ಫಿಲಿಪೈನ್ಸ್‌ನ ಕೃಷಿಕ ಫಂತಿಲನಾನ್ ಅವರದ್ದು ಅಪ್ಪಟ ಸಾವಯವ ಕೃಷಿ.

ಇವರಿಗೆ ಪ್ರತಿ ತಿಂಗಳು ಬರುತ್ತಿದ್ದ ಸರ್ಕಾರಿ ಸಂಬಳ ಹದಿಮೂರು ಜನರ ಕುಟುಂಬಕ್ಕೆ ಸಾಕಾಗುತ್ತಿರಲಿಲ್ಲ. ಮೊದ ಮೊದಲು ರಾಸಾಯನಿಕಗಳನ್ನು ಬಳಸಿ ಮಾಡಿದ ಕೃಷಿ ಸಮಾಧಾನ ಪಡುವಷ್ಟು ಆದಾಯ ತರಲಿಲ್ಲ. ಓದುವ ಗೀಳು ಹಚ್ಚಿಕೊಂಡಿದ್ದ ಫಂತಿಲನಾನ್‌ಗೆ ಈ ಘಟ್ಟದಲ್ಲಿ ಸೆಳದದ್ದು ಸಾವಯವ ಕೃಷಿ. ‘ನನ್ನ ಕ್ಷೇತ್ರ ಚಿಕ್ಕದು. ಕೂಲಿ ಮತ್ತು ಕೃಷಿಗೆ ಬೇಕಾದ ವಸ್ತುಗಳ ಮೇಲಿನ ಭಾರಿ ವೆಚ್ಚ ಉಳಿಸಲು ನಾನು ಸಾವಯವ ಕೃಷಿ ಆರಿಸಿಕೊಂಡೆ’ ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಫಂತಿಲನಾನ್ ಸಾವಯವ ಕೃಷಿ ಪದ್ಧತಿ ಅನುಸರಿಸಲು ಆರಂಭಿಸಿದಾಗ ಅವರು ಗೊಬ್ಬರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಅಜೋಲಾವನ್ನು.

ಮೂರೂವರೆ ಹಿಡಿ ಅಜೋಲಾದಿಂದ

ಅದು ೮೦ರ ದಶಕದ ಆರಂಭ. ಅಂತರರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದಿಂದ ಫಂತಿಲನಾನ್ ಮೂರೂವರೆ ಹಿಡಿಯಷ್ಟು ಅಜೋಲಾ ತಂದರು. ಕೃಷಿಯಲ್ಲಿ ತುಂಬಾ ಆಸಕ್ತಿ ಬೆಳೆಸಿಕೊಂಡಿದ್ದ ಕ್ಯಾಫಿಝ್ ಪ್ರಾಂತದ ಗವರ್ನರ್ ಕಾರ್ನೆಲಿಯೋ ವಿಲ್ಲಾರಿಯಲ್ ಜ್ಯೂ. ಫಂತಿಲನಾನ್‌ಗೆ ಹೊಸ ಹೊಸ ಕೃಷಿ ಕ್ರಮಗಳಲ್ಲಿ ಇದ್ದ ಒಲವು, ಛಲಗಳನ್ನು ಕಂಡು ಈ ವ್ಯಕ್ತಿ ಅಜೋಲಾವನ್ನು ತನ್ನ ಗದ್ದೆಯಲ್ಲಿ ಪ್ರಯೋಗಿಸಲು ತಕ್ಕ ವ್ಯಕ್ತಿ ಎಂಬ ನಂಬಿಕೆಯಿಂದ ಭತ್ತ ಸಂಶೋಧನಾ ಕೇಂದ್ರದಿಂದ ಅಜೋಲಾವನ್ನು ತರಿಸಿಕೊಟ್ಟರು. ಸಿಕ್ಕಿದ ಅಜೋಲಾವನ್ನು ಭಾರಿ ಎಚ್ಚರಿಕೆಯಿಂದ ಕೊಳದಲ್ಲಿ ಹಾಕಿ ಬೆಳಸಿದ ಫಂತಿಲನಾನ್‌ಗೆ ಅದರ ಬೆಳವಣಿಗೆ ಖುಷಿಕೊಟ್ಟಿತ್ತು. ಎರಡು ವರ್ಷಗಳಲ್ಲಿ ಅವರ ಅರ್ಧ ಹೆಕ್ಟೇರ್ ಭತ್ತದ ಗದ್ದೆಗೆ ಬೇಕಾದಷ್ಟು ಅಜೋಲಾ ತಯಾರು ಮಾಡಿದರು. ಭತ್ತದ ಬೆಳೆಗೆ ಅಜೋಲಾ ಬಳಸತೊಡಗಿದ ಮೊದಲ ವರ್ಷವೇ ಶೇ ೧೦ ರಷ್ಟು ಇಳುವರಿ ಹೆಚ್ಚಾಯಿತು. ರಸಗೊಬ್ಬರಗಳಿಂದ ಹೆಚ್ಚು ಅವದಿಯವರೆಗೆ ಈ ನೈಸರ್ಗಿಕ ಗೊಬ್ಬರ ಮಣ್ಣಿನ ಫಲವತ್ತತೆ ಉಳಿಸುತ್ತದೆ ಎಂಬುದನ್ನು ಫಂತಿಲನಾನ್ ಗಮನಿಸಿದರು.

