ಪ್ಲಾಸ್ಟಿಕ್ ಇಲ್ಲದ ಜಾಗವೇ ಇಲ್ಲ.  ಹೃದಯದ ಕವಾಟದಿಂದ ಹಿಡಿದು ಚಂದ್ರವನರೆಗೂ ಪ್ಲಾಸ್ಟಿಕ್‌ಮಯ.  ದಿನೇ ದಿನೇ ಇದರ ಬಳಕೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುವ ಪ್ರಶ್ನೆಯೇ ಇಲ್ಲ.  ಯಾವುದರಲ್ಲಿ ಪ್ಲಾಸ್ಟಿಕ್ ಇಲ್ಲ ಎಂದು ಹೇಳುವುದೇ ದೊಡ್ಡ ಸಮಸ್ಯೆ.

ರಸ್ತೆಬದಿಗಳಲ್ಲಿ ಬಿದ್ದಿರುವ ಪ್ಲಾಸ್ಟಿಕನ್ನಂತೂ ಬಗೆಬಗೆಯಲ್ಲಿ ವರ್ಣಿಸಬಹುದು.  ಇವು ಅಪಾಯಕಾರಿಯಾಗುವುದೇ ಹೀಗೆ.  ನಮಗೆ ಬಳಕೆಯೊಂದಿಗೆ ನಿರ್ವಹಣೆ ಹಾಗೂ ಲಯಮಾರ್ಗವೂ ತಿಳಿದಿದ್ದರೆ ಅದರ ಜೀವನಚಕ್ರ ನಮ್ಮ ಕೈಯಲಿರುತ್ತಿತ್ತು.  ಆದರೆ ನಾವೆಲ್ಲಾ ಕೇವಲ ಬ್ರಹ್ಮದೇವರು ಮಾತ್ರ.  ಉಳಿದ ಕೆಲಸಗಳಲ್ಲಿ ನಮಗೆ ಆಸಕ್ತಿಯಿಲ್ಲ.  ನಮಗಿರುವ ಈ ಮಿತಿಯಲ್ಲೇ ನಾವೇನು ಮಾಡಬಹುದು ಯೋಚಿಸಿ, ತಿಳಿಸಿ.

ಸಾವಯವ, ರಾಸಾಯನಿಕ, ನೈಸರ್ಗಿಕ ಕೃಷಿಯ ಗೊಂದಲದಲ್ಲಿ ನಾವು ಸದ್ದಿಲ್ಲದೇ ಆಕ್ರಮಿಸುತ್ತಿರುವ ಪ್ಲಾಸ್ಟಿಕನ್ನು ಮರೆತೇಬಿಟ್ಟಿದ್ದೇವೆ.  ಕೃಷಿಯಲ್ಲಿ ಪ್ಲಾಸ್ಟಿಕ್ ಬಳಕೆಯ ಪ್ರಮಾಣ ಮಿತಿಮೀರುತ್ತಿರುವುದು ಅರಿವಿಗೇ ಬರುತ್ತಿಲ್ಲ.  ಮೊದ ಮೊದಲು ಸಸಿಗಳನ್ನು ನೆಡಲು ಮಾತ್ರ ಪ್ಲಾಸ್ಟಿಕ್ ಕೊಟ್ಟೆಗಳನ್ನು ಬಳಸುತ್ತಿದ್ದರು.  ಕ್ರಮೇಣ ನೀರು ಬಿಡಲು ಪೈಪುಗಳು, ಬಿಂದಿಗೆಗಳು, ಚೊಂಬುಗಳು, ನೀರು ಹಾಯಿಸುವ ಡ್ರಿಪ್, ಸ್ಪ್ರಿಂಕ್ಲರ್, ಜೆಟ್ ಹೀಗೆ ನಾನಾ ವಿಧಗಳು ಬಂದವು.  ಇವೆಲ್ಲಾ ಪ್ಲಾಸ್ಟಿಕ್‌ಮಯ. ಶೇಡ್ ನೆಟ್‌ಗಳು, ಮುಚ್ಚಿಗೆ ಟಾರ್‌ಪಲ್‌ಗಳು, ಹಸಿರುಮನೆ, ಕೊಡಗಳು, ಹವಾನಿಯಂತ್ರಣ ವ್ಯವಸ್ಥೆ ತೊಟ್ಟಿಗಳು, ನೆಲತೊಟ್ಟಿಗಳಿಗೆ, ಮೀನು ಸಾಕಲು, ಅಜೋಲಾ ಬೆಳೆಯಲು ಟಾರ್‌ಪಲ್‌ಗಳು, ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ತುಂಬಿರುವ ಚೀಲ, ಕ್ಯಾನ್‌ಗಳು, ಬೀಜ ತುಂಬಿರುವ, ತುಂಬುವ ಚೀಲ, ಪ್ಯಾಕೆಟ್‌ಗಳು, ಅವನ್ನು ತುಂಬಲು ಉಪಯೊಗಿಸುವ ಮೊರ, ತಟ್ಟೆಗಳು, ಸ್ವಚ್ಛಮಾಡುವ ಉಪಕರಣಗಳು, ನೆಡುವ, ಬಿತ್ತುವ ಯಂತ್ರಗಳಲ್ಲೂ ಕೂರಿಗೆ, ಎತ್ತಿಗೆ ಕಟ್ಟುವ ಹಗ್ಗ, ಮುಖಂಡ, ದಂಡೆ ಹೀಗೆ ಇಂಚಿಂಚೂ ಬಿಡದೆ ಪ್ಲಾಸ್ಟಿಕ್ ಆಕ್ರಮಿಸಿಕೊಂಡಿದೆ.

