ಫರ್ಡಿನಾಂಡ್ ಕಿಟೆಲ್

ಇಂದಿಗೂ ಅದ್ವೀತಿಯ ಎನಿಸಿದ ಕನ್ನಡ-ಇಂಗ್ಲಿಷ್ ನಿಘಮಟನ್ನು ಸಿದ್ದಗೊಳಿಸಿದ ಸಾಹಸಿ ವಿದ್ವಾಂಸ ಜರ್ಮನಿಯ ಕಿಟೆಲ್ ತಮ್ಮ ಧರ್ಮದ ಪ್ರಸಾರಕ್ಕಾಗಿ ಭಾರತಕ್ಕೆ ಬಂದವನು ಕನ್ನಡದ ಸೇವೆಗೆ ಮುಡಿಪಾದ, ಕನ್ನಡ ಭಾಷೆಗೆ ಮತ್ತು ಸಾಹಿತ್ಯದ ಅಭ್ಯಾಸಕ್ಕೆ ಇವರ ಕೊಡುಗೆ ಅಪಾರ.

 

 

ಫರ್ಡಿನಾಂಡ್ ಕಿಟೆಲ್

ಅಂದು ಮಂಗಳವಾರ. ಸಂತೆಯ ದಿನ. ಹಳ್ಳಿಯ ಹೆಂಗಸರು ಹಾಗು ಗಂಡಸರು ತಮ್ಮ ಸಂತೆಯ ಕೆಲಸ ಮುಗಿಸಿದ್ದರು. ಪೇಟೆಯಲ್ಲಿ ತಾವು ತೆಗೆದುಕೊಂಡ ವಸ್ತುಗಳನ್ನು ಬುಟ್ಟಿಗಳಲ್ಲಿ ತುಂಬಿ ಕೊಂಡಿದ್ದರು. ಅವರು ಆ ಬುಟ್ಟಿಗಳನ್ನು ತಮ್ಮ ತಲೆಯ ಮೇಲಿಟ್ಟುಕೊಂಡು, ತಮ್ಮ ಹಳ್ಳಿಯ ಕಡೆಗೆ ಸಾಗಿದ್ದರು.

ಪ್ರಶ್ನೆಗಳ ಸೂಚಿ

ಈ ಹಳ್ಳಿಯ ಜನರ ಜೊತೆಗೆ ಕೆಂಪು ಮುಖದ ಒಬ್ಬ ವ್ಯಕ್ತಿಯೂ  ಸಾಗಿದ್ದನು !

‘ನೀವು ಏನನ್ನು ತಿನ್ನುತ್ತಿದ್ದೀರಿ?’ ಅವನು ಧ್ವನಿಯನ್ನು ಎಳೆದು ಸರಾಗವಾಗಿ ಕೇಳಿದನು.

ಹಳ್ಳಿಗರು ನಕ್ಕರು; ಆದರೂ ಪ್ರೀತಿಯಿಂದ ಉತ್ತರಿಸಿದರು, ‘ಚುರುಮುರಿ ಶೇಂಗಾ. . .’

‘ಓಹೋ !’ ಎಂದು ಅವನು ಹಿಗ್ಗಿದನು. ತಾನೂ ತಿಂದನು. ಅವರಿಗೆ ಮತ್ತೆ ಬೇರೆ ಬೇರೆ ಪ್ರಶ್ನೆ ಕೇಳಿದನು.

‘ಇದು ಪುಂಡೀ ಪಲ್ಲೇವು. . .ಇದು ಬದನೇಕಾಯಿ. . . ಇದು ಶೇಂಗಾ ಎಣ್ಣೆ. . . ಇದು ತಂಬಾಕು. . .’ ಬುಟ್ಟಿಗಳಲ್ಲಿಯ ವಸ್ತುಗಳನ್ನು ತೋರಿಸಿ, ಆ ಹಳ್ಳಿಗರು ಹೇಳಿದರು.

ಅವನು ಎಲ್ಲವನ್ನು ತೀಕ್ಷ್ಣವಾಗಿ ನೋಡಿದನು. ಅವನ ಕಣ್ಣುಗಳಲ್ಲಿ ಮಿಂಚಿನ ಸಂಚಾರವಿತ್ತು. ಕಣ್ಣುಗಳ ಆಕಾರದಂತೆ ಅವನ ಕನ್ನಡಕವಿತ್ತು. ತಲೆಯ ಮೇಲೆ ಕೂದಲು ಕಡಿಮೆ. ಗಡ್ಡ ಮೀಸೆ ಬಿಟ್ಟಿದ್ದನು. ಅವನು ಎತ್ತರವಾದ ನಿಲುವಿನ ತೆಳ್ಳಗಿನ ವ್ಯಕ್ತಿ. ಉದ್ದವಾದ ಬಿಳಿ ನಿಲುವಂಗಿ ಧರಿಸಿದ್ದನು. ಅವನ ಕೊರಳಲ್ಲಿ ಕ್ರಾಸ್ ಚಿಹ್ನೆವೊಂದು ನೇತಾಡುತ್ತಿತ್ತು.

ಅವನು ತನ್ನ ನಿಲುವಂಗಿಯ ಕಿಸೆಯಲ್ಲಿ ಕೈಹಾಕಿ, ಒಂದು ವಸ್ತುವನ್ನು ಹೊರತೆಗೆದನು.

‘ನೀವು ಇದಕ್ಕೆ ಏನೆನ್ನುತ್ತೀರಿ ?’ ಅವನು ಕೇಳಿದನು.

‘ಇವು ಕವಡೆ’

ಅವನು ತನ್ನ ಕಿಸೆಯಿಂದ ಮತ್ತೊಂದು ವಸ್ತುವನ್ನು ಹೊರತೆಗೆದು ಅದರ ಬಗ್ಗೆ ಕೇಳಿದನು.

‘ಇವು ಅವರೆ ಕಾಳು’

ಮತ್ತೆ ಪ್ರಶ್ನೆ ; ಮತ್ತೆ ಉತ್ತರ !

ಕತ್ತಲಾದ ಮೇಲೆ ಅವನು ಧಾರವಾಡಕ್ಕೆ ಹಿಂದಿರುಗಿದನು. ಏರಿಯನ್ನು ಯಾವ ಆಯಾಸವಿಲ್ಲದೆಯೆ ಏರುತ್ತ ಮಿಷನ್ ಕಂಪೌಂಡಿಗೆ ಬಂದನು. ತನ್ನ ಮನೆಯಲ್ಲಿಯ ಅಭ್ಯಾಸದ ಕೋಣೆಯನ್ನು ಪ್ರವೇಶಿಸಿದಾಗ, ದೀಪವು ಅವನನ್ನು ಸ್ವಾಗತಿಸಿತು.

ಕನ್ನಡದ ಸೇವೆ

ಕೋಣೆಯಲ್ಲಿ ಮೇಜಿನ ಮೇಲೆ ಹಾಗೂ ಸುತ್ತ ಮುತ್ತಲೂ ಅಸಂಖ್ಯಾತ ಪುಸ್ತಕಗಳಿದ್ದವು. ಹಳೆಗನ್ನಡ ತಾಡೋಲೆ ಗರಿಯ ಗ್ರಂಥಗಳಿದ್ದವು; ವಿವಿಧ ಭಾಷೆಯ ನಿಘಂಟುಗಳಿದ್ದವು. ರೇವರೆಂಡ್ ಜೆ.ಪಿ. ರಾಟ್ಲರ್ ಅವರ ತಮಿಳು-ಇಂಗ್ಲಿಷ್ ನಿಘಂಟು; ರೆವೆರೆಂಡ್ ಗುಂಡರ್ಟರ ಮಲಯಾಳ ಇಂಗ್ಲಿಷ್ ನಿಘಂಟು; ಕ್ಯಾಂಪೆಲ್ ಹಾಗೂ ಬ್ರೌನ್ ಅವರ ತೆಲುಗು-ಇಂಗ್ಲಿಷ್ ನಿಘಂಟು ಹೀಗೆ ಹಲವಾರು ನಿಘಂಟುಗಳು ಮೇಜಿನ ಮೇಲಿದ್ದವು.

‘ಹ್ಞಾ !’ ದೀಪದ ಹತ್ತಿರ ಅವನು ಕುಳಿತುಕೊಂಡು ಎಲ್ಲವನ್ನು ನೆನಪುಮಾಡಿ ಕೊಂಡನು. ‘ಅವರೆ ಶಬ್ದ !’ ’ಅವರೆ’ ಶಬ್ದವನ್ನು ಕುರಿತು ಅವನು ವಿಚಾರಿಸಿದನು. ವಿವರಗಳನ್ನೆಲ್ಲ ಒಂದು ಹಾಳೆಯಲ್ಲಿ ಹೀಗೆ ಬರೆದನು: ‘ಅವರೆ:’ ಸಂಸ್ಕೃತ ಶಬ್ದದಿಂದ ಇದು ಬಂದಿದೆ. (ಶಬ್ದಮಣಿದರ್ಪಣದ ೩೪೭ರ ಶ್ಲೋಕದಲ್ಲಿ ಕಾಣಬಹುದು) ಇದಕ್ಕೆ ಇಂಗ್ಲಿಷಿನಲ್ಲಿ ‘ಪಲ್ಸ್’ ಎನ್ನುವರು. ತುಳು ಭಾಷೆಯಲ್ಲಿ ‘ಅಬರೆ’ ಇದೆ; ತಮಿಳು ಮಲಯಾಳಂ ಭಾಷೆಯಲ್ಲಿ ‘ಅವರೈ’ ಎಂದಿದೆ; ತೆಲುಗು ಭಾಷೆಯಲ್ಲಿ ಅನಪೆ, ಅನುಮು,… ಅನುಪು ಹೀಗೆ. ಇದರ ಬಗ್ಗೆ ಒಂದು ನಾಣ್ಣುಡಿಯೂ ಇದೆ. ‘ಅವರೆ ಒಂದೇ, ಅವರೆಯ ಕೇರಿದ ಮರ ಬೇರೆ…’

ಇದೇ ರೀತಿ ಉಳಿದ ಶಬ್ದಗಳ ಟಿಪ್ಪಣಿಮಾಡಿದನು. ಬಹಳ ಹೊತ್ತು ಹಾಗೆಯೇ ಬರೆಯುತ್ತ ಕುಳಿತನು.ಹಸಿವೆ, ನಿದ್ರೆ ಇವುಗಳ ಅರಿವು ಇರಲಿಲ್ಲ. ಕಣ್ಣಿನ ನರಗಳು ನೋಯುತ್ತಿದ್ದವು. ಆಗ ಹೊರಬಂದು ಸುತ್ತಲೂ ನಿಟ್ಟಿಸಿದನು. ಬಲಗಡೆ ಸನಿಹದಲ್ಲಿಯೇ ಚರ್ಚ್ ದೇವಾಲಯ. ಗಂಟೆಯ ಗೋಪುರ ಎತ್ತರದಲ್ಲಿದ್ದಿತು. ಅದರ ಮೇಲೆ ಕ್ರಾಸ್ ಶೋಭಿಸುತ್ತಿತ್ತು. ಮೇಲೆ ಆಕಾಶದಲ್ಲಿ ಅಗಣಿತ ಚಿಕ್ಕೆಗಳು ಹೊಳೆಯುತ್ತಿದ್ದವು.

‘ಕನ್ನಡ ನುಡಿಯ ಕೆಲಸ ದೇವರ ಸೇವೆ!’ ಎಂದು ಅವನು ಒಮ್ಮೆಲೇ ಅತ್ಯಾನಂದದಿಂದ ಉದ್ಗಾರ ತೆಗೆದನು.‘ನಕ್ಷತ್ರದಂತೆ ನನ್ನ ಕೃತಿಯೂ ಬೆಳಗಬೇಕು!’ ಎಂದು ತನ್ನಲ್ಲಿ ತಾನೇ ನುಡಿದನು.

ಈ ಮಿನುಗು ತಾರೆ ‘ಕಿಟೆಲ್ ನಿಘಂಟು’. ಈ ಅಮರ ಕೃತಿಯನ್ನು ರಚಿಸಿದ ಅವನು, ಫರ್ಡಿನಾಂಡ್ ಕಿಟೆಲ್. ಅವನು ಕನ್ನಡ ನಾಡಿನವನಲ್ಲ; ಆದರೆ ಜರ್ಮನಿ ದೇಶದಲ್ಲಿ ಜನಿಸಿದ ಅಚ್ಚಕನ್ನಡಿಗನು !

