1950 ರಿಂದ 2015ರ 65 ವರ್ಷಗಳ ಅವಧಿಯಲ್ಲಿ ವಿಶ್ವದಾದ್ಯಂತ 9100 ಕೋಟಿ ಟನ್‌ಗಿಂತ ಅಧಿಕ ಪ್ರಮಾಣದ ಪ್ಲಾಸ್ಟಿಕ್ ಉತ್ಪಾದನೆಯಾಗಿದೆ.ಇದರಲ್ಲಿ ಕೇವಲ 819 ಕೋಟಿ ಟನ್ ಪ್ಲಾಸ್ಟಿಕ್ ಮರುಬಳಕೆಯಾಗಿದ್ದರೆ, 1092 ಕೋಟಿ ಟನ್ ಪ್ಲಾಸ್ಟಿಕ್‌ನ್ನು ದಹನ ಕ್ರಿಯೆಯಲ್ಲಿ ನಾಶಮಾಡಲಾಗಿದೆ.ಹೀಗಾಗಿ 5100 ಕೋಟಿ ಟನ್‌ಗಿಂತ ಅಧಿಕ ಪ್ಲಾಸ್ಟಿಕ್ ತ್ಯಾಜ್ಯ ನಮ್ಮ ಭೂಮಿ, ಸಮುದ್ರ, ನದಿ, ಕೆರೆ, ಹೀಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ ಮತ್ತು ಎಲ್ಲಾ ಜೀವ ವೈವಿಧ್ಯಕ್ಕೂ ಮಾರಕವಾಗಿದೆ.ಉದಾಹರಣೆಗೆ, ಸಮುದ್ರ ಸೇರುವ ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ತಿಮಿಂಗಲ, ಡಾಲ್ಫಿನ್, ಕಡಲ ಆಮೆಗಳು, ಕಡಲ ಹಕ್ಕಿಗಳು, ಮೀನುಗಳು, ಹೀಗೆ ಸುಮಾರು 600 ಜೀವ ಸಂಕುಲಗಳ ಮಾರಣ ಹೋಮಕ್ಕೆ ಕಾರಣವಾಗಿದೆ.ಸಮುದ್ರದ ನೀರು, ಸಮುದ್ರದ ತಳದಲ್ಲಿರುವ ಕಲ್ಲು, ಮಣ್ಣಿನಲ್ಲೂ ಪ್ಲಾಸ್ಟಿಕ್ ತ್ಯಾಜ್ಯದ ಸೂಕ್ಷ್ಮಕಣಗಳು ಪತ್ತೆಯಾಗಿವೆ. ಇದೇ ರೀತಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮುದ್ರದಲ್ಲಿ ಸುರಿಯುವುದನ್ನು ಮುಂದುವರೆಸಿದರೆ 2050ರ ಹೊತ್ತಿಗೆ ಸಮುದ್ರಗಳಲ್ಲಿ ಜಲಚರಗಳಿಗಿಂತ ಪ್ಲಾಸ್ಟಿಕ್ ತಾಜ್ಯ ಅಧಿಕವಾಗುತ್ತದೆ ಮತ್ತು ಮೀನುಗಾರಿಕೆ ನಂಬಿಕೊಂಡಿರುವ ಕೋಟ್ಯಾಂತರ ಜನರು ತೀವ್ರ ಸಂಕಷ್ಟಕ್ಕೆ ಈಡಾಗುತ್ತಾರೆ. ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಚೀನಾಗೆ ಪ್ರಥಮ ಸ್ಥಾನವಿದ್ದರೆ, ನಂತರದ ಸ್ಥಾನಗಳು ಯುರೋಪ್ ಮತ್ತು ಉತ್ತರ ಅಮೇರಿಕಾ ದೇಶಗಳ ಪಾಲಾಗಿವೆ.ಅಮೇರಿಕಾದ ವಿಜ್ಞಾನಿಗಳು ಪ್ರಕಟಿಸಿರುವ ಈ ಅಧ್ಯಯನ ವರದಿ, ವಿಶ್ವದಾದ್ಯಂತ ತಲ್ಲಣವನ್ನುಂಟು ಮಾಡಿದೆ.

ಪ್ಲಾಸ್ಟಿಕ್ ಚೀಲಗಳು ಮಾಡುತ್ತಿರುವ ಹಾನಿ

ಪ್ರತಿ ನಿಮಿಷ 10 ಲಕ್ಷ ಪ್ಲಾಸ್ಟಿಕ್ ಕೈಚೀಲಗಳನ್ನು ವಿಶ್ವದಾದ್ಯಂತ ಬಳಸಲಾಗುತ್ತಿದೆ. ಹೀಗೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಕೈಚೀಲಗಳಿಂದಾಗಿ ಆಗುತ್ತಿರುವ ಹಾನಿ ಕುರಿತು ಹೆಚ್ಚಿನ ಜನರಿಗೆ ಅರಿವಿಲ್ಲ. ಹೀಗಾಗಿ ಈ ಪ್ಲಾಸ್ಟಿಕ್ ಕೈಚೀಲಗಳು ಮಾಡುತ್ತಿರುವ ಹಾನಿಯನ್ನು ಕುರಿತು ಕೆಲವು ಉದಾಹರಣೆಗಳನ್ನು ಇಲ್ಲಿ ನೀಡಲಾಗಿದೆ.
