ಆಧುನಿಕ ಮಾನವನ ’ಸಾಧನೆ’ಗಳ ಮಹಾಧಾರೆಯಲ್ಲಿ ಸಮಸ್ತರೂ ಕೊಚ್ಚಿ ಹೋಗುತ್ತಿರುವಾಗ ಬೆರಳೆಣಿಕೆಯ ಕೆಲವರು ಮಾತ್ರ ಹೇಗೋ ದಡ ಸೇರಿ ಗಟ್ಟಿ ನಿಂತು ನೋಡುವ ತಾಕತ್ತನ್ನು ಪಡೆಯುತ್ತಾರೆ. ಗಾಂಧೀಜಿಗೆ ಆ ಶಕ್ತಿ ಸಿದ್ಧಿಸಿತ್ತು. ಹೆನ್ರಿ ಥೊರೊ, ಇ ಎಫ್. ಶ್ಯುಮಾಕರ್, ಐವಾನ್ ಇಲ್ಲಿಚ್ ಇವರೆಲ್ಲರ ಹಾಗೆ ಫುಕುವೊಕಾಗೆ ಅಂಥ ನೋಟ ಲಭಿಸಿತ್ತು. ಇವರೆಲ್ಲ ಒಂದರ್ಥದಲ್ಲಿ ಬಾವುಟಗಳೇ. ’ಮುಂದೆ ಹುಷಾರಾಗಿ ಸಾಗಿ, ಅಪಾಯ ಇದೆ’ ಎನ್ನುವ ಬಾವುಟಗಳು.
ಕೊಳ್ಳೇಗಾಲದ ಬಳಿ ಕೈಲಾಸ ಮೂರ್ತಿಯವರ ಸಾವಯವ ತೋಟದಲ್ಲಿ ಕೃಷಿ ಚಿಂತನ ಸಭೆ ಏರ್ಪಾಟಾಗಿತ್ತು. ಮಾವಿನ ಮರದ ಬುಡದಲ್ಲಿ ಪ್ರೊ. ನಂಜುಂಡ ಸ್ವಾಮಿ ಮತ್ತು ಇದೇ ತಾನೆ ನಿಧನರಾದ ಫುಕುವೊಕನ ಫೋಟೊಗಳನ್ನು ಇಟ್ಟಿದ್ದರು.
ಉದ್ಘಾಟನೆ ವಿಲಕ್ಷಣವಾಗಿತ್ತು. ಮಣ್ಣಿನಲ್ಲಿ ಕುಕ್ಕರಗಾಲಿನಲ್ಲಿ ಕೂತು, ರಟ್ಟಿನ ಪೆಟ್ಟಿಗೆಯ ಮುಚ್ಚಳ ತೆಗೆಯಬೇಕು. ಅದರಲ್ಲೇನಿದೆ ಎಂಬುದನ್ನು ಉದ್ಘಾಟನೆಗೆ ಬಂದ ನಿವೃತ್ತ ಕುಲಪತಿ ರಾಮೇಗೌಡರಿಗೆ ಕಿವಿಯಲ್ಲಿ ಹೇಳಿದ್ದೇ ತಡ, ಅವರು ಹೌಹಾರಿ ’ನನ್ನಿಂದಾಗಕಿಲ್ರೀ!’ ಎಂದು ದೂರ ಸರಿದರು. ಕೈಲಾಸ ಮೂರ್ತಿ ತಾವೇ ಮುಂದಾಗಿ ಪೆಟ್ಟಿಗೆಯ ಮುಚ್ಚಳವನ್ನು ತೆರೆದಿದ್ದೇ ತಡ, ತೋಳುದ್ದದ ಹಾವೊಂದು ಹೊರಬಂತು. ಛಾಯಾಗ್ರಾಹಕರು, ವಿಡಿಯೊಗ್ರಾಫರ್‌ಗಳೆಲ್ಲ ಧಸಕ್! ಆ ಹಾವು ಮುನ್ನುಗ್ಗಲು ಹವಣಿಸಿದಾಗ ಎಲ್ಲರೂ ದಿಢೀರ್ ಹಿಂದಕ್ಕೆ. ಎಲ್ಲರಿಗೂ ಕೌತುಕ, ಎಲ್ಲರಿಗೂ ಆತಂಕ. ’ಅದು ಕೇರೆ ಹಾವಿನ ಮರಿ. ಯಾರಿಗೂ ಕಚ್ಚೊದಿಲ್ಲ. ಹುಳು-ಹುಪ್ಪಟೆಗಳನ್ನು ತಿನ್ನುವ ಅದು ನಿಸರ್ಗದ ಸಹಜ ಪೀಡೆನಾಶಕ’ ಎಂದು ಮೂರ್ತಿ ಹೇಳುತ್ತಿದ್ದರೂ ಆ ಅನಿರೀಕ್ಷಿತ ದೃಶ್ಯವನ್ನು ಕ್ಯಾಮರಾಗಳು ಸರಿಯಾಗಿ ಕ್ಲಿಕ್ ಮಾಡಲೇ ಇಲ್ಲ.
