ಪ್ಲಾಸ್ಟಿಕ್ ಇಲ್ಲದ ಜಾಗವೇ ಇಲ್ಲ. ಹೃದಯ ಕವಾಟದಿಂದ ಚಂದ್ರನವರೆಗೂ ಪ್ಲಾಸ್ಟಿಕ್ಮಯ. ಎಲ್ಲಿ, ಯಾವುದರಲ್ಲಿ ಪ್ಲಾಸ್ಟಿಕ್ ಇಲ್ಲ ಎಂದು ಹೇಳುವುದೇ ಕಷ್ಟ. ನಮಗೆ ಪ್ಲಾಸ್ಟಿಕ್ ಬಳಕೆ ಮಾತ್ರ ತಿಳಿದಿದೆ. ನಿರ್ವಹಣೆ, ನಾಶ ತಿಳಿದಿಲ್ಲ. ಬೆಳಗ್ಗೆ ಎದ್ದ ಕೂಡಲೇ ಹಲ್ಲುಜ್ಜಲು ಬಳಸುವ ಬ್ರಷ್, ನೀರೆತ್ತಲು, ನೀರು ಹಿಡಿಯಲು ಬಳಸುವ ಕೊಡ, ಬಕೆಟ್, ಚಟ್ನಿ ಮಾಡಲು ಬಳಸುವ ಮಿಕ್ಸರ್, ಮಕ್ಕಳ ಆಟಿಕೆ, ಸ್ಕೂಲ್ ಬ್ಯಾಗ್, ಚಪ್ಪಲಿ, ಪೆನ್, ಫೋನ್, ರೆಫ್ರಿಜಿರೇಟರ್, ಬಸ್, ಟೇಬಲ್, ಕುರ್ಚಿ, ನಲ್ಲಿ, ಕಾಸ್ಮೆಟಿಕ್ ಡಬ್ಬಿ, ಕೊನೆಯಲ್ಲಿ ನೀವು ಮಲಗುವ ಮುನ್ನ ಲೈಟ್ ಆರಿಸಲು ಒತ್ತುವ ಸ್ವಿಚ್ ಸಹ ಪ್ಲಾಸ್ಟಿಕ್ ನಿಂದಲೇ ಆಗಿದೆ.

ಪೇಟೆಗೆ ಹೋಗುವಾಗ ಕೈಚೀಲವೊಂದನ್ನು ಹಿಡಿದುಕೊಂಡು ಹೋಗುವ ಪದ್ಧತಿ ಈಗ ಇಲ್ಲ. ಎಲ್ಲಾ ವಸ್ತುಗಳಿಗೂ ಒಂದೊಂದು ಕ್ಯಾರಿಬ್ಯಾಗ್, ಅವುಗಳನ್ನು ತುಂಬಲು ಮತ್ತೊಂದು ಕ್ಯಾರಿ ಬ್ಯಾಗ್. ಗೊಬ್ಬರದ ಚೀಲ, ಪಶು ಆಹಾರ ಚೀಲ, ಕೀಟನಾಶಕಗಳ ಕ್ಯಾನ್, ಅಕ್ಕಿ ಚೀಲ, ಶೇಡ್ ನೆಟ್, ಡ್ರಿಪ್ ಪೈಪ್, ಸ್ಪ್ರಿಂಕ್ಲರ್, ಜೆಟ್, ಟಾರ್ಪಾಲ್, ಮುಚ್ಚಿಗೆಗೆ ಪ್ಲಾಸ್ಟಿಕ್, ಹಸುರುಮನೆ ನೆಟ್ಗಳು, ಮೀನು ಸಾಕುವ ನೆಲತೊಟ್ಟಿ, ಅಜೋಲಾ ತೊಟ್ಟಿ, ಮೊರ, ತಟ್ಟೆ, ಎತ್ತಿಗೆ ಕಟ್ಟುವ ಹಗ್ಗ, ದಂಡೆ, ಮುಖ್ಹಂಡ ಹೀಗೆ ಕೃಷಿಯಲ್ಲೂ ಪ್ಲಾಸ್ಟಿಕ್ಮಯ.

ನಮ್ಮ ಬದುಕಿನಲ್ಲಿ, ವಾತಾವರಣದಲ್ಲಿ ಈಗ 25% ಪ್ಲಾಸ್ಟಿಕ್ ತುಂಬಿದೆ. ಇದರ ಬದಲಿಗೆ ಬೇರೇನೂ ಬಳಸಲೂ ಸಾಧ್ಯವಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಪ್ಲಾಸ್ಟಿಕ್ ಬದಲಿಗೆ ಬೇರೇನು ಬಳಸಬಹುದು ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ?! ಪ್ಲಾಸ್ಟಿಕ್ ತ್ಯಜಿಸಲು ಸಾಧ್ಯವೇ ಎನ್ನುವುದು ಇನ್ನೂ ಕ್ಲಿಷ್ಟಕರ ವಿಚಾರ.

ಪ್ಲಾಸ್ಟಿಕ್ ದುರಂತ:

ಅಮೇರಿಕಾದ ನಯಾಗರ ಜಲಪಾತ ಗೊತ್ತಲ್ಲ; ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸಲು ಜಲಪಾತದ ಪಕ್ಕ ದೋಣಿ ಯಾನ ವ್ಯವಸ್ಥೆ ಮಾಡುವ ಯೋಚನೆ ಅಲ್ಲಿನ ಸರ್ಕಾರಕ್ಕೆ ಬಂತು. ವಿಲಿಯಂ ಲವ್ ಎಂಬಾತ ಅದನ್ನು ವಹಿಸಿಕೊಂಡ. ಕಾಲುವೆ ನಿರ್ಮಾಣಕ್ಕೆ ತೊಡಗಿದ. ಇದು ಇಂದಿಗೆ 100 ವರ್ಷಗಳ ಹಿಂದಿನ ಕಥೆ. ಸ್ವಲ್ಪ ದಿನಗಳಲ್ಲೇ ಯೋಜನೆ ನಷ್ಟವಾಗುತ್ತದೆ ಎಂದು ತಿಳಿಯಿತು.

