Categories
e-ದಿನ

ಫೆಬ್ರವರಿ-01

ಪ್ರಮುಖಘಟನಾವಳಿಗಳು:

1327: ಹದಿಹರೆಯದ ಎಡ್ವರ್ಡನಿಗೆ ರಾಜ್ಯಾಭಿಷೇಕ ಮಾಡಲಾಯಿತು. ಆದರೆ ರಾಜ್ಯಾಡಳಿತದ ಚುಕ್ಕಾಣಿಯನ್ನು ಆತನ ತಾಯಿ ಇಸಾಬೆಲ್ಲಾ ಮತ್ತು ಆಕೆಯ ಪ್ರಿಯಕರ್ ರೋಜರ್ ಮಾರ್ಟಿಮರ್ ಹಿಡಿದಿದ್ದರು.

1814: ಫೀಲಿಫೈನ್ಸಿನ ಉಂಟಾದ ಭೀಕರ ಜ್ವಾಲಾಮುಖಿಯಲ್ಲಿ 1200 ಜನ ಅಸುನೀಗಿದರು.

1835: ಮಾರಿಷಸ್ನಲ್ಲಿ ಗುಲಾಮಗಿರಿಯು ಅಂತ್ಯಗೊಂಡಿತು.

1881: ದೆಹಲಿಯಲ್ಲಿ ಸೇಂಟ್ ಸ್ಟೀಫನ್ಸ್ ಕಾಲೇಜು ಸ್ಥಾಪನೆಗೊಂಡಿತು.

1884: ಆಕ್ಸ್ ವರ್ಡ್ ನಿಘಂಟಿನ ಮೊದಲ ಸಂಪುಟವು ಬಿಡುಗಡೆಗೊಂಡಿತು. ಇದು ‘A’ ಇಂದ ‘Ant’ ವರೆಗಿನ ಪದಕೋಶವನ್ನು ಉಳ್ಳದ್ದಾಗಿತ್ತು.

1893: ಥಾಮಸ್ ಆಲ್ವಾ ಎಡಿಸನ್ ಅವರು ನ್ಯೂ ಜೆರ್ಸಿಯ ವೆಸ್ಟ್ ಆರೆಂಜ್ ಎಂಬಲ್ಲಿ ತಮ್ಮ ‘ಬ್ಲಾಕ್ ಮರಿಯಾ’ ಎಂಬ ಚಲನಚಿತ್ರ ಸ್ಟುಡಿಯೋದ ನಿರ್ಮಾಣವನ್ನು ಪೂರ್ಣಗೊಳಿಸಿದರು.

1897: ದಕ್ಷಿಣ ಕೊರಿಯಾದ ಸಿಯೋಲ್ನಲ್ಲಿ ಆ ದೇಶದ ಪ್ರಥಮ ಬ್ಯಾಂಕ್ ಆದ ‘ಶಿನ್ಹನ್ ಬ್ಯಾಂಕ್’ ಪ್ರಾರಂಭಗೊಂಡಿತು.

1918: ಬಹುತೇಕ ರಾಷ್ಟ್ರಗಳಂತೆ ರಷ್ಯಾ ದೇಶವು ಗ್ರೆಗೋರಿಯನ್ ಕಾಲೆಂಡರ್ ಅನ್ನು ಅಳವಡಿಸಿಕೊಂಡಿತು.

1942: ಅಮೆರಿಕದ ಅಧಿಕೃತ ರೇಡಿಯೋ ಮತ್ತು ಟೆಲಿವಿಷನ್ ಸೇವೆಯಾದ ‘ವಾಯ್ಸ್ ಆಫ್ ಅಮೆರಿಕ’ದಿಂದ ‘ಆಕ್ಸಿಸ್ ಶಕ್ತಿಗಳಾದ ಜರ್ಮನಿ-ಜಪಾನ್-ಇಟಲಿ’ ಹಿಡಿತದಲ್ಲಿದ್ದ ಪ್ರದೇಶಗಳನ್ನು ಉದ್ದೇಶಿಸಿದ ಕಾರ್ಯಕ್ರಮಗಳ ಪ್ರಸಾರ ಆರಂಭಗೊಂಡಿತು.

1946: ನಾರ್ವೆ ದೇಶದ ಟ್ರಿಗ್ವೆ ಲೈ ಅವರು ವಿಶ್ವಸಂಸ್ಥೆಯ ಪ್ರಥಮ ಸೆಕ್ರೆಟರಿ-ಜನರಲ್ ಆಗಿ ನೇಮಕಗೊಂಡರು.

