ಪ್ಲಾಸ್ಟಿಕ್‌ ಮರುಬಳಕೆ ಹೇಗೆ ಮಾಡುತ್ತಾರೆ ಎನ್ನುವುದು ಕುತೂಲಹದ ವಿಚಾರ.  ಕೆಲವರಿಗಂತೂ ಇದರಿಂದಲೇ ವಾಯುಮಾಲಿನ್ಯವಾಗುತ್ತದೆ ಎನ್ನುವ ಅನುಮಾನ.  ಆದರೆ ಇಲ್ಲಿ ಪ್ಲಾಸ್ಟಿಕನ್ನು ಸುಡುವುದಿಲ್ಲ, ಕೇವಲ ಕರಗಿಸುತ್ತಾರೆ.  ಅಂದರೆ ದ್ರವರೂಪಕ್ಕೆ ತಿರುಗಿಸುತ್ತಾರೆ.  ಈ ಪ್ರಕ್ರಿಯೆಯಲ್ಲಿ ಹೊಗೆ ಬಾರದು.  ಇದೇ ಪ್ಲಾಸ್ಟಿಕ್‌ ಕಾರ್ಖಾನೆಗಳು ಮಾಡುವ ಕೆಲಸ.  ಕೆಲಸ ಸುಲಭ, ಆದಾಯ ಅಧಿಕ.  ಏಕೆಂದರೆ ತಯಾರಾಗಿದ್ದೆಲ್ಲಾ ತಕ್ಷಣ ಮಾರಾಟವಾಗುತ್ತಿರುತ್ತದೆ.

ಬೆಂಗಳೂರಿನ ಪಾದರಾಯಣಪುರದ ಶಾಮಣ್ಣ ಗಾರ್ಡನ್‌ನಲ್ಲಿ ಪಾದವಿಟ್ಟರೆ ಬೆಂಕಿಪೊಟ್ಟಣದಂತಹ ಮನೆಗಳು.  ಕೊಳಚೆ ನದಿ, ರೈಲ್ವೆಹಳಿ, ಗೂಡಂಗಡಿಗಳು, ಆಟೋಗ್ಯಾರೇಜ್‌ಗಳು-ಹೀಗೆ ಸಂದಿಗೊಂದಿಗಳಲ್ಲಿ ಜನರನ್ನು ತಳ್ಳುತ್ತಾ, ನುಗ್ಗುವ ವಾಹನಗಳಿಂದ ತಪ್ಪಿಸಿಕೊಳ್ಳುತ್ತಾ ಧೂಳಿಗೆ ಕಣ್ಣು ಮುಚ್ಚಿ ಬಿಟ್ಟು ಮಾಡುತ್ತಾ, ವಾಸನೆಗೆ ಮೂಗು ಹಿಡಿದುಕೊಳ್ಳುತ್ತಾ ಸಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಪ್ಲಾಸ್ಟಿಕ್‌ ಬೆಟ್ಟಗಳು ಗೋಚರಿಸುತ್ತವೆ.  ಇವೆಲ್ಲಾ ದಿನಾಲೂ ಬೆಂಗಳೂರಿನ ನಾಗರಿಕರು ಎಸೆದ ಕ್ಯಾರಿಬ್ಯಾಗ್‌ಗಳು, ಕವರ್‌ಗಳು ಇನ್ನೂ ಏನೆಲ್ಲಾ ರೀತಿಯ ಪ್ಲಾಸ್ಟಿಕ್‌ ವಸ್ತುಗಳು.

ಇಲ್ಲಿ ಇವು ಮರುಬಳಕೆಗೆ ಬಂದಿವೆ.   ನಗರಸಭೆಯವರು ಹಗಲುರಾತ್ರಿ ಮನೆ ಮನೆ ಬಾಗಿಲಿನಿಂದ ತಂದ ಹೊಲಸು-ಕಸ, ತ್ಯಾಜ್ಯಗಳಿಂದ ಕೇವಲ ಕ್ಯಾರಿಬ್ಯಾಗ್‌ಗಳನ್ನು ಮಾತ್ರ ಬೇರ್ಪಡಿಸುತ್ತಾರೆ.  ಅವುಗಳನ್ನು ತೂಕದ ಲೆಕ್ಕದಲ್ಲಿ ಪ್ಲಾಸ್ಟಿಕ್‌ ಕಾರ್ಖಾನೆಗಳಿಗೆ ಮಾರುತ್ತಾರೆ.  ಅವೆಲ್ಲಾ ಇಲ್ಲಿ ಮೋಕ್ಷಕ್ಕಾಗಿ ಕಾದು ಕುಳಿತಿದ್ದವು.