1. ಒಂದು ಪ್ಲಾಸ್ಟಿಕ್ ಕೈಚೀಲವನ್ನು ಕಸದ ಜೊತೆ ಬಿಸಾಡಿದರೆ ಅದು ಸುಮಾರು 1000 ವರ್ಷಗಳ ಕಾಲ ಹಾಗೆ ಇರುತ್ತದೆ. ಇದುವರೆಗೆ ವಿಶ್ವದಲ್ಲಿ ಬಳಕೆಯಾಗಿರುವ ಪ್ಲಾಸ್ಟಿಕ್ ಕೈಚೀಲಗಳಲ್ಲಿ ಶೇಕಡಾ 1 ರಷ್ಟು ಕೈಚೀಲಗಳನ್ನು ಮಾತ್ರ ಮರುಬಳಕೆಗಾಗಿ ಸಂಸ್ಕರಣೆ ಮಾಡಲಾಗಿದೆ.ಉಳಿದ ಶೇಕಡಾ 99ರಷ್ಟು ಪ್ಲಾಸ್ಟಿಕ್ ಕೈಚೀಲಗಳು ಹರಿದು ಚೂರು ಚೂರಾಗಿದ್ದರೂ ಕೂಡಾ ನಮ್ಮ ಭೂಮಿ, ಜಲ, ಪರಿಸರದಲ್ಲಿ ಹರಡಿಕೊಂಡಿದ್ದು, ಪರಿಸರ ಮತ್ತು ಜೀವ ಸಂಕುಲ ನಾಶ ಮಾಡುತ್ತಿವೆ.ಉದಾಹರಣೆಗೆ ಸಮುದ್ರದಲ್ಲಿ 5 ಲಕ್ಷ ಕೋಟಿ ಪ್ಲಾಸ್ಟಿಕ್ ಕೈಚೀಲಗಳು ಹರಿದಾಡುತ್ತಿವೆ.
2. ಸಮುದ್ರದಲ್ಲಿ ಸೇರುವ ಪ್ಲಾಸ್ಟಿಕ್ ಕೈಚೀಲಗಳ ಉರುಳಿಗೆ ಸಿಕ್ಕು ಪ್ರತಿವರ್ಷ 1 ಲಕ್ಷ ಜಲಚರಗಳು ಸಾಯುತ್ತಿವೆ. ಇದೇ ರೀತಿ ಪ್ರತಿ ವರ್ಷ 10 ಲಕ್ಷ ಕಡಲ ಪಕ್ಷಿಗಳು ಈ ಪ್ಲಾಸ್ಟಿಕ್‌ನ್ನು ಆಹಾರವೆಂದು ಭಾವಿಸಿ ಸೇವಿಸುವುದರಿಂದಾಗಿ ಸಾಯುತ್ತಿವೆ.
3. ಪ್ಲಾಸ್ಟಿಕ್ ಕೈಚೀಲಗಳನ್ನು ತಯಾರಿಸಲು ಬಳಸುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದಿಂದಾಗಿ ಪರಿಸರ ಮಾಲಿನ್ಯ ಕೂಡಾ ಹೆಚ್ಚಾಗುತ್ತಿದೆ. 7 ಪ್ಲಾಸ್ಟಿಕ್ ಕೈ ಚೀಲಗಳನ್ನು ತಯಾರಿಸಲು ಬಳಸುವ ಇಂಧನವನ್ನು ಬಳಿಸಿದರೆ ಒಂದು ಕಾರನ್ನು ಒಂದು ಕಿಲೋಮೀಟರ್‌ವರೆಗೂ ಚಲಾಯಿಸಬಹುದಾಗಿದೆ.
4. ಬಿಸಿಲಿನಲ್ಲಿ ಬಿದ್ದ ಪ್ಲಾಸ್ಟಿಕ್ ಕೈಚೀಲವು ಸೂರ್ಯನ ಅಲ್ಟ್ರಾ ವಯಲೆಟ್ ಕಿರಣಗಳಿಂದಾಗಿ ರಾಸಾಯನಿಕವಾಗಿ ಪರಿವರ್ತನೆ ಹೊಂದುತ್ತವೆ. ಇಂತಹ ಚೀಲದ ಚೂರುಗಳು ನಮ್ಮ ಹೊಲ, ಕೆರೆ, ನದಿಗಳ ದಡಗಳನ್ನು ಸೇರಿದಾಗ, ಈ ಪ್ಲಾಸ್ಟಿಕ್ ಚೂರು ಇರುವ ಕಡೆ ಒಂದು ಕಡ್ಡಿ ಹುಲ್ಲು ಕೂಡಾ ಬೆಳಯಲಾರದಷ್ಟು ನೆಲ ಬಂಜರಾಗುತ್ತದೆ.