ಹಾಗಂತ ಇವೆಲ್ಲಾ ಕೃಷಿಗೆ ಪೂರಕವಾಗಿವೆ.  ಸುಲಭ, ಅಗ್ಗ ಹಾಗೂ ಉಪಯುಕ್ತವಾದವುಗಳೂ ಹೌದು.  ಬೇರೆ ಯಾವುದೇ ಸುಲಭದ, ಅಗ್ಗದ ಪರ್ಯಾಯಗಳೂ ಇದಕ್ಕಿಲ್ಲ.  ಒಂದೊಮ್ಮೆ ಇದ್ದರೂ ಅದರ ಅಳವಡಿಕೆಯಲ್ಲಿ, ನಿರ್ವಹಣೆಯಲ್ಲಿ ದೋಷಗಳು, ಬಗೆಹರಿಸಲಾಗದಷ್ಟು ಸಮಸ್ಯೆಗಳೂ ಇವೆ.  ಅದಕ್ಕೆಲ್ಲ ನಮ್ಮ ಕೃಷಿಕರಲ್ಲಿ ಸಮಯವಿಲ್ಲ.  ಅದಕ್ಕಾಗಿಯೇ ಎಲ್ಲಾ ರೀತಿಯ ಪ್ಲಾಸ್ಟಿಕ್‌ಗಳೂ ಕೃಷಿ ಕ್ಷೇತ್ರದೊಳಗೆ ಬರುತ್ತಿವೆ.  ಬರಲಿ ಬಿಡಿ, ಪ್ಲಾಸ್ಟಿಕ್ ನಮಗೇನೂ ಹಾನಿ ಮಾಡಿಲ್ಲ ಎನ್ನುವಿರಾ?

ಇದನ್ನು ಕಂಡುಹಿಡಿದಾಗ ಯಾರಿಗೂ ಇಂದಿನ ಪ್ಲಾಸ್ಟಿಕ್ ಸ್ವರೂಪವನ್ನು ಊಹಿಸಲೂ ಸಾಧ್ಯವಿರಲಿಲ್ಲ.  ಯಾರೂ ಊಹಿಸಿರಲೂ ಇಲ್ಲ.  ಮುಂದಾಗುವುದನ್ನು ಈಗಲೂ ಊಹಿಸಲು ಸಾಧ್ಯವಿಲ್ಲ ಹಾಗೆ ಪ್ಲಾಸ್ಟಿಕ್ ಬೆಳೆಯುತ್ತಿದೆ.  ನಮ್ಮ ನಮ್ಮ ಜಮೀನಿನ, ಮನೆಯ, ವಾತಾವರಣದ ಶೇಕಡಾ ೨೦ರಷ್ಟು ಪಾಲು ಪ್ಲಾಸ್ಟಿಕ್ ಆಕ್ರಮಿಸಿಕೊಂಡಿದೆ.

