ಕಿರಾಣಾ ಘರಾಣೆ ಸಂಸ್ಥಾಪಕ ಉಸ್ತಾದ್‌ ಅಬ್ದುಲ್‌ ಕರೀಮ್ ಖಾನ್‌ ಅವರ ಶಿಷ್ಯತ್ವ ವಹಿಸಿ, ಅವರೊಂದಿಗೆ ಭಾರತವನ್ನೆಲ್ಲ ಸಂಗೀತ ಸಂಚಾರಿಯಾಗಿ ಸಂಚರಿಸಿ ಕರ್ನಾಟಕದಲ್ಲಿ ಕಿರಾಣಾ ಘರಾಣೆಯನ್ನು ಬೆಳೆಸಿ, ಕುಂದಗೋಳದಲ್ಲಿ ಸಂಗೀತ ಶಾಲೆ ಪ್ರಾರಂಭಿಸಿ ಅನೇಕ ಶಿಷ್ಯರನ್ನು ತಯಾರಿಸಿ ಸಂಗೀತ ಕ್ಷೇತ್ರದಲ್ಲಿ ಅಪಾರ ಸೇವೆ ಗೈದಿರುವ ಕುಂದಗೋಳದ ಶ್ರೀ ಫಕೀರಪ್ಪ ಗವಾಯಿಗಳು ಕರ್ನಾಟಕದಲ್ಲಿ ಕಿರಾಣಾ ಘರಾಣೆ ಬೆಳೆಸಿದ ಕೀರ್ತಿ ಪುರುಷರು. ಹಿಂದೂಸ್ಥಾನಿ ಸಂಗೀತ ಸಂಪ್ರದಾಯದಲ್ಲಿ ಕರ್ನಾಟಕದ ಕೀರ್ತಿ ಧ್ವಜವನ್ನು ಅಖಿಲ ಭಾರತ ಮಟ್ಟದಲ್ಲಿ ಮೆರೆಸಿದ ವಿದ್ವಾಂಸರಲ್ಲಿ ಕುಂದಗೋಳದ ಫಕೀರಪ್ಪನವರ ಹೆಸರು ಚಿರಸ್ಥಾಯಿ.

ಫಕೀರಪ್ಪನವರ ಪೂರ್ವಿಕರು ನಾಗಸ್ವರವದನ ನಿಪುಣರಾಗಿದ್ದುದರಿಂದ, ಸಂಗೀತ ಶ್ರೀಯುತರಿಗೆ ರಕ್ತಗತ. ತಮ್ಮ ಹದಿನಾಲ್ಕರ ತಾರುಣ್ಯದಲ್ಲೇ. ಗಾಯನ ಸಾಮ್ರಾಟ್‌ ಅಬ್ದುಲ್‌ ಕರೀಂಖಾನರ ಶಿಷ್ಯರಾಗಿ ಸಂಗೀತಾಭ್ಯಾಸ ಮಾಡುವ ಸುಯೋಗ.

‘ಕಿರಾಣಾ ಘರಾನಾ’ ಎಂದು ಹೆಸರಾದ ವಿಶಿಷ್ಟ ಶೈಲಿಯ ಜನಕ ಕರೀಂಖಾನ್‌ರೊಂದಿಗೆ ಉತ್ತರ ಭಾರತದಲ್ಲೆಲ್ಲಾ ಸಂಚರಿಸಿ, ಫಕೀರಪ್ಪ ಸಂಗೀತದ ಲಕ್ಷ್ಯ-ಲಕ್ಷಣಗಳನ್ನು ಅರಿತು, ಲೋಕಾನುಭವವನ್ನು ಪಡೆದುಕೊಂಡು, ತಮ್ಮ ಸ್ಥಳಕ್ಕೆ ಹಿಂದಿರುಗಿ ಅನೇಕ ಉತ್ಸಾಹಿ ತರುಣರಿಗೆ ವಿದ್ಯಾದಾನ ಮಾಡತೊಡಗಿದರು. ಮೇಲಿಂದ ಮೇಲೆ ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ಕಛೇರಿಗಳನ್ನು ನಡೆಸಿ ಕೀರ್ತಿ ಗಳಿಸಿದರು. ಮುಂಬಯಿ ಮತ್ತು ಧಾರವಾಡ ಆಕಾಶವಾಣಿ ಕೇಂದ್ರಗಳೂ ಇವರ ಪ್ರತಿಭಾಪೂರ್ಣ ಗಾಯನವನ್ನು ಭಿತ್ತರಿಸಿದ್ದವು.

ಕುಂದಗೋಳದಲ್ಲಿ ತಮ್ಮ “ಸ್ವರ ಪ್ರಕಾಶ ಸಂಗೀತ ವಿದ್ಯಾಲಯ” ಎಂಬ ಸಂಗೀತ ಶಾಲೆಯನ್ನು ಸ್ಥಾಪಿಸಿ, ಸಂಗೀತ ಕಲೆಯನ್ನು ಪೋಷಿಸಿದ್ದಲ್ಲದೆ, ಹುಬ್ಬಳ್ಳಿಯ “ವೀರ ಭಾರತ ಸಂಗೀತ ಕಲೋದ್ಧಾರಕ ಭವನ”ದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕಿರಾಣಾ ಘರಾಣೆಯ ಪ್ರತಿಪಾದಕ ಪೋಷಕರಲ್ಲಿ ಫಕೀರಪ್ಪನವರ ಸ್ಥಾನ ವಿಶಿಷ್ಟ.

ಫಕೀರಪ್ಪ ಗವಾಯಿಗಳ ಸಂಗೀತ ಸೇವೆಯನ್ನು ಮನಗಂಡ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೬೫-೬೬ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.