Categories
e-ದಿನ

ಫೆಬ್ರವರಿ-09

ಪ್ರಮುಖಘಟನಾವಳಿಗಳು:

1825: 1824ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಯೂ ನಿಚ್ಚಳ ಬಹುಮತ ಗಳಿಸಲಿಲ್ಲವಾಗಿ, ಅಮೆರಿಕದ ಪ್ರತಿನಿಧಿ ಸಭೆಯು ಜಾನ್ ಕ್ವಿನ್ಸಿ ಆಡಮ್ಸ್ ಅವರನ್ನು ಅಮೆರಿಕದ ಅಧ್ಯಕ್ಷರನ್ನಾಗಿ ಚುನಾಯಿಸಿತು.

1895: ವಿಲಿಯಂ ಜಿ. ಮೊರ್ಗಾನ್ ಅವರು ಮಿನ್ಟೊನೆಟ್ಟೆ ಎಂಬ ಆಟವನ್ನು ಕಂಡುಹಿಡಿದರು. ಇದು ಮುಂದಿನ ಕೆಲವೇ ದಿನಗಳಲ್ಲಿ ವಾಲಿಬಾಲ್ ಎಂದು ಪ್ರಸಿದ್ಧಿ ಪಡೆಯಿತು.

1900: ಅಮೆರಿಕದ ಡ್ವೈಟ್ ಡೇವಿಸ್ ಅವರು ಟೆನಿಸ್ ಆಟಕ್ಕಾಗಿ ‘ಡೇವಿಸ್ ಕಪ್’ನ್ನು ಸ್ಥಾಪಿಸಿದರು. ಮೊದಲು ಅಮೆರಿಕ ಮತ್ತು ಗ್ರೇಟ್ ಬ್ರಿಟನ್ ತಂಡಗಳ ನಡುವಣ ಸ್ಪರ್ಧೆಗಾಗಿ ಈ ಟ್ರೋಫಿಯನ್ನು ಸ್ಥಾಪಿಸಿದ ಸಂದರ್ಭದಲ್ಲಿ ಸ್ವತಃ ಡ್ವೈಟ್ ಡೇವಿಸ್ ಅವರೂ ವಿಜೇತ ಅಮೆರಿಕನ್ ತಂಡವನ್ನು ಪ್ರತಿನಿಧಿಸಿದ್ದರು. 1912ರಿಂದ ಮೊದಲುಗೊಂಡಂತೆ ‘ಡೇವಿಸ್ ಕಪ್’ ಪಂದ್ಯಾವಳಿಯು ‘ಅಂತರರಾಷ್ಟ್ರೀಯ ಲಾನ್ ಟೆನಿಸ್ ಫೆಡರೇಷನ್’ ಉಸ್ತುವಾರಿಯಲ್ಲಿ ವಿವಿಧ ರಾಷ್ಟ್ರಗಳ ನಡುವೆ ನಡೆಯುತ್ತಿದೆ.

1913: ಉತ್ತರ ಮತ್ತು ದಕ್ಷಿಣ ಅಮೆರಿಕದ ಪೂರ್ವ ತೀರದಲ್ಲಿ ಕೆಲವು ಉಲ್ಕೆಗಳ ಗುಂಪಿನಂತಹ ವಸ್ತು ಗೋಚರಿಸಿತು. ಈ ಕುರಿತು ಸಮಾಲೋಚನೆ ನಡೆಸಿದ ಪ್ರಮುಖ ಬೌತವಿಜ್ಞಾನಿಗಳು, ಇದು ಭೂಮಿಯ ಒಂದು ಅಲ್ಪಾಯುಷಿ ಸ್ವಾಭಾವಿಕ ಉಪಗ್ರಹ ಎಂಬ ಅಭಿಪ್ರಾಯಕ್ಕೆ ಬಂದರು.

1931: ನವದೆಹಲಿಯು ಬ್ರಿಟಿಷ್ ಭಾರತದ ರಾಜಧಾನಿಯಾಗಿ ಉದ್ಘಾಟನೆಗೊಂಡಿತು. 1912ರಲ್ಲಿ ದೇಶದ ರಾಜಧಾನಿಯನ್ನು ದೆಹಲಿಯಿಂದ ಕೋಲ್ಕತ್ತಕ್ಕೆ ವರ್ಗಾಯಿಸಲಾಗಿತ್ತು.

1971: ಮೂರನೆಯ ಬಾರಿ ಮಾನವನನ್ನು ಚಂದ್ರನ ಮೇಲೆ ಪದಾರ್ಪಣ ಮಾಡಿಸಿದ ‘ಅಪೋಲೋ 14’ ಬಾಹ್ಯಾಕಾಶ ವಾಹನವು ಭೂಮಿಗೆ ಹಿಂದಿರುಗಿತು.

