೧೦೧. ಉತ್ತಮ ಪ್ರೀತಿಗಾಗಿ ದಾಂಪತ್ಯ ಸೂತ್ರಗಳು

 • ದಾಂಪತ್ಯ ಪ್ರೀತಿ : ದಂಪತಿಗಳ ನಡುವೆ ಪ್ರೀತಿ – ವಿಶ್ವಾಸ ಆರೋಗ್ಯಕರವಾಗಿದ್ದರೆ, ಅವರು ಸೆಕ್ಸ್‌ಅನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಾರೆ. ಅಲ್ಲದೆ, ದಾಂಪತ್ಯ ಜೀವನದ ಮುಖ್ಯ ಭಾಗಗಳಲ್ಲಿ ’ಲೈಂಗಿಕತೆ’ ಕೂಡ ಒಂದು ಎಂದು ಭಾವಿಸಿರುತ್ತಾರೆ.
 • ಲೈಂಗಿಕತೆಗಾಗಿ ಸಮಯವನ್ನು ಕಂಡು ಕೊಳ್ಳುತ್ತಾರೆ : ಒಳ್ಳೆಯ ಲೈಂಗಿಕತೆ ಇದ್ದಕ್ಕಿದ್ದಂತೆ ಉಂಟಾಗುವುದಿಲ್ಲ. ಅದಕ್ಕೆ ದಂಪತಿಗಳು ಏಕಾಂತದಲ್ಲಿ ಸಮಯವನ್ನು ಕಂಡುಕೊಳ್ಳಬೇಕು.
 • ಪ್ರೇಮ ಕ್ರೀಡೆ : ದಂಪತಿಗಳು ಸೆಕ್ಸನ್ನು ತುಂಬ ಸೀರಿಯಸ್ಸಾಗಿ ತೆಗೆದುಕೊಳ್ಳದೆ ಏಕಾಂತದಲ್ಲಿ, ಬೆಡ್‌ರೂಮಿನಲ್ಲಿ ಪ್ರೇಮ ಕ್ರೀಡೆಯೆಂದು ಭಾವಿಸಿ ಅನುಭವಿಸುತ್ತಾರೆ. ಬೆಡ್‌ರೂಮಿನಲ್ಲಿ ’ರತಿ’ಯ ಬಗ್ಗೆ ಮೆಲ್ಲಗೆ ಮಾತನಾಡುತ್ತ ನಗು, ನಗುತ್ತ ರತಿಯಲ್ಲಿ ಪಾಲ್ಗೊಳ್ಳುತ್ತಾರೆ. ಪರಸ್ಪರ ಗಂಡ – ಹೆಂಡತಿ ಪ್ರೇ ಕ್ರೀಡೆಯ ನಂತರ ಒಳ್ಳೆಯ ಭಾವನೆ ಹೊಂದುತ್ತಾರೆ.
 • ವೈವಿಧ್ಯಮಯವಾದ ಸಂತೋಷ : ಸೆಕ್ಸನ್ನು ಆರೋಗ್ಯಕರವಾಗಿ ಕಾಣುವ ಗಂಡ – ಹೆಂಡತಿ ಸೆಕ್ಸನ್ನು ಬೆಡ್‌ರೂಮಿನಲ್ಲಿ ವೈವಿದ್ಯಮಯವಾಗಿ ಎಂಜಾಯ್ ಮಾಡುತ್ತಾರೆ.
 • ದಂಪತಿಗಳ ನಡುವೆ ನವಿರಾದ ಮಾತು : ಬೆಡ್‌ರೂಮಿನಲ್ಲಿ ಪ್ರೀತಿ – ಪ್ರೇಮದಿಂದ ನವಿರಾಗಿ ಹೇಗೆ ಮಾತನಾಡಬೇಕೆಂದು ದಂಪತಿಗಳು ತಿಳಿದಿರುತ್ತಾರೆ. ಸೆಕ್ಸ್ ಬಗ್ಗೆ ಏಕಾಂತದಲ್ಲಿ ಮಾತನಾಡುತ್ತ ತಮ್ಮ ಅಗತ್ಯತೆಗಳನ್ನ ಪೂರೈಸಿಕೊಳ್ಳುತ್ತಾರೆ.
 • ರತಿ ರಹಸ್ಯಗಳನ್ನು ಹಂಚಿಕೊಳ್ಳುತ್ತಾರೆ. : ಲೈಂಗಿಕ ತೃಪ್ತಿ ಹೊಂದಿದ ದಂಪತಿಗಳು ಪರಸ್ಪರ ಯಾವ ಪ್ರೇಮದಾಟದಿಂದ ಭಾವಪ್ರಾಪ್ತಿಯಾಯ್ತು ಎಂಬುದನ್ನು ಏಕಾಂತದಲ್ಲಿ ಹಂಚಿಕೊಳ್ಳುತ್ತಾರೆ. ಅಲ್ಲದೆ, ಹೇಗೆ ಪರಸ್ಪರ ಸ್ಪರ್ಶಾನಂದವನ್ನು ಗಳಿಸಬೇಕು ಎಂಬುದನ್ನು ಅರಿತಿರುತ್ತಾರೆ.