ಪ್ಲಾಸ್ಟಿಕ್‌ ಕಸದಲ್ಲಿ ಎಲ್ಲವೂ ಎಲ್ಲಾ ಉತ್ಪಾದನೆಗಳಿಗೂ ಯೋಗ್ಯವಲ್ಲ.  ಪ್ರತಿ ಪ್ಲಾಸ್ಟಿಕ್ ಅನ್ನು ವಿಭಿನ್ನ ರಾಸಾಯನಿಕಗಳನ್ನು ಬಳಸಿ ಮಾಡುವುದರಿಂದ ಅವುಗಳನ್ನು ಕರಗಿಸಿದಾಗ ಒಂದಕ್ಕೊಂದು ಸೇರುವುದಿಲ್ಲ.  ಅದಕ್ಕಾಗಿ ಕೇವಲ ಕ್ಯಾರಿಬ್ಯಾಗುಗಳನ್ನೇ ಬೇರೆ ಮಾಡಬೇಕು.  ನಂದಿನ ಹಾಲಿನ ಪ್ಯಾಕೆಟ್‌ ಬೇರೆ, ಪ್ಯಾಕೇಜಿಂಗ್‌ ಪ್ಲಾಸ್ಟಿಕ್‌ ಬೇರೆ.  ಹೀಗೆ ಎಲ್ಲವೂ ಭಿನ್ನ ಎನ್ನುತ್ತಾರೆ ರಾಧಾಕೃಷ್ಣ ಪ್ಲಾಸ್ಟಿಕ್‌ ಮಾಲಿಕ ಬಿ.ಕೆ. ರಮೇಶ್.

ರಾಧಾಕೃಷ್ಣ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಬಳಸುವುದು ಕೇವಲ ಹಾಲಿನ ಪ್ಯಾಕೇಟ್‌ಗಳನ್ನು ಮಾತ್ರ.  ಈ ಪ್ಯಾಕೆಟ್‌ಗಳನ್ನು ಚೆನ್ನಾಗಿ ಕುದಿಸುತ್ತಾರೆ, ಕುದಿಸುವಾಗ ಸುಣ್ಣ ಬಳಸುತ್ತಾರೆ.  ಇದರಿಂದ ಪ್ಯಾಕೆಟ್‌ನಲ್ಲಿನ ಜಿಡ್ಡು, ಹಾಲಿನಂಶ ಹೊರಟುಹೋಗುತ್ತದೆ.  ಇದನ್ನು ಒಣಗಿಸುತ್ತಾರೆ.  ಆದರೂ ಪ್ಯಾಕೆಟ್‌ನೊಳಗೆ ತೇವಾಂಶ ಉಳಿದಿರುತ್ತದೆ.

ಆ ತೇವಾಂಶ ಒಣಗಿಸಲು ಪ್ರತ್ಯೇಕ ಯಂತ್ರವಿದೆ.  ಹೀಗೆ ಒಣಗಿದ ಪ್ಯಾಕೆಟ್‌ಗಳನ್ನು ಕರಗಿಸಲಾಗುತ್ತದೆ.  ಸುಮಾರು ೨೦೦ರಿಂದ ೬೦೦ ಡಿಗ್ರಿ ಉಷ್ಣಾಂಶದಲ್ಲಿ ಕರಗಿಸುವ ಕಾರಣ ಇಲ್ಲಿ ವಾಸನೆ, ಹೊಗೆ ಇರುವುದಿಲ್ಲ.  ಕರಗಿ ದ್ರವವಾದ ಪ್ಲಾಸ್ಟಿಕ್‌ ದಾರದ ಎಳೆಯಂತೆ ಹೊರಬರುತ್ತದೆ.  ಇದನ್ನು ಚಿಕ್ಕ ಚಿಕ್ಕ ಹರಳುಗಳಾಗಿ ಮಾಡುತ್ತಾರೆ.

ಈ ಕೆಲಸವೆಲ್ಲಾ ಗುತ್ತಿಗೆ ಆಧಾರದಲ್ಲಿ ನಡೆಯುತ್ತದೆ.   ಪ್ಯಾಕೆಟ್‌ಗಳನ್ನು ಖರೀದಿಸಿದ ಕಾರ್ಖಾನೆ ಎಲ್ಲವನ್ನೂ ಗುತ್ತಿಗೆದಾರರಿಗೆ ನೀಡಿ ಹರಳುರೂಪದ ವಸ್ತುವನ್ನು (ಪ್ಲಾಸ್ಟಿಕ್) ಹಿಂತಿರುಗಿ ಪಡೆಯುತ್ತದೆ.  ಇದೇ ಹರಳುಗಳನ್ನು ಬಳಸಿ ಮತ್ತೆ ಪ್ಲಾಸ್ಟಿಕ್‌ ವಸ್ತುಗಳನ್ನು ತಯಾರಿಸುತ್ತಾರೆ.

