Categories
e-ದಿನ

ಫೆಬ್ರವರಿ-13

ದಿನಾಚರಣೆ
ವಿಶ್ವ ರೇಡಿಯೋ ದಿನ
ವಿಶ್ವದೆಲ್ಲೆಡೆಯ ಜನರನ್ನು ಒಂದುಗೂಡಿಸುವಲ್ಲಿ ರೇಡಿಯೋ ವಹಿಸಿರುವ ಪಾತ್ರವನ್ನು ನೆನೆಪಿಗೆ ತಂದುಕೊಳ್ಳುವ ದಿನವಾಗಿ, ಫೆಬ್ರವರಿ 13 ದಿನವನ್ನು ವಿಶ್ವ ರೇಡಿಯೋ ದಿನವನ್ನಾಗಿ ಆಚರಿಸಲಾಗುತ್ತಿದೆ. ಸ್ಪೇನ್ ದೇಶವು ಈ ಕುರಿತಾದ ಪ್ರಸ್ತಾಪವನ್ನು ಮುಂದಿಟ್ಟಾಗ ಅದನ್ನು ಯುನೆಸ್ಕೋ 2011ರ ವರ್ಷದ ನವೆಂಬರ್ 3ರಂದು ನಡೆದ ಮಹಾ ಸಭೆಯಲ್ಲಿ ಅನುಮೋದಿಸಿತು.

ಪ್ರಮುಖಘಟನಾವಳಿಗಳು:

1322: ಇಂಗ್ಲಿಷರ ನಗರವಾದ ‘ಎಲಿ’ ಎಂಬಲ್ಲಿರುವ ಎಲಿ ಕಾಥೆಡ್ರಲ್ ಅಥವಾ ಆಂಗ್ಲಿಕನ್ ಕಾಥೆಡ್ರಲ್ಲಿನ ಮಧ್ಯದ ಗೋಪುರವು ಕಳಚಿಬಿತ್ತು.

1739: ಕರ್ನಾಲ್ ಕದನದಲ್ಲಿ ಮುಘಲ್ ದೊರೆ ‘ಮುಹಮ್ಮದ್ ಷಾ’ನನ್ನು ಇರಾನಿಯನ್ ದೊರೆ ‘ನಾದೆರ್ ಷಾ’ ಸೋಲಿಸಿದನು

1880: ಥಾಮಸ್ ಆಲ್ವಾ ಎಡಿಸನ್ ಅವರು ವಿದ್ಯುತ್ ಬಲ್ಬ್ ಸಂಶೋಧನೆಯಲ್ಲಿದ್ದಾಗ ಫೆಬ್ರುವರಿ 13, 1880ರಂದು ಬಿಸಿಯಾದ ತಂತುವಿನಿಂದ ವಿದ್ಯುತ್ತು ಏಕಮುಖವಾಗಿ ಮಾತ್ರ ಹರಿಯುವುದೆಂದು ಕಂಡುಕೊಂಡರು. ಇದು ಮುಂದೆ ಡಯೋಡ್’ನಲ್ಲಿ ಕೊನೆಗೊಂಡು ಎಡಿಸನ್ ಎಫೆಕ್ಟ್ ಎಂದು ಪ್ರಖ್ಯಾತಗೊಂಡಿತು. ಇದು ಇಪ್ಪತ್ತನೇ ಶತಮಾನದಲ್ಲಿ ಎಲೆಕ್ಟ್ರಾನಿಕ್ ತಂತ್ರಜ್ಞಾನದ ಬೆಳವಣಿಗೆಗೆ ಮೂಲ ಸೆಲೆಯಾಗಿ ಒದಗಿದೆ.

1881: ಮೊದಲ ಮಹಿಳಾ ಪತ್ರಿಕೆ ‘ಲಾ ಸಿಟೋಯೆನ್ನೇ’ ಪ್ಯಾರಿಸ್ ನಗರದಲ್ಲಿ ಪ್ರಕಟಗೊಂಡಿತು. ಇದನ್ನು ಹ್ಯೂಬರ್ಟೈನ್ ಆಕ್ಲರ್ಟ್ ಎಂಬ ಕಾರ್ಯಕರ್ತೆ ಸ್ಥಾಪಿಸಿದರು.