ಭತ್ತ ನಾಟಿಗೆ ತಿಂಗಳ ಮುನ್ನ ಅಜೋಲಾ ಕೃಷಿ:

ಭತ್ತದ ಸಸಿ ನಾಟಿ ಮಾಡುವ ಒಂದು ತಿಂಗಳ ಮೊದಲೇ ಫಂತಿಲನಾನ್‌ರ ಅಜೋಲಾ ಕೃಷಿ ಶುರು. ಗದ್ದೆಯನ್ನು ಅವರು ವಿಶೇಷವಾಗಿ ಉಳುವುದಿಲ್ಲ. ಒಂದು ಚದರ ಮೀಟರಿಗೆ ಒಂದು ಬೊಗಸೆ ಅಜೋಲಾ ಗಿಡಗಳನ್ನು ಬಿತ್ತುತ್ತಾರೆ. ಒಂದು ತಿಂಗಳಲ್ಲಿ ಅದು ಅಭಿವೃದ್ಧಿಯಾಗಿ ೨೦ ಟನ್ ಆಗುತ್ತದೆ. ಸಸಿ ನೆಡುವ ಮುನ್ನ ಅಜೋಲಾವನ್ನು ಮಣ್ಣಿಗೆ ಸೇರಿಸುತ್ತಾರೆ.

ಬಹೂಪಯೋಗಿ ಗೊಬ್ಬರ :

‘ಅಜೋಲಾ ಅತಿ ವೇಗವಾಗಿ ಬೆಳೆದು ಕಳೆಗಳನ್ನು ನಿಯಂತ್ರಿಸುತ್ತದೆ’ – ಇದು ತನ್ನ ಗದ್ದೆಗೆ ಭೇಟಿ ನೀಡುವ ಸಂದರ್ಶಕರಿಗೆ ಫಂತಿಲನಾನ್ ಅಜೋಲಾ ತೋರಿಸುತ್ತಾ ಹೇಳುವ ಮೊದಲ ಮಾತು. ‘ಇದರಿಂದಾಗಿ ನನಗೆ ಕಳೆ ಕೀಳುವ ಖರ್ಚಿನಲ್ಲಿ ಭಾರಿ ಉಳಿತಾಯವಾಗುತ್ತಿದೆ. ಗದ್ದೆಯ ಭೂಮಿ ತಯಾರಿಗೂ ಶ್ರಮ ಕಡಿಮೆಗೊಳಿಸುತ್ತದೆ. ಅಜೋಲಾ ಗದ್ದೆಯನ್ನು ನಿರ್ಮಲವಾಗಿಟ್ಟು ಮಣ್ಣನ್ನು ವರ್ಷದುದ್ದಕ್ಕೂ ಮೆದುವಾಗಿ ಇರಿಸುತ್ತದೆ. ಮಾತ್ರವಲ್ಲ, ಮಣ್ಣಿನ ರಚನೆ ಮತ್ತು ರಸಸಾರ ಮೌಲ್ಯ(ಪಿ‌ಎಚ್ ವ್ಯಾಲ್ಯು)ದಲ್ಲೂ ಅಭಿವೃದ್ಧಿಯಾಗುತ್ತದೆ’ ಎಂದು ವಿವರಿಸುತ್ತಾರೆ.