ರಾಧಾಕೃಷ್ಣ ಪ್ಲಾಸ್ಟಿಕ್‌ ಕಾರ್ಖಾನೆಯಲ್ಲಿ ಹಾಲಿನ ಪ್ಯಾಕೆಟ್‌ಗಳನ್ನು ಹರಳುರೂಪಕ್ಕೆ ತಿರುಗಿಸುವವರು ಬಿಹಾರಿಗಳು.  ಇದು ದಿನವಿಡೀ ಮಾಡುತ್ತಲೇ ಇರಬೇಕಾದ ಕೆಲಸ.  ಗಳಿಕೆ ದಿನಕ್ಕೆ ೫೦ ರೂಪಾಯಿಗಳು ಮಾತ್ರ. ಹೆಚ್ಚು ಕೆಲಸ, ಹೆಚ್ಚು ಗಳಿಕೆ ಸಾಧ್ಯ.  ಹರಳುಗಳನ್ನು ಪಡೆದ ಕಾರ್ಖಾನೆಯವರು ಅದನ್ನು ಟಾರ್‌ಪಾಲಿನ್‌ಗಳಾಗಿ ಮಾಡುತ್ತಾರೆ.  ಇವು ಟೆಂಟ್‌ ಕಟ್ಟಲು, ಹಸಿರುಮನೆ ಮಾಡಲು, ಬೆಳೆಗಳಿಗೆ ಮಲ್ಚಿಂಗ್‌ ಮಾಡಲು, ನಮ್ಮ ಮನೆಗೆ, ತೋಟಕ್ಕೆ ಬರುತ್ತವೆ.

ಮರುಬಳಕೆ ಪ್ಲಾಸ್ಟಿಕ್‌ ವ್ಯಾಪಾರದಲ್ಲಿ ವ್ಯಾಪಾರಿಗಳಿಗೆ ಅಂದರೆ ಮಧ್ಯವರ್ತಿಗಳಿಗೆ ಗಳಿಕೆ ಜಾಸ್ತಿ.  ಒಂದು ಕಿಲೋಗ್ರಾಂಗೆ ಕೇವಲ ೩-೫ ರೂಪಾಯಿಗಳಿಗೆ ಕೊಂಡ ಪ್ಲಾಸ್ಟಿಕನ್ನು ೧೮ರಿಂದ ೨೦ ರೂಪಾಯಿಗಳಿಗೆ ಮಾರುತ್ತಾರೆ.  ಇಲ್ಲಿ ಸಂಸ್ಕರಣೆಯಾದ ಮೇಲೆ ಶೇಕಡಾ ೪೦ರಷ್ಟು ತೇವಾಂಶ ಹೋಗಿ ಬೆಲೆ ೪೫ ರೂಪಾಯಿಗಳಾಗಿರುತ್ತದೆ.  ಆದರೂ ಹೊಸ ಪ್ಲಾಸ್ಟಿಕ್‌ ಹರಳುಗಳ ಬೆಲೆ ಇಂದು ೧೦೦ ರೂಪಾಯಿ ದಾಟಿದ್ದಕ್ಕೆ ಇದು ದುಬಾರಿ ಎನಿಸುವುದಿಲ್ಲ.

ಕಾರ್ಖಾನೆಯಲ್ಲಿ ತಯಾರಾದ ಟಾರ್ಪಾಲಿನ್‌ಗಳ ಬೆಲೆಯೂ ಅಧಿಕವಲ್ಲ.  ಇವು ಸೈಜ್, ದಪ್ಪಗಳನ್ನು ಆಧರಿಸಿ ಮಾರಾಟವಾಗುತ್ತವೆ.  ಆದರೆ ಅಂಗಡಿಗಳಲ್ಲಿ ಬೆಲೆ ಮೂರುಪಟ್ಟು ಹೆಚ್ಚಿರುತ್ತದೆ.

ಪಕ್ಕದ ಮಿಜಯರಾಣಿಯವರ ಕಾರ್ಖಾನೆಯಂತೂ ಉತ್ಪಾದನೆ ಕಾಣದಷ್ಟು ಪ್ಲಾಸ್ಟಿಕ್‌ ಪೊಟ್ಟಣಗಳಿಂದ ತುಂಬಿತ್ತು.  ಅದನ್ನೆಲ್ಲಾ ಸರಿಸಿ, ಸರಿಸಿ ನೋಡಿದರೆ ನಾಲ್ಕಾರು ಮಹಿಳೆಯರು ಏನೋ ಮಾಡುತ್ತಿರುವುದು ಕಾಣಿಸಿತು.