ಬಾಲ್ಯ

ಫರ್ಡಿನಾಂಡ್ ಕಿಟೆಲ್ ಹುಟ್ಟಿದ್ದು ರೆಸ್ಟರ್‌ಹಾಫ್ ಎಂಬ ಊರಲ್ಲಿ. ರೆಸ್ಟರ್‌ಹಾಫ್ ಜರ್ಮನಿ ದೇಶದ ಪ್ರೀಸ್‌ಲೆಂಡ್ ಹ್ಯಾನೋವರ್ ಪ್ರಾಂತದ ಪೂರ್ವದಲ್ಲಿ, ಉತ್ತರ ಸಾಗರದ ತೀರದಲ್ಲಿ ಇದೆ. ಇದೇ ಊರಲ್ಲಿ ಫರ್ಡಿನಾಂಡ್ ಕಿಟೆಲ್‌ರ ತಂದೆ ಗಾಜ್‌ಫ್ರೀಟ್ ಒಬ್ಬ ಪಾದ್ರಿಯಾಗಿದ್ದರು; ಟ್ಯೂಡೋವ್ ಹೆಲೇನ್ ಹ್ಯಾಬರ್ಟ್ ಎಂಬುದು ಇವರ ತಾಯಿಯ ಹೆಸರು. ಈ ಕಿಟೆಲ್ ದಂಪತಿಗಳಿಗೆ ಆರು ಜನ ಮಕ್ಕಳು. ಅವರಲ್ಲಿ ಹಿರಿಯ ಫರ್ಡಿನಾಂಡ್ ಕಿಟೆಲ್. ಫರ್ಡಿನಾಂಡ್ ಜನಿಸಿದ್ದು ೧೮೩೨ರ ಏಪ್ರಿಲ್ ೧೭ ರಂದು.

ಫರ್ಡಿನಾಂಡ್‌ರ ಪ್ರಾರಂಭದ ಪ್ರಾಥಮಿಕ ಶಿಕ್ಷಣವು ರೆಸ್ಟರ್ ಹಾಫ್ನಲ್ಲಿ ಮುಗಿಯಿತು. ಮುಂದೆ ಮಾಧ್ಯಮಿಕ ಶಿಕ್ಷಣಕ್ಕಾಗಿ ಅವರು ಜೌರಿಕ್ ಎಂಬ ಊರಿಗೆ ಬಂದರು. ಈಸ್ಟ್ ಫ್ರೀಜಿಯಾ ಜಿಲ್ಲೆಯ ಜೌರಿಕ್‌ದಲ್ಲಿ ಅವರ ಅಜ್ಜ ಇದ್ದರು. ಅವರ ಮನೆಯಲ್ಲಿಯೇ ಫರ್ಡಿನಾಂಡ್ ವಾಸವಾಗಿದ್ದರು. ಹಿಬ್ರೂ, ಗ್ರೀಕ್, ಲ್ಯಾಟೀನ್, ಫ್ರೆಂಚ್, ಇಂಗ್ಲಿಷ್ ಈ ಎಲ್ಲ ಭಾಷೆಗಳ ಸಾಹಿತ್ಯದ ಅಭ್ಯಾಸವನ್ನೂ ಅವರು ಮಾಡಿದರು.

೧೮೪೧ ಸೆಪ್ಟೆಂಬರ ತಿಂಗಳಿಂದ ೧೮೪೯ರ ವರೆಗೂ ಅವರ ಮಾಧ್ಯಮಿಕ ಶಿಕ್ಷಣವಾಯಿತು. ಮುಂದೆ ಅವರು ಸಾಂಪ್ರದಾಯಕ ಶಿಕ್ಷಣಕ್ಕೆ ಹೋಗಬೇಕಾಗಿತ್ತು. ಆದರೆ ಅವರಲ್ಲಿ ವಿಲಕ್ಷಣ ಬದಲಾವಣೆಯಾಯಿತು. ಅವರ ಮನಸ್ಸಿಗೆ ಧಾರ್ಮಿಕ ಶಿಕ್ಷಣವೇ ಬೇಕೆನಿಸಿತು. ತಮ್ಮ ವಿಚಾರಗಳನ್ನು ತಂದೆ ತಾಯಂದಿರಿಗೂ, ಸ್ನೇಹಿತರಿಗೂ ಅವರು ತಿಳಿಸಿದರು. ತಮ್ಮ ಹದಿನೇಳನೆಯ ವಯಸ್ಸಿನಲ್ಲಿಯೇ ಫರ್ಡಿನಾಂಡ್ ಶಾಲೆಯನ್ನು ಬಿಟ್ಟರು.

ಮಿಷನರಿ ಶಿಕ್ಷಣಕ್ಕೆ ಪ್ರವೇಶ ದೊರೆಯುವುದೂ ಬಹಳ ಕಠಿಣವಿದ್ದಿತು. ೧೮೪೯ ಆಗಸ್ಟ್ ೩೦ ರಂದು ಬಾಸೆಲ್ ಮಿಶನ್ ಸಂಸ್ಥೆಗೆ ಫರ್ಡಿನಾಂಡರ ತಂದೆ ಅರ್ಜಿ ಸಲ್ಲಿಸಿದರು.

ಧಾರ್ಮಿಕ ಶಿಕ್ಷಣ

ದೈಹಿಕವಾಗಿಯೂ ಮಾನಸಿಕವಾಗಿಯೂ ಫರ್ಡಿನಾಂಡ್ ಮಿಷನರಿ ಶಿಕ್ಷಣಕ್ಕೆ ಯೋಗ್ಯರಾಗಿದ್ದರು. ೧೮೫೦ರಲ್ಲಿ ಅವರು ಸ್ವಿಟ್ಜರ್ಲೆಂಡಿನ           ಬಾಸೆಲ್‌ನಗರದ ಮಿಷನ್ ಕಾಲೇಜನ್ನು ಸೇರಿದರು. ಅಭ್ಯಾಸದ ಬಲದಿಂದ ತಮ್ಮ ಆಧ್ಯಾತ್ಮಕ ಶಕ್ತಿಯನ್ನು ಅರಳಿಸಿಕೊಂಡರು. ಮಿಷನರಿ ಶಿಕ್ಷಣದ ಪರೀಕ್ಷೆಗಳು ಬಹು ಕಠಿಣವಾಗಿದುವು. ಫರ್ಡಿನಾಂಡ್ ಎಲ್ಲ ಪರೀಕ್ಷೆಗಳಲ್ಲಿಯೂ ಉತ್ತಮ ರೀತಿಯಿಂದ ತೇರ್ಗಡೆ ಹೊಂದಿದರು. ೧೮೫೩ರ ಏಪ್ರಿಲ್ ತಿಂಗಳಲ್ಲಿ ಅವರ ಅಭ್ಯಾಸವು ಮುಗಿಯಿತು.

ಬಾಸೆಲ್ ಮಿಷನ್ನಿನ ಅಧಿಕಾರಿಗಳು ಫರ್ಡಿನಾಂಡ್ ಕಿಟೆಲ್‌ರ ಶ್ರದ್ಧೆಯನ್ನು ವಿದ್ವತ್ತನ್ನು ಮನಗಂಡರು. ಫರ್ಡಿನಾಂಡರನ್ನು ಕ್ರೈಸ್ತ ಧರ್ಮದ ಪ್ರಚಾರಕ್ಕೆ ಭಾರತಕ್ಕೆ ಕಳುಹಿಸುವ ನಿರ್ಣಯವನ್ನು ಮಾಡಿದರು. ಫರ್ಡಿನಾಂಡ್ ಹಾಗೂ ಕಾಫ್‌ಮನ್ ಇಬ್ಬರೂ ಬಾಸೆಲ್ ನಗರವನ್ನು ೧೮೫೨ ಅಕ್ಟೋಬರ ತಿಂಗಳಲ್ಲಿ ಬಿಟ್ಟರು. ಭಾರತದಲ್ಲಿ ಧಾರವಾಡಕ್ಕೆ ಬರಲು ಸಮುದ್ರ ಮಾರ್ಗವಾಗಿ ಹೊರಟರು.

ಕನ್ನಡದ ಅಭ್ಯಾಸ

ಫರ್ಡಿನಾಂಡ್ ಕಿಟೆಲ್ ಮಿಷನರಿ ಕಾರ್ಯವನ್ನು ಪ್ರಾರಂಭಿಸುವ ಮೊದಲು, ಕನ್ನಡವನ್ನು ಕಲಿಯ ಬೇಕಾಗಿದ್ದಿತು. ಆಗ ಧಾರವಾಡದಲ್ಲಿ ರೆವರೆಂಡ್ ವೀಗಲ್ ಎಂಬ ಮಿಷನರಿ ಅಧಿಕಾರಿಗಳಿದ್ದರು. ವೀಗಲ್‌ರು ಕನ್ನಡದಲ್ಲಿ ಪ್ರಭುತ್ವ ಪಡೆದಿದ್ದರು. ಕನ್ನಡ ಸಾಹಿತ್ಯದ ಬಗ್ಗೆ ಮೊಟ್ಟಮೊದಲು ಅವರು ಲೇಖನ ಬರೆದಿದ್ದರು. ಫರ್ಡಿನಾಂಡ್ ಕಿಟೆಲ್‌ರು ಕನ್ನಡವನ್ನು ಕಲಿಯಲು ವೀಗಲ್‌ರ ಕಡೆಗೆ ಪ್ರಯಾಣ ಮಾಡಿದರು.

ಕಿಟೆಲ್ ಧಾರವಾಡವನ್ನು ತಲುಪಿದರು. ಆದರೆ ಅಷ್ಟರಲ್ಲಿ ಅಲ್ಲಿ ವೀಗಲ್ ಇರಲಿಲ್ಲ ಅವರ ಬದಲು ರೆವರೆಂಡ್ ಮೋರಿವಕ್‌ರು ಮಿಷನರಿ ಅಧಿಕಾರಿ ಗಳಾಗಿದ್ದರು.

ಕಿಟೆಲ್‌ರು ಕನ್ನಡವನ್ನು ಕಲಿಯಲೇಬೇಕಾಗಿತ್ತು. ಅವರಿಗೆ ಕನ್ನಡವನ್ನು ಮೊಟ್ಟಮೊದಲು ಯಾರು ಕಲಿಸಿದರು ಎಂಬುದು ತಿಳಿದಿಲ್ಲ. ಕಿಟೆಲ್‌ರು ಬೇರೆ ಬೇರೆ ಮಿಷನರಿ ಅಧಿಕಾರಿಗಳಿಂದ ಕನ್ನಡವನ್ನು ಹೇಳಿಸಿಕೊಂಡಿರಬೇಕು. ಕಿಟೆಲ್‌ರು ಧಾರವಾಡ, ಮಂಗಳೂರು, ಮಡಿಕೇರಿಗಳಲ್ಲಿ ಇದ್ದುಕೊಂಡು, ಕನ್ನಡದ ಹೆಚ್ಚಿನ ಅಭ್ಯಾಸ ಮಾಡಿದರು.

ಕನ್ನಡದ ವರ್ಣಮಾಲೆ ಬರೆಯಲು ಕಿಟೆಲ್ ಪ್ರಾರಂಭಿಸಿದಾಗ, ಅವರಿಗೆ ಇಪ್ಪತ್ತು ವರುಷ! ಆದರೆ ಕೆಲವೇ ವರುಷಗಳಲ್ಲಿ ಕನ್ನಡದ ಪಾಂಡಿತ್ಯ ಪಡೆದರು. ಹಳೆಗನ್ನಡ ಕಾವ್ಯಗಳನ್ನು ಓದಿ ತಿಳಿದುಕೊಂಡರು; ತಾಡೋಲೆ ಗ್ರಂಥಗಳನ್ನು ದೊರೆಸಿಕೊಂಡು ಅಭ್ಯಾಸ ಮಾಡಿದರು. ಸಂಸ್ಕೃತ ವಿದ್ವಾಂಸರನ್ನು ಭೆಟ್ಟಿಯಾಗಿ ಸಂಸ್ಕೃತವನ್ನು ಕಲಿತರು. ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ಅವರು ಹಳ್ಳಿಗಳಲ್ಲಿ ತಿರುಗಾಡುತ್ತಿದ್ದರು. ಆಗ ಹಳ್ಳಿಗರು ಮಾತನಾಡುವ ಕನ್ನಡವನ್ನೂ ಕಲಿತುಕೊಂಡರು. ಅವರಿಗೆ ಕನ್ನಡದ ಬಗ್ಗೆ ಅದೆಷ್ಟು ಮೋಹ! ಅದೆಷ್ಟು ಪ್ರೀತಿ ! ಅವರು ಬಹು ಬೇಗ ಕನ್ನಡದಲ್ಲಿ ಕಾವ್ಯ ರಚಿಸಲು ಪ್ರಾರಂಭಿಸಿದರು.

’ಹೊಸ ಒಡಂಬಡಿಕೆ’ ಯಲ್ಲಿಯ ಹಲವು ಬೈಬಲ್ ಕತೆಗಳನ್ನು ಕನ್ನಡ ಛಂದಸ್ಸಿನಲ್ಲಿ ಬರೆದರು; ಅದು ೧೮೬೨ರಲ್ಲಿ ‘ಕಥಾಮಾಲೆ’ ಎಂದು ಪ್ರಕಟವಾಯಿತು. ೧೮೬೩ರಲ್ಲಿ ‘ಪರಮಾತ್ಮಜ್ಞಾನ’ ವೆಂಬ ಚಿಕ್ಕ ಗದ್ಯ ಗ್ರಂಥವನ್ನು ಪ್ರಸಿದ್ಧಿಸಿದರು. ೧೮೬೫ ರಲ್ಲಿ ‘ಸಣ್ಣ ಕರ್ನಾಟಕ ಕಾವ್ಯಮಾಲೆ’ ಎಂಬ ಪದ್ಯ ಸಂಗ್ರಹವು ಬೆಳಕು ಕಂಡಿತು. ಈ ಗ್ರಂಥದ ಮುನ್ನುಡಿ, ಸಹಾಯಕ ಟಿಪ್ಪಣಿ ಬಹಳ ಉಪಯುಕ್ತವಿವೆ. ಇದು ಮುಂದೆ ಈ ‘ಕರ್ನಾಟಕ ಕಾವ್ಯಮಾಲೆ’ ಎಂದು ಅಚ್ಚಾಯಿತು. ಈ ಪದ್ಯಸಂಗ್ರಹವು ಅನೇಕ ಆವೃತ್ತಿ ಪಡೆಯಿತು.

