ಪೞಗನ್ನಡ

ಪೊಡವಿಪತೆ ಗೊ[1]ರವನೆನೆ ಪೇ[2]ೞ ಡೆಯದುವದೆಕರಿಸಿ ಕಬ್ಬಿಗರ್ದೂಱೆನೆಯುಂ |

ಹ[3]ಡುವಸು ಮಱೆಸೆಟ್ಟಿಸುಗೆಂಮುಡಿಯೊಳಮಾರ್ಗೆಂದು ನುಡಿವ

ಪೞಗನ್ನಡಮಂ ||೪೯||

೪೬. ಕನ್ನಡನುಡಿಯ ಪರಿಗಳಲ್ಲಿ ದೇಸಿ ಬೇರೆಬೇರೆಯಾಗಿರುವುದರಿಂದ ಆದಿಶೇಷನು ಕೂಡ ದೋಷಗಳು ಇಷ್ಟೆಂದು ಗೊತ್ತುಮಾಡಿ, ನಿರ್ದಿಷ್ಟವಾಗಿ ನಿರ್ಣಯಿಸಿ, ಹೇಳಲಾರನು; ಅರಿಯುವುದೇ ಸಾಧ್ಯವಾಗದೆ ಅವನೂ ಬೇಸರಿಸುವನು.

೪೭. ಹೀಗಿದ್ದರೂ ಪೂರ್ವಕವಿಗಳ ಪರಂಪರಾಗತ ಲಕ್ಷಣಮಾರ್ಗದಲ್ಲಿ ಉಕ್ತವಾಗಿರುವ ದೋಷಗಳನ್ನು ಪರ್ಯಾಲೋಚಿಸಿ, ಅವುಗಳ ಜೊತೆಗೆ ನಾನು ನಿಶ್ಚಯಿಸಿದುವನ್ನೂ ಸೇರಿಸಿ, ವಿದ್ವಾಂಸರಿಗಾಗಿ ಕೆಲವನ್ನೀಗ ಹೇಳುವೆನು.

೪೮. ಮೊದಲಿಂದಲೂ ಗಟ್ಟಿಯಾಗಿ ನೆಲೆಸಿರುವ ಕಾವ್ಯವೇ ಕಾವ್ಯಕ್ಕೆ ಯಾವಾಗಲೂ ಯೋಗ್ಯ ಲಕ್ಷಣವೆನ್ನುತ್ತ, ಶಾಸ್ತ್ರಜ್ಞಾನವಿಲ್ಲದವರು ‘ದೇಸಿ’ಯಲ್ಲವೆಂದು ತಿಳಿದಿದ್ದರೂ ‘ಹಳಗನ್ನಡ’ವನ್ನೇ ಕೆಡಿಸಿಕೊಂಡು ಹೇಳುವರು.

೪೯. ‘ಪೊಡವಿಪತಿ ಗೊರವ’, ‘ಪೇಳ್ಪಡೆಯದು’, ‘ಅದೆಕರಿಸಿ, ‘ಕಬ್ಬಿಗರ್ ದೂಱ್’, ‘ಹಡುವಸು’, ‘ಮರೆಸು’, ‘ಎಟ್ಟಿಸು’, ಎಮ್ಮುಡಿಯೊಳಂ’, ‘ಆರ್ಗೆ’- ಇವೇ ಮುಂತಾದುವು “ಹಳಗನ್ನಡ”. *ಇಲ್ಲಿ ಪದ-ಚ್ಛೇದ, ಅರ್ಥತಾತ್ಪರ್ಯ, ಅಷ್ಟು ಸ್ಪಷ್ಟವಿಲ್ಲ-ಸಂ.*

ದೊರೆಕೊಂಡಿರೆ ಸೊಗಯಿಸುಗುಂ ಪುರಾಣ-ಕಾವ್ಯ-ಪ್ರಯೋಗದೊಳ್ ತತ್ಕಾಲಂ |

ವಿರಸಂ ಕರಮವು ದೇಸಿಗೆ ಜರದ್ವಧೂ-ವಿಷಯ-ಸುರತ-ರಸ-ರ[4]ಸಿಕತೆವೋಲ್ ||೫೦||

ಸಮ-ಸಂಸ್ಕೃತಂಗಳೊಳ್ ಸೈ[5]ತಮರ್ದಿರೆ ಕನ್ನಡಮನಱದು ಪೇೞ್ಗೆಂಬುದಿದಾ- |

ಗಮ-ಕೋವಿದ-ನಿಗದಿತ-ಮಾರ್ಗಮಿದಂ ಬೆರಸಲ್ಕಮಾಗದೀ ಸಕ್ಕದದೊಳ್ ||೫೧||

 