ಆಳವಾದ ಕಂದಕ ಹಾಗೇ ಉಳಿಯಿತು. ಪ್ಲಾಸ್ಟಿಕ್ ಕಂಪೆನಿಯೊಂದು ತನ್ನ ತ್ಯಾಜ್ಯಗಳನ್ನು ಅದಕ್ಕೆ ತುಂಬತೊಡಗಿತು. ಸುರಿದು, ಸುರಿದು ಅರ್ಧ ತುಂಬಿದ ಮೇಲೆ ಅದರ ಮೇಲೆ ಜೇಡಿಮಣ್ಣು ತುಂಬಿ ಸಮತಟ್ಟು ಮಾಡಿತು. ಅದಾಗಿ ಕೆಲವು ವರ್ಷಗಳು ಕಳೆದವು. ಅಲ್ಲೊಂದು ಶಾಲೆ ಪ್ರಾರಂಭವಾಯಿತು. ವಸತಿ ಸಮುಚ್ಛಯ ತಲೆ ಎತ್ತಿತು. ಚಂದದ ಬಡಾವಣೆಯೊಂದು ಸಿದ್ಧವಾಯಿತು. ‘ಲವ್ ಕೆನಾಲ್’ ಎನ್ನುವ ಊರು ಹುಟ್ಟಿತು.

ಇದಾಗಿ ಸುಮಾರು 70 ವರ್ಷಗಳ ನಂತರ; ಅಂದರೆ 1970ರ ಹೊತ್ತಿಗೆ ಅಲ್ಲಿನ ನಿವಾಸಿಗಳಿಗೆಲ್ಲಾ ವಿಚಿತ್ರ ಕಾಯಿಲೆಗಳು ಬರತೊಡಗಿದವು. ಅಸ್ತಮಾ, ಅಂಗವಿಕಲತೆ, ಅಪಸ್ಮಾರ, ಕರುಳು ಕಾಯಿಲೆ, ಕ್ಯಾನ್ಸರ್ ಹೀಗೆ… 1978ರಲ್ಲಿ ಸಮೀಕ್ಷೆ ಮಾಡಿದಾಗ 100ರಲ್ಲಿ 56 ಮಕ್ಕಳಿಗೆ ಅಂಗವಿಕಲತೆ ಇರುವುದು ತಿಳಿಯಿತು. ಗರ್ಭಸ್ರಾವ, ಮಕ್ಕಳಾಗದಿರುವುದು ಇವೆಲ್ಲಾ ಗಂಭೀರ ಸಮಸ್ಯೆಗಳೂ ಇರುವುದು ಕೂಡ ತಿಳಿಯಿತು. ಅಮೇರಿಕಾ ಆ ಊರಿನಲ್ಲಿ ತುರ್ತು ಪರಿಹಾರ ಕಾರ್ಯ ಪ್ರಾರಂಭಿಸಿತು. ಇಡೀ ಊರನ್ನೇ ನೆಲಸಮ ಮಾಡಿ ಅಲ್ಲಿನ ನಿವಾಸಿಗಳಿಗೆ ಪ್ರತ್ಯೇಕ ಊರನ್ನು ನಿರ್ಮಿಸಿಕೊಟ್ಟಿತು. ‘ಲವ್ ಕೆನಾಲ್’ ದಾರುಣ ಪರಿಸರ ದುರಂತವೆಂಬ ಕುಖ್ಯಾತಿ ದಾಖಲಾಯಿತು.

ಇಂದು ನಮ್ಮ ಪ್ರತಿ ನಗರ- ಪಟ್ಟಣಗಳ ಸರಹದ್ದಿನಲ್ಲೂ ಒಂದೊಂದು ‘ಲವ್ ಕೆನಾಲ್’ ಗಳು ಸೃಷ್ಟಿಯಾಗಿವೆ. ಪ್ರತಿ ವರ್ಷ ನಗರ- ಪಟ್ಟಣಗಳಲ್ಲಿ ಸುಮಾರು 11 ಟನ್ನಿಂದ 210 ಟನ್ ವರೆಗೆ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇಷ್ಟಾದರೂ ನಮ್ಮಲ್ಲಿ ವಿದೇಶಗಳಿಂದ ಮತ್ತಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಆಮದು ಮಾಡಿಕೊಳ್ಳುವುದು ಜನರಿಗೆ ತಿಳಿಯುತ್ತಲೇ ಇಲ್ಲ. ಇದೊಂದು ರೀತಿಯಲ್ಲಿ ಜಾಗತೀಕರಣದ ಪ್ರಭಾವ. ‘ಲವ್ ಕೆನಾಲ್’ ದುರಂತದ ನಂತರ ಅಮೇರಿಕಾ ಹಾಗೂ ಯುರೋಪ್ ದೇಶಗಳು ಜಾಗೃತಗೊಂಡವು. ಬಳಸಿ ಬಿಸಾಕಿದ ಪ್ಲಾಸ್ಟಿಕನ್ನು ಮರುಬಳಕೆ ಮಾಡುವ ತಮ್ಮ ಕಾರ್ಖಾನೆಗಳನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ರವಾನಿಸತೊಡಗಿದವು.

