Categories
e-ದಿನ

ಫೆಬ್ರವರಿ-04

ದಿನಾಚರಣೆಗಳು:
ವಿಶ್ವ ಕ್ಯಾನ್ಸರ್ ದಿನ

ಕ್ಯಾನ್ಸರ್ ಕಾಯಿಲೆ ಕುರಿತಾಗಿ ಜನ ಸಮುದಾಯದಲ್ಲಿ ಅರಿವು ಮೂಡಿಸಲು ಹಾಗೂ ಕ್ಯಾನ್ಸರ್ ತಡೆಗಟ್ಟುವಿಕೆ, ಗುರುತಿಸುವಿಕೆ ಮತ್ತು ಚಿಕಿತ್ಸೆಯ ನಿಟ್ಟಿನಲ್ಲಿ ಪ್ರೋತ್ಸಾಹ ನೀಡುವಿಕೆಗಳನ್ನು ಉದ್ದೇಶವಾಗಿಟ್ಟುಕೊಂಡು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತಿದೆ. ಯೂನಿಯನ್ ಫಾರ್ ಇಂಟರ್ ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ ಸಂಸ್ಥೆ ಈ ಆಚರಣೆಗೆ ಕರೆ ಕೊಟ್ಟಿದೆ. ಕ್ಯಾನ್ಸರ್ ರೋಗವನ್ನು ಬಹುಮಟ್ಟಿಗೆ 2020ರ ವರ್ಷದ ವೇಳೆಗೆ ವಿಶ್ವ ಕ್ಯಾನ್ಸರ್ ದಿನದ ಪ್ರಮುಖ ಆಶಯವಾಗಿದೆ.

ಶ್ರೀಲಂಕಾ ಸ್ವಾತಂತ್ರ್ಯ ದಿನಾಚರಣೆ

ಸಿಲೋನ್ ದೇಶವು 1948ರ ಫೆಬ್ರವರಿ ನಾಲ್ಕರಂದು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯಗೊಂಡಿತು. ಮುಂದೆ ಇದು ಶ್ರೀಲಂಕಾ ಎಂದು ತನ್ನ ಹೆಸರು ಬದಲಿಸಿಕೊಂಡಿತು.

ಪ್ರಮುಖಘಟನಾವಳಿಗಳು:

960: ಚೀನಾ ದೇಶದಲ್ಲಿ ಸಾಂಗ್ ಮನೆತನದ ಆಡಳಿತ ಪ್ರಾರಂಭಗೊಂಡು, ಆ ಮನೆತನದ ತಾಯ್ಸು ಚಕ್ರವರ್ತಿಯಾದ. ಈ ಮನೆತನವು ಮೂರು ಶತಮಾನಗಳಿಗೂ ಹೆಚ್ಚು ಕಾಲ ಚೀನಾ ದೇಶವನ್ನು ಆಳಿತು.

1169: ಸಿಸಿಲಿಯಲ್ಲಿ ಉಂಟಾದ ಭೀಕರ ಭೂಕಂಪದಲ್ಲಿ ಹತ್ತಾರು ಸಹಸ್ರ ಜನ ಸಾವು ನೋವುಗಳಿಗೀಡಾದರು

1758: ಬ್ರೆಜಿಲ್ ದೇಶದ ರಾಜಧಾನಿ ಮಕಾಪ ಸ್ಥಾಪನೆಗೊಂಡಿತು.

1789: ಜಾರ್ಜ್ ವಾಷಿಂಗ್ಟನ್ ಅವರು ಅಮೆರಿಕದ ಪ್ರಥಮ ರಾಷ್ಟ್ರಾಧ್ಯಕ್ಷರಾಗಿ ಚುನಾಯಿತರಾದರು.

1794: ಫ್ರೆಂಚ್ ಪ್ರತಿನಿಧಿ ಸಭೆಯು ಫ್ರೆಂಚ್ ಫಸ್ಟ್ ರಿಪಬ್ಲಿಕ್ಕಿನ ಎಲ್ಲ ಪ್ರಾಂತ್ಯಗಳಲ್ಲೂ ಗುಲಾಮಗಿರಿಯನ್ನು ನಿಲ್ಲಿಸುವ ನಿರ್ಧಾರ ಕೈಗೊಂಡಿತು. ಆದರೆ 1802ರ ವರ್ಷದಲ್ಲಿ ಅದು ಫ್ರೆಂಚ್ ವೆಸ್ಟ್ ಇಂಡೀಸ್ನಲ್ಲಿ ಪುನಃಸ್ಥಾಪಿತಗೊಂಡಿತು.

