ದಿನಾಚರಣೆಗಳು:

ವಿಶ್ವದ ಹಲವಾರು ರಾಷ್ಟ್ರಗಳು ಸಂಶೋಧಕರು ನೀಡಿರುವ ಕೊಡುಗೆಗಳಿಗಾಗಿ ಅವರಿಗೆ ಗೌರವವನ್ನು ಸೂಚಿಸುವುದಕ್ಕಾಗಿ ಸಂಶೋಧಕರ ದಿನವವನ್ನು ಆಚರಿಸುತ್ತವೆ. ಅಮೆರಿಕದಲ್ಲಿ ಥಾಮಸ್ ಆಲ್ವಾ ಎಡಿಸನ್ ಅವರ ಜನ್ಮದಿನವನ್ನು ಸಾಂದರ್ಭಿಕವಾಗಿ ಇಟ್ಟುಕೊಂಡು ಸಂಶೋಧಕರಿಗೆ ಗೌರವವನ್ನು ಸೂಚಿಸುವ ‘ಇನ್ವೆಂಟರ್ಸ್ ಡೇ’ ಎಂದು ಈ ದಿನವನ್ನು ಆಚರಿಸಲಾಗುತ್ತಿದೆ.
ಜಪಾನಿನಲ್ಲಿ ಫೆಬ್ರುವರಿ 11 ದಿನವನ್ನು ‘ನ್ಯಾಷನಲ್ ಫೌಂಡೇಷನ್ ಡೇ’ ಎಂದು ಆಚರಿಸಲಾಗುತ್ತಿದೆ. ಕ್ರಿಸ್ತ ಪೂರ್ವ 660ರ ವರ್ಷದಲ್ಲಿ ಜಿಮ್ಮು ಎಂಬಾತ ಜಪಾನಿನ ಚಕ್ರವರ್ತಿಯಾದ ಎಂಬ ಸಂಭ್ರಮದಿಂದ ಈ ದಿನವನ್ನು ರಾಷ್ಟ್ರೀಯ ಸಂಸ್ಥಾಪನಾ ದಿನ ಎಂದು ಆಚರಿಸಲಾಗುತ್ತಿದೆ

ಘಟನೆಗಳು:
ಚಕ್ರವರ್ತಿ ಜಿಮ್ಮು ಈ ದಿನದಂದು ಜಪಾನಿನ ಸಂಸ್ಥಾಪನೆಯನ್ನು ಮಾಡಿದ ಎಂಬ ಸಾಂಪ್ರದಾಯಿಕ ಶ್ರದ್ಧೆ ಜಪಾನಿಯರಲ್ಲಿದೆ.
ರೋಮನ್ ಚಕ್ರಾಧಿಪತ್ಯದ ಉತ್ತರಾಧಿಕಾರಿಯಾದ ಟೈಬೀರಿಯಸ್ ಕ್ಲಾಡಿಯ್ಯಸ್ಸನು ನಿಗೂಢ ರೀತಿಯಲ್ಲಿ ಸಾವಿಗೀಡಾದ. ಇದರಿಂದಾಗಿ ನೀರೋಗೆ ಚಕ್ರವರ್ತಿಯಾಗುವ ಹಾದಿ ಸುಗಮವಾಯ್ತು.
ಮೆಸಪೊಟಾಮಿಯಾದ ಸೈತಾ ಎಂಬಲ್ಲಿ ದಂಗೆಕೋರ ಸೈನಿಕರಿಂದ ಚಕ್ರವರ್ತಿ ಮೂರನೇ ಗಾರ್ಡಿಯನ್ ಕಗ್ಗೊಲೆಯಾಯ್ತು. ಆತನ ಹೆಸರಿನಲ್ಲಿ ಕಾರ್ಚೆಮಿಶ್ ಎಂಬಲ್ಲಿ ದಿಬ್ಬವೊಂದನ್ನು ನಿರ್ಮಿಸಲಾಯ್ತು.
‘ಕ್ವೇಕರ್ಸ್’ ಎಂದು ಕರೆಯಲ್ಪಡುವ ‘ದಿ ರಿಲಿಜಿಯಸ್ ಸೊಸೈಟಿ ಆಫ್ ಫ್ರೆಂಡ್ಸ್’ ಸದಸ್ಯರು ಅಮೇರಿಕಾದ ಕಾಂಗ್ರೆಸ್ಸಿನ ಮುಂದೆ ಗುಲಾಮಗಿರಿಯ ರದ್ಧತಿಗೆ ಅಹವಾಲು ಅರ್ಪಿಸಿದರು.