* * *

೧೦೨. ದಾಂಪತ್ಯ ಜೀವನ ಸಾಮರಸ್ಯಕ್ಕಾಗಿ ಸಲಹೆಗಳು

 • ನಿಮ್ಮ ಪತಿ/ಪತ್ನಿಯನ್ನು ನಿಮ್ಮ ಸಂಗಾತಿ ಎಂದು ಮೊದಲು ಒಪ್ಪಿಕೊಳ್ಳಿರಿ.
 • ನಿಮ್ಮ ಸಂಗಾತಿಗೆ ಹುಷಾರಿಲ್ಲದಾಗ ಹೆಚ್ಚಿನ ಆರೈಕೆ ಮಾಡುವುದನ್ನು ಮರೆಯಬೇಡಿ. ನಿಮಗೆ ಬೆಂಬಲ ಬೇಕಿದ್ದರೆ ಕೇಳಿ ಪಡೆಯಿರಿ. ಸಂಕೋಚಪಡಬೇಡಿ.
 • ಇತರರ ಮುಂದೆ ನಿಮ್ಮ ಸಂಗಾತಿಯನ್ನು ಅವಮಾನ ಮಾಡಬೇಡಿ. ಆಕೆಯಲ್ಲಿ / ಆತನಲ್ಲಿ ತಪ್ಪಿದ್ದರೆ ಏಕಾಂತದಲ್ಲಿ ಪ್ರಶಾಂತವಾದ ಮನಸ್ಸನ್ನು ಹೊಂದಿರುವಾಗ ತಿಳಿಸಿ.
 • ನಿಮ್ಮಲ್ಲಿ ಕೋಪ ಇದ್ದಾಗ ಮಾತಾಡದೆ ಮೌನವಾಗಿರುವುದು ಸೂಕ್ತ.
 • ಇತರರ ಮುಂದೆ ನಿಮ್ಮ ಸಂಗಾತಿಯನ್ನು ಗೌರವಿಸಿ – ವಿಶೇಷವಾಗಿ ಮಕ್ಕಳ ಮುಂದೆ.

* * *

೧೦೩. ಆರೋಗ್ಯಕರ ದಾಂಪತ್ಯ

ಭಾರತದಲ್ಲಿ ಲೈಂಗಿಕತೆ ಆರೋಗ್ಯಕರವಾದ ಅಸ್ತಿತ್ವವನ್ನು ಹೊಂದಿದೆ. ಲೈಂಗಿಕತೆ, ಮುಖ್ಯವಾಗಿ ದಾಂಪತ್ಯ ಜೀವನದಲ್ಲಿ ತೃಪ್ತಿ ಮತ್ತು ಭಾವಪ್ರಾಪ್ತಿ ನೀಡುವಂತಹ ಅದ್ಭುತ ಯಕ್ಷಿಣಿ!