ಕನ್ನಡದಲ್ಲಿ ಪಾಂಡಿತ್ಯ

ಮಿಷನರಿ ಕಾರ್ಯಕ್ಕಾಗಿ ಕನ್ನಡ ನಾಡಿಗೆ ಬಂದ ಫರ್ಡಿನಾಂಡ್ ಕಿಟೆಲ್‌ರು ಕ್ರೈಸ್ತ ಧರ್ಮವನ್ನು ಕುರಿತು ಕನ್ನಡದಲ್ಲಿ ಬರೆದರು; ಇದು ಅವರ ಮನೋವೃತ್ತಿಗೆ ಸಹಜವಾದುದು. ಆದರೆ ಪಾಂಡಿತ್ಯ ಪೂರ್ಣವಾಗಿ ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಬರೆದುದು ಆಶ್ಚರ್ಯದ ಸಂಗತಿ ! ೧೮೬೬ರಲ್ಲಿಯೇ ಅವರು ‘ಹಳೆ ಕನ್ನಡದ ವ್ಯಾಕರಣ ಸೂತ್ರಗಳು’ ಎಂಬ ಗ್ರಂಥವನ್ನು ಪ್ರಕಟಿಸಿದರು. ಆಗ ಅವರು ಕನ್ನಡವನ್ನು ಕಲಿಯಲು ಪ್ರಾರಂಭಿಸಿ ಕೇವಲ ೧೨ ವರುಷಗಳಾಗಿದ್ದವು.

ಕಿಟೆಲ್‌ರ ಕನ್ನಡ ಪಾಂಡಿತ್ಯವು ಬಹುಮುಖ ವಾಯಿತು. ಅವರು ಕನ್ನಡ ಪತ್ರಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದರು. ಆಗಿನ ಮುಂಬಯಿ ಕನ್ನಡಿಗರ ಸಂಸ್ಥೆಯ ಪರವಾಗಿ ‘ವಿಚಿತ್ರ ವರ್ತಮಾನ ಸಂಗ್ರಹ’ ಎಂಬ ಪತ್ರಿಕೆ ಇದ್ದಿತು. ಇದು ತಿಂಗಳಿಗೆ ಎಡು ಸಲ ಪ್ರಕಟವಾಗುತ್ತಿತ್ತು; ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಈ ಪತ್ರಿಕೆ ಪ್ರಕಟವಾಗುತ್ತಿತ್ತು. ಫರ್ಡಿನಾಂಡ್ ಕಿಟೆಲ್ ಮತ್ತು ಜೆ.ಮ್ಯಾಕ್ ಈ ಪತ್ರಿಕೆಗೆ ೧೮೬೨, ೧೮೬೩ ರಲ್ಲಿ ಸಂಪಾದಕರಾಗಿದ್ದರು. ಅದೇ ಪ್ರಕಾರ ‘ಇಂಡಿಯ ಮತ್ತು ಅನ್ಯದೇಶದ ‘ವಾರ್ತಿಕ’ ಪತ್ರಿಕೆಗೂ ಇವರಿಬ್ಬರೂ ೧೮೬೨, ೧೮೬೩ ರಲ್ಲಿ ಸಂಪಾದಕರಾಗಿದ್ದರು.

ಕಿಟೆಲ್‌ರು ವಿದ್ಯಾಭ್ಯಾಸಕ್ಕೆ ಅವಶ್ಯವಿರುವ ಪಠ್ಯ ಪುಸ್ತಕಗಳನ್ನು ರಚಿಸಿದರು. ‘ಕನ್ನಡ ಪಂಚತಂತ್ರ’ವನ್ನು ಸಂಪಾದಿಸಿದರು. ‘ಕನ್ನಡ ಪಾಠಗಳ ಮೂರನೇ ಪುಸ್ತಕ’ವನ್ನು (೧೮೬೪), ಇಂಗ್ಲೆಂಡ್ ದೇಶದ ಚರಿತ್ರೆಯನ್ನು (೧೮೬೪) ಪ್ರಕಟಿಸಿದರು.

ಬಾಸೆಲ್ ಮಿಷನರಿಗಳು ಶಿಕ್ಷಣದ ಪ್ರಸಾರವನ್ನು ಮಾಡಿದರು.ಅನೇಕ ಊರುಗಳಲ್ಲಿ ಅವರು ಕನ್ನಡ ಹಾಗೂ ಇಂಗ್ಲಿಷ್ ಶಾಲೆಗಳನ್ನು ಸ್ಥಾಪಿಸಿದರು. ಧಾರವಾಡದಲ್ಲಿ ಇಂಗ್ಲಿಷ್ ಶಿಕ್ಷಣದ ಶಾಲೆಯನ್ನು ಮೊಟ್ಟ ಮೊದಲು ಪ್ರಾರಂಭಿಸಿದವರು ಬಾಸೆಲ್ ಮಿಷನರಿಗಳೇ. ಆಗ ಕನ್ನಡದ ಅಭಿವೃದ್ಧಿಗೆ ಬ್ರಿಟಿಷ್ ಅಧಿಕಾರಿಗಳೂ ನೆರವಾದರು. ಇವರಲ್ಲಿ ರಸೆಲ್, ಫ್ಲೀಟ್, ರೈಸ್ ಇವರನ್ನು ನೆನೆಯಬೇಕು.

ಬ್ರಿಟಿಷ್ ಅಧಿಕಾರಿಗಳಿಗೆ, ಮಿಷನರಿಗಳಿಗೆ ಕನ್ನಡ ವನ್ನು ತಿಳಿದುಕೊಳ್ಳುವ ಅವಶ್ಯಕತೆಯಿದ್ದಿತು; ಇದಲ್ಲದೆ ಧರ್ಮ ಪ್ರಸಾರವನ್ನು ಕನ್ನಡದಲ್ಲಿಯೇ ಮಾಡಬೇಕಾ ಗಿದ್ದಿತು. ಫರ್ಡಿನಾಂಡ್ ಕಿಟೆಲ್‌ರು ಈ ದೃಷ್ಟಿಯಿಂದ ತಮ್ಮ ಪ್ರಾರಂಭದ ಬರವಣಿಗೆಯನ್ನು ಬೆಳೆಯಿಸಿಕೊಂಡರು.

ಸಂಸಾರದಲ್ಲಿ ಸುಖ ದುಃಖ

ಮಿಷನರಿ ಕೆಲಸಕ್ಕಾಗಿ ಕಿಟೆಲ್‌ರು ಮಡಿಕೇರಿ, ಮಂಗಳೂರಲ್ಲಿರುವಾಗ ಕಿಟೆಲ್‌ರು ಪಾಲಿನ್‌ಐತ್ ಎಂಬುವಳನ್ನು ಭೆಟ್ಟಿಯಾದರು. ೧೮೬೦ರಲ್ಲಿ ಕಿಟೆಲ್ ಹಾಗೂ ಪಾಲಿನ್ ಐತ್ ಅವರ ಮದುವೆಯು ನೆರವೇರಿತು.

ಕಿಟೆಲ್‌ರದು ದೈಹಿಕ ಹಾಗೂ ಸಮೀಪದ ಬೆಟ್ಟಗಳನ್ನೇರಿ, ಹಳ್ಳಿಗಳಿಗೆ ಹೋಗಿತ್ತಿದ್ದರು. ಬೀದಿಗಳಲ್ಲಿ ಅಲೆದಾಡಿ ಏಸು ಕ್ರಿಸ್ತನ ಶ್ಲೋಕಗಳನ್ನು ಹೇಳುತ್ತಿದ್ದು. ಆದರೆ ತಮ್ಮ ಮನೆಗೆ ಹಿಂದಿರುಗಿದಾಗ ದಣಿವು ಹೇಳಹೆಸರಿಲ್ಲ ದಾಗುತ್ತಿತ್ತು. ಅವರ ಹೆಂಡತಿ ಪಾಲಿನ್ ಅವರನ್ನು ಅಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಮಂಗಳೂರಿನ ಸೆಕೆಯೂ ಸಹ ಅವರಿಗೆ ತಂಗಾಳಿಯಾಗುತ್ತಿತ್ತು !

ಕಿಟೆಲ್‌ರ ದಾಂಪತ್ಯ ಜೀವನ ಅಮೃತಮಯ ವಾಗಿದ್ದಿತು. ನಾಲ್ಕು ವರ್ಷಗಳಲ್ಲಿ ಅವರಿಗೆ ಇಬ್ಬರು ಮಕ್ಕಳು ಜನಿಸಿದರು. ಆದರೆ ಪಾಲಿನ್‌ಐತ್ ಆಕಸ್ಮಾತ್ತಾಗಿ ನಿಧನಳಾದಳು.

ಹೆಂಡತಿಯನ್ನು ಕಳೆದುಕೊಂಡ ಮೇಲೆ, ಕಿಟೆಲ್‌ರಿಗೆ ದಿನಗಳು ಬಹುಬಾರವೆನಿಸಿದವು. ದುಃಖದ ಭಾರದಿಂದ ಅವರ ಆರೋಗ್ಯ ಕೆಟ್ಟಿತು. ಫರ್ಡಿನಾಂಡರಿಗೆ ತಮ್ಮ ತಾಯ್ನಾಡಿನ ಸವಿನೆನಪಾಯಿತು. ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ಅವರು ೧೮೬೬ ರಲ್ಲಿ ಸ್ವದೇಶಕ್ಕೆ ಹೋದರು.

ತಮ್ಮ ದೇಶದ ತಂಪಾದ ಹವೆ. ಬೇಗುದಿಗೊಂಡ ಕಿಟೆಲ್‌ರ ಮನಸ್ಸನ್ನು ಶಾಂತಗೊಳಿಸಿತು. ಪ್ರಕೃತಿ ಬೇಗ ಸುಧಾರಿಸಿತು.

ಪಾಲಿನ್ ಐತ್‌ಳ ತಂಗಿ ಅಲ್ಲಿಯೇ ಇದ್ದಳು. ಅವಳ ಹೆಸರು ಜ್ಯೂಲಿ. ಅಕ್ಕನನ್ನು ಕಳೆದುಕೊಂಡ ಅವಳೂ ದುಃಖಿತೆ ಕಿಟೆಲ್‌ರನ್ನು ಮೇಲಿಂದ ಮೇಲೆ ಕಂಡು, ತನ್ನ ಅಕ್ಕನ ನೆನಪು ಮಾಡಿಕೊಂಡಳು. ಜ್ಯೂಲಿ ಅಳುತ್ತ ಮಾತನಾಡುವಾಗ, ಕಿಟೆಲ್‌ರಿಗೆ ಪಾಲಿನಳೇ ತಮ್ಮೆದುರು ಕುಳಿತಂತೆ ಭಾಸವಾಗುತ್ತಿತ್ತು. ಕಿಟೆಲ್‌ರು ಜ್ಯೂಲಿಯನ್ನು ಲಗ್ನವಾದರು; ಹೊಸ ಚೈತನ್ಯವನ್ನು ಪಡೆದರು.

ಸುಮಾರು ಒಂದು ವರುಷ ಫರ್ಡಿನಾಂಡ್ ಕಿಟೆಲ್ ತಮ್ಮ ದೇಶದಲ್ಲಿದ್ದರು. ಆದರೆ ಅವರಿಗೆ ಕನ್ನಡ ನಾಡಿಗೆ ಮರಳಿಹೋಗಬೇಕೆಂಬ ಹಂಬಲವೂ ಉತ್ಕಟವಾಯಿತು. ಅವರ ಆರೋಗ್ಯ ಚೆನ್ನಾಗಿದ್ದಿತು. ಆದ್ದರಿಂದ ೧೮೬೭ರಲ್ಲಿ ಅವರು ಜ್ಯೂಲಿಯೊಡನೆ ಮತ್ತೆ ನಾಡಿಗೆ ಬಂದರು.

ಕನ್ನಡಕ್ಕೆ ಮೀಸಲು

ಕಿಟೆಲ್‌ರಿಗೆ ಕನ್ನಡದ ಅಭ್ಯಾಸವು ಅತ್ಯಂತ ಪ್ರಿಯವಾಗಿದ್ದಿತು. ಧರ್ಮೋಪದೇಶದಷ್ಟೇ ಕನ್ನಡದಲ್ಲಿ ಅವರಿಗೆ ಅಭಿರುಚಿ. ಕನ್ನಡವನ್ನು ಓದುವುದು, ಕನ್ನಡದಲ್ಲಿ ಬರೆಯುವುದು ಅವರಿಗೆ ದಿನನಿತಗಯದ ರೂಢಿ ಯಾಗಿದ್ದಿತು. ಅವರು ಒಬ್ಬ ಅಭ್ಯಾಸಯೋಗಿ.