ಕನ್ನಡದಲ್ಲಿ ಬೆರೆಸಬಾರದ ಸಂಸ್ಕೃತ ಅವ್ಯಯಗಳು

****ಅಹರಹರುಚ್ಚೈರ್ನೀಚೈರ್ಮುಹುರ್ಮುಹುರಿತಸ್ತತಃ ಪುನಃ ಪುನರಂತ- |

ರ್ಬಹಿರಾದಿಹ ಪ್ರಾದುರಹೋ-ಸಹಸಾದಿಗಲವ್ಯಯಂಗಳಸಹಾಯಂಗಳ್ ||೫೨||

ಬೆರಸಿರೆ ಕನ್ನಡದೊಳ್ ಬಂಧುರಮಾಗದು ಕಾವ್ಯರಚನೆ ಪೇೞ್ದೊಡೆ ಪೀನಂ |

ಪರುಷತರಮಕ್ಕುಮೊ[6]ತ್ತುಂಗರಡೆಯ ಮದ್ದಳೆಯ ಜರ್ಝರಧ್ವನಿಗಳವೋಲ್ ||೫೩||

 

ಈ ದೋಷಕ್ಕೆ ಉದಾಹರಣೆ

ಬಹಿರಂತರುಪವನಂಗಳೊಳಹರಹಮಾ ಪರಭೃತಂಗಳುಲಿವ ರವಂಗಳ್ |

ಸಹಸಾ ತಳಮಳಗೊ[7]ಳಿಸಿದವಹೋ ಮನಂಗಳನಿ[8]ತಸ್ತತಂ ವಿರಹಿಗಳಾ***** ||೫೪||

೫೦. ಪೂರ್ವಕಾವ್ಯಪ್ರಯೋಗದಲ್ಲಿ ಇವು ಬಂದಾಗ ಮಾತ್ರ, ತತ್ಕಾಲಕ್ಕೆ ಚೆನ್ನಾಗಿರುತ್ತದೆ. (ಆದರೆ) ವಯಸ್ಸು ಮೀರಿದ ಹೆಣ್ಣಿನ ವಿಷಯದಲ್ಲಿ ಸುರತಕ್ರೀಡಾ-ವಿಲಾಸದಂತೆಯೇ ಈ ಪ್ರಯೋಗಗಳು ‘ದೇಸಿ’ಗೆ ವಿರಸವೆನಿಸುವವು.

೫೧. ‘ಸಮವಾಗಿರುವ ಸಂಸ್ಕೃತದಲ್ಲಿ ನೇರವಾಗಿ ಹೊಂದಿಕೊಳ್ಳುವಂತಿದ್ದರೆ ಮಾತ್ರ ಕನ್ನಡವನ್ನು ಅರಿತು ಹೇಳಬೇಕು’ ಎಂಬುದೇ ಶಾಸ್ತ್ರ ಬಲ್ಲವರು ಸೂಚಿಸಿರವ ಮಾರ್ಗ. ಇದನ್ನು (ಕೆಳಗಿನಂತಹ) ಸಂಸ್ಕೃತದಲ್ಲಿ ಬೆರಸಲಾಗದು.

೫೨. ‘ಅಹರಹ’, ‘ಉಚ್ಚೈಃ, ‘ನೀಚೈಃ’, ‘ಮುಹುರ್ಮುಹುಃ’, ‘ಇತ್ತಸ್ತತಃ’, ‘ಪುನಃಪುನಃ’, ‘ಅಂತರ್’, ‘ಬಹಿರ್’, ‘ಆತ್’ (‘ಆ’), ‘ಇಹ’, ‘ಪ್ರಾದುರ್’, ‘ಅಹೋ’, ‘ಸಹಸಾ’ ಮುಂತಾದವು ಅವ್ಯಯಗಳು; ಅವುಗಳಿಗೆ ಸಹಾಯಕ ಕನ್ನಡ (ವಿಭಕ್ತಿ) ಪ್ರತ್ಯಯಗಳು ಭಾರವು.