1913: ಮಂಚು ಕ್ವಿಂಗ್ ಸಾಮ್ರಾಜ್ಯ ಅಂತ್ಯಗೊಂಡ ಸಂದರ್ಭದಲ್ಲಿ 13ನೇ ದಲೈ ಲಾಮಾ ಅವರು ಟಿಬೆಟ್ ಸ್ವಾತಂತ್ರ್ಯವನ್ನು ಘೋಷಿಸಿದರು. ಮುಂದೆ ಚೀನವು 1951ರಲ್ಲಿ ಟಿಬೆಟ್ ಅನ್ನು ತನ್ನ ಭಾಗವಾಗಿ ಆಕ್ರಮಿಸಿಕೊಳ್ಳುವವರೆಗೆ ಈ ಸ್ವಾತಂತ್ರ್ಯವು ಮುಂದುವರೆಯಿತು.

1914: ‘ಅಮೆರಿಕನ್ ಸೊಸೈಟಿ ಆಫ್ ಕಂಪೋಟರ್ಸ್, ಆಥರ್ಸ್ ಅಂಡ್ ಪಬ್ಲಿಷರ್ಸ್’ ಪ್ರಾರಂಭಗೊಂಡು ತನ್ನ ಸದಸ್ಯರ ಕಾಪಿರೈಟ್ ಹಕ್ಕುಗಳನ್ನು ಕಾಯ್ದುಕೊಳ್ಳುವ ಕೆಲಸವನ್ನು ಪ್ರಾರಂಭಿಸಿತು.

1931: ಬ್ರಿಟಿಷ್ ಆಡಳಿತವು ಕೋಲ್ಕತ್ತಾದಿಂದ ನವದೆಹಲಿಗಿನ ರಾಜಧಾನಿ ವರ್ಗಾವಣೆ ಕಾರ್ಯವನ್ನು ಪೂರ್ಣಗೊಳಿಸಿತು.

1941: ಮೊತ್ತ ಮೊದಲ ಬಾರಿಗೆ ಆಕ್ಸ್ ಫರ್ಡ್’ನ ಆಲ್ಬರ್ಟ್ ಅಲೆಗ್ಸಾಂಡರ್ ಎಂಬ ವ್ಯಕ್ತಿಯ ಮೇಲೆ ಪೆನ್ಸಿಲಿನ್ ಪ್ರಯೋಗಿಸಲಾಯಿತು. ಈತ ಗಡ್ಡ ಕ್ಷೌರ ಮಾಡುವಾಗ ಗಾಯವಾಗಿ ಬಳಿಕ ರಕ್ತ ವಿಷಮಯಗೊಂಡು ಸ್ಟೆಫೈಲೊಕೋಕಸ್ ಎಂಬ ಸೋಂಕಿಗೆ ತುತ್ತಾಗಿದ್ದ. ಈತನಿಗೆ ನೀಡಲಾದ ಯಾವುದೇ ಔಷಧಿಯೂ ಫಲ ನೀಡದೆ ಹೋದಾಗ ಆಸ್ಪತ್ರೆ ಅಧಿಕಾರಿಗಳು ಹೊವರ್ಡ್ ಫ್ಲೋರೇ ಮತ್ತು ಅರ್ನೆಸ್ಟ್ ಚೈನ್ ಅವರಿಗೆ ಸ್ವತಃ ಅವರುಗಳೇ ತಯಾರಿಸಿದ ಹೊಸ ಔಷಧಿ ಪ್ರಯೋಗಿಸಲು ಒಪ್ಪಿಗೆ ನೀಡಿದರು. ಅವರು ತಯಾರಿಸಿದ್ದ ಪೆನ್ಸಿಲಿನನ್ನು ಸ್ವಲ್ಪ ಪ್ರಮಾಣದಲ್ಲಿ ನೀಡಲಾಯಿತು. ಸೋಂಕು ಹಾಗೇ ಮುಂದುವರಿಯಿತು. ರೋಗಿ ಮೃತನಾದ.