೧೮೭೨ನೆಯ ವರ್ಷ ಕಿಟೆಲ್‌ರ ಜೀವನದಲ್ಲಿ ಒಂದು ದೃಷ್ಟಿಯಿಂದ ಮಹತ್ವವಾಗಿದೆ. ಕನ್ನಡ ನುಡಿಯ ಸೇವೆಗೆ ಅವರ ಜೀವನ ಮೀಸಲು ಎಂಬುದನ್ನು ಈ ವರ್ಷವು ಸೂಚಿಸುತ್ತದೆ.

೧೮೭೨ರಲ್ಲಿ ‘ಇಂಡಿಯನ್ ಎಂಟೆಕ್ಟೆರಿ’ ಪತ್ರಿಕೆಯಲ್ಲಿ ಅವರ ಲೇಖನ ಪ್ರಕಟವಾಗಿವೆ. ಅವು ಹೆಚ್ಚಾಗಿ ಕನ್ನಡವನ್ನು ಕುರಿತು ಇಂಗ್ಲಿಷಿನಕ್ಕಿ ಬರೆದ ಲೇಖನಗಳಾಗಿದ್ದವು

‘ಶಬ್ದಮಣಿ ದರ್ಪಣ’

ಕೇಶಿರಾಜನ ‘ಶಬ್ದಮಣಿದರ್ಪಣ’ ಕಬ್ಬಿಣದ ಕಡಲೆ. ಕಿಟೆಲ್‌ರು ಸಮರ್ಥ ರೀತಿಯಲ್ಲಿ ಈ ಕಷ್ಟವಾದ ಗ್ರಂಥವನ್ನು ಸಂಪಾದಿಸಿದರು. ೧೮೭೨ರಲ್ಲಿ ಇದನ್ನು ಪ್ರಕಟಿಸಿದರು. ಇದಕ್ಕೂ ಮೊದಲು ಜೆ.ಗ್ಯಾರೆಟ್ ಎಂಬುವರು ‘ಶಬ್ದಮಣಿದರ್ಪಣ’ವನ್ನು ಸಂಪಾದಿಸಿ ೧೮೬೮ ರಲ್ಲಿ ಪ್ರಕಟಿಸಿದ್ದರು. ಆದರೆ ಕಿಟೆಲರ ಸಂಪಾದನೆಯ ರೀತಿಯೇ ಬೇರೆಯಾಯಿತು.

ಕಿಟೆಲ್‌ರಿಗೆ ವ್ಯಾಕರಣ ಹಾಗೂ ಛಂದಸ್ಸು ಪ್ರೀತಿಯ ವಿಷಯಗಳು. ಅವರ ಗ್ರಂಥ ಸಂಪಾದನೆ ಸುವ್ಯವಸ್ಥಿತ ವಾದುವು. ಕೇಶಿರಾಜನ ಜೀವನ, ಕಾಲ ಇವುಗಳ ವಿಚಾರಗಳನ್ನು ಮೊದಲನೆಯ ಸಲ ಪ್ರಸ್ತಾಪಿಸಿದರು. ಈ ಮೊದಲು ಕೇಶಿರಾಜನ ಬಗ್ಗೆ ಯಾರೂ ವಿಶೇಷವಾಗಿ ಬರೆದಿರಲಿಲ್ಲ. ನಿಷ್ಠೂರ ನಂಜಯ್ಯನ ಟೀಕುವನ್ನು ಅವರು ಪ್ರಥಮವಾಗಿ ಪ್ರಕಟಿಸಿದರು. ಕನ್ನಡದಲ್ಲಿ ಮೊದಲಬಾರಿಗೆ ವೈಜ್ಞಾನಿಕ ರೀತಿಯ ಗ್ರಂಥ ಸಂಪಾದನೆಯಾಯಿತು. ಈ ಕ್ಷೇತ್ರಕ್ಕೆ ಕಿಟೆಲ್‌ರೇ ಪಿತಾಮಹರಾದರು. ಸುಮಾರು ಎಂಟು ಹಸ್ತಪ್ರತಿಗಳನ್ನು ಅವರು ತಮ್ಮ ಕಾರ್ಯಕ್ಕೆ ಉಪಯೋಗಿಸಿ ಕೊಂಡರು.

ನಿಘಂಟಿನ ಯೋಜನೆ

೧೮೭೨ ರಲ್ಲಿ ಕೋಶದ ರೂಪರೇಷೆ ಪ್ರಾರಂಭ ವಾಯಿತು. ಬ್ರಿಟಿಷ್ ಸರಕಾರವು ಕನ್ನಡದಲ್ಲಿ ಒಂದು ನಿಘಂಟನ್ನು ಪ್ರಕಟಿಸಬೇಕೆಂದು ನಿರ್ಧರಿಸಿತು. ಪಾಶ್ಚಿಮಾತ್ಯ ದೇಶಗಳಿಂದ ಬಂದವರಿಗೆ ಇಂಥ ನಿಘಂಟು ಅವಶ್ಯವಾಗಿ ಬೇಕಾಗಿತ್ತು. ಆಗ ಬ್ರಿಟಿಷ್ ಸರಕಾರವು ಫರ್ಡಿನಾಂಡ್ ಕಿಟೆಲ್‌ರಿಗೆ ಈ ಹೊಣೆಯನ್ನು ವಹಿಸಲು ಯೋಚಿಸಿತು. ಮುಖ್ಯವಾಗಿ ಮಿಷನರಿ ಕೆಲಸಕ್ಕಾಗಿ ಕಿಟೆಲ್‌ರು ಭಾರತಕ್ಕೆ ಬಂದಿದ್ದರು. ನಿಘಂಟಿನ ಕೆಲಸಕ್ಕೆ ಕೈಹಾಕಿದರೆ, ಅದೊಂದು ಮಹಾಕಾರ್ಯ. ಇನ್ನುಳಿದ ಕೆಲಸಗಳು ಸಾಧ್ಯವಿರಲಿಲ್ಲ. ಅದಕ್ಕಾಗಿ ಕಿಟೆಲ್‌ರು ಬಹಳ ಚಿಂತಿಸಿದರು.

ಆಗ ಸರಕಾರಿ ಅಧಿಕಾರಿ ಸರ್ ವಾಲ್ಟರ್ ಎಲಿಯಟ್ ಬಹಳ ಪ್ರೋತ್ಸಾಹಿಸಿದರು. ಎಲಿಯಟ್‌ರನ್ನು ಕಿತ್ತೂರ ಚೆನ್ನಮ್ಮ ರಾಣಿ ಯುದ್ಧದಲ್ಲಿ ಸೆರೆಹಿಡಿದಿದ್ದಳು. ಬಿಡುಗಡೆಯಾದ ಮೇಲೆ ಇವರು ಧಾರವಾಡದ ಅಸಿಸ್ಟೆಂಟ್ ಕಲೆಕ್ಟರರಾದರು. ಅನೇಕ ಕನ್ನಡ ಶಾಸನಗಳನ್ನು ಸಂಗ್ರಹಿಸಿದರು. ಶೈಕ್ಷಣಿಕ ಪುಸ್ತಕಗಳನ್ನು ರಚಿಸಿದರು. ಫರ್ಡಿನಾಂಡ್ ಕಿಟೆಲ್‌ರಿಗೆ ಎಲಿಯಟ್‌ರು, ‘ಬೇಕಾದರೆ ಮಿಷನರಿ ಕೆಲಸವನ್ನು ಬಿಡಬಹುದು; ಸರಕಾರದ ಕೆಲಸಕ್ಕೆ ಸಂಪೂರ್ಣವಾಗಿ ನಿಲ್ಲಬಹುದು’ಎಂದು ಹೇಳಿದರು. ಅಷ್ಟರಲ್ಲಿ ಬಾಸೆಲ್‌ದ ಹೋಮ್ ಬೋರ್ಡ್‌ದಿಂದ ಕಿಟೆಲ್‌ರಿಗೆ ಪತ್ರವೊಂದು ಬಂದಿತು. ಅಲ್ಲಿಯ ಅಧಿಕಾರಿಗಳು ಕಿಟೆಲ್‌ರಿಗೆ ಶಬ್ದಕೋಶದ ಕಾರ್ಯಕ್ಕಾಗಿ ತಮ್ಮ ಒಪ್ಪಿಗೆ ಸೂಚಿಸಿದ್ದರು. ಎಲ್ಲರೂ ಕಿಟೆಲ್‌ರೊಡನೆ ಸಹಕರಿಸಿದರು. ಫರ್ಡಿನಾಂಡ್ ಕಿಟೆಲ್‌ರು ಮಿಷನರಿ ಕಾರ್ಯವನ್ನು ಬಿಡಲಿಲ್ಲ; ಆದರೆ ಜೊತೆಗೇ ನಿಘಂಟು ರಚನೆ ಕೆಲಸಕ್ಕೆ ಕೈಹಾಕಿದರು. ಇದೆಲ್ಲವೂ ನಡೆದದ್ದು ೧೮೭೨ರಲ್ಲಿ ಎಲ್ಲದಕ್ಕೂ ಕಿಟೆಲ್‌ರು ಬಹಳ ಶ್ರಮಿಸಬೇಕಾಯಿತು.

ಧಾರ್ಮಿಕ ಶಿಕ್ಷಣಕ್ಕೂ ಕನ್ನಡ

ಕಿಟೆಲ್‌ರು ಯಾವ ಊರಿಗೇ ಹೋಗಲಿ, ಯಾವ ಹಳ್ಳಿಗೆ ಹೋಗಲಿ ಕನ್ನಡ ಆಡುನುಡಿಯನ್ನು ನಿರೀಕ್ಷಿಸುತ್ತಿದ್ದರು. ನುಡಿಯ ಸೊಗಸನ್ನು ಮೆಚ್ಚಿ ಕೊಳ್ಳುತ್ತಿದ್ದರು. ಅವರಾಡುವ ಗಾದೆಯ ಮಾತುಗಳನ್ನು ಬರೆದುಕೊಳ್ಳುತ್ತಿದ್ದರು. ದುಂದುಮ ಹಾಡುಗಳನ್ನು, ಭಕ್ತಿಗೀತೆಗಳನ್ನು ಕೆಳಿ ಸಂತೋಷಪಡುತ್ತಿದ್ದರು.

ಒಮ್ಮೆ ಮಂಗಳೂರಲ್ಲಿ ಬೆಳಿಗ್ಗೆ ಫರ್ಡಿನಾಂಡರು ಹೊರಟಿದ್ದರು. ಅವರಿಗೆ ಒಮ್ಮೆಲೆ ಸುಶ್ರಾವ್ಯ ಸಂಗೀತ ಕೇಳಿಸಿತು. ಹಲವು ಜನರು ಕೂಡಿಕೊಂಡು ಸಾಗಿದ್ದರು. ಎಲ್ಲರೂ ಕೂಡಿ ಮಧುರವಾಗಿ ಹಾಡುತ್ತಿದ್ದರು. ಕೆಲವರು ತಂಬೂರಿ ಬಾರಿಸುತ್ತಿದ್ದರು; ಕೆಲವರು ತಾಳಗಳನ್ನು ತಟ್ಟುತ್ತಿದ್ದರು; ಹಲವರು ಗೆಜ್ಜೆಗಳ ಧ್ವನಿ ಮಾಡುತ್ತಿದ್ದರು. ಹಾರ್ಮೊನಿಯಂ ಧ್ವನಿಯ ಹಿನ್ನೆಲೆಯಿದ್ದಿತು. ಫರ್ಡಿನಾಂಡ್ ವಿಸ್ಮಯದಿಂದ ಚಕಿತರಾದರು. ಎಲ್ಲವನ್ನೂ ನಿಂತಲ್ಲಿಯೇ ನಿಂತು ನೋಡಿದರು. ಭಕ್ತಿಯಿಂದ ಹಾಡು ಹೇಳುತ್ತ ಆ ಜನರೆಲ್ಲ ಮುಂದೆ ಹೋದರು. ಅದೊಂದು ಸಂಕೀರ್ತನೆ ಅಂದು ಮನೆಗೆ ಬಂದರೂ, ಆ ಸಂಗೀತ ಫರ್ಡಿನಾಂಡರಿಗೆ ಗುಂಗು ಹಿಡಿಸಿತು.

ಕೂಡಲೇ ತಮ್ಮ ವಿಚಾರಗಳನ್ನು ಮಂಗಳೂರಿನ ಮಿಷನರಿಗಳಿಗೆ ತಿಳಿಸಿದರು. ‘ಭಾರತೀಯ ಸಂಗೀತದಲ್ಲಿಯೇ ಬೈಬಲ್‌ನ ಹಾಡುಗಳಿರಬೇಕು; ಸಂಕೀರ್ತನದಂತೆ ನಾವೂ ಮೆರವಣಿಗೆಯಲ್ಲಿ ಸಾಗಬೇಕು. ಫರ್ಡಿನಾಂಡರು ಈ ಎಲ್ಲ ಮಾತುಗಳನ್ನು ೧೮೭೦ ರಲ್ಲಿಯೇ ವಿವರಿಸಿದರು.