೫೩. ಇವನ್ನು ಕನ್ನಡದಲ್ಲಿ ಬೆರಸಿ ಕಾವ್ಯರಚನೆ ಮಾಡಿದರೆ ಒತ್ತಿ ಬಾರಿಸುವ ಕರಡೆಯ ಮದ್ದಲೆಯ ‘ಘರಘರ’-ಧ್ವನಿಯ ಹಾಗೆ ಕಿವಿಗೆ ತುಂಬಾ ಕರ್ಕಶವೆನಿಸುವುವು. ಉದಾಹರಣೆ-

೫೪. “‘ಬಹಿರಂತರುಪವನಗಳಲ್ಲಿ’ ‘ಅಹರಹವೂ’ ಕೋಗಿಲೆಗಳು ಉಲಿಯುವ ಧ್ವನಿಗಳು ‘ಇತ್ತಸ್ತತ’ ಇದ್ದ ವಿರಹಿಗಳ ಚಿತ್ತಗಳನ್ನು ‘ಸಹಸಾ’ ತಳಮಳಗೊಳಿಸಿದ ‘ವಹೋ’!”

 

ದೋಷವಿಲ್ಲದ್ದಕ್ಕೆ ಉದಾಹರಣೆ

ವಿದಿತ-ಸಮಸಂಸ್ಕೃತೋದಿತ-ಪದಂಗಳೊಳ್ ಪುದಿದು ಬೆರಸಿ ಬರೆ ಕನ್ನಡದೊಳ್ |

ಮುದಮನವು ತರ್ಕುಮತಿಶಯ-ಮೃದಂಗ-ಸಂಗೀತಕಾದಿ-ಮಧುರ-

ರವಂಬೋಲ್ ||೫೫||

ಬಹಿರುದ್ಯಾನಾಂತರದೊಳ್ ಸಹಸೋದಿತ-ಮತ್ತ-ಕೋಕಿಲೋಚ್ಚೈರ್ಧ್ವಾನಂ |

ಮುಹುರಾಕರ್ಣಿಸೆ ಪಡೆದತ್ತಹರ್ನಿಶಂ ಪೆರ್ಚನಂತರಗಮಗಕ್ಕೆನ್ನಾ ||೫೬||

ನೆಗೞ* ರ್ದ ಕನ್ನಡಂಗಳೊಳಗಣಿತ-ಗುಣ-ವಿದಿತ-ಸಂಸ್ಕೃತೋಕ್ತ-ಕ್ರಮಮಂ |

ಬಗೆದೊಂದುಮಾಡಿ ಪೇೞ್ದೊಡೆ ಸೊಗಯಿಸುಗುಂ ಕಾವ್ಯ-ಬಂಧುಮೆಂದುಮ-

ನಿಂದ್ಯಂ ||೫೭||

 

ಅರಿಸಮಾಸದೋಷಲಕ್ಷಣ

ತಱಸಂದಾ ಸಕ್ಕದಮುಮನಱಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್ |

ಕುಱತು ಬೆರೆಸಿದೊಡೆ ವಿರಸಂ ಮಱುಗುವ ಪಾಲ್ಗಳೆಯ ಪನಿಗಳಂ ಬೆರಸಿದ

ವೋಲ್ ||೫೮||

ಅರಸು-ಕುಮಾರನನಾಯತತರ-ಕಡೆಗಣ್ಣಿಂದೆ ನೋಡಿ ಕೆಳದಿ-ಸಮೇತಂ |

ಪರಿಗತ-ನಗೆಯಿಂದಿರ್ದೆಂ ಗು[9]ರು-ನಾಣ್ಭರದಿಂದಮೆಱಗಿ ಮುಖ-

ತಾವರೆಯಂ[10] ||೫೯||

೫೫. (ಹೀಗಾಗುವ ಬದಲು) ಸರಿಸಮವಾಗಿರುವ ಸಂಸ್ಕೃತೋಕ್ತಿಗಳೊಂದಿಗೆ ಹೊಂದಿಕೊಳ್ಳುವಂತೆ ಕನ್ನಡ ನುಡಿಗಳು ಬೆರಸಿಬಂದರೆ, ಸೊಗಸಾದ ಸಂಗೀತದಲ್ಲಿ ಸಮರಸಗೊಳ್ಳುವ ಮೃದಂಗದ ಮಧುರಧ್ವನಿಯಂತೆ ಅವು ಸಂತೊಷವನ್ನುಂಟು ಮಾಡುತ್ತವೆ. ಉದಾಹರಣೆ-