1797: ಈಕ್ವೆಡಾರ್ನಲ್ಲಿ ರಿಯೋಬಾಮಾ ಭೂಕಂಪನವಾಗಿ 40,000 ಸಾವಿರ ಸಾವು ಸಂಭವಿಸಿತು

1859: ನಾಲ್ಕನೆಯ ಶತಮಾನದ್ದೆಂದು ಹೇಳಲಾಗಿರುವ ಗ್ರೀಕ್ ಬರಹದಲ್ಲಿರುವ ನ್ಯೂ ಟೆಸ್ಟಾಮೆಂಟ್ ಆದ ಕೋಡೆಕ್ಸ್ ಸಿನೈಟಿಕಸ್ ಈಜಿಪ್ಟಿನಲ್ಲಿ ಸಿಕ್ಕಿತು. ಇದನ್ನು ಜರ್ಮನಿಯ ಬೈಬಲ್ ವಿದ್ವಾಂಸರಾದ ಟಿಸ್ಚಂಡರಾಫ್ ಅವರು ಸೈಂಟ್ ಕ್ಯಾಥರಿನ್ಸ್ ಮೊನಾಸ್ಟ್ರಿಯಲ್ಲಿ ಕಂಡರು.

1990: ಕೇರಳದ ಎರ್ನಾಕುಲಂ ಜಿಲ್ಲೆಯನ್ನು ಭಾರತದ ಮೊತ್ತ ಮೊದಲ ಸಾಕ್ಷರ ಜಿಲ್ಲೆ ಎಂಬುದಾಗಿ ಘೋಷಿಸಲಾಯಿತು.

1936: ‘ರೇಡಿಯಂ’ ಪ್ರಥಮ ಕೃತಕ ರೇಡಿಯೋ ಆಕ್ಟಿವ್ ವಸ್ತು ಎಂದೆನಿಸಿತು.

1945: ಬ್ರಿಟಿಷ್ ಭಾರತೀಯ ಸೇನೆ ಮತ್ತು ಇಂಪೀರಿಯಲ್ ಜಪಾನ್ ಸೇನೆಗಳ ನಡುವೆ ಪೊಕೋಕು ಕದನ, ಇರ್ರವಡ್ಡಿ ರಿವರ್ ಆಪರೆಶನ್ಸ್ ಮುಂತಾದ ಸರಣಿ ಯುದ್ಧಗಳು ಆರಂಭಗೊಂಡವು.

1948: ಸಿಲೋನ್ ದೇಶವು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯಗೊಂಡಿತು. ಮುಂದೆ ಇದು ಶ್ರೀಲಂಕಾ ಎಂದು ತನ್ನ ಹೆಸರು ಬದಲಿಸಿಕೊಂಡಿತು.

1967: ಲೂನಾರ್ ಬಾಹ್ಯಾಕಾಶ ಕಕ್ಷಾ ಕಾರ್ಯಕ್ರಮದಡಿಯಲ್ಲಿ ಲೂನಾರ್ ಆರ್ಬಿಟರ್ 3, ತನ್ನ ಬಾಹ್ಯಾಕಾಶ ಯಾತ್ರೆ ಪ್ರಾರಂಭಿಸಿತು. ಕೇಪ್ ಕಾನವೆರಾಲ್ ಇಂದ ಹಾರಿಬಿಟ್ಟ ಈ ಬಾಹ್ಯಾಕಾಶ ವಾಹನವು ಸರ್ವೇಯರ್ ಮತ್ತು ಅಪೋಲೋ ಬಾಹ್ಯಾಕಾಶ ವಾಹನಗಳಿಗೆ ಸೂಕ್ತ ನಿಲ್ದಾಣಗಳನ್ನು ಆಯುವ ಕೆಲಸವನ್ನು ಹೊತ್ತುಕೊಂಡಿತ್ತು.

