ರಾಷ್ಟ್ರಪತಿಯಾಗಿ ಸೇವೆಯ ಅವಧಿ: ೨೪.೦೮.೧೯೭೪ ರಿಂದ ೧೧.೦೨.೧೯೭೭

ಅವರದು ಶ್ರೀಮಂತ ಮನೆತನ. ಅವರ ಅಜ್ಜ ಅಸ್ಸಾಂ ರಾಜ್ಯಕ್ಕೆ ಸೇರಿದವರು. ತಂದೆ ಕರ್ನಲ್ ಅಹಮದ್ ವೈದ್ಯರು; ತಾಯಿ ರುಖಯಾ ಸುಲ್ತಾನಾ ರಾಷ್ಟ್ರೀಯವಾದಿ ನವಾಬ್ ಮನೆತನದಿಂದ ಬಂದವರು. ೧೯೦೫ ರ ಮೇ ೧೩ನೇ ತಾರೀಖು ದಿಲ್ಲಿಯಲ್ಲಿ ಫಕ್ರುದ್ದೀನ್ ಅವರ ಜನನವಾಯಿತು.
ಆಗಿನ ಕಾಲದಲ್ಲಿ ಭಾರತೀಯರು ಎಷ್ಟೇ ದೊಡ್ಡಹುದ್ದೆಯಲ್ಲಿರಲಿ, ಅವರನ್ನು ಬ್ರಿಟಿಷ್ ಮತ್ತು ಯುರೋಪಿಯನ್ನರು ತಮ್ಮ ಸರಿಸಮಾನರೆಂದು ಕಾಣುತ್ತಿರಲಿಲ್ಲ. ಫಕ್ರುದ್ದೀನ್ ಅವರ ತಂದೆ ಮುಖ್ಯ ವೈದ್ಯಾದಿಕಾರಿಯಾಗಿದ್ದರೂ, ಕ್ಲಬ್‌ನಲ್ಲಿ ಅವರಿಗೆ ಬೇರೆಯಾಗಿ ಆಸನ ವ್ಯವಸ್ಥೆ ಮಾಡಿದ್ದನ್ನು ಪ್ರತಿಭಟಿಸಿದ್ದಕ್ಕಾಗಿ ಅವರನ್ನು ದೂರದ ವಾಯುವ್ಯ ಪ್ರಾಂತಕ್ಕೆ ವರ್ಗ ಮಾಡಲಾಯಿತು. ಅನ್ಯಾಯದ ವಿರುದ್ಧ ಹೋರಾಡುವ ಪ್ರವೃತ್ತಿ ಫಕ್ರುದ್ದೀನ್ ಅವರಿಗೆ ತಂದೆಯಿಂದಲೇ ಬಳುವಳಿಯಾಗಿ ಬಂದಿತ್ತು. ಮುಂದೆ, ೧೯೩೮ರಲ್ಲಿ ಅಸ್ಸಾಂನಲ್ಲಿ ಅವರು ಮುಖ್ಯ ಮಂತ್ರಿಯಾಗಿದ್ದಾಗ, ಯುರೋಪಿಯನ್ ಪ್ಲಾಂಟರ್‌ಗಳ ವಿರೋಧವನ್ನು ಲೆಕ್ಕಿಸದೆ, ಧೈರ್ಯದಿಂದ ಟೀ ತೋಟಗಳ ಮೇಲೆ ಆದಾಯ ತೆರಿಗೆ ವಿಧಿಸಿದರು.
ಉತ್ತರ ಪ್ರದೇಶದ ಗೊಂಡಾ ಹಾಗೂ ದಿಲ್ಲಿಯಲ್ಲಿ ಪ್ರೌಢಶಾಲೆಯವರೆಗೆ ಶಿಕ್ಷಣ ಮುಗಿಸಿದ ಅಲಿ, ದಿಲ್ಲಿಯಲ್ಲೇ ಕಾಲೇಜಿಗೆ ಸೇರಿದರು. ಆದರೆ ಸ್ವಲ್ಪ ಕಾಲದ ನಂತರ, ಇಂಗ್ಲೆಂಡಿಗೆ ತೆರಳಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಉಚ್ಚ ಶಿಕ್ಷಣ ಪಡೆದು Bar-at-Law ಪದವಿಯೊಂದಿಗೆ ೧೯೨೮ರಲ್ಲಿ ಸ್ವದೇಶಕ್ಕೆ ಹಿಂದಿರುಗಿದರು. ಮೊದಲು ಪಂಜಾಬ್ ಉಚ್ಚನ್ಯಾಯಾಲಯ, ಅನಂತರ ಅಸ್ಸಾಂ ಉಚ್ಚನ್ಯಾಯಾಲಯಗಳಲ್ಲಿ ವಕೀಲ್ ವೃತ್ತಿ ಮಾಡಿದರು. ಭಾರತದ ಶ್ರೇಷ್ಠ ನ್ಯಾಯಾಲಯದಲ್ಲೂ ಹಿರಿಯ ನ್ಯಾಯವಾದಿಯಾಗಿದ್ದರು.