ಆದರೆ ಕಿಟೆಲ್‌ರ ಈ ವಿಚಾರಗಳು ಆಗಿನ ಮಿಷನರಿಗಳಿಗೆ ಸೇರಲಿಲ್ಲ. ಅವರು ತಮ್ಮ ಪದ್ಧತಿಯನ್ನು ಬಿಡಲು ಒಪ್ಪಲಿಲ್ಲ. ಕಿಟೆಲ್‌ರು ಮಾತ್ರ ಪ್ರಾರ್ಥನೆಗಳನ್ನು, ಕ್ರಿಸ್ತ ಚರಿತ್ರೆಯನ್ನು ಭಾರತೀಯ ರೀತಿಯಲ್ಲಿಯೇ ರಚಿಸಿದರು, ಭಾಮಿನಿ ಷಟ್ಪದಿಯಲ್ಲಿ ಬರೆದರು.

ಮತಪ್ರಸಾರ ಹಾಗೂ ಕನ್ನಡದ ಅಧ್ಯಯನ ಎರಡೂ ಕಿಟೆಲ್‌ರಲ್ಲಿ ಗಂಗೆ-ಯಮುನೆಯರು. ಅವೆರಡೂ ಅವರಲ್ಲಿ ಜೊತೆಯಾಗಿಯೇ ಸಾಗಿದ್ದವು. ಎಪಿಗ್ರಾಫಿಕಾ ಇಂಡಿಕಾ, ಇಂಡಿಯನ್ ಆಂಟಿಕ್ವೆರಿ ಈ ಪತ್ರಿಕೆಗಳಿಗೆ ಅವರು ತಮ್ಮ ಸಂಶೋಧನೆಯ ಲೇಖನಗಳನ್ನು ಕಳಿಸಿಕೊಡುತ್ತಿದ್ದರು. ಸಂಶೋಧನೆ, ಸಂಪಾದನೆಗಳಲ್ಲಿ ಫರ್ಡಿನಾಂಡರು ಸಾಕಷ್ಟು ಪ್ರಗತಿಯನ್ನು ಪಡೆದರು.

ಛಂದೋಂಬುಧಿ

ನಾಗವರ್ಮನ ‘ಛಂದೋಂಬುಧಿ’ಯನ್ನು ಕಿಟೆಲ್‌ರು ಸಂಪಾದಿಸಿ ೧೮೭೫ ರಲ್ಲಿ ಪ್ರಕಟಿಸಿದರು. ಕಿಟೆಲ್‌ರ ಈ ಗ್ರಂಥವು ಅತ್ಯಂತ ಮಹತ್ವದ್ದು. ಮೊದಲನೆಯ ಸಲ ನಾಗವರ್ಮನ ಕೃತಿ ಬೆಳಕು ಕಂಡದ್ದು ಕಿಟೆಲ್‌ರಿಂದ. ಕಿಟೆಲ್‌ರು ಸುಮಾರು ೧೪ ಹಸ್ತ ಪ್ರತಿಗಳ ನೆರವಿನಿಂದ ಛಂದೋಂಬುಧಿಯನ್ನು ಸಂಪಾದಿಸಿದರು. ಗದಗ, ಧಾರವಾಡ, ಮೈಸೂರು, ಕೊಡಗು, ಮಡಿಕೇರಿ ಹೀಗೆ ವಿವಿಧ ಊರುಗಳಲ್ಲಿ ಅವರು ಹಸ್ತಪ್ರತಿ ಸಂಗ್ರಹಿಸಿದರು. ಇದರಲ್ಲಿ ಅವರಿಗೆ ಬಿ.ಎಲ್ ರೈಸ್ ಹಾಗೂ ತಿರುಮಲೆ ಶಾಮಣ್ಣನವರ ನೆರವು ದೊರಕಿತು. ವೈಜ್ಞಾನಿಕ ದೃಷ್ಟಿಯಿಂದಲೇ ಈ ಶಾಸ್ತ್ರೀಯ ಗ್ರಂಥವನ್ನು ಸಂಪಾದಿಸಿದರು. ಈ ಗ್ರಂಥಕ್ಕೆ ಇಂಗ್ಲೀಷಿನಲ್ಲಿ ಮುನ್ನುಡಿ ಬರೆದರು. ಅದರಲ್ಲಿ ನಾಗವರ್ಮನ ಕಾಲ ಇತ್ಯಾದಿ ವಿಚಾರಣೆಗಳಿವೆ. ಅಲ್ಲದೆಯೇ ಛಂದಸ್ಸಿನ ಇತಿಹಾಸವೂ ಇದೆ. ಅಭ್ಯಾಸಿಗಳಿಗೆ ಈ ಲೇಖನ ಅತ್ಯಂತ ಉಪಯುಕ್ಕತವಾಗಿದೆ. ಇದರ ಜೊತೆಗೆ ಅವರು ಕನ್ನಡ ಸಾಹಿತ್ಯವನ್ನು ಕುರಿತು ಒಂದು ಪ್ರಬಂಧವನ್ನು ಪ್ರಕಟಿಸಿದರು. ಹತ್ತೊಂಬತ್ತನೆಯ ಶತಮಾನದವರೆಗಿನ ಕನ್ನಡ ಸಾಹಿತ್ಯದ ಸ್ಥೂಲ ಪರಿಚಯ ಇದರಲ್ಲಿದೆ. ಕಿಟೆಲೆರ ಈ ಲೇಖನದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ವಿಹಂಗಮ ನೋಟವಿದೆ. ವಿಚಾರಿಸಬೇಕಾದ ಅನೇಕ ಅಂಶಗಳು ಈ ಲೇಖನದಲ್ಲಿವೆ.

ಹಳೆಗನ್ನಡ ಗ್ರಂಥಗಳ ಸಂಪಾದನೆಯಾಗಿರಲಿಲ್ಲ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಬರೆದಿರಲಿಲ್ಲ. ಅಂಥ ಕಾಲದಲ್ಲಿ ಪ್ರಕಟವಾದ ಕಿಟೆಲ್‌ರ ಈ ಗ್ರಂಥಗಳಿಗೆ ವಿಶೇಷ ಮಹತ್ವವಿದೆ. ಪ್ರಥಮ ಪ್ರಯತ್ನವಿರುವುದರಿಂದ ದೋಷಗಳು ಸ್ವಾಭಾವಿಕ. ಫರ್ಡಿನಾಂಡ್‌ಕಿಟೆಲ್‌ರಿಗೆ ಇದು ಗೊತ್ತಿತ್ತು. ಅವರು ಬಹಳ ನಮ್ರಸ್ವಭಾವದವರು. ‘ಕನ್ನಡ ಸಾಹಿತ್ಯ ಚರಿತ್ರೆ ಬರೆಯುವಲ್ಲಿ ಇದು ನನ್ನದೊಂದು ಅಲ್ಪ ಸೇವೆ’ ಎಂದು ಹೇಳಿರುವರು. ತಮ್ಮ ದೋಷಗಳನ್ನು ಕ್ಷಮಿಸಲು ಕೇಳಿಕೊಂಡಿರುವರು. ಕನ್ನಡದ ಬಗ್ಗೆ ಕಿಟೆಲ್ ವಿಶೇಷ ಅಭಿಮಾನಿಗಳು. ‘ದಕ್ಷಿಣ ಭಾರತದ ಯಾವುದೇ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಸರಿಸಮನಾಗಿ ನಿಲ್ಲಬಲ್ಲದು’ ಎಂದು ಅಧಿಕಾರಿವಾಣಿಯಿಂದ ಹೇಳಿರುವರು.

ಇಂಥ ಲೇಖನಗಳನ್ನು ಇಂಗ್ಲಿಷಿನಲ್ಲಿ ಬರೆದರು. ಸಂಪಾದಿತ ಗ್ರಂಥಗಳಲ್ಲಿ ಇಂಗ್ಲಿಷ್ ಟಿಪ್ಪಣಿ ಕೊಟ್ಟರು. ಇದರಿಂದ ಕನ್ನಡ ವಿಶ್ವಮಾನ್ಯತೆ ಪಡೆಯುವಂತಾಯಿತು. ಆ ಶ್ರೇಯಸ್ಸು ಫರ್ಡಿನಾಡ್‌ಕಿಟೆಲ್‌ರಿಗೆ ಅವರಂಥ ಮಿಷನರಿಗಳಿಗೆ ಸಲ್ಲುತ್ತದೆ.

‘ಧರ್ಮ ಜಾಗೃತಿಗೆಂದು ಬಯಸಿ ಬಂದಿಹ ಧ್ಯೇಯ ಕನ್ನಡದ ಸೇವೆಯಲಿ ಧನ್ಯವಾಯು’

ಎಂದು ಕಿಟೆಲ್‌ರನ್ನು ಕುರಿತು ಬರೆದ ನುಡಿ ಸತ್ಯವಾದುದು.

ನಿಘಂಟಿನ ಕೆಲಸ ಪ್ರಾರಂಭ

೧೮೭೨ ರಲ್ಲಿಯೇ ಫರ್ಡಿನಾಂಡ್‌ಕಿಟೆಲ್‌ರು ಕನ್ನಡ ನಿಘಂಟಿನ ಕೆಲಸಕ್ಕೆ ಸಮ್ಮತಿಸಿದರು. ಅದರ ರೂಪು ರೇಷೆಯನ್ನು ಯೋಜಿಸಿದರು. ಆದರೆ ಸಾವಿರಾರು ವರ್ಷಗಳ ಚರಿತ್ರೆಯ ಕನ್ನಡದಲ್ಲಿ ಅಸಂಖ್ಯ ಶಬ್ದಗಳಿದ್ದವು. ಅವೆಲ್ಲವುಗಳನ್ನು ಸಂಗ್ರಹಿಸುವುದು, ಅವುಗಳ ವಿವಿಧ ಅರ್ಥಗಳನ್ನು ಕಂಡು ಹಿಡಿಯುವುದು, ಅವುಗಳ ವಿವಿಧ ಅರ್ಥಗಳನ್ನು ಕಂಡು ಹಿಡಿಯುವುದು ಬೃಹತ್ ಕಾರ್ಯವಿದ್ದಿತು. ಆ ಕಾರ್ಯವು ವಿಪರೀತ ಗಡುಚಾಗಿತ್ತು.

ಇದಕ್ಕೂ ಮೊದಲು ರೆವೆರೆಂಡ್ ವಿಲಿಯಂ ರೀವ್ ಅವರು ‘ಕರ್ನಾಟಕ  ಇಂಗ್ಲಿಷ್’ ಶಬ್ದಕೋಶವನ್ನು ೧೮೨೪ ರಲ್ಲಿ ಪ್ರಕಟಿಸಿದ್ದರು. ಅದರಲ್ಲಿ ಹಲವು ದೋಷಗಳಿದ್ದವು; ಆದರೂ ಫರ್ಡಿನಾಂಡ್‌ಕಿಟೆಲ್‌ರಿಗೆ ಈ ಗ್ರಂಥ ಉಪಯೋಗವಾಯಿತು. ಎಫ್. ಝಿಗ್ಲರ್ ಬಾಸೆಲ್ ಮಿಷನಿನ ಮಿಷನರಿ. ಅವರು ೧೮೬೮ ರಿಂದ ಧಾರವಾಡದಲ್ಲಿಯೇ ನೆಲೆಸಿದ್ದರು ಅವರ ಶಬ್ದಕೋಶವನ್ನು ಅವರು ಸಿದ್ಧಪಡಿಸುತ್ತಿದ್ದರು ಅವರ ಶಬ್ದಕೋಶ ೧೮೭೬ ರಲ್ಲಿ ಪ್ರಕಟವಾಯಿತು. ಇದರ ನೆರವನ್ನು ಫರ್ಡಿನಾಂಡ್ ಕಿಟೆಲ್‌ರು ಪಡೆದರು. ಇವಲ್ಲದೆ ದ್ರಾವಿಡಭಾಷೆಗಳ ನಿಘಂಟುಗಳನ್ನು, ಅಮರಕೋಶಗಳನ್ನು, ಹಸ್ತಪ್ರತಿಗಳನ್ನು ಅವರು ಅಪಾರವಾಗಿ ಸಂಗ್ರಹಿಸಿದರು.

ನಿಘಂಟಿನ ಕೆಲಸವನ್ನು ನಿಷ್ಠೆಯಿಂದ ಫರ್ಡಿನಾಂಡ್‌ಕಿಟೆಲ್‌ರು ಸಾಗಿಸಿದರು. ಅವರಿಗೆ ಕೈತುಂಬ ಕೆಲಸ. ನಿದ್ರೆಯ ಪರಿವೆಯೇ ಇಲ್ಲದೆ ದುಡಿದರು. ಧಾರವಾಡ, ಮಂಗಳೂರು ಹವೆ ತಡೆಯದಂತಾಗಲು, ಮಡಿಕೇರಿಯಲ್ಲಿಯೂ ಕೆಲವು ದಿವಸ ನೆಲೆಸಿದರು.

ಮತ್ತೆ ಯೂರೋಪಿಗೆ

ಆದರೂ ದೇಹಕ್ಕೆ ವಿಪರೀತ ದಣಿವಾಯಿತು. ಅವರ ಆರೋಗ್ಯವೂ ಕೆಡಹತ್ತಿತು. ಡಾಕ್ಟರರ ಔಷದೋಪಚಾರವೂ ನೆಡಯಿತು. ಜ್ಯೂಲಿಗೆ ಚಿಂತೆ ಯುಂಟಾಯಿತು. ಕೆಲಸದ ಭಾರದಿಂ ಕಿಟೆಲ್‌ರು ಎಲ್ಲಿ ಕುಸಿಯುವರೋ ಎಂಬ ಭಯವುಂಟಾಯಿತು.