ಭಾರತೀಯ ಸಂಸ್ಕೃತಿಗೆ ಮಾರಕವಾದ ಪಾಶ್ಚಿಮಾತ್ಯ ಲೈಂಗಿಕ ಪದ್ಧತಿಗಳನ್ನು ಅನುಕರಣೆ ಮಾಡುವುದು ಸೂಕ್ತವಲ್ಲ. ಮುಕ್ತ ಕಾಮ ಅಥವಾ ಫ್ರೀ ಸೆಕ್ಸ್ ಹಲವು – ಹತ್ತು ಸಮಸ್ಯೆಗಳನ್ನು ಉಂಟು ಮಾಡುವುದಲ್ಲದೆ, ಲೈಂಗಿಕ ರೋಗ ಅಥವಾ ಏಡ್ಸ್ ಸೋಂಕನ್ನು ಉಂಟು ಮಾಡುತ್ತದೆ. ಆದುದರಿಂದ ಬಹು ಜನರೊಡನೆ ಲೈಂಗಿಕ ಸಂಪರ್ಕ ಅಪಾಯವೂ ಹೌದು, ಹಾನಿಕಾರವೂ ಹೌದು.

ದಾಂಪತ್ಯದಲ್ಲಿ ಆರೋಗ್ಯಕರ ಲೈಂಗಿಕ ಚಟುವಟಿಕೆ, ಏಕಪತ್ನಿ ಅಥವಾ ಏಕಪತಿಯನ್ನು ಹೊಂದುವುದರಿಂದ ಸಂಸಾರ ಸುಗಮವಾಗಿ ಸಾಗಲು ಅನುಕೂಲವಾಗುತ್ತದೆ. ನಲವತ್ತು ವರ್ಷವಾದ ನಂತರ ಗಂಡ – ಹೆಂಡತಿ ಇಬ್ಬರೂ ವೈದ್ಯಕೀಯ ತಪಾಸಣೆಯನ್ನು ಮಾಡಿಸಿಕೊಳ್ಳುವುದರಿಂದ ದೇಹದಲ್ಲಿ ತೊಂದರೆ ಇದ್ದರೆ ಸೂಕ್ತ ಚಿಕಿತ್ಸೆ ಪಡೆಯುವುದರಿಂದ, ರೋಗ ಉಲ್ಬಣವಾಗುವುದು ತಪ್ಪುತ್ತದೆ.

ದಂಪತಿಗಳಿಬ್ಬರ ದೇಹ – ಮನಸ್ಸು ಆರೋಗ್ಯವಾಗಿದ್ದು, ಪರಸ್ಪರ ಸಾಮರಸ್ಯವಿದ್ದರೆ ದಾಂಪತ್ಯ ಜೀವನ ಹಿತವಾಗಿರುತ್ತದೆ; ಖುಷಿಯನ್ನು ಕೊಡುತ್ತದೆ.

* * *

೧೦೪. ಇಂದ್ರಿಯ ಸುಖದ ರತಿ ಎಂದರೇನು?

ಇಂದ್ರಿಯಗಳನ್ನು ಉತ್ತೇಜಿಸುವಂತಹುದನ್ನು ಇಂದ್ರಿಯ ಸುಖದ ರತಿ ಎನ್ನುತ್ತಾರೆ. ಇಂದ್ರಿಯ ಸುಖದ ಅರ್ಥ – ಪಂಚೇಂದ್ರಿಯಗಳು ತೃಪ್ತಿ ಹೊಂದುವುದು ಎಂದು. ಅಂದರೆ, ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಉತ್ತೇಜನಗೊಂಡ ನಂತರ ರತಿ ಸಂತೋಷವನ್ನು ಹೊಂದುವದು.

ದಂಪತಿಗಳು, ರತಿಯಲ್ಲಿ ತೊಡಗುವ ಮೊದಲು ಪರಸ್ಪರ ಸ್ಪರ್ಶಿಸಿಕೊಳ್ಳುವುದು ಮೈ ಚರ್ಮದಿಂದ ಹೊರಬರುವ ಮಧುರ ಬೆವರಿನ ವಾಸನೆಯನ್ನು ಆನಂದದಿಂದ ಆಸ್ವಾದಿಸುವುದು, ಮುಖಾಮುಖಿಯಾಗಿ ಗಂಡ ಹೆಂಡತಿ ಕೂತು ಕಣ್ಣುಗಳಿಂದ ನೋಡುತ್ತ ನೇತ್ರಾನಂದವನ್ನು ಅನುಭವಿಸುವುದು, ಪತಿ – ಪತ್ನಿ ಪರಸ್ಪರ ತಮ್ಮ ತುಟಿ ಹಾಗೂ ನಾಲಿಗೆಯನ್ನು ಉಪಯೋಗಿಸಿ ಚುಂಬಿಸುವುದೇ ಅಲ್ಲದೆ, ರುಚಿಯನ್ನು ಹಂಚಿಕೊಳ್ಳುವುದು ಮತ್ತು ದಂಪತಿಗಳಿಬ್ಬರು ಮನಸ್ಸಿಗೆ ಮುದ ನೀಡುವ ಮಾತುಗಳನ್ನಾಡುತ್ತ ಕರ್ಣಾನಂದವನ್ನು ಹೊಂದುವಂತಹುದ್ದಾಗಿರುತ್ತದೆ. ಈ ರೀತಿ ಪಂಚೇಂದ್ರಿಯಗಳ ಮೇಲೆ ದಂಪತಿಗಳು ಮನಸ್ಸನ್ನು ಕೇಂದ್ರೀಕರಿಸಿ, ರತಿ ಅನುಭವವನ್ನು ಅನುಭವಿಸಿ, ಆಹ್ಲಾದಕರವಾಗಿ ವರ್ತಿಸುವಂತಹುದೇ ಇಂದ್ರಿಯ ಸುಖದ ರತಿ ಆನಂದವಾಗಿರುತ್ತದೆ.