ಫಕ್ರುದ್ದೀನ್ ಅವರು ಇಂಗ್ಲೆಂಡಿನಲ್ಲಿದ್ದಾಗಲೇ ಅವರಿಗೆ ಪಂಡಿತ್ ಜವಹರಲಾಲ್‌ನೆಹರೂ ಅವರ ಪರಿಚಯವಾಗಿತ್ತು. ಹಾಗೆ ಆರಂಭವಾದ ಪರಿಚಯ ನಿಕಟ ಸ್ನೇಹವಾಗಿ ಪರಿವರ್ತನೆ ಹೊಂದಿತು. ಕೇಂದ್ರ ಸರಕಾರದಲ್ಲಿ ಹಲವಾರು ವರ್ಷ ಮಂತ್ರಿಯಾದರು. ಕಡೆಯವರಿಗೂ ನೆಹರೂ ಕುಟುಂಬಕ್ಕೆ ಅವರು ಬಹಳ ಹತ್ತಿರದವರಾಗಿದ್ದರು.ನೆಹರೂ ನಂತರ, ಅವರ ಮಗಳು ಇಂದಿರಾ ಗಾಂಧೀಜಿಯವರೊಂದಿಗೂ ಅದೇ ಸೌಹಾರ್ದ ಬೆಳೆಸಿಕೊಂಡು ಬಂದಿದ್ದರು.
ಅಸ್ಸಾಂನಲ್ಲಿ ಅಲ್ಲಿನ ಕಾಂಗ್ರೆಸ್ ಧುರೀಣರೊಂದಿಗೆ ನಡೆಸಿದ ಮಾತುಕತೆಯ ಫಲವಾಗಿ ೧೯೩೧ರಲ್ಲಿ ಫಕ್ರುದ್ದೀನ್ ಕಾಂಗ್ರೆಸ್ ಸೇರಿದರು. ಮುಸ್ಲಿಂ ಲೀಗಿಗೆ ಸೇರಬೇಕೆಂಬ ಒತ್ತಡ ಬಂದರೂ ಲೆಕ್ಕಿಸದೆ ಕಾಂಗ್ರೆಸ್‌ನಲ್ಲೇ ಮುಂದುವರಿದರು; ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾದರು. ಮುಂದಿನ ದಿನಗಳಲ್ಲಿ ಅಖಿಲ ಭಾರತ ಕಾಂಗ್ರೆಸ್‌ನ (Indian National Congress)ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ, ಒಟ್ಟು ನಾಲ್ಕೂವರೆ ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿದರು.
೧೯೩೫ರಲ್ಲಿ ಅಸ್ಸಾಂ ವಿಧಾನ ಸಭೆಗೆ ಸ್ವತಂತ್ರ ಉಮೇದುವಾರರಾಗಿ ಚುನಾಯಿತರಾದ ಫಕ್ರುದ್ದೀನ್ ಅವರು ೧೯೩೮ರಲ್ಲಿ ಗೋಪಿನಾಥ ಬಾರಡೊಲೈ ನೇತೃತ್ವದ ಸರ್ಕಾರದಲ್ಲಿ ವಿತ್ತ, ರಾಜಸ್ವ ಮತ್ತು ಕಾರ್ಮಿಕ ಶಾಖೆಗಳ ಮಂತ್ರಿಯಾಗಿ, ತಮ್ಮ ಆಡಳಿತ ದಕ್ಷತೆಯ ಪರಿಚಯವನ್ನು ಅಸ್ಸಾಂ ಜನತೆಗೆ ಮಾಡಿಕೊಟ್ಟರು. ೧೯೪೫ರಲ್ಲಿ ಅಬೀದಾ ಹೈದರ್ ಅವರೊಂದಿಗೆ ವಿವಾಹವಾಯಿತು. ಬೇಗಂ ಅಬೀದಾ ಅಹಮದ್ ಸಹ ಸುಶಿಕ್ಷಿತ ಮಹಿಳೆ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಪದವೀಧರೆ, ಕಲೆ ಮತ್ತು ಇತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಇವರು ತಮ್ಮ ಪತಿಯಂತೆಯೇ ಸಾರ್ವಜನಿಕ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ; ಬರೈಲಿ ಲೋಕ ಸಭಾಕ್ಷೇತ್ರದಿಂದ, ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿ ಸಂಸತ್ತಿನಲ್ಲಿ ಒಬ್ಬ ಸಮರ್ಥ ಜನಪ್ರತಿನಿಧಿಯಾಗಿ ಮಿಂಚಿದ್ದಾರೆ.