ಕಿಟೆಲ್ ಹಾಸಿಗೆಯ ಮೇಲೆ ಮಲಗಿದ್ದರು. ಮೇಜಿನ ಮೇಲೆ ಅನೇಕ ಗ್ರಂಥಗಳು ಹರಡಿದ್ದವು.ಅವರ ಸಮೀಪ ಶಬ್ದಗಳ ಟಿಪ್ಪಣಿಯ ಕಾಗದಗಳು ಬಿದ್ದಿದ್ದವು. ಅವುಗಳನ್ನೆಲ್ಲ ಅವರು ನಿರೀಕ್ಷಿಸಿದರು. ಒಮ್ಮಲೇ ನಿಟ್ಟುಸಿರು ಬಿಟ್ಟರು. ನಿಘಂಟಿನ ಕೆಲಸ ಎಲ್ಲಿ ಅರ್ಧಕ್ಕೆ ನಿಲ್ಲುವುದೋ ಎಂಬ ಹೆದರಿಕೆಯುಂಟಾಯಿತು.

“ಜ್ಯೂಲಿ” ಕಿಟೆಲ್ ತಮ್ಮ ಹೆಂಡತಿಯನ್ನು ಕೂಗಿದರು. ಭಯದಿಂದಲೇ ಅವಳು ಕೋಣೆಯೊಳಗೆ ಓಡಿಬಂದಳು. ‘ನೀವು ಚೆನ್ನಾಗಿದ್ದೀರಲ್ಲ?’ ಅವರ ಕೈಹಿಡಿದು ಕೇಳಿದಳು. ಅವರು ಸುಖವಾಗಿ ಇದ್ದುದನ್ನು ಕಂಡು ಜ್ಯೂಲಿ ಧೆರ್ಯತೆಗೆದುಕೊಂಡಳು.

ಕಿಟೆಲ್ ತಮ್ಮ ಆರೋಗ್ಯ ಸುಧಾರಣೆಗೆ ಸ್ವದೇಶಕ್ಕೆ ಹೋಗುವ ಇಚ್ಛೆಯನ್ನು ನುಡಿದರು. ಜ್ಯೂಲಿಗೂ ಅದೇ ಬೇಕಾಗಿತ್ತು. ಜರ್ಮನಿಯನ್ನು ಬಿಟ್ಟು ಅವಳು ಹತ್ತುವರ್ಷಗಳಾಗಿದ್ದವು ಅವಳಿಗೂ ತನ್ನ ದೇಶಕ್ಕೆ ಹೋಗುವ ತವಕ!

೧೮೭೭ರಲ್ಲಿ ಕಿಟೆಲ್ ಜರ್ಮನಿಗೆ ಹೋದರು. ಎಸ್ಟಿಂಗನ್ ಎಂಬಲ್ಲಿ ಅವರು ನೆಲೆಸಿದರು. ಅಲ್ಲಿ ತಂಪಾದ ಆರೋಗ್ಯಕರವಾದ ಹವೆಯಿದ್ದಿತು. ಅವರು ಬಹುಬೇಗ ಗುಣಮುಖರಾದರು. ಎಸ್ಟಿಂಗನ್‌ದಲ್ಲಿಯೇ ಇದ್ದುಕೊಂಡು ಅವರು ಶಬ್ದ ಕೋಶದ ಕರಡು ಪ್ರತಿ ಸಿದ್ಧಪಡಿಸಿದರು. ಅದು ಪ್ರಥಮ ಕರಡು ಪ್ರತಿ. ಕನ್ನಡನಾಡಿನಿಂದ ಜರ್ಮನಿಗೆ ತೆಗೆದುಕೊಂಡು ಹೋದ ಎಲ್ಲ ಟಿಪ್ಪಣಿಗಳನ್ನು ಅವರು ಉಪಯೋಗಿಸಿದರು. ಈ ಕರಡು ಪ್ರತಿ ಸಿದ್ಧಪಡಿಸಲು ಅವರಿಗೆ ಐದು ವರುಷಗಳು ಹಿಡಿದವು.

‘ಶಬ್ದಕೋಶ’ ದಂತಹ ಮಹತ್ವವಾದ ಕಾರ್ಯ. ಅದಕ್ಕೆ ಪರಿಪೂರ್ಣತೆ ಬರಬೇಕು. ಹಾಗಾಗಬೇಕಾದರೆ ಕನ್ನಡಿಗರ ಜೊತೆ ಇನ್ನು ಚರ್ಚೆ ಮಾಡಬೇಕು. ಸಮುದ್ರಾಚೆ ಸಾವಿರಾರು ಮೈಲು ದೂರದಲ್ಲಿ ಕನ್ನಡಿಗರು, ನಾನು ಜರ್ಮನಿಯಲ್ಲಿ. ಇದು ಹೇಗೆ ಸಾಧ್ಯ? ಫರ್ಡಿನಾಂಡ್ ಕಿಟೆಲ್‌ರು ಏನೇನೋ ಯೋಚಿಸಿದರು.

ಮತ್ತೆ ಕನ್ನಡ ನಾಡಿನಲ್ಲಿ

ಅವರು ಮತ್ತೆ ಕನ್ನಡನಾಡಿಗೆ ಬಂದರು. ೧೮೮೩ ರಲ್ಲಿ ಧಾರವಾಡದಲ್ಲಿ ನೆಲೆಸಿದರು. ನಿಘಂಟಿನ ಕೆಲಸ ಒಬ್ಬರಿಂದಲೇ ಸಾಧ್ಯವಿಲ್ಲವೆಂಬುದು ಅವರಿಗೆ ಗೊತ್ತು. ಬರಿ ಗ್ರಂಥಗಳ ಸಹಾಯವು ಸಾಲದು. ಆದ್ದರಿಂದ ಅವರು ಹಲವಾರು ಜನರ ನೆರವನ್ನು ಕೋರಿದರು. ಕನ್ನಡನಾಡ ತುಂಬ ಸುತ್ತಾಡಿದರು.

ಕನ್ನಡವನ್ನು ಬಲ್ಲ ವಿದ್ವಾಂಸರನ್ನು ಅವರು ಕಂಡರು. ಆದರೆ ಅವರಿಗೆ ಬೇರೆ ಬೇರೆ ಕಸುಬುಗಳಿಗೆ ಸಂಬಂಧಪಟ್ಟ ಶಬ್ದಗಳು ಬೇಕಾಗಿದ್ದವು. ಕೃಷಿಕರು, ವ್ಯಾಪಾರಗಾರರು, ಕಮ್ಮಾರರು, ಬೆಸ್ತರು-ಹೀಗೆ ಬೇರೆ ಬೇರೆ ವೃತ್ತಿಯವರು ತಮ್ಮ ವೃತ್ತಿಗೆ ಸಂಬಂಧಿಸಿದಂತೆ ಬಳಸುವ ಪದಗಳನ್ನು ಸಂಗ್ರಹಿಸ ಬೇಕಾಗಿತ್ತು. ಅದಕ್ಕಾಗಿ ವ್ಯವಸಾಯದಲ್ಲಿದ್ದವರ ಕೂಡ ಮಾತನಾಡಿದರು. ವ್ಯಾಪಾರಸ್ಥರನ್ನು ಕರೆಯಿಸಿಕೊಂಡು ಕೇಳಿದರು. ರೋಗರುಜಿನಗಳನ್ನು ಕುರಿತು ವೈದ್ಯರನ್ನು ವಿಚಾರಿಸಿದರು.

ಹುಬ್ಬಳ್ಳಿ, ಧಾರವಾಡಗಳಲ್ಲಿ ಸಂತೆಯ ದಿನ ಹಳ್ಳಿಯ ಜನರ ಬೆನ್ನುಹತ್ತಿ ಕಿಟೆಲ್ ಹೋಗುತಿದ್ದರು. ನಾಲ್ಕೈದು ಮೈಲುಗಳವರೆಗೂ ಅವರ ಜೊತೆಗೆ ಪ್ರವಾಸ. ಅವರ ಕೂಡ ಮಾತನಾಡಿ ಅನೇಕ ಶಬ್ದಗಳನ್ನು ಸಂಗ್ರಹಿಸುತ್ತಿದ್ದರು.

ಹುಬ್ಬಳ್ಳಿಯ ವಸ್ತ್ರದ ಶಿವಲಿಂಗಪ್ಪನವರು ಕಿಟೆಲ್‌ರಿಗೆ ಕನ್ನಡದಲ್ಲಿ ರೂಢಿಯಲ್ಲಿರುವ ನೂರಾರು ಶಬ್ದಗಳನ್ನು ತಿಳಿಸಿಕೊಟ್ಟರು. ಕಿಟೆಲ್‌ರು ಅವರ ಉಪಕಾರವನ್ನು ಬಹಳವಾಗಿ ಸ್ಮರಿಸಿದರು. ಧಾರವಾಡದಲ್ಲಿ ಬಾಸೆಲ್ ಮಿಷನ್ ಹೈಸ್ಕೂಲಿನ ಮುಖ್ಯಾಧ್ಯಾಪಕರು ಆಗ ಎಫ್. ಝಿಗ್ಲರ್ ಅವರಿದ್ದರು. ಅವರು ನುರಿತ ಶಿಕ್ಷಕರು. ಸಸ್ಯಶಾಸ್ತ್ರದ ಬಗ್ಗೆ ಕನ್ನಡದಲ್ಲಿ ಅನೇಕ ಶಬ್ದಗಳನ್ನು ಸಂಗ್ರಹಿದ್ದರು. ಅವೆಲ್ಲವುಗಳನ್ನು ಒದಗಿಸಿದರು.

ಕಷ್ಟದ ದಾರಿ ಸವೆಸಿದರು

ಕಿಟೆಲ್‌ರ ನೀಳವಾದ ನಿಲುವಂಗಿಯಲ್ಲಿಯ ಜೇಬುಗಳು ವಸ್ತು ಸಂಗ್ರಹಾಲಯಗಳೇ ಆದವು. ತಮ್ಮ ದೇಶದಿಂದ ತಂದ ಹಲಕೆಲವು ವಸ್ತುಗಳನ್ನು ಪ್ರತಿದಿನ ತಮ್ಮ ಜೇಬುಗಳಲ್ಲಿ ತುಂಬಿಕೊಳ್ಳುತ್ತಿದ್ದರು. ಭೆಟ್ಟಿಯಾದವರನ್ನು ಅವುಗಳ ಬಗ್ಗೆ ಕೇಳುತ್ತಿದ್ದರು.

ಫರ್ಡಿನಾಂಡ್‌ಕಿಟೆಲ್‌ರು ಕನ್ನಡ ನಿಘಂಟಿಗಾಗಿ ಪಟ್ಟ ಶ್ರಮ ಒಂದೇ ಎರಡೇ? ತಮ್ಮ ಮೇರುಕೃತಿ ಶ್ರೇಷ್ಠವಾಗಬೇಕೆಂದು ಅತ್ಯಂತ ಶ್ರದ್ಧೆಯಿಂದ ದುಡಿದರು.

ಪ್ರತಿಯೊಂದು ಶಬ್ದದ ಅರ್ಥವನ್ನು ಕೊಡಲು ತಮ್ಮದೊಂದು ವೈಜ್ಞಾನಿಕ ಪದ್ಧತಿಯನ್ನು ರೂಪಿಸಿಕೊಂಡರು. ಮೊದಲು ಕನ್ನಡಪದ. ಅದನ್ನೇ ರೋಮನ್ ಲಿಪಿಯಲ್ಲಿ ಬರೆದರು. ಕನ್ನಡ ಲಿಪಿ ಗೊತ್ತಿಲ್ಲದವರಿಗೆ ಇದು ಅನುಕೂಲವಾಯಿತು. ಸಂಸ್ಕೃತ ಅಥವಾ ತದ್ಭವ ಶಬ್ದ ತೋರಿಸಿದರು. ಅದಕ್ಕೆ ಸೂತ್ರದ ಆಧಾರ ಕೊಟ್ಟರು. ದ್ರಾವಿಡ ಭಾಷೆಗಳಲ್ಲಿಯ ಉಳಿದ ಶಬ್ದ ರೂಪಗಳನ್ನು ಕಾಣಿಸಿದರು. ಗ್ರಂಥದಲ್ಲಿ ಆ ಪದವು ಉಪಯೋಗವಾಗಿರುವ ವಾಕ್ಯಗಳನ್ನು ಬರೆದರು. ಕೊನೆಗೆ ಆ ಶಬ್ದಗಳನ್ನು ಬಳಸಿದ ಗಾದೆಯ ಮಾತುಗಳಿದ್ದರೆ, ಅವುಗಳನ್ನು ಎತ್ತಿ ತೋರಿಸಿದರು. ಪ್ರತಿಯೊಂದು ಶಬ್ದಕ್ಕೆ ಇಂಗ್ಲಿಷ್ ಅರ್ಥವನ್ನು ಕೊಡುವುದಂತೂ ಸರಿಯೇ.