1946: ಹಂಗೇರಿಯ ಪಾರ್ಲಿಮೆಂಟು ರಾಜಪ್ರಭುತ್ವದ ಆಡಳಿತವನ್ನು ಕೊನೆಗಾಣಿಸಿ, ‘ಹಂಗೆರಿ ಗಣರಾಜ್ಯ’ವನ್ನು ಘೋಷಿಸಿತು.

1964: ಭಾರತ ಸರ್ಕಾರ ಸ್ವಾಮ್ಯದ ಬಂಡವಾಳ ಹೂಡಿಕೆ ಸೇವಾ ಸಂಸ್ಥೆಯಾದ ಯುನಿಟ್ ಟ್ರಸ್ಟ್ ಆಫ್ ಇಂಡಿಯಾ ಸ್ಥಾಪನೆಗೊಂಡಿತು.

1977: ಭಾರತದಲ್ಲಿ ರೈಲು ಮ್ಯೂಸಿಯಂ ಸ್ಥಾಪನೆಗೊಂಡಿತು. ಈ ಮಾದರಿಯ ವಸ್ತುಸಂಗ್ರಹಾಲಯ ಸ್ಥಾಪನೆಗೊಂಡದ್ದು ಇದೇ ಮೊದಲು.

1977: ಭಾರತದಲ್ಲಿ ತಟ ರಕ್ಷಾಪಡೆ (ಇಂಡಿಯನ್ ಕೋಸ್ಟ್ ಗಾರ್ಡ್) ಸ್ಥಾಪನೆಗೊಂಡಿತು.

1979: 15 ವಷಗಳ ಗಡೀಪಾರಿನ ನಂತರ ಆಯಾತೊಲ್ಲ ಖೊಮೇನಿ ಇರಾನಿಗೆ ವಾಪಸ್ಸಾದರು.

1981: ಆಸ್ಟ್ರೇಲಿಯಾದ ಟ್ರೆವರ್ ಚಾಪೆಲ್ ಅವರು ಅಂಡರ್ ಆರ್ಮ್ ಬೌಲಿಂಗ್ ಮಾಡುವುದರ ಮೂಲಕ ಕ್ರಿಕೆಟ್ ಲೋಕದಲ್ಲೊಂದು ಹೊಸ ವಿವಾದ ಹುಟ್ಟುವುದಕ್ಕೆ ಕಾರಣರಾದರು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಣ ಪಂದ್ಯದ ಕೊನೆಯ ಚೆಂಡನ್ನು ಅವರು ಈ ರೀತಿ ಬೌಲ್ ಮಾಡಿದರು.

1982: ಧರ್ಮಸ್ಥಳದಲ್ಲಿ ಬಾಹುಬಲಿ ಪ್ರತಿಷ್ಠಾಪನೆ ನೆರವೇರಿತು.

1985: ಕಾನ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಮಹಮ್ಮದ್ ಅಜರುದ್ದೀನ್ ಅವರು 122 ರನ್ ಗಳಿಸುವುದರೊಂದಿಗೆ, ತಮ್ಮ ಮೊದಲ ಮೂರೂ ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಿದ ವಿಶ್ವದಾಖಲೆ ನಿರ್ಮಿಸಿದರು.

1989: ಗ್ರೊ ಹಾರ್ಲೆಮ್ ಬ್ರಂಟ್ ಲ್ಯಾಂಡ್ ಅವರು ನಾರ್ವೆ ದೇಶದ ಮೊದಲ ಮಹಿಳಾ ಪ್ರಧಾನಿ ಎನಿಸಿದರು.

1992: ಭೋಪಾಲ್ ಅನಿಲ ದುರಂತದ ಸಂಬಂಧಿತ ವಿಚಾರಣೆಗೆ ಹಾಜರಾಗದೆ ಇದ್ದ ಯೂನಿಯನ್ ಕಾರ್ಬೈಡ್ ಸಂಸ್ಥೆಯ ಪ್ರಧಾನ ಆಡಳಿತಾಧಿಕಾರಿಯಾದ ವಾರೆನ್ ಅಂಡರ್ಸನ್ ಅವರನ್ನು ಭೋಪಾಲ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ದೇಶಭ್ರಷ್ಟನೆಂದು ಘೋಷಿಸಿದರು.