ಪ್ಲಾಸ್ಟಿಕ್‌ಗೆ ಇರುವ ಒಂದೇ ಒಂದು ಅವಗುಣ, ಇದು ಜೈವಿಕವಲ್ಲ.  ಅಂದರೆ ಸುಲಭವಾಗಿ ಮಣ್ಣಿನಲ್ಲಿ ಕರಗುವುದಿಲ್ಲ ಎನ್ನುವುದು ಮಾತ್ರ.

ಉಳಿದಂತೆ ಇದು ರಾಸಾಯನಿಕ.  ಇದರಲ್ಲಿ ಕಾರ್ಬನ್ ಇದೆ.  ಇದನ್ನು ಬಳಸುವುದು ಆರೋಗ್ಯಕ್ಕೆ ಹಾನಿಕರ.  ಭೂಮಿಗೆ ಹಾನಿಕರ.  ಸಸ್ಯಗಳಿಗೆ, ಪ್ರಾಣಿ, ಪಕ್ಷಿ, ಕೀಟ, ಸೂಕ್ಷ್ಮಜೀವಿಗಳವರೆಗೂ ಹಾನಿಕರ.  ಇಡೀ ಜೀವವೈವಿಧ್ಯಕ್ಕೇ ಹಾನಿಕರ ಎನ್ನುವ ಘೋಷಣೆಯೂ ನಮ್ಮೆದುರಿನಲ್ಲಿದೆ.

ಇದನ್ನು ಬಳಸದಿರುವುದೇ ತಯಾರಿಕೆ ನಿಲ್ಲಿಸಲು ಕಾರಣವಾಗುತ್ತದೆ.  ಇದು ಸಾಧ್ಯವೆ?  ವಾಸ್ತವವೇ?  ನಮ್ಮೊಳಗಿನ ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ.  ಆದರೆ ನಮಗಿರುವ ಬೇರೆ ದಾರಿಗಳನ್ನು ನೋಡುವುದನ್ನು ಬಿಟ್ಟುಬಿಟ್ಟಿದ್ದೇವೆ.

೧. ಪ್ಲಾಸ್ಟಿಕ್ ಕಡಿಮೆ ಬಳಕೆ

೨. ನಿರ್ವಹಣೆ

೩. ಮರುಬಳಕೆ

೪. ನಾಶ ಮಾಡಬಹುದಾದ ರೀತಿಗಳು

೫. ತಯಾರಿಕೆಯಲ್ಲಿಯ ಬದಲಾವಣೆಗಳು

೬. ನಾಶಮಾಡಬಲ್ಲ  ಅಥವಾ ಮರುಬಳಕೆ ಮಾಡಬಲ್ಲವುಗಳನ್ನು ಮಾತ್ರ ತಯಾರಿಸುವಿಕೆ

೭. ಪ್ಲಾಸ್ಟಿಕ್ ಬಗ್ಗೆ ತಿಳುವಳಿಕೆ ಹಾಗೂ ಎಚ್ಚರಿಕೆ

೮. ಹೇಗಿದ್ದರೆ ಉಪಯುಕ್ತ ಹಾಗೂ ಸ್ನೇಹಿ ಎನ್ನುವ ವಿಚಾರ.  (ಈ ಎಲ್ಲಾ ವಿಚಾರಗಳು ಬೇರುಮೂಲದಲ್ಲಿ ಚರ್ಚೆಯಾಗಬೇಕಿದೆ)  ಮೊದಲಿಗೆ ಪ್ಲಾಸ್ಟಿಕ್ ಹೇಗೆ ಉಪಯುಕ್ತ ಹಾಗೂ ಸ್ನೇಹಿ ಎನ್ನುವುದನ್ನು ನೋಡೋಣ.