ಅಮೆರಿಕದ ಸೆನೆಟ್ಟಿನ ಪ್ರಥಮ ಸಭೆಗೆ ಸಾರ್ವಜನಿಕರಿಗೆ ಪ್ರವೇಶ ನೀಡಲಾಯಿತು.
ಜೆಸ್ಸಿ ಫೆಲ್ ಎಂಬ ವಿಜ್ಞಾನಿ ಮನೆಗಳಲ್ಲಿ ಇದ್ದಲಿನಿಂದ ಶಾಖವನ್ನು ಪಡೆಯುವುದನ್ನು ಪರೀಕ್ಷಿಸಿ ನೋಡಲು ಅಂಥ್ರಾಸೈಟನ್ನು ತೆರೆದ ತುರಿಯ(open grate) ಮೇಲೆ ಸುಟ್ಟರು.
ಲಂಡನ್ ವಿಶ್ವವಿದ್ಯಾಲಯವು ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್ ಹೆಸರಿನಿಂದ ಸ್ಥಾಪಿತಗೊಂಡಿತು
ಗೆಟಾನೋ ಡೋನಿಜೆಟ್ಟಿ ಅವರ ಲಾ ಫಿಲ್ಲೆ ಡ್ಯು ರೆಜಿಮೆಂಟ್ ಒಪೇರಾ ಪ್ಯಾರಿಸ್ಸಿನಲ್ಲಿ ತನ್ನ ಮೊದಲ ಪ್ರದರ್ಶನ ನೀಡಿತು
ಗಿಯೋಸಿಪ್ಪೆ ವೆರ್ಡಿ ಅವರ ‘ಐ ಲೊಂಬಾರ್ಡಿ ಅಲ್ಲಾ ಪರಿಮಾ ಕ್ರೊಸಿಯಾಟ’ ಒಪೇರಾ ಇಟಲಿಯ ಮಿಲನ್ ನಗರದಲ್ಲಿ ತನ್ನ ಮೊದಲ ಪ್ರದರ್ಶನ ನೀಡಿತು.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು ಅವಧ್ ನಗರವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು. ಅದರ ರಾಜನಾಗಿದ್ದ ವಾಜಿದ್ ಅಲಿ ಷಾ ಅನ್ನು ಬಂಧಿಸಿ ನಂತರದಲ್ಲಿ ಕೊಲ್ಕತ್ತಾಗೆ ಗಡೀಪಾರು ಮಾಡಿತು.
ಆಂಟನ್ ಬ್ರಕ್ನರ್ ಅವರ 9ನೇ ಸಿಂಪೋನಿಯ ಮೊದಲ ಕಾರ್ಯಕ್ರಮವು ಆಸ್ಟ್ರಿಯಾದ ವಿಯೆನ್ನಾದಲ್ಲಿ ನಡೆಯಿತು.
ಜಪಾನಿನಲ್ಲಿ ಮೀಜಿ ಸಂವಿಧಾನ ಅಂಗೀಕೃತಗೊಂಡಿತು. ಮೊದಲ ನ್ಯಾಷನಲ್ ಡಯೆಟ್ 1890ರಲ್ಲಿ ಆಯೋಜನೆಗೊಂಡಿತು
ಜನರಲ್ ಮೋಟಾರ್ಸ್ ಸಂಸ್ಥೆಯು ಕಾರ್ಮಿಕ ಸಂಘಟನೆಯಾದ ‘ಯುನೈಟೆಡ್ ಆಟೋ ವರ್ಕರ್ಸ್’ಗೆ ಮಾನ್ಯತೆ ನೀಡಿತು. ಇದರಿಂದಾಗಿ ಸಂಸ್ಥೆಯಲ್ಲಿ ನೌಕರರು ನಡೆಸುತ್ತಿದ್ದ ‘ಸುಮ್ಮನೆ ಕುಳಿತುಕೊಳ್ಳುವ ಮುಷ್ಕರ’ (sit-down strike) ಅಂತ್ಯಗೊಂಡಿತು.
ಬಿಬಿಸಿ ದೂರದರ್ಶನ ಕೇಂದ್ರವು ಮೊಟ್ಟಮೊದಲ ಕಾಲ್ಪನಿಕ ವಿಜ್ಞಾನ ಕಾರ್ಯಕ್ರಮವೊಂದನ್ನು ಭಿತ್ತರಿಸಿತು. ಈ ಕಾರ್ಯಕ್ರಮವವು ಕಾರೆಲ್ ಕಾಪೆಕ್ ಅವರ ‘ಆರ್.ಯು.ಆರ್’ ನಾಟಕದ ಅವತರಣಿಕೆಯಾಗಿತ್ತು. ‘ರೋಬೋಟ್’ ಎಂಬ ಪದ ಮೊಟ್ಟಮೊದಲ ಬಾರಿಗೆ ಬಳಸಿದ ಕೀರ್ತಿ ಈ ಕೃತಿಯದ್ದಾಗಿದೆ.
