ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದ ಸಂಗತಿ. ಮುಂಬಯಿಯಲ್ಲೊಂದು ಶ್ರೀಮಂತ ಮನೆ. ಏಳು ವರ್ಷದ ಬಾಲಕನೊಬ್ಬನಿಗೆ ವಿಪರೀತ ಕಾಯಿಲೆ. ಎಷ್ಟೋ ದಿನಗಳಿಂದ ಹಿಡಿದ ಜ್ವರ ಬಿಟ್ಟೇ ಇರಲಿಲ್ಲ; ಅವನಿಗೆ ಪ್ರಜ್ಞೆಯೂ ಇರಲಿಲ್ಲ. ಪ್ರಸಿದ್ಧ ಡಾಕ್ಟರರಾದ ಭಾವೂದಾಜಿಗೂ ಚಿಂತೆ. ಯಾವ ಮದ್ದೂ ನಾಟದೆ ಇರುವಂತಹ ಈ ವಿಚಿತ್ರಕ್ಕೆ ಮಗುವಿನ ಮೆದುಳು ತೀವ್ರಗತಿಯಿಂದ ಕೆಲಸ ಮಾಡುತ್ತಿರುವುದೇ ಕಾರಣ ಎಂದರು. ಬಾಲಕನಿಗೆ ಗುಣವಾದರೆ ಮುಂದೆ ಈತ ಮಹಾಪುರಷನಾಗುತ್ತಾನೆ ಎಂದು ಭವಿಷ್ಯ ನುಡಿದರು.

ಬಾಲಕನ ಚಿಕ್ಕಪ್ಪನೂ ಹೀಗೆಯೇ ಹೇಳಿದ್ದರು; ನಾಮಕರಣದ ದಿನ ಮಗುವಿನ ಮುದ್ದಾದ ಮುಖ, ಅಗಲವಾದ ಹಣೆಯನ್ನು ನೋಡಿ ಸಂತೋಷದಿಂದ ಭವಿಷ್ಯ ನುಡಿದಿದ್ದರು. ಆದರೆ ಜ್ವರದ ತಾಪದಿಂದ ಮುದ್ದು  ಬಾಲಕ ಅನೇಕ ದಿನಗಳಿಂದಲೂ ಕಣ್ಣುಮುಚ್ಚಿ ಮಲಗಿ ಬಿಟ್ಟಿದ್ದರೆ ತಂದೆತಾಯಿಗೂ ಮನೆಮಂದಿಗೂ ಎಷ್ಟೊಂದು ದುಃಖವಾಗಬೇಡ?

ಕೊನೆಗೊಂದು ದಿನ ಈ ಪುಟ್ಟ ರೋಗಿ ಜೋರಾಗಿ ಅಳುತ್ತಾ ಎಚ್ಚರಗೊಂಡ. ತನಗೊಂದು ಕನಸಾಯಿತೆಂದು ಹೇಳಿದ. ಸುಂದರವಾದ ಹೂದೋಟದಲ್ಲಿ ತನ್ನ ಅಜ್ಜಿಯನ್ನು ನೋಡಿದುದಾಗಿಯೂ ಅವಳು ತನ್ನನ್ನು ಹೊರಗೆ ನೂಕಿಬಿಟ್ಟಳೆಂದೂ ಅಳತೊಡಗಿದ. ಎಲ್ಲರೂ ಇದನ್ನು ಶುಭಸಂಕೇತವೆಂದು ತಿಳಿದರು. ಬಾಲಕ ಮೃತ್ಯುಮುಖದಿಂದ ಬದುಕಿಬಂದನೆಂದು ಸಂತೋಷಪಟ್ಟರು. ಅವನಿಗೆ ದಿನೇ ದಿನೇ ಕಾಯಿಲೆ ಗುಣವಾಗುತ್ತಲೇ ಬಂತು.

ಈ ಬಾಲಕನೇ ಮುಂದೆ ಮಹಾಪುರುಷರಾದ ಸರ್ ಫಿರೋಜ್‌ಷಾ ಮೆಹತಾ.

ಬಾಲ್ಯ ಮತ್ತು ವಿದ್ಯಾಭ್ಯಾಸ

ಫಿರೋಜ್ ೧೮೪೫ರ ಆಗಸ್ಟ್ ನಾಲ್ಕರಂದು ಮುಂಬಯಿಯಲ್ಲಿ ಹುಟ್ಟಿದರು. ವ್ಯಾಪಾರಿಯಾಗಿದ್ದ ತಂದೆ ತಮ್ಮ ಕೆಲಸಕ್ಕಾಗಿ  ಹೆಚ್ಚಾಗಿ ಕಲ್ಕತ್ತೆಯಲ್ಲಿ ಇರಬೇಕಾಗುತ್ತಿತ್ತು. ಆದರೆ ಮಕ್ಕಳನ್ನು ಮುಂಬಯಿಯಲ್ಲಿದ್ದ ತಮ್ಮ ಶ್ರೀಮಂತ ನಿವಾಸದಲ್ಲಿ ಒಳ್ಳೇ ಸುಖಸೌಕರ್ಯಗಳಿಂದ ಬೆಳೆಸಿದರು.

ಫಿರೋಜರ ಪ್ರಾರ್ಥಮಿಕ ವಿದ್ಯಾಭ್ಯಾಸ ಅಯರ್ಟನ್ ಶಾಲೆಯಲ್ಲಿ ನಡೆಯಿತು. ಆಮೇಲೆ ಇವರು ಬ್ರಾಂಚ್ ಸ್ಕೂಲ್‌ನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಿ, ಎಲ್ಫಿನ್‌ಸ್ಟನ್ ಕಾಲೆಜನ್ನು ಸೇರಿದರು.

ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಕಾಲವದು. ಪ್ರತಿಯೊಂದು ಸಂಘ ಸಂಸ್ಥೆಗಳ ಮುಖ್ಯ ಆಡಳಿತ ಅವರ ಕೈಯಲ್ಲೇ ಇರುತ್ತಿತ್ತು. ಕಾಲೇಜಿನಲ್ಲಿಯೂ ಸರ್ ಅಲೆಗ್ಜಾಂಡರ್ ಗ್ರಾಂಟ್ ಎಂಬವರು ಮುಖ್ಯ ಅಧಿಕಾರಿ ಯಾಗಿದ್ದರು. ತೀಕ್ಷ್ಣಬುದ್ಧಿಯ ಹುಡುಗ ಫಿರೋಜ್ ಬಹುಬೇಗ ಇವರನ್ನು ಆಕರ್ಷಿಸಿದರು. ಈ ವಿದ್ಯಾರ್ಥಿಯ ಯನ್ನು ಕಂಡು ಗ್ರಾಂಟ್ ಬಹಳ ಪ್ರೋತ್ಸಾಹ ಕೊಟ್ಟರು. ಫಿರೋಜ್ ಬರೆದ ಒಂದು ಪ್ರಬಂಧದಿಂದ ಅವರು ಎಷ್ಟೊಂದು ಪ್ರಭಾವಿತರಾದರೆಂದರೆ ಈ ಪ್ರಬಂಧವನ್ನು ಕಾಲೇಜಿನ ಪತ್ರಾಗಾರದಲ್ಲಿ ಕಾಯ್ದಿಟ್ಟರು. ಮುಂದೆ ಫಿರೋಜರ ಶಿಷ್ಯದಲ್ಲಿ ಯಾರಾದರೊಬ್ಬರು ಇದನ್ನು ಬೆಳಕಿಗೆ ತರಬಹುದು ಎಂದುಕೊಂಡಿದ್ದರವರು.

ವ್ಯಕ್ತಿತ್ವ

ಫಿರೋಜ್‌ಷಾ ಅವರದು ಆಕರ್ಷಕ ವ್ಯಕ್ತಿತ್ವ. ಎತ್ತರವಾಗಿದ್ದರು. ಅಗಲವಾದ ಭುಜ, ಮುಖ ಲಕ್ಷಣ ವಾಗಿತ್ತು. ಅವರು ಮಾತುಕತೆಗೆ ತೊಡಗಿದರೆ ಅವರ ವಿಚಾರಧಾರೆಗೆ, ಬುದ್ಧಿವಂತಿಕೆಗೆ ಎಲ್ಲರೂ ಮಾರು ಹೋಗುತ್ತಿದ್ದರು. ಅವರೊಡನೆ ಸದಾ ಸ್ನೇಹಿತರ ಗುಂಪು ಇರುತ್ತಿತ್ತು. ಈ ಗುಂಪಿಗೆಲ್ಲ ಅವರೇ ನಾಯಕ; ಅವರ ಮಾತೇ ವೇದವಾಕ್ಯ. ಕೇಳಿದ ಪಾಠಗಳನ್ನು ಬಹುಬೇಗ ಗ್ರಹಿಸಿಬಿಡುತ್ತಿದ್ದರು. ಆದರೆ ತಮ್ಮ ಬುದ್ಧಿಶಕ್ತಿಯ ಬಗ್ಗೆ ಅಹಂಕಾರವಿರಲಿಲ್ಲ. ಹೆಚ್ಚಿನ ತಿಳಿವಳಿಕೆಗಾಗಿ ಶ್ರಮ ವಹಿಸುತ್ತಿದ್ದರು. ಅಭ್ಯಾಸದಲ್ಲಿ ತೊಡಗುತ್ತಿದ್ದರು.

ಫಿರೋಜ್‌ಷಾರಿಗೆ ಆಟಗಳಲ್ಲೂ ಆಸಕ್ತಿಯಿತ್ತು. ಅವರು ಹೆಚ್ಚಾಗಿ ಕ್ರಿಕೆಟ್ ಆಡುತ್ತಿದ್ದರು.

ಬುದ್ಧಿ, ಶರೀರಗಳ ಬೆಳವಣಿಗೆಯೊಟ್ಟಿಗೇ ಅವರಲ್ಲಿ ವಿದ್ಯಾರ್ಥಿಗಳಲ್ಲಿ ಬಹು ಮುಖ್ಯವಾಗಿ ಇರಬೇಕಾದಂತಹ  ಗುಣಗಳೂ ಇದ್ದವು. ವಿನಯವಿತ್ತು; ವಿಧೇಯತೆ ಇತ್ತು;  ಗುರುಗಳಲ್ಲಿ ಭಕ್ತಿಯಿತ್ತು ; ಸಹಪಾಠಿಗಳಲ್ಲಿ ಸ್ನೇಹವಿತ್ತು ; ಪ್ರೇಮವಿತ್ತು. ಆದುದರಿಂದಲೇ ಅಲೆಗ್ಜಾಂಡರ್ ಗ್ರಾಂಟ್ ಫಿರೋಜರ ತಂದೆಗೆ ಕಳುಹಿಸಿದ ವರದಿಯಲ್ಲಿ ಹುಡುಗನ ನಡತೆ ಅತಿ ಉತ್ತಮವೆಂದು ಬರೆದಿದ್ದರು. ಹಿರಿಯರ ಸಂತೋಷಕ್ಕೆ ಮೇರೆಯೇ ಇರಲಿಲ್ಲ.

ಇಂಗ್ಲೆಂಡಿಗೆ ಪಯಣ

೧೮೬೪ ರಲ್ಲಿ ಫಿರೋಜ್‌ಷಾ ಬಿ. ಎ. ಮುಗಿಸಿದರು. ಕೆಲವೇ ತಿಂಗಳಲ್ಲಿ ಅವರಿಗೆ ಇಂಗ್ಲೆಂಡಿಗೆ ಪ್ರಯಾಣ ಬೆಳೆಸುವ ಅವಕಾಶವೂ ಸಿಕ್ಕಿತು. ಆ ಕಾಲದಲ್ಲಿ ಇಂಗ್ಲೆಂಡಿಗೆ ಹೋಗಿ ಬಾರ್ ಎಟ್ ಲಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ದೊಡ್ಡ ಗೌರವದ ಮಾತಾಗಿತ್ತು. ಈ ಪರೀಕ್ಷೆಯಲ್ಲಿ ಯಶಸ್ವಿಗಳಾದ ಭಾರತೀಯರು ಬೆರಳೆಣಿಕೆಯಷ್ಟು ಮಂದಿ ಇದ್ದರು. ಅಲೆಗ್ಜಾಂಡರ್ ಗ್ರಾಂಟ್ ತಮ್ಮ ವಿದ್ಯಾರ್ಥಿಯನ್ನು ಹುರಿದುಂಬಿಸಿದರು. ಪಾರ್ಸಿ ಟ್ರಸ್ಟಿನಿಂದ ವಿದ್ಯಾರ್ಥಿವೇತನ ಕೊಡಿಸಲು ಶ್ರಮಿಸಿದರು. ಮಗನನ್ನು ಕಳುಹಿಸಲು ಫಿರೋಜರ ತಂದೆಯನ್ನು ಒಪ್ಪಿಸಿದವರೂ ಅವರೇ. ಇಷ್ಟೇ ಅಲ್ಲ, ಗ್ರಾಂಟ್ ತಮ್ಮೊಡನೆಯೇ ಫಿರೋಜರನ್ನು ಇಂಗ್ಲೆಂಡಿಗೆ ಕರೆದೊಯ್ದರು.