1969: ಯಾಸೀರ್ ಅರಾಫತ್ ಅವರು ಪ್ಯಾಲೆಸ್ಟೈನ್ ಲಿಬರೇಷನ್ ಆರ್ಗನೈಸೇಷನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

2004: ಜನಪ್ರಿಯ ಅಂತರಜಾಲ ಸಾಮಾಜಿಕ ಸಮೂಹ ಸಂಪರ್ಕ (ನೆಟ್ವರ್ಕಿಂಗ್) ಜಾಲ ವ್ಯವಸ್ಥೆಯಾದ ಫೇಸ್ಬುಕ್ ಅನ್ನು ಮಾರ್ಕ್ ಜುಕರ್ ಬರ್ಗ್ ಸ್ಥಾಪಿಸಿದರು.

2007: ನೆಲದಿಂದ ನೆಲಕ್ಕೆ ಪ್ರಯೋಗಿಸಬಹುದಾದ `ಬ್ರಹ್ಮೋಸ್’ ಕ್ಷಿಪಣಿಯ ಪರೀಕ್ಷಾ ಪ್ರಯೋಗವನ್ನು ಒರಿಸ್ಸಾದ ಬಾಲಸೋರ್ ಜಿಲ್ಲೆಯ ಚಂಡಿಪುರದ ಆಂತರಿಕ ಪರೀಕ್ಷಾ ವಲಯದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. 9.2 ಮೀಟರ್ ಉದ್ದದ ಈ ಕ್ಷಿಪಣಿ 290 ಕಿ.ಮೀ. ವ್ಯಾಪ್ತಿಯವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದು 200 ಕಿಲೋ ತೂಕದ ದಾಳಿ ಪರಿಕರ ಸಾಮರ್ಥ್ಯವನ್ನೂ ಮತ್ತು 300 ಕಿಲೋ ತೂಕದ ಪರಮಾಣು ಅಸ್ತ್ರದಾಳಿ ಸಾಮರ್ಥ್ಯವನ್ನೂ ಹೊಂದಿದೆ.

2007: ಭಾರತೀಯ ಮೂಲದ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಮೈಕೆಲ್ ಲೋಪೆಜ್ ಅವರ ಜೊತೆಗೆ ತಮ್ಮ ಎರಡನೇ ಬಾಹ್ಯಾಕಾಶ ನಡಿಗೆಯಲ್ಲಿ ಪಾಲ್ಗೊಂಡರು. ಅಂದಾಜು ಆರೂವರೆ ಗಂಟೆಗಳ ಕಾಲದ ಈ ಬಾಹ್ಯಾಕಾಶ ನಡಿಗೆಯಲ್ಲಿ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹವಾನಿಯಂತ್ರಣ ವ್ಯವಸ್ಥೆಯ ದುರಸ್ತಿ ಕಾರ್ಯವನ್ನೂ ಕೈಗೊಂಡರು.

2008: ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹರಿಯುವ ಕೃಷ್ಣಾ- ಗೋದಾವರಿ ಸೇರಿದಂತೆ ಮೂರು ಅಂತಾರಾಜ್ಯ ನದಿ ಜೋಡಣೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ತೀರ್ಮಾನಿಸಿತು.

2008: ಪೂರ್ವ ನೇಪಾಳದ ಬಿರಾಟ್ ನಗರದಲ್ಲಿ ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುವ ರೇಡಿಯೋ ಕೇಂದ್ರವೊಂದು ಅಸ್ತಿತ್ವಕ್ಕೆ ಬಂದಿತು. ಈ ಪೂರ್ವಾಂಚಲ ಎಫ್ ಎಂ ಕೇಂದ್ರವು ನೇಪಾಳದ ಸಮುದಾಯದಿಂದಲೇ ನಿರ್ವಹಿಸಲ್ಪಡುವ ಮೊದಲ ಎಫ್ ಎಂ ಕೇಂದ್ರವಾಗಿದ್ದು, ದಿನಕ್ಕೆ ಎಂಟು ಗಂಟೆಗಳ ಕಾಲ ಕಾರ್ಯಕ್ರಮ ಪ್ರಸಾರ ಮಾಡುವಂತದ್ದಾಗಿದೆ. ಅಂಗರಕ್ಷಕ ಸಿಬ್ಬಂದಿಯಿಂದ ಹಿಡಿದು ಮ್ಯಾನೇಜರ್ ಹುದ್ದೆಯವರೆಗೆ 24 ಮಹಿಳೆಯರು ಈ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2009: ಚಿತ್ರದುರ್ಗದಲ್ಲಿ ಹೆಸರಾಂತ ವಿದ್ವಾಂಸ ಮತ್ತು ಸಾಹಿತಿ ಪ್ರೊ. ಎಲ್. ಬಸವರಾಜು ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಾಲ್ಕು ದಿನಗಳ 75ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಆರಂಭಗೊಂಡಿತು.

2009: ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಅವರಿಗೆ ‘ಸಿದ್ಧಗಂಗಾಶ್ರೀ’ ಪ್ರಶಸ್ತಿಯನ್ನು ತುಮಕೂರು ಸಿದ್ಧಗಂಗಾ ಮಠದಲ್ಲಿ ನಡೆದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಿ, ಗೌರವಿಸಲಾಯಿತು. ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘದ ಕೊಡುಗೆಯಾದ ಪ್ರಶಸ್ತಿಯನ್ನು ಮಠದ ಹಳೆಯ ವಿದ್ಯಾರ್ಥಿಯೂ ಆದ ಕವಿ ಶಿವರುದ್ರಪ್ಪ ಅವರಿಗೆ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಪ್ರದಾನ ಮಾಡಿ, ಆಶೀರ್ವದಿಸಿದರು. ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂಪಾಯಿಯನ್ನು ಶಿವರುದ್ರಪ್ಪ ಅವರು ತೆಗೆದುಕೊಳ್ಳದೆ ಮಠದ ದಾಸೋಹ ನಿಧಿಗೆ ಅರ್ಪಿಸಿದರು.

ಪ್ರಮುಖಜನನ/ಮರಣ:

1871: ಜರ್ಮನಿಯ ನ್ಯಾಯವಾದಿ ಮತ್ತು ಜರ್ಮನಿಯ ಪ್ರಥಮ ರಾಷ್ಟ್ರಾಧ್ಯಕ್ಷ ಫ್ರೆಡ್ರಿಕ್ ಎಬರ್ಟ್ ಜನಿಸಿದರು.

1891: ಭಾರತದ ನ್ಯಾಯವಾದಿ ಮತ್ತು ಲೋಕಸಭೆಯ ಎರಡನೇ ಅಧ್ಯಕ್ಷರಾದ ಎಂ. ಎ. ಅಯ್ಯಂಗಾರ್ ಅವರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಚಾನೂರ್ ಎಂಬಲ್ಲಿ ಜನಿಸಿದರು. ಅವರು ಬಿಹಾರದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

1902: ಅಮೆರಿಕದ ಪ್ರಸಿದ್ಧ ವಿಮಾನ ಹಾರಾಟಗಾರ ಚಾರ್ಲ್ಸ್ ಲಿಂಡ್ ಬರ್ಗ್ ಡೆಟ್ರಾಯಿಟ್ ನಗರದಲ್ಲಿ ಜನಿಸಿದರು. ಇವರು 1927ರ ಮೇ ತಿಂಗಳಲ್ಲಿ ನ್ಯೂಯಾರ್ಕಿನಿಂದ ಪ್ಯಾರಿಸ್ಸಿಗೆ ಮೊತ್ತ ಮೊದಲ ಬಾರಿಗೆ ಅಟ್ಲಾಂಟಿಕ್ ಸಾಗರದ ಮೇಲಿನಿಂದ ಎಲ್ಲೂ ನಿಲ್ಲದೆ ನಿರಂತರವಾಗಿ ಏಕವ್ಯಕ್ತಿ ವಿಮಾನ ಹಾರಾಟ ನಡೆಸಿ ದಾಖಲೆ ನಿರ್ಮಿಸಿದರು.