ಲಾಕ್ ಹೀಡ್ ಪಿ-38 ಲೈಟ್ನಿಂಗ್ ಯುದ್ಧ ವಿಮಾನವು ಮೊಟ್ಟ ಮೊದಲಬಾರಿ ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕ್ ನಡುವಣ ದೂರವನ್ನು 7 ಗಂಟೆ 2 ನಿಮಿಷಗಳಲ್ಲಿ ಕ್ರಮಿಸಿತು.
ಅಮೆರಿಕಾದ ಅಧ್ಯಕ್ಷ ರೂಸ್ ವೆಲ್ಟ್, ಬ್ರಿಟಿಷ್ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಮತ್ತು ಸೋವಿಯತ್ ಧುರೀಣ ಜೋಸೆಫ್ ಸ್ಟಾಲಿನ್ ಅವರು ಎರಡನೇ ಜಾಗತಿಕ ಸಮರ ಕಾಲದ ಯಾಲ್ಟಾ ಒಪ್ಪಂದಕ್ಕೆ ಸಹಿ ಹಾಕಿದರು. ನಾಝಿ ಜರ್ಮನಿಯನನ್ನು ಅಂತಿಮವಾಗಿ ಪರಾಭವಗೊಳಿಸುವ ಬಗೆ ಹಾಗೂ ಪರಾಜಿತ ಪೂರ್ವ ಯುರೋಪ್ ರಾಷ್ಟ್ರಗಳ ಜೊತೆಗೆ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ಈ ಮೂವರು ಚರ್ಚಿಸಿದರು.
ಅಮೆರಿಕ ಸಂಯುಕ್ತ ಸಂಸ್ಥಾನ, ಯುನೈಟೆಡ್ ಕಿಂಗ್ಡಂ ಮತ್ತು ಸೋವಿಯತ್ ಯೂನಿಯನ್ ಸೇರಿದಂತೆ 87 ರಾಷ್ಟ್ರಗಳು ಅಂತರರಾಷ್ಟ್ರೀಯ ಸಾಗರ ನೆಲೆಗಳಲ್ಲಿ ಅಣ್ವಸ್ತ್ರ ಪ್ರಯೋಗಗಳನ್ನು ನಿಷೇದಿಸುವ ‘ಸೀ ಬೆಡ್ ಆರ್ಮ್ಸ್ ಕಂಟ್ರೋಲ್ ಟ್ರೀಟಿ’ ಒಡಂಬಡಿಕೆಗೆ ಸಹಿ ಮಾಡಿದವು.
ಮಾರ್ಗರೆಟ್ ಥ್ಯಾಚರ್ ಬ್ರಿಟಿಷ್ ರಾಜಕೀಯ ಪಕ್ಷವೊಂದರ ಮೊತ್ತ ಮೊದಲ ಮಹಿಳಾ ನಾಯಕಿ ಎನಿಸಿದರು.
ಚೀನಾ ದೇಶವು ಅರಿಸ್ಟಾಟಲ್, ವಿಲಿಯಂ ಷೇಕ್ಸ್ ಪಿಯರ್ ಮತ್ತು ಚಾರ್ಲ್ಸ್ ಡಿಕನ್ಸ್ ಅವರ ಕೃತಿಗಳ ಮೇಲಿನ ನಿರ್ಬಂಧವನ್ನು ರದ್ದುಗೊಳಿಸಿತು.
ಇರಾನಿನಲ್ಲಿ ಜರುಗಿದ ಕ್ರಾಂತಿಯಲ್ಲಿ ಆಯಾತೊಲ್ಲಾ ರುಹೋಲ್ಲಾಹ್ ಖೊಮೈನಿ ಅವರ ನೇತೃತ್ವದ ಇಸ್ಲಾಮಿಕ್ ಧರ್ಮೀಯ ಆಡಳಿತವು ಆರಂಭಗೊಂಡಿತು.