2003: ತನ್ನ ಹದಿನಾರು ದಿನಗಳ ಯಾನವನ್ನು ಪೂರೈಸಿ ಮರಳಿ ಭೂಕಕ್ಷೆ ಪ್ರವೇಶಿಸುವ ಸಂದರ್ಭದಲ್ಲಿ ಕೊಲಂಬಿಯಾ ಬಾಹ್ಯಾಕಾಶ ನೌಕೆಯು ಟೆಕ್ಸಾಸ್ ನಗರದ ಮೇಲ್ಭಾಗದಲ್ಲಿ ಸ್ಪೋಟಗೊಂಡಿತು. ಭಾರತೀಯ ಮೂಲಸಂಜಾತೆ ಕಲ್ಪನಾ ಚಾವ್ಲಾ ಅವರನ್ನೂ ಒಳಗೊಂಡಂತೆ ಅದರಲ್ಲಿದ್ದ ಏಳೂ ಜನ ಯಾತ್ರಿಗಳೂ ನಿಧನರಾದರು

2004: ಸೌದಿ ಅರೇಬಿಯಾದಲ್ಲಿ ಹಜ್ ಯಾತ್ರೆ ಸಂದರ್ಭದಲ್ಲಿನ ನೂಕುನುಗ್ಗಲಿನಲ್ಲಿ, ಕಾಲ್ತುಳಿತದಿಂದ 251 ಯಾತ್ರಿಗಳು ಮೃತರಾಗಿ, 244 ಜನ ಗಾಯಾಳುಗಳಾದರು.

2005: ನೇಪಾಳದ ದೊರೆ ಜ್ಞಾನೇಂದ್ರ ಅವರು ಸರ್ಕಾರವನ್ನು ರದ್ದು ಪಡಿಸಿ, ಪೂರ್ಣ ಅಧಿಕಾರವನ್ನು ತಮ್ಮ ಕೈಗೇ ತೆಗೆದುಕೊಂಡರು.

2006: ಕೇಂದ್ರ ಸಚಿವ ಸಂಪುಟವು, ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳ ಅಧುನೀಕರಣ ಹರಾಜು ಪ್ರಕ್ರಿಯೆಗೆ ಸಮ್ಮತಿ ನೀಡಿತು.

2007: ಕ್ರಿಕೆಟ್ ಸೇರಿದಂತೆ ಮಹತ್ವದ ಎಲ್ಲ ಕ್ರೀಡೆಗಳ ಪ್ರಸಾರ ಹಕ್ಕು ಪಡೆಯುವ ಖಾಸಗಿ ಚಾನೆಲ್ ಹಾಗೂ ಸಂಸ್ಥೆಗಳು, ನೇರ ಪ್ರಸಾರವನ್ನು ದೂರದರ್ಶನದ ಜೊತೆಗೆ ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿತು.

2007: ಡಯೋರಿಯಾ ಅಥವ ಅತಿಸಾರ ನಿಯಂತ್ರಿಸಲು ಉಪ್ಪು-ಸಕ್ಕರೆ ಮಿಶ್ರಿತ ನೀರು ಸೇವನೆ ಅತ್ಯಂತ ಪರಿಣಾಮಕಾರಿ ಕ್ರಮ ಎಂಬುದನ್ನು ಕಂಡು ಹಿಡಿದ ಕೋಲ್ಕತದ ಅನ್ವಯಿಕ ಅಧ್ಯಯನ ಸಂಸ್ಥೆಯ ವೈದ್ಯ ದಿಲೀಪ್ ಮಹಲ್ನೊಬಿಸ್ ಮತ್ತು ಇತರ ಮೂವರು ತಜ್ಞರಿಗೆ, 2006ನೇ ಸಾಲಿನ ಪ್ರತಿಷ್ಠಿತ ‘ಪ್ರಿನ್ಸ್ ಮಹಿಡಾಲ್’ ಪ್ರಶಸ್ತಿ ಲಭಿಸಿತು. ಥಾಯ್ ರಾಜಮನೆತನದ ಗೌರವವಾದ 50 ಸಾವಿರ ಡಾಲರ್ ನಗದು ಮೊತ್ತದ ಈ ಪ್ರಶಸ್ತಿಯನ್ನು ದೊರೆ ಭೂಮಿಬಲ್ ಅತುಲ್ಯ ತೇಜ್ ಅವರು ಬ್ಯಾಂಕಾಕಿನಲ್ಲಿ ಪ್ರದಾನ ಮಾಡಿದರು.