೫೬. “ಬಹಿರುದ್ಯಾನದಲ್ಲಿ ಸಹಸೋದಿತವಾದ ಮತ್ತಕೋಕಿಲಗಳ ಉಚ್ಚೈ-ರ್ಧ್ವಾನವು ಮುಹುರಾಕರ್ಣಿತವಾಗಿ ಅಹರ್ನಿಶವೂ ನನ್ನ ಅಂತರಂಗಕ್ಕೆ ಹರ್ಷಾತಿಶಯವನ್ನುಂಟುಮಾಡಿತು.”

೫೭. ಸಂಸ್ಕೃತದ ಗುಣಾತಿಶಯದಿಂದ ಪರಿಪೂರ್ಣವಾದ ಪ್ರಸಿದ್ಧ ಉಕ್ತಿಮಾರ್ಗವನ್ನು ಪರಾಮರ್ಶಿಸಿ, ಕನ್ನಡದಲ್ಲಿ ಹೊಂದಿಸಿಕೊಂಡು ಹೇಳಿದಾಗ, ಕಾವ್ಯರಚನೆಯು ನಿರ್ದುಷ್ಟವಾಗುವುದಲ್ಲದೆ ಶೋಭಾವಹವೂ ಆಗುವುದು.

೫೮. ಸಂಸ್ಕೃತವನ್ನೂ ಕನ್ನಡವನ್ನೂ ಸರಿಯಾಗಿ ಅರಿಯದೆ ಒಂದೇ ಸಮಾಸದಲ್ಲಿ ಕೂಡಿಸಿ ಬೆರಸಿಬಿಟ್ಟರೆ, ಕುದಿಯುತ್ತಿರುವ ಹಾಲಿನಲ್ಲಿ ಮಜ್ಜಿಗೆಯ ಹನಿಗಳನ್ನು ಬೆರಸಿದಂತೆ ವಿರಸವಾಗುವುದು. ಉದಾಹರಣೆ-

೫೯. “‘ಕೆಳದಿಸಮೇತ’ಳಾಗಿದ್ದ ನಾನು ‘ಆಯುತತರಕಡೆಗಣ್ಣಿಂದ ‘ಅರಸುಕುಮಾರ’ನನ್ನು ನೋಡಿ, ‘ಗುರುನಾಣ್‌ಭರ’ದಿಂದ (ನನ್ನ) ‘ಮುಖ-ತಾವರೆ’ಯನ್ನು ಕೆಳಗೆ ಬಾಗಿಸಿ ‘ಪರಿಗತನಗೆ’ಯಿಂದೆದ್ದೆನು”.

 

ದೋಷವನ್ನು ತಿದ್ದಿಕೊಂಡುದಕ್ಕೆ ಉದಾಹರಣೆ

ನರಪತಿ-ತನಯನನಾಯತ-ತರಳಾಪಾಂಗದೊಳೆ ನೋಡಿ ಕೆಳದಿಯರೊಡನಾಂ |

ಪರಿಗತ-ಹಾಸ್ಯದೊಳಿರ್ದೆಂ ಗುರುಜ್ಜಾಭರದಿನೆಱಗಿ ಮುಖ-ಸರಸಿಜಮಂ ||೬೦||

ಎಂದಿಂತು ಸಮಾಸೋಕ್ತಿಯೊಳೊಂದಾಗಿರೆ ಸಕ್ಕದಂಗಳುಂ ಕನ್ನಡಮುಂ |

ಸುಂದರಮಕ್ಕುಂ ಕವಿ-ಪದವೊಂದಿದವೋಲ್ ಕನಕ-ರಚನೆಯೊಳ್‌ಮಣಿ-ನಿಕರಂ ||೬೧||

 