* * *

೧೦೫. ಸಂಭೋಗ ಆದ ಕೂಡಲೇ ಮೂತ್ರ ವಿಸರ್ಜನೆ

ಸಂಭೋಗ ಆದ ಕೂಡಲೇ ಮೂತ್ರ ವಿಸರ್ಜಿಸಲು ಸ್ತ್ರೀ ಎದ್ದು ಹೊರಗೆ ಹೋದರೆ ಯೋನಿ ಮಾರ್ಗದಲ್ಲಿ ಸ್ಖಲಿಸಿದ ವೀರ‍್ಯ ಹೊರಗಡೆ ಸುರಿದು ಹೋಗುವ ಅವಕಾಶವಿದೆ. ಆದುದರಿಂದ, ಗರ್ಭಧಾರಣೆ ಆಗಬೇಕೆಂದು ಆಶಿಸುವ ಸ್ತ್ರೀಯರು ರತಿ ಮುಗಿದ ನಂತರ ಸ್ವಲ್ಪ ಹೊತ್ತು ಎದ್ದು ಕೂಡಬಾರದು. ಎದ್ದು ಬಚ್ಚಲು ಮನೆಗೆ ಹೋಗಬಾರದೆಂದು ಸಲಹೆ ಕೊಡಲ್ಪಡುತ್ತದೆ. ಕೆಲವು ಸ್ತ್ರೀಯರು ರತಿ ಮುಗಿದ ಕೂಡಲೇ ಜನನೇಂದ್ರಿಯಗಳನ್ನು ನೀರಿನಿಂದ ತೊಳೆದುಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಗರ್ಭಧಾರಣೆಯಾಗುವ ಸಂಭವ ಕಡಿಮೆ. ಗರ್ಭಧಾರಣೆ ಆಗಬೇಕೆಂದು ಆಶಿಸುವ ಸ್ತ್ರೀ ಕನಿಷ್ಠ ಅಂಡಾಣು ಬಿಡುಗಡೆಯಾಗುವ ದಿನಗಳಂದು ಸಂಭೋಗ ಮುಗಿದ ಕೂಡಲೇ ಏಳದೆ ಸ್ವಲ್ಪ ಹೊತ್ತು ಮಲಗಿರಬೇಕು.

* * *

೧೦೬. ದಾಂಪತ್ಯ ಸಂಬಂಧದ ಸಮಸ್ಯೆಗಳ ನಿವಾರಣೆ

ಗಂಡ – ಹೆಂಡತಿ ಸಂಬಂಧದಲ್ಲಿ ಲೈಂಗಿಕ ಆಸಕ್ತಿಯ ಕೊರತೆ ಇದ್ದರೆ. ಲೈಂಗಿಕ ಹೊಂದಾಣಿಕೆ ಇಲ್ಲದಿದ್ದರೆ ಅಥವಾ ಲೈಂಗಿಕ ದೌರ್ಬಲ್ಯವಿದ್ದರೆ ’ಇಂದ್ರಿಯ ಸುಖದ ರತಿ’ ಅದನ್ನು ನಿವಾರಿಸುವಲ್ಲಿ ಮುಖ್ಯಪಾತ್ರವನ್ನು ವಹಿಸುತ್ತದೆ. ಅಲ್ಲದೆ, ಇದು ದಂಪತಿಗಳನ್ನು ಭಾವನಾತ್ಮಕವಾಗಿ, ಲೈಂಗಿಕವಾಗಿ ಒಂದುಗೂಡಿಸುವಲ್ಲಿ ಸಹಕಾರಿಯಾಗಿರುತ್ತದೆ.