ಈಗಾಗಲೇ ಹೇಳಿದಂತೆ ಪ್ರತಿ ಎರಡು ವಸ್ತುಗಳನ್ನು ಕೈಯಲ್ಲಿ ಹಿಡಿದರೆ, ನೋಡಿದರೆ, ಬಳಸಿದರೆ, ಅದರಲ್ಲಿ ಒಂದು ಪ್ಲಾಸ್ಟಿಕ್ ಆಗಿರುತ್ತದೆ.  ಅಡುಗೆ ಮಾಡಲು ಬಳಸುವ ಮಡಿಕೆ ಪ್ಲಾಸ್ಟಿಕ್, ಮನೆಕಟ್ಟಲು ಬಳಸುವ ಸುಟ್ಟ ಇಟ್ಟಿಗೆ ಪ್ಲಾಸ್ಟಿಕ್, ಪಾಲಿಸ್ಟರ್ ಪ್ಯಾಂಟ್, ಶರ್ಟ್‌ಗಳು ಪ್ಲಾಸ್ಟಿಕ್ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಭಯವುಂಟಾಗುತ್ತದೆ.  ನಾವು ಬಿಟ್ಟರೂ ಅದು ನನ್ನನ್ನು ಬಿಡುವುದಿಲ್ಲವೆಂದು ಸುತ್ತಿ ಹಾಕಿಕೊಂಡಿರುವ ಅರಿವಾಗುತ್ತದೆ.

ಕೃಷಿ ಹಾಗೂ ನೀರಾವರಿ, ನೀರುಳಿತಾಯದ ವಿಧಗಳು, ಪರಿಸರ ರಕ್ಷಣೆ, ಪ್ಯಾಕೇಜಿಂಗ್, ಮನೆಕಟ್ಟಲು ಹಾಗೂ ಇತರ ನಿರ್ಮಾಣಗಳು, ಸಂವಹನ, ಮಾಹಿತಿ ತಂತ್ರಜ್ಞಾನ, ಗ್ರಾಹಕ ವಸ್ತುಗಳು, ಕಾರ್ಖಾನೆಗಳು, ಸೈನ್ಯ, ಶಿಕ್ಷಣ, ಸಾರಿಗೆ ಹಾಗೂ ವೈದ್ಯಕೀಯ ಹೀಗೆ ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಿ.  ಅಲ್ಲಿ ಪ್ಲಾಸ್ಟಿಕ್ ಇದ್ದೇ ಇದೆ.  ಪ್ಲಾಸ್ಟಿಕ್ ಇಲ್ಲದಿದ್ದರೆ ಬೇರೆ ಯಾವುದು ಬರಬೇಕಿತ್ತು, ಬಳಸಬಹುದಿತ್ತು ಎನ್ನುವ ಪ್ರಶ್ನೆಗೆ ಉತ್ತರವಿಲ್ಲ.  ಹಾಗಿದ್ದಾಗ ಇದನ್ನು ಮನುಷ್ಯಸ್ನೇಹಿ ಎಂದು ಹೇಳಲೇಬೇಕಲ್ಲ.

ಇದು ಮನುಕುಲಕ್ಕೆ ವಿರೋಧಿಯಾಗಿ ಪರಿಣಮಿಸಿದ್ದು ಕಳೆದ ೫೦ ವರ್ಷಗಳಿಂದ ಮಾತ್ರ.  ಮುಖ್ಯವಾಗಿ ಕ್ಯಾರಿಬ್ಯಾಗ್ ಸಂಸ್ಕೃತಿ, ಪೌಚ್‌ಗಳು ಹಾಗೂ ಚಾಕೋಲೇಟ್ ಪ್ಯಾಕ್‌ಗಳು, ಬೃಹದಾಕಾರದ ಸಮಸ್ಯೆಗಳನ್ನು ಹೊತ್ತು ತಂದವು.  ಇವುಗಳಲ್ಲಿ ಪೌಚ್‌ಗಳು ಅಂದರೆ ಗುಟ್ಕಾ ಪ್ಯಾಕೆಟ್, ಶ್ಯಾಂಪೂ ಪ್ಯಾಕೆಟ್ ಈ ರೀತಿಯವು ಹಾಗೂ ಚಾಕೋಲೇಟ್ ಪ್ಯಾಕ್‌ಗಳು ಮರುಬಳಕೆಗೆ ಉಪಯೋಗಿಸಲು ಸಾಧ್ಯವೇ ಇಲ್ಲವೆನ್ನುವಂತಹ ರಾಸಾಯನಿಕಗಳಿಂದ ತಯಾರಾಗಿದ್ದು ಇದರಲ್ಲಿ ಕೇವಲ ಪ್ಲಾಸ್ಟಿಕ್ ಮಾತ್ರವಲ್ಲ.  ಇತರ ಕ್ಲಿಷ್ಟ ರಾಸಾಯನಿಕಗಳು, ಭಾರ ಲೋಹಗಳು ಇರುವ ಕಾರಣ ಇದನ್ನು ಮರುಬಳಕೆ ಮಾಡುವ ಯಂತ್ರಗಳೇ ಇಲ್ಲ.  ಮರುಬಳಕೆ ಮಾಡಲು ಬಾರದ ಪ್ಲಾಸ್ಟಿಕ್‌ನ್ನು ಏಕೆ ತಯಾರಿಸಬೇಕು ಎನ್ನುವ ಪ್ರಶ್ನೆ ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಸಂಘ(ರಿ)ದ ಕಾರ್ಯದರ್ಶಿ ಚಂದ್ರಮೋಹನ್ ಕೇಳುತ್ತಾರೆ.