ಕ್ಯಾರಿಬ್ಯಾಗ್‌ಗಳ ಮರುಬಳಕೆ ಮಾಡುವ ಕೆಲಸ ಬಹಳ ಕಷ್ಟದ್ದು.  ನಮ್ಮ ನಾಗರಿಕರು ಮನೆಯ ತ್ಯಾಜ್ಯವನ್ನೆಲ್ಲಾ ಕ್ಯಾರಿಬ್ಯಾಗಿನೊಳಗೆ ತುಂಬಿ ಹೊರಗೆ ಎಸೆಯುವುದನ್ನು ಸಂವಿಧಾನದ ಕಾನೂನಿನಂತೆ ಮಾಡಿಕೊಂಡಿದ್ದಾರೆ.  ಆ ಕ್ಯಾರಿಬ್ಯಾಗ್‌ಗಳಲ್ಲಿರುವ ಕಸ, ತ್ಯಾಜ್ಯವನ್ನೆಲ್ಲಾ ಎಸೆದು, ನೀರಿನಲ್ಲಿ ತೊಳೆದರೂ ವಾಸನೆ ಹೋಗದು.  ಅವನ್ನು ಮತ್ತೆ ಗಾಳಿಯಂತ್ರದಲ್ಲಿ ‌ಒಣಗಿಸಬೇಕು.  ಆಮೇಲೆ ಕರಗುವ ಯಂತ್ರಕ್ಕೆ ಹಾಕಬೇಕು.  ಹೀಗೆ ಕರಗಿದ ಪ್ಲಾಸ್ಟಿಕ್‌ ಸಗಣಿಮುದ್ದೆಯಂತೆ ಆಗುತ್ತದೆ.  ಅದನ್ನಿಲ್ಲಿ ’ಗಟ್ಟ’ವೆಂದು ಕರೆಯುತ್ತಾರೆ.  ಈ ಗಟ್ಟವನ್ನು ಪೈಪ್‌, ಕ್ಯಾನ್‌ ಹಾಗೂ ನಿತ್ಯಬಳಕೆಯ ವಸ್ತುಗಳನ್ನು ಮಾಡಲು ಕೊಳ್ಳುತ್ತಾರೆ.

ಇದೇ ರೀತಿ ಕಾಫಿ, ಟೀ, ಲೋಟಗಳು, ಸೈಕಲ್‌ ಹ್ಯಾಂಡ್‌ಕವರ್‌ಗಳಾಗುತ್ತದೆ.  ಗೊಬ್ಬರದ ಚೀಲಗಳ ಹಗ್ಗಗಳಾಗುತ್ತದೆ, ಸೂಟ್‌ಕೇಸಾಗುತ್ತದೆ.

ಹೀಗೆ ಮರುಬಳಕೆಯ ವಸ್ತುಗಳಾಗಿ ನಮ್ಮ ಹೊಲಕ್ಕೆ, ನಮ್ಮ ಮನೆಗೆ ಬರುತ್ತದೆ.  ಹಾಳಾದ ಮೇಲೆ ಮತ್ತೆ ಮರುಬಳಕೆಗೆ ಹೋಗುತ್ತದೆ.

ಈ ರೀತಿಯ ಮಾರ್ಪಾಟುಗಳು ನಡೆಯುವಾಗ ವಾಯುಮಾಲಿನ್ಯವಾಗದು.  ನೀರನ್ನು ಅತಿ ಕಡಿಮೆ ಉಪಯೋಗಿಸುತ್ತಾರೆ ಹಾಗೂ ಮರುಬಳಕೆ ಮಾಡುತ್ತಾರೆ.  ಜಲಮಾಲಿನ್ಯ ಅತಿ ಕಡಿಮೆ.

ಇಲ್ಲಿ ಕೆಲಸ ಮಾಡುವ ಬಿಹಾರದ ರಾಜು ಹೇಳುವಂತೆ ಪ್ಲಾಸ್ಟಿಕ್‌ ಜೊತೆಗಿನ ಕೆಲಸದಿಂದ ಯಾವುದೇ ಆರೋಗ್ಯ ತೊಂದರೆ ಅನುಭವಿಸಿಲ್ಲ, ಉಸಿರಾಟದ್ದಿರಲಿ, ಅಜೀರ್ಣ, ಅಲರ್ಜಿಗಳೂ ಆಗಿಲ್ಲವೆಂದು ಉಳಿದ ಕೆಲಸಗಾರರು ಅಭಿಪ್ರಾಯಪಡುತ್ತಾರೆ.  ಆದರೆ ತ್ಯಾಜ್ಯಸಹಿತದ ಕ್ಯಾರಿಬ್ಯಾಗ್‌ಗಳು ವಿಪರೀತ ಕೆಟ್ಟ ವಾಸನೆ ಬೀರುವ ಕಾರಣ ಅದು ಕಷ್ಟ ಎನ್ನುವ ಹೇಳಿಕೆ ಮಂಜುಳರದು.  ಆದರೆ ಅವರ ಮೂಗು ಕೆಟ್ಟವಾಸನೆಗೆ ಹೊಂದಿಕೊಂಡುಬಿಟ್ಟಿದೆಯೆಂತೆ.