ಹೀಗೆ ಮಹಾರಾಷ್ಟ್ರದ ರತ್ನಗಿರಿ ಸಮೀಪದ ಸಮುದ್ರತೀರಲ್ಲಿ ಮೊದಲ ಜರ್ಮನ್ ತಂತ್ರಜ್ಞಾನ ಆಧಾರಿತ ಕಾರ್ಖಾನೆ ಪ್ರಾರಂಭವಾಯಿತು. ನಿಮ್ಮೂರಿನ ಬೀದಿ- ಬೀದಿಗಳಲ್ಲಿ ಬಿದ್ದ ಪ್ಲಾಸ್ಟಿಕ್ ನಮ್ಮ ಕಾರ್ಖಾನೆಗೆ ಆಹಾರ. ನಿಮ್ಮೂರು ಪ್ಲಾಸ್ಟಿಕ್ ತ್ಯಾಜ್ಯದಿಂದ ಮುಕ್ತ ಮುಕ್ತ. ಹಾಗೇ ಅಗ್ಗದ ಪ್ಲಾಸ್ಟಿಕ್ ವಸ್ತುಗಳು ನಿಮಗೆ ಉಪಯುಕ್ತ ಎನ್ನುವ ವ್ಯಾಪಕ ಪ್ರಚಾರ, ಜಾಹೀರಾತುಗಳು ಬಂದವು. ಸರ್ಕಾರವೂ ನಂಬಿತು. ಜನರೂ, ಪರಿಸರವಾದಿಗಳೂ ನಂಬಿದರು. ಆದರೆ ಎರಡು ವರ್ಷ ಕಳೆದರೂ ಯಾವ ಊರೂ ಪ್ಲಾಸ್ಟಿಕ್ ತ್ಯಾಜ್ಯಮುಕ್ತವಾಗಿರಲೇ ಇಲ್ಲ.

‘ಗ್ರೀನ್ ಪೀಸ್’ ಎನ್ನುವ ಪರಿಸರವಾದಿಗಳ ಸಂಸ್ಥೆ ಮಹಾರಾಷ್ಟ್ರಕ್ಕೆ ವಿದೇಶಗಳಿಂದ ಹಡಗಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬರುತ್ತಿರುವುದನ್ನು ಗುರುತಿಸಿತು. ಕೊಳಕು ಪ್ಲಾಸ್ಟಿಕ್ ಶೀಟ್ಗಳು, ಬಾಟಲಿಗಳು, ರಾಸಾಯನಿಕ ಅವಶೇಷಗಳಿರುವ ಬ್ಯಾರಲ್ಲುಗಳು, ಕೊಳೆ ಪಿಪಾಯಿಗಳು, ಟ್ಯೂಬುಗಳು ಇವೆಲ್ಲಾ ಬಂದರಿಗೆ ಬಂದು ಬೀಳುತ್ತಿದ್ದವು. ಅಲ್ಲಿಂದ ಫ್ಯಾಕ್ಟರಿಗೆ ತರಲಾಗುತ್ತಿತ್ತು. ಫ್ಯಾಕ್ಟರಿಯಲ್ಲಿ ಕರಗಿಸುವ ಕೆಲಸ. ಘೋರ ದುರ್ನಾತ. ರತ್ನಗಿರಿಯ ಕಣಿವೆಗಳಲ್ಲಿ ವಿಷ ಕೊಳಚೆಯ ಹರಿವು. ಅಲ್ಲಿಂದ ಸಮುದ್ರಕ್ಕೆ, ರೈತರ ಬೆಳೆ ನಾಶ. ಕಣಿವೆ ಹಾಗೂ ಸಮುದ್ರದ ಮೀನುಗಳ ನಾಶ. ಸುತ್ತಲೂ ಕೆಟ್ಟ ವಾಸನೆ. ದಿನಗೂಲಿಗಳಿಗೆ ಕನಿಷ್ಠ ವೇತನ. ಗರಿಷ್ಠ ಕೆಲಸ. ಅವರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ. ಹೀಗೆ ಒಂದಕ್ಕಿಂತ ಒಂದು ವಿಪರೀತ ಅಪಾಯಕಾರಿ.

ಭಾರತದ ಒಂದು ಪೈಸೆ ಪ್ಲಾಸ್ಟಿಕ್ ಸಹಾ ಬಳಸಿದ ದಾಖಲೆ ಇಲ್ಲ. ವಿದೇಶಗಳಲ್ಲಿ ಅವರೇ ಏಕೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಿವಾರಿಸಿಕೊಳ್ಳುವುದಿಲ್ಲ?! ಅಲ್ಲಿ ‘ನಾಟ್ ಇನ್ ಮೈ ಬ್ಯಾಕ್ ಯಾರ್ಡ್’ (NIMBY) ಎನ್ನುವ ಘೋಷಣೆ ಜಾರಿಯಲ್ಲಿದೆ. ಅವರ ಕಾನೂನುಗಳು, ಅದರ ಪಾಲನೆ ಎರಡೂ ಕಠಿಣ. ನಮ್ಮಲ್ಲೂ ಘೋಷಣೆ ಇದೆ. ‘ನಮ್ಮ ಮನೆ ಕಸ ಅವರ ಮನೆ ಅಂಗಳಕ್ಕೆ’! ನಮ್ಮದೂ ಕಾನೂನು ಬಿಗಿ. ಆದರೆ, ಪಾಲನೆ ಮಾಡುವವರೇ ಇಲ್ಲ!

ಆ ತಿಪ್ಪೆಗಳನ್ನೆಲ್ಲಾ ನಮಗೇ ಕೊಡಿ ಎನ್ನುವ ಜನ ನಮ್ಮಲ್ಲಿರುವಾಗ ಅದನ್ನು ಫ್ಯಾಕ್ಟರಿಯವರೆಗೆ ಉಚಿತವಾಗಿ ತಂದುಕೊಡಲು ಅವರು ಸಿದ್ಧರಿರುತ್ತಾರೆ ಅಲ್ಲವೆ? ನಮ್ಮೂರಿನ ಬುಡಕ್ಕೆ ಬರೋಣ.

ತುಮಕೂರಿನಲ್ಲಿ ಡಾಬಸ್ ಪೇಟೆ ಎನ್ನುವ ಪಟ್ಟಣವಿದೆ. ಅಲ್ಲಿ ಇದೇ ರೀತಿ ರಾಜ್ಯದ ಕೊಳಕು ರಾಸಾಯನಿಕಗಳನ್ನೆಲ್ಲಾ ತುಂಬಿದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ದಫನ್ ಮಾಡುವ ಯೋಜನೆ ಸಿದ್ಧವಾಯಿತು. ಅದಕ್ಕಾಗಿ ಜಾಗ ಗುರುತಿಸಲಾಯಿತು. ಅತ್ಯಂತ ಸುರಕ್ಷಿತ ವಿಧಾನದಲ್ಲಿ 10 ಮೀಟರ್ ಆಳದಲ್ಲಿ ಎರಡಡಿ ದಪ್ಪದ ಕಾಂಕ್ರೀಟ್ ತಳ ಹಾಗೂ ಗೋಡೆಯ ನಿರ್ಮಾಣ ಮಾಡಿ ತ್ಯಾಜ್ಯಗಳನ್ನೆಲ್ಲಾ ಸುರಿದು ಮುಚ್ಚಬೇಕೆಂಬ ಯೋಜನೆಯದು.