ಅಮೆರಿಕದ ಟೆನ್ನೆಸ್ಸೀ ಎಂಬಲ್ಲಿ ಸುಮಾರು ಒಂದು ಲಕ್ಷ ಗ್ಯಾಲನ್ ರೇಡಿಯೋ ಆಕ್ಟಿವ್ ಕೂಲೆಂಟಿನ ಸೋರಿಕೆ ಉಂಟಾಗಿ ‘ಟಿವಿಎ ಸೆಕ್ಯೂಯಾಹ್ ಒಂದು’ ಪರಮಾಣು ಘಟಕದ ಮೇಲೆ ತೀವ್ರ ಪರಿಣಾಮ ಉಂಟಾಯಿತಲ್ಲದೆ, ಎಂಟು ಜನ ಕಾರ್ಮಿಕರ ಮೇಲೆ ಕಲುಷಿತ ಪ್ರಭಾವ ಉಂಟಾಯಿತು.
ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಹೊರವಲಯದ ವಿಕ್ಟರ್ ವೆರ್ಸ್ಟರ್ ಸೆರೆಮನೆಯಲ್ಲಿದ್ದ ನೆಲ್ಸನ್ ಮಂಡೇಲಾ ಅವರನ್ನು 27 ವರ್ಷಗಳ ಸುದೀರ್ಘ ಸೆರೆವಾಸದಿಂದ ಬಿಡುಗಡೆ ಮಾಡಲಾಯಿತು.
ತಜ್ಞರಿಂದ 42 ಸಾಧ್ಯತೆಗಳಲ್ಲಿ ಒಂದು ಎಂಬ ಕ್ಷೀಣ ಅಂಕ ಪಡೆದಿದ್ದ ಬಸ್ಟರ್ ಡೌಗ್ಲಾಸ್ ಅವರು ಮೈಕ್ ಟೈಸನ್ ಅವರನ್ನು ವಿಶ್ವ ಹೆವಿ ವೈಟ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಹತ್ತು ಸುತ್ತಿನಲ್ಲಿ ಪರಾಭವಗೊಳಿಸಿದರು. ಇದು ಕ್ರೀಡಾ ಇತಿಹಾಸದ ಅತ್ಯಂತ ದೊಡ್ಡ ಅಚ್ಚರಿಗಳಲ್ಲೊಂದಾಗಿದೆ.
ಹಬ್ಬಲ್ ಸ್ಪೇಸ್ ಟೆಲಿಸ್ಕೋಪಿನ ಸೇವೆಗಾಗಿ ‘ಡಿಸ್ಕವರಿ’ ಬಾಹ್ಯಾಕಾಶ ವಾಹನವನ್ನು ಉಡಾಯಿಸಲಾಯಿತು.
ಡಚ್ ಪ್ರೊಗ್ರಾಮಿಂಗ್ ತಜ್ಞನೊಬ್ಬ ರಷ್ಯಾದ ಸೌಂದರ್ಯವತಿ ಟೆನಿಸ್ ತಾರೆ ಅನ್ನಾ ಕೋರ್ನಿಕೋವಾ ಅವರ ಚಿತ್ರವನ್ನು ತನ್ನ ಕುಟಿಲ ಚಾತುರ್ಯತೆಯಿಂದ ಬಳಸಿ ‘ಅನ್ನಾ ಕೋರ್ನಿಕೋವಾ ವೈರಸ್’ ಅನ್ನು ಸಾಂಕ್ರಾಮಿಕವಾಗಿ ಭಿತ್ತರಿಸಿ ವಿಶ್ವದೆಲ್ಲೆಡೆ ಮಿಲಿಯನ್ಗಟ್ಟಲೆ ಈಮೈಲ್ಗಳಿಗೆ ಸಂಚಕಾರ ಉಂಟುಮಾಡಿದ.
ಔಷಧಗಳ ಮೇಲೆ ಎಲ್ಲ ತೆರಿಗೆಗಳೂ ಸೇರಿದಂತೆ ಗರಿಷ್ಠ ಮಾರಾಟ ದರ (ಎಂ.ಆರ್.ಪಿ) ನಮೂದಿಸುವುದನ್ನು ಏಪ್ರಿಲ್ 1ರಿಂದ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಖಾತೆ ಸಚಿವ ರಾಮ್ ವಿಲಾಸ ಪಾಸ್ವಾನ್ ಪ್ರಕಟಿಸಿದರು.
ಭಾರತದ ಪ್ರಮುಖ ಮೊಬೈಲ್ ಟೆಲಿಫೋನ್ ಸಂಸ್ಥೆಗಳಲ್ಲಿ ಒಂದಾದ ಹಚ್-ಎಸ್ಸಾರ್ ಸಂಸ್ಥೆಯನ್ನು, ಬ್ರಿಟನ್ನಿನ ಪ್ರಮುಖ ಟೆಲಿಫೋನ್ ಸಂಸ್ಥೆಗಳಲ್ಲಿ ಒಂದಾದ ವೊಡಾಫೋನ್ 19.3 ಬಿಲಿಯನ್ ಡಾಲರುಗಳಿಗೆ ಖರೀದಿಸಿತು.