ಕ್ಯಾರಿಬ್ಯಾಗ್‌ಗಳು ಅಪಾಯಕಾರಿ ಎನಿಸಿದ್ದು ಅವುಗಳನ್ನು ಬೀದಿಯಲ್ಲಿ, ಎಲ್ಲೆಂದರಲ್ಲಿ ಎಸೆಯುವ ಕಾರಣಕ್ಕೆ ಆಗಿದೆ.  ಅನ್ಯಥಾ ಕ್ಯಾರಿಬ್ಯಾಗ್‌ಗಳು ಯಾವುದೇ ಇರಲಿ, ಮರುಬಳಕೆ ಮಾಡಬಹುದು.  ಸರ್ಕಾರ ಯಾವ ಉದ್ದೇಶದಿಂದ ೨೦ ಮೈಕ್ರಾನ್‌ಗೂ ಕಡಿಮೆ ಇರುವ ಕ್ಯಾರಿಬ್ಯಾಗ್‌ಗಳನ್ನು ನಿಷೇಧಿಸಿದೆಯೋ ಗೊತ್ತಿಲ್ಲ.   ಆದರೆ ಎಲ್ಲಾ ರೀತಿಯ ಕ್ಯಾರಿಬ್ಯಾಗ್‌ಗಳು, ಪ್ಲಾಸ್ಟಿಕ್ ಕವರ್‌ಗಳು ಮರುಬಳಕೆಗೆ ಯೋಗ್ಯ.

ಆದರೆ ಕ್ಯಾರಿಬ್ಯಾಗ್‌ಗಳನ್ನು, ಪ್ಲಾಸ್ಟಿಕ್ ಕವರ್‌ಗಳನ್ನು ಖಂಡಿತಾ ವಾತಾವರಣದಲ್ಲಿ ಎಸೆಯಬಾರದು.  ಇವು ಮಣ್ಣಿಗೂ ಸೇರುವುದಿಲ್ಲ, ನೀರಿಗೂ ಸೇರುವುದಿಲ್ಲ.  ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳಿಗೆ, ನೀರಿನ ಜೀವಿಗಳಿಗೆ ಬಹಳ ಅಪಾಯಕಾರಿಯಾಗಿಬಿಡುತ್ತವೆ.  ಮರುಬಳಕೆಗೆ ಕೊಡಬೇಕು.  ಸಾಧ್ಯವಾದಷ್ಟು ಬಾರಿ ಪುನರ್‌ಬಳಕೆ ಮಾಡಿ ಆಮೇಲೆ ಮರುಬಳಕೆ ಕಾರ್ಖಾನೆಗಳಿಗೆ ಕೊಟ್ಟರೂ ಆದೀತು.