5. ಪ್ಲಾಸ್ಟಿಕ್ ಕೈಚೀಲಗಳನ್ನು ಕಸದ ರಾಶಿಯ ಜೊತೆಯಲ್ಲಿ ಸುಡುವುದರಿಂದ ಪರಿಸರ ಮಾಲಿನ್ಯದ ಜೊತೆಗೆ ಜನಸಾಮಾನ್ಯರಿಗೆ ಕ್ಯಾನ್ಸರ್ ನಂತಹ ತೀವ್ರ ತರದ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ.

ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಭಾರತ

“ಭಾರತದಲ್ಲಿ ಪ್ರತಿದಿನ 15342 ಟನ್‌ಗಿಂತ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದರಲ್ಲಿ 9205 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಲಾಗುತ್ತಿದೆ ಮತ್ತು 6137 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಮತ್ತು ಸಂಸ್ಕರಣೆಯಾಗದೆ ಉಳಿಯುತ್ತಿದೆ” ಎಂದು 2014-15ರ ಕೇಂದ್ರಿಯ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಹೇಳುತ್ತದೆ. ಪ್ರತಿವರ್ಷ ಭಾರತದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಹೆಚ್ಚಾಗುತ್ತಿದೆ.ಇದನ್ನು ವೈಜ್ಞಾನಿಕವಾಗಿ ಸಂಗ್ರಹಿಸುವುದು, ವಿಲೇವಾರಿ ಮತ್ತು ಸಂಸ್ಕರಣೆ ಮಾಡುವುದು ಅತ್ಯಗತ್ಯವಾಗಿದೆ.
ಆಗಸ್ಟ್ 1, 2017ರಂದು ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್, ಹೋಟಲ್, ಉಪಹಾರಗೃಹ, ಸಾರ್ವಜನಿಕ ಮತ್ತು ಖಾಸಗಿ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು ತಾನು ನೀಡಿದ್ದ ಆದೇಶವನ್ನು ಅನುಷ್ಠಾನಗೊಳಿಸಲು ವಿಫಲವಾಗಿರುವ ದೆಹಲಿ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿತು. ಹೀಗೆ ರಾಜ್ಯ ಸರ್ಕಾರಗಳು ಪ್ಲಾಸ್ಟಿಕ್ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗುತ್ತಿರುವುದರಿಂದಾಗಿ ದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ.
2015ರಲ್ಲಿ ಕೇಂದ್ರ ಸರ್ಕಾರವು ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಗುತ್ತೇದಾರರು ಕಡ್ಡಾಯವಾಗಿ ಬಳಸಬೇಕು ಎಂದು ಆದೇಶ ಹೊರಡಿಸಿತು.ಡಾಂಬರಿನ ಗುಣಮಟ್ಟಕ್ಕೆ ತಕ್ಕಂತೆ ರಸ್ತೆ ನಿರ್ಮಾಣದಲ್ಲಿ ಶೇಕಡಾ 10ರಿಂದ 30ರಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಬಹುದು.ಇದರಿಂದಾಗಿ ಡಾಂಬರಿನ ವೆಚ್ಚದಲ್ಲಿ ಗುತ್ತಿಗೆದಾರನಿಗೆ ಉಳಿತಾಯವಾಗುತ್ತದೆ ಮತ್ತು ರಸ್ತೆಗಳಲ್ಲಿ ಗುಂಡಿಗಳಾಗುವುದು ಕೂಡಾ ತಡೆಯಬಹುದಾಗಿದೆ ಎಂದು ರಸ್ತೆ ನಿರ್ಮಾಣ ತಜ್ಞರು ಅಭಿಪ್ರಾಯಪಡುತ್ತಾರೆ. ಹೀಗೆ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ಮಾಡಲು ಸೂಕ್ತ ತಂತ್ರಜ್ಞಾನ ನಮ್ಮ ದೇಶದಲ್ಲಿ ಇಲ್ಲ ಎನ್ನುವ ಗುತ್ತಿಗೆದಾರರ ಆರೋಪಕ್ಕೆ, ಮುಧುರೈನ ಇಂಜಿನಿಯರಿಂಗ್ ಕಾಲೇಜಿನ ಪ್ರೊ. ರಾಜಗೋಪಾಲನ್ ವಾಸುದೇವನ್‌ರವರು, ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಉತ್ತಮ ರಸ್ತೆಗಳನ್ನು ಹೇಗೆ ನಿರ್ಮಿಸಬಹುದು ಎಂದು ನಿರೂಪಿಸಿದ್ದಾರೆ.