ಅರಬ್ಬರ ವಿರೋಧವನ್ನು ಲೆಕ್ಕಿಸದೆ ಜೆರುಸಲೇಂನ ಹೊರಭಾಗದ ಅತ್ಯಂತ ವಿವಾದಾತ್ಮಕ ಧಾರ್ಮಿಕ ತಾಣದಲ್ಲಿಉತ್ಖನನ ಮುಂದುವರೆಸಲು ಇಸ್ರೇಲ್ ಸಚಿವ ಸಂಪುಟ ನಿರ್ಧರಿಸಿತು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಿದ್ಯುತ್ ಕೈಕೊಟ್ಟ ಪರಿಣಾಮವಾಗಿ ಭಾರತೀಯ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್ ಮತ್ತು ಇತರರು ಸುಮಾರು 31 ತಾಸುಗಳ ಕಾಲ ಸುಮ್ಮನೆ ಕುಳಿತುಕೊಳ್ಳಬೇಕಾಯಿತು. ಈ ಅವಧಿಯಲ್ಲಿ ಅವರ ಭೂಮಿ ಜೊತೆಗಿನ ಸಂಪರ್ಕ ಕಡಿದುಹೋಗಿತ್ತು.
561 ವರ್ಷ ಹಳೆಯದಾದ ದಕ್ಷಿಣ ಕೊರಿಯಾದ ‘ನಮ್ದೇಮುನ್’ ಗೇಟ್ ಬೆಂಕಿಗಾಹುತಿಯಾಯಿತು. ಇದನ್ನು 2010ರಿಂದ 2013 ಅವಧಿಯಲ್ಲಿ ಪುನಃನಿರ್ಮಿಸಲಾಗಿದೆ.
ಬ್ರಿಟನ್ನಿನ ಧನ ಸಹಾಯದಿಂದ ಪಶ್ಚಿಮ ಬಂಗಾಳದ ಸುಂದರಬನ ಸಂರಕ್ಷಿತ ಅರಣ್ಯ ವಲಯವನ್ನು ಕಾಪಾಡುವುಕ್ಕಾಗಿ 40ಲಕ್ಷ ಮ್ಯಾಂಗ್ರೋವ್ (ಕಾಂಡ್ಲಾಕಾಡು) ಸಸಿಗಳನ್ನು ನೆಡುವ ಯೋಜನೆ ಮಥುರಾಕಾಂಡ ದ್ವೀಪದಲ್ಲಿ ಆರಂಭವಾಯಿತು. ಬ್ರಿಟನ್ ಸರ್ಕಾರ ಈ ಯೋಜನೆಗೆ 60,000 ಡಾಲರ್ ಹಣದ ಬೆಂಬಲ ನೀಡಿದೆ.
ರಾಂಗಿಂಗ್ ಪಿಡುಗನ್ನು ತಡೆಗಟ್ಟಲು ತಾನು ರಚಿಸಿರುವ ‘ಮಾಜಿ ಸಿಬಿಐ ನಿರ್ದೇಶಕ ಆರ್.ಕೆ. ರಾಘವನ್ ಸಮಿತಿ’ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೇಶದಾದ್ಯಂತ ಶೈಕ್ಷಣಿಕ ಸಂಸ್ಥೆಗಳಿಗೆ ತಿಳಿಸಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಆದೇಶ ನೀಡಿತು.
ರವೀಂದ್ರನಾಥ ಠಾಗೂರರ ಹಸ್ತಾಕ್ಷರದ ಪತ್ರವೊಂದು ಬಾಂಗಾದ್ಲೇಶದ ಉತ್ತರ ಬಾಂಗ್ಲಾದ ನವಗಾಂವ್ ಜಿಲ್ಲೆಯ ಗ್ರಾಮವೊಂದರಲ್ಲಿ ವ್ಯಕ್ತಿಯೊಬ್ಬರು ಸಂಗ್ರಹಿಸಿದ್ದ ಪತ್ರಗಳಲ್ಲಿ ಪತ್ತೆಯಾಯ್ತು. ಆರು ಪುಟಗಳ ಈ ಪತ್ರದಲ್ಲಿ ಠಾಗೂರರರಿಗೆ ಅವರಿಗೆ ಸಂಬಂಧಿಸಿದ ಹಲವಾರು ವಿಷಯಗಳೊಂದಿಗೆ ಅವರ ಖಚಿತ ಜನ್ಮದಿನದ ವಿವರವೂ ಇದೆ.