1975: ಸೋವಿಯತ್ ಯೂನಿಯನ್ನಿನ ‘ಸೋಯುಜ್ 17’ ಗಗನವಾಹನವು ಭೂಮಿಗೆ ಹಿಂದಿರುಗಿತು.

1986: ಹ್ಯಾಲಿ ಧೂಮಕೇತುವು ಸೌರವ್ಯೂಹದಲ್ಲಿ ಕೊನೆಯ ಸಲ ತನ್ನ ದರ್ಶನವನ್ನು ನೀಡಿತು.

2007: ಭಾರತದ ಶಶಿ ತರೂರ್ ಅವರು ವಿಶ್ವಸಂಸ್ಥೆಯ ಅಂಡರ್ ಸೆಕ್ರೆಟರಿ-ಜನರಲ್ ಹುದ್ದೆಗೆ ರಾಜಿನಾಮೆ ಸಲ್ಲಿಸಿದರು. 2006ರ ವರ್ಷದಲ್ಲಿ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಅವರು ಬನ್-ಕಿ-ಮೂನ್ ಅವರ ವಿರುದ್ಧ ಸೋಲನ್ನು ಅನುಭವಿಸಿದ್ದರು.

2007: ಭಾರತೀಯ ಸಂಜಾತೆ, ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಮೈಕೆಲ್ ಲೋಪೆಜ್ ಅಲೆಜ್ರಿಯಾ ಅವರು 6.40 ನಿಮಿಷಗಳ ಮೂರನೇ ಬಾಹ್ಯಾಕಾಶ ನಡಿಗೆಯನ್ನು ಪೂರೈಸಿದರು. ಇದರೊಂದಿಗೆ ಒಟ್ಟು 50 ಗಂಟೆ 32 ನಿಮಿಷದ ನಡಿಗೆ ಸಾಧಿಸಿದ ಲೋಪೆಜ್ ಸಾಧನೆ ಅಮೆರಿಕದ ಗಗನಯಾತ್ರಿಯೊಬ್ಬರ ದಾಖಲೆ ಬಾಹ್ಯಾಕಾಶ ನಡಿಗೆಯಾಗಿದೆ. ಆದರೆ ಅತಿಹೆಚ್ಚು ಬಾಹ್ಯಾಕಾಶದ ನಡಿಗೆ ಮಡಿದ ದಾಖಲೆ ರಷ್ಯದ ಅನಾತೊಲಿ ಸೊಲೊವ್ಯೂವ್ ಅವರದ್ದಾಗಿದೆ. ಮಹಿಳಾ ಗಗನಯಾತ್ರಿಗಳ ಪೈಕಿ ಸುನೀತಾ ವಿಲಿಯಮ್ಸ್ ಅವರು ಈಗಾಗಲೇ ಬಾಹ್ಯಾಕಾಶ ನಡಿಗೆಯಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

2007: ಹಿಂದಿನ ದಿನವಷ್ಟೇ ಎಫ್ -16 ವಿಮಾನ ಹಾರಿಸಿದ್ದ ಉದ್ಯಮಿ ರತನ್ ಟಾಟಾ ಅವರು ಈದಿನ ಅಮೆರಿಕ ವಾಯುಪಡೆಯ ‘ಬೋಯಿಂಗ್ ಎಫ್ -18 ಸೂಪರ್ ಹಾರ್ನೆಟ್’ ಚಾಲನೆ ಮಾಡಿದರು. ಅವರು 10,000 ಅಡಿಗಳಿಗೂ ಎತ್ತರದಲ್ಲಿ 1300 ಕಿ.ಮೀ. ವೇಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಹಾರಾಟ ನಡೆಸಿದರು. ಎರಡು ಎಂಜಿನ್ ಹೊಂದಿರುವ ಎಫ್ 18 ವಿಮಾನ ಬಹುಕಾರ್ಯ ನಿರ್ವಹಿಸಬಲ್ಲ ಜೆಟ್ ಫೈಟರ್ ಆಗಿದೆ.

2009: ನೇತಾಜಿ ಸುಭಾಶ್ ಚಂದ್ರ ಬೋಸರು, 1923ರಲ್ಲಿ ಬಂಧನದಲ್ಲಿದ್ದ ಮ್ಯಾನ್ಮಾರಿನ ಮಾಂಡಲೆಯ ಬಂದೀಖಾನೆಯು ಶಿಥಿಲವಾಗಿದ್ದರಿಂದ ಅಲ್ಲಿನ ಸರ್ಕಾರ ಅದನ್ನು ನೆಲಸಮಗೊಳಿಸಿತು.