ತಮಿಳುನಾಡು ಸರ್ಕಾರವು 1600 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ 1035ಕ್ಕೂ ಹೆಚ್ಚು ಕಿಲೋಮೀಟರ್ ಉದ್ದದ ರಸ್ತೆಗಳನ್ನು ನಿರ್ಮಿಸಿದೆ ಮತ್ತು ಈ ರಸ್ತೆಗಳ ಗುಣಮಟ್ಟ ಉತ್ತಮವಾಗಿದೆ ಎಂದು ಹೇಳಲಾಗಿದೆ.ಮಧ್ಯಪ್ರದೇಶ ಸರ್ಕಾರವು ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ 500 ಕಿಲೋಮೀಟರ್ ಉದ್ದದ ರಸ್ತೆಗಳನ್ನು ನಿರ್ಮಿಸಿದೆ.ಇಂದೋರ್ ನಗರಸಭೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ 30 ಕಿಲೋಮೀಟರ್ ಉದ್ದದ ರಸ್ತೆಗಳನ್ನು ನಿರ್ಮಿಸಿದೆ.ಪುಣೆ ನಗರಸಭೆ ಖಾಸಗಿ ಸಂಸ್ಥೆಯೊಂದರ ಸಹಭಾಗಿತ್ವದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ 12 ರಸ್ತೆಗಳನ್ನು ನಿರ್ಮಿಸುತ್ತಿದೆ.
ಇದು ಸರ್ಕಾರ, ನಗರಸಭೆ ಮಟ್ಟದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ಪರಿಹರಿಸಲು ನೆಡೆಯುತ್ತಿರುವ ಪ್ರಯತ್ನಗಳಾದರೆ, ಭಾರತೀಯ ರೈಲ್ವೇ ಇಲಾಖೆ ಮತ್ತು ಸ್ವಯಂಸೇವಾ ಸಂಸ್ಥೆ ಜೊತೆಗೂಡಿ, ಮುಂಬೈ ರೈಲು ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಖಾಲಿ ಪ್ಲಾಸ್ಟಿಕ್ ಬಾಟಲಿಗಳ ತ್ಯಾಜ್ಯದ ಸಮಸ್ಯೆ ನಿವಾರಣೆಗೆ ವಿನೂತನ ಯೋಜನೆಯನ್ನು ಪ್ರಾರಂಭಿಸಿದೆ.

ಈ ಯೋಜನೆಯಂತೆ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿರುವ ಯಂತ್ರದಲ್ಲಿ ಖಾಲಿಯಾದ ನೀರಿನ ಪ್ಲಾಸ್ಟಿಕ್ ಬಾಟಲಿಯನ್ನು ಹಾಕಿದಾಗ, ನಮಗೆ ಮೂರು ಆಯ್ಕೆಗಳು ದೊರೆಯುತ್ತವೆ. ನಾವು ಎಷ್ಟು ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಕಿದ್ದೇವೆ ಎನ್ನುವುದನ್ನು ಆಧರಿಸಿ,
(1) ಅದಕ್ಕೆ ಸಿಗುವ ಪ್ರೋತ್ಸಾಹಧನವನ್ನು ಸಮಾಜ ಸೇವೆ ಕಾರ್ಯಗಳಿಗೆ ದೇಣಿಗೆಯಾಗಿ ನೀಡಬಹುದು
(2) ಪ್ರೋತ್ಸಾಹಧನವನ್ನು ಬಳಸಿ ನಮ್ಮ ಮೊಬೈಲ್ ಫೋನ್ ಕರೆನ್ಸಿ ರಿಚಾರ್ಜ್ ಮಾಡಬಹುದು
(3) ಈ ಯೋಜನೆಯಲ್ಲಿ ಪಾಲುಗೊಂಡಿರುವ ಅಂಗಡಿ, ಉಪಹಾರಗೃಹಗಳಲ್ಲಿ ನಾವು ಖರ್ಚು ಮಾಡುವ ಹಣದಲ್ಲಿ ರಿಯಾಯತಿಯನ್ನು ಪಡೆಯಬಹುದು.
ಈ ಮೂರು ಆಯ್ಕೆಗಳಲ್ಲಿ ನಮಗೆ ಬೇಕಾದುದನ್ನು ಆರಿಸಿಕೊಂಡ ನಂತರ, ಈ ಯಂತ್ರದಿಂದ ಮುದ್ರಿತ ರಸೀದಿ ನಮೆಗೆ ದೊರೆಯುತ್ತದೆ.ದಿನಕ್ಕೆ 5000 ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಈ ಯಂತ್ರದಲ್ಲಿ ಧ್ವಂಸಗೊಳಿಸಿ, ನಂತರ ಅವುಗಳನ್ನು ಕಚ್ಚಾ ವಸ್ತುವಾಗಿ ವಿವಿಧ ಉದ್ಯಮಗಳಿಗೆ ಪೂರೈಸಲಾಗುತ್ತಿದೆ.ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ರೈಲು ಹಳಿ, ನಿಲ್ದಾಣಗಳಲ್ಲಿ ಎಸೆಯುವುದು ಇದರಿಂದ ಕೆಡಿಮೆಯಾಗಿದೆಯಂತೆ.