ಫಿರೋಜ್‌ಷಾ ನಾಲ್ಕು ವರ್ಷಗಳ ಕಾಲ ಲಂಡನ್ನಿ ನಲ್ಲಿದ್ದರು. ಬಾರ್ ಎಲ್ ಲಾ ಶಿಕ್ಷಣ ಪಡೆಯುವುದ ರೊಂದಿಗೆ ಫ್ರೆಂಚ್ ಸಾಹಿತ್ಯವನ್ನೂ ಚೆನ್ನಾಗಿ ಅಭ್ಯಾಸ ಮಾಡಿದರು. ಈ ಸಮಯದಲ್ಲಿ ದಾದಾಭಾಯಿ ನವರೋಜಿ ಎಂಬ ಹಿರಿಯ ಭಾರತೀಯರೂ ಲಂಡನ್ನಿನಲ್ಲಿದ್ದರು. ವ್ಯಾಪಾರೋದ್ಯಮಿ ಗಳಾಗಿದ್ದ ಇವರು ಭಾರತದ ಬಗ್ಗೆ ತುಂಬ ಕಾಳಜಿ ವಹಿಸಿದ್ದರು. ಭಾರತದ ಜನರ ಬಗ್ಗೆ, ಅವರ ಅನೇಕ ಸಮಸ್ಯೆಗಳ ಬಗ್ಗೆ ಬ್ರಿಟಿಷ್ ಜನಾಂಗದಲ್ಲಿದ್ದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ‘ಈಸ್ಟ್ ಇಂಡಿಯಾ ಅಸೋಸಿಯೇಷನ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು.

ಲಂಡನ್ನಿನಲ್ಲಿದ್ದ ಭಾರತೀಯರಲ್ಲಿ ಬಹುಮಂದಿ ಪ್ರತಿ ವಾರವೂ ಇಲ್ಲಿ ಸೇರುತ್ತಿದ್ದರು. ಭಾರತಕ್ಕೆ ಸಂಬಂಧಪಟ್ಟ ಅನೇಕ ವಿಷಯಗಳನ್ನು ಚರ್ಚಿಸುತ್ತಿದ್ದರು. ಫಿರೋಜ್‌ಷಾ ತಪ್ಪದೆ ಈ ಸಭೆಗಳಿಗೆ ಹಾಜರಾಗುತ್ತಿದ್ದರು. ಈ ಕೂಟಕ್ಕೆ ಸೇರಿದ ಮನಮೋಹನ್ ಘೋಷ್, ಬದ್ರುದ್ದೀನ್ ತಯ್ಯಬ್ಜಿ, ಡಬ್ಲ್ಯು. ಸಿ. ಬ್ಯಾನರ್ಜಿ, ಜೆಮ್‌ಸೆಟ್‌ಜೀ ತಾತಾ ಮೊದ ಲಾದ ಅನೇಕ ಮಂದಿ ಭಾರತೀಯರ ಸ್ನೇಹವೂ ಆಯಿತು. ಫಿರೋಜರಿಗೆ ಬ್ರಿಟಿಷ್ ಸ್ನೇಹಿತರೂ ಇದ್ದರು. ಸ್ನೇಹ ಪರರಾದ ಇವರು ಎಲ್ಲರೊಡನೆಯೂ ಬೆರೆಯುತ್ತಿದ್ದರು.

ಮರಳಿ ಭಾರತಕ್ಕೆ

೧೮೬೮ ರ ಸೆಪ್ಟೆಂಬರ್ ತಿಂಗಳಲ್ಲಿ ಫಿರೋಜ್‌ಷಾ ಬಾರ್‌ಎಟ್‌ಲಾ ಪರೀಕ್ಷೆ ಮುಗಿಸಿ ಭಾರತಕ್ಕೆ ಮರಳಿದರು.

ಕೆಲವೇ ದಿನಗಳಲ್ಲಿ ಬಾಡಿಗೆ ಕಚೇರಿಯಲ್ಲಿ ಫಿರೋಜರ ವಕೀಲ ವೃತ್ತಿ ಆರಂಭವಾಯಿತು. ಆದರೆ ಇವರಿಗೂ ಬದ್ರುದ್ದೀನ್ ತಯ್ಯಬ್ಜಿ, ವಾಡಿಯಾ ಮೊದಲಾದ ಅನೇಕ ಹೊಸ, ಕಿರಿಯ ವಕೀಲರಿಗೂ ವಕಾಲತ್ತುಗಳೇ ಇರುತ್ತಿರ ಲಿಲ್ಲ. ಆದರೂ ಫಿರೋಜ್‌ಷಾ ತಪ್ಪದೇ ನ್ಯಾಯಾಲಯ ಗಳಲ್ಲೆಲ್ಲ ಹಾಜರಿರುತ್ತಿದ್ದರು. ವಕಾಲತ್ತುಗಳನ್ನು ಅಭ್ಯಾಸ ಮಾಡುತ್ತಿದ್ದರು. ಇದಕ್ಕೆ ಸಂಬಂಧಪಟ್ಟ ಗ್ರಂಥಗಳನ್ನೆಲ್ಲ ಓದುತ್ತಿದ್ದರು. ಪತ್ರಿಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಕ್ರಮೇಣ ಇವರ ಪ್ರತಿಭೆ ಬೆಳಕಿಗೆ ಬರತೊಡಗಿತು.

ಇವರ ಅದ್ಭುತವಾದ ತರ್ಕಸರಣಿಗೆ ಎಲ್ಲರೂ ತಲೆದೂಗ ತೊಡಗಿದರು. ಪ್ರತಿಪಕ್ಷದ ಸಾಕ್ಷಿಗಳಿಗೆ ಪ್ರಶ್ನೆಗಳನ್ನು ಹಾಕುವುದರಲ್ಲಿ ಇವರು ಅತಿ ಚತುರರಾಗಿದ್ದರು. ಇವರ ಕೈಗೆತ್ತಿಕೊಂಡ ವ್ಯಾಜ್ಯಗಳು ಗೆದ್ದವು. ಇದರಿಂದ ಇವರ ಕೀರ್ತಿ ಹೆಚ್ಚಿತು.

ಫಿರೋಜ್‌ಷಾ ಹೆಚ್ಚಾಗಿ ನಗರವನ್ನು ಬಿಟ್ಟು ಹೊರಗಿನಿಂದ ಬರುವ ಮೊಕದ್ದಮೆಗಳನ್ನೇ ತೆಗೆದುಕೊಳ್ಳು ತ್ತಿದ್ದರು. ಇದು ಲಾಭದಾಯಕವೂ ಆಗಿತ್ತು. ಅಲ್ಲದೇ ಇದರಿಂದ ಮುಂಬಯಿ ಆಡಳಿತದೊಳಗಿನ ಹೆಚ್ಚು ಕಡಿಮೆ ಎಲ್ಲ ಊರುಗಳನ್ನೂ ಹಳ್ಳಿಗಳನ್ನೂ ಸುತ್ತಾಡುವ ಅವ ಕಾಶವೂ ದೊರಕಿತು. ಬೇರೆಬೇರೆ ರೀತಿಯ ಜನರೊಡನೆ ಸಂಪರ್ಕ ಬೆಳೆಯಿತು. ಅವರ ಜೀವನ ಪದ್ಧತಿಗಳನ್ನೂ ನಂಬಿಕೆಗಳನ್ನೂ, ಸುಖ ದುಃಖಗಳನ್ನೂ ಫಿರೋಜ್‌ಷಾ ಕಣ್ಣಾರೆ ಕಂಡರು.

‘ಜನಪ್ರಿಯತೆಯೇ ಮುಖ್ಯವಲ್ಲ ; ಜನರ ಮುಖಂಡರಿಗೆ ಜನಸಮೂಹವನ್ನು ಯೋಗ್ಯ ದಿಕ್ಕಿನಲ್ಲಿ ಕರೆದೊಯ್ಯುವ ಹೊಣೆಯೂ ಇದೆ.’

ನಿರ್ಭೀತ, ಧ್ಯೇಯವಾದಿ

ಆ ಕಾಲದಲ್ಲಿ ಬ್ರಿಟಿಷರಿಗೆ ಭಾರತದ ಇಲ್ಲವೆ, ಭಾರತೀಯರ ಹಿತವಾಗಲಿ ಗಮನದಲ್ಲಿರಲಿಲ್ಲ. ಗುಲಾಮ ರಾಷ್ಟ್ರ ಭಾರತದಲ್ಲಿ ಸ್ವಾಭಿಮಾನ ಇನ್ನೂ ತಕ್ಕಷ್ಟು ಜಾಗೃತವಾಗಿರಲಿಲ್ಲ. ಭಾರತದಲ್ಲಿದ್ದ ಬ್ರಿಟಿಷರಲ್ಲಿ ತಾವು ಆಳುವವರು ಎಂಬ ಬಿಂಕ ಇತ್ತು. ಭಾರತೀಯರಲ್ಲಿ ತಾವು ಗುಲಾಮರೆಂದು ಕೀಳು ಮನೋಭಾವ ಇತ್ತು. ಈ ಎರಡೂ ತಪ್ಪು ಭಾವನೆಗಳನ್ನು ತೊಡೆದುಹಾಕುವುದಕ್ಕಾಗಿ ಫಿರೋಜ್ ಷಾ ಶ್ರಮಿಸಿದರು.

ಒಮ್ಮೆ ಒಬ್ಬ ಪ್ರಮುಖ ನ್ಯಾಯಾಧೀಶರು ನಿವೃತ್ತ ರಾಗಿದ್ದರು. ವಕೀಲವೃಂದ ಅವರಿಗೆ ಸತ್ಕಾರಕೂಟವನ್ನು ಏರ್ಪಡಿಸಿತು. ಆದರೆ ಬ್ರಿಟಿಷ್ ವಕೀಲರೆಲ್ಲರೂ ಒಂದಾ ದರು. ಭಾರತೀಯ ವಕೀಲರನ್ನು ದೂರವಿಟ್ಟರು. ಫಿರೋಜ್ ಷಾ ತಮ್ಮ ಮಿತ್ರರೊಡಗೂಡಿ ಇದನ್ನು ತೀವ್ರವಾಗಿ ಪ್ರತಿಭಟಿಸಿದರು.

ಇನ್ನೊಮ್ಮೆ ಬ್ರಿಟಿಷ್ ಮುಖ್ಯ ನ್ಯಾಯಾಧೀಶರ ಅಧಿಕಾರದ ವ್ಯಾಪ್ತಿಯಲ್ಲಿ ಇಪ್ಪತ್ತೈದು ಮಂದಿ ಬ್ರಿಟಿಷ್ ವಕೀಲರಿಗೆ ದೊಡ್ಡ ಹುದ್ದೆಗಳು ದೊರಕಿದವು. ಭಾರತೀಯ ವಕೀಲರಲ್ಲಿ ಕೇವಲ ಹದಿನಾಲ್ಕು ಮಂದಿಗಷ್ಟೇ ಅವಕಾಶ ಸಿಕ್ಕಿತು.

ಫಿರೋಜ್‌ಷಾ ಧೈರ್ಯವಾಗಿ ‘ಇಂಡಿಯನ್ ಸ್ಟೇಟ್ಸ್‌ಮನ್’ ಪತ್ರಿಕೆಯಲ್ಲಿ ಈ ಅನ್ಯಾಯದ ಬಗ್ಗೆ ಬರೆದೇ ಬಿಟ್ಟರು. ಅಲ್ಲದೇ ಬ್ರಿಟಿಷ್ ವಕೀಲರ ಒಟ್ಟು ಸಂಬಳದ ಹತ್ತನೇ ಒಂದು ಪಾಲು ಸಂಬಳವೂ ಭಾರತೀಯ ವಕೀಲರಿಗೆ ಸಿಕ್ಕುತ್ತಿಲ್ಲ ಎಂಬುದನ್ನು ಬೆಳಕಿಗೆ ತಂದರು. ಇದರ ಬಗ್ಗೆ ವಕೀಲರ ಸಮೂಹದಲ್ಲಿ ದೊಡ್ಡ ಕೋಲಾ ಹಲವೇ ಆಯಿತು. ಬ್ರಿಟಿಷ್ ವಕೀಲರೆಲ್ಲರೂ ಉರಿದು ಬಿದ್ದರು. ಫಿರೋಜ್‌ಷಾ ಸ್ವಲ್ಪವೂ ಎದೆಗುಂದಲಿಲ್ಲ.

ಆ ಕಾಲದಲ್ಲಿ ಬ್ರಿಟಿಷರು ತೋರುತ್ತಿದ್ದ ಪಕ್ಷಪಾತ, ಭೇದಭಾವ ಒಂದೆರಡಲ್ಲ. ಅವರು ಭಾರತವನ್ನು ಆಳುವವ ರಾಗಿದ್ದರು ನಿಜ. ಆದರೆ ಆಡಳಿತವರ್ಗದಲ್ಲಿ ಭಾರತದ ಸರಿಯಾದ ಪ್ರತಿನಿಧಿಗಳು ಇರಬೇಡವೇ ? ಭಾರತೀಯರ ಅಗತ್ಯತೆಗಳನ್ನು, ಆಸೆ-ಆಕಾಂಕ್ಷೆಗಳನ್ನು, ಸಮಸ್ಯೆಗಳನ್ನು ಯಾರು ಪ್ರತಿನಿಧಿಸಬೇಕು ?