1906: ಅಮೆರಿಕದ ಖಗೋಳ ತಜ್ಞ ಮತ್ತು ‘ಪ್ಲೂಟೋ’ದ ಅನ್ವೇಷಕ ಕ್ಲೈಡ್ ಟಾಮ್ ಬಾಗ್ ಅವರು ಇಲಿನಾಯ್ಸ್ ಬಳಿಯ ಸ್ಟ್ರೀಟರ್ ಎಂಬಲ್ಲಿ ಜನಿಸಿದರು.

1913: ಅಮೆರಿಕದ ಕರಿಯ ಮಹಿಳೆ ರೋಸಾ ಪಾರ್ಕ್ಸ್ ಜನಿಸಿದರು. ಬಸ್ಸಿನಲ್ಲಿ ಬಿಳಿಯ ವ್ಯಕ್ತಿಯೊಬ್ಬನಿಗೆ ಆಸನ ಬಿಟ್ಟುಕೊಡಲು ಈಕೆ ನಿರಾಕರಿಸಿದ ಘಟನೆ 1955ರಲ್ಲಿ ಅಲಬಾಮಾದ ಮಾಂಟ್ಗೊಮೆರಿಯಲ್ಲಿ ಬಸ್ಸು ಬಹಿಷ್ಕಾರ ಚಳವಳಿಯೊಂದಿಗೆ, ಅಮೆರಿಕದ ನಾಗರಿಕ ಹಕ್ಕುಗಳ ಚಳವಳಿಗೆ ನಾಂದಿಯಾಯಿತು.

1922: ಹಿಂದೂಸ್ಥಾನಿ ಸಂಗೀತದ ಮಹಾನ್ ಗಾಯಕರಾದ ಪಂಡಿತ್ ಭೀಮಸೇನ ಜೋಷಿ ಗದಗ್ ಜಿಲ್ಲೆಯ ರಾನ್ ಎಂಬ ಗ್ರಾಮದಲ್ಲಿ ಜನಿಸಿದರು. ಸಂಗೀತ ಲೋಕದಲ್ಲಿ ಎಲ್ಲ ರೀತಿಯ ಮಹತ್ವದ ಸಾಧನೆ, ಜನಪ್ರಿಯತೆಗಳನ್ನು ಗಳಿಸಿದ್ದ ಡಾ. ಭೀಮಸೇನ ಜೋಶಿ ಅವರಿಗೆ ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಗೌರವವಾದ ಭಾರತರತ್ನ, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಫೆಲೋಷಿಪ್ ಒಳಗೊಂಡಂತೆ ದೇಶ ವಿದೇಶಗಳ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು. 2011 ವರ್ಷದ ಜನವರಿ 24ರಂದು ಪುಣೆಯಲ್ಲಿ ನಿಧನರಾದ ಇವರು ಭಕ್ತಿ ಸಂಗೀತ, ಸಿನಿಮಾ ಸಂಗೀತ, ದೇಶಭಕ್ತಿ ಗೀತ ಸಂಗೀತದಲ್ಲೂ ಜನಪ್ರಿಯ ಸಾಧನೆ ಮಾಡಿದ್ದರು.

1924: ಭಾರತದ ರಾಷ್ಟ್ರಪತಿಗಳಾಗಿದ್ದ ಕೆ.ಆರ್. ನಾರಾಯಣನ್ ಅವರು ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಜನಿಸಿದರು. ತೀರಾ ಬಡ ಕುಟುಂಬದಲ್ಲಿ ಹುಟ್ಟಿದ ಅವರು 1997ರ ಜುಲೈ 25ರಿಂದ ಐದು ವರ್ಷಗಳ ಕಾಲ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಇವರು ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಮೊಟ್ಟ ಮೊದಲ ದಲಿತ ಹಾಗೂ ಮಲಯಾಳಿ ವ್ಯಕ್ತಿ ಎನಿಸಿದ್ದಾರೆ.

1926: ಪ್ರಖ್ಯಾತ ರಂಗಕರ್ಮಿ ಮತ್ತು ಬರಹಗಾರ ವೆಂ. ಮು. ಜೋಷಿ ಜನಿಸಿದರು.