ಪ್ಲಾಸ್ಟಿಕ್ ತ್ಯಾಜ್ಯ ಕುರಿತು ಬೇರೆ ದೇಶಗಳು ಕೈಗೊಳ್ಳುತ್ತಿರುವ ಕ್ರಮಗಳು

1. 2015ರಲ್ಲಿ ಫ್ರಾನ್ಸ್ ದೇಶವು ಪ್ಲಾಸ್ಟಿಕ್ ಬಳಕೆ ಕುರಿತು ನಿಷೇಧ ಹೇರುವ ಕಾನೂನು ಜಾರಿಗೊಳಿಸಿತು. ಪ್ಲಾಸ್ಟಿಕ್‌ನಿಂದ ಮಾಡಿದ ಚೀಲಗಳು, ತಟ್ಟೆ, ಲೋಟ, ಚಮಚ, ಡಬ್ಬಿಗಳು, ಹೀಗೆ ವಿವಿಧ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿದ ಪ್ರಪ್ರಥಮ ದೇಶ ಫ್ರಾನ್ಸ್ ಆಗಿದೆ.
2. 2008ರಲ್ಲಿ ರುವಾಂಡಾ ದೇಶವು ಪ್ಲಾಸ್ಟಿಕ್ ಕೈಚೀಲಗಳನ್ನು ಸಂಪೂರ್ಣವಾಗಿ ನಿಷೇಧಿಸಿತು. ಇದರಂತೆ ದೇಶದಲ್ಲಿ ಯಾರಾದರೂ ಪ್ಲಾಸ್ಟಿಕ್ ಕೈಚೀಲಗಳನ್ನು ಬಳಸುವುದಾಗಲಿ, ಸಂಗ್ರಹಿಸುವುದಾಗಲಿ, ಸಾಗಾಣಿಕೆ ಮಾಡುವುದಾಗಲಿ ಕಂಡು ಬಂದರೆ ಅವರಿಗೆ ಭಾರಿ ಮೊತ್ತದ ದಂಡವನ್ನು ಸರ್ಕಾರಿ ಅಧಿಕಾರಿಗಳು ವಿಧಿಸಲಾರಂಭಿಸಿದರು. ಕೆಲವು ಪ್ರಕರಣಗಳಲ್ಲಿ ಇಂತಹವರಿಗೆ ಜೈಲು ಶಿಕ್ಷೆಯನ್ನು ನೀಡಲಾಯಿತು.
3. 2002ರಲ್ಲಿ ಐರ್ಲೆಂಡ್ ದೇಶದಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಬಳಸುವುದಕ್ಕೆ ತೆರಿಗೆ ವಿಧಿಸಲು ಪ್ರಾರಂಭಿಸಿದರು. ಇದಾದ ಕೆಲವೇ ವಾರಗಳಲ್ಲಿ, ಅಷ್ಟೊಂದು ತೆರಿಗೆ ಪಾವತಿಸಿ, ಪ್ಲಾಸ್ಟಿಕ್ ಚೀಲಗಳನ್ನು ಖರೀದಿಸಿ ಬಳಸುವುದು ಬೇಡವೆಂದು ಸಾರ್ವಜನಿಕರು ನಿರ್ಧರಿಸಿದ ಕಾರಣ ಪ್ಲಾಸ್ಟಿಕ್ ಚೀಲಗಳ ಬಳಕೆ ಶೇಕಡಾ 94ರಷ್ಟು ಕಡಿಮೆಯಾಯಿತು. ಈಗ ಈ ದೇಶದಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
4. 2008ರಲ್ಲಿ ಚೀನಾದಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಗ್ರಾಹಕರಿಗೆ ಉಚಿತವಾಗಿ ಪ್ಲಾಸ್ಟಿಕ್ ಚೀಲಗಳನ್ನು ನೀಡುವುದನ್ನು ನಿಲ್ಲಿಸಿ, ಅಂತಹ ಚೀಲಗಳನ್ನು ಕೊಡಲು ತೆರಿಗೆ ವಿಧಿಸಲಾಯಿತು. ಕಟ್ಟುನಿಟ್ಟಾಗಿ ಈ ಕಾನೂನು ಜಾರಿಗೆ ತಂದ ಪರಿಣಾಮ 2 ವರ್ಷದಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ ಶೇಕಡಾ 50ರಷ್ಟು ಕಡಿಮೆಯಾಗಿದೆ.100000 ಕೋಟಿ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ತಡೆಯುವಲ್ಲಿ ಯಶಸ್ವಿಯಾಗಿರುವ ಚೀನಾ, ತನ್ನ ದೇಶದಲ್ಲಿ ಉತ್ಪನ್ನವಾಗುವ ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ದೊಡ್ಡ ಸಮರವನ್ನು ಸಾರಿದೆ.

