೋಝೋವ ಕಾರಣ. ಮನುಷ್ಯರಲ್ಲಿ, ಸಣ್ಣ ಮಟ್ಟದ ಅಮೀಬಿಕ್ ಭೇದಿಯಿಂದ ಮೊದಲ್ಗೊಂಡು ಮಾರಣಾಂತಿಕ ರೋಗಗಳಾದ ಮಲೇರಿಯ. ಲೆಷ್ಮಾನಿಯಾಸಿಸ್, ಟ್ರೈಕೊಮೊನಿಯಾಸಿಸ್, ಆಫ್ರಿಕನ್ ನಿದ್ದೆ ರೋಗದಂತಹ ಹಲವಾರು ಭಯಂಕರ ಆರೋಗ್ಯ ಸಮಸ್ಯೆಗಳಿಗೆ ಪ್ರೋಟೋಝೋವ ಕಾರಣ.

ಪ್ರೋಟೋಝೋವ, ತಮ್ಮ ಹೆಸರಿಗೆ ತಕ್ಕಂತೆ ಸೂಕ್ಷ್ಮಾಣುಜೀವಿ ಲೋಕದ ಪುಟ್ಟ ಪ್ರಾಣಿಗಳೇ ಆದರೂ, ನಮ್ಮ ಜೀವನದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಾಸುಹೊಕ್ಕಾದ ಇವುಗಳ ಮಹತ್ವವೇನೂ ಉದಾಸೀನ ಮಾಡುವಷ್ಟು ಪುಟ್ಟದಲ್ಲ; ಇವುಗಳ ಸಹಕಾರ ತೆಗೆದುಕೊಂಡು ನಮ್ಮ ಜೀವನವನ್ನು ಹೇಗೆ ಸುಧಾರಿಸಿಕೊಳ್ಳಬಹುದೋ, ಹಾಗೆಯೇ, ಇವುಗಳ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ, ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದೂ ಖಂಡಿತ. ಹಾಗಾಗಿ, ನಮ್ಮ ಕಣ್ಣಿಗೆ ಕಾಣದ ಇಂತಹ ಜೀವಿಗಳ ಬಗ್ಗೆ ಮಾಹಿತಿ ತಿಳಿದುಕೊಂಡಷ್ಟೂ ನಾವು ಅಪಾಯದಿಂದ ದೂರವಿರಬಹುದು ಎಂಬುದು ಸತ್ಯ.

– ಕ್ಷಮಾ ವಿ ಭಾನುಪ್ರಕಾಶ್