ಇದೇ ರೀತಿಯಾಗಿ ಕಿಟೆಲ್‌ರು ಸುಮಾರು ೭೦,೦೦೦ ಶಬ್ದಗಳ ವಿವರಣೆ ನೀಡಿದರು. ಹಸ್ತ ಪ್ರತಿಯನ್ನು ಚೆನ್ನಾಗಿ ಪರಿಶೀಲಿಸಿದರು. ೧೮೯೨ರಲ್ಲಿ ನಿಘಂಟಿನ ಹಸ್ತ ಪ್ರತಿ ಸಿದ್ಧವಾಯಿತು. ೧೮೭೨ರಲ್ಲಿ ಕೈಗೊಂಡ ಈ ಕೆಲಸವು ಕೈಗೂಡಬೇಕಾದರೆ ಇಪ್ಪತ್ತು ವರ್ಷಗಳು ಹಿಡಿದವು ಅದೂ ಫರ್ಡಿನಾಂಡ್ ಕಿಟೆಲ್ ಅವರಂಥ ಮಹಾ ಮುತ್ಸದ್ದಿ ಇದ್ದರೆಂದೇ ಇದು ಶಕ್ಯವಾಯಿತು. ಅವರದು ಕನ್ನಡದಲ್ಲಿ ಪರಿಪಕ್ವವಾದ ವಿದ್ವತ್ತು.

ಶಾಸ್ತ್ರೀಯ ರೀತಿಯಲ್ಲಿ ನಿಘಂಟು ಸಿದ್ಧವಾಯಿತು. ಆದರೆ ಅದನ್ನು ಸರಿಯಾಗಿ ಮುದ್ರಿಸುವುದೂ ಮಹಾ ಸಾಹಸವೇ. ಈ ಮೊದಲು ಕಿಟೆಲ್‌ರ ಗ್ರಂಥಗಳು ಮಂಗಳೂರಿನ ಬಾಸೆಲ್ ಮಿಷನ್ ಮುದ್ರಣಾಲಯದಲ್ಲಿಯೇ ಪ್ರಕಟವಾಗಿದ್ದವು. ಕಿಟೆಲ್‌ರು ಅದೇ ಮುದ್ರಣಾಲಯಕ್ಕೆ ನಿಘಂಟನ್ನು ಮುದ್ರಿಸುವ ಹೊಣೆಯನ್ನು ಒಪ್ಪಿಸಿದರು.

ಶ್ರಮದ ಬೆಲೆ

ಇದೇ ಸಮಯಕ್ಕೆ ಕಿಟೆಲ್‌ರ ಆರೋಗ್ಯ ಮತ್ತೂ ಕೆಟ್ಟಿತು. ಸತತ ಶ್ರಮದಿಂದ ದೇದಲ್ಲಿ ದೌರ್ಬಲ್ಯ ವುಂಟಾಯಿತು. ಅನೇಕ ಗ್ರಂಥಗಳನ್ನು ಕಿಟೆಲ್‌ರು ಕಣ್ಣಲ್ಲಿ ಕಣ್ಣಿಟ್ಟು ಓದಿದ್ದರು. ಹೀಗಾಗಿ ಅವರು ತಲೆ ನೋವು ಹಾಗೂ ಕಣ್ಣು ನೋವುಗಳಿಂದ ವಿಪರೀತವಾಗಿ ಬಳಲಿದರು. ಅವರಿಗೆ ವಿಶ್ರಾಂತಿ ಅವಶ್ಯವಿದ್ದಿತು. ಆದ್ದರಿಂದ ಅವರು ಸ್ವದೇಶಕ್ಕೆ ಹೋದರು.

ಆಗ ಫರ್ಡಿನಾಂಡ್ ಕಿಟೆಲ್‌ರಿಗೆ ೬೦ವರುಷ. ತಮ್ಮ ಹೆಂಡತಿ ಜ್ಯೂಲಿ ಮತ್ತು ಮಕ್ಕಳೊಡನೆ ಜರ್ಮನಿಗೆ ಬಂದರು. ಟ್ಯುಬಿಂಗನ್ ವಿಶ್ವವಿದ್ಯಾಲಯದ ಹತ್ತಿರ ಒಂದು ಮನೆಯನ್ನು ಹಿಡಿದರು. ಅಲ್ಲಿಯೇ ವಿಶ್ರಾಂತಿ ಜೀವನ ಕಳೆದರು.

ಶ್ರಮ ಸಫಲ

ಕಿಟೆಲ್‌ರ ಲಕ್ಷ್ಯವೆಲ್ಲ ನಿಘಂಟುವಿನ ಮುದ್ರಣ ಕಾರ್ಯದ ಕಡೆಗಿತ್ತು. ಟ್ಯೂಬಿಂಗನ್‌ದಲ್ಲಿ ಇದ್ದಕೊಂಡೇ ಮುದ್ರಿತವಾಗಿ ಬರುತ್ತಿದ್ದ ಕಾಗದಗಳನ್ನು ಪರಿಶೀಲಿಸಿದರು. ೧೮೯೩ರಲ್ಲಿ ಮುದ್ರಣವು ಸಮಾಧಾನಕರವಾಗಿ ಮುಂದುವರೆಯಿತು. ಅದನ್ನು ಕಂಡು ಸಂತೋಷಪಟ್ಟು, ಫರ್ಡಿನಾಂಡ್ ಕಿಟೆಲ್‌ರು ಅದೇ ವರುಷ ತಮ್ಮ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದರು. ೧೮೯೪ ರಲ್ಲಿ ಕನ್ನಡ-ಇಂಗ್ಲಷ್ ನಿಘಂಟಿನ ಮೇರುಕೃತಿ ಪ್ರಕಟವಾಯಿತು.

ಇದು ಕಿಟೆಲ್‌ರ ಅತ್ಯಂತ ದೊಡ್ಡ ಸಾಧನೆ. ಅವರ ಆಳವಾದ ಅಧ್ಯಯನವು ಇಲ್ಲಿ ಮಡುಗಟ್ಟಿ ನಿಂತಿದೆ. ಅವರ ಅಸಾಧಾರಣ ಮೇದಾಶಕ್ತಿ ಫಲಗೊಂಡಿದೆ. ಭಾರತೀಯ ಶಬ್ದಕೋಶಗಳ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು !

ಪ್ರಸಿದ್ಧವಾದ ಈ ಬೃಹತ್ ಗ್ರಂಥವನ್ನು ಫರ್ಡಿನಾಂಡ್ ಕಿಟೆಲ್‌ರು ಟ್ಯುಬಿಂಗನ್‌ಗೆ ತರಿಸಿಕೊಂಡು ಅಲ್ಲಿಯೇ ನೋಡಿದರು. ಅಂದು ಅವರಿಗಾದ ಆನಂದ ಹೇಳತೀರದು ! ಜರ್ಮನಿಯಲ್ಲಿದ್ದುಕೊಂಡೇ ಕನ್ನಡಿಗರನ್ನು ಕೃತಜ್ಞತೆಯಿಂದ ನೆನೆದರು.

ಕನ್ನಡಿಗರೂ ಫರ್ಡಿನಾಂಡ್ ಕಿಟೆಲ್‌ರ ಮಹಾಕೃತಿ ಯನ್ನು ಹೊಗಳಿದರು. ಕಿಟೆಲ್‌ರ ಬಗ್ಗೆ ಅಭಿಮಾನ ಪಟ್ಟರು. ಅದೇ ಕಾಲದಲ್ಲಿದ್ದ ಜೆ.ಎಫ್. ಫ್ಲೀಟರು ಕಿಟೆಲ್ ಕೋಶದ ಬಗ್ಗೆ ಹೀಗೆ ಹೇಳಿದ್ದಾಡಿರೆ: ‘ಪ್ರತಿ ಪುಟವೂ ತಮ್ಮ ಕಾರ್ಯದಲ್ಲಿ ಕಿಟೆಲ್‌ರು ತೋರುತ್ತಿದ್ದ ಅವಿರತ ದಕ್ಷತೆ, ಸಮರ್ಪಣ ಬಾವ, ಸಮಗ್ರತೆಗಳಿಗೆ ಹಿಡಿದ ಕನ್ನಡಿಯಾಗಿದೆ’ ಇಪ್ಪತ್ತನೆಯ ಶತಮಾನದಲ್ಲಿಯೂ ವಿದ್ವಾಂಸರು ಉದೇ ಮಾತನ್ನು ಹೇಳಿರುವರು. ಕಿಟೆಲ್ ನಿಘಂಟನ್ನು ಮೀರಿಸುವ ಮತ್ತೊಂದು ನಿಘಂಟು ಕನ್ನಡದಲ್ಲಿ ಇನ್ನೂ ರಚಿತವಾಗಿಲ್ಲ ಎಂದು ಅವರು ನುಡಿದಿರುವರು.

ಕಿಟೆಲ್‌ರ ಬೃಹತ್‌ಕೋಶಕ್ಕೆ ಸ್ವಾಗತಗಳ ಸುರಿಮಳೆ. ಅದು ಜಗತ್ತಿನ ಸೆಳೆಯಿತು. ಎರಡೇ ವರುಷಗಳಲ್ಲಿ ಪ್ರಖ್ಯಾತ ಪಡೆಯಿತು.

೧೮೯೬ ಮೇ ೧೨ ರಂದು ಗೋರ್ಬ ಎಂಬುವರು ಜರ್ಮನಿಯ ಟ್ಯುಂಬಿಗನ್ ವಿಶ್ವದ್ಯಾಲಯಕ್ಕೆ ಮನವಿಯ ಪತ್ರವೊಂದನ್ನು ಬರೆದರು.  ಫರ್ಡಿನಾಂಡ್ ಕಿಟೆಲ್‌ರಿಗೆ ಡಾಕ್ಟರ್‌ರೇಟ್ ಗೌರವವನನ್ನುನೀಡಬೇಕೆಂದು ಸೂಚಿಸಿದರು. ಗೋರ್ಬ ಅವರ ಸೂಚನೆಯನ್ನು ಟ್ಯುಬಿಂಗನ್ ವಿಶ್ವದ್ಯಾಲಯ ಮಾನ್ಯಮಾಡಿತು. ೧೮೯೬ ಜೂನ್ ೬ ರಂದು ಆ ವಿಶ್ವವಿದ್ಯಾಲಯದಲ್ಲಿ ಫರ್ಡಿನಾಂಡ್ ಕಿಟೆಲ್‌ರಿಗೆ ಗೌರವ ಡಾಕ್ಟರೇಟನ್ನು ದಯಪಾಲಿಸಿತು. ಕನ್ನಡದ ಒಂದು ಶ್ರೇಷ್ಠ ಕೃತಿಗೆ ಮನ್ನಣೆ ದೊರೆತದ್ದು ಜರ್ಮನಿಯಲ್ಲಿ !

ಏನೇ ಇರಲಿ, ಕನ್ನಡಕ್ಕೂ ವಿದೇಶಗಳಲ್ಲಿ ಸ್ಥಾನ ದೊರಕಿತು. ಅಂಥ ಕೆಲಸವನ್ನು ಕಿಟೆಲ್‌ರು ಸಾಧಿಸಿದರು!

ಧಾರವಾಡದ ಬಾಂಧವ್ಯ

ಫರ್ಡಿನಾಂಡ್ ಕಿಟೆಲ್‌ರು ಧಾರವಾಡದ, ಮಂಗಳೂರು, ಮಡಿಕೇರಿ ಮೊದಲಾದ ನಗರಗಳಲ್ಲಿ ವಾಸವಾಗಿದ್ದರು. ಆದರೆ ಅವರ  ಸಂಬಂಧವು ಧಾರವಾಡಕ್ಕೆ ಹೆಚ್ಚಿಗೆ ಇದ್ದಂತೆ ತೋರುತ್ತದೆ.

ಧಾರವಾಡದಲ್ಲಿ ಫರ್ಡಿನಾಂಡ್ ಕಿಟೆಲೆರು ಶೈಕ್ಷಣಿಕ ಕಾರ್ಯವನ್ನು ನೋಡಿಕೊಂಡರು. ಕಿಟೆಲ್‌ರೇ ೧೮೮೩-೧೮೮೪ ರಲ್ಲಿ ಬಾಸಲ್ ಮಿಷನ್ ಹೈಸ್ಕೂಲಿ ಆಡಳಿತವನ್ನು ವಹಿಸಿದ್ದರಂತೆ. ಒಂದು ವರ್ಷ ಶಾಲೆಯ ಆಗುಹೋಗು ಗಳನ್ನು ಅವರೇ ನೋಡಿಕೊಂಡರಂತೆ. ಕಿಟೆಲ್‌ರ ಈ ಕಾರ್ಯದ ನೆನಪಿಗಾಗಿ ‘ಕಿಟೆಲ್ ಕಾಲೇಜ’ ಎಂಬ ವಿದ್ಯಾಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ಧಾರವಾಡದಲ್ಲಿ ‘ಕರ್ನಾಡಕ ವಿದ್ಯಾವರ್ಧಕ ಸಂಘವು’

ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ. ಅದು ೧೮೯೦ ರಲ್ಲಿಯೇ ಸ್ಥಾಪಿತವಾಯಿತು, ಅಖಿಲ ಕರ್ನಾಟಕದ ಅನೇಕ ಕಾರ್ಯಕ್ರಮಗಳನ್ನು ನೆರೆವೇರಿಸಿದೆ. ಈ ಮಹಾ ಸಂಸ್ಥೆಯು ಪರ್ಡಿನಾಂಡ್ ಕಿಟೆಲ್‌ರನ್ನು ಮನ್ನಿಸಿತು. ಅವರಿಗೆ ಗೌರವ ಅದಸ್ಯತ್ವ ನೀಡಿತು.