ಪ್ರಮುಖಜನನ/ಮರಣ:

1404: ಬೈಝಾಂಟೈನಿನ ಕೊನೆಯ ಚಕ್ರವರ್ತಿ 11ನೇ ಕಾನ್ಸ್ಟಾಂಟಿನ್ ಜನಿಸಿದ. ಕಾನ್ ಸ್ಟಾಂಟಿನೋಪಲ್ ರಕ್ಷಣೆಗಾಗಿ ಒಟ್ಟೋಮಾನ್ ಟರ್ಕರ ವಿರುದ್ಧ ನಡೆದ ಅಂತಿಮ ಹೋರಾಟದಲ್ಲಿ ಈತ ಅಸು ನೀಗಿದ.

1846: ಪ್ರಾರಂಭಿಕ ಮರ್ಸಿಡಸ್ ವಾಹನಗಳ ವಿನ್ಯಾಸಕ ವಿಲ್ಹೆಲ್ಮ್ ಮೇಬ್ಯಾಕ್ ಬಾಡೆನ್ ಅವರು ವುರ್ಟೆಂಬರ್ಗಿನ ಹೀಲ್ಬ್ರಾನ್ ಎಂಬಲ್ಲಿ ಜನಿಸಿದರು.

1910: ಫ್ರಾನ್ಸಿನ ಜೈವಿಕ ವಿಜ್ಞಾನಿ ಮತ್ತು ತಳಿ ತಜ್ಞ ಜಾಕೆಸ್ ಮೊನಾಡ್ ಪ್ಯಾರಿಸ್ ನಗರದಲ್ಲಿ ಜನಿಸಿದರು. ಇವರಿಗೆ 1965ರ ವರ್ಷದಲ್ಲಿ ಎನ್ಜೈಮ್ ಉತ್ಪತ್ತಿಯ ನಿಯಂತ್ರಣ ಹಾಗೂ ವೈರಸ್ ಸಂಶ್ಲೇಷಣೆಗಾಗಿ ವೈದ್ಯಕೀಯ ಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

1914 : ವೃತ್ತಿ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಸಾಹಿತಿ, ನಟ, ನಿರ್ಮಾಪಕ, ನಿರ್ದೇಶಕರಾಗಿ ದುಡಿದಿದ್ದ ಹುಣಸೂರು ಕೃಷ್ಣಮೂರ್ತಿ ಅವರು ಹುಣಸೂರಿನಲ್ಲಿ ಜನಿಸಿದರು. ನಾಟಕ ಕಂಪೆನಿಗಳಲ್ಲಿ ನಟನಾಗಿ, ಸಾಹಿತಿಯಾಗಿ ಸೇವೆ ಸಲ್ಲಿಸಿದ ಅವರು ಕೆಲವು ಚಿತ್ರಗಳಲ್ಲಿ ನಟಿಸಿದ್ದರಲ್ಲದೆ, 20ಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ದೇಶನ ಮಾಡಿ 400ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದರು. ರಾಜ್ಯ ಸರ್ಕಾರ ಸ್ಥಾಪಿಸಿದ ‘ಪುಟ್ಟಣ್ಣ ಕಣಗಾಲ್’ ಪ್ರಶಸ್ತಿ ಪಡೆದ ಮೊದಲಿಗರೆಂಬ ಕೀರ್ತಿ ಇವರದ್ದಾಗಿದೆ. ಇವರ ಸತ್ಯ ಹರಿಶ್ಚಂದ್ರ ಮತ್ತು ಮದುವೆ ಮಾಡಿ ನೋಡು ಚಿತ್ರಗಳಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಹಾಗೂ ಭಕ್ತ ಕುಂಬಾರ ಚಿತ್ರಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಸಂದಿತ್ತು. ಇದಲ್ಲದೆ ಉತ್ತಮ ಚಿತ್ರ ಸಂಭಾಷಣೆಗಾಗಿ ಭೂತಯ್ಯನ ಮಗ ಅಯ್ಯು ಮತ್ತು ಎಡೆಯೂರು ಸಿದ್ಧಲಿಂಗೇಶ್ವರ ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಸಂದಿತ್ತು.