ನಾಲ್ಕು ಕೃತಿ ದೋಷಗಳು

#ಶ್ರುತಿದುಷ್ಟಮರ್ಥ-ದುಷ್ಟಂ ಶ್ರುತಿ-ಕಷ್ಟಂ ಕಲ್ಪನೋಕ್ತಿ-ಕಷ್ಟಮುಮೆಂದೀ |

ಕೃತ-ಕೃತ್ಯ-ಮಲ್ಲ-ವಲ್ಲಭ-ಮತದಿಂ ನಾಲ್ಕಕ್ಕುಮಿಲ್ಲಿ ಕೃತಿ-ದೋಷಂಗಳ್ ||೬೨||

 

ಶ್ರುತಿದುಷ್ಟದ ಉದಾಹರಣೆ

ನಿಲ್ತೋಳಂ ಬರ್ಪುದು ಸಯ್ತಲ್ಲೂರುಂ ದೂ[11]ರಮೋಡಲಾಱೆರ್ಪೂರಂ |

ಕಲ್ತುಲ್ಲಿಂದೋಡುವಮೆಂಬಲ್ತುಣ್ಣಿಂ ತಂದ ಕೂೞನೂ ಸಂಗಮದೊಳ್ ||೬೩||

೬೦ (ಇದನ್ನೇ ಸರಿಪಡಿಸಿದರೆ ಹೀಗಾಗುತ್ತದೆ-) “ಕೆಳದಿಯರೊಡನಿದ್ದ ನಾನು ‘ತರಳಾಪಾಂಗ’ದಿಂದ ‘ನರಪತಿತನಯ’ನನ್ನು ನೋಡಿ, ‘ಗುರುಲಜ್ಜಾಭರ’ದಿಂದ ‘ಮುಖಸರಸಿಜ’ವನ್ನು ಬಾಗಿಸಿ ‘ಪರಿಗತಹಾಸ್ಯ’ದಿಂದ ಇದ್ದೆನು.”

೬೧. ಹೀಗೆ ಸಂಸ್ಕೃತ ಪದಗಳೂ ಕನ್ನಡ ಪದಗಳೂ ಸಮಾಸಗಳಲ್ಲಿ ಹಿತವಾಗಿ ಬಂದಾಗ ಮಾತ್ರ, ಕವಿಯ ಪದಪ್ರಯೋಗಗಳು ಚಿನ್ನದ ಕಟ್ಟಿನಲ್ಲಿಕೂಡಿ ಶೋಭಿಸುವ ರತ್ನಸಮೂಹದಂತೆ, ಸುಂದರವೆನಿಸುವವು.

೬೨. ‘ಶ್ರುತಿದುಷ್ಟ’ (ಅಥವಾ ಕೇಳಲು ‘ಅಹಿತ’), ‘ಅರ್ಥದುಷ್ಟ’ (=ಅಹಿತವಾದ ‘ಅರ್ಥ’ ಎಂದರೆ ಅಭಿಪ್ರಾಯ), ‘ಶ್ರುತಿಕಷ್ಟ’ (=ಕಿವಿಗೆ ಕರ್ಕಶ), ಮತ್ತು ‘ಕಲ್ಪನೋಕ್ತಿಕಷ್ಟ’ (=ಕಲ್ಪಿತವಚನದಲ್ಲಿ ಅಸಹತ್ಯೆ)-ಹೀಗೆ ನೃಪಗುಂಗನ ಮತದಲ್ಲಿ ಕೃತಿದೋಷಗಳು ನಾಲ್ಕುಬಗೆಯಾಗಿರುತ್ತವೆ.

೬೩. *‘ಶ್ರುತಿದುಷ್ಟ’ಕ್ಕೆ ಉದಾಹರಣೆ-* ನಿಲ್ಲು ! ತೋಳ ಬರುತ್ತದೆ ! ಊರೂ ನೇರವಾಗಿ ಹತ್ತಿರವಿಲ್ಲ ! ಬೇಗ ಬಹು ದೂರ ಓಡಲಾರಿರಿ ! ಕಲಿತು ಅಲ್ಲಿಂದ ಓಡುವ ! ಆ ನದೀಸಂಗಮದಲ್ಲಿ ತಂದಿರುವ ಅನ್ನವನ್ನು ಚೆನ್ನಾಗಿ ತಿನ್ನಿರಿ ! *ಸಂಧಿಯನ್ನು ಸರಿಯಾಗಿ ಬಿಡಿಸಿಕೊಂಡಾಗ ದೋಷವಲ್ಲದಿದ್ದರೂ. ಸಂಧಿಮಾಡಿದ ರೂಪವನ್ನು ಕೇಳುವಾಗ ಅಸಭ್ಯ ಸ್ಮರಣೆಗಳು ಬರುವಂತಿವೆ- ‘ಕಲ್ತುಲ್ಲಿಂ…’, ‘ಬಲ್ತುಣ್ಣಿಂ’ ಮುಂತಾದವುಗಳಲ್ಲಿ*.