ಹೀಗೆ ಧಾರವಾಡದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಜೀವನದಲ್ಲಿ ಕಿಟೆಲ್‌ರು ಒಂದಾಗಿದ್ದರು.

ಮುಂದುವರಿದ ಕನ್ನಡ ಸೇವೆ

ಹೊಗಳಿಕೆಗಳಿಂದ ತೃಪ್ತರಾಗಿ ಫರ್ಡಿನಾಂಡ್ ಕಿಟೆಲ್‌ರವರು ಸುಮ್ಮನೇ ಕೂಡಲಿಲ್ಲ. ವಿಶ್ರಾಂತಿಯನ್ನು ಪಡೆಯಲು ಬಯಸಲಿಲ್ಲ. ಅವರು ವಾಸವಾಗಿ ಇದ್ದುದ್ದು ಟ್ಯುಬಿಂಗನ್‌ದಲ್ಲಿ. ಆದರೂ ಅವರ ಕನ್ನಡದ ಅಭ್ಯಾಸ ನಿರಂತರವಾಗಿ ಸಾಗಿತು. ಇಂಗ್ಲಿಷಿನಲ್ಲಿ ಕನ್ನಡ ವ್ಯಾಕರಣವನ್ನು ಬರೆಯಲು ಅವರು ಸಿದ್ಧತೆ ನಡೆಸಿದರು.

ಈ ಮೊದಲೇ ಜೆ. ಎಫ್. ಫ್ಲೀಟರು ಕಿಟೆಲ್ ಕೋಶವನ್ನು ಕುರಿತು ‘ಇಂಡಿಯನ್ ಆಂಟಿಕ್ವೆರಿ’ ಯಲ್ಲಿ ಬರೆದಿದ್ದರು. ಆಗ ಅವರು ಇನ್ನು ಒಂದು ಆಶಯವನ್ನು ಹೀಗೆ ಹೇಳಿದರು. ‘ಇಂಗ್ಲಿಷ್‌ನಲ್ಲಿ ಕನ್ನಡದ ಸಮಗ್ರ, ಶಾಸ್ತ್ರೀಯ ವ್ಯಾಕರಣದ ಅವಶ್ಯಕತೆ ಇನ್ನೂ ಇದೆ. ಕಿಟೆಲ್‌ರು ಇಂಥ ವ್ಯಾಕರಣವನ್ನು ಬರೆಯಬೇಕು; ಈ ಕೊರತೆಯನ್ನು ತುಂಬಬೇಕು’

ಜೆ.ಎಫ್ ಫ್ಲೀಟರ ಆಶಯವನ್ನು ಪೂರೈಸುವಂತೆ ಕಿಟೆಲ್‌ರ ಬರವಣಿಗೆ ಸಾಗಿತು. ಕಿಟೆಲ್‌ರಿಗೆ ವ್ಯಾಕರಣ ವಿಷಯದಲ್ಲಿ ಅಪಾರ ಶ್ರದ್ಧೆಯಿದ್ದಿತು. ಅವರು ಕೇಶಿರಾಜನ ‘ಶಬ್ದಮಣಿ ದರ್ಪಣವನ್ನು’ ಈಗಾಗಲೇ ಸಂಪಾದಿಸಿ ಪ್ರಕಟಿಸಿದ್ದರು. ಅದೇ ಗ್ರಂಥವನ್ನು ಆಧರಿಸಿ ಅವರು ಇಂಗ್ಲಿಷಿನಲ್ಲಿ ವ್ಯಾಕರಣವನ್ನು ಬರೆಯಲು ಪ್ರಾರಂಭಿಸಿದರು.

ಪ್ರತಿದಿನ ಬೆಳಿಗ್ಗೆ ಫರ್ಡಿನಾಂಡ್ ಕಿಟೆಲ್ ಬಹುದೂರ ತಿರುಗಾಡಲು ಹೋಗಿಬರುತ್ತಿದ್ದರು. ಟ್ಯೂಬಿಂಗನ್ ಏರಿಳಿತಗಳಿಂದ ಕೂಡಿದ ಸುಂದರ ನಗರ, ತಂಪಾದ ಹವೆಯಲ್ಲಿ ಸುತ್ತಾಡಿಕೊಂಡು ಬಂದ ಮೇಲೆ, ಕಿಟೆಲ್‌ರ ವ್ಯಾಕರಣ ಗ್ರಂಥದ ರಚನೆ, ಅವರಿಗೆ ಬರೆಯುವ ಉತ್ಸಾಹವಿದ್ದಿತು. ಆದರೆ ಮೊದಲಿನ ದೈಹಿಕ ಶಕ್ತಿ ಇರಲಿಲ್ಲ. ಜ್ಯೂಲಿಯ ಫರ್ಡಿನಾಂಡರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಮೇಲಿಂದ ಮೇಲೆ ಹೇಳಿದಳು. ಫರ್ಡಿನಾಂಡರಿಗೆ ಕಣ್ಣಿನ ನರಗಳ ದೌರ್ಬಲ್ಯವೂ ಇದ್ದಿತು. ಕೇಳುವುದಾದರೂ ಹೇಗೆ?

ಫರ್ಡಿನಾಂಡರು ಅಶಕ್ತತೆಯಿಂದ ಬಳಲಿ ಮಲಗಿದಾಗ ಜ್ಯೂಲಿ ಅವರನ್ನು ಶ್ರದ್ಧೆಯಿಂದ ಉಪಚರಿಸಿ ದಳು. ಅವಳಿಗೆ ಮೂವರು ಗಂಡು ಮಕ್ಕಳು ಹಾಗೂ ಒಬ್ಬ ಮಗಳು ಇದ್ದರು. ಅವರೂ ತಮ್ಮ ತಂದೆಗೆ ತೊಂದರೆಯಾಗದಂತೆ ನೋಡಿಕೊಂಡರು.

ದೈಹಿಕ ದೌರ್ಬಲ್ಯದಿಂದ ಇಂಗ್ಲಿಷಿನಲ್ಲಿ ಕನ್ನಡ ವ್ಯಾಕರಣವನ್ನು ಬರೆಯಲು ಫರ್ಡಿನಾಂಡರಿಗೆ ಹಲವು ವರುಷಗಳು ಹಿಡಿದವು. ಕೊನೆಗೆ ವ್ಯಾಕರಣ ಗ್ರಂಥವೂ ಪೂರ್ಣಗೊಂಡಿತು. ಇದರಲ್ಲಿ ೨೮ ಅಧ್ಯಾಯಗಳು. ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಈ ಮೂರು ಅವಸ್ಥಾ ಭೇದಗಳನ್ನು ಸ್ಪಷ್ಟವಾಗಿ ತೋರಿಸಿದರು. ಕನ್ನಡದ ಜೊತೆಗೆ ದ್ರಾವಿಡ ಭಾಷೆಗಳಲ್ಲಿಯ ಉಳಿದ ಉದಾಹರಣೆ ಗಳನ್ನು ಕೊಟ್ಟು. ಕಿಟೆಲ್‌ರು ಮುಖ್ಯವಾಗಿ ಇಂಗ್ಲಿಷ್ ಜನರಿಗಾಗಿ ವ್ಯಾಕರಣ ರಚಿಸಿದರು. ಈ ವ್ಯಾಕರಣವೂ ಕಿಟೆಲ್‌ರ ಪ್ರತಿಭೆಯ ಫಲವಾಯಿತು. ಅದು ಅವರ ಕೊನೆಯ ಕೃತಿಯೂ ಆಯಿತು!

ಮಂಗಳೂರು ಬಾಸೆಲ್ ಮಿಷನ್ ಮುದ್ರಣಾಲಯ ದಲ್ಲಿ ಗ್ರಂಥದ ಮುದ್ರಣವಾಯಿತು. ನಿಘಂಟಿನ ತರುವಾಯ ಪ್ರಕಟವಾಗುವ ಗ್ರಂಥವಿದು. ಅದನ್ನು ಕಣ್ಣಾರೆ ಕಾಣಬೇಕೆಂಬ ಕುತೂಹಲ ಫರ್ಡಿನಾಂಡರಿಗೆ. ೧೯೦೩ ನೆಯ ಇಸ್ವಿ ಡಿಸೆಂಬರ್ ತಿಂಗಳ ೧೮ ನೆಯ ದಿನಾಂಕ ವ್ಯಾಕರಣ ಗ್ರಂಥವನ್ನು ಕೈಯಾರೆ ಮುಟ್ಟಿದರು. ಪರಮಾ ನಂದ ಪಟ್ಟರು. ತಮ್ಮ ಜೀವನ ಸಫಲವಾಯಿತೆಂದು ನಿಟ್ಟುಸಿರು ಬಿಟ್ಟರು.

ಸೇವೆಯ ಕಥೆ ಮುಗಿಯಿತು

ಅದೆಂಥ ಸಫಲತೆ! ಅದೆಂಥ ಸಂತೋಷ! ಪ್ರತಿದಿನದಂತೆ ಅವರು ಮರುದಿನ ಬೆಳಗ್ಗೆ ತಿರುಗಾಡಲು ಹೋದರು. ಅತ್ಯಂತ ಸುಖದಿಂದ ಮನೆಗೆ ಮರಳಿದರು. ಆದರೆ ಕೆಲವೇ ನಿಮಿಷಗಳಲ್ಲಿ ದೈವಾಧಿನರಾದರು.

ಟ್ಯುಬಿಂಗನ್ ನಗರದಲ್ಲಿ ತತ್ವವೇತ್ತರ, ಕವಿಗಳ ಸಮಾಧಿಯ ಸ್ಥಳವಿದೆ. ಫರ್ಡಿನಾಂಡ್ ಕಿಟೆಲ್‌ರ ಸಮಾಧಿಯೂ ಅಲ್ಲಿಯೇ ಸ್ಥಾಪಿತವಾಯಿತು.

ಮುಂದೆ ಇಪ್ಪತ್ತು ವರ್ಷಗಳ ಅನಂತರ ಅವರ ಹೆಂಡತಿ ಜ್ಯೂಲಿಯೂ ತೀರಿಕೊಂಡಳು. ಇದೀಗ ಕಿಟೆಲ್‌ರ ಮಕ್ಕಳು ಯಾರೂ ಇಲ್ಲ.

ಕನ್ನಡಕ್ಕೆ ಕನ್ನಡಿಯ ಹಿಡಿದು. . .

ಟ್ಯುಬಿಂಗನ್ ಜನರೂ ಕಿಟೆಲ್‌ರನ್ನು ಇದೀಗ ಮರೆತಿರಬೇಕು ಮೈಸೂರು ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿದ್ದ ಖ್ಯಾತ ಸಾಹಿತಿ ದೇ. ಜವರೇಗೌಡರು ಹಲವು ವರುಷಗಳ ಹಿಂದೆ ಯೂರೋಪ್ ಪ್ರವಾಸ ದಲ್ಲಿದಲ್ಲಿದ್ದರು. ಕಿಟೆಲ್‌ರ ಅಭಿಮಾನದಿಂದ ಅವರು ಟುಬಿಂಗನ್‌ಗೆ ಹೋದರು ಕಿಟೆಲ್‌ರು ಸಮಾಧಿಗಾದರೂ ಗೌರವ ಸಲ್ಲಿಸಬೇಕೆಂಬ ಅಪೇಕ್ಷೆ ಅವರದು ಆದರೆ ಸಮಾಧಿ ಯನ್ನು ಅವರು ಶೋಧಿಸಬೇಕಾಯಿತು! ಇನ್ನೊಬ್ಬ ಕನ್ನಡ ಅಭಿಮಾನಿಗಳು ಬಾಸೆಲ್‌ಗೆ ಹೋಗಿದ್ದರು. ಅಲ್ಲಿ ಕಿಟೆಲ್‌ರ ಹಸ್ತಪ್ರತಿ ಹಾಗೂ ಅವರ ಗ್ರಂಥಗಳು ಹಾಗೆಯೆ ಬಿದ್ದಿರುವುದನ್ನು ಕಂಡರು.

ಫರ್ಡಿನಾಂಡ್ ಕಿಟೆಲ್‌ರ ಬಳಗವೆಲ್ಲ ಇಳೆಯಿಂದ ಅಳಿಸಿ ಹೋಗಿರಬಹುದು. ಆದರೆ ಕೋಟಿ ಕೋಟಿ ಕನ್ನಡಿಗ ಬಳಗ ಬದುಕಿದೆ. ಅವರು ಕಿಟೆಲ್‌ರನ್ನು ಮರೆಯಲು ಸಾಧ್ಯವಿಲ್ಲ.

‘ಕನ್ನಡ ಕನ್ನಡಿಯ ಹಿಡಿದು ದುಡಿದವ ನೀನು’ ಎಂದು ಕಿಟೆಲ್‌ರನ್ನು ಕುರಿತು ವರಕವಿ ಅಂಬಿಕಾತನ ಯದತ್ತರು ಹಾಡಿದ್ದಾರೆ. ಫರ್ಡಿನಾಂಡ್ ಕಿಟೆಲ್‌ರ ಸೇವೆಯ ಸ್ಮರಣೆ ಕನ್ನಡಿಗರಿಗೆ ಸದಾ ಹಸಿರಾಗಿದೆ.