1931: ಸಾಹಿತಿ ಮತ್ತು ಸಮಾಜ ಸೇವಕ ಮಾ.ಭ. ಪೆರ್ಲ ಅವರು ಕಾಸರಗೋಡು ಜಿಲ್ಲೆಯ ಸೆಟ್ಟಬೈಲು ಗ್ರಾಮದಲ್ಲಿ ಜನಿಸಿದರು. ಕಥೆ, ಲೇಖನ, ಕಾದಂಬರಿ, ಸಂದರ್ಶನ ಸೇರಿದಂತೆ 25ಕ್ಕೂ ಹೆಚ್ಚು ಕೃತಿ ರಚಿಸಿದ ಇವರು ರಾಯಚೂರಿನಲ್ಲಿದ್ದ ಸಂದರ್ಭದಲ್ಲಿ ಸೇವಾ ಭಾರತಿ ಟ್ರಸ್ಟ್ ಮೂಲಕ ಪ್ರೇರಣಾ ಬುದ್ದಿಮಾಂದ್ಯ ಮಕ್ಕಳ ಶಾಲೆ ಸ್ಥಾಪಿಸಿದ್ದರು. ಪೆರ್ಲಕ್ಕೆ ವಾಪಸಾದ ಬಳಿಕವೂ ಬಾಲಮಂದಿರ, ಬಾಲಭಾರತಿ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆ ಆರಂಭಿಸಿದವರು. ಸಮುದಾಯ ಪತ್ರಿಕೆ ಕರಾಡ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.

1934: ಪಂಡಿತ್ ಬಿರ್ಜು ಮಹಾರಾಜ್ ಎಂಬ ಹೆಸರಿನಿಂದ ಕಥಕ್ ನೃತ್ಯದಲ್ಲಿ ಇಂದು ವಿಶ್ವಪ್ರಖ್ಯಾತರದ ಬ್ರಿಜ್ಮೋ ಮಿಶ್ರಾ ಅವರು ರಾಯಗರದಲ್ಲಿ ಜನಿಸಿದರು. ಕಥಕ್ ನೃತ್ಯಕ್ಕೆ ವಿಸ್ತಾರವನ್ನು ತಂದುಕೊಟ್ಟ ಇವರಿಗೆ ಪದ್ಮವಿಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕಾಳಿದಾಸ್ ಸಂಮಾನ್, ಗಾಂಧೀ ಶಾಂತಿ ಪುರಸ್ಕಾರ, ಸೋವಿಯತ್ ಲ್ಯಾಂಡ್ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.

1938: ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರ ಕಲಾವಿದೆ ಭಾರ್ಗವಿ ನಾರಾಯಣ್ ಬೆಂಗಳೂರಿನಲ್ಲಿ ಜನಿಸಿದರು. ಇವರಿಗೆ 1998ರಲ್ಲಿ ಕರ್ನಾಟಕ ನಾಟಕ ಅಕಾಡಮಿಯಿಂದ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಎಂ. ಕೆ. ಇಂದಿರಾ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ. ನಾಟಕ ಅಕಾಡಮಿಯ ಸದಸ್ಯೆಯಾಗಿಯೂ ಸಹಾ ಸೇವೆ ಸಲ್ಲಿಸಿದ್ದಾರೆ.

1943: ಪ್ರಖ್ಯಾತ ನೃತ್ಯ ಕಲಾವಿದೆ ಪದ್ಮಾ ಸುಬ್ರಹ್ಮಣ್ಯಂ ಚೆನ್ನೈನಲ್ಲಿ ಜನಿಸಿದರು. ನೃತ್ಯ ಮತ್ತು ಸಂಗೀತ ಸಾಧನೆಗಳ ಜೊತೆಯಲ್ಲಿ, ಸಂಸ್ಕೃತಿ ಮತ್ತು ಕಲೆಗಳ ಕುರಿತಾದಂತೆ ಅವರು ಹಲವಾರು ಮಹತ್ವಪೂರ್ಣ ಬರಹ, ಸಂಶೋಧನೆಗಳನ್ನು ಮೂಡಿಸಿದ್ದು, ಹಲವಾರು ಗ್ರಂಥಗಳನ್ನೂ ಪ್ರಕಟಪಡಿಸಿದ್ದಾರೆ. ಅವರಿಗೆ ಸಂಗೀತ ನಾಟಕ ಅಕಾಡೆಮಿ ಗೌರವ, ಪದ್ಮಶ್ರೀ, ಪದ್ಮಭೂಷಣ, ಕಲೈಮಾಮಣಿ, ಕಾಳಿದಾಸ್ ಸಮ್ಮಾನ್, ನಾದ ಬ್ರಹ್ಮಂ. ಫುಕೋಕ ಏಷ್ಯಾ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಗೌರವ ಅಲ್ಲದೆ ಹಲವಾರು ಮಹತ್ವಪೂರ್ಣ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳು ಸಂದಿವೆ.