ಈ ರೀತಿಯ ಐದು ಗುಂಡಿಗಳಲ್ಲಿ ಕೇವಲ ಬೆಂಗಳೂರಿನ ತ್ಯಾಜ್ಯಗಳು ಮಾತ್ರ ತುಂಬಲು ಸಾಧ್ಯವಾಯಿತು. ಯೋಜನೆಗೆ ಹಣದ ಕೊರತೆಯಿಂದ ಅದು ಅಲ್ಲಿಗೇ ನಿಂತಿತು. ಈಗ ಸುತ್ತಲಿನ ರೈತರ ಹೊಲ, ಬಾವಿಗಳಲ್ಲಿ ಈ ವಿಷ ರಾಸಾಯನಿಕದ ಸಶೇಷಗಳು ಹೊಮ್ಮುತ್ತಿವೆ. ಅಂದರೆ ಯೋಜನೆ ಏನಾಗಿದೆ, ಪರಿಣಾಮ, ಮುಂದಿನ ಅಪಾಯಗಳನ್ನು ನೀವೇ ಊಹಿಸಿ.

ಪಾದಯಾತ್ರೆ ಮಾಡಿದ ನಮ್ಮ ನಾಯಕರು ಆ ಸ್ಥಾವರಗಳ ಪಕ್ಕದಲ್ಲೇ ನಡೆದರು. ಅದೇನೆಂದು ವಿಚಾರಿಸಲು ಪಾಪ ಅವರಿಗೆ ಸಮಯವಿರಲಿಲ್ಲ. ಈ ಅಪಾಯಗಳೆಲ್ಲಾ ನಮಗೂ ತಟ್ಟುವ ದಿನ ದೂರವಿಲ್ಲ. ನಮ್ಮ ಊರುಗಳಲ್ಲಿ ಪ್ರತಿದಿನ ಹೊರಹೊಮ್ಮುವ ತ್ಯಾಜ್ಯಗಳನ್ನು ನೋಡಿದರೆ ಅವನ್ನೆಲ್ಲಾ ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ. ಪ್ಲಾಸ್ಟಿಕ್ ಅಪಾಯಕಾರಿ ಹೇಗೆ ಎಂಬುದು ಯಾವತ್ತೂ ಸುಲಭವಾಗಿ ಅರ್ಥವಾಗುವುದೇ ಇಲ್ಲ. ಪ್ಲಾಸ್ಟಿಕ್ ನ  ಮುಖ್ಯ ಹಾಗೂ ಏಕೈಕ ಅವಗುಣ, ಅದು ಜೈವಿಕವಲ್ಲ.

ಭೂಮಿಯಲ್ಲಿ ಸಿಗುವ ಪೆಟ್ರೋಲಿಯಂ ಉತ್ಪನ್ನಗಳಿಂದ ಇದನ್ನು ತಯಾರಿಸಲಾಗುತ್ತದೆಯಾದರೂ ಇದು ಮಣ್ಣಿನಲ್ಲಿ ಕರಗದು. ಇದರಲ್ಲಿ ಇರುವ ಅಪಾಯಕಾರಿ ರಾಸಾಯನಿಕವೆಂದರೆ ಕಾರ್ಬನ್. ಉಳಿದಂತೆ ಭಾರಲೋಹಗಳು, ವಿನೈಲ್ ಕ್ಲೋರೈಡ್, ಟೆಟ್ರಾ ಕ್ಲೋರೈಡ್, ಡಯಾಕ್ಸಿನ್, ಪ್ಯೂರಾನ್, ಥ್ಯಾಲೇಟ್ ಹೀಗೆ ಒಂದರ ಹಿಂದೊಂದು ವಿಷ, ಅತಿ ವಿಷ, ಅತಿ…… ವಿಷಕಾರಿ ರಾಸಾಯನಿಕಗಳ ಸರಮಾಲೆ. ಹೀಗಾಗಿ ಪ್ಲಾಸ್ಟಿಕ್ ಸಿದ್ಧವಾದಾಗಿನಿಂದ ರಾಸಾಯನಿಕಗಳ ಹೊರಹೊಮ್ಮುವಿಕೆಯೂ ಪ್ರಾರಂಭವಾಗುತ್ತದೆ.

ಪ್ಲಾಸ್ಟಿಕ್ ತಯಾರಿ ಆದ 40ನೇ ದಿನದಿಂದ ಈ ಡಯಾಕ್ಸಿನ್ ಅಂದರೆ ಕ್ಲೋರಿನೇಟೆಡ್ ಡೈಬೆಂಜೋ ಡಯಾಕ್ಸಿನ್ ಎನ್ನುವ ವಿಷ ರಾಸಾಯನಿಕ ಹೊರಹೊಮ್ಮತೊಡಗುತ್ತದೆ. ಬಾಟಲಿ ನೀರು, ಮರುಬಳಸಿದ ಬಾಟಲಿ, ಕ್ಯಾರಿ ಬ್ಯಾಗ್ ಹೀಗೆ ಯಾವುದೇ ಪ್ಲಾಸ್ಟಿಕ್ ನಿಂದಲೂ ಇದು ಹೊರಹೊಮ್ಮುತ್ತಿರುತ್ತದೆ. ಹಳತಾದಂತೆ ಇದರ ಹೊರಹೊಮ್ಮುವಿಕೆ ಅಧಿಕ. ಆದರೆ, ಕೇವಲ ಪಾಲಿ ಇಥೈಲೀನ್, ಪಾಲಿಯೋಲೆಫಿನ್ನಿಂದ ಸಿದ್ಧವಾದ ಪ್ಲಾಸ್ಟಿಕ್ ಆದರೆ ಹೆಚ್ಚು ಕಾಲ ಬಳಸಬಹುದಾಗಿದೆ (ಅಂದರೆ ಸುಮಾರು 2ರಿಂದ 10 ವರ್ಷಗಳು). ಆದರೆ ನಮ್ಮಲ್ಲಿ ಅತ್ಯಂತ ಅಗ್ಗ ಎನ್ನುವ ಕಾರಣಕ್ಕೆ ಪಾಲಿ ವಿನೈಲ್ ಕ್ಲೋರೈಡ್ (PVC) ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದೇವೆ. ಇಂದು ಭಾರತ ಆಮದು ಮಾಡಿಕೊಳ್ಳುತ್ತಿರುವ PVC ಪ್ಲಾಸ್ಟಿಕ್ ಪ್ರಮಾಣ 100 ಸಹಸ್ರ ಟನ್!!