ಸುರಕ್ಷಿತವಾಗಿ ರತಿಯನ್ನು ಹೇಗೆ ಅನುಭವಿಸಿ, ಆನಂದಿಸಬೇಕು ಹಾಗೂ ಆರೋಗ್ಯಕರವಾಗಿ ಇಂದ್ರಿಯಗಳನ್ನು ಹೇಗೆ ಬಳಸಬೇಕೆಂಬುದನ್ನು ಕಲಿಸುತ್ತದೆ. ಅಲ್ಲದೆ, ಗಂಡ – ಹೆಂಡತಿಯ ದೇಹಗಳನ್ನು ಇಂದ್ರಿಯಗಳನ್ನು ಭಾವನೆಗಳನ್ನು ಒಂದುಗೂಡಿಸುವ ’ಪ್ರೇಮ ಚಿಕಿತ್ಸೆ’ಯಾಗಿರುತ್ತದೆ.

ಇಂದ್ರಿಯ ಸುಖದ ರತಿಯಿಂದ ಲಭಿಸುವ ಸೌಲಭ್ಯಗಳು…

 • ದಂಪತಿಗಳ ನಡುವೆ ಆಳವಾದ ಅನುಬಂಧವನ್ನು ಉಂಟು ಮಾಡುತ್ತದೆ; ಸಾಮಿಪ್ಯ ಸಂಬಂಧದಲ್ಲಿ ಹೊಸತನವನ್ನು ಕಂಡುಕೊಳ್ಳಲು ಅವಕಾಶ ಮಾಡಿಕೊಡುತ್ತದೆ.
 • ನವದಂಪತಿಗಳು ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.
 • ಇಳಿವಯಸ್ಸಿನ ದಂಪತಿಗಳು ಲೈಂಗಿಕ ಚೇತರಿಕೆಯನ್ನು ಗಳಿಸಿ ರತಿ ಆನಂದವನ್ನು ಅನುಭವಿಸುವುದು ಹೇಗೆ ಎಂಬ ಜಾಗೃತಿಯನ್ನು ಮೂಡಿಸುತ್ತದೆ.
 • ಲೈಂಗಿಕ ಸಂಭೋಗವನ್ನು ಮುಂದೂಡಲು ಸಹಾಯ ಮಾಡುತ್ತದೆ.
 • ಬಹಳ ದಿನ ದೂರವಿದ್ದ ದಂಪತಿಗಳು ಒಂದಾಗಿ, ’ರತಿಸುರತಿ’ ಯನ್ನು ಹೇಗೆ ಎಂಜಾಯ್ ಮಾಡಬೇಕೆಂಬುದನ್ನು ತಿಳಿಸುತ್ತದೆ.
 • ದಂಪತಿಗಳ ನಡುವೆ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಮನಸ್ಸು – ದೇಹವನ್ನು ರತಿಗೆ ಪ್ರೇರೇಪಿಸುತ್ತದೆ.
 • ದಂಪತಿಗಳು, ತಮ್ಮ ದೇಹ – ಮನಸ್ಸು ಉತ್ತೇಜನಗೊಂಡಾಗ ಪಂಚೇಂದ್ರಿಯಗಳು ಹೇಗೆ ಖುಷಿ ನೀಡುತ್ತವೆ ಎಂಬುದನ್ನು ಸ್ವಯಂ ಆಗಿ ಅನುಭವಿಸಲು ಆಸ್ಪದ ಮಾಡಿಕೊಡುತ್ತದೆ.
 • ದಾಂಪತ್ಯದಲ್ಲಿ ಏಕಾಂತತೆಯ ಮಹತ್ತ್ವದ ಅರಿವನ್ನು ಮೂಡಿಸುತ್ತದೆ.