ಈಜಿಪ್ಟಿನಲ್ಲಿ ಮೂಡಿದ ಕ್ರಾಂತಿಯ ಗಾಳಿಯಲ್ಲಿ ಹೋಸ್ನಿ ಮುಬಾರಕ್ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ 18 ದಿನಗಳ ಕಾಲ ನಡೆದ ಪ್ರತಿಭಟನಾ ಚಳುವಳಿಗೆ ಒಂದಷ್ಟು ಜಯ ದಕ್ಕಿದಂತಾಗಿದ್ದು, ಅಧಿಕಾರವನ್ನು ಸುಪ್ರೀಂ ಮಿಲಿಟರಿ ಕೌನ್ಸಿಲಿಗೆ ವರ್ಗಾಯಿಸಲಾಗಿದೆ.

ಜನನ:
ಇಂಗ್ಲಿಷ್ ಛಾಯಾಗ್ರಾಹಕ, ವಿಜ್ಞಾನಿ ಮತ್ತು ಕ್ಯಾಲೋಟೈಪ್ ಅನ್ವೇಷಕ ಹೆನ್ರಿ ಫಾಕ್ಸ್ ಟಾಲ್ಬಾಲ್ಟ್ ಅವರು ಇಂಗ್ಲೆಂಡಿನ ಡೋರ್ಸೆಟ್ ಬಳಿಯ ಮೆಲ್ಬರಿ ಎಂಬಲ್ಲಿ ಜನಿಸಿದರು. ಉಪ್ಪಿನ ಕಾಗದವನ್ನೂ ಕಂಡುಹಿಡಿದರಲ್ಲದೆ, ಅದರ ಮೇಲೆ ತಮ್ಮ ಕ್ಯಾಲೋಟೈಪ್ಸ್ ಚಿತ್ರಗಳನ್ನು ಮುದ್ರಿಸುವ ವಿಧಾನವನ್ನೂ ಇವರು ಕಂಡುಹಿಡಿದರು.
ಮಹಾನ್ ಸಂಶೋಧಕ ಥಾಮಸ್ ಆಲ್ವಾ ಎಡಿಸನ್ ಅಮೆರಿಕದ ಓಹಿಯೋ ಬಳಿಯ ಮಿಲನ್ ಎಂಬಲ್ಲಿ ಜನಿಸಿದರು. ಎಲೆಕ್ಟ್ರಿಕ್ ಬಲ್ಬ್, ಫೋನೋಗ್ರಾಫ್, ಚಲನಚಿತ್ರ ಕ್ಯಾಮೆರಾ ಒಳಗೊಂಡಂತೆ 1000ಕ್ಕೂ ಹೆಚ್ಚು ಸಂಶೋಧನೆಗಳಿಗೆ ಪೇಟೆಂಟ್ ಪಡೆದಿದ್ದ ಮಹಾನ್ ಸಂಶೋಧಕರೀತ.
ಕಲಾತ್ಮಕ ವಸ್ತುಗಳ ಸಂಗ್ರಾಹಕಿ ಎಂದು ಪ್ರಸಿದ್ಧರಾಗಿರುವ ಡಚ್ ಮಹಿಳೆ ಹೆಲೆನೆ ಕ್ರೋಲರ್ ಮ್ಯುಲ್ಲರ್ ಅವರು ಜರ್ಮನಿಯ ಎಸ್ಸೆನ್ ಎಂಬಲ್ಲಿ ಜನಿಸಿದರು. ಮುಂದೆ ಅವರು ಪ್ರಸಿದ್ಧ ಕ್ರೋಲರ್ ಮ್ಯುಲ್ಲರ್ ಸಂಗ್ರಹಾಲಯವನ್ನು ಸ್ಥಾಪಿಸಿದರು.
ಸಾಹಿತಿಯಾಗಿ, ಜಾನಪದ ಸಂಸ್ಕೃತಿಯನ್ನು ಉಳಿಸುವಲ್ಲಿ ಮಹತ್ವದ ಕೈಂಕರ್ಯ ಸಲ್ಲಿಸಿದವರಾಗಿ ಪ್ರಸಿದ್ಧರಾಗಿರುವ ಡಾ. ಎಚ್. ಎಲ್. ನಾಗೇಗೌಡ ಅವರು ಮಂಡ್ಯ ಜೆಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿ ಎಂಬಲ್ಲಿ ಜನಿಸಿದರು. ಸಾಹಿತ್ಯ ಅಕಾಡೆಮಿ ಗೌರವ, ನಾಡೋಜ ಗೌರವ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಸಾಹಿತ್ಯ ಸಮ್ಮೇಳನನಾಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.