ಥರ್ಮೋಕೂಲ್‌ನಿಂದ ಆರೋಗ್ಯ ಮತ್ತು ಪರಿಸರ ಹಾನಿ

ಪ್ಯಾಕಿಂಗ್, ತಟ್ಟೆ, ಲೋಟ, ಶಬ್ದ ನಿರೋಧಕಗಳು, ಮೀನು ಸಾಗಾಣಿಕೆ ಡಬ್ಬಗಳು, ಕೃತಕ ಛಾವಣಿ, ಕಲಾಕೃತಿಗಳು ಹೀಗೆ ಹಲವಾರು ಕಡೆ ಥರ್ಮೋಕೂಲ್ ಬಳಕೆಯಾಗುತ್ತಿದೆ.ಇದು ಹಗುರವಾಗಿರುವುದರಿಂದ, ಉತ್ಪಾದನಾ ವೆಚ್ಚ ಕಡಿಮೆಯಿರುವುದರಿಂದ, ಉತ್ತಮ ಶಬ್ದ ನಿರೋಧಕ ಗುಣಗಳನ್ನು ಹೊಂದಿರುವುದರಿಂದ ಜನಪ್ರಿಯವಾಗುತ್ತಿದೆ.ಆದರೆ ನಾವು ಬಳಸುವ ಥರ್ಮೋಕೂಲ್‌ನಿಂದ ಉಂಟಾಗುವ ಆರೋಗ್ಯ ಮತ್ತು ಪರಿಸರ ಹಾನಿಯ ಕುರಿತು ಜನಸಾಮಾನ್ಯರಲ್ಲಿ ಹೆಚ್ಚು ಜಾಗೃತಿ ಉಂಟಾಗಬೇಕಾಗಿದೆ.
ಪಾಲಿಸ್ಟೈರೀನ್ ಬಳಸಿ ಥರ್ಮೋಕೂಲ್ ಉತ್ಪಾದಿಸಲಾಗುತ್ತದೆ.ಒಮ್ಮೆ ಬಳಸಿದ ಥರ್ಮೋಕೂಲ್ ಅನ್ನು ಮತ್ತೆ ಥರ್ಮೋಕೂಲ್ ಉತ್ಪಾದನೆಯಲ್ಲಿ ಬಳಸಲು ದುಬಾರಿಯಾಗುತ್ತದೆ ಮತ್ತು ಪುನರ್ಬಳಕೆಯ ವಿಧಾನ ಕೂಡಾ ಸಂಕೀರ್ಣವಾಗಿದೆ.ನೈಸರ್ಗಿಕವಾಗಿ ಥರ್ಮೋಕೂಲ್ ತ್ಯಾಜ್ಯ ಸಂಸ್ಕರಣೆಯಾಗದ ಕಾರಣ, ವಿಶ್ವದಾದ್ಯಂತ ಹರಡಿರುವ ಟನ್‌ಗಟ್ಟಲೆ ಥರ್ಮೋಕೂಲ್ ತ್ಯಾಜ್ಯದಿಂದ ಪರಿಸರ ಮಾಲಿನ್ಯದ ಸಮಸ್ಯೆ ಉಂಟಾಗುತ್ತದೆ.
ಥರ್ಮೋಕೂಲ್‌ನಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳಿರುವುದು ವರ್ಷ 2002, 2014, ಹೀಗೆ ವಿವಿಧ ಸಮಯದಲ್ಲಿ ಅಂತರಾಷ್ಟ್ರೀಯ ವಿಜ್ಞಾನಿಗಳು ನೆಡೆಸಿರುವ ಅಧ್ಯಯನಗಳಲ್ಲಿ ಬಹಿರಂಗವಾಗಿದೆ.ಧೀರ್ಘಕಾಲ ಥರ್ಮೋಕೂಲ್ ಉತ್ಪನ್ನಗಳನ್ನು ಬಳಸುವುದರಿಂದ ರಕ್ತ ಕ್ಯಾನ್ಸರ್ ಮೊದಲಾದ ಕ್ಯಾನ್ಸರ್‌ಗಳು ಬರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಕೆಲವು ಕಡೆ ಥರ್ಮೋಕೂಲ್ ತ್ಯಾಜ್ಯವನ್ನು ಸುಡುವುದನ್ನು ಮಾಡಲಾಗುತ್ತಿದೆ.ಆದರೆ ಹೀಗೆ ಮಾಡುವುದರಿಂದ ಹಾನಿಕಾರಕ ಕ್ಲೋರೊ ಫ್ಲೋರೋ ಕಾರ್ಬನ್ (ಸಿ.ಎಫ್.ಸಿ) ಅನಿಲಗಳು ಬಿಡುಗಡೆಯಾಗುತ್ತವೆ.