2007: ಸುನೀತಾ ವಿಲಿಯಮ್ಸ್ ಅವರು ತಮ್ಮ ಒಂಬತ್ತು ದಿನಗಳ ಬಾಹ್ಯಾಕಾಶ ನಡಿಗೆಯ ಮೊದಲ ಹಂತದಲ್ಲಿನ ಮೂರು ನಡಿಗೆಯನ್ನು ಸಹವರ್ತಿಗಳಾದ ಕಮಾಂಡರ್ ಮೈಕೇಲ್ ಲೋಪೆಜ್ ಅಲೆಗ್ರಿಯಾ ಜೊತೆಗೆ ಆರಂಭಿಸಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹೊರಗಿರುವ ಕಷ್ಟಕರವಾದ ಅಮೋನಿಯಾ ಕೋಲಿಂಗ್ ಲೈನ್ಸ್ ಹಾದಿಯಲ್ಲಿ ಸುನೀತಾ ಅವರು ತಮ್ಮ ನಡಿಗೆಯನ್ನು ಪ್ರಾರಂಭ ಮಾಡಿದರು.

2008: ವಾಂಗ್ ಎಂಬ ಚೀನಾದ ವೂಲಾಂಗ್ ಪ್ರಾಂತ್ಯದ ನಿವಾಸಿಯೊಬ್ಬ, ತಾನು ನಾಜಿಂಗ್ ಪಟ್ಟಣದ ಮೇಯರ್ ಆಗಿದ್ದ ಸಂದರ್ಭದಲ್ಲಿ ಲಂಚ ಪಡೆದದ್ದಕ್ಕಾಗಿ ಮರಣದಂಡನೆಗೆ ಗುರಿಯಾದ.

2009: ಭಾರತದ ಟೆನಿಸ್ ಪಟುಗಳಾದ ಸಾನಿಯಾ ಮಿರ್ಜಾ ಮತ್ತು ಮಹೇಶ್ ಭೂಪತಿ ಅವರು ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್‌ಸ್ಲಾಮ್ ಟೆನಿಸ್ ಚಾಂಪಿಯನ್‌ಶಿಪ್ಪಿನ ಮಿಶ್ರ ಡಬ್ಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದರು. ಈ ಜೋಡಿ ಪ್ರಾನ್ಸಿನ ನಥಾಲಿ ಡೆಚಿ ಮತ್ತು ಇಸ್ರೇಲಿನ ರಾಂಡಿ ರಾಮ್ ಜೋಡಿಯನ್ನು 6-3 ಮತ್ತು 6-1 ನೇರ ಸೆಟ್ಗಳಲ್ಲಿ ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಪ್ರಮುಖಜನನ/ಮರಣ:

1905: ಭೌತಶಾಸ್ತ್ರಜ್ಞ ಎಮಿಲೋ ಎಸ್. ಸೀಗ್ರೆ ಅವರು ಇಟಲಿಯ ತಿವೋಲಿಯಲ್ಲಿ ಜನಿಸಿದರು. ಮುಂದೆ ಅವರು ಅಮೆರಿಕದಲ್ಲಿ ನೆಲೆಸಿದರು. ಟೆಕ್ನೇಟಿಯಂ, ಅಸ್ಟಾಟೈನ್ ಮುಂತಾದ ಅಂಶಗಳನ್ನೂ ಹಾಗೂ ಉಪ ಅಣು ಅಂಶವಾದ (ಸಬ್ ಆಟೋಮಿಕ್ ಆಂಟಿಪಾರ್ಟಿಕಲ್) ಆಂಟಿಪ್ರೊಟಾನ್ ಅನ್ನು ಕಂಡುಹಿಡಿದ ಇವರಿಗೆ 1959ರ ವರ್ಷದ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

1919: ಕನ್ನಡದಲ್ಲಿ ಹೊಸ ಅಲೆಯ ಚಿತ್ರಗಳಿಗೆ ನಾಂದಿ ಹಾಡಿದ ‘ಸಂಸ್ಕಾರ’ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ಪಟ್ಟಾಭಿರಾಮರೆಡ್ಡಿ. ಈ ಚಿತ್ರಕ್ಕಾಗಿ ಅವರು ಭಾರತ ಸರ್ಕಾರದ ‘ಸ್ವರ್ಣಕಮಲ’ ಪ್ರಶಸ್ತಿ ಪಡೆದರು. ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ ಅವರು ಶ್ರೇಷ್ಠ ನಿರ್ದೇಶಕರಿಗೆ ಸಲ್ಲುವ ಕರ್ನಾಟಕ ಸರ್ಕಾರದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು.