ಕಳೆದ ೨೦ ವರ್ಷಗಳಿಂದ ಪ್ಲಾಸ್ಟಿಕ್‌ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಬಾಬು ಇಂದು ರಾಧಾಕೃಷ್ಣ ಪ್ಲಾಸ್ಟಿಕ್‌ ಕಾರ್ಖಾನೆಯ ಮ್ಯಾನೇಜರ್‌. ಹಿಂದೆಲ್ಲಾ ಮರುಬಳಕೆ ಮಾಡುವ ಯಂತ್ರಗಳೇ ಇರಲಿಲ್ಲ ಸಾರ್‍, ಈಗೆಲ್ಲಾ ಬಂದಿದೆ ಎನ್ನುತ್ತಾರೆ.  ಇಲ್ಲಿಯೂ ಮರುಬಳಕೆಯಾಗದೇ ಉಳಿದ ಪ್ಲಾಸ್ಟಿಕ್ ವಸ್ತುಗಳನ್ನು ದೆಹಲಿಗೆ ಕಳುಹಿಸುತ್ತಾರಂತೆ.

ಇದು ನಮ್ಮ ಅಂಗಳದ ಪೈಪ್‌ಗಳು, ನರ್ಸರಿ ತೊಟ್ಟಿಗಳು, ಬಿಂದಿಗಗಳು, ಕ್ಯಾನ್‌ಗಳು ಮುಂತಾದ ವಸ್ತುಗಳ ಹಿಂದಿರುವ ಕತೆ.

ಡೈಯಾಕ್ಸಿನ್

ಪ್ಲಾಸ್ಟಿಕ್ ಸುಟ್ಟರೂ, ಸುಡದಿದ್ದರೂ ಉತ್ಪತ್ತಿಯಾಗುವ ಅತ್ಯಂತ ವಿಷಕಾರಿ ರಾಸಾಯನಿಕಗಳೆಂದರೆ ಡೈಯಾಕ್ಸಿನ್‌ಗಳು.  ಇದು ಕ್ಲೋರಿನೆಂಟೆಡ್‌ ಡೈಬೆಂಜೋ ಡೈಯಾಕ್ಸಿನ್ ಕುಟುಂಬಕ್ಕೆ ಸೇರಿದೆ.  ಇದು ತಯಾರಿಕಾ ಹಂತದಿಂದ ಕೊನೆಯವರೆಗೂ ಉತ್ಪತ್ತಿಯಾಗುತ್ತಲೇ ಇರುತ್ತದೆ.  ಮರುಬಳಕೆ ಪ್ರಾರಂಭವಾಗುವ ಮೊದಲು ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸುಟ್ಟ ಕಾರಣ ವಾತಾವರಣದಲ್ಲಿ ಇದು ಅಗತ್ಯಕ್ಕಿಂತ ೫೦೦ ಪಟ್ಟು ಹೆಚ್ಚು ಸೇರಿಕೊಂಡಿದೆ ಎಂದು ಅಮೇರಿಕಾದ ವಿಜ್ಞಾನಿಗಳ ಸಂಶೋಧನೆ.  ಟೆಟ್ರಾಕ್ಲೋರಿನ್‌ ಡೈಬೆಂಜೋ ಡೈಯಾಕ್ಸಿನ್‌ ಎಲ್ಲಕ್ಕೂ ಹೆಚ್ಚಿನ ಹಾನಿ ಮಾಡುವ ಡೈಯಾಕ್ಸಿನ್‌.  ಕ್ಯಾನ್ಸರ್‍, ಚರ್ಮರೋಗಗಳು, ಅಲರ್ಜಿಗಳಿಗೆಲ್ಲಾ ಮೂಲಕಾರಣವಿದು.  ಡೈಯಾಕ್ಸಿನ್‌ ಬೆರೆತ ಆಹಾರ ಸೇವಿಸುತ್ತಿರುವ ಪ್ರಾಣಿಗಳು, ಮನುಷ್ಯರು ಎಲ್ಲರಿಗೂ ಇದು ಎಂದಿದ್ದರೂ ಅಪಾಯಕಾರಿ.

ಪ್ಲಾಸ್ಟಿಕ್ ಒಕ್ಕೂಟದ ಪರಿಚಯ

 

ರಾಜ್ಯಾದ್ಯಂತ ಪ್ಲಾಸ್ಟಿಕ್ ವಿರೋಧ ನಡೆಯುತ್ತಲೇ ಇರುತ್ತದೆ.  ಆದರೆ ಅದಕ್ಕೆ ಬದಲಿ ಪರಿಹಾರವನ್ನು ಯಾರೂ ಅಳವಡಿಸಿಕೊಳ್ಳುವುದಿಲ್ಲ.  ಯೋಚಿಸುವುದೂ ಇಲ್ಲ.  ಮರುಬಳಕೆ ಮಾಡುವುದೂ ಇಲ್ಲ.  ಆದರೆ ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಅಸೋಸಿಯೇಷನ್ ಈ ಕುರಿತ ಗಂಭೀರ ಚಿಂತನೆ ನಡೆಸಿದೆ.  ಇದರ ಪರಿಚಯ ಇಲ್ಲಿದೆ.

ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಒಕ್ಕೂಟವೊಂದು ನೋಂದಾಯಿತ ಸಂಸ್ಥೆ.  ೧೦೦೦ ಸದಸ್ಯರು, ಆಡಳಿತ ವಿಭಾಗ ಹೀಗೆ ನಿಧಾನವಾಗಿ ಬೆಳೆಯುತ್ತಿರುವ ಒಕ್ಕೂಟ.  ಇದರಲ್ಲಿರುವವರಲ್ಲಿ ಹೆಚ್ಚಿನವರು ಪ್ಲಾಸ್ಟಿಕ್ ತಯಾರಕರು!!  ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆ, ಮಾರಾಟ ಸಂಸ್ಥೆ-ಹೀಗೆ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಪ್ಲಾಸ್ಟಿಕ್‌ಗೆ ಸಂಬಂಧಿಸಿದ ಗಣ್ಯವ್ಯಕ್ತಿಗಳು.  ಕಾರ್ಯದರ್ಶಿಯಾಗಿದ್ದ ಚಂದ್ರಮೋಹನ್‌ ಎಂ.ಎ. “ನಮ್ಮ ಸ್ವ-ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಮುಖ್ಯ ಉದ್ದೇಶದಿಂದ ಈ ಒಕ್ಕೂಟವನ್ನು ಸ್ಥಾಪನೆ ಮಾಡಿಕೊಂಡಿದ್ದೇವೆ” ಎಂದೇ ಪೀಠಿಕೆ ಹಾಕುವ ಇವರು ಕಳೆದ ಎಂಟು ವರ್ಷಗಳ ಪ್ರಮುಖ ಕಾರ್ಯಕ್ರಮಗಳನ್ನು ಹೇಳುತ್ತಾರೆ.

ಪ್ಲಾಸ್ಟಿಕ್ಎಂದರೇನೆಂಬ ತಿಳಿವಳಿಕೆ ಶಿಬಿರ

ಪ್ಲಾಸ್ಟಿಕ್‌ ಬಳಕೆ-ಮರುಬಳಕೆ ಕುರಿತ ತಿಳಿವಳಿಕೆ, ತರಬೇತಿ, ಪ್ಲಾಸ್ಟಿಕ್‌ ಆಯುವವರಿಗೆ ತರಬೇತಿ.

ಪೌರಕಾರ್ಮಿಕರಿಗೆ ಪ್ಲಾಸ್ಟಿಕ್‌ ವಿಂಗಡಣೆ ಮಾಡುವ ತರಬೇತಿ, ಸಂಗ್ರಹಣೆ ಹಾಗೂ ವಿಲೇವಾರಿ ಕುರಿತು ಮನವಿ, ಒತ್ತಾಯ ಇತ್ಯಾದಿ ಪತ್ರಿಕಾ ಪ್ರಕಟಣೆಗಳು, ಪುಸ್ತಕ ಪ್ರಕಾಶನ ಹೀಗೆ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದ್ದಾರೆ.  ಬೆಂಗಳೂರಿನ ೧೦ ವಾರ್ಡ್‌‌ಗಳಲ್ಲಿ ಸಂಗ್ರಹಿಸಿದ ಮರುಬಳಕೆ ಮಾಡಬಲ್ಲ ಪ್ಲಾಸ್ಟಿಕನ್ನು ಕೊಳ್ಳುತ್ತಿದ್ದಾರೆ.  ಈಗಲೂ ರಾಜ್ಯಾದ್ಯಂತ ಯಾರು ಬೇಕಾದರೂ ಮರುಬಳಕೆ ಪ್ಲಾಸ್ಟಿಕ್ಕನ್ನು ಸಂಗ್ರಹಿಸಿ ಬೆಂಗಳೂರಿಗೆ ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಿದರೆ ಒಕ್ಕೂಟವು ಸೂಕ್ತ ಬೆಲೆ ನೀಡಿ ಕೊಂಡುಕೊಳ್ಳಲು ಸಿದ್ಧವಿದೆ ಎನ್ನುವುದು ಒಕ್ಕೂಟದ ಎಲ್ಲರ ಅಭಿಪ್ರಾಯ!!