ಅದಲ್ಲದೆ ಥಮೋಕೂಲ್ ಪೂರ್ಣವಾಗಿ ಬೂದಿಯಾಗುವುದಿಲ್ಲ. ಡಾಂಬರಿನಂತಹ ವಸ್ತು ಕೊನೆಯಲ್ಲಿ ಉಳಿಯುತ್ತದೆ ಮತ್ತು ಕೆಟ್ಟ ದುರ್ನಾತವನ್ನು ಬೀರುತ್ತದೆ.ಆದ್ದರಿಂದ ಯಾವ ಕಾರಣಕ್ಕೂ ಥರ್ಮೋಕೂಲ್ ತ್ಯಾಜ್ಯವನ್ನು ಸುಡುವ ಕೆಲಸ ಮಾಡಬೇಡಿ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಥರ್ಮೋಕೂಲ್‌ನಿಂದ ಮಾಡಿದ ತಟ್ಟೆ, ಲೋಟ, ಚಮಚಗಳನ್ನು ಆಹಾರ, ಪಾನೀಯಗಳ ಸೇವನೆಗಾಗಿ ಬಳಸುವ ಪ್ರವೃತ್ತಿ ಹೆಚ್ಚಾಗುತ್ತಿದೆ.ಇವುಗಳನ್ನು ಉಪಯೋಗಿಸಿ, ಕಸದ ಬುಟ್ಟಿಗೆ ಬಿಸಾಡಿದರೆ ಆಯಿತು, ತೊಳೆಯ ಬೇಕು ಎನ್ನುವ ಸಮಸ್ಯೆ ಇಲ್ಲ ಎನ್ನುವುದು ಒಂದು ಕಾರಣವಿರಬಹುದು.ಆದರೆ ಇಂತಹ ಉತ್ಪನ್ನಗಳನ್ನು ಬಳಸಿ ಆಹಾರ, ಟೀ, ಕಾಫಿ ಮೊದಲಾದ ಪಾನೀಯಗಳನ್ನು ಸೇವಿಸಿದಾಗ ಥರ್ಮೋಕೂಲ್‌ನಲ್ಲಿರುವ ಹಾನಿಕಾರಕ ರಾಸಾಯನಿಕಗಳು ನಮ್ಮ ದೇಹವನ್ನು ಸೇರುತ್ತವೆ.ವಯಸ್ಕರಲ್ಲಿ ಸಂತಾನ ಸಮಸ್ಯೆಯನ್ನುಂಟು ಮಾಡಿದರೆ, ಮಕ್ಕಳಲ್ಲಿ ಇದು ಥೀರ್ಘಕಾಲಿನ ಮಾನಸಿಕ ಮತ್ತು ದೈಹಿಕ ಅನಾರೋಗ್ಯ ಸಮಸ್ಯೆಯನ್ನುಂಟು ಮಾಡಬಲ್ಲದು.ಕೆಲವರು ಥರ್ಮೋಕೂಲ್ ಡಬ್ಬಗಳಲ್ಲಿರುವ ಆಹಾರವನ್ನು, ಅದೇ ಡಬ್ಬದಲ್ಲಿರುವಂತೆ ಮತ್ತೆ ಬಿಸಿ ಮಾಡುತ್ತಾರೆ, ಇದರಿಂದಾಗಿ ಆರೋಗ್ಯಕ್ಕೆ ಹೆಚ್ಚು ಹಾನಿಯಾಗುತ್ತದೆ.
ಥರ್ಮೋಕೊಲ್ ಬಳಸಿ ಕಲಾಕೃತಿಗಳನ್ನು ತಯಾರಿಸಿವುದು, ಕೃತಕ ಛಾವಣಿ, ಶಬ್ದ ನಿರೋಧಕ ವ್ಯವಸ್ಥೆ ಮೊದಲಾದ ಕೆಲಸಗಳನ್ನು ಮಾಡುವವರು ಎಚ್ಚರಿಕೆ ವಹಿಸಬೇಕು.ಥರ್ಮೋಕೂಲ್ ಕತ್ತರಿಸುವಾಗ ಉಂಟಾಗುವ ಸೂಕ್ಷ್ಮಕಣಗಳು ಕಣ್ಣು, ಚರ್ಮ, ಶ್ವಾಸಕೋಶ, ಜೀರ್ಣಾಂಗ, ಲಿವರ್, ಮೂತ್ರಪಿಂಡ ಮತ್ತು ನರಮಂಡಲಗಳನ್ನು ಹಾನಿ ಮಾಡಿರುವ ಉದಾಹರಣೆಗಳಿವೆ.ಹೀಗಿರುವಾಗ ಥರ್ಮೋಕೂಲ್ ಉತ್ಪನ್ನಗಳನ್ನು ಉಪಯೋಗಿಸುವಾಗ, ಆಟಿಕೆಗಳನ್ನು ಮಕ್ಕಳಿಗೆ ಕೊಡುವಾಗ ಜಾಗ್ರತೆ ವಹಿಸಬೇಕು.