ಆದರೆ ಆಗುತ್ತಿರುವುದೇನು?  ಪೇಟೆ ಪಟ್ಟಣಗಳಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳಲ್ಲೇ ಮನೆಯ ಹೊಲಸು, ಉಳಿದ ಆಹಾರಪದಾರ್ಥಗಳು ಹೀಗೆ ಏನೆಲ್ಲವನ್ನು ತುಂಬಿ ಎಸೆಯುತ್ತಾರೆ.  ಹರಿದ ಕವರ್‌ಗಳನ್ನು ಬೀದಿಯಲ್ಲೋ, ಕೊಳಚೆ ಜಾಗದಲ್ಲೋ, ನೀರಿಗೋ ಎಸೆಯುತ್ತಾರೆ.  ಇದು ಸರ್ವತಾ ಮಾನ್ಯವಲ್ಲ.  ಈ ಪದ್ಧತಿಯನ್ನೆಲ್ಲಾ ಬಿಟ್ಟು ಸಂಗ್ರಹಿಸುವುದನ್ನು ಕಲಿಯಬೇಕು.  ಪ್ಲಾಸ್ಟಿಕ್ ಆಯುವವರು ಬಂದಾಗ, ಕೊಳ್ಳುವವರು ಬಂದಾಗ ಅವರಿಗೆ ನೀಡಬೇಕು.  ಬೆಂಗಳೂರಿನ ನಗರಪಾಲಿಕೆ ಈ ರೀತಿ ಪ್ಲಾಸ್ಟಿಕ್ ವಿಂಗಡಣೆಯ ಕೆಲಸವನ್ನು ಮಾಡುತ್ತಿದೆ.  ಹೊಲಸು ತುಂಬಿಟ್ಟಿರುವ ಪ್ಲಾಸ್ಟಿಕ್ ಕವರ್‌ಗಳನ್ನು ಪ್ರತ್ಯೇಕ ಸಂಗ್ರಹಿಸುತ್ತದೆ.  ಅವುಗಳಲ್ಲಿ ಜೈವಿಕ ಹಾಗೂ ಪ್ಲಾಸ್ಟಿಕ್‌ಗಳನ್ನು ಬೇರ್ಪಡಿಸುತ್ತದೆ.  ಅದರಲ್ಲಿ ಮತ್ತೆ ಮರುಬಳಕೆ ಪ್ಲಾಸ್ಟಿಕ್‌ಗಳನ್ನು ಬೇರ್ಪಡಿಸುತ್ತದೆ.  ಮರುಬಳಕೆ ಪ್ಲಾಸ್ಟಿಕ್‌ಗಳನ್ನು ಪ್ಲಾಸ್ಟಿಕ್ ಕಾರ್ಖಾನೆಗಳಿಗೆ ನೀಡುತ್ತದೆ.

ಈ ಕೆಲಸವನ್ನು ಕೇವಲ ಬೆಂಗಳೂರು ನಗರಪಾಲಿಕೆಯಲ್ಲಿ ಮಾತ್ರ ನೋಡಲು ಸಾಧ್ಯ.  ಉಳಿದ ನಗರಪಾಲಿಕೆಗಳು, ಪುರಸಭೆಗಳು ಇನ್ನೂ ಪ್ಲಾಸ್ಟಿಕ್ ವಿಂಗಡಣೆಯ ಕೆಲಸವನ್ನು ಪ್ರಾರಂಭವೇ ಮಾಡಿಲ್ಲ.

ಕಳೆದ ಹತ್ತು ವರ್ಷಗಳಿಂದ ರಾಜ್ಯದ ಪ್ರತಿ ಪುರಸಭೆಯಲ್ಲಿಯೂ ಈ ಕುರಿತು ಚರ್ಚೆಯಾಗುತ್ತಲೇ ಇದೆ.  ತಿಳುವಳಿಕೆ, ಚರ್ಚೆಗಳು, ಜಾಗೃತಿ ಆಂದೋಲನ, ಮಾಹಿತಿ ಕಾರ್ಯಾಗಾರಗಳು ನಡೆದಿವೆ.  ಆದರೆ ಕಾರ್ಯರೂಪಕ್ಕೆ ತಂದಿರುವವರು ಯಾರೂ ಇಲ್ಲ.

ಪುರಸಭೆಗಳಿಗೆ ಪ್ಲಾಸ್ಟಿಕ್ ನಿರ್ವಹಣೆಗೋಸ್ಕರವೇ ಪ್ರತ್ಯೇಕ ಜಾಗ ಮಂಜೂರಾಗಿದೆ.  ಇನ್‌ಸಿನರೇಟರ್ ಬಳಕೆಗೆ, ಆಯುವ ವ್ಯವಸ್ಥೆ ಹೀಗೆ ಏನೆಲ್ಲಾ ಮಾಡಲು ಅವಕಾಶವಿದೆ, ಅನುದಾನವಿದೆ.  ಆದರೆ ಆಸಕ್ತರಿಲ್ಲ, ಮಾಡುವವರಿಲ್ಲ.