ಫಕ್ರುದ್ದೀನ್ ಅಲಿ ಅಹಮದ್ ಅವರ ಸಾರ್ವಜನಿಕ ಜೀವನ ವೈವಿಧ್ಯ ಪೂರ್ಣವಾದದ್ದು. ಅಸ್ಸಾಂ ವಿಧಾನ ಸಭೆಯ ಸದಸ್ಯರು, ಮಂತ್ರಿ ಹಾಗೂ ಅಡ್ವೊಕೇಟ್ ಜನರಲ್, ರಾಜ್ಯ ಸಭಾ ಸದಸ್ಯರು, ಕೇಂದ್ರ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಮಂತ್ರಿ -ಹೀಗೆ ಬಹುಮುಖ ಸೇವೆ ಸಲ್ಲಿಸಿದ್ದರು. ೧೯೫೨ ಮತ್ತು ೧೯೬೬ ರಲ್ಲಿ ರಾಜ್ಯ ಸಭೆಗೆ ಆಯ್ಕೆಯಾಗಿದ್ದರು. ಕೇಂದ್ರ ಮಂತ್ರಿ ಮಂಡಲದಲ್ಲಿ ನೀರಾವರಿ, ವಿದ್ಯುತ್ತು, ಆಹಾರ, ಕೃಷಿ ಮುಂತಾದ ಮುಖ್ಯ ಖಾತೆಗಳಲ್ಲಿ ತಮ್ಮ ದಕ್ಷತೆಯ ಛಾಪನ್ನು ಮೂಡಿಸಿದ್ದರು. ೧೯೬೭ ಮತ್ತು ೧೯೭೧ ರ ಚುನಾವಣೆಗಳಲ್ಲಿ ಅಸ್ಸಾಂನ ಬಾರಪೇಟಾ ಕ್ಷೇತ್ರದಿಂದ ಲೋಕ ಸಭೆಗೆ ಆರಿಸಿ ಬಂದು ಕೇಂದ್ರ ಸಂಪುಟದಲ್ಲಿ ಕೃಷಿ ಮಂತ್ರಿಯಾದರು. ೧೯೭೪ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು ಆಗಸ್ಟ್ ೨೪ನೇ ತಾರೀಖು ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
೧೯೫೫ರಷ್ಟು, ಹಿಂದೆಯೇ ಭಾರತಿಯರು ವಕೀಲರ ನಿಯೋಗದ ನೇತೃತ್ವ ವಹಿಸಿ, ಫಕ್ರುದ್ದೀನ್ ಅವರು ಸೋವಿಯಟ್ ಒಕ್ಕೂಟಕ್ಕೆ ಭೇಟಿ ನೀಡಿದ್ದರು. ವಿವಿಧ ಅಂತಾರಾಷ್ಟ್ರೀಯ ಸಮಿತಿ ಮತ್ತು ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ೧೯೫೭ ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ಮಂಡಲದ ಸದಸ್ಯರಾಗಿದ್ದರು. ಕೇಂದ್ರ ಸಂಪುಟದ ಮಂತ್ರಿಯಾಗಿ ಯುರೋಪಿನ ವಿವಿಧ ರಾಷ್ಟ್ರಗಳು, ಶ್ರೀಲಂಕಾ, ಇರಾನ್, ಆಫ್ರಿಕಾ, ಜಪಾನ್ ಮುಂತಾದ ದೇಶಗಳಿಗೂ ಭೇಟಿ ಕೊಟ್ಟಿದ್ದರು. ರಾಷ್ಟ್ರಪತಿಯಾಗಿ ಮಲೇಷಿಯಾ, ಫಿಲಿಪೀನ್ಸ್ ಮತ್ತು