1922: ವೈಭವಯುತ ಹೋಟೆಲ್ ಲೀಲಾ ಪ್ಯಾಲೇಸ್ ಸಮೂಹ ಸ್ಥಾಪಕ ಉದ್ಯಮಿ ಸಿ. ಪಿ. ಕೃಷ್ಣನ್ ನಾಯರ್ ಅವರು ಈಗಿನ ಕೇರಳಕ್ಕೆ ಸೇರಿದ ಕಣ್ಣೂರಿನಲ್ಲಿ ಜನಿಸಿದರು.

1923: ಪ್ರಸಿದ್ಧ ಶಸ್ತ್ರಚಿಕಿತ್ಸಕ ನಾರ್ಮನ್ ಎಡ್ವರ್ಡ್ ಶಮ್ ವೇ ಅವರು ಅಮೆರಿಕದ ಮಿಚಿಗನ್ ಬಳಿಯ ಕಲಮಸೂ ಎಂಬಲ್ಲಿ ಜನಿಸಿದರು. ಇವರು 1968ರಲ್ಲಿ ಅಮೆರಿಕದಲ್ಲಿ ಮೊತ್ತ ಮೊದಲ ಬಾರಿಗೆ ವಯಸ್ಕ ವ್ಯಕ್ತಿಗೆ ಹೃದಯ ಕಸಿ ಮಾಡಿದವರು.

1940: ಪ್ರಸಿದ್ಧ ಸಾಹಿತಿ ಜೆ. ಎಮ್. ಕೊಯೆಟ್ಜೀ ಅವರು ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಗರದಲ್ಲಿ ಜನಿಸಿದರು. ದಕ್ಷಿಣ ಆಫ್ರಿಕಾದ ಕಾದಂಬರಿಕಾರ, ಪ್ರಬಂಧಕಾರ, ಭಾಷಾತಜ್ಞ ಮತ್ತು ಅನುವಾದಕರಾದ ಇವರಿಗೆ 2003 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1943: ಅಮೆರಿಕದ ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್ಲಿಟ್ಜ್ ಅವರು ಇಂಡಿಯಾನಾದ ಗೇರಿ ಎಂಬಲ್ಲಿ ಜನಸಿದರು. ವಿಶ್ವ ಬ್ಯಾಂಕಿನ ಪ್ರಧಾನ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿರುವ ಇವರಿಗೆ 2001 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತ್ತು.

1945: ಜಪಾನಿನ ಸೆಲ್ ಬಯಾಲಜಿಸ್ಟ್ ಆದ ಯೋಷಿನೋರಿ ಒಹ್ಸುಮಿ ಅವರು ಫುಕೋಕ ಎಂಬಲ್ಲಿ ಜನಿಸಿದರು. ಕಣ ಜೀವ ವಿಜ್ಞಾನದದಲ್ಲಿ ಆಟೋಫೇಗಿ ವಿಶೇಷಜ್ಞರಾದ ಇವರಿಗೆ 2016 ವರ್ಷದ ವೈದ್ಯಕೀಯ ಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

1981: ಭಾರತೀಯ ಕಾನೂನು ತಜ್ಞ ಮತ್ತು ರಾಜಕಾರಣಿ ಎಂ.ಸಿ. ಛಾಗ್ಲಾ ನಿಧನರಾದರು. ಇವರು ಮುಂಬೈ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿದ್ದರಲ್ಲದೆ, ಭಾರತದ ರಾಯಭಾರಿಗಳಾಗಿ ಹಾಗೂ ಭಾರತ ಸರ್ಕಾರದ ಶಿಕ್ಷಣ ಖಾತೆ ಮತ್ತು ವಿದೇಶಾಂಗ ಖಾತೆಗಳ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

1994: ಅಮೆರಿಕದ ಜೀವವಿಜ್ಞಾನಿ ಹೊವರ್ಡ್ ಮಾರ್ಟಿನ್ ಟೆಮಿನ್ ವಿಲ್ಕಾನ್ಸಿನ್ ಬಳಿಯ ಮ್ಯಾಡಿಸನ್ ಎಂಬಲ್ಲಿ ಜನಿಸಿದರು. ಜೆನೆಟಿಕ್ಸ್ ಮತ್ತು ವಿರೋಲಜಿ ತಜ್ಞರಾದ ಇವರು ‘ರಿವರ್ಸ್ ಟ್ರಾನ್ಸ್ಕ್ರಿಪ್ಟೇಸ್’ ಸಂಶೋಧನೆಗಾಗಿ 1975ರ ವರ್ಷದಲ್ಲಿ ನೊಬೆಲ್ ವೈದ್ಯಕೀಯ ಕ್ಷೇತ್ರದ ಪ್ರಶಸ್ತಿ ಪಡೆದಿದ್ದರು.