ನೆಲಕ್ಕೆ ಡೈವ್ ಹೊಡೆದ ಹಾವು ಕ್ಷಣಮಾತ್ರದಲ್ಲಿ ಸುತ್ತಲಿನ ಕಳೆಗಿಡಗಳ ಮಡಿಲಲ್ಲಿ ತೂರಿ ಕಣ್ಮರೆಯಾಯಿತು. ಯಾರಿಗೂ ಅದನ್ನು ಅನುಸರಿಸುವ ಧೈರ್ಯ ಇರಲಿಲ್ಲ. ಆ ಸಭೆಗೆ ಬಂದಿದ್ದ ಐವತ್ತು ಜನರ ಬಾಯಲ್ಲಿ ಇಡೀ ದಿನ ಪದೇ ಪದೇ ಫುಕುವೊಕ ಹೆಸರು ನಲಿಯಿತಾದರೂ ದಟ್ಟ ಹಸಿರು ಹೊದಿಕೆಯ ಆ ತೋಟದಲ್ಲಿ ಅಂದು ಯಾರೂ ಸುತ್ತಾಡುವ ಧೈರ್ಯ ಮಾಡಲಿಲ್ಲ.
ಅಂದಿನ ಆ ಹಾವಿಗೂ ಜಪಾನೀ ಕೃಷಿಋಷಿ ಫುಕುವೊಕನಿಗೂ ಅಷ್ಟಿಷ್ಟು ಸಾಮ್ಯ ಈಗಲೂ ಕಾಣುತ್ತಿದೆ. ಅನಿರೀಕ್ಷಿತ ಎಂಬಂತೆ ಫುಕುವೊಕನ ’ಒಂದು ಹುಲ್ಲೆಸಳ ಕ್ರಾಂತಿ’ ಹೆಸರಿನ ಗ್ರಂಥ ೧೯೭೯ರಲ್ಲಿ ಅಮೆರಿಕದಲ್ಲಿ ಬಿಡುಗಡೆಯಾದಾಗ ಸಾಹಿತ್ಯಲೋಕ ನಿಬ್ಬೆರಗಾಗಿತ್ತು. ಏನೋ ಹೊಸತನ್ನು ಕಂಡಂತೆ ರೋಮಾಂಚನ. ಸಂಭ್ರಮ, ಕುತೂಹಲ. ಎಂಥದ್ದೊ ಹೊಸ ದಾರ್ಶನಿಕ ಸಿದ್ಧಾಂತವೇ ಲಭಿಸಿದಂತೆ, ಎಂಥದ್ದೊ ಹೊಸ ಮಾಯಾವಾಸ್ತವ ಸಾಧನವೇ ಕೈಗೆ ಸಿಕ್ಕಿದಂತೆ, ಅದನ್ನು ಓದಲು, ಅದನ್ನು ತರ್ಜುಮೆ ಮಾಡಲು, ಅದೇ ಮಾದರಿಯ ಕೃಷಿಯನ್ನು ಅನುಸರಿಸಲು ನೂಕು ನುಗ್ಗಲು. ಪಾಶ್ಚಾತ್ಯ ಪಟ್ಟಭದ್ರ ಅಗ್ರಿ ಕಂಪನಿಗಳಿಗೂ ಕೆಲಕಾಲ ಕಂಪನ: ಶೂನ್ಯ ಬಂಡವಾಳದ, ಕಡಿಮೆ ದುಡಿಮೆಯ ಕೃಷಿಕ್ರಾಂತಿಯೇ ಆಗಿಬಿಟ್ಟರೆ ತಮ್ಮ ಗತಿ ಏನಪ್ಪ ಎಂಬ ದುಸ್ವಪ್ನ.