ಅದೇ ರೀತಿ ಗುಜರಿ ಪ್ಲಾಸ್ಟಿಕ್ ಪ್ರಮಾಣವೂ 100 ಸಹಸ್ರ ಟನ್. ನಮ್ಮ ದೇಶದಲ್ಲೇ ಉತ್ಪತ್ತಿಯಾಗುತ್ತಿರುವ ಪ್ರಮಾಣ 30 ಸಹಸ್ರ ಟನ್. ಇದು 1997ರ ಅಂಕಿ- ಅಂಶ. 2015ರ ಹೊತ್ತಿಗೆ ಇದು 60 ಸಹಸ್ರ ಟನ್ ಆಗಬಹುದು ಎಂಬುದು ಅಂದಾಜು. ನಮ್ಮ ದೇಶದಲ್ಲಿ PVC ಉತ್ಪಾದಕರ ಸಂಖ್ಯೆ 8-10. ವಿವಿಧ ದೇಶಗಳಲ್ಲಿ 200ಕ್ಕೂ ಹೆಚ್ಚು ಉತ್ಪಾದಕರಿದ್ದಾರೆ. ಇದರಲ್ಲಿ ಜಪಾನಿಗೆ ಮೊದಲ ಸ್ಥಾನ. ಚೀನಾಕ್ಕೆ ಎರಡನೆಯದು. ತೈವಾನಿಗೆ ಮೂರನೇ ಸ್ಥಾನ. ಆದರೆ, ರಫ್ತು ಮಾಡುವುದರಲ್ಲಿ ಅಮೇರಿಕಾ ಹಾಗೂ ಯುರೋಪ್ ಮೊದಲೆರಡು ಸ್ಥಾನಗಳಲ್ಲಿವೆ. ಶೇಕಡಾ 40ರಷ್ಟು ಪೂರೈಕೆ ಮಾಡುತ್ತಿವೆ. ಇಡೀ ವಿಶ್ವದಲ್ಲಿ ಇಂದು 500 ಕೋಟಿ ಟನ್ PVC ಇದೆ. ಭಾರತದಲ್ಲಿ 50 ಕೋಟಿ ಟನ್ ಮೀರಿದೆ. PVCಯಲ್ಲಿ 45% ಕ್ಲೋರಿನ್ ಇರುವ ಕಾರಣ ಪೆಟ್ರೋಲಿಯಂ ಉತ್ಪಾದನೆ, ಬೆಲೆಯಲ್ಲಿ ಏರುಪೇರಾದರೂ ಸಮಸ್ಯೆಯಾಗದು.

Ethylene + Clorine (Hydrogen Chloride) = EDCl >Poly EDC>Poly Vinyl Chloride ಹೀಗಾಗಿ, ಅತ್ಯಂತ ಅಪಾಯಕಾರಿ ಪಟ್ಟಿಯಲ್ಲಿ ಇದರ ಪಾಲು ಶೇ.10 ಹಾಗೂ ಸ್ಥಾನ 9ನೆಯದು. PVC ಯನ್ನು ಉತ್ಪಾದಿಸುವಾಗಲೂ ಡೈಯಾಕ್ಸಿನ್ ಹಾಗೂ ಪ್ಯೂರಾನ್ಗಳು ಹಾಗೂ ಇನ್ನಿತರ ರಾಸಾಯನಿಕಗಳು ಹೊರಹೊಮ್ಮುತ್ತವೆ. PVCಯನ್ನು ಬಿಸಿ ಮಾಡಿದರೆ/ ಸುಟ್ಟರೆ ಕಾರ್ಸಿನೋಜನ್ ಹಾಗೂ ವಿನೈಲ್ ಕ್ಲೋರೈಡ್ ಮಾನೋಮರ್ ಉತ್ಪತ್ತಿಯಾಗುತ್ತದೆ. ಇದು PVC ಗಿಂತ 10ಪಟ್ಟು ಹೆಚ್ಚು ಅಪಾಯಕಾರಿ.

PVCಯಿಂದ ಗರ್ಭಸ್ರಾವ, ಅಂಗವೈಕಲ್ಯ, ಲೈಂಗಿಕ ಅಸಾಮರ್ಥ್ಯ, ಹೃದಯ, ಶ್ವಾಸಕೋಶ, ಪಿತ್ತಜನಕಾಂಗ, ಮೂತ್ರಪಿಂಡ ಹಾನಿ ಹಾಗೂ ಚರ್ಮರೋಗ ಖಾಯಂ. ಆದರೆ, VCMನಿಂದ ಕ್ಯಾನ್ಸರ್ ಹಾಗೂ ಮೂತ್ರಪಿಂಡ ವಿಫಲತೆ ಆಗಿಯೇ ಆಗುತ್ತದೆ [ರಶಿಯಾ ವಿಜ್ಞಾನಿಗಳ ಪ್ರಯೋಗ]. ಇಷ್ಟಾಗಿಯೂ ಕಚ್ಚಾ PVCಯು ತುಂಬಾ ಪೆಡಸು. ಅದನ್ನು ಮೃದುಗೊಳಿಸಲು ಇನ್ನಷ್ಟು ರಾಸಾಯನಿಕಗಳು ಅಗತ್ಯ. ಅಂದರೆ ಫ್ಲೆಕ್ಸಿಬಲ್ ಆಗಲು ಪ್ಲಾಸ್ಟಿಸೈಸರ್ಗಳ ಬಳಕೆ ಮಾಡುತ್ತಾರೆ. ಇವು ಭಾರಲೋಹಗಳಾಗಿವೆ. 25 ಬಗೆಯ ಸಂಯುಕ್ತಗಳಿಂದ ಕೂಡಿದ ಇದನ್ನು ಥಾಯ್ಲೇಟ್ಸ್ ಎನ್ನುತ್ತಾರೆ. ಇದು ಅತ್ಯಂತ ವಿಷಕಾರಿ Permanent Organic Pollutant (POP). ಅಂದರೆ ಪ್ರತಿವರ್ಷ 10 ಕೋಟಿ ಟನ್ ಥ್ಯಾಲೇಟ್ಸ್ ಬಳಕೆಯಾಗುತ್ತಿದೆ.