ಶಿಲ್ಪ ಕಲಾವಿದ ಗಣೇಶ ಎಲ್. ಭಟ್ ಹೊನ್ನಾವರ ತಾಲ್ಲೂಕಿನ ಇಡಗುಂಜಿಯಲ್ಲಿ ಜನಿಸಿದರು. ಶಿಲ್ಪ ಕಲಾವಿದರಾಗಿ, ಕಲೆಯ ಕಲಿಕೆಯ ಆಸಕ್ತರಿಗೆ ಪ್ರಾಚಾರ್ಯರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ಗಣೇಶ ಭಟ್ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ, ಶಿಲ್ಪಶ್ರೀ ಪುರಸ್ಕಾರಗಳು ಲಭಿಸಿವೆ.

ನಿಧನ:
ಇಂಗ್ಲಿಷ್-ಐರಿಷ್ ತಂತ್ರಜ್ಞ ಚಾರ್ಲ್ಸ್ ಅಲ್ಗರ್ನಾನ್ ಪಾರ್ಸನ್ಸ್ ಅವರು ಜಮೈಕಾದಲ್ಲಿ ನಿಧನರಾದರು. ಇವರು ಸ್ಟೀಮ್ ಟರ್ಬೈನ್ ಸಂಶೋಧನೆಗಾಗಿ ಪ್ರಸಿದ್ಧರಾಗಿದ್ದಾರೆ. ಡೈನಮೋ ಮತ್ತು ಟರ್ಬೈನ್ ಉಪಯೋಗಿಸಿ ವಿದ್ಯುತ್ ಉತ್ಪಾದನೆಯಲ್ಲಿ ಶ್ರಮಿಸಿದ ಇವರು ಟೆಲಿಸ್ಕೋಪ್ ಮತ್ತು ಸರ್ಚ್ ಲೈಟುಗಳಿಗಾಗಿ ಆಪ್ಟಿಕಲ್ ಎಕ್ವಿಪ್ಮೆಂಟ್ ಅನ್ನೂ ತಯಾರಿಸಿದ್ದರು.
ಭಾರತದ ಖ್ಯಾತ ಕೈಗಾರಿಕೋದ್ಯಮಿ ಹಾಗೂ ಮಹಾತ್ಮಾ ಗಾಂಧೀಜಿಯವರ ನಿಕಟವರ್ತಿ ಜಮ್ನಾಲಾಲ್ ಬಜಾಜ್ ಅವರು ವಾರ್ಧಾದಲ್ಲಿ ನಿಧನರಾದರು. ಇವರು ಸ್ಥಾಪಿಸಿದ ಬಜಾಜ್ ಸಮೂಹವು ಭಾರತದ ಪ್ರಸಿದ್ಧ ಕೈಗಾರಿಕಾ ಸಂಸ್ಥೆಗಳಲ್ಲೊಂದಾಗಿದೆ. ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆವಾಸವನ್ನೂ ಅನುಭವಿಸಿದ್ದರು.
ಸ್ವಾತಂತ್ರ್ಯ ಹೋರಾಟಗಾರ, ಆಧ್ಯಾತ್ಮವಾದಿ, ಅರ್ಥಶಾಸ್ತ್ರಜ್ಞ, ವಿದ್ವಾಂಸ, ಸಂಘಟನಕಾರ ಪಂಡಿತ ದೀನದಯಾಳ ಉಪಾಧ್ಯಾಯರು ಉತ್ತರ ಪ್ರದೇಶದ ಮುಘಲ್ ಸರಾಯ್ ಎಂಬಲ್ಲಿ ನಿಧನರಾದರು. ಇವರು ಭಾರತ ಜನಸಂಘವನ್ನು ಸ್ಥಾಪಿಸಿದರು.
ಜರ್ಮನಿಯ ಭೌತವಿಜ್ಞಾನಿ ಜೆ. ಹನ್ಸ್ ಡಿ. ಜೆನ್ಸೆನ್ ಅವರು ಹೀಡೆಲ್ ಬರ್ಗ್ ಎಂಬಲ್ಲಿ ನಿಧನರಾದರು. ನ್ಯೂಕ್ಲಿಯರ್ ಶೆಲ್ ಮಾಡೆಲ್ ಸಂಶೋಧನೆಗಾಗಿ ಇವರಿಗೆ 1963 ವರ್ಷದಲ್ಲಿ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.