ಸಂಸ್ಥೆಯ ಸದಸ್ಯರು ಪ್ಲಾಸ್ಟಿಕ್‌ ಮರುಬಳಕೆ ಮಾಡಿ ರಸ್ತೆ ಟಾರ್‌ ಮಾಡುತ್ತಿದ್ದಾರೆ.  ಟಾರ್ಪಾಲಿನ್‌ ಮಾಡುತ್ತಿದ್ದಾರೆ.  ನೀರಿನ ಪೈಪ್‌ಗಳನ್ನು ತಯಾರಿಸುತ್ತಿದ್ದಾರೆ. ಹೀಗೆ ಅನೇಕ ವಿಧಗಳ ಮರುಬಳಕೆ ವಿಧಾನಗಳು, ಉಪಾಯಗಳು ಇವರಲ್ಲಿವೆ.  ಸಂಸ್ಥೆಯ ಮುಖ್ಯ ಉದ್ದೇಶ ಪ್ಲಾಸ್ಟಿಕ್‌ ಪರಿಸರ ವಿರೋಧಿ ಅಲ್ಲ, ಮಾನವಸ್ನೇಹಿ ಎನ್ನುವುದೇ ಆಗಿದೆ.  ಅದಕ್ಕಾಗಿ ಜನರಿಗೆ ತಿಳಿವಳಿಕೆ ನೀಡುವ ಕೆಲಸವನ್ನು ಸಂಸ್ಥೆಯು ಮಾಡುತ್ತಿದೆ.  ಸರ್ಕಾರವೂ ಮಾಡಬೇಕೆಂದು ಒತ್ತಾಯಿಸುತ್ತಿದೆ.  ಪ್ಲಾಸ್ಟಿಕನ್ನು ಸಂಪೂರ್ಣ ನಿಷೇಧ ಮಾಡಲು ಸಾಧ್ಯವಿಲ್ಲ.  ಆದರೆ ಬಳಕೆಯ ಪ್ರಮಾಣ ತಗ್ಗಿಸಬಹುದು.  ಪ್ಲಾಸ್ಟಿಕ್‌ ನಿಷೇಧದಿಂದ ಒಂದು ಕೋಟಿ ಕೆಲಸಗಾರರು ಬೀದಿಪಾಲಾಗುತ್ತಾರೆ.  ಕಾಗದಕ್ಕಾಗಿ ಮರ ಕಡಿಯುವ ಪ್ರಮಾಣ ಹೆಚ್ಚುತ್ತದೆ.  ಮನೆಬಳಕೆಯ ವಸ್ತುಗಳಿಗಾಗಿ ಮರವೇ ಬೇಕಾಗುತ್ತದೆ. ಕೃಷಿ ಉಪಕರಣಗಳ ಬೆಲೆ ಏರುತ್ತದೆ.  ವಿದ್ಯುತ್‌ ಬಳಕೆ ಹೆಚ್ಚುತ್ತದೆ.  ತೆರಿಗೆ, ವಿದೇಶೀ ವಿನಿಮಯ ತಗ್ಗುತ್ತದೆ.  ಇದರಿಂದ ಸರ್ಕಾರಕ್ಕೆ ಆದಾಯ ಕಡಿಮೆಯಾಗುತ್ತದೆ.  ೪೮ ಕೋಟಿ ಟನ್‌ ಗಟ್ಟಿಕಸ ಹೆಚ್ಚುತ್ತದೆ.  ವರ್ಷದಲ್ಲಿ ಬೆಂಗಳೂರಿಗೆ ೪೦ ದಿನಗಳಿಗಾಗುವಷ್ಟು ನೀರು ಕೊಳಚೆಯಾಗುತ್ತದೆ.  ಹೀಗೆ ಚಂದ್ರಮೋಹನ್‌ ಅನೇಕ ವಿಷಯಗಳನ್ನು ಹೇಳಿ ಚಿಂತನೆಗೆ ಹಚ್ಚುತ್ತಾರೆ.

ಸದಸ್ಯರು ತಮ್ಮ ಕಾರ್ಖಾನೆಗಳನ್ನು, ಅಲ್ಲಿ ನಡೆಯುತ್ತಿರುವ ಕೆಲಸಗಳನ್ನು ತೋರಿಸುತ್ತಾರೆ.  ನೀರಿನ ಮಿತಬಳಕೆ, ವಾಯುಮಾಲಿನ್ಯವಿಲ್ಲದಿರುವಿಕೆ, ಆರೋಗ್ಯಸಂಬಂಧಿ ತೊಂದರೆಗಳಿಲ್ಲದಿರುವಿಕೆ ಹೀಗೆ ಏನೆಲ್ಲಾ ದರ್ಶನ ಮಾಡಿಸುತ್ತಾರೆ.