ಬರ್ಮಾ (ಈಗಿನ ಮ್ಯಾನಮಾರ್)ಗಳಿಗೆ ಅಧಿಕೃತ ಭೇಟಿಗಾಗಿ ಹೋಗಿದ್ದ ಫಕ್ರುದ್ದೀನ್ ಅವರು ಇದ್ದಕ್ಕಿದ್ದಂತೆ ಅಸ್ವಸ್ಥರಾಗಿ ಪ್ರವಾಸವನ್ನು ಮೊಟಕು ಮಾಡಿ ಸ್ವದೇಶಕ್ಕೆ ಮರಳಿದರು. ೧೯೭೫ರಲ್ಲಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ಕರಾಳಶಾಸನವಾದ ತುರ್ತುಪರಿಸ್ಥಿತಿಯ ಘೋಷಣೆಗೆ ಅನುವು ಮಾಡಿಕೊಟ್ಟದ್ದಕ್ಕೆ ಟೀಕೆಗೆ ಒಳಗಾದರು. ೧೯೭೭ರ ಫೆಬ್ರವರಿ ೧೧ ರಂದು ರಾಷ್ಟ್ರಪತಿ ಸ್ಥಾನದ ಅವಧಿ ಪೂರ್ಣವಾಗುವ ಮೊದಲೇ ಅಸು ನೀಗಿದರು.
ಫಕ್ರುದ್ದೀನ್ ಅಲಿ ಮಹಮದ್ ಅವರು ಕಾವ್ಯಪ್ರಿಯರು.ಶ್ರೇಷ್ಠ ಉರ್ದು ಕವಿ ಮಿರ್ಜಾಘಾಲಿಬ್ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ,ಅಖಿಲ ಭಾರತಮಟ್ಟದಲ್ಲಿ ನಡೆದ ಕಾರ್ಯಕ್ರಮಗಳ ಪ್ರಮುಖ ರೂವಾರಿಯಾಗಿದ್ದರು. ಘಾಲಿಟ್ ಸ್ಮಾರಕಗಳಾದ ವಸ್ತು ಸಂಗ್ರಹಾಲಯ, ಸಂಶೋಧನ ಘಟಕ, ಪುಸ್ತಕ ಭಂಡಾರ- ಇವುಗಳೆಲ್ಲ ಅವರ ಕರ್ತೃತ್ವ ಶಕ್ತಿಯ ಹೆಗ್ಗುರುತುಗಳು.
ಕ್ರೀಡೆಗಳು ಅವರಿಗೆ ಕಾವ್ಯದಷ್ಟೇ ಪ್ರಿಯ ಸ್ವತಃ ಹಾಕಿ, ಪುಟ್‌ಬಾಲ್ ಮತ್ತು ಗಾಲ್ಫ್ ಆಟಗಳನ್ನಾಡುತ್ತಿದ್ದರು. ಟೆನಿಸ್, ಕ್ರಿಕೆಟ್, ಬ್ರಿಜ್, ಆಟಗಳಲ್ಲೂ ಅವರಿಗೆ ಆಸಕ್ತಿ ಇತ್ತು ಅಖಿಲ ಭಾರತ ಟೆನಿಸ್ ಅಸೋಸಿಯೇಷನ್ನಿನ ಅಧ್ಯಕ್ಷರೂ ಆಗಿದ್ದರು.ಅವರು ತಮ್ಮ ಉಡುಪಿನ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದರು. ದಿನ ನಿತ್ಯದ ಉಡುಪಿಗೆ ಖಾದಿ, ಆಟದ ಬಯಲಿಗೆ ಅದಕ್ಕೆ ತಕ್ಕ ಉಡುಪು, ವಿದೇಶ ಪ್ರವಾಸದಲ್ಲಿ ಪಾಶ್ಚಿಮಾತ್ಯ ದಿರುಸು. ಹೀಗೆ ತಮ್ಮ ಉಡುಪಿನಲ್ಲಿ ಅಚ್ಚು ಕಟ್ಟಿನ ಜೊತೆಗೆ ವೈವಿಧ್ಯತೆಯನ್ನೂ ಬಯಸುತ್ತಿದ್ದರು.