1929: ವೃತ್ತಿ ರಂಗಕರ್ಮಿ ಕಂಠಿ ಹನುಮಂತರಾಯ ಅವರು ವಿಜಾಪುರ ಜಿಲ್ಲೆ ಬೀಳಗಿ ತಾಲ್ಲೂಕಿನ ನಾಗರಾಳದಲ್ಲಿ ಜನಿಸಿದರು. ಲೇಖಕರಾಗಿಯೂ ಸಾಧನೆ ಮಾಡಿರುವ ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ.

1930: ‘ದಿ ಟೈಮ್ಸ್’ ಪತ್ರಿಕೆ ಮೊದಲ ಬಾರಿಗೆ ‘ಪದಬಂಧ ’(crossword) ಪ್ರಕಟಿಸಿತು

1931: ರಷ್ಯದ ಅಧ್ಯಕ್ಷ ಬೋರಿಸ್ ಯೆಲ್ಸಿನ್ ರಷ್ಯಾದ ಬುಟ್ಕ ಎಂಬಲ್ಲಿ ಜನಿಸಿದರು. 2007ರಲ್ಲಿ ನಿಧನರಾದ ಇವರು 1991ರಿಂದ 1999 ಅವಧಿಯಲ್ಲಿ ಅಧಿಕಾರರೂಢರಾಗಿದ್ದರು.

1940: ಸಾಹಿತಿ, ರಂಗನಟ, ನಿರ್ದೇಶಕ ಪ್ರೊ. ರಾಮದಾಸ್ ಅವರು ಉಡುಪಿ ತಾಲ್ಲೂಕಿನ ಉಚ್ಚಿಲ ಗ್ರಾಮದಲ್ಲಿ ಜನಿಸಿದರು. ರಂಗಭೂಮಿಯ ನಟ-ನಿರ್ದೇಶಕರಾರಿರುವುದರ ಜೊತೆಗೆ ವಿವಿಧ ರೀತಿಯ 40ಕ್ಕೂ ಹೆಚ್ಚು ಕೃತಿಗಳನ್ನು ಇವರು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ.

1940: ಅಮೆರಿಕದ ಪ್ರಸಿದ್ಧ ಕಾದಂಬರಿಕಾರ ಫಿಲಿಪ್ ಫ್ರಾನ್ಸಿಸ್ ನೊವಾಲನ್ ಫಿಲೆಡೆಲ್ಫಿಯಾದಲ್ಲಿ ನಿಧನರಾದರು. ವಿಜ್ಞಾನ ಕೌತುಕ ಕಾದಂಬರಿಗಳಿಗೆ ಹೆಸರಾದ ಇವರು, ‘ಬಕ್ ರೋಜರ್ಸ್’ ಕೃತಿಗಾರರೆಂದು ವಿಶ್ವಪ್ರಸಿದ್ಧರಾಗಿದ್ದಾರೆ.

1958: ಅಮೆರಿಕದ ಭೌತವಿಜ್ಞಾನಿ ಕ್ಲಿಂಟನ್ ಡೇವಿಸ್ಸನ್ ವರ್ಜೀನಿಯಾದಲ್ಲಿ ನಿಧನರಾದರು.ಎಲೆಕ್ಟ್ರಾನ್ ಡಿಫ್ರಕೇಶನ್ ಕುರಿತಾದ ಇವರ ಡೇವಿಸ್ಸನ್-ಜೆರ್ಮರ್ ಸಂಶೋಧನೆಗಾಗಿ 1937 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1976: ಜರ್ಮನಿಯ ಭೌತಶಾಸ್ತ್ರಜ್ಞ ವೆರ್ನರ್ ಹೀಸೆನ್ಬರ್ಗ್ ಅವರು ಮ್ಯೂನಿಚ್ ನಗರದಲ್ಲಿ ನಿಧನರಾದರು. ‘ಕ್ವಾಂಟಮ್ ಮೆಕಾನಿಕ್ಸ್’ ಸಾಧನೆಗಾಗಿ ಅವರಿಗೆ 1932ರ ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1976: ಅಮೆರಿಕದ ವೈದ್ಯ ಶಾಸ್ತ್ರಜ್ಞ ಜಾರ್ಜ್ ವಿಪ್ಪಲ್ ಅವರು ನ್ಯೂಯಾರ್ಕಿನ ರೋಚೆಸ್ಟರ್ ಎಂಬಲ್ಲಿ ನಿಧನರಾದರು. ಅನಿಮಿಯಾ ಸಂದರ್ಭಗಳಲ್ಲಿ ಕರುಳಿನ ಚಿಕಿತ್ಸೆ ಕುರಿತಾದ ಇವರ ಸಂಶೋಧನೆಗಾಗಿ ಇವರಿಗೆ 1934ರ ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತು.