ಫಂತಿಲನಾನ್ ಭತ್ತವನ್ನು ಪರ್ಯಾಯ ಸಾಲುಗಳಲ್ಲಿ ಬೆಳೆಸುತ್ತಾರೆ. ಭತ್ತದ ಸಾಲುಗಳ ನಡುವಣ ಜಾಗದಲ್ಲಿ ಭತ್ತದ ಕೃಷಿ ಮತ್ತು ಇತರ ಉಪಯೋಗಗಳಿಗೆ ಬೇಕಾದುದು ಅಜೋಲಾ ಕೃಷಿ. ಅವರ ಭತ್ತದ ಕೃಷಿಗೆ ಕೀಟದ ಹಾವಳಿ ಕಡಿಮೆ. ರಾಸಾಯನಿಕ ಕೀಟನಾಶಕಗಳ ಬಳಕೆ ಇಲ್ಲವೆನ್ನುವಷ್ಟು ಕಡಿಮೆ. ಇವರು ಒಂದೇ ಬೆಳೆಯನ್ನು ನೆಚ್ಚಿಕೊಂಡಿಲ್ಲ. ಭತ್ತದ ಜತೆ ಜತೆಗೆ ತರಕಾರಿ, ಕೆಸು, ಜೋಳ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಅಜೋಲಾವನ್ನು ಭತ್ತ ಮಾತ್ರವಲ್ಲದೇ ತರಕಾರಿ, ಹಣ್ಣಿನ ಗಿಡಗಳು ಮತ್ತು ವಾಣಿಜ್ಯ ಬೆಳೆಗಳಿಗೂ ಉಣಿಸುತ್ತಾರೆ.

ಒಳಸುರಿ ಕಡಿತ :

ಫಂತಿಲನಾನ್ ಅಜೋಲಾ ಬಳಸಿ ಬಹು ಬೆಳೆಗಳನ್ನು ಬೆಳೆಯುತ್ತಾರೆ. ‘ಅಜೋಲಾ ಬಳಸುತ್ತಿರುವುದರಿಂದ ನನಗೆ ಸಾಕಷ್ಟು ಒಳಸುರಿ ಕಡಿಮೆಯಾಗಿದೆ. ಕಳೆ ಕೀಳುವುದು, ಉಳುಮೆ ಮಾಡುವುದು ತಪ್ಪುತ್ತಿದೆ. ರಸಗೊಬ್ಬರ, ಕೀನಾಶಕಗಳ ಹಾವಳಿ ಕಡಿಮೆಯಾಗಿದೆ. ಜಮೀನಿನಲ್ಲಿ ಸ್ನೇಹಪರ ಕೀಟಗಳು ಹೆಚ್ಚಿವೆ. ಇವುಗಳು ಗದ್ದೆಯ ಮೇಲೆ ಹಾರಾಡುವ ಶತ್ರು ಕೀಟಗಳನ್ನು ನಿಯಂತ್ರಿಸುತ್ತಿವೆ’ ಎನ್ನುತ್ತಾರೆ.

ಫಂತಿಲನಾನ್ ನಿತ್ಯ ೫೦೦ ಕೆ.ಜಿ ಅಜೋಲಾ ಉತ್ಪಾದಿಸುತ್ತಿದ್ದರು. ೩೦೦ ಕೆ.ಜಿ ಹೊಸ ಅಜೋಲಾ ಗಿಡಗಳು ಸಾಕುಪ್ರಾಣಿಗಳಿಗೆ ಆಹಾರ. ಅನುಕೂಲಕರ ಪರಿಸ್ಥಿತಿಗಳಲ್ಲಿ ೨ ಟನ್ ಅಜೋಲಾ ಒಂದು ತಿಂಗಳಲ್ಲಿ ೧೬ ರಿಂದ ೨೦ ಟನ್ ಆಗಿಬಿಡುತ್ತದೆ. ಇದನ್ನೆಲ್ಲಾ ಒಂದು ತಿರುಗುವ ನೇಗಿಲು ಬಳಸಿ ಮಣ್ಣಿಗೆ ಸೇರಿಸಿದರೆ, ೧೦ ದಿನಗಳ ನಂತರ ಸಸಿ ನಾಟಿ ಮಾಡಲು ಅನುಕೂಲ.