* * *

೧೦೭. ದಾಂಪತ್ಯದಲ್ಲಿ ಮೆಚ್ಚುಗೆಯ ಮಹತ್ವ

ಪತಿ – ಪತ್ನಿಯರ ನಡುವೆ ಪ್ರೀತಿ, ಪ್ರೇಮದ ಜೊತೆಗೆ ಕೊಟ್ಟು – ತೆಗೆದುಕೊಳ್ಳುವ ಪ್ರವೃತ್ತಿ ಇರುವುದು ಅಗತ್ಯ. ಅಲ್ಲದೆ, ಪತ್ನಿ ಸಿದ್ಧಪಡಿಸಿದ ಅಡುಗೆಯನ್ನು, ಆಕೆ ಮಾಡಿಕೊಂಡ ಮೇಕಪ್ ಅಥವಾ ಡ್ರೆಸ್ ಬಗ್ಗೆ ಕುರಿತು ಮೆಚ್ಚುಗೆ ಸೂಚಿಸುವುದರಿಂದ ಗಂಡನ ಬಗ್ಗೆ ಆಸಕ್ತಿ, ಅಭಿಮಾನ ಹೆಚ್ಚುತ್ತದೆ. ಅದೇ ರೀತಿ ಗಂಡ ಮಾಡಿಕೊಂಡ ಡ್ರೆಸ್, ಅಥವಾ ಕಾರ‍್ಯಶೀಲತೆಯ ಕುರಿತು ಹೆಂಡತಿ ಮೆಚ್ಚುಗೆ ಅಭಿವ್ಯಕ್ತಿಸುವುದರಿಂದ ಆತನಲ್ಲೂ ಹೆಂಡತಿಯ ಬಗ್ಗೆ ಅಭಿಮಾನ – ಆಸ್ಥೆ ಹೆಚ್ಚುತ್ತವೆ.

ದಿನದ ಯಾವುದಾದರೂ ಬಿಡುವಿನ ಸಮಯದಲ್ಲಿ ದಂಪತಿಗಳು ಪರಸ್ಪರ ಮೆಚ್ಚುಗೆಯ ಮಾತುಗಳನ್ನು ಹಂಚಿಕೊಳ್ಳುವುದರಿಂದ ದಾಂಪತ್ಯದಲ್ಲಿ ಸಂತೋಷ ವೃದ್ಧಿಸುತ್ತದೆ. ಅಲ್ಲದೆ, ಮೆಚ್ಚುಗೆಯ ಮಾತು ಗಂಡ – ಹೆಂಡತಿ ಮನಸ್ಸಿಗೆ ಹಿತವನ್ನು ಉಂಟು ಮಾಡುತ್ತದೆ; ಪಾಸಿಟಿವ್ ಆಗಿ ವರ್ತಿಸಬೇಕೆಂಬ ಮನೋಭಾವನೆಯೂ ಮೂಡುತ್ತದೆ.

ಗಂಡ – ಹೆಂಡತಿ ಮಾತಿನಿಂದ ಮೆಚ್ಚಗೆ ಸೂಚಿಸುವುದೆ ಅಲ್ಲದೆ, ಏಕಾಂತದಲ್ಲಿ ಸಂಗಾತಿಯ ಬೆನ್ನು ತಟ್ಟಿರುವುದರಿಂದ, ಒಂದು ನವಿರಾದ ’ಕಿಸ್’ ಕೊಡುವುದರಿಂದ ಅಥವಾ ಉಪಯುಕ್ತ ಉಡುಗೊರೆಯನ್ನು ವಿನಿಮಯ ಮಾಡಿಕೊಳ್ಳುವುದರಿಂದಲೂ ಮೆಚ್ಚುಗೆ ಸೂಚಿಸಬಹುದು.

* * *

೧೦೮. ಶಿಶು ಜನನದ ನಂತರ ಲೈಂಗಿಕತೆ

ಲೈಂಗಿಕತೆ, ಗಂಡ – ಹೆಂಡತಿ ಇಬ್ಬರಿಗೂ ಅಗತ್ಯವಾಗಿರುವುದರಿಂದ ಅದರ ಬಗ್ಗೆ ಚರ್ಚಿಸಿ, ರತಿಕ್ರಿಯೆಯಲ್ಲಿ ತೊಡಗಬಹುದು.