ಅಮೇರಿಕಾದ ವಿಷ ವಿಜ್ಞಾನಿ ರಾಬರ್ಟ್ ಮೆಂಜರ್ ಬರೆಯುತ್ತಾರೆ; ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಒಂದು ಕಿಲೋಮೀಟರ್ ಆಳದಲ್ಲಿ ವಾಸವಿರುವ ಜೆಲ್ಲಿ ಫಿಶ್ (ಸಾವಿಲ್ಲದ- ರೂಪಾಂತರ ಹೊಂದುವ ಪ್ರಪಂಚದ ಏಕೈಕ ಜೀವಿ) ಗಳಲ್ಲೂ ಥ್ಯಾಲೇಟ್ ಇರುವುದನ್ನು ಪತ್ತೆ ಹಚ್ಚಲಾಗಿದೆ. ಮನುಷ್ಯರ ಮೂತ್ರದಲ್ಲಿ 4 PPMನಷ್ಟು ಕಂಡರೂ ಅಂತಹವರಲ್ಲಿ ಮಕ್ಕಳಾಗುವ ಸಾಧ್ಯತೆ ಕುಂಠಿತವಾಗುತ್ತದೆ. ಶ್ವಾಸಕೋಶದ ತೊಂದರೆ ಹಾಗೂ ಮೂತ್ರಪಿಂಡದ ಕ್ಯಾನ್ಸರಿಗೆ ಕಾರಣವಾಗುತ್ತದೆ. ಆದರೆ, ಎಲ್ಲಕ್ಕಿಂತಲೂ ಹೆಚ್ಚು ಅಪಾಯಕಾರಿಯಾದದ್ದು ಪೌಚ್, ಸ್ಯಾಚೆಟ್ಗಳು (ಶ್ಯಾಂಪೂ + ಗುಟ್ಕಾ ಇತ್ಯಾದಿ) ಚಾಕೊಲೇಟ್, ಬಿಸ್ಕತ್ ಪ್ಯಾಕುಗಳು.

ಇವು ಥ್ಯಾಲೇಟ್ಗಿಂತಲೂ ಕ್ಲಿಷ್ಟ ರಾಸಾಯನಿಕಗಳಿಂದ ಹಾಗೂ ಭಾರಲೋಹಗಳನ್ನು ಹೊಂದಿದೆ. ಇವುಗಳನ್ನು ಸುಟ್ಟರೂ ಅತಿಹೆಚ್ಚು ಪ್ರಮಾಣದ ಡಯಾಕ್ಸಿನ್, ಫ್ಯೂರಾನ್, ಥ್ಯಾಲೇಟ್ಗಳಲ್ಲದೇ ವಿಷ ಗಾಳಿಯೂ ಸೇರಿ ವಾತಾವರಣದಲ್ಲಿ ಖಾಯಂ ಉಳಿದಿರುತ್ತದೆ. ಹೂಳಿದರೆ ಮಣ್ಣನ್ನೇ ಸಂಪೂರ್ಣ ನಾಶ ಮಾಡುತ್ತದೆ.

ಪರಿಹಾರ:

1. ಪ್ಲಾಸ್ಟಿಕ್ನ ಕಡಿಮೆ ಬಳಕೆ

2. ನಿರ್ವಹಣೆ

3. ಮರುಬಳಕೆ

4. ನಾಶ ಮಾಡಬಹುದಾದ ರೀತಿಗಳು

5. ತಯಾರಿಕೆಯಲ್ಲಿ ಬದಲಾವಣೆ

6. ಪುನರ್ ಬಳಕೆ

7. ಕಾನೂನು ಜಾರಿ

1. ಮಿತಬಳಕೆ (Reduce): ನಮಗೆ ಪ್ಲಾಸ್ಟಿಕ್ ಇಲ್ಲದೆ ಬದುಕಲು ಸಾಧ್ಯವಿಲ್ಲ. ಹೀಗಾಗಿ ಬಳಕೆಯನ್ನು ಕಡಿಮೆ ಮಾಡುವುದು. ಬಾಟಲಿ ನೀರನ್ನು ಬಳಸದಿರುವುದು, ಬಟ್ಟೆ ಚೀಲದ ಬಳಕೆ, ಖಾದಿ, ಕಾಟನ್ ವಸ್ತ್ರಗಳ ಬಳಕೆ, ಅಲ್ಯುಮಿನಿಯಂ, ಸ್ಟೀಲ್ ಪಾತ್ರೆಗಳ ಬಳಕೆ, ಬಿದಿರು ಬುಟ್ಟಿಗಳು, ರಬ್ಬರ್ ಪೈಪುಗಳು ಹೀಗೆ ಪರ್ಯಾಯಗಳನ್ನು ಹುಡುಕಿ ಬಳಸಿ.