ಆಡಳಿತ ನಡೆಸುವ ‘ಸಿವಿಲ್ ಸರ್ವಿಸ್’ನಲ್ಲಿಯೂ ಭಾರತೀಯರ ಪ್ರಾತಿನಿಧ್ಯ ಬಲು ಕಡಮೆಯಾಗಿತ್ತು. ಆಡಳಿತದಲ್ಲಿ ದೊಡ್ಡ ನೌಕರಿಗಳು ಸಿಕ್ಕಬೇಕಾದರೆ ಕೆಲವು ಪರೀಕ್ಷೆಗಳಲ್ಲಿ ಉತ್ತೀರ್ಣರಾಗ ಬೇಕಾಗಿತ್ತು. ಈ ಪರೀಕ್ಷೆಗಳೆಲ್ಲ ಆಗಾಗ ಇಂಗ್ಲೆಂಡಿನಲ್ಲಿಯೇ ನಡೆಯುತ್ತಿದ್ದವು. ಭಾರತದಲ್ಲಿದ್ದ ಯುವಕರಿಗೆ ಇದರಿಂದ ಬಹಳ ಅನನುಕೂಲವಾಗಿತ್ತು.

ದಾದಾಭಾಯಿ ನವರೋಜಿಯವರು ಇಂಗ್ಲೆಂಡಿ ನಲ್ಲಿಯೇ ಇದ್ದುಕೊಂಡು ಭಾರತೀಯರಿಗಾಗಿ ಹೋರಾಡುತ್ತಿದ್ದರು. ಫಿರೋಜ್‌ಷಾ ಬ್ರಿಟಿಷರ ಪಕ್ಷಪಾತ ನೀತಿಯನ್ನು ಖಂಡಿಸಿ ನವರೋಜಿಯವರನ್ನು ಬೆಂಬಲಿಸಿದರು. ಪರಿಣಾಮವಾಗಿ ಬ್ರಿಟಿಷರು ‘ಈಸ್ಟ್ ಇಂಡಿಯಾ ಬಿಲ್’ ಎಂಬ ಸುಧಾರಣೆಯಲ್ಲಿ ಒಂದು ಹೊಸ ಅಂಶವನ್ನು ಸೇರಿಸಿದರು. ಇದರ ಪ್ರಕಾರ ಭಾರತೀಯರು ಪರೀಕ್ಷೆಗೆ ಕುಳಿತುಕೊಳ್ಳದಿದ್ದರೂ ಬ್ರಿಟಿಷ್ ಅಧಿಕಾರಿಗಳು ಅವರನ್ನು ಸರ್ಕಾರಿ ನೌಕರಿಗಳಿಗೆ ನೇಮಕ ಮಾಡಬಹುದಾಗಿತ್ತು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ – ಭಾರತೀ ಯರಿಗೆ ನೌಕರಿಗಳು ಸಿಕ್ಕುವುದು ಬ್ರಿಟಿಷ್ ಅಧಿಕಾರಿಗಳ ಕೃಪೆಯಿಂದ !

ಫಿರೋಜ್‌ಷಾ ಇದನ್ನು ಒಪ್ಪಲೇ ಇಲ್ಲ. ಇಂಗ್ಲೆಂಡಿ ನಲ್ಲಿ ನಡೆಯುವಂತೆ ಭಾರತದಲ್ಲಿಯೂ ಪರೀಕ್ಷೆಗಳು ನಡೆಯಬೇಕು, ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿಯೇ ಭಾರತೀಯರು ಸರ್ಕಾರಿ ಆಡಳಿತದಲ್ಲಿ ನೌಕರಿಗಳನ್ನು ಹೊಂದಬೇಕು; ಇದರಲ್ಲಿ ಸಮಾಜದ ಆರೋಗ್ಯಕರ ಬೆಳವಣಿಗೆ ಇದೆ ಎಂದು ಅವರು ಬಲವಾಗಿ ವಾದಿಸಿದರು.

ಮುಂಬಯಿ ಪುರಸಭೆಯಲ್ಲಿ

ಇಂದು ನಾವು ಕಾಣುತ್ತಿರುವುದು ಬೃಹತ್ ಮುಂಬಯಿ. ದೊಡ್ಡದೊಡ್ಡ ಕಟ್ಟಡಗಳು, ಅಗಲವಾದ ರಸ್ತೆಗಳು, ಝಗಝಗಿಸುವ ದೀಪಗಳು, ನೀರಿನ ವ್ಯವಸ್ಥೆ, ಅಲ್ಲಲ್ಲಿ ಪಾರ್ಕುಗಳು, ವಾಯುವಿಹಾರಕ್ಕಾಗಿ ಯೋಗ್ಯ ಸಮುದ್ರ ತೀರಗಳು, ಮಾರುಕಟ್ಟೆಗಳು …. ಜನಜೀವನಕ್ಕೆ ಎಷ್ಟೊಂದು ಸೌಕರ್ಯಗಳು !

ನೂರು ವರ್ಷಗಳ ಹಿಂದೆ ಹೀಗಿರಲಿಲ್ಲ. ಅಲ್ಲಲ್ಲಿ ಕೊಳಚೆ, ಕಸಗುಪ್ಪೆಗಳ ರಾಶಿ; ದೀಪಗಳ ಸರಿಯಾದ ವ್ಯವಸ್ಥೆಯಿಲ್ಲ; ಸ್ವಚ್ಛವಾದ ನೀರಿಗೂ ಕೊರತೆ. ಅನಾ ರೋಗ್ಯದ ಕೊಂಪೆ; ಕಾಲರಾದಂತಹ ಸಾಂಕ್ರಾಮಿಕ ರೋಗಗಳ ತವರು. ಈ ಎಲ್ಲ ದೋಷಗಳನ್ನು ಹೋಗ ಲಾಡಿಸಿ ಮುಂಬಯಿಯನ್ನು ಸುಂದರವಾಗಿ ಆರೋಗ್ಯಕರ ವಾಗಿ ಬೆಳೆಸುವುದರಲ್ಲಿ ಫಿರೋಜ್‌ಷಾರ ಪಾತ್ರ ಅತಿ ಹಿರಿದು.

ಮುಂಬಯಿಯಲ್ಲಿ ಸರ್ಕಾರೀ ನಗರಸಭೆಯ ಆಡಳಿ ತವೇ ಇತ್ತು. ಮೂವರು ಕಮೀಷನರುಗಳ ಕೈಯಲ್ಲಿಯೇ ಎಲ್ಲ ಅಧಿಕಾರವೂ ಇತ್ತು. ಆದರೆ ಇದರಿಂದ ಯಾವ ಸುಧಾರಣೆಗಳೂ ಆಗಿರಲಿಲ್ಲ. ಹೀಗಾಗಿ ಆರ್ಥರ್ ಕ್ರಾಫರ್ಡ್ ಎಂಬ ಒಬ್ಬನೇ ಅಧಿಕಾರಿಯನ್ನು ಸರ್ಕಾರ ನೇಮಿಸಿತು. ಲೆಕ್ಕಪತ್ರಗಳ ಪರಿಶೀಲನೆಗೆ ಒಬ್ಬ ಕಂಟ್ರೋಲರ್ ನೇಮಕ ಗೊಂಡರು. ನಗರದ ‘ಜಸ್ಟಿಸಸ್ ಆಫ್ ದಿ ಪೀಸ್’ (ಶಾಂತಿ ಪಾಲಕ ನ್ಯಾಯವಾದಿಗಳು) ಸಂಸ್ಥೆಯು ನಗರವನ್ನು ಪ್ರತಿನಿಧಿಸತೊಡಗಿತು. ಈ ಶಾಂತಿಪಾಲಕ ನ್ಯಾಯವಾದಿ ಗಳಲ್ಲಿ ಫಿರೋಜ್‌ಷಾ ಮೆಹತಾ ಕೂಡ ಒಬ್ಬರಾಗಿದ್ದರು. ಆಗ ಅವರಿಗೆ ೨೬ ವರ್ಷ.

ಅಗಲವಾದ ರಸ್ತೆಗಳು, ಪಾದಚಾರಿಗಳಿಗಾಗಿ ಅಂಚು ದಾರಿಗಳು ನಿರ್ಮಾಣಗೊಂಡವು. ನೀರು, ಬೆಳಕಿನ ವ್ಯವಸ್ಥೆಯಾಯಿತು. ವಿಹಾರಸ್ಥಳಗಳು, ಮಾರುಕಟ್ಟೆಗಳು ಆದಿಯಾಗಿ ಅನೇಕ ಸವಲತ್ತುಗಳನ್ನು ಮುಂಬಯಿನಗರ ಪಡೆಯಿತು.

ಆದರೆ ಸ್ವಲ್ಪ ಕಾಲದಲ್ಲಿಯೇ ಪುರಸಭೆ ಹಣವಿಲ್ಲದೆ ದಿವಾಳಿಯಾಗುವ ಸ್ಥಿತಿ ಬಂತು. ಆಗ ಅನೇಕರು ಕಮೀಷನರ್ ಇದಕ್ಕೆ ಹೊಣೆ ಎಂದು ಅವರನ್ನು ಬಹು ವಾಗಿ ನಿಂದಿಸಿದರು. ದೊಡ್ಡ ಗೊಂದಲವೇ ಆಯಿತು. ಫಿರೋಜ್‌ಷಾ ಅವರು ಕ್ರಾಫರ್ಡ್ ಮಾಡಿದ ಒಳ್ಳೆಯ ಕೆಲಸಗಳನ್ನು ಎತ್ತಿತೋರಿಸಿ, ಒಬ್ಬ ವ್ಯಕ್ತಿಯನ್ನು ಆಕ್ಷೇಪಿಸಿ ಪ್ರಯೋಜನವಿಲ್ಲ, ಆಡಳಿತ ವ್ಯವಸ್ಥೆಯಲ್ಲೇ ತಪ್ಪಿದೆ ಎಂದು ತೋರಿಸಿದರು. ಈ ಸಂದರ್ಭದಲ್ಲಿ ಮುಂಬಯಿ ನಗರಕ್ಕೆ ಎಂತಹ ಆಡಳಿತ ಬೇಕೆಂಬುದರ ಬಗ್ಗೆ ಫಿರೋಜ್‌ಷಾ ಒಂದು ಸಭೆಯಲ್ಲಿ ಹೀಗೆ ತಮ್ಮ ಸ್ಪಷ್ಟ ಅಭಿಪ್ರಾಯ ಕೊಟ್ಟರು.

“ಸರ್ಕಾರೀ ಪುರಸಭೆಗಿಂತಲೂ ಸ್ವಯಂ ಆಡಳಿತವುಳ್ಳ ಪುರಸಭೆಯೇ ಹೆಚ್ಚು ಸಮರ್ಪಕವಾಗಿ ಕೆಲಸ ಮಾಡ ಬಲ್ಲದು. ಸರ್ಕಾರೀ ಪ್ರತಿನಿಧಿಗಳಿಗಿಂತ ಜನರ ಪ್ರತಿನಿಧಿಗಳೇ ಪುರಸಭೆಯಲ್ಲಿ ಇರುವಂತಾಗಬೇಕು.

ಭಾರತದ ಚರಿತ್ರೆಯಲ್ಲಿ ಹೀಗೆ ಜನರ ಪ್ರತಿನಿಧಿಗಳು ಹಳ್ಳಿ, ನಗರಗಳ ಆಡಳಿತವನ್ನು ಉತ್ತಮವಾಗಿ ನಡೆಸಿದ ಉದಾಹರಣೆಗಳು ಧಾರಾಳ ವಾಗಿವೆ. ಜಾತಿ, ಪಂಥಗಳ ಭಾವನೆಗಳೆಂದೂ ಇದಕ್ಕೆ ಅಡ್ಡಿ ಬಂದಿಲ್ಲ. ಆದುದರಿಂದ ಜನತಾ ಪ್ರಾತಿನಿಧ್ಯ, ಸ್ವಯಂ ಆಡಳಿತ ಇವೆಲ್ಲವೂ ಭಾರತಕ್ಕೆ ಹೊಸತು, ವಿದೇಶದಿಂದ ಕಲಿಯಬೇಕಾದುದು ಎನ್ನುವುದ ರಲ್ಲಿ ಅರ್ಥವಿಲ್ಲ. ಜನತಾ ಪ್ರಾತಿನಿಧ್ಯದ ವ್ಯವಸ್ಥೆಯೇ ಯೋಗ್ಯ ಆಡಳಿತವನ್ನೂ ಒದಗಿಸುವುದು ಸಾಧ್ಯವಿದೆ.

“ಜನರ ಮುಖಂಡರೆನಿಸಿಕೊಳ್ಳುವವರ ಜವಾಬ್ದಾರಿ ಬಹಳ ದೊಡ್ಡದು. ರಮ್ಯವಾದ ಘೋಷಣೆಗಳಿಂದ ಜನಪ್ರಿಯತೆಯನ್ನು ದೊರೆಕಿಸಿಕೊಳ್ಳುವುದು ಸುಲಭ. ಆದರೆ ನಾಯಕರು ಇದಕ್ಕೇ ಆಸೆ ಪಡಬಾರದು. ಮುಂದಾಳುಗಳಿಗೆ ಜನಪ್ರಿಯತೆ ಬೇಕು ಎಂಬುದು ನಿಜ. ಇದರೊಂದಿಗೆ ಜನಸಮೂಹವನ್ನು ಯೋಗ್ಯ ದಿಕ್ಕಿನಲ್ಲಿ ಕರೆದೊಯ್ಯುವ ಹೊಣೆಯೂ ಇದೆ. ಜನರಿಗೆ ಮಾರ್ಗದರ್ಶನ ನೀಡುವ ಈ ಕರ್ತವ್ಯ ಬಹಳ ದೊಡ್ಡದು.”

ಎಲ್ಲರೂ ಕ್ರಾಫರ್ಡನನ್ನು ಬೈಯುತ್ತಿದ್ದಾಗ ಅವನು ಮಾಡಿದ್ದ ಒಳ್ಳೆಯ ಕೆಲಸವನ್ನು ಹೊಗಳುವ ಧೈರ್ಯ ಫಿರೋಜ್‌ಷಾ ಮೆಹತಾ ತೋರಿಸಿದರು. ಆಡಳಿತದಲ್ಲಿ ಜನರ ಪ್ರತಿನಿಧಿಗಳ ಮಹತ್ವವನ್ನೂ ಆ ಪ್ರತಿನಿಧಿಗಳ ಹೊಣೆಯನ್ನೂ ಕುರಿತು ಅವರು ಹೇಳಿದ ಮಾತುಗಳು ಇಂದಿಗೂ ಯೋಚಿಸಬೇಕಾದಂತಹವು.

ಪತ್ರಿಕಾ ಶಾಸನ

೧೮೭೮ ರಲ್ಲಿ ಬ್ರಿಟಿಷ್ ಸರ್ಕಾರವು ದೇಶೀಯ ಪತ್ರಿಕಾ ಶಾಸನವೆಂಬ ಕಾನೂನನ್ನು ಜಾರಿಗೆ ತಂದಿತು. ಇದರ ಪ್ರಕಾರ ಭಾರತೀಯ ಪತ್ರಿಕೆಗಳೆಲ್ಲವೂ ಪ್ರಕಟಣೆಗೆ ಮೊದಲೇ ಸರ್ಕಾರದಿಂದ ಪರಾಮರ್ಶಿಸಲ್ಪಡಬೇಕು. ಅಥವಾ ಪತ್ರಿಕೆಗಳು ಸರ್ಕಾರದೊಡನೆ ಠೇವಣಾತಿಯನ್ನು ಇಡಬೇಕು.

ಬ್ರಿಟಿಷರ ಗೌರವಕ್ಕೆ ಧಕ್ಕೆಬರುವ ಸುದ್ದಿಗಳು ಪ್ರಕಟ ವಾದರೆ ಸರ್ಕಾರಕ್ಕೆ ಈ ಠೇವಣಾತಿಯನ್ನು  ಕಬಳಿಸುವ ಅಧಿಕಾರವು ಸಿಕ್ಕಿತು. ಇದರೊಂದಿಗೇ ಪತ್ರಿಕೆಗಳನ್ನು ನಿಲ್ಲಿಸುವ ಅಧಿಕಾರವೂ ಸರ್ಕಾರದ್ದು. ಆದರೆ ಇಂಗ್ಲಿಷ್ ಪತ್ರಿಕೆಗಳಿಗೆ ಈ ಕಾನೂನು ಅನ್ವಯಿಸುತ್ತಿರಲಿಲ್ಲ!

ಇದು ಪರದೇಶದ ಸರ್ಕಾರ, ಈ ದೇಶದವರ ಸ್ವಾತಂತ್ರ್ಯವನ್ನು ಕಸಿಯುವ ತಂತ್ರವಾಗಿತ್ತು. ಈ ಮೂಲಕ ಭಾರತೀಯರ ವಿಚಾರಗಳನ್ನು ಅಭಿಪ್ರಾಯಗಳನ್ನು ಹತ್ತಿಕ್ಕುವ ತಂತ್ರವಾಗಿತ್ತು. ಭಾರತದ ಮೂಲೆಮೂಲೆಯಿಂದಲೂ ಇದಕ್ಕೆ ವಿರೋಧ ಬಂತು.

ಫಿರೋಜ್‌ಷಾ ಹೇಗೆ ಸುಮ್ಮನೆ ಇದ್ದಾರು ? ‘ಟೈಮ್ಸ್ ಆಫ್ ಇಂಡಿಯ’ ಪತ್ರಿಕೆಗೆ ಪತ್ರ ಬರೆದೇಬಿಟ್ಟರು. ಸರ್ಕಾರದ ನೀತಿಯನ್ನು ಬಲವಾಗಿ ಆಕ್ಷೇಪಿಸಿದರು. ಭಾರತೀಯ ಭಾಷೆಗಳಲ್ಲಿ ಪ್ರಕಟವಾಗುವ ಪತ್ರಿಕೆಗಳಿಗೇಕೆ ಈ ಅಪಮಾನ ಎಂದು ಕೇಳಿದರು. ಬ್ರಿಟಿಷರಿಗೆ ಒಂದು ಲೇಖನದಿಂದ ಅಪಮಾನವಾಯಿತೆ ಎಂದು ತೀರ್ಮಾನಿಸುವವರು ಯಾರು, ಬ್ರಿಟಿಷರೇ ಅಲ್ಲವೇ ? ಇದು ಸರಿಯಲ್ಲ ಎಂದು ಘೋಷಿಸಿದರು.

ಬ್ರಿಟಿಷರು ಇದಕ್ಕೆ ಕಿವಿಗೊಡಲಿಲ್ಲ. ಗಾಯಕ್ಕೆ ಉಪ್ಪು  ಎರೆಯುವಂತೆ ೧೮೭೯ ರಲ್ಲಿ ಇನ್ನೊಂದು ಶಾಸನ ಜಾರಿಗೆ ಬಂತು. ಸರ್ಕಾರ ಭಾರತಕ್ಕೆ ಆಮದಾಗುವ ಹತ್ತಿ ಬಟ್ಟೆಗಳ ಮತ್ತು ಹತ್ತಿ ಸಾಮಾನುಗಳ ಮೇಲಿನ ತೆರಿಗೆಯನ್ನು ತೆಗೆದುಹಾಕಿತು. ಇದನ್ನು ಮುಕ್ತವ್ಯಾಪಾವೆಂದು ದೊಡ್ಡ ಹೆಸರಿನಿಂದ ಕರೆಯಿತು.

ವಿದೇಶದಿಂದ ಹತ್ತಿ ಮಾಲುಗಳು ಅಗ್ಗವಾಗಿ ಸಿಕ್ಕಿದರೆ ದೇಶದ ವ್ಯಾಪಾರ, ಉದ್ಯಮಗಳು ಬೆಳೆಯುವುದು ಹೇಗೆ? ಇವುಗಳಿಗೆ ಪ್ರೋತ್ಸಾಹ ಎಲ್ಲಿಂದ ಸಿಗಬೇಕು ? ಅಲ್ಲದೆ ಭಾರತ ಸರ್ಕಾರಕ್ಕೆ ಸಿಗುವ ತೆರಿಗೆಗೆ ಖೋತಾ ಬಿದ್ದರೆ ದೇಶದ ಆಡಳಿತಕ್ಕೆ ಹಣ ಎಲ್ಲಿಂದ ಬರಬೇಕು ? ದೇಶದಲ್ಲಿ ಅವಿದ್ಯೆ, ಅನಾರೋಗ್ಯ, ಕ್ಷಾಮಡಾಮರಗಳು ಇದ್ದಾಗ ಭಾರತ ಸರ್ಕಾರಕ್ಕೆ ಹಣದ ಅಗತ್ಯವಿಲ್ಲವೇ ? ಇಷ್ಟೆಲ್ಲ ಏತಕ್ಕೆ – ಇಂಗ್ಲೆಂಡಿನಲ್ಲಿ ತಯಾರಾದ ವಸ್ತುಗಳು ಭಾರತದಲ್ಲಿ ಮಾರಾಟವಾಗಿ ಇಂಗ್ಲಿಷ್ ವರ್ತಕರಿಗೆ ಹಣ ದೊರೆಯಲಿ ಎಂದಲ್ಲವೆ ?

ಭಾರತೀಯರು ಇದನ್ನು ಪ್ರಬಲವಾಗಿ ಪ್ರತಿಭಟಿ ಸಿದರು. ಮುಂಬಯಿಯಲ್ಲಿ ಬೃಹತ್ ಸಭೆ ಸೇರಿತು. ಫಿರೋಜ್‌ಷಾ ಮೆಹತಾ ಇದರಲ್ಲಿ ಮುಖ್ಯವಾದ ಪಾತ್ರ ವಹಿಸಿದರು. ಸಭೆ ಪ್ರತಿಭಟನೆಯ ನಿರ್ಣಯವನ್ನು ಮಾಡಿತು. ಫಿರೋಜ್‌ಷಾ ಇದಕ್ಕೆ ಸಹಿ ಹಾಕಿ ಬ್ರಿಟಿಷ್ ಸಂಸತ್ತಿನ ‘ಹೌಸ್ ಆಫ್ ಕಾಮನ್ಸ್’ಗೆ ಕಳುಹಿಸಿಕೊಟ್ಟರು.

‘ತನ್ನ ದೇಶವನ್ನು ಪ್ರೀತಿಸಿದಷ್ಟೂ ತನ್ನ, ದೇಶದವರಿಗೆ ಸೇವೆ ಮಾಡಿದಷ್ಟೂ ಒಬ್ಬ ಪಾರ್ಸಿ ಇನ್ನೂ ಒಳ್ಳೆಯ ಪಾರ್ಸಿ, ಹಿಂದು ಇನ್ನೂ ಒಳ್ಳೆಯ ಹಿಂದು, ಮುಸ್ಲಿಂ ಇನ್ನೂ ಒಳ್ಳೆಯ ಮುಸ್ಲಿಂ ಆಗುತ್ತಾನೆ

ಫಿರೋಜ್ ಧೈರ್ಯವಾಗಿ ತಮ್ಮ ಕರ್ತವ್ಯವನ್ನು ಮಾಡಿದರು. ಆದರೆ ಇಂಗ್ಲಿಷ್ ಸರ್ಕಾರ ಭಾರತದ ಪ್ರತಿಭಟನೆಗೆ ಕಿವಿಗೊಡಲಿಲ್ಲ.

ನಿಷ್ಠುರ ಕಾರ್ಪೊರೇಟರ್

ಭಾರತಕ್ಕೆ ಅಧಿಕಾರಿಗಳಾಗಿ ಬಂದ ಬ್ರಿಟಿಷರಲ್ಲಿ ಬಹು ಮಂದಿಗೆ ತಮ್ಮ ಕುಲದ ಬಗ್ಗೆ ದುರಭಿಮಾನ ತುಂಬಿತ್ತು. ಭಾರತೀಯರನ್ನು ಹೀನವಾಗಿ ಕಾಣುವುದೇ ಅಭ್ಯಾಸ ವಾಗಿತ್ತು.

ಭಾರತಕ್ಕೆ ಏಳನೆಯ ಏಡ್ವರ್ಡ್ ದೊರೆ ಭೇಟಿ ಕೊಡಲಿದ್ದ ಸಮಯ. ಮುಂಬಯಿ ಕಾರ್ಪೊರೇಷನ್ನಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನಡೆಯಿತು. ದೋಸಾಭಾಯಿ ಫ್ರೇಮ್‌ಜಿ ಎಂಬ ಭಾರತೀಯರೂ, ಮೆಕ್‌ಲೀನ್ ಎಂಬ ಇಂಗ್ಲಿಷರವನೂ ಸ್ಪರ್ಧಿಸಿದ್ದರು. ಮೆಕ್‌ಲೀನ್ ಸೋತರು. ಇದರಿಂದ ಅವರಿಗೂ, ಹಲವರು ಇಂಗ್ಲಿಷರಿಗೂ ತುಂಬಾ ಸಿಟ್ಟು ಬಂತು.

ಬ್ರಿಟನ್ನಿನ ರಾಜ, ಭಾರತದ ಚಕ್ರವರ್ತಿ ಭಾರತಕ್ಕೆ ಬಂದಾಗ, ಮೊಟ್ಟಮೊದಲು ಮುಂಬಯಿಯಲ್ಲಿ ಕಾಲಿಟ್ಟಾಗ ಒಬ್ಬ ಭಾರತೀಯ ಅವರನ್ನು ಸ್ವಾಗತಿಸುವುದೇ? ಈ ಗೌರವ ಬ್ರಿಟಿಷರಿಗೆ ಸಲ್ಲಬೇಕು ಎಂದು ಅವರು ವಾದಿಸಿದರು. ಅಲ್ಲದೆ ಚುನಾವಣೆಯಲ್ಲಿ ಜಾತೀಯ ಪಕ್ಷಪಾತ ನಡೆದಿದೆ ಯೆಂದು ಆರೋಪಿಸುವ ಕೀಳುಮಟ್ಟಕ್ಕೂ ಅವರು ಇಳಿದರು.

ಫಿರೋಜ್‌ಷಾ ಕೊಟ್ಟ ಪ್ರತ್ಯುತ್ತರ ಅತ್ಯಂತ ಗೌರವ ಯುತವಾಗಿತ್ತು. ಕೇವಲ ಗುಣಮಟ್ಟವನ್ನೇ ಹೊಂದಿಕೊಂಡು ನಡೆದ ಚುನಾವಣೆಯನ್ನು ಗೌರವಿಸುವ ಸೌಜನ್ಯವನ್ನು ಬ್ರಿಟಿಷರು ತೋರಬೇಕು ಎಂದವರು ಹೇಳಿದರು. ಅಲ್ಲದೆ ಪ್ರಾಮಾಣಿಕವಾದ ಆಡಳಿತವನ್ನು ನಡೆಸುವುದರಲ್ಲಿ ಭಾರತೀಯ ಯಾವ ದೇಶದವರಿಗೂ ಕಡಮೆ ಇಲ್ಲ ಎಂದರು.

ವಾಲ್ಟನ್ ಎಂಬವರು ಕಾರ್ಪೊರೇಷನ್ನಿನ ಎಕ್ಸಿ ಕ್ಯೂಟಿವ್ ಎಂಜಿನಿಯರ್ ಆಗಿದ್ದ ಸಂದರ್ಭದಲ್ಲಿ ಒಂದು ಒಂದು ಸಂಗತಿ ನಡೆಯಿತು.

ಮಲಬಾರ್ ಹಿಲ್ ಎಂಬಲ್ಲಿ ಕೆರೆ ಕಟ್ಟಿಸುವಾಗ ಇಂಜಿ ನಿಯರರು ಒಬ್ಬ ಕಂಟ್ರ್ಯಾಕ್ಟರಿಗೆ ಕಾರ್ಪೊರೇಷನ್ನಿನ ವ್ಯಾಪಿಯೊಳಗಿರುವ ಕಲ್ಲುಗಳನ್ನು ತೆಗೆಯಲು ಕಾರ್ಪೊ ರೇಷನ್ನಿನ ಒಪ್ಪಿಗೆಯಿಲ್ಲದೇ ಅನುಮತಿ ನೀಡಿದರು.

ಫಿರೋಜ್‌ಷಾ ಈ ಅಧಿಕಾರಿಯ ಮೇಲೆ ಕರ್ತವ್ಯ ಭ್ರಷ್ಟತೆಯ ಆರೋಪ ಹೊರಿಸಿದರು. ಅವರನ್ನು ವಜಾ ಗೊಳಿಸಬೇಕೆಂದು ಪಟ್ಟುಹಿಡಿದರು.

ಬ್ರಿಟಿಷರೆಂದರೆ ಸ್ವರ್ಗದಿಂದಿಳಿದುಬಂದ ದೇವತೆ ಗಳೋ ಎಂಬಂತಿದ್ದ ಆ ಕಾಲದಲ್ಲಿ ಇಂತಹ ಒಂದು ದಿಟ್ಟ ಹೆಜ್ಜೆಯಿಂದ ಎಲ್ಲ ಬ್ರಿಟಿಷ್ ಸದಸ್ಯರೂ ಫಿರೋಜ್‌ಷಾರ ಮೇಲೆ ಉರಿದುಬಿದ್ದರು. ಕಾರ್ಪೊರೇಷನ್ ನಾಲ್ಕಾರು ಬಾರಿ ಸಭೆ ಸೇರಿತು. ಬಿಸಿಯಾಗಿ ಚರ್ಚೆ ನಡೆಯಿತು. ಮುಂಬಯಿ ಜನತೆ ಎಚ್ಚೆತ್ತಿತು.

ನಿಷ್ಪಕ್ಷಪಾತಿ

ಬ್ರಿಟಿಷರ ಧೋರಣೆಯನ್ನು ಖಂಡಿಸುವುದರಲ್ಲಿ ಮಾತ್ರ ಇವರದು ಎತ್ತಿದ ಕೈ ಎಂದು ತಿಳಿದರೆ ತಪ್ಪಾಗುತ್ತದೆ. ಮೆಹತಾ ಸ್ವತಃ ಪಾರ್ಸಿಯಾಗಿದ್ದರು. ಆದರೆ ನ್ಯಾಯ, ನೀತಿಗಳಲ್ಲಿ ಜಾತೀಯ ಭಾವನೆಗೆ ಎಂದೂ ಒಳಗಾಗಲಿಲ್ಲ.

ಚೌಪಾತಿ ರಸ್ತೆಯ ಯೋಜನೆ ಕಾರ್ಪೋರೇಷನ್ನಿನ ಮುಂದೆ ಬಂದಾಗ ಅದಕ್ಕೆ ತಾಗಿಕೊಂಡೇ ಇರುವ ಪಾರ್ಸಿಗಳ ಆಸ್ತಿಯನ್ನು ಸರ್ಕಾರ ಸ್ವಾಧೀನಪಡಿಸಿ ಕೊಳ್ಳಲೇಬೇಕಾಗಿತ್ತು. ಆದರೆ ಪಾರ್ಸಿಗಳಿಂದ ಇದಕ್ಕೆ ವಿರೋಧ ಬಂತು. ಅಲ್ಪ ಸಂಖ್ಯಾತರಾಗಿರುವ ತಮ್ಮ ಭಾವನೆಗಳನ್ನು ನೋಯಿಸಬಾರದೆಂದು ಅವರು ವಿನಂತಿ ಸಿದರು. ತಮ್ಮವರೇ ಆದ ಫಿರೋಜ್‌ಷಾ ತಮ್ಮ ವಾದವನ್ನು ಎತ್ತಿ ಹಿಡಿಯುವರೆಂದು ಅವರು ಭಾವಿಸಿದರು.

ಆದರೆ ಫಿರೋಜ್‌ಷಾ ಸ್ಪಷ್ಟ ಮಾತುಗಳಲ್ಲಿ ಹೇಳಿದರು: “ಮುಂಬಯಿ ನಗರದ ಸುಧಾರಣೆಗಾಗಿ ಕಾರ್ಪೊರೇಷನ್ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಇದರ ಸದಸ್ಯನಾಗಿ ನನಗೆ ಹೆಚ್ಚಿನ ಜವಾಬ್ದಾರಿಯಿದೆ.” ಅನಂತರ ಅವರು ಪಾರ್ಸಿ ಪಂಚಾಯಿತಿಯ ಪತ್ರವ್ಯವಹಾರಗಳನ್ನು ಪರಿಶೀಲಿಸಿದರು. ಕಾರ್ಪೊರೇಷನ್ ಮತ್ತು ಪಂಚಾ ಯಿತಿಯ ನಡುವೆ ನ್ಯಾಯವಾಗಿ ವಿಷಯ ತೀರ್ಮಾನ ವಾಗುವಂತೆ ಪ್ರಯತ್ನಿಸಿದರು. ಆಸ್ತಿ ಸ್ವಾಧೀನವಾಗುವ ಹೊತ್ತಿಗೆ ಸರಿಯಾದ ವ್ಯವಹಾರ ನಡೆಯುವಂತೆ ತಳಪಾಯ ವನ್ನು ಹಾಕಿದವರೇ ಫಿರೋಜ್‌ಷಾ.

ಜಾತಿಮಟ್ಟದ ರಾಜಕೀಯದಿಂದ ಅವರು ಬಹಳ ದೂರವಿದ್ದರು. ಅವರ ರಾಜಕೀಯ ಜೀವನದಲ್ಲಿ ಪ್ರಾಮಾಣಿ ಕತೆ, ನಿಷ್ಪಕ್ಷಪಾತ, ನಿಷ್ಠುರತೆ, ನಿರ್ಭೀತಿ ಮೊದಲಾದವು ಎದ್ದು ಕಾಣುವ ಗುಣಗಳು.

ಫಿರೋಜ್‌ಷಾ ಹೇಳುತ್ತಿದ್ದರು; “ತನಗೆ ಜನ್ಮ ಕೊಟ್ಟ ಭೂಮಿಯನ್ನು ಪ್ರೀತಿಸಬೇಕು. ಎಲ್ಲ ಭಾರತೀಯರ ಆಸೆ ಆಕಾಂಕ್ಷೆಗಳು ಒಂದೇ.”

ಮಾಥೆರಾನ್ ಪ್ರಕರಣ

ಮಾಥೆರಾನ್ ಎಂಬುದು ಒಂದು ವಿಶ್ರಾಂತಿಧಾಮ. ಇದು ಎತ್ತರವಾದ ಗುಡ್ಡಪ್ರದೇಶವಾದುದರಿಂದ ಶ್ರೀಮಂತರು ವಿಶ್ರಾಂತಿಗೆ ಬರುವುದು ರೂಢಿಯಾಗಿತ್ತು. ಒಮ್ಮೆ ಅಲ್ಲಿ ಪ್ಲೇಗ್ ರೋಗ ಕಾಣಿಸಿಕೊಂಡಿತು. ಮಾಥೆರಾನ್‌ನ ಮೇಲ್ವಿಚಾರಣೆ ಮೇಜರ್ ಕಾಲಿ ಎಂಬವರಿಗೆ ಸೇರಿತ್ತು. ಪ್ಲೇಗ್ ಹರಡದಂತೆ ಎಚ್ಚರಿಕೆ ವಹಿಸುವುದಕ್ಕಾಗಿ ಅವರು ಒಂದು ಆಜ್ಞೆಯನ್ನು ಹೊರಡಿಸಿದರು. ಇದರ ಪ್ರಕಾರ ಮಾಥೆರಾನ್‌ಗೆ ಬಂದವರೆಲ್ಲರೂ ಪ್ರತಿದಿನ ಸೂಪರಿಂಟೆಂ ಡೆಂಟರ ಕಚೇರಿಯಲ್ಲಿ ಹಾಜರಾಗಬೇಕು ; ದೈಹಿಕ ಪರೀಕ್ಷೆಗೆ  ಒಳಗಾಗಬೇಕು. ಎರಡು ದಿನಗಳಿಗೊಮ್ಮೆ ಪರೀಕ್ಷೆ ಮಾಡಿಸಿ ಕೊಳ್ಳಲು ಐವತ್ತು ರೂಪಾಯಿಗಳನ್ನು ಒಪ್ಪಿಸಬೇಕು.

ಫಿರೋಜ್‌ಷಾರಿಗೆ ಇದು ಅರ್ಥಹೀನವಾಗಿ ಕಂಡಿತು. ದಿನವೂ ಕಚೇರಿಗೆ ಹೋಗಿ ಯಾರು ಪರೀಕ್ಷೆ ಮಾಡಿಸಿಕೊಳ್ಳ ಬೇಕು? ವಿಶ್ರಾಂತಿಗೆಂದು ಬರುವವರಿಗೆ ಇಂದೆಂತಹ ಶಿಕ್ಷೆ? ಅವರು ಹೋಗಲು ನಿರಾಕರಿಸಿದರು. ತಾವು ಇಳಿದು ಕೊಂಡಿದ್ದ ಬಂಗಲೆಗೆ ಬಂದು ಯಾರಾದರೂ ಪರೀಕ್ಷೆ ಮಾಡುವುದಾದರೆ ತಮ್ಮ ಆಕ್ಷೇಪವಿಲ್ಲವೆಂದರು.

ಸರಿ, ಮೇಜರ್ ಕಾಲಿಯವರಿಗೂ ಫಿರೋಜ್‌ಷಾ ರಿಗೂ ವಿರಸ ಪ್ರಾರಂಭವಾಯಿತು. ಕಾಲಿ ಬಲು ಕಟ್ಟುನಿಟ್ಟಿನ ಮನುಷ್ಯರು. ಫಿರೋಜ್‌ಷಾ ಅನ್ಯಾಯವನ್ನು ಧೈರ್ಯವಾಗಿ ಪ್ರತಿಭಟಿಸುವವರು. ಪ್ಲೇಗನ್ನು ತಡೆಯಲು ಸರ್ಕಾರ ಮಾಡಿದ ನಿಯಮಗಳಲ್ಲಿ ಎಲ್ಲಿಯೂ ಜನ ಕಚೇರಿಗೆ ಹೋಗಿ ಹಣಕೊಟ್ಟು ಪ್ರತಿದಿನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿಲ್ಲ ಎಂದು ಫಿರೋಜ್‌ಷಾ ವಾದಿಸಿದರು. ಕಡೆಗೆ ಕಾಲಿ ಸಾಹೇಬರು ಸುಮ್ಮನಾಗಬೇಕಾಯಿತು.

ಫಿರೋಜ್‌ಷಾ ಇಷ್ಟಕ್ಕೇ ಬಿಡಲಿಲ್ಲ. ಪ್ಲೇಗ್ ಕಮೀ ಷನರಿಗೂ ಮತ್ತು ಗವರ್ನರರ ಕಾರ್ಯದರ್ಶಿಗಳಿಗೂ ಕಾಗದ ಬರೆದರು. ಪತ್ರಿಕೆಗೆ ಎಲ್ಲ ಪತ್ರ ವ್ಯವಹಾರವನ್ನು ಕಳುಹಿಸಿ ವಿಷಯಗಳನ್ನು ಬಹಿರಂಗಗೊಳಿಸಿದರು.

ಪರಿಣಾಮವಾಗಿ ಇಂತಹ ಕಿರುಕುಳಗಳು ನಿಂತು ಹೋದವು. ಜನರಲ್ಲೂ ಪ್ರತಿಭಟನೆಯ ಶಕ್ತಿ, ಸ್ವಾಭಿಮಾನ ಗಳು ಜಾಗೃತವಾದವು.

ಮೆಹತಾರ ಜೀವನದ ಸೋಲುಗಳು

ಫಿರೋಜ್‌ಷಾರಿಗೆ ಎಲ್ಲ ಕೆಲಸಗಳಲ್ಲಿಯೂ ಜಯವೇ ಸಿಕ್ಕುತ್ತಿತ್ತು. ಅವರ ಜೀವನ ಹೂವಿನ ಸುಪ್ಪತ್ತಿಗೆಯಾಗಿತ್ತು ಎಂದು ತಿಳಿದುಕೊಂಡರೆ ತಪ್ಪಾಗುತ್ತದೆ. ಅವರ ನೇರವಾದ ಮಾತುಗಳು ಸತ್ಯ, ನ್ಯಾಯಗಳಿಗಾಗಿ ನಿಷ್ಠುರವಾದ ವರ್ತನೆ ಇವುಗಳಿಂದಾಗಿ ಅನೇಕ ಶತ್ರುಗಳೂ ನಿರ್ಮಾಣವಾಗಿದ್ದರು. ಹ್ಯಾರಿಸನ್ ಎಂಬ ಇಂಗ್ಲಿಷರವನು ಸರ್ಕಾರದಲ್ಲಿ ಅಕೌಂಟೆಂಟ್ ಜನರಲ್ ಆಗಿ ದೊಡ್ಡ ಹುದ್ದೆಯಲ್ಲಿದ್ದ. ಆತನಿಗೆ ಫಿರೋಜರನ್ನು ಖಂಡರೆ ಆಗುತ್ತಿರಲಿಲ್ಲ. ಒಂದು ವಿಷಯದಲ್ಲಿ ಮನಸ್ತಾಪವೂ ಬಂತು. ಫಿರೋಜ್‌ಷಾ ಮುಂಬಯಿ ಕಾರ್ಪೊರೇಷನ್ನನ್ನು ಆಳತೊಡಗಿದ್ದಾರೆ; ಇವರ ಮನಸ್ಸಿಗೆ ಅನುಸಾರವಾಗಿಯೇ ಎಲ್ಲವೂ ನಡೆ ಯುತ್ತಿದೆ ಎಂದು ಹ್ಯಾರಿಸನ್‌ಗೆ ಕಂಡಿತು. ಹೇಗಾದರೂ ಇವರನ್ನೊಮ್ಮೆ ಅಧಿಕಾರದ ಗದ್ದುಗೆಯಿಂದ ತಳ್ಳಿಬಿಡಬೇಕು ಎಂದು ಸಾಧಿಸಹತ್ತಿದರು.

ಕಾರ್ಪೊರೇಷನ್ನಿನ ಜೀವಾಳವೇ ಎಂದೆನಿಸಿದ ಇವರನ್ನು ಕಿತ್ತು ಹಾಕುವುದು ಒಬ್ಬಿಬ್ಬರಿಂದ ಆಗುವಷ್ಟು ಸುಲಭದ ಕೆಲಸವಲ್ಲ ಎಂದೂ ತಿಳಿಯಿತು. ಮೆಹತಾರ ವಿರೋಧಿಗಳನ್ನು ಹುಡುಕಹತ್ತಿದರು. ಲೋವಟ್ ಫ್ರೇಜರ್ ಎಂಬ ಪತ್ರಿಕೋದ್ಯಮಿ ಯಾವಾಗಲೂ ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಮೆಹತಾರ ವಿರೋಧವಾಗಿಯೇ ಬರೆಯುತ್ತಿದ್ದರು. ಹ್ಯಾರಿಸನ್ ಇವರನ್ನು ಸೇರಿಕೊಂಡರು. ಈ ಕೂಟಕ್ಕೆ ಮುಂಬಯಿ ಕಲೆಕ್ಟರರೂ ಪೊಲೀಸ್ ಕಮೀಷನರರೂ ಸೇರಿದರು !

೧೯೦೭ ರಲ್ಲಿ ಫಿರೋಜ್‌ಷಾ ಎಂದಿನಂತೆ ಕಾರ್ಪೊರೇಷನ್ ಚುನಾವಣೆಗೆ ನಿಂತರು. ಆರುನೂರು ಶಾಂತಿಪಾಲಕ ನ್ಯಾಯವಾದಿಗಳಿಗೆ ಮತಗಳನ್ನು ಚುನಾಯಿ ಸುವ ಹಕ್ಕು ಇತ್ತು. ಹದಿನಾರು ಮಂದಿಯನ್ನು ಕಾರ್ಪೊ ರೇಷನ್ ಸದಸ್ಯರನ್ನಾಗಿ ಆರಿಸಬೇಕಾಗಿತ್ತು. ಇತರ ಸಮಯದಲ್ಲಾದರೆ ಮೆಹತಾರ ವಿನಂತಿ ಬಂದೊಡನೆಯೇ ಹೆಚ್ಚಿನವರೆಲ್ಲರೂ ಫಿರೋಜ್‌ಷಾರಿಗೂ ಅವರ ಅನುವರ್ತಿ ಗಳಿಗೂ ಮತ ನೀಡುತ್ತಿದ್ದರು.

ಈ ಬಾರಿ ದೊಡ್ಡ ಅಧಿಕಾರಿಗಳ ಈ ಗುಂಪು ತಮ್ಮ ಎಲ್ಲ ಅಧಿಕಾರವನ್ನೂ, ಪ್ರಭಾವವನ್ನೂ ಮೆಹತಾರ, ವಿರೋಧವಾಗಿ ಬಳಸಿತು. ನ್ಯಾಯವಾದಿಗಳನ್ನು ಬಗಲಿಗೆ ಹಾಕಿಕೊಂಡಿತು. ಪತ್ರಿಕೆಯಲ್ಲಿ ಒಂದೇ ಸಮನೆ ಅಪಪ್ರಚಾರ ನಡೆಯಿತು. ಹ್ಯಾರಿಸನ್ ಹಟದಿಂದ ತಮಗೆ ಸರಿಕಂಡ ಹದಿನಾರು ಮಂದಿಯನ್ನು ಹೆಸರಿಸಿದರು. ಅವರಲ್ಲಿ ಕೆಲವರಿಗಂತೂ ಸ್ಪರ್ಧಿಸುವ ಮನಸ್ಸು ಕೂಡ ಇರಲಿಲ್ಲ.

ಹ್ಯಾರಿಸನ್ ಎಲ್ಲ ಪ್ರಭಾವವನ್ನೂ ಉಪಯೋಗಿ ಸಿದರು. ಕಂದಾಯದ ಅಧಿಕಾರಿಗಳು, ಸುಂಕದ ಅಧಿಕಾರಿಗಳು, ರೈಲ್ವೆ ಅಧಿಕಾರಿಗಳು, ಎಲ್ಲರಿಂದ ಒತ್ತಡ ತಂದು ತಾವು ಹೆಸರಿಸಿದ ಸದಸ್ಯರಿಗೇ ಮತಗಳು ಬೀಳುವಂತೆ ನೋಡಿಕೊಂಡರು. ಅಧಿಕಾರಗಳು ಸೇರಿದ್ದ, ಬಲವಾದ ಈ ಚಳವಳಿಯ ಎದುರು ಫಿರೋಜರಾಗಲೀ ಅವರ ಸ್ನೇಹಿತರಾಗಲೀ ಹೆಚ್ಚಿಗೆ ಏನೂ ಮಾಡುವಂತಿರ ಲಿಲ್ಲ. ನ್ಯಾಯವಾದ ಎಲ್ಲ ಪ್ರಯತ್ನಗಳನ್ನೂ ಮಾಡಿದರು.

ಪರಿಣಾಮವಾಗಿ ಹ್ಯಾರಿಸನ್ ಹೆಸರಿಸಿದ ಹದಿನಾರು ಮಂದಿಯಲ್ಲಿ ಹದಿನೈದು ಮಂದಿ ಗೆದ್ದುಬಂದರು ! ಫಿರೋಜ್‌ಷಾ ಸೋತರು ! ಯಾರು ಜೀವನಪೂರ್ತಿ  ಸಮಾಜಕ್ಕಾಗಿ ದುಡಿದರೋ ಬೃಹತ್ ಮುಂಬಯಿಯನ್ನು ಕಟ್ಟುವುದಕ್ಕಾಗಿ ಶ್ರಮಿಸಿದರೋ ಅಂತಹ ಮಹಾಪುರುಷನಿಗೆ ಎಂತಹ ತೇಜೋಭಂಗ !

ಇನ್ನೊಮ್ಮೆ ಪಾರ್ಸಿ ಪಂಚಾಯಿತಿಗೆ ಟ್ರಸ್ಟಿಗಳ ನೇಮಕಕ್ಕೆ ಚುನಾವಣೆ ನಡೆದಾಗಲೂ ಮೆಹತಾರಿಗೆ ಭಾರೀ ಸೊಲು, ಅಪಮಾನ ಕಾದಿತ್ತು. ಏಕೆ ? ಫಿರೋಜ್ ಎಲ್ಲ ವಿಷಯಗಳಲ್ಲಿ ನ್ಯಾಯವಾಗಿ ವರ್ತಿಸಿದ್ದರಲ್ಲದೇ ಜಾತಿ ಬಾಂಧವರು ಎಂಬ ಪಕ್ಷಪಾತವನ್ನು ತೋರಿಸಲಿಲ್ಲವಲ್ಲ? ಆದುದರಿಂದ ಫಿರೋಜ್, ಪಾರ್ಸಿಗಳ ವಿರೋಧಿ ಎಂಬ ಅಪಪ್ರಚಾರ ಧಾರಾಳವಾಗಿ ನಡೆಯಿತು. ಪರಿಣಾಮ? ಫಿರೋಜ್ ಸೋತರು. ಆದರೆ ಗೆಲವಿನಲ್ಲಿ ಹಿಗ್ಗದೆ ಮೆಹತಾ ಸೋಲಿನಲ್ಲಿ ಕುಗ್ಗದೇ ಎಂದಿನಂತೆ ತಮ್ಮ ಕರ್ತವ್ಯಗಳನ್ನು ಮಾಡುತ್ತಲೇ ಹೋದರು. ಈ ಮಹಾ ಪುರುಷರಿಂದ ಸೇವೆ ಪಡೆದುಕೊಳ್ಳುವ ಅವಕಾಶವನ್ನು ಪಂಚಾಯತು ಕಳೆದುಕೊಂಡಿತು.

ಕಾಂಗ್ರೆಸಿನಲ್ಲಿ ಫಿರೋಜ್‌ಷಾ

ಭಾರತೀಯರಲ್ಲಿ ಸ್ವಾಭಿಮಾನ ಜಾಗೃತವಾಗ ತೊಡಗಿತ್ತು. ಬ್ರಿಟಿಷರ ಆಡಳಿತದ ಅನ್ಯಾಯಗಳ ವಿರುದ್ಧವಾಗಿ ತಾವು ಸಂಘಟಿತರಾಗಬೇಕು ಎಂಬ ಪ್ರಜ್ಞೆ ಮೂಡಿತ್ತು. ಒಗ್ಗಟ್ಟಿನಲ್ಲಿ ಬಲವಿದೆ ; ತಾವೆಲ್ಲರೂ ಒಟ್ಟಾಗ ಬೇಕು; ಒಂದು ಸಂಸ್ಥೆಯನ್ನು ಕಟ್ಟಬೇಕು ಎಂದು ಮುಖಂಡರು ಯೋಚಿಸುತ್ತಿದ್ದರು. ಇದರ ಫಲವಾಗಿ ೧೮೮೫ ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್) ಜನ್ಮ ತಾಳಿತು. ಕಾಂಗ್ರೆಸಿನ ಮೊದಲನೇ ಅಖಿಲ ಭಾರತೀಯ ಅಧಿವೇಶನವು ಮುಂಬಯಿಯಲ್ಲಿ ನಡೆಯಿತು. ಫಿರೋಜ್‌ಷಾ ಬಹಳ ಉತ್ಸಾಹದಿಂದ ಅದರಲ್ಲಿ ಭಾಗವಹಿಸಿದರು.

ಕಾಂಗ್ರೆಸಿನ ಆರಂಭದ ದಿನಗಳಿಂದಲೂ ಅದರ ಏಳಿಗೆಗಾಗಿ ದುಡಿದ ಕೆಲವೇ ನಿಸ್ವಾರ್ಥ ಮುಂದಾಳು ಗಳಲ್ಲಿ ಫಿರೋಜ್‌ಷಾ ಒಬ್ಬರು. ಅನೇಕ ಅಧಿವೇಶನಗಳಲ್ಲಿ  ಭಾಗವಹಿಸಿ ಭಿನ್ನಾಭಿಪ್ರಾಯಗಳನ್ನು, ಒಡಕುಗಳನ್ನು ನಿವಾರಿಸಲು ತುಂಬ ಶ್ರಮಿಸಿದರು. ಮುಂಬಯಿಯಲ್ಲಿ ನಡೆಯುತ್ತಿದ್ದ ಅಧಿವೇಶನಗಳ ಯಶಸ್ಸಿನ ಬಹುಭಾಗ ಅವರಿಗೇ ಸಲ್ಲಬೇಕು. ಪ್ರತಿ ಬಾರಿಯೂ ಅವರೇ ಸ್ವಾಗತ ಸಮಿತಿಯ ಅಧ್ಯಕ್ಷರಾಗಿರುತ್ತಿದ್ದರು. ೧೮೯೦ರಲ್ಲಿ ಕಲ್ಕತ್ತದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಅವರೇ ಅಧ್ಯಕ್ಷರಾಗಿ ಆಯ್ಕೆಯಾದರು.

ಗೋಪಾಲ ಕೃಷ್ಣ ಗೋಖಲೆ, ಫಿರೋಜ್‌ಷಾ ಮೆಹತಾ..

ಅವರು ತಮ್ಮ ಭಾಷಣದಲ್ಲಿ ಹೇಳಿದರು: “ತಾನು ಹುಟ್ಟಿದ ದೇಶವನ್ನು ಹೆಚ್ಚುಹೆಚ್ಚು ಪ್ರೀತಿಸಿದಷ್ಟೂ, ಆ ದೇಶದ ಮಣ್ಣಿನ ಎಲ್ಲ ಮಕ್ಕಳನ್ನೂ ಸಹೋದರ ಸಹೋದರಿಯರಂತೆ ಪ್ರೀತಿಸಿದಷ್ಟೂ ಆ ದೇಶದ ಎಲ್ಲ ಜಾತಿಗಳವರೂ ಅಣ್ಣತಮ್ಮಂದಿರೆಂದು ಅರ್ಥ ಮಾಡಿಕೊಂಡಷ್ಟೂ ತಾವೆಲ್ಲ ಮಾಡಿ ಕೊಂಡಷ್ಟೂ ಒಬ್ಬ ಪಾರ್ಸಿ ಇನ್ನೂ ನಿಜವಾಗಿ ಪಾರ್ಸಿ ಆಗುತ್ತಾನೆ, ಹಿಂದೂ ಇನ್ನೂ ನಿಜವಾಗಿ ಹಿಂದು ಆಗುತ್ತಾನೆ, ಮುಸ್ಲಿಂ ಇನ್ನೂ ನಿಜವಾಗಿ ಮುಸ್ಲಿಂ ಆಗುತ್ತಾನೆ ಎಂದು ನನಗೆ ತೋರುತ್ತದೆ.”

ವಿದ್ಯಾಕ್ಷೇತ್ರದಲ್ಲಿ

ಆ ಕಾಲದಲ್ಲಿ ಭಾರತಕ್ಕೆ ಪ್ರಾಥಮಿಕ ಶಾಲೆಗಳ ಅಗತ್ಯ ವಿರುವುದನ್ನು ಫಿರೋಜ್‌ಷಾ ಒತ್ತಿ ಹೇಳುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರೌಢಶಾಲೆಗಳು, ತಾಂತ್ರಿಕ ಶಿಕ್ಷಣದ ಕಾಲೇಜುಗಳು, ವಿಶ್ವವಿದ್ಯಾಲಯಗಳು ಇದ್ದರೆ ಸಾಮಾನ್ಯ ಜನರೂ ಶಿಕ್ಷಣ ಪಡೆಯುವುದು ಸಾಧ್ಯವಿತ್ತು. ಭಾರತದಲ್ಲಿ ಜನರಿಗೆ ಸರಿಯಾದ ಶಾಲಾ ಕಾಲೇಜುಗಳಿಲ್ಲ, ಪರೀಕ್ಷೆಗಳು ಮಾತ್ರ ಇಂಗ್ಲೆಂಡಿನಲ್ಲಿ ನಡೆದಂತೆ ನಡೆಯುತ್ತವೆ, ಇದು ಭಾರತಕ್ಕೆ ಅನ್ಯಾಯ ಎಂದು ವಾದಿಸುತ್ತಿದ್ದರು.

ಭಾರತ ಸರ್ಕಾರದ ಆದಾಯದಲ್ಲಿ ಬ್ರಿಟಿಷರು ಕೇವಲ ಶೇಕಡಾ ಎರಡರಷ್ಟನ್ನು ಮಾತ್ರ ಶಿಕ್ಷಣಕ್ಕಾಗಿ ಮೀಸಲಿರಿಸಿ ರುವುದನ್ನು ಅವರು ಖಂಡತುಂಡವಾಗಿ ವಿರೋಧಿಸಿದರು.

ಸುಧಾರಣೆಗಳ ಹೆಸರಿನಲ್ಲಿ ಬ್ರಿಟಿಷರು ಹೇರುವ ಕಾನೂನುಗಳ ಹುಳುಕನ್ನು ಬಯಲಿಗೆಳೆದರು. ಲಾರ್ಡ್ ಕರ್ಜನ್ ಎಂಬ ವೈಸ್‌ರಾಯರು ೧೯೦೩ ರಲ್ಲಿ ‘ಯುನಿವರ್ಸಿಟಿ ಬಿಲ್’ ಎಂಬ ಸುಧಾರಣೆಯನ್ನು ತಂದರು.

ಇದರ ಪ್ರಕಾರ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೊಡಬೇಕಾದ ಶುಲ್ಕ ಇನ್ನೂ ಹೆಚ್ಚಾಯಿತು. ಪರೀಕ್ಷೆಗಳು ಇನ್ನೂ ಕಠಿಣ ತರವಾದವು. ಮುಂಬಯಿ ವಿಶ್ವವಿದ್ಯಾ ನಿಲಯದ ಮುಂದೆ ಈ ಸುಧಾರಣೆಯ ವಿಷಯ ಬಂದಾಗ ಫಿರೋಜ್‌ಷಾ ಎಲ್ಲರೂ ಒಂದಾಗಿ ಇದನ್ನು ವಿರೋಧಿಸು ವಂತೆ ಪ್ರಯತ್ನಪಟ್ಟರು.

ಕೆಲವೇ ಬುದ್ಧಿವಂತರಿಗೆ ಉಚ್ಚ ಶಿಕ್ಷಣ ಸಾಕು ಎನ್ನುವ ಬ್ರಿಟಿಷರ ಅಭಿಪ್ರಾಯವನ್ನು ಅವರು ಎಂದೂ ಒಪ್ಪಲಿಲ್ಲ. ಸಮಿತಿಯಲ್ಲಿ ಹಲವರು ಇಂಗ್ಲಿಷರಿದ್ದರು. ಅವರಲ್ಲಿ ಒಬ್ಬರನ್ನು ಬಿಟ್ಟು ಉಳಿದವರು ಫಿರೋಜ್‌ಷಾ ಅವರ ಅಭಿಪ್ರಾಯಗಳನ್ನು ಒಪ್ಪಿಸಿದರು.

೧೯೧೫ ರಲ್ಲಿ ಫಿರೋಜ್‌ಷಾ ಮುಂಬಯಿ ವಿಶ್ವ ವಿದ್ಯಾನಿಲಯದ ಉಪಕುಲಪತಿಯಾಗಿ ನೇಮಕರಾದರು. ಆದರೆ ಅನಾರೋಗ್ಯದಿಂದ ಈ ಸ್ಥಾನವನ್ನು ವಹಿಸಲು ಆಗಲಿಲ್ಲ.

ಕೇಂದ್ರ ಶಾಸನ ಸಭೆಯಲ್ಲಿ

ಫಿರೋಜ್‌ಷಾ ೧೮೯೩ರಲ್ಲಿ ಕೇಂದ್ರ ಶಾಸನ ಸಭೆಗೂ ಆಯ್ಕೆಗೊಂಡರು. ಅಲ್ಲಿ ಸಂಪೂರ್ಣವಾಗಿ ಬ್ರಿಟಿಷರ ಅಧಿಕಾರವೇ ಇತ್ತು. ಬೆರಳೆಣಿಕೆಯಷ್ಟು ಭಾರತೀಯ ಪ್ರತಿನಿಧಿಗಳು ಇರುತ್ತಿದ್ದರು. ಫಿರೋಜ್‌ಷಾ ಈ ಸಭೆಯ ಮುಂದೆ ಬರುವ ಪ್ರತಿಯೊಂದು ಮಸೂದೆ, ಸುಧಾರಣೆಗಳ ಹುಳುಕನ್ನು ಬಯಲಿಗೆಳೆಯಲು ಸ್ವಲ್ಪವೂ ಅಂಜಲಿಲ್ಲ ; ಅಳುಕಲಿಲ್ಲ. ಹತ್ತಿಬಟ್ಟೆಗಳ ಮೇಲಿನ ತೆರಿಗೆ ರದ್ಧತಿಯ ಪ್ರಶ್ನೆ ಬಂದಾಗ ಭಾರತದಲ್ಲಿ ಚಿಕ್ಕಪುಟ್ಟ ಕೈಗಾರಿಕೆಗಳು ತಲೆಯೆತ್ತಿ ಇಂಗ್ಲೆಂಡಿನ ಬಟ್ಟೆ ಕೈಗಾರಿಕೆಗೆ ಸ್ಪರ್ಧಿಯಾಗಿ ನಿಲ್ಲುತ್ತವೆಂಬ ಶಂಕೆಯಿಂದಲೇ ಬ್ರಿಟಿಷರು ಇದನ್ನು ಹೇರಿದ್ದಾರೆಂದು ಆಪಾದಿಸಿದರು.

ಮತ್ತೊಮ್ಮೆ ಪೊಲೀಸ್ ಆಕ್ಟ್ ಎಂಬ ಕಾಯಿದೆಗೆ ಇನ್ನೊಂದು ತಿದ್ದುಪಡಿ ಬಂತು. ಇದರ ಪ್ರಕಾರ ಸ್ಥಳೀಯ ಸರ್ಕಾರಕ್ಕೆ ತುಂಬ ಅಧಿಕಾರ ಸಿಕ್ಕಿತು. ಹಳ್ಳಿಗಳಲ್ಲಿ ಸ್ವಲ್ಪ ಘರ್ಷಣೆ ಕಂಡರೂ ಅದು ಪೊಲೀಸ್ ಪಡೆಯನ್ನೇ ಇಡಬಹುದಾಗಿತ್ತು. ಇದರ ಖರ್ಚನ್ನು ಹಳ್ಳಿಯವರಿಂದ ವಸೂಲು ಮಾಡಲು ಸರ್ಕಾರ ಅಧಿಕಾರ ಪಡೆಯಿತು. ವಿಚಾರಣೆಯೇ ಇಲ್ಲದೆ ಶಿಕ್ಷೆ ವಿಧಿಸುವ ಅಧಿಕಾರವನ್ನು ಮ್ಯಾಜಿಸ್ಟೇಟರುಗಳಿಗೆ ಕೊಡಲಾಯಿತು.

ಇದೆಲ್ಲವೂ ತೀರ ಅನ್ಯಾಯವೆಂದು ಫಿರೋಜ್‌ಷಾ ಖಂಡಿಸಿದರು. ನ್ಯಾಯಾಲಯದಲ್ಲಿ ವಿಚಾರಣೆಯಿಲ್ಲದೆ ನ್ಯಾಯತೀರ್ಮಾನವೆಂದರೇನು ? ಬ್ರಿಟಿಷ್ ಅಧಿಕಾರಿಗಳೇ ತುಂಬಿದ ಸರ್ಕಾರದಿಂದ ನಿಷ್ಪಕ್ಷಪಾತವಾದ ತೀರ್ಮಾನ ಸಿಗಬಹುದೇ?

ಫಿರೋಜ್‌ಷಾರ ಮಾತುಗಳಿಂದ ಜೇಮ್ಸ್ ವೆಸ್ಟ್‌ಲೆಂಡ್ ಎಂಬ ಸದಸ್ಯರು ವಿಪರೀತ ಸಿಟ್ಟಾದರು. “ಐವತ್ತು ವರ್ಷಗಳ ಕೌನ್ಸಿಲಿನ ಇತಿಹಾಸದಲ್ಲಿಯೇ ಇಂತಹ ಮಾತು ಯಾರ ಬಾಯಿಂದಲೂ ಬಂದಿಲ್ಲ. ಬ್ರಿಟಿಷ್ ಶಾಸಕರು ಸತ್ಯ, ನ್ಯಾಯ, ಪ್ರಾಮಾಣಿಕತೆ, ಪರಿಶ್ರಮಕ್ಕೆ ಹೆಸರಾದವರು” ಎಂದು ಕೋಪದಿಂದ ಮಾತನಾಡಿದರು.

ಫಿರೋಜ್‌ಷಾ ತಾಳ್ಮೆ ಕಳೆದುಕೊಳ್ಳದೆ ಶಾಂತವಾಗಿ ದ್ದರು.

ಈ ಚರ್ಚೆ ಮನೆಮಾತಾಯಿತು. ಶಾಸನ ಸಭೆಗೆ ಹೊಸ ಚೇತನ ಹೊಕ್ಕಂತಾಯಿತು. ಭಾರತೀಯರ ನರನಾಡಿಗಳಲ್ಲಿ ಹೊಸ ಚೈತನ್ಯ ಹರಿದಾಡಿತು. ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು ಎನ್ನುವ ಸ್ಫೂರ್ತಿ ಬಂತು.

ವಾರ್ಷಿಕ ಆಯವ್ಯಯದ ಪಟ್ಟಿ ಸಭೆಯ ಮುಂದೆ ಬಂದಾಗಲೂ ಫಿರೋಜ್‌ಷಾ ಖಂಡತುಂಡವಾಗಿ ಹೀಗೆಂದರು:

“ಸೈನ್ಯಕ್ಕಾಗಿ ಮಾಡುವ ಖರ್ಚು ಕಡಿಮೆಯಾಗಲಿ. ನಿವೃತ್ತಿವೇತನಗಳಲ್ಲಿ, ಅಧಿಕಾರಿಗಳ ಸಂಬಳ, ತುಟ್ಟಿ ಭತ್ಯಗಳಲ್ಲಿಯೂ ಕಡಿತವಾಗಲಿ. ಪ್ರವಾಸಗಳೂ ಕಡಿಮೆ ಯಾಗಲಿ. ಆಗ ಪ್ರಜೆಗಳ ಮೇಲಿನ ತೆರಿಗೆಯ ಹೊರೆ ಕಡಿಮೆಯಾದೀತು. ಅಲ್ಲದೆ ಶಿಕ್ಷಣಕ್ಕೆ, ಆರೋಗ್ಯಕ್ಕೆ, ನ್ಯಾಯ ವಿಚಾರಣೆಗೆ, ಸಾಮಾಜಿಕ ಕಾರ್ಯಗಳಿಗೆ, ರೈಲ್ವೆಯಂತಹ ಸಂಪರ್ಕ ಸಾಧನಗಳಿಗೆ ಖರ್ಚು ಮಾಡಲು ಉಳಿತಾ ಯವೂ ಆದೀತು.”

ಕೌನ್ಸಿಲಿನ ಇತಿಹಾಸದಲ್ಲಿಯೇ ಇಷ್ಟು ದಿಟ್ಟವಾಗಿ, ನೇರವಾಗಿ, ಸ್ಪಷ್ಟವಾಗಿ, ಸಮರ್ಥವಾಗಿ ಅಭಿಪ್ರಾಯಗಳನ್ನು ಮುಂದಿಟ್ಟವರು ವಿರಳ.

ಭಾರತದ ಜನ ಫಿರೋಜ್‌ಷಾರವರ ಕರ್ತವ್ಯನಿಷ್ಠೆಯನ್ನೂ ನಿರ್ಭಯತೆಯನ್ನೂ ಮೆಚ್ಚಿದರು. ಮುಂಬಯಿಯ ಈ ಬಂಧುವನ್ನು ಕಲ್ಕತ್ತದ ಜನತೆ ಬಹು ದೊಡ್ಡ ಸಮಾರಂಭವೇರ್ಪಡಿಸಿ ಸನ್ಮಾನಿಸಿತು.

ಬಂಗಾಳದ ಎಲ್ಲ ಕಡೆಗಳಿಂದಲೂ ಎಲ್ಲ ಜಾತಿ, ಮತ ಪಂಥಗಳ ಜನರೂ ಸೇರಿದ್ದರು. ಕಿಕ್ಕಿರಿದ ಜನತೆಗೆ ಪುರಭವನವೂ ಸಾಲದೇ ಹೋಯಿತು. ಕಲ್ಕತ್ತದಿಂದ ಬರುತ್ತಾ ಮುಂಬಯಿಯ ಬೈಕುಲ್ಲಾ ನಿಲ್ದಾಣದಲ್ಲಿ ಇಳಿಯುವ ಹೊತ್ತಿಗೆ ಫಿರೋಜ್‌ಷಾ ಹೂಹಾರಗಳಲ್ಲಿ ಮುಳುಗಿ ಹೋದರು. ಅವರ ಗೌರವಾರ್ಥವಾಗಿ ಮುಂಬಯಿಯಲ್ಲಿ ಅನೇಕ ಸಮಾರಂಭಗಳಾದವು.

ಅವರು ಮತ್ತೆ ಮುಂಬಯಿ ಕಾರ್ಪೊರೇಷನ್ನಿನ ಸದಸ್ಯರಾಗಿ ಆಯ್ಕೆಯಾದರು. ಕಾರ್ಪೊರೇಷನ್ ಅಂದರೆ ಫಿರೋಜ್‌ಷಾ ಅನ್ನುವಂತಹ ಗಾಢವಾದ ಸಂಬಂಧ ಬೆಳೆದು ಬಂದಿತ್ತು. ಒಮ್ಮೆಯಂತೂ ಇವರು ಊರಲಿಲ್ಲ ವೆಂದು ಕಾರ್ಪೊರೇಷನ್ ಚರ್ಚೆಗೆ ಬಂದ ವಿಷಯವನ್ನೇ ಮುಂದೂಡಿತು !

ಜೀವನ ಕ್ರಮ

ಫಿರೋಜ್‌ಷಾ ವೈಭವಯುತವಾಗಿ ಜೀವಿಸುತ್ತಿದ್ದರು. ಇವರಿಗೆ ಬಟ್ಟೆ ಬರೆಗಳಲ್ಲಿ, ಅಲಂಕಾರದಲ್ಲಿ ಆಸಕ್ತಿಯಿತ್ತು. ಮನೆಯನ್ನು ಅಚ್ಚುಕಟ್ಟಾಗಿ ನವೀನವಾಗಿ ಇಟ್ಟು ಕೊಂಡಿದ್ದರು. ಬೆಲೆಬಾಳುವ ಸಾಮಾನುಗಳಿದ್ದವು. ಕ್ಲಬ್ಬಿಗೆ ಹೋಗುತ್ತಿದ್ದರು. ಸ್ನೇಹಿತರೊಂದಿಗೆ ಆಟವಾಡುತ್ತಿದ್ದರು. ಇದರಿಂದ ಶರೀರಕ್ಕೆ ವ್ಯಾಯಾಮ ಸಿಗುತ್ತಿತ್ತು.

ವಕೀಲರಾಗಿ ಫಿರೋಜ್‌ಷಾ ಅವರಿಗೆ ಕೈತುಂಬ ಸಂಪಾದನೆಯೂ ಇತ್ತು. ಇವರು ಮನಸ್ಸು ಮಾಡಿದ್ದರೆ ಹಣದ ರಾಶಿಯಲ್ಲಿಯೇ ಮುಳುಗಬಹುದಾಗಿತ್ತು. ಅವರು ಹಣಸಂಪಾದನೆಯನ್ನು ಜೀವನದ ಗುರಿಯಾಗಿ ಎಂದೂ ಕಾಣಲಿಲ್ಲ. ಭಾರತೀಯರ ಹಕ್ಕು, ಸ್ವಾತಂತ್ರ್ಯ, ಪ್ರಗತಿ ಗಳಿಗಾಗಿ ಸದಾ ಹೋರಾಡಿದರು.

ಕೆಲಸಗಳ ಒತ್ತಡ, ಶ್ರಮ ಅವರ ಆರೋಗ್ಯದ ಮೇಲೂ ಪರಿಣಾಮ ಬೀರಿತು. ೧೯೦೧ರ ಏಪ್ರಿಲ್ ತಿಂಗಳಲ್ಲಿ ಅವರು ವಿಶ್ರಾಂತಿಗಾಗಿ ಇಂಗ್ಲೆಂಡಿಗೆ ಹೋಗಬೇಕಾಯಿತು. ಹೆಚ್ಚು ಕಡಿಮೆ ಒಂದು ವರ್ಷ ಇಂಗ್ಲೆಂಡಿನಲ್ಲಿದ್ದರು. ಯಾವುದೇ ಸಮಾರಂಭಗಳಲ್ಲಿ ಭಾಗವಹಿಸದೇ ಇದ್ದರೂ ಭಾರತದ ಬಗೆಗೇ ಸದಾ ಯೋಚಿಸುತ್ತಿದ್ದ ಫರೋಜ್‌ಷಾ ಅನೇಕ ಬ್ರಿಟಿಷ್ ಪ್ರಮುಖರೊಡನೆ ಮಾತುಕತೆ ನಡೆಸಿದರು.

ಭಾರತಕ್ಕೆ ಮರಳಿದ ಫಿರೋಜ್‌ಷಾ ತಮ್ಮ ಎಂದಿನ ಚಟುವಟಿಕೆಗಳಲ್ಲಿ ಮುಳುಗಿದರು. ಈ ಕಾಲದಲ್ಲಿ ಅವರ ಹಲವಾರು ಸ್ನೇಹಿತರು ಕಣ್ಮರೆಯಾದರು. ತೆಲಾಂಗ್, ಬದ್ರುದೀನ್ ತಯ್ಯಬ್ಜಿ, ರಾನಡೆ ಮೊದಲಾದವರ ಸಾವು ಅವರಿಗೆ ತುಂಬ ದುಃಖವನ್ನು ತಂದಿತು. ೧೯೧೫ ರಲ್ಲಿ ಗೋಪಾಲಕೃಷ್ಣ ಗೋಖಲೆಯವರು ತೀರಿಕೊಂಡಿದ್ದಂತೂ ಅವರಿಗೆ ದೊಡ್ಡ ಮಾನಸಿಕ ಪಟ್ಟಾಯಿತು.

ಕೊನೆಯ ದಿನಗಳು

ಬಹಳ ವರ್ಷಗಳ ಹಿಂದಿನಿಂದಲೇ ಫಿರೋಜ್‌ಷಾರಿಗೆ ತಮ್ಮದೇ ಆದ ಒಂದು ಪತ್ರಿಕೆಯನ್ನು ಹೊರಡಿಸಬೇಕೆಂಬ ಇಚ್ಛೆ ಇತ್ತು. ಕೆಲವು ಪತ್ರಿಕೆಗಳಿಗೆ ಭಾರತೀಯರ ವಿಚಾರ ಗಳನ್ನು ಪ್ರಕಟಿಸುವ ಧೈರ್ಯವಿರಲಿಲ್ಲ. ಇನ್ನು ಕೆಲವು ಫಿರೋಜರ ಅಭಿಪ್ರಾಯಗಳಿಗೆ ಬೇರೆಯೇ ಬಣ್ಣ ಬಳಿಯುತ್ತಿ ದ್ದವು. ಈ ಸಂದರ್ಭದಲ್ಲಿ ಭಾರತೀಯರ ಅಭಿಪ್ರಾಯಗಳಿಗೆ ಬೆಲೆ ಬರುವಂತೆ, ವಿಚಾರಗಳನ್ನು ಧೈರ್ಯವಾಗಿ ಎತ್ತಿಹಿಡಿಯುವ ಒಂದು ಪತ್ರಿಕೆ ಅಗತ್ಯ ವಾಗಿತ್ತು. ೧೯೧೩ ರಲ್ಲಿ ಅವರ ಆಸೆ ಕೈಗೂಡಿತು. ಅವರ ಪ್ರಯತ್ನ ಗಳಿಂದಾಗಿಯೇ ‘ಬಾಂಬೇ ಕ್ರಾನಿಕಲ್’ ಎಂಬ ಪತ್ರಿಕೆ ಹುಟ್ಟಿಕೊಂಡಿತು. ಬಹುಬೇಗ ಇದಕ್ಕೆ ಜನರ ಮನ್ನಣೆಯೂ ಸಿಕ್ಕಿತು.

ಭಾರತೀಯರು ಉದ್ಯಮಗಳಲ್ಲಿ ತೊಡಗಬೇಕು ಎಂಬುದು ಅವರ ಬಹುದಿನಗಳ ಇನ್ನೊಂದು ಆಸೆಯಾ ಗಿತ್ತು. ೧೯೧೧ ರಲ್ಲಿ ‘ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ’ದ ಸ್ಥಾಪನೆಗೆ ಅವರು ಬಹಳ ಶ್ರಮಿಸಿದ್ದರು. ಎರಡೇ ವರ್ಷಗಳಲ್ಲಿ ದಿವಾಳಿ ಏಳಲಿದ್ದ ಈ ಬ್ಯಾಂಕು ಅವರ ಪ್ರಯತ್ನದಿಂದಾಗಿಯೇ ಉಳಿದುಕೊಂಡಿತು.

೧೯೧೪ರಲ್ಲಿಯೇ ಫಿರೋಜ್‌ಷಾರಿಗೆ ಎದೆಗೆ ಸಂಬಂಧಪಟ್ಟ ಕಾಯಿಲೆ ಕಾಣಿಸಿಕೊಂಡಿತ್ತು. ದೀರ್ಘ ವಿಶ್ರಾಂತಿಯಿಂದಲೂ ಯಾವುದೇ ಪ್ರಯೋಜನವಾಗಲಿಲ್ಲ. ಹಿಂದೊಮ್ಮೆ ಕಾಣಿಸಿಕೊಂಡಿದ್ದ ಮೂತ್ರಕೋಶದ ಬಾಧೆ ಯೂ ಪುನರಾರಂಭವಾಯಿತು. ಅವರ ಆರೋಗ್ಯ ಕೆಡುತ್ತಲೇ ಹೋಯಿತು. ಡಾಕ್ಟರು ‘ಕ್ಯಾನ್ಸರ್’ ಎಂಬ ನಿರ್ಣಯಕ್ಕೆ ಬಂದರು.

ಫಿರೋಜ್‌ಷಾ ತಮ್ಮ ಕಾಯಿಲೆಯ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ. ಕೊನೆಯವರೆಗೂ ಮನಸ್ಸಿನ ಸ್ಥೈರ್ಯವನ್ನು ಕಳೆದುಕೊಳ್ಳಲಿಲ್ಲ. ೧೯೧೫ ರ ನವೆಂಬರ್ ೫ ರಂದು ಬೆಳಗ್ಗೆ ಎಂದಿನಂತೆ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ ದರು. ಕಾಫಿ ಕುಡಿದು ಪತ್ರಿಕೆಯನ್ನೋದಿದರು ; ಪತ್ರ ವ್ಯವಹಾರಗಳನ್ನು ನೋಡಿದರು. ಇದ್ದಕ್ಕಿದ್ದಂತೆ ತೀರಿ ಕೊಂಡರು.

ಭಾರತ ಸ್ವಾತಂತ್ರ್ಯದ ಇತಿಹಾಸ ಬಹಳ ದೊಡ್ಡದು. ಇದರ ಪುಟಪುಟವೂ ಮಹಾಪುರುಷರ ಸತತ ಪರಿಶ್ರಮದ, ತ್ಯಾಗದ, ಬಲಿದಾನದ ಕತೆಗಳಿಂದ ತುಂಬಿಹೋಗಿದೆ. ದೀರ್ಘವಾದ ಹೋರಾಟವಾದಮೇಲೆ ನಮಗೆ ಸ್ವಾತಂತ್ರ್ಯ ಬಂತು. ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ನಾವೂ ತಕ್ಕ ಶ್ರಮ ಪಡಲೇಬೇಕು. ಫಿರೋಜ್‌ಷಾರಂತೆ ಒಳ್ಳೆಯ ವಿಚಾರಗಳೊಂದಿಗೆ ಧೈರ್ಯ, ದಿಟ್ಟತನಗಳನ್ನು ನಾವು ಬೆಳೆಸಿಕೊಳ್ಳುವ ಪ್ರಯತ್ನ ಮಾಡೋಣ.

* * *