ಶಿಶಿ ಜನನದ ನಂತರ ಸ್ತ್ರೀಗೆ ಯಾವುದೇ ಹೊಲಿಗೆಯನ್ನು ಹಾಕದಿದ್ದರೆ, ನಾರ್ಮಲ್‌ಹೆರಿಗೆಯಾಗಿದ್ದರೆ, ಹೆರಿಗೆಯಾದ ಎರಡು ವಾರಗಳ ನಂತರ, ಸಹಜ ಲೈಂಗಿಕ ಸಂಭೋಗದಲ್ಲಿ ಆಕೆ ತೊಡಗಬಹುದು (ಕೆಲವು ಸಂದರ್ಭಗಳಲ್ಲಿ ಹೊರತುಪಡಿಸಿ). ಸಾಮಾನ್ಯವಾಗಿ ಹೆರಿಗೆಯಾದ ಆರು ವಾರಗಳ ನಂತರ ಎಲ್ಲ ಸ್ತ್ರೀಯರು ಪುನಃ ಲೈಂಗಿಕತೆಯನ್ನು ಹೊಂದಲು ಇಷ್ಟಪಡುತ್ತಾರೆ.

ಹೆರಿಗೆಯಾದ ಆರು ವಾರಗಳ ನಂತರ ಸ್ತ್ರೀ, ಗಂಡನೊಡನೆ ಲೈಂಗಿಕ ಸಂಭೋಗದಲ್ಲಿ ತೊಡಗುವುದರಿಂದ ಆಕೆಯ ಗರ್ಭಕೋಶ ನಾರ್ಮಲ್‌ಸ್ಥಿತಿಗೆ ಬೇಗನೆ ಬರುತ್ತದೆ.

ಅಲ್ಲದೆ, ತನ್ನ ಮಗುವಿಗೆ ತನ್ನ ಎದೆ ಹಾಲನ್ನು ಕುಡಿಸುವುದರಿಂದ, ಆಕೆಯ ಲೈಂಗಿಕಾಂಗಗಳು ಬಹಳ ಬೇಗನೆ ನಾರ್ಮಲ್ ಸ್ಥಿತಿಗೆ ಬರುತ್ತವೆ.

ಕೆಲವು ಸ್ತ್ರೀಯರು ತಾಯ್ತನದ ಬಗ್ಗೆ ಸಂತೋಷವನ್ನು ಹೊಂದುವುದಿಲ್ಲ. ಸಿಸೇರಿಯನ್ ಹೆರಿಗೆಯಾಗಿದ್ದರೆ ಅಥವಾ ಯೋನಿಯ ಭಾಗದಲ್ಲಿ ಹೊಲಿಗೆಯನ್ನು ಹಾಕಿದ್ದರೆ, ಹುಣ್ಣಿನ ಮೇಲೆ ಒತ್ತಡ ಬಿದ್ದರೆ, ನೋವನ್ನು ಅನುಭವಿಸುತ್ತಾರೆ. ಆದುದರಿಂದ, ಗಂಡನಾದವನು ಹೆಂಡತಿಯ ದೇಹಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.

ಶಿಶು ಜನನದ ನಂತರ, ಸ್ತ್ರೀ ಗರ್ಭ ನಿರೋಧಕ ಸಾಧನವನ್ನು ಬಳಸದೆಯೆ ಸಂಭೋಗದಲ್ಲಿ ತೊಡಗುವುದು ಸೂಕ್ತವಲ್ಲ. ಎದೆ ಹಾಲು ಕುಡಿಸುತ್ತಿರುವ ಸ್ತ್ರೀ ಸುಮಾರು ೧೪ ತಿಂಗಳವರೆಗೆ ಅಂಡಾಣುವನ್ನು ಬಿಡುಗಡೆ ಮಾಡುವುದಿಲ್ಲ.

ಸಂಭೋಗದಿಂದ ನೋವು ಉಂಟಾಗುವಂತಿದ್ದರೆ ಓರಲ್ ಸೆಕ್ಸ್, ಪರಸ್ಪರ ಹಸ್ತುಮೈಥುನ, ಮುದ್ದಾಡುವುದು, ಮಸಾಜ್ ಮಾಡುವುದೇ ಮೊದಲಾದ ಸಂಭೋಗ ರಹಿತ ರತಿಕೇಳಿಯಲ್ಲಿ ದಂಪತಿಗಳು ತೊಡಗಬಹುದು.

* * *