[1] ಗೊರೆವ ‘ಪಾ’.

[2] ಬೇೞ ಡೆಯದು ‘ಪಾ’   ಬೆಳ್ವಡೆಯದಯ ‘ಅ’.

[3] ಹಡವಸಮರಸಿಟ್ಟಿ ‘ಕ’ ಹಡವ ಸಮರೆನಿಟ್ಟ ‘ಮ’.

[4] ರಸಿಕತೆಯೊಳ್ ‘ಅ’ ‘ಬ’.

[5] ತಳ್ತಮರ್ದಿರೆ ‘ಮ’.

**** ‘ಪಾ’ ಮತ್ತು ‘ಬ’ಗಳಲ್ಲಿ ಈ ಪದ್ಯವಿಲ್ಲ.

[6] ಮೋದುಂಗ್ಕರಡೆ ‘ಪಾ’

[7] ಗುಳಿಸಿದ ‘ಪಾ’.

[8] ನಿತಪ್ತತಂ ‘ಅ’

***** ಉಸ್ಮಾನಿಯಾ ವಿಶ್ವವಿದ್ಯಾಲಯದ ಒಂದು ಶಬ್ದಮಣಿದರ್ಪಣದ ಹಸ್ತಪ್ರತಿಯಲ್ಲಿ ಉದ್ಧ*ತವಾಗಿರುವ ಈ ಪದ್ಯದ ಪಾಠಾಂತರ ಹೀಗಿದೆ-

“ಬಹಿರಿತರಮುಪವನಂಗಳೊಳಹರಹಮಾ ಪರಭೃತಂಗಳಳಿಯ ರವಂಗಳ್ |

ಸಹಸಂ ತಳವೆಳಗೊಳಿಸಿದವಹೋ ಮನಂಗಳನಿತಸ್ತತಂ ವಿರಹಿಗಳಾ |”

[9] ಗುರುನಾಣಾಭರ ‘ಬ’.

[10] ಇದು ಕೇಶಿರಾಜನಿಂದ ಉದಾಹೃತವಾಗಿದೆ;  ನೋಡಿ-ಶಬ್ದಮಣಿದರ್ಪಣ, MM-೫೯.

# ಭಾಮಹನಿಂದ ಸ್ವೀಕೃತವಾದ ಈ ದೋಷದ ಪಾಠ ಅವನಂತೆ ‘ಶ್ರುತಿದುಷ್ಟ’ವೇ ಇರಬೇಕು, ಉಪಲಬ್ಧಪಾಠ ‘ಶ್ರುತದುಷ್ಟ’, ಕೇಶಿರಾಜನ ಶ್ರುತಿಸಹ್ಯಸಂಧಿಯು ಈ ದೋಷದ ಪರಿಹಾರವೇ ಆಗಿದೆ.

[11] ಇದು ಮುಳಿಯ ತಿಮ್ಮಪ್ಪಯ್ಯನವರು ಸೂಚಿಸಿರುವ ಶುದ್ಧಪಾಠ, ನೋಡಿ-ಕವಿರಾಜಮಾರ್ಗ ವಿವೇಕ, ಗೀತಾ ಬುಕ್ ಹೌಸ್, ೧೯೭೩, ಪು.೧೩೨, ಮಿಕ್ಕವು ಅಶುದ್ಧ ಪಾಠಗಳು-ದೂಡಿರಿರಮೆಡೆತುನಮರ್ಪೂರಂ ‘ಪಾ’ ದೂಡಂ ರಮೆಡೆತುಗರ್ಪ್ಪೂರಂ ‘ಮ’, ದೂರಮೆನೆಡೆತುಡಗರ್ಪೂರಂ ‘ಸೀ’.