‘ಶಾರ್ವರಿ’ ಹೋಯಿತು, ‘ಪ್ಲವ’ ಬಂದಿತು
ನಿಮಗೋ ಯುಗಾದಿ ಶುಭಾಶಯ.
ಎಂಥ ಶುಭಾಶಯ ಹೇಳಿದರೂ, ಇಗೊ
ವರ್ಷ ಭವಿಷ್ಯದೊಳೇನೊ ಭಯ.

ಬೆಲ್ಲಕ್ಕಿಂತಲು ಬೇವೇ ಮಿಗಿಲು
ನಿಮ್ಮೆದುರಿನ ಈ ತಟ್ಟೆಯಲಿ.
ಏನು ಮಾಡುವುದು ಹೀಗೆ ಬರೆದಿದೆ
ಈ ವರ್ಷದ ಪಂಚಾಂಗದಲಿ.

“ಎಮ್ಮೆಗೆ, ಒಂಟೆಗೆ, ಕತ್ತೆಗೆ ಪೀಡೆ,”
ವರ್ಷಭವಿಷ್ಯದ ವಾಣಿಯಿದು.
ಪಾಪ, ಬಹುಜನಕೆ ತೊಂದರೆ ಈ ಸಲ
ಸುಖವಾಗಿದ್ದರು ಇಷ್ಟು ದಿನ.

“ಪ್ರಳಯಗಳಾಗುವ ಸೂಚನೆ ತುಂಬಿದೆ,”
ಆಗುವ ಮೊದಲೇ ಎಚ್ಚರಿರು.
ಹಳೆಯ ಬಾಕಿಗಳ ವಸೂಲ್ಮಾಡಿಕೋ
ಹೊಸತು ಷೇರುಗಳ ಹಾಕದಿರು.

“ರಾವಣಸಂಹಾರದ ಕಾಲದ ಹಾಗೆಯೆ
ಸಮಸ್ತ ಗ್ರಹಗಳು ಒಂದೆ ಕಡೆ
ಸೇರಿಕೊಂಡಿವೆ ಈ ಸಂವತ್ಸರದಲಿ,
ಬಂತೋ ಭೂಮಿಗೆ ಇಂದೆ ಕಡೆ.”

ಹಾಗಾದರೆ ಈಗಾದರು ಆಗುವುದಲ್ಲವೆ
ಕಡೆಗೂ ರಾವಣ ಸಂಹಾರ-
ವರ್ಷ ಭವಿಷ್ಯದ ಈ ಶುಭವಾರ್ತೆಗೆ
ಇಗೊ ಅಭಿವಂದನೆ ಮನಸಾರ.

ರಾವಣ ಸಂಹಾರವೆ? ಅಯ್ಯೋ ಮಂಕೆ
ನಂಬಬಹುದೆ ಈ ವಾಣಿಯನು?
ರಾವಣಶಕ್ತಿಯೆ ಗುತ್ತಿಗೆ ಹಿಡಿದಿದೆ
ಎಂದಿನಿಂದ ಈ ಭೂಮಿಯನು!

ರಾಕ್ಷಸ ಶಕ್ತಿಯೆ ಸ್ಥಾಯಿಯಾಗಿರಲು
ಅವತಾರವೆ ಸಂಚಾರಿ!
ರಾವಣರದೆ ಈ ರಾಜ್ಯ ಎಂದಿಗೂ,
ರಾಮನಿಗೆಲ್ಲಿದೆ ರಹದಾರಿ?