ಥರ್ಮೋಕೂಲ್ ಪರಿಸರ ಸ್ನೇಹಿಯಲ್ಲ. ಇದರಲ್ಲಿರುವ ಹೈಡ್ರೋಫ್ಲೋರೋ ಕಾರ್ಬನ್‌ಗಳು (ಹೆಚ್.ಎಫ್.ಸಿ), ಬೆನ್‌ಜೀನ್ ರಾಸಾಯನಿಕಗಳು ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುತ್ತವೆ.ಇನ್ನು ಡೈಆಕ್ಸಿನ್‌ಗಳು ತಾಯಿ ಹೊಟ್ಟೆಯಲ್ಲಿರುವ ಭ್ರೂಣದ ಬೆಳವಣಿಗೆ, ರೋಗ ನಿರೋಧಕ ಶಕ್ತಿ ಮತ್ತು ಹಾರ್ಮೋನ್‌ಗಳಲ್ಲಿ ವ್ಯತ್ಯಯವನ್ನುಂಟು ಮಾಡುತ್ತವೆ.
ಥರ್ಮೋಕೂಲ್ ತ್ಯಾಜ್ಯ ಬಳಸಿ ಸಿ.ಡಿ.ಕವರ್‌ಗಳು.ಫೋಟೋ ಫ್ರೇಮ್‌ಗಳು, ಇತ್ಯಾದಿಗಳನ್ನು ತಯಾರಿಸುವ ಯೋಜನೆಗಳನ್ನು ಪುಣೆ, ಥಾಣೆ ಮೊದಲಾದ ಕಡೆಯ ಪುರಸಭೆ ಅಧಿಕಾರಿಗಳು ಪ್ರಾರಂಭಿಸಿದರು.ಪ್ರತಿದಿನ ಒಂದು ಟನ್ ಥರ್ಮೋಕೂಲ್ ತ್ಯಾಜ್ಯವನ್ನು ಈ ರೀತಿ ಪರಿವರ್ತಿಸಬಹುದು ಮತ್ತು ಹೀಗೆ ತಯಾರಾದ ಉತ್ಪನ್ನಗಳಿಂದ ಸ್ಥಳೀಯ ಸಂಸ್ಥೆಗೆ ಆದಾಯ ದೊರೆಯುತ್ತದೆ ಎಂದು ಹೇಳಲಾಯಿತು.ತ್ಯಾಜ್ಯ ಥರ್ಮೋಕೂಲ್ ಬಳಸಿ ಉದ್ಯಮಗಳು ಬಳಸುವ ಅಂಟು ತಯಾರಿಸಬಹುದು ಎಂದು ಕೆಲವರು ಪ್ರಾತ್ಯಕ್ಷಿಕೆಗಳ ಮೂಲಕ ತೋರಿಸಿದ್ದಾರೆ.ಆದರೆ ನಮ್ಮ ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬೆಟ್ಟಗಳಷ್ಟು ಇರುವ ಥರ್ಮೋಕೂಲ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸದಿದ್ದರೆ, ಜನ ಮತ್ತು ಪರಿಸರದ ಮೇಲಾಗುವ ಹಾನಿ ಹೆಚ್ಚಾಗುತ್ತದೆ.ಸಾಧ್ಯವಾದಷ್ಟು ಥರ್ಮೋಕೂಲ್ ನಂತಹ ಉತ್ಪನ್ನಗಳ ಬಳಕೆಯನ್ನು ಸಾರ್ವಜನಿಕರು ಕಡಿಮೆ ಮಾಡುವುದರಿಂದ ಈ ಸಮಸ್ಯೆಯನ್ನು ಸ್ಪಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಸಾಧ್ಯವಿದೆ.ಉದಾಹರಣೆಗೆ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರ ಉಪಹಾರ ಗೃಹಗಳಲ್ಲಿ ಥರ್ಮೋಕೂಲ್ ಲೋಟ, ತಟ್ಟೆ, ಡಬ್ಬ, ಚಮಚಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಕೊನೆಯ ಮಾತು

ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಇಂಧನ ತೈಲ ತಯಾರಿಕೆಯ ಅವಕಾಶವನ್ನು ಭಾರತ ಬಳಸಿಕೊಳ್ಳಬೇಕಾಗಿದೆ.ಇಂತಹ ಉದ್ಯಮಗಳನ್ನು ಖಾಸಗಿ ಕ್ಷೇತ್ರದಲ್ಲಿ ಸ್ಥಾಪಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.ರಾಜ್ಯ ಸರ್ಕಾರ ಇಂತಹ ಉದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ, ಸ್ಥಳೀಯರಿಗೂ ಉದ್ಯೋಗವಕಾಶಗಳು ಹೆಚ್ಚಾಗುತ್ತವೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಕಡಿಮೆಯಾಗಲು ಸಾಧ್ಯವಿದೆ.

ಉದಯ ಶಂಕರ ಪುರಾಣಿಕ