ಅಜೋಲಾವನ್ನು ತಾವು ಸಾಕುವ ಹಂದಿ ಮತ್ತು ಬಾತುಕೋಳಿಗಳಿಗೂ ಮುಖ್ಯ ಆಹಾರವಾಗಿ ಕೊಡುತ್ತಾರೆ ಫಂತಿಲನಾನ್. ಮೊದ ಮೊದಲು ಅವರು ಅಕ್ಕಿ ತೌಡಿನೊಡನೆ ಸ್ವಲ್ಪ ಸ್ವಲ್ಪ ಅಜೊಲ್ಲಾ ಮಿಶ್ರಮಾಡಿಕೊಟ್ಟು ಪ್ರಾಣಿಗಳಿಗೆ ಇದರ ರುಚಿ ಹಿಡಿಸುತ್ತಾರೆ. ಅಭ್ಯಾಸವಾದ ಮೇಲೆ ಪಶು ಆಹಾರದಲ್ಲಿ ಅಜೋಲಾ ಬೆರೆಸಿ ಕೊಡುತ್ತಾರೆ.

ಒಂದು ಪಾಲು ಅಜೋಲಾ ಉಣಿಸಿದ ಕೋಳಿಗಳ ಹಿಕ್ಕೆಗೆ ೫ ಪಾಲು ಅಜೋಲಾ ಮಿಶ್ರ ಮಾಡಿ ಫಂತಿಲನಾನ್ ತನ್ನ ಮನೆಯಲ್ಲೇ ಮಾಡಿದ ಬಯೋಗ್ಯಾಸ್ ಸ್ಥಾವರಕ್ಕೆ ತುಂಬಿಸುತ್ತಾರೆ. ಇದರಿಂದ ಉತ್ಪಾದನೆಯಾದ ಮಿಥೇನ್ ಅನಿಲದಿಂದ ತಮ್ಮ ತೋಟದ ಮನೆಗೆ ಬೆಳಕು, ಅಡಿಗೆ ಕೋಣೆಗೆ ಇಂಧನ, ಪುಟ್ಟ ಗಿರಣಿ ಚಾಲನೆಗೆ ಶಕ್ತಿ, ಬಾತುಕೋಳಿ ಮತ್ತು ಕೋಳಿಗಳ ಕಾವು ಪೆಟ್ಟಿಗೆ (ಇನ್ ಕ್ಯುಬೇಟರ್)ಗಳಿಗೆ ಉಷ್ಣತೆ ಪೂರೈಕೆಯಾಗುತ್ತದೆ. ಪೋಷಕಾಂಶಗಳಿಂದ ಸಮೃದ್ಧ ಬಗ್ಗಡವನ್ನು ಮರಳಿ ಎಲ್ಲಾ ಬೆಳೆಗಳಿಗೂ ಉಣಿಸುತ್ತಾರೆ.

ಅಜೋಲಾದ ಬಳಕೆಯ ವ್ಯಾಪ್ತಿ ಕಂಡು ನಿಬ್ಬೆರಗಾಗುವ ಕೃಷಿಕರು ‘ತಮಗೊಂದಿಷ್ಟು ಅಜೋಲಾ ಗಿಡ ಕೊಡಿ’ ಎಂದು ಫಂತಿಲನಾನ್ ಅವರನ್ನು ವಿನಂತಿಸುತ್ತಾರೆ. ಒಂದು ಚೀಲ ಅಜೋಲಾಕ್ಕೆ ೧೭ ರೂಪಾಯಿ. ಸಾಕು ಪ್ರಾಣಿಗಳಿಗೆ ಉಣಿಸಿ ಉಳಿದ ಆಜೋಲ್ಲಾವನ್ನು ಕಾಂಪೋಸ್ಟ್ ಹೊಂಡ ಸೇರಿಸುತ್ತಾರೆ. ಅದು ಕಳಿತ ಗೊಬ್ಬರವಾಗಿ ‘ಕೃಷಿ ಚಕ್ರ’ಕ್ಕೆ ಮತ್ತೆ ಸೇರುತ್ತದೆ.

– ಅಡಿಕೆ ಪತ್ರಿಕೆ, ಆಗಸ್ಟ್ ೧೯೯೦

ಬೇರು.. ಹುಷಾರು !

ಬೇರು ಇಲ್ಲದೇ ಅಜೋಲಾ ಸಸ್ಯಗಳು ಬೆಳೆಯುವುದಿಲ್ಲ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಜೋಲಾ ಕಲ್ಚರ್ ಅನ್ನು ಸಾಗಿಸಬೇಕಾದರೆ ಅವುಗಳಲ್ಲಿ ಬೇರಿರುವುದನ್ನು ಖಚಿತಪಡಿಸಿಕೊಳ್ಳಿ. ಅಂಥ ಸಸ್ಯಗಳನ್ನು ನೀರಿನಲ್ಲಿ ಹಾಕಿಕೊಂಡೇ ಸಾಗಿಸಬೇಕು.