ಭಾರತದ ರಾಷ್ಟ್ರಪತಿ ಫಕ್ರುದ್ದಿನ್ ಆಲಿ ಆಹಮದ್ ನವದೆಹಲಿಯಲ್ಲಿ ನಿಧನರಾದರು. ಭಾರತದ ಸ್ವಾತಂತ್ಯ್ರ ಹೋರಾಟದಲ್ಲಿ ಪಾಲ್ಗೊಂಡು ಹಲವು ವರ್ಷ ಸೆರೆಮನೆ ವಾಸ ಅನುಭವಿಸಿದ್ದ ಇವರು 1974-77 ಅವಧಿಯಲ್ಲಿ ರಾಷ್ಟ್ರಪತಿಗಳಾಗಿದ್ದು, ತಮ್ಮ ಅಧಿಕಾರದ ಅವಧಿಯಲ್ಲೇ ನಿಧನರಾದರು.
ಸ್ವೀಡಿಷ್ ಸಾಹಿತಿ ಹ್ಯಾರಿ ಮಾರ್ಟಿನ್ಸನ್ ಅವರು ಸ್ಟಾಲ್ಕ್ ಹೋಮ್ ನಗರದಲ್ಲಿ ನಿಧನರಾದರು. ಇಪ್ಪತ್ತನೆಯ ಶತಮಾನದ ಸ್ವೀಡಿಷ್ ಕಾವ್ಯದಲ್ಲಿ ಮಹತ್ವದ ಸಾಧಕರೆಂದು ಪರಿಗಣಿತರಾಗಿದ್ದ ಇವರಿಗೆ 1974 ವರ್ಷದ ನೊಬೆಲ್ ಶ್ರೇಷ್ಠ ಸಾಹಿತ್ಯ ಪುರಸ್ಕಾರ ಸಂದಿತ್ತು.
ಭಾರತದ ಖ್ಯಾತ ಇತಿಹಾಸಜ್ಞ ರೊಮೇಶ್ ಚಂದ್ರ ಮಜುಂದಾರ್ ಕೋಲ್ಕತ್ತದಲ್ಲಿ ನಿಧನರಾದರು. ಇವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯನ್ನು ದಾಖಲಿಸಲು ಸರ್ಕಾರ ನೇಮಿಸಿದ್ದ ಸಮಿತಿಯಲ್ಲಿ ಪ್ರಮುಖ ಸದಸ್ಯರಾಗಿದ್ದರು. ‘ಹಿಸ್ಟರಿ ಆಫ್ ದಿ ಫ್ರೀಡಮ್ ಮೂವ್ಮೆಂಟ್ ಇನ್ ಇಂಡಿಯಾ’ ಇವರ ಪ್ರಸಿದ್ಧ ಕೃತಿ.
ಭಾರತದ ಖ್ಯಾತ ಉರ್ದು ಮತ್ತು ಹಿಂದೀ ಕವಿ, ಚಿತ್ರ ನಿರ್ದೇಶಕ ಮತ್ತು ಚಿತ್ರ ಕಥಾಲೇಖಕ ಕಮಲ್ ಅಮ್ರೋಹಿ ಮುಂಬೈನಲ್ಲಿ ನಿಧನರಾದರು. ಇವರು ಮಹಲ್, ಪಾಖೀಜಾ, ರಜಿಯಾ ಸುಲ್ತಾನ್ ಮುಂತಾದ ಚಿತ್ರಗಳಿಂದ ಪ್ರಸಿದ್ಧರಾಗಿದ್ದಾರೆ. ಮುಘಲ್ ಎ ಅಜಮ್ ಚಿತ್ರದ ಚಿತ್ರಕತೆಗಾಗಿ ಇವರು ಫಿಲಂಫೇರ್ ಪ್ರಶಸ್ತಿಗೆ ಪಾತ್ರರಾಗಿದ್ದರು.
ಅಮೆರಿಕದ ಪ್ರಸಿದ್ಧ ಜೈವಿಕ ವಿಜ್ಞಾನಿ ರಾಬರ್ಟ್ ಡಬ್ಲ್ಯೂ ಹಾಲೀ ಕ್ಯಾಲಿಫೋರ್ನಿಯಾದ ಲಾಸ್ ಗೆಟೋಸ್ ಎಂಬಲ್ಲಿ ನಿಧನರಾದರು. ಇವರು ಭಾರತೀಯ ಮೂಲಸಂಜಾತ ಹರಭಜನ್ ಖೊರಾನಾ ಮತ್ತು ಮಾರ್ಷಲ್ ನೀರೇನ್ಬರ್ಗ್ ಅವರುಗಳೊಂದಿಗೆ 1968ರ ವರ್ಷದಲ್ಲಿ ವೈದ್ಯಕೀಯ ಕ್ಷೇತ್ರದ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದರು.