ಇರುವ ಪ್ರಾಣಿ ಪಕ್ಷಿಗಳನ್ನು ನೋಡಿ ಕಾಲ್ಪನಿಕ ಪಕ್ಷಿಗಳನ್ನು ರೂಪಿಸುವುದು ಮಾನವನ ನಿರಂತರದ ಹವ್ಯಾಸವಾಗಿತ್ತು. ಎಲ್ಲ ದೇಶಗಳಲ್ಲೂ ಬಗೆಯ ಕಾಲ್ಪನಿಕ ಜೀವಿಗಳನ್ನು ಪ್ರಚುರಗೊಳಿಸಲಾಗಿದೆ.ಕರ್ನಾಟಕ ಹಿಂದೆ ಮೈಸೂರು ಪ್ರಾಂತ್ಯವಾಗಿದ್ದಾಗ ಆಗಿನ ಸರ್ಕಾರದ ಲಾಂಛನಗಂಡಭೇರುಂಡೆ. ಈಗಲೂ ಇದನ್ನು ರಾಜ್ಯ ರಸ್ತೆ ಸಾರಿಗೆ ಸಂಶ್ಥೆ ಅಳವಡಿಸಿಕೊಂಡಿದೆ. ಇದು ಕಾಲ್ಪನಿಕ ಪಕ್ಷಿ; ಎರಡು ತಲೆಯ  ಹಕ್ಕಿ ಅಸ್ತಿತ್ವದಲ್ಲಿಲ್ಲ.

ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಸಿಂಹದ ಮೈ ಹಾಗೂ ಆನೆಯ ಸೊಂಡಿಲು ಇರುವ ಕಾಲ್ಪನಿಕ ಪ್ರಾಣಿ ಇದೆ . ಧೈರ್ಯ ಹಾಗೂ ಬಲದ ಮೇಳೈಕೆಯಾಗಿ ಸಂಕೇತ ಮೂಡಿರಬಹುದು.

ತತ್ತ್ವಜ್ಞರಹಂಸಚೀನೀಯರಡ್ರಾಗನ್ಇಂತಹ ಕಲ್ಪನೆಗಳು ಫೀನಿಕ್ಸ್ಕಲ್ಪನೆಯೆ?

ಕೆಲಸದ ಮೇಲೆ ಬೇರೆ ಊರಿಗೆ ಹೋಗಿದ್ದೆ. ಮರಳಿ ಬಂದಾಗ ಪುಟ್ಟಿ ತನ್ನ ಎಂದಿನ ಪ್ರಶ್ನೆಗಳ ಮಹಾಪೂರವನ್ನು ಎದುರಿಗೆ ಹರಿಬಿಟ್ಟಳು. “ಅಣ್ಣಾ, ಅನೇಕ ಪತ್ರಿಕೆಗಳಲ್ಲಿ ‘ಫೀನಿಕ್ಸ್‌’ ಎಂಬ ಪ್ರಶ್ನೆಯನ್ನು ಉಲ್ಲೇಖಿಸಲಾಗಿರುವುದನ್ನು ಓದಿದ್ದೇನೆ, ಹಾಗೇನೇ ಮಾನ್ಯ ಮಾಜಿ ಪ್ರಧಾನ ಮಂತ್ರಿಯೋರ್ವರು ‘ಫೀನಿಕ್ಸ್‌’ ಹಕ್ಕಿಯಂತೆ ಎದ್ದು ಬರುತ್ತೇನೆ ಎಂಬ ಹೇಳಿಕೆಯನ್ನು ನೀಡಿದ್ದು ಓದಿದ್ದೇನೆ. ನಿಜವಾಗಿಯೂ ಆ ಪಕ್ಷಿ ಭೂಮಿಯ ಮೇಲೆ ಅಸ್ತಿತ್ವದಲ್ಲಿದೆಯೇ?” ಗಹನವೆನಿಸುವಂತಹ ಪ್ರಶ್ನೆಯೊಂದನ್ನು ಮುಂದಿಟ್ಟು ಉತ್ತರಕ್ಕಾಗಿ ಕಾಯತೊಡಗಿದಳು.

“ಫೀನಿಕ್ಸ್‌ ಹಕ್ಕಿಗಳನ್ನು ಗ್ರೀಕ್‌ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ೫೦೦ ವರ್ಷಗಳಿಗೊಮ್ಮೆ, ಆವರ್ತನ ರೀತಿಯಲ್ಲಿ ತಮ್ಮಷ್ಟಕ್ಕೆ ತಾವೇ ಸುಟ್ಟುಕೊಂಡು ಅದರ ಬೂದಿಯಿಂದ ಅತ್ಯಂತ ಸುಂದರ ರೂಪ ತಾಳಿ ಬರುವ ಹಕ್ಕಿಗಳೆಂದು ‘ನಂಬಲಾದ’ವುಗಳು. ಇದು ಪ್ರತೀತಿ ಮಾತ್ರ. ಪ್ರಸ್ತುತ ಇಂತಹ ಹಕ್ಕಿಗಳ ಬಗ್ಗೆ ದಾಖಲೆಗಳಾಗಿಲ್ಲ.”

ಆದರೆ ಚೀನಾದ ಕಲೆ, ಸಾಹಿತ್ಯ, ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟ ‘ಫೀನಿಕ್ಸ್‌’ ಪಕ್ಷಿಯೆಂದೇ ಹಲವಾರು ಜನ ಪ್ರತಿಪಾದಿಸುವ ಪಕ್ಷಿ ‘ಗೋಲ್ಡನ್‌ ಫೆಸೆಂಟ್‌’. ಕನ್ನಡದಲ್ಲಿ ಇದನ್ನು ‘ಬಂಗಾರ ಬಣ್ಣದ ಜೀವಂಜೀವ ಹಕ್ಕಿ’ ಎಂದು ಹೇಳಲಾಗುತ್ತದೆ.

“ಇದು ಬೂದಿಯಿಂದ ಮೇಲೆದ್ದು ಬರುವುದೇ?” ಆಶ್ಚರ್ಯಗೊಂಡು ಪುಟ್ಟಿ ಕೇಳಿದಳು. “ಇಲ್ಲ ಮೊಟ್ಟೆಯೊಡೆದೇ ಬರುತ್ತದೆ” ನಗುತ್ತಾ ಹೇಳಿದೆ.

“ಇದು ಚೀನಾ ಮೂಲದ ಹಕ್ಕಿ. ಫೇಸಿಯಾನಿಡೀ ಕುಟುಂಬಕ್ಕೆ ಸೇರಿಸಲಾದ ಬೇಟೆ ಹಕ್ಕಿ. ಉದ್ದ ಬಾಲ, ಲೈಂಗಿಕ ದ್ವಿರೂಪತ್ವ ಈ ವರ್ಗದ ಹಕ್ಕಿಗಳ ವಿಶಿಷ್ಟ ಗುಣ.

ಸಾಮಾನ್ಯವಾಗಿ ಪರ್ವತಗಳ ಇಳಿಜಾರು ಕಣಿವೆ, ಕಲ್ಲುಗುಡ್ಡ, ಗಿಡಗಂಟೆಗಳ ಗುಂಪಿನ ಮಧ್ಯೆ, ಬಿದಿರು ಗಡೆರೆ ಇದಲ್ಲಿ ವಾಸಿಸುತ್ತವೆ.

ನವಿಲು ಹಕ್ಕಿಯೂ ಫೆಸೆಂಟ್‌ ಗುಂಪಿಗೆ ಸೇರಿದ ಹಕ್ಕಿ. ಇವುಗಳಲ್ಲಿ ಗಂಡು ಹಕ್ಕಿಯ ಗರಿಗಳ ಬೆಡಗು ಹೆಣ್ಣು ಹಕ್ಕಿಗೆ ಇರುವುದಿಲ್ಲ. ಫೆಸೆಂಟ್‌ ಗಂಡು ಹಕ್ಕಿಗಳ ತೋಕೆಗಳು ಅತ್ಯಂತ ಆಕರ್ಷಕವಾಗಿರುತ್ತವೆ. ಇವುಗಳನ್ನು ಬೇಟೆಯಾಡುವುದು ಒಂದು ಕ್ರೀಡೆಯಾಗಿದ್ದಿತು. ಈಗ ಹಲವಾರು ದೇಶಗಳಲ್ಲಿ ಇದರ ಬಗೆಗೆ ಕಾನೂನು, ಕಟ್ಟಳೆಗಳಿವೆ.

ಬಂಗಾರ ಬಣ್ಣ, ಉದ್ದವಾದ ಬಾಲ, ಗಂಭೀರ ನಡಿಗೆಯಿಂದಾಗಿ ಫೀನಿಕ್ಸ್, ಮಯೂರಿ (ನವಿಲು)ಯನ್ನು ಕೂಡ ನಾಚಿಸಬಲ್ಲದು.

ಇವುಗಳ ಮೋಹಕ ಬಣ್ಣಕ್ಕೆ ಮಾರು ಹೋಗಿ ೧೮ನೇ ಶತಮಾನದಲ್ಲಿ ಯುರೋಪದ ಭಾಗಗಳಿಗೆ ಇವುಗಳನ್ನು ಸಾಗಿಸುವ ಕಾರ್ಯ ಆರಂಭಗೊಂಡಿತು. ಇಷ್ಟಾದರೂ ಪ್ರಸ್ತುತ ಈ ಹಕ್ಕಿ ಪ್ರಭೇದಗಳ ಸಂಖ್ಯೆಯಾಗಲೀ, ವಿವರವಾದ ಮಾಹಿತಿಯಾಗಲೀ ಚೀನಾದಲ್ಲಿ ಅಲಭ್ಯ.

ಇವುಗಳ ಬಗ್ಗೆ ಗಮನ ಹರಿಸಿ ಅಧ್ಯಯನ ನಡೆಸಿದ ಪ್ರಮುಖರಲ್ಲಿ ಕೀಫ್ ಹೌಮನ್, ಪೀಟ್ ಸ್ಕ್ವಿಬ್, ಡೇವಿಡ್ ರಿಮ್ಲಿಮಜರ್ ಖ್ಯಾತರು.

ಅದರಲ್ಲೂ ಕೀಫ್ ಹೌಮನ್ ೮ ತಿಂಗಳವರೆಗೆ  (೧೯೮೫, ೧೯೮೭, ೧೯೮೮ ಅವಧಿಗಳಲ್ಲಿ) ಕ್ಷೇತ್ರ ಕೆಲಸ ನಡೆಸಿ, ಮಾಹಿತಿಗಳನ್ನು ಕಲೆ ಹಾಕುವಲ್ಲಿ ಪ್ರಯತ್ನಿಸಿದ. ಅವನು ತನ್ನ ಅಧ್ಯಯನದಲ್ಲಿ ೧೨ ಗೋಲ್ಡನ್‌ ಫೆಸೆಂಟ್‌ಗಳನ್ನು ಗುರುತಿಸಿದ. ಚೀನಿಯರು ಆಹಾರಕ್ಕಾಗಿ ಇವುಗಳನ್ನು ಕಂಡಲ್ಲಿ ಕೊಂದದ್ದು ಅವನಿಗೆ ಕಂಡುಬಂದಿತು.

ಫೆಸೆಂಟ್‌ಗಳೂ ನವಿಲುಗಳಂತೆಯೇ ಚೆನ್ನಾಗಿ ಹಾರಲಾರದ ಹಕ್ಕಿಗಳು. ಕಾಲುಗಳು ಬಲಿಷ್ಠವಾಗಿರುತ್ತವೆ. ಆದ್ದರಿಂದ ಅನತಿ ದೂರಗಳನ್ನು ಅತಿ ವೇಗವಾಗಿ ಕ್ರಮಿಸಬಲ್ಲವು. ಹಕ್ಕಿಯ ಗಾತ್ರಕ್ಕೆ ಹೋಲಿಸಿದಾಗ ಅವುಗಳ ರೆಕ್ಕೆಗಳು ಚಿಕ್ಕದಾಗಿರುವುದರಿಂದ ದೂರಕ್ಕೆ ಹಾರಲು ಸಾಧ್ಯವಿಲ್ಲ. ಆರ್ಗಸ್‌ ಎಂಬ ಫೆಸೆಂಟ್‌ ಹಕ್ಕಿ ಸುಮಾರು ೨೪೦ ಸೆಂ.ಮೀ. ಉದ್ದ! ಇದರಲ್ಲಿ ಬಾಲದ ತೋಕೆಯ ಉದ್ದ ೧೮೦ ಸೆಂ.ಮೀ.

ಸಾಮಾನ್ಯವಾಗಿ ಮೊಟ್ಟ ಇಡುವ ಸಮಯದಲ್ಲಿ ೫-೧೨ ಕೆನೆ ಬಣ್ಣದ ಮೊಟ್ಟೆಗಳನ್ನಿಡುತ್ತವೆ. ಅನೇಕ ಕಡೆ, ಇತ್ತೀಚೆಗೆ ಇವುಗಳನ್ನು ಸಾಕುವ, ಪೋಷಿಸುವ ಕಾರ್ಯಗಳು ಪ್ರಾರಂಭಗೊಂಡಿವೆ ಎಂದೆಲ್ಲ ವಿವರಿಸಿದೆ. ಪುಟ್ಟಿ ಸಂತೋಷದಿಂದ ನವಿಲಿನ ಹಾಗೆ ಹರ್ಷದ ನಗೆಯಿಂದ ಬೀಗಿದಳು.