1995: ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಗಳ ವಿನಿಮಯೀಕರಣದ ಯೋಜನೆಗಾಗಿ ನಿಧಿಯನ್ನು ಸ್ಥಾಪಿಸಲು ಶ್ರಮಿಸಿದ ವಿಲಿಯಂ ಫುಲ್ ಬ್ರೈಟ್ ಅವರು ವಾಷಿಂಗ್ಟನ್ ನಗರದಲ್ಲಿ ನಿಧನರಾದರು. ಈ ಯೋಜನೆಗೆ ‘ಫುಲ್ ಬ್ರೈಟ್ ಪ್ರೋಗ್ರಾಮ್’ ಎಂಬ ಹೆಸರನ್ನೇ ಇರಿಸಲಾಗಿದೆ.

2005: ವಾಹನಗಳಲ್ಲಿ ಮಳೆ, ಮಂಜು ವಾತವರಣಗಳಲ್ಲಿ ಗಾಜನ್ನು ಒರೆಸಿ ದೃಷ್ಟಿಗೋಚರಿಸುವಂತೆ ಮಾಡುವ ವಿಂಡ್ ಸ್ಕ್ರೀನ್ ವೈಪರ್ ಅನ್ನು ಕಂಡು ಹಿಡಿದವರು ಅಮೆರಿಕದ ರಾಬರ್ಟ್ ಕೀರನ್ಸ್ ಅವರು. ಅವರು ಬಾಲ್ಟಿಮೋರ್ ಪಟ್ಟಣದಲ್ಲಿ ನಿಧನರಾದರು.

2006: ಹಿಂದಿ ಚಿತ್ರರಂಗದ ಹಿರಿಯ ನಟಿ ನಾದಿರಾ ಮುಂಬೈನಲ್ಲಿ ನಿಧನರಾದರು. ನೂರಾರು ಚಿತ್ರಗಳಲ್ಲಿ ನಟಿಸಿದ್ದ ಅವರ ಶ್ರೀ 420, ಪಾಕೀಜಾ, ಜೂಲಿ ಮುಂತಾದ ಚಿತ್ರಗಳಲ್ಲಿನ ಅಭಿನಯ ಇಂದೂ ಪ್ರಸಿದ್ಧವಾಗಿವೆ.

2008: ಸಮಾಜ ಸೇವಕ ಹಾಗೂ ಗಾಂಧಿವಾದಿ ಬಾಬಾ ಆಮ್ಟೆ ಅವರು ಚಂದ್ರಾಪುರ ಜಿಲ್ಲೆಯ ವರೊರಾದಲ್ಲಿರುವ ತಮ್ಮ ‘ಆನಂದವನ’ ಆಶ್ರಮದಲ್ಲಿ ನಿಧನರಾದರು. ಅವರ ‘ಆನಂದವನ’ ಆಶ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ಕುಷ್ಠರೋಗಿಗಳು ಆರೈಕೆ ಪಡೆಯುತ್ತಿದ್ದಾರೆ. ಹಲವು ಪರಿಸರ ಚಳವಳಿಗಳನ್ನು ಹುಟ್ಟು ಹಾಕಿದ ಇವರು ಜನತೆಯ್ಲಲಿ ಪರಿಸರದ ಬಗೆಗೆ ಅರಿವು ಮೂಡಿಸುವ ಸಲುವಾಗಿ 1985ರಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು 1988ರಲ್ಲಿ ಅಸ್ಸಾಮಿನಿಂದ ಗುಜರಾತಿನವರೆಗೆ ಜಾಥಾ ನಡೆಸಿದ್ದರು. ಪದ್ಮಶ್ರೀ, ಮ್ಯಾಗ್ಸೆಸೆ ಪ್ರಶಸ್ತಿ, ಪದ್ಮವಿಭೂಷಣ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪ್ರಶಸ್ತಿ ಹಾಗೂ ಗಾಂಧಿ ಶಾಂತಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.

2010: ಹಾರುವ ತಟ್ಟೆಗಳ ಜನಕ ವಾಲ್ಟರ್ ಫ್ರೆಡ್ರಿಕ್ ಮಾರಿಸನ್ ಅವರು ನಿಧನರಾದರು. ಮೊದಲಿಗೆ ಫ್ಲಯಿಂಗ್ ಸಾಸರ್ ಎಂದು ಹೆಸರಾಗಿದ್ದ ಇದು ಮುಂದೆ ಫ್ರಿಸ್ಬಿ ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆಯಿತು.

2012: ಹಿಂದೀ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಚಿತ್ರಕತೆಗಾರ ಓ.ಪಿ. ದತ್ತ ನಿಧನರಾದರು.