ಜರ್ಮನಿಯ ವಾಯುವ್ಯ ಭಾಗದಲ್ಲಿರುವ ರೊಸ್ಟರ್ ಹಾಷೆಯಲ್ಲಿ ೭-೪-೧೮೩೨ ಕಿಟ್ಟೆಲ್ ರವರು ಜನಿಸಿದರು. ಇವರ ತಂದೆಯ ಹೆಸರು ಗಾಟೆ ಪ್ರೀಟ್‌ಕ್ರಿಸ್ತಿಯಾನ್‌ಕಿಟ್ಟೆಲ್, ಕ್ರೈಸ್ತಮತದ ಪ್ರಾಟಸ್ಟೆಂಟ್ ಪಂಗಡಕ್ಕೆ ಸೇರಿದ ಧರ್ಮಾದಿಕಾರಿ. ಕಿಟ್ಟೆಲ್ ರವರು ಔರಿಕ್ ಮತ್ತು ಬಾಸೆಲ್ ನಗರಗಳಲ್ಲಿ ಶಿಕ್ಷಣವನ್ನು ಮುಗಿಸಿ ಪಾದ್ರಿಯಾಗಿ ನೇಮಕಗೊಂಡು ಭಾರತಕ್ಕೆ ಬಂದು ಧಾರವಾಡದಲ್ಲಿ ನೆಲೆಸಿದರು. ಅನಂತರ ಇವರು ಮಂಗಳೂರು, ಮಡಿಕೇರಿ, ಆನಂದಪುರ ಮತ್ತು ಹುಬ್ಬಳ್ಳಿಯಲ್ಲಿ ಪಾದ್ರಿಯಾಗಿ ಕೆಲಸ ಮಾಡಿದರು. ಅವರು ಮಂಗಳೂರಿನಲ್ಲಿದ್ದಾಗ ಕನ್ನಡದ ವ್ಯಾಸಂಗವನ್ನು ಆರಬಿಸಿ ಅದರಲ್ಲಿ ಬಹುಬೇಗ ಪರಿಶ್ರಮವನ್ನು ಸಂಪಾಸಿಕೊಂಡರು.ಕಿಟ್ಟಲ್‌ರವರಿಗೆ ಕನ್ನಡ ಭಾಷೆಯಲ್ಲಿದ್ದ ಪಾಂಡಿತ್ಯ ಗಮನಿಸಿದ ಬಾಸೆಲ್ ಮಿಷನ್ನಿನ ಮೋಗ್ಲಿಂಗ್ ಆಂಗ್ಲ ಅದಿಕಾರಿಗಳು ಕನ್ನಡ ಇಂಗ್ಲಿಷ್ ನಿಘಂಟನ್ನು ರಚಿಸುವ ಕೆಲಸವನ್ನು ಅವರಿಗೆ ವಹಿಸಿದರು. ಕೋಶದ ರೂಪರೇಷೆ ೧೮೭೨ ರಲ್ಲಿ ಪ್ರಾರಂಭವಾಯಿತು. ಆದರೆ ಕಿಟ್ಟಲ್ ರವರ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟ ಕಾರಣದಿಂದಾಗಿ ಅವರು ಜರ್ಮನಿಗೆ ತೆರಳಿ ಅಲ್ಲಿ ಕೋಶದ ಪ್ರಥಮ ಕರಡನ್ನು ಸಿದ್ದಪಡಿಸಿದರು.ನಂತರ ಅವರು ಧಾರವಾಡಕ್ಕೆ ಮರಳಿ ೭೦,೦೦೦ ಶಬ್ದಗಳನ್ನೊಳಗೊಂಡ ಹಸ್ತಪ್ರತಿಯನ್ನು ೧೮೯೨ ರಲ್ಲಿ ಸಿದ್ದಪಡಿಸಿ ಪ್ರಕಟಣೆಗಾಗಿ ಬಾಸೆಲ್ ಸಂಸ್ಥೆಯವರಿಗೆ ಒಪ್ಪಿಸಿದರು. ೧೮೯೨ ರಲ್ಲಿ ಮತ್ತೆ ಕೆಲವು ದೈಹಿಕ ತೊಂದರೆಗಳಿಂದ ಯೂರೋಪಿಗೆ ತೆರಳಿದರು. ೧೮೯೪ ರಲ್ಲಿ ಬೃಹತ್ ಪ್ರಮಾಣದ ಕಿಟ್ಟೆಲ್ ನಿಘಂಟು ಪ್ರಕಟವಾಯಿತು. ಈ ಕೋಶ ಇಂದಿಗೂ ಕನ್ನಡ ಭಾಷೆಯ ಪ್ರಮಾಣಭೂತವಾದ ನಿಘಂಟಾಗಿದೆ. ಟೂಬಿಂಗನ್ ವಿಶ್ವವಿದ್ಯಾಲಯವು ಕಿಟ್ಟೆಲ್ಲರ ಈ ಮಹತ್ಕಾರ್ಯವನ್ನು ಗುರತಿಸಿ ೧೮೯೬ ರಲ್ಲಿ ಇವರಿಗೆ ‘ಡಾಕ್ಟರ್ ಆಫ್ ಪಿಲಾಸಪಿ ಪದವಿ ನೀಡಿ ಗೌರವಿಸಿತು. ಕಿಟ್ಟೆಲ್ ರವರು ತಮ್ಮ ಈ ನಿಘಂಟಿನಲ್ಲಿ ದ್ರಾವಿಡ ಭಾಷೆಗಳಿಂದ ಸಂಸ್ಕೃತಕ್ಕೆ ಹೋಗಿರಬಹುದಾದ ಸುಮಾರು ೪೨೦ ಪದಗಳ ವಿಷಯ ಪ್ರಸ್ತಾಪಿಸಿದ್ದಾರೆ. ಈ ನಿಘಂಟಿನಲ್ಲಿ ಶಬ್ದಗಳನ್ನು ಜೋಡಿಸುವಾಗ ಸಂಸ್ಕೃತ ಶಬ್ದಗಳನ್ನು ರೋಮನ್ ಅಕ್ಷರದಲ್ಲೂ, ಕನ್ನಡ ಶಬ್ದಗಳನ್ನು ಅಂಟಿಕ ಅಕ್ಷರಗಳಲ್ಲೂ ಕೊಟ್ಟಿರುವುದು ಈ ನಿಘಂಟಿನ ಒಂದು ವೈಶಿಷ್ಟ್ಯವಾಗಿದೆ. ಅಕ್ಷರಗಳನ್ನು ಸೂಚಿಸುವಾಗ ಗ್ರಂಥಗಳ ಹೆಸರು, ಪರಿಚ್ಛೇದ, ಪುಟ ಸಂಖ್ಯೆಗಳನ್ನು, ಗದ್ಯವಾದಲ್ಲಿ ಸಾಲಿನ ಸಂಖ್ಯೆಯನ್ನು ಕೊಡಲಾಗಿದೆ. ಅರ್ಥವನ್ನು ಇಂಗ್ಲಿಷಿನಲ್ಲಿ ಒದಗಿಸಲಾಗಿದೆ. ಪದರೂಪ ಉಳಿದ ದ್ರಾವಿಡ ಭಾಷೆಗಳಲ್ಲಿ ಹೇಗಿದೆ ಎಂಬುದನ್ನು ಸೂಚಿಸಿರುವುದು ಈ ನಿಘಂಟಿನ ಮತ್ತೊಂದು ಹಿರಿಮೆಯಾಗಿದೆ.

ಕೇಶಿರಾಜನ ಶಬ್ದಮಣಿದರ್ಪಣವನ್ನು ಒಂಬತ್ತು ಹಸ್ತಪ್ರತಿಗಳ ಆಧಾರದಿಂದ ಶಾಸ್ತ್ರೀಯ ರಿತಿಯಲ್ಲಿ ಸಂಪಾದಿಸಿ ವಿದ್ವತ್ ಪೂರ್ಣವಾದ ಮುನ್ನುಡಿಯೊಂದಿಗೆ ಕಿಟ್ಟಲ್ ಪ್ರಕಟಿಸಿದರು(೧೮೭೨). ನಾಗವರ್ಮನ ಛಂದೋಂಬುದಿಯನ್ನು ಇದೇ ರೀತಿ ಶಾಸ್ತ್ರೀಯವಾಗಿ ಪರಿಷ್ಕರಿಸಿ ೧೮೭೫ ರಲ್ಲಿ ಪ್ರಕಟಿಸಿದರು. ೧೯ ನೆಯ ಶತಮಾನದವರೆಗಿನ ಕನ್ನಡ ಸಾಹಿತ್ಯದ ಸ್ಥೂಲ ಪರಿಚಯವನ್ನು ಇದರಲ್ಲಿ ಒದಗಿಸಿದ್ದಾರೆ. ಇವರು ಸಂಪಾದಿಸಿರುವ ಇನ್ನೊಂದು ಗ್ರಂಥ ಪಂಚತಂತ್ರ. ‘ಕರ್ನಾಟಕ ಕಾವ್ಯಮಾಲೆ, ಎಂಬ ಒಂದು ಸಂಗ್ರಹವನ್ನು ಇವರು ಪ್ರಕಟಿಸಿದ್ದಾರೆ(೧೮೭೪).

ಕಿಟ್ಟಲ್ ಕ್ರೈಸ್ತಧರ್ಮಕ್ಕೆ ಸಂಬಂದಿಸಿದ ೧೮ ಸಣ್ಣ ಪುಟ್ಟ ಕೃತಿಗಳನ್ನು ಆರು ಕನ್ನಡ ಪಠ್ಯ ಪುಸ್ತಕಗಳನ್ನು ಬರೆದಿದ್ದಾರೆ. ಇಂಡಿಯನ್ ಆಂಟೆಕ್ಟರಿ ಮುಂತಾದ ಪತ್ರಿಕೆಗಳಲ್ಲಿ ಸುಮಾರು ೨೪ ಅಮೂಲ್ಯ ಲೇಖನಗಳನ್ನು ಪ್ರಕಟಿಸಿದ್ದಾರೆ. ಕಿಟ್ಟಲ್ಲರ ಕೊನೆಯ ಕೃತಿ ಇಂಗ್ಲಿಷಿನಲ್ಲಿ ಬರೆದಿರುವ ಕನ್ನಡ ವ್ಯಾಕರಣ ಡಿಸೆಂಬರ್ ೮, ೧೯೦೩ ರಲ್ಲಿ ಪ್ರಕಟವಾದಾಗ ಅದನ್ನು ಕಣ್ಣಾರೆಕಂಡು ಡಿಸೆಂಬರ್ ೧೯, ೧೯೦೩ ರಂದು ತೀರಿಕೊಂಡರು.