1943: ಅಮೆರಿಕದ ಪ್ರಸಿದ್ಧ ಕಂಪ್ಯೂಟರ್ ವಿಜ್ಞಾನಿ ಮತ್ತು ಪ್ರೋಗ್ರಾಮರ್ ಕೆನ್ ಥಾಮ್ಸನ್ ಜನಿಸಿದರು. ಅವರು ಮೂಲ ಯೂನಿಕ್ಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಆಯೋಜಿಸಿ ಅಳವಡಿಸಿದ್ದರಲ್ಲದೆ ಬಿ ಪ್ರೊಗ್ರಾಮಿಂಗ್ ಲ್ಯಾಂಗ್ವೇಜಿನ ಪ್ರಧಾನ ಸೃಷ್ಟಿಕರ್ತರೂ ಆಗಿದ್ದರು. ಒಟ್ಟು 9 ಆಪರೇಟಿಂಗ್ ಸಿಸ್ಟಮ್ ಸೃಜಿಸಿದ್ದ ಇವರು ಗೂಗಲ್ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದರಲ್ಲದೆ ಅದರಲ್ಲಿನ ಗೋ ಪ್ರೊಗ್ರಾಮಿಂಗ್ ಭಾಷೆಯ ಸಹಕರ್ತೃವೂ ಆಗಿದ್ದರು. ಬಹುತೇಕವಾಗಿ ಬೆಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಸೃಜಿಸಿದ ವಿವಿಧ ಕಂಪ್ಯೂಟರ್ ತಂತ್ರಜ್ಞಾನ ಉಪಕರಗಳಿಗೆ ಲೆಕ್ಕವೇ ಇಲ್ಲ.

1894: ಬೆಲ್ಜಿಯನ್ ವಾದ್ಯ ತಯಾರಕ, ಸ್ಯಾಕ್ಸಫೋನ್ ವಾದ್ಯ ಸಂಶೋಧಕ ಅಡೋಲ್ಫ್ ಸ್ಯಾಕ್ಸ್ ಪ್ಯಾರಿಸ್ ನಗರದಲ್ಲಿ ನಿಧನರಾದರು.

1928: ಡಚ್ ಭೌತವಿಜ್ಞಾನಿ ಹೆಂಡ್ರಿಕ್ ಲೋರೆಂಟ್ಸ್ ಅವರು ನೆದರ್ಲ್ಯಾಂಡಿನ ಹಾರ್ಲೆಂ ಎಂಬಲ್ಲಿ ನಿಧನರಾದರು. ಪೀಟರ್ ಜೀಮನ್ ಅವರೊಂದಿಗೆ ಇವರು ಮೂಡಿಸಿದ ‘ಜೀಮನ್ ಎಫೆಕ್ಟ್’ ಕುರಿತಾದ ಸಂಶೋಧನೆ ಮತ್ತು ವಿಸ್ತೃತ ಬರವಣಿಗೆಗಾಗಿ ನೊಬೆಲ್ ಭೌತಶಾಸ್ತ್ರ ಪುರಸ್ಕಾರ ಸಂದಿತು.