2. ಮರುಬಳಕೆ (Re Use): ಪ್ಲಾಸ್ಟಿಕ್ ಈಗಾಗಲೇ ನಮ್ಮಲ್ಲಿ ಸಾಕಷ್ಟು ಇದೆ. ಅದನ್ನೇ ಮತ್ತೆ- ಮತ್ತೆ ಬಳಸುವುದು. ಕ್ಯಾರಿಬಾಗ್ ಮರು ಬಳಕೆ. ಇಲೆಕ್ಟ್ರಾನಿಕ್ ವಸ್ತುಗಳ ಮರು ಬಳಕೆ, ಪೆನ್, ಫೈಲ್, ಬ್ಯಾಗ್ ಹೀಗೆ…

3. ಪುನರ್ಬಳಕೆ (Recycle): ತ್ಯಾಜ್ಯವೆನಿಸಿದ್ದನ್ನು ಸಂಗ್ರಹಿಸಿ ಅವನ್ನು ಪ್ಲಾಸ್ಟಿಕ್ ಕೊಳ್ಳುವವರಿಗೆ ನೀಡುವುದು. ಇವರು ಮುಖ್ಯವಾಗಿ ಕ್ಯಾರಿಬ್ಯಾಗ್, ಹಾಲಿನ ಕವರ್, ಇನ್ನಿತರ ಕವರ್, ಹರಿದ ಚಾಪೆ, ಬಾಕ್ಸ್, ಮುಚ್ಚಳ, ಬ್ರಷ್, ಲೋಟ, ಪೇಸ್ಟ್ ಟ್ಯೂಬ್, ಬಾಚಣಿಗೆ, PVC ಪೈಪು, PVC ಪ್ಲಾಸ್ಟಿಕ್ ಹೀಗೆ. ಇವನ್ನೆಲ್ಲಾ ಯಾವುದೇ ಪ್ಲಾಸ್ಟಿಕ್ ಪುನರ್ಬಳಕೆ ಕಾರ್ಖಾನೆಗಳು ಕೊಳ್ಳುತ್ತವೆ. ಪ್ರತಿ ನಗರ- ಪಟ್ಟಣ ವ್ಯಾಪ್ತಿಯ ಪಂಚಾಯ್ತಿಗಳು, ಪುರಸಭೆ- ನಗರಸಭೆಯವರೂ ಸಂಗ್ರಹಿಸಿ ನೀಡಬಹುದು. ಇವುಗಳನ್ನೆಲ್ಲಾ ಮೊದಲು ದಾಸ್ತಾನು ಮಾಡಿ, ಚೀಲಗಳಲ್ಲಿ ತುಂಬಿ ಲಾರಿಗಳ ಮೂಲಕ ಬೆಂಗಳೂರಿನಲ್ಲಿರುವ ಪ್ಲಾಸ್ಟಿಕ್ ಕಾರ್ಖಾನೆಗಳಿಗೆ ಕಳುಹಿಸಬಹುದು.

ಇದಕ್ಕೆ ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಅನುಮತಿ ನೀಡಬೇಕೆಂಬ ಕಾನೂನಿದೆ. ಅಷ್ಟೇ ಅಲ್ಲ, ಲಾರಿಗಳು ಇವನ್ನು ಉಚಿತವಾಗಿ ಸಾಗಿಸಬೇಕೆಂಬ ಕಾನೂನು ಸಹ ಇದೆ. ಇದನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರನ್ನು ಸಂಪರ್ಕಿಸಿ ತಿಳಿವಳಿಕೆ ಪಡೆದುಕೊಳ್ಳಬಹುದು. ಹೀಗೆ ಸಂಗ್ರಹಿಸಿ ಕಳುಹಿಸಿದ ಪ್ಲಾಸ್ಟಿಕ್ ಗೆ ಬೆಂಗಳೂರಿನಲ್ಲಿ ಒಂದು ಕೆ.ಜಿ.ಗೆ ರೂ. 5ರಿಂದ ರೂ. 25 ರವರೆಗೆ ಬೆಲೆ ಸಿಗುತ್ತದೆ. ಹೆಚ್ಚಿನ ಮಾಹಿತಿಗೆ, ಕಾರ್ಯದರ್ಶಿ ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಅಸೋಸಿಯೇಷನ್ (ರಿ.) 2ನೇ ಅಂತಸ್ತು, ಒಕ್ಕಲಿಗರ ಭವನ, ಹಡ್ಸನ್ ಸರ್ಕಲ್, ಬೆಂಗಳೂರು. ಭೇಟಿಯ ಸಮಯ: ಮಧ್ಯಾಹ್ನ 3.00ರಿಂದ ಸಂಜೆ 6.00. ದೂರವಾಣಿ: 080- 26700775, 26702659, 98440 15441.

ಆದರೆ ಯಾವುದೇ ಕಾರಣಕ್ಕೂ ಪೌಚ್, ಸ್ಯಾಚೆಟ್, ಚಾಕಲೇಟ್, ಬಿಸ್ಕತ್ ಕವರ್ ಗಳನ್ನು ಅವರು ಕೊಳ್ಳುವುದಿಲ್ಲ. ಪುನರ್ಬಳಕೆಯ ಸಮಸ್ಯೆ, ಕಷ್ಟವೇನೆಂದರೆ ನಮ್ಮಲ್ಲಿ ರಾಸಾಯನಿಕಗಳು, ಆಹಾರ ತ್ಯಾಜ್ಯಗಳು ಎಲ್ಲವನ್ನೂ ಕವರುಗಳಲ್ಲಿ ಹಾಕಿ ಎಸೆಯುತ್ತೇವೆ. ಅವನ್ನೇ ಸಂಗ್ರಹಿಸಿ ಕಳುಹಿಸಿದಾಗ ಅದರಿಂದಾಗುವ ದುರ್ನಾತ- ರಾಸಾಯನಿಕಗಳ ಪರಿಣಾಮಗಳು ಸಮಸ್ಯೆಯನ್ನು ತರುತ್ತವೆ.