ಆಸಕ್ತರು ಕರ್ನಾಟಕ ರಾಜ್ಯ ಪ್ಲಾಸ್ಟಿಕ್‌ ಒಕ್ಕೂಟವನ್ನು ಮಧ್ಯಾಹ್ನ ಮೂರರಿಂದ ಸಂಜೆ ಆರರವರೆಗೆ ಸಂದರ್ಶಿಸಿ ಮಾಹಿತಿ ಪಡೆಯಬಹುದು, ಮಾರ್ಗದರ್ಶನ ಪಡೆಯಬಹುದು.  ಒಕ್ಕೂಟವು ಕೆಲವು ಯೋಜನೆಗಳಿಗೆ ಸಹಯೋಗವನ್ನು ನೀಡುತ್ತದೆ.

ವಿಳಾಸ : ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ಲಾಸ್ಟಿಕ್‌ ಅಸೋಸಿಯೇಷನ್‌ (ರಿ.), ೨ನೇ ಅಂತಸ್ತು, ಒಕ್ಕಲಿಗರ ಭವನ, ಹಡ್ಸನ್‌ ವೃತ್ತ, ಬೆಂಗಳೂರು, ದೂರವಾಣಿ ಸಂಖ್ಯೆ : ೦೮೦-೨೬೭೦೦೭೭೫, ೨೬೭೦೨೬೫೯, ಮೊ:ಚಂದ್ರಮೋಹನ್‌ ೯೮೪೪೦೧೫೪೪೧

ಅಪಾಯಕಾರಿ ತ್ಯಾಜ್ಯಗಳನ್ನು ಉತ್ಪಾದಿಸುವ ಇತರ ಮೂಲಗಳು
ಔಷಧಿ ಅಂಗಡಿಗಳು
ಎಲೆಕ್ಟ್ರಾನಿಕ್ಸ್‌
ಕಾಗದ ತಯಾರಿಕಾ ಉದ್ಯಮ ಹಾಗೂ ಪ್ರಿಂಟಿಂಗ್
ಬಟ್ಟೆ ಕಾರ್ಖಾನೆ
ಪೆಟ್ರೋಲ್‌ ಸಂಸ್ಕರಣಾ ಘಟಕಗಳು
ಮರ ಕೈಗಾರಿಕೆ ಹಾಗೂ ರಕ್ಷಣಾ ಘಟಕಗಳು
ರಾಸಾಯನಿಕ ತಯಾರಿಕಾ ಕಾರ್ಖಾನೆಗಳು
ಗಣಿ ಹಾಗೂ ಗಣಿಗಾರಿಕೆ
ಆಹಾರ ತಯಾರಿಕಾ ಘಟಕಗಳು
ಆಟೋಮೊಬೈಲ್ಸ್
ಲಾಂಡ್ರಿ ಹಾಗೂ ಡ್ರೈಕ್ಲೀನಿಂಗ್
ಆಸ್ಪತ್ರೆಗಳು

ಮನೆಬಳಕೆಯ ವಸ್ತುಗಳಲ್ಲಿ ಪ್ಲಾಸ್ಟಿಕ್ಪ್ರಮಾಣ

ಇಸವಿ ೧೯೮೫ರಲ್ಲಿ ೮೦೦ ಟನ್‌, ಇಸವಿ ೧೯೯೬ರಲ್ಲಿ ೧೬೦೦ ಟನ್, ಇಸವಿ ೨೦೦೦ದಲ್ಲಿ ೨೦೦೦ ಟನ್ ಹಾಗೂ ಇಸವಿ ೨೦೦೬ರಲ್ಲಿ ೨೫೦೦ ಟನ್‌ ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆಯಾಗುತ್ತಿದೆ.  ಮನೆಬಳಕೆಗಾಗಿ ೧೪೦೦ ಟನ್‌ ಆದರೆ ವಿದ್ಯುತ್‌ ಉಪಕರಣಗಳಿಗಾಗಿ ೧೧೦೦ ಟನ್‌ ಬಳಕೆಯಾಗುತ್ತಿದೆ.

ಕಟ್ಟಡ ನಿರ್ಮಾಣಗಳಿಗೆ ೨೦,೦೦೦ ಟನ್‌ ಪ್ಲಾಸ್ಟಿಕ್‌ ಬಳಕೆಯಾಗುತ್ತಿದೆ.  ಕೇವಲ ಒಂದು ಕಾರ್‌ನಲ್ಲಿ ೧೨೧ ಕಿಲೋಗ್ರಾಂ ಪ್ಲಾಸ್ಟಿಕ್‌ ಇದೆ.

ಆಸ್ಪತ್ರೆ ಹಾಗೂ ಔಷಧಾಲಗಳಿಂದ ಪ್ರತಿವರ್ಷ ೬೬೦೦ ಟನ್‌ ಪ್ಲಾಸ್ಟಿಕ್‌ ಬಳಕೆಯಾಗುತ್ತಿದೆ.