ಉಳುಮೆ ಬೇಡ, ರಸಗೊಬ್ಬರ ಬೇಡ, ಕಳೆ ಕೀಳುವುದು ಬೇಡ. ಕಾಂಪೋಸ್ಟ್ ಬಿಡಿ, ಸೆಗಣಿ ಗೊಬ್ಬರವೂ ಬೇಡ ಆದರೂ ನಳನಳಿಸುವ ಬೆಳೆ ಸಿಗಲಿದೆ ಎಂದಾಗ ಯಾರಿಗೆ ಆಸೆ ಇಲ್ಲ? ಫುಕುವೊಕನ ಪುಸ್ತಕವನ್ನು ಪೂರ್ತಿ ಓದದೇ ಅಥವಾ ಪೂರ್ತಿ ಅರ್ಥಮಾಡಿಕೊಳ್ಳದೇ ನೇರವಾಗಿ ಅದನ್ನೇ ಅನುಸರಿಸಲೆಂದು ತುಸು ದೂರ ಹೊರಟವರು ’ಇದು ನಮಗಲ್ಲ’ ಎಂದು ಹೆದರಿ ಹಿಂದೆ ಸರಿದವರು ಎಷ್ಟೊಂದಿಲ್ಲ?
ಅದು ಹಾಗಲ್ಲ. ಫುಕುವೊಕ ತನ್ನ ಮಾದರಿ ಸುಲಭ ಎಂದಾಗಲೀ ಅದನ್ನೇ ಅನುಕರಿಸಿ ಎಂದಾಗಲೀ ಹೇಳಲಿಲ್ಲ. ಬದಲಿಗೆ, ’ಅದು ತುಂಬ ಕಷ್ಟದ್ದು, ಸಾಕಷ್ಟು ಸೋಲುಗಳು ಎದುರಾಗುತ್ತವೆ. ಮನುಷ್ಯನ ಆರೈಕೆಗೆ ಒಗ್ಗಿಕೊಂಡ ನಿಸರ್ಗವನ್ನು ಓಲೈಸಿ ಮತ್ತೆ ಅದು ತನ್ನ ಸತ್ವವನ್ನು ಕಂಡುಕೊಳ್ಳುವಂತೆ ಮಾಡಲು ದೀರ್ಘ ಸಮಯ- ಸಂಯಮ ಬೇಕು’ ಎಂಬರ್ಥದ ಮಾತುಗಳನ್ನು ಆಗಾಗ ಆತ ಹೇಳುತ್ತಿದ್ದ. ಆತನ ಪಾಲಿಗೆ ನೈಸರ್ಗಿಕ ಬೇಸಾಯ ಎಂಬುದು ಒಂದು ದೀಕ್ಷೆ ಆಗಿತ್ತಷ್ಟೆ. ಇದ್ದಬದ್ದ ಬಂಧನಗಳನ್ನು ಕಳಚಿ ಸಾಗಬೇಕೆಂಬ ಪ್ರೇರಣೆ ಬುದ್ಧನಿಗೆ ಬಂದ ಹಾಗೆ. ಸರಳತೆಯತ್ತ ಸಾಗಿದಾಗಲೇ ಸತ್ಯ ಮತ್ತು ಸತ್ವದ ದರ್ಶನವಾಗುತ್ತದೆ ಎಂದು ನಂಬಿ ಹೊರಟ ಗಾಂಧಿಯ ಹಾಗೆ.
ಅದನ್ನು ಹೀಗೂ ಹೇಳಬಹುದು: ಆಧುನಿಕ ಮಾನವನ ’ಸಾಧನೆ’ಗಳ ಮಹಾಧಾರೆಯಲ್ಲಿ ಸಮಸ್ತರೂ ಕೊಚ್ಚಿ ಹೋಗುತ್ತಿರುವಾಗ ಬೆರಳೆಣಿಕೆಯ ಕೆಲವರು ಮಾತ್ರ ಹೇಗೋ ದಡ ಸೇರಿ ಗಟ್ಟಿ ನೆಲದ ಮೇಲೆ ನಿಂತು ಪ್ರಳಯಧಾರೆಯನ್ನು ನೋಡುವ ತಾಕತ್ತನ್ನು ಪಡೆಯುತ್ತಾರೆ. ದಕ್ಷಿಣ ಜಗತ್ತಿನ ಗಾಂಧೀಜಿಗೆ ಆ ಶಕ್ತಿ ಸಿದ್ಧಿಸಿತ್ತು. ಪಶ್ಚಿಮದಲ್ಲಿ ಹೆನ್ರಿ ಥೊರೊ, ಮಧ್ಯ ಯುರೋಪ್‌ನಲ್ಲಿ ಶ್ಯುಮಾಕರ್, ಉತ್ತರದಲ್ಲ್ಲಿ ಐವಾನ್ ಇಲ್ಲಿಚ್ ಇದ್ದಂತೆ ಪೂರ್ವ ಜಗತ್ತಿನ ಪ್ರತಿನಿಧಿಯಾಗಿ ಫುಕುವೊಕಾಗೆ ಅದೇ ದರ್ಶನ ಲಭಿಸಿತ್ತು. ಇವರೆಲ್ಲ ಒಂದರ್ಥದಲ್ಲಿ ಬಾವುಟಗಳೇ. ಮನುಷ್ಯ ಇಂದು ಪೃಥ್ವಿಯ ಎಲ್ಲವನ್ನೂ ಆಕ್ರಮಿಸುತ್ತ ಎಲ್ಲವನ್ನೂ ತನ್ನಿಷ್ಟದಂತೆ ಬದಲಾಯಿಸುತ್ತ ಹೊರಟಿದ್ದನ್ನು ನೋಡಿ ದಿಗಿಲುಗೊಂಡ ಈ ಭೂಮಿ ತನ್ನ ಎಲ್ಲ ಮಗ್ಗುಲಲ್ಲೂ ಒಂದೊಂದು ಎಚ್ಚರಿಕೆಯ ಕೆಂಬಾವುಟವನ್ನು ನೆಟ್ಟಂತೆ. ಫುಕುವೊಕ ಒಂದು ಬಾವುಟವಾಗಿದ್ದನಷ್ಟೆ.
’ಫಸಲು ಪಡೆಯುವುದು ಬೇಸಾಯದ ಅಂತಿಮ ಉದ್ದೇಶ ಅಲ್ಲ; ಮನುಷ್ಯರ ನಡಾವಳಿಗಳನ್ನು ತಿದ್ದುವುದೇ ಅದರ ಉದ್ದೇಶ’ ಎಂಬ ಫುಕುವೊಕ ಮಾತಿನಲ್ಲಿ ಆ ಎಚ್ಚರಿಕೆಯ ಸಂದೇಶವನ್ನು ನಾವು ಕಾಣಬಹುದು. ಅದನ್ನು ಅರ್ಥ ಮಾಡಿಕೊಳ್ಳದವರು ಆತನ ಕೃಷಿ ತಂತ್ರವನ್ನಷ್ಟೇ ಪ್ರಶ್ನಿಸಿದರು. ’ಇದರಿಂದ ಜಗತ್ತಿನ ಆರುನೂರು ಕೋಟಿಗೆ ಊಟ ಹಾಕಲು ಸಾಧ್ಯವೆ?’ ಎಂದು ಟೀಕಿಸಿದರು. ಇಂದು ಸಾವಿರ ಕೋಟಿ ಜನರ ಹೊಟ್ಟೆ ತುಂಬಿಸುವಷ್ಟು ಆಹಾರ ಬೆಳೆಯುತ್ತಿದ್ದರೂ ಅದು ಹಸಿದವರಿಗೆ ತಲುಪದೆ ಕೊಳೆತು ತಿಪ್ಪೆ ಸೇರುತ್ತಿರುವುದು ಮನುಷ್ಯರ ನಡಾವಳಿಯಿಂದಾಗಿ ಎಂಬುದು ಅಂಥವರಿಗೆ ಅರ್ಥವಾಗುತ್ತಿಲ್ಲ.
ಏಷ್ಯದ ಭತ್ತದ ಗದ್ದೆಗಳಲ್ಲಿ ಈಗಲೂ ದುಡಿಯುವವರನ್ನು ಕಂಡು ’ಆಧುನಿಕ ಕೃಷಿಕರ್ಮದ ಭಾರದಿಂದಾಗಿ ಈಗಿನ ರೈತರಿಗೆ ಹಾಡಲೂ ಬಿಡುವಿಲ್ಲ’ ಎಂದು ಫುಕುವೊಕ ಹೇಳಿದ್ದುಂಟು. ’ಮನುಷ್ಯ ತನ್ನ ತೊತ್ತಿನ ತೊತ್ತಾಗುತ್ತಿದ್ದಾನೆ’ ಎಂದು ಥೊರೊ ೧೬೦ ವರ್ಷಗಳ ಹಿಂದೆ, ಯಂತ್ರಯುಗದ ಆರಂಭದಲ್ಲೇ ಹೇಳಿದ್ದ. ಈಗಂತೂ ಭೂಮಿಯನ್ನು ಪಳಗಿಸಲೆಂದು ಏನೆಲ್ಲ ಕೃತಕ ಸಾಧನಗಳನ್ನು ಹೊಲಕ್ಕೆ ಛೂಬಿಟ್ಟು ಆಧುನಿಕ ಮನುಷ್ಯ ನಗರ ಸೇರಿ ಕೃತಕ ಸಂಗೀತ ಆಲಿಸುತ್ತಿದ್ದಾನೆ.
ಆಧುನಿಕ ಸಮಾಜದ ಧಿಮಾಕು ಮತ್ತು ದಾಂಗುಡಿ ಎರಡೂ ನಿಸರ್ಗದ ಕೌಶಲಗಳ ಎದುರು ಅದೆಷ್ಟು ಪೊಳ್ಳು ಎಂಬುದಕ್ಕೆ ನಮಗೆ ಅನೇಕ ಉದಾಹರಣೆಗಳು ಹೆಜ್ಜೆ ಹೆಜ್ಜೆಗೆ ಸಿಗುತ್ತವೆ. ಬೆಳಿಗ್ಗೆ ೫ಕ್ಕೆ ಅಲಾರ್ಮ್ ಇಟ್ಟರೆ, ೪.೫೫ಕ್ಕೇ ಎಚ್ಚರಾಗುವ ನಮ್ಮ ಜೈವಿಕ ಗಡಿಯಾರವನ್ನೇ ನಾವು ನೋಡಿಕೊಂಡರೂ ಸಾಕಾಗುತ್ತದೆ. ಆದರೆ ಈಗ ನಮಗೆ ನಮ್ಮ ಮೇಲೂ ಭರವಸೆ ಇಲ್ಲ. ನಿಸರ್ಗದ ಮೇಲೂ ಇಲ್ಲ.
ಸುತ್ತೆಲ್ಲ ಅಲಾರ್ಮ್ ಮೊಳಗತೊಡಗಿದೆ. ನಮ್ಮೊಳಗಿನ ಜೈವಿಕ ಗಡಿಯಾರ ಕೆಟ್ಟು ಕೂತಿದೆ. ಮೆಲುದನಿಯಲ್ಲಿ ಎಚ್ಚರಿಸುತ್ತಿದ್ದ ಗಾಂಧೀಜಿ ಇಲ್ಲ, ಈಗ ಫುಕುವೊಕ ಇಲ್ಲ.