4. ನಿರ್ವಹಣೆ: ಬಳಸಿದ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯದಿರುವುದು, ಜೈವಿಕ ಹಾಗೂ ಪ್ಲಾಸ್ಟಿಕ್ಗಳನ್ನು ಬೇರೆ- ಬೇರೆ ತ್ಯಾಜ್ಯವಾಗಿ ಸಂಗ್ರಹಿಸುವುದು- ಇದನ್ನು ಎಲ್ಲಾ ನಗರ, ಪುರಸಭೆಗಳು ಮಾಡಬೇಕು. ಇದು ಈಗ ಬೆಂಗಳೂರಿನಲ್ಲಿ ಮಾತ್ರ ಕಾರ್ಯನಿರತವಾಗಿದೆ, ಘನ ತ್ಯಾಜ್ಯದ ಸೂಕ್ತ ವಿಲೇವಾರಿ. ಪ್ಲಾಸ್ಟಿಕ್ ಕವರುಗಳಲ್ಲಿ ಆಹಾರ ಪದಾರ್ಥಗಳನ್ನು ತುಂಬಿ ಎಸೆಯಬಾರದು. ಪ್ಲಾಸ್ಟಿಕನ್ನು ಸುಡಬಾರದು, ನೀರಿಗೆ ಎಸೆಯಬಾರದು. ಒಂದೊಮ್ಮೆ ನೀರಿಗೆ ಎಸೆಯುವುದು, ಬಿಡಾಸುವುದಾದರೆ ಗಂಟುಹಾಕಿ ಎಸೆಯಿರಿ. ಸಂಘ- ಸಂಸ್ಥೆಗಳ ಸಹಾಯದಿಂದ ಹೂಳುವಿಕೆ, ಪ್ಲಾಸ್ಟಿಕ್ ಫ್ಯಾಕ್ಟರಿಗಳಿಗೆ ರವಾನೆ, ಮರುಬಳಕೆಯ- ಉಪ ಉತ್ಪನ್ನಗಳ ತಯಾರಿಕೆಗೆ ಪ್ರಯತ್ನ.

5. ನಾಶ ಮಾಡಬಹುದಾದ ರೀತಿಗಳು: ಸುಡುವುದು ಅತ್ಯಂತ ಅಪಾಯಕಾರಿ. Incinerator (ಇನ್ಸಿನೆರೇಟರ್)ಗಳ ಬಳಕೆ. 10 ಮೀಟರ್ ಆಳವಾದ ಗುಂಡಿ ತೆಗೆದು 2 ಅಡಿ ದಪ್ಪದ ಕಾಂಕ್ರೀಟ್ ತಳ/ ಗೋಡೆ ನಿರ್ಮಿಸಿ ತುಂಬುವಿಕೆ. ಕೃಷಿ ಭೂಮಿ, ಕುಡಿಯುವ ನೀರು, ನದಿ, ಕೆರೆ ಇತ್ಯಾದಿ ಇಲ್ಲದ ಬರಡು ಭೂಮಿಯಲ್ಲಿ ನೇರವಾಗಿ ಆಳದ ಗುಂಡಿ ತೆಗೆದು ಹೂಳುವಿಕೆ. ಕಾರ್ಖಾನೆಗಳಿಗೆ ನೀಡುವುದು(ಇದೇ ಅತ್ಯಂತ ಸೂಕ್ತವಾದುದು).

6. ತಯಾರಿಕೆಯಲ್ಲೇ ಬದಲಾವಣೆ: ಪರ್ಯಾಯ ವಸ್ತುಗಳಿಗೆ ಆದ್ಯತೆ. ಅಂದರೆ ಪುರಾತನ ಕಾಲಕ್ಕೆ ಮರಳುವಿಕೆ. ಥ್ಯಾಲೇಟ್ಗೆ ಬದಲಾಗಿ ಸೋಯಾ ಎಣ್ಣೆ ಬಳಕೆ. ಇತರ ಸಸ್ಯಜನ್ಯ ಎಣ್ಣೆಗಳ ಬಳಕೆ. ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಬಳಕೆ. ಗುಟ್ಟಾಪೆರ್ಚಾ, ರಬ್ಬರ್ ಮರಗಳ ರಸದಿಂದ ಪ್ಲಾಸ್ಟಿಕ್ ತಯಾರಿಕೆ. ಮೆಕ್ಕೆಜೋಳ, ಗೋಧಿಯಿಂದ ಪ್ಲಾಸ್ಟಿಕ್ ತಯಾರಿಕೆ- ಬಯೋಪಾಲಿಮರ್. ಪಾಲಿ ಇಥೈಲೀನ್, ಪಾಲಿಯೋಲೇಫಿನ್ ಬಳಕೆ. ಅಲ್ಯೂಮಿನಿಯಂ, ಕಾಂಕ್ರೀಟ್, ಕಬ್ಬಿಣ, ತಾಮ್ರ ಮುಂತಾದ ಲೋಹಗಳ ಬಳಕೆ (Stressed Material)

7. ಕಾನೂನನ್ನು ಜಾರಿಗೊಳಿಸುವಿಕೆ: ಪ್ಲಾಸ್ಟಿಕ್ ತಯಾರಿಕೆ, ನಿರ್ವಹಣೆ, ಮರುಬಳಕೆ, ಪುನರ್ಬಳಕೆ, ಅದರಲ್ಲಿರುವ ರಾಸಾಯನಿಕಗಳ ಪಟ್ಟಿ, ಆಮದು- ರಫ್ತು ಹೀಗೆ ಪ್ರತಿ ಹಂತದಲ್ಲೂ ನಿರ್ದಿಷ್ಟ, ನಿಖರ ಕಾನೂನುಗಳಿವೆ. ಅದನ್ನು ಕಡ್ಡಾಯವಾಗಿ ಜಾರಿಗೊಳಿಸುವುದು. ಅತಿಕ್ರಮಿಸುವವರಿಗೆ ಶಿಕ್ಷೆ, ದಂಡ ವಿಧಿಸುವಿಕೆ ಹಾಗೂ ಜನಜಾಗೃತಿ- ಎಚ್ಚರಿಕೆಗಳನ್ನು ನೀಡುವುದು. ಜನರಲ್ಲೇ ಅರಿವು ಮೂಡಿಸುವಿಕೆ. ಆಂದೋಲನದ ರೀತಿಯಲ್ಲಿ ಕೈಗೊಳ್ಳುವಿಕೆ.