1974: ಕೋಲ್ಕತ್ತದಲ್ಲಿ ಖ್ಯಾತ ಭೌತವಿಜ್ಞಾನಿ ಸತ್ಯೇಂದ್ರನಾಥ ಬೋಸರು ನಿಧನರಾದರು. ಕ್ವಾಂಟಮ್ ಚಲನವನ್ನಾಧರಿಸಿದ ಬೋಸ್-ಐನ್‌ಸ್ಟೀನ್ ಸಂಖ್ಯಾಶಾಸ್ತ್ರ ಪ್ರವರ್ತಕರಾದ ಕೀರ್ತಿ ಸತ್ಯೇಂದ್ರನಾಥ ಬೋಸ್ ಅವರದು. ಐನ್‌ಸ್ಟೈನ್ ಅವರು ಬೋಸರ ಚಿಂತನೆಗಳಿಗೆ ನೀಡಿದ ವಿಸ್ತಾರ ‘ಬೋಸ್-ಐನ್‌ಸ್ಟೈನ್ ಸ್ಟಾಟಿಸ್ಟಿಕ್ಸ್’ ಅಥವಾ ‘ಬೋಸ್ ಐನ್‌ಸ್ಟೈನ್ ಹಂಚಿಕೆ’ ಎಂದೇ ಖ್ಯಾತವಾಗಿದೆ. ಇತ್ತೀಚಿನ ವರ್ಷದಲ್ಲಿ ವಿಜ್ಞಾನ ಲೋಕದಲ್ಲಿ ಪ್ರಸ್ತುತಗೊಂಡ ‘ದೇವಕಣ’ ಅಥವ ‘God Particle’ ವಿಚಾರಕ್ಕೆ ಮೂಲಚಿಂತನೆ ನೀಡಿದವರು ಸತ್ಯೇಂದ್ರನಾಥ ಬೋಸ್ ಎಂಬುದನ್ನು ಇಡೀ ವಿಶ್ವವೇ ಖಚಿತಪಡಿಸಿದೆ. ಸತ್ಯೇಂದ್ರನಾಥ್ ಬೋಸ್ 1974ರಲ್ಲಿ ನಿಧನರಾದರು.

1983: ಅಮೆರಿಕನ್ ಗಾಯಕಿ ಕರೇನ್ ಕಾರ್ಪೆಂಟರ್ ಮೃತರಾದರು. ಇವರ ಸಹೋದರ ಕೂಡಾ ಗಾಯಕನಾಗಿದ್ದು ಇವರಿಬ್ಬರ ಜೋಡಿ `ಕಾರ್ಪೆಂಟರ್ ದ್ವಯರ ಜೋಡಿ’ ಎಂದೇ ಖ್ಯಾತಿ ಪಡೆದಿತ್ತು.

2007: ಕನ್ನಡ ಸಿನೆಮಾ ಮತ್ತು ರಂಗಭೂಮಿಯ ಹಿರಿಯ ನಟ ಶಿವಮೊಗ್ಗ ವೆಂಕಟೇಶ್ ಶಿವಮೊಗ್ಗದಲ್ಲಿ ನಿಧನರಾದರು. 70ರ ದಶಕದಲ್ಲಿ ‘ಅಭಿನಯ’ ತಂಡ ಕಟ್ಟುವ ಮೂಲಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಭುತ್ವದ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ವೆಂಕಟೇಶ್ ಪ್ರಮುಖ ಪಾತ್ರ ವಹಿಸಿದ್ದರು. ಉತ್ತಮ ಪ್ರಭುತ್ವ, ಲೊಳಲೊಟ್ಟೆ, ನಮ್ಮೊಳಗೊಬ್ಬ ನಾಜೂಕಯ್ಯ, ಹಯವದನ ಮುಂತಾದ ನಾಟಕಗಳ ಮೂಲಕ ರಂಗಭೂಮಿಯಲ್ಲಿ ತಮ್ಮ ಛಾಪು ಮೂಡಿಸಿದ್ದ ಅವರು ರಾಜ್ಯಪ್ರಶಸ್ತಿ ಸಹಿತ ವಿವಿಧ ಪ್ರಶಸ್ತಿಗಳನ್ನು ಗಳಿಸಿದ್ದರು. ಕನ್ನೇಶ್ವರ ರಾಮ, ಸಂತ ಶಿಶುನಾಳ ಶರೀಫ, ಆಸ್ಫೋಟ, ಚೋಮನ ದುಡಿ, ಆಕ್ಸಿಡೆಂಟ್, ಮುನ್ನುಡಿ ಮುಂತಾದ ಚಲನಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.