ಪ್ಲಾಸ್ಟಿಕ್ ಸಂಗ್ರಹಣೆ, ಮರುಬಳಲಕೆ ಕುರಿತಾಗಿ ಸ್ವಯಂಸೇವಾ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಯುವಕ ಸಂಘಗಳು ಕೆಲಸ ನಿರ್ವಹಿಸಬಹುದು.

ಈಗ್ಗೆ ಕೆಲವು ವರ್ಷಗಳ ಹಿಂದೆ ಸಾಗರದ ಬಳಿಯ ಭೀಮನಕೋಣೆಯ ಯುವ ರೈತ ಮಿತ್ರವೃಂದದವರು ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮ ಮಾಡಿದರು.

ಪ್ಲಾಸ್ಟಿಕ್ ಬಗ್ಗೆ ತಜ್ಞರನ್ನು ಕರೆಸಿ ಮಾಹಿತಿ ನೀಡಿದರು.  ಪ್ರತಿ ಶಾಲೆಗಳಲ್ಲೂ ಪ್ಲಾಸ್ಟಿಕ್ ಸಂಗ್ರಹಣೆ ಪ್ರಾರಂಭವಾಯಿತು.  ಪ್ಲಾಸ್ಟಿಕ್ ಎಲ್ಲಿಯೇ ಬಿದ್ದಿರಲಿ, ವ್ಯರ್ಥವಾಗುತ್ತಿರಲಿ, ಎಲ್ಲವೂ ಬಂದು ಶಾಲೆಯ ಕಸದ ತೊಟ್ಟಿಗೆ ಸೇರಲಾರಂಭಿಸಿತು.  ಕೆಲವೇ ತಿಂಗಳುಗಳಲ್ಲಿ ೨೫ ಶಾಲೆಗಳಿಂದ ಒಂದು ಲಾರಿ ತುಂಬುವಷ್ಟು ಪ್ಲಾಸ್ಟಿಕ್ ಸಿದ್ಧವಾಯಿತು.  ಎಲ್ಲರಿಗೂ ಅಚ್ಚರಿ.  ಇಷ್ಟೆಲ್ಲಾ ಪ್ಲಾಸ್ಟಿಕನ್ನು ಏನು ಮಾಡುವುದು, ಏನು ಮಾಡುತ್ತಾರೆ ಎನ್ನುವ ಚಿಂತೆ.  ಇದೆಲ್ಲಾ ಪರಿಸರಕ್ಕೆ ಸೇರಿದರೆ ಕರಗುವುದು ಎಂದು.  ಅಬ್ಬಾ ಮರುಬಳಕೆ ಆಗುತ್ತದಲ್ಲ, ಅಷ್ಟೇ ಸಾಕು ಎನ್ನುವ ನಿಶ್ಚಿಂತೆ.  ಆದರೆ ನಿಶ್ಚಿಂತೆ ಬಹಲ ಕಾಲ ಉಳಿಯಲಿಲ್ಲ.  ಯುವ ರೈತಮಿತ್ರರು ಏನೆಲ್ಲಾ ಪ್ರಯತ್ನ ಮಾಡಿದರೂ ಅದನ್ನು ಕೊಳ್ಳುವವರೇ ಇರಲಿಲ್ಲ.  ಕಾರಣ ಪ್ಲಾಸ್ಟಿಕ್ ಸಂಗ್ರಹದಲ್ಲಿ ಬಹುಪಾಲು ಚಾಕೋಲೇಟ್, ಗುಟ್ಕಾ, ಬಿಸ್ಕತ್ ಮುಂತಾದ ವಸ್ತುಗಳ ಬಣ್ಣಬಣ್ಣದ ಪ್ಯಾಕೆಟ್‌ಗಳು ಮಾತ್ರ.  ಎಲ್ಲಿಯೂ ಕೊಳ್ಳುವವರಿಲ್ಲ, ಕೇಳುವವರಿಲ್ಲದೆ ಸಂಘ ಸೋತುಹೋಯಿತು.  ಮಾತು ಕೊಟ್ಟ ತಪ್ಪಿಗೆ ಸಂಗ್ರಹಿಸಿದವರಿಗೆ ಬಹುಮಾನಗಳನ್ನು ನೀಡಿದರು.  ಆದರೆ ಸಂಗ್ರಹಣಾ ಕಾರ್ಯಕ್ರಮ ಅಲ್ಲಿಗೆ ಅಂತ್ಯವಾಯಿತು.

ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಅಸೋಸಿಯೇಷನ್ (ರಿ.)ನ ಕಾರ್ಯದರ್ಶಿ ಚಂದ್ರಮೋಹನ್ ಇದಕ್ಕೊಂದು ಪರಿಹಾರ ನೀಡುತ್ತಾರೆ.

ಪ್ಲಾಸ್ಟಿಕ್‌ನಲ್ಲಿ ಎಲ್ಲವನ್ನೂ ಮರುಬಳಕೆ ಮಾಡುವುದು ಅಸಾಧ್ಯ.  ಅದಕ್ಕೆ ಸೂಕ್ತ ಯಂತ್ರಗಳು ಬೇಕು.  ಸದ್ಯ ನಮ್ಮಲ್ಲಿರುವುದು ಕ್ಯಾರಿಬ್ಯಾಗ್, ಕವರ್‌ಗಳು, ಹಾಲಿನ ಪ್ಯಾಕೆಟ್, ಹರಿದ ಚಾಪೆ, ಮುಚ್ಚಳಗಳು, ಬಾಕ್ಸ್‌ಗಳು, ಪೈಪ್‌ಗಳು, ಪ್ಲಾಸ್ಟಿಕ್ ಚಪ್ಪಲಿಗಳು, ಟೂತ್‌ಬ್ರಷ್, ಕ್ಲೀನಿಂಗ್ ಬ್ರಷ್, ಬಾಚಣಿಗೆ ಹೀಗೆ ಕೆಲವೇ ವಿಧಗಳನ್ನು ಮರುಬಳಕೆ ಮಾಡಬಹುದಾದ ಯಂತ್ರಗಳು ಮಾತ್ರ.  ಅವುಗಳನ್ನು ಸಂಗ್ರಹಿಸಿದರೆ ಕೊಳ್ಳುವವರು ಸಿಗುತ್ತಾರೆ.  ಮನೆಬಾಗಿಲಿನಲ್ಲಿ ಎರಡು-ಮೂರು ರೂಪಾಯಿಗಳಿಗೆ ಅದನ್ನೆಲ್ಲಾ ಸಂಗ್ರಹಿಸಿ ದಾಸ್ತಾನು ಮಾಡಬೇಕು.  ಅವನ್ನೆಲ್ಲಾ ಚೀಲದಲ್ಲಿ ತುಂಬಿ ಬೆಂಗಳೂರಿಗೆ ಬರುವ ಲಾರಿಗಳಲ್ಲಿ ಹಾಕಿ ಕಳುಹಿಸಬೇಕು.  ಸಂಘಸಂಸ್ಥೆಗಳು ಈ ಕೆಲಸ ವಹಿಸಿಕಂಡರೆ ಈ ಸಂಗ್ರಹಣೆಯನ್ನೆಲ್ಲಾ ಲಾರಿಗಳಲ್ಲಿ ಉಚಿತವಾಗಿ ಸಾಗಣೆ ಮಾಡಬಹುದು.  ಅದಕ್ಕಾಗಿ ಜಿಲ್ಲಾಧಿಕಾರಿಗಳ ಆದೇಶ ಪಡೆದುಕೊಳ್ಳಬೇಕು.  ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ಜಿಲ್ಲಾಧಿಕಾರಿಗಳು ಈ ಆದೇಶವನ್ನು ನೀಡಲೇಬೇಕೆಂಬ ಕಾನೂನು ಇದೆ.  ಹೀಗೆ ಸಂಗ್ರಹಿಸಿದ ಪ್ಲಾಸ್ಟಿಕ್‌ಗೆ ಬೆಂಗಳೂರಿನಲ್ಲಿ ೫ ರೂಪಾಯಿಗಳಿಂದ ೨೩ ರೂಪಾಯಿಗಳವರೆಗೆ ಬೆಲೆಯಿದೆ.  ಈ ಕುರಿತ ಏನೆಲ್ಲಾ ಮಾಹಿತಿಗಳನ್ನು ಪಡೆಯಲು ಚಂದ್ರಮೋಹನ್‌ರವರನ್ನು ಸಂಪರ್ಕಿಸಬಹುದಾಗಿದೆ.