1986: ಸ್ವೀಡನ್ನಿನ ರಾಜಕಾರಣಿ, ಸಮಾಜಶಾಸ್ತ್ರಜ್ಞೆ ಮತ್ತು ವಿಶ್ವಶಾಂತಿ ಕಾರ್ಯಕರ್ತೆ ಆಲ್ವಾ ಮಿರ್ಡಾಲ್ ಡೇನ್ರಿಡ್ ಎಂಬಲ್ಲಿ ಜನಿಸಿದರು. ಇವರಿಗೆ 1982ರ ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

2003: ಭಾರತೀಯ ಮೂಲಸಂಜಾತೆ ಅಮೆರಿಕದ ಪ್ರಜೆ ಕಲ್ಪನಾ ಚಾವ್ಲಾ ಅವರು ಬಾಹ್ಯಾಕಾಶ ಅಪಘಾತದಲ್ಲಿ ನಿಧನರಾದರು. ತನ್ನ ಹದಿನಾರು ದಿನಗಳ ಯಾನವನ್ನು ಪೂರೈಸಿ ಮರಳಿ ಭೂಕಕ್ಷೆ ಪ್ರವೇಶಿಸುವ ಸಂದರ್ಭದಲ್ಲಿ ಕೊಲಂಬಿಯಾ ಬಾಹ್ಯಾಕಾಶ ನೌಕೆಯು ಟೆಕ್ಸಾಸ್ ನಗರದ ಮೇಲ್ಭಾಗದಲ್ಲಿ ಸ್ಪೋಟಗೊಂಡು, ಕಲ್ಪನಾ ಚಾವ್ಲಾ ಅವರನ್ನೂ ಒಳಗೊಂಡಂತೆ ಅದರಲ್ಲಿದ್ದ ಏಳೂ ಜನ ಯಾತ್ರಿಗಳೂ ನಿಧನರಾದರು

2012: ಪೋಲೆಂಡಿನ ಕವಯತ್ರಿ ವಿಸ್ಲವಾ ಸಿಮ್ಬೋರ್ಸ್ಕಾ ಅವರು ಕ್ರಾಕೊವ್ ಎಂಬಲ್ಲಿ ನಿಧನರಾದರು. ಕವಯತ್ರಿ, ಪ್ರಬಂಧಗಾರ್ತಿ ಮತ್ತು ಅನುವಾದಕಿಯಾದ ಅವರಿಗೆ 1996ರ ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

2013: ಬಂಗಾಳದ ಪ್ರಸಿದ್ಧ ಚಿತ್ರಗಾರ್ತಿ ಶಾನು ಲಹಿರಿ ಕೋಲ್ಕತ್ತದಲ್ಲಿ ನಿಧನರಾದರು. ಸಾರ್ವಜನಿಕ ಚಿತ್ರಕಲೆ ಮತ್ತು ಗ್ರಾಫಿಟಿ ಚಿತ್ರಕಲೆಯಲ್ಲಿ ಪ್ರಸಿದ್ಧರಾದ ಆಕೆ, ಕೊಲ್ಕತ್ತಾ ನಗರವನ್ನು ಸಿಂಗರಿಸುವ ಸಲುವಾಗಿ ನಗರದ ತುಂಬಾ ವ್ಯಾಪಕವಾಗಿ ಚಿತ್ರಗಳನ್ನು ರಚಿಸಿ ರಾಜಕೀಯದ ಭಿತ್ತಿಗಳು ಕಣ್ಣಿಗೆ ಕಾಣದಂತೆ ಮಾಡಿದ್ದರು.