1946: ಜಗತ್ತಿನ ಮೊತ್ತ ಮೊದಲ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್ ‘ಈನ್ಯಾಕ್’ (ದಿ ಎಲೆಕ್ಟ್ರಾನಿಕ್ ನ್ಯೂಮರಿಕಲ್ ಇಂಟೆಗ್ರೇಟರ್ ಅಂಡ್ ಕ್ಯಾಲ್ಕುಲೇಟರ್) ಮೊದಲ ಬಾರಿಗೆ ಜಾನ್ ಡಬ್ಲ್ಯೂ ಮೌಕ್ಲಿ ಮತ್ತು ಜೆ. ಪ್ರಸ್ಪರ್ ಎಕರ್ಟ್ ಅವರಿಂದ ಪೆನ್ಸಿಲ್ವೇನಿಯಾದ ಮೂರೆ ಸ್ಕೂಲ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಆವರಣದಲ್ಲಿ ಪ್ರದರ್ಶನಗೊಂಡಿತು. ಜಗತ್ತಿನಲ್ಲೇ ಅತ್ಯಂತ ದೊಡ್ಡ ಏಕೈಕ ಕಂಪ್ಯೂಟರ್ ಇದಾಗಿತ್ತು. ಇದು 30-40 ಅಡಿ ಅಳತೆಯ ಇಡೀ ಕೊಠಡಿಯನ್ನು ವ್ಯಾಪಿಸಿತ್ತು. ಆಧುನಿಕ ಎಲೆಕ್ಟ್ರಾನಿಕ್ ಗಣಕ ಉದ್ಯಮಕ್ಕೆ ಬುನಾದಿ ಹಾಕಿದ್ದರಿಂದ ಇದು ಚಾರಿತ್ರಿಕ ಘಟನೆಯಾಯಿತು. ಆಗ ಲಭ್ಯವಿದ್ದ ವ್ಯಾಕ್ಯೂಂ ಟ್ಯೂಬ್ ತಂತ್ರಜ್ಞಾನ ಬಳಸಿ ಡಿಜಿಟಲ್ ಗಣಕದ ವೇಗವನ್ನು ಇನ್ನಷ್ಟು ಹೆಚ್ಚಿಸಬಹುದು ಎಂಬುದು ಈ ಕಂಪ್ಯೂಟರ್ ಪ್ರದರ್ಶನದಿಂದ ಬೆಳಕಿಗೆ ಬಂತು.

1960: ಫ್ರಾನ್ಸ್ ದೇಶವು ಗೆರ್ಬೋಯ್ಸ್ ಬ್ಲ್ಯೂ ಎಂಬ ಗುಪ್ತನಾಮದ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಹೀಗೆ ಫ್ರಾನ್ಸ್ ದೇಶವು ಅಣ್ವಸ್ತ್ರ ಪರೀಕ್ಷೆ ನಡೆಸಿದ ನಾಲ್ಕನೇ ರಾಷ್ಟ್ರವೆನಿಸಿತು.

1961: ಅಮೆರಿಕದ ಕ್ಯಾಲಿಫೋರ್ನಿಯಾದ ಬಳಿ ಸುಮಾರು 5 ಲಕ್ಷ ವರ್ಷಗಳಷ್ಟು ಹಳೆಯದಾದ ಬಂಡೆ ಪತ್ತೆಯಾಗಿದ್ದು, ಅದು ಎಲ್ಲ ಕಾಲ ವಿರೋಧಗಳಿಗೂ ಒಗ್ಗುವಂತಹ ಸ್ಪಾರ್ಕ್ ಪ್ಲಗ್ ಅಂತಹ ರಕ್ಷಾ ಕವಚವನ್ನು ಹೊಂದಿರುವುದೆಂದು ವಿಜ್ಞಾನಿಗಳ ಅಂಬೋಣವಾಗಿದೆ.

1967: ಅಮೆರಿಕನ್ ಸಂಶೋಧಕರು ನ್ಯಾಷನಲ್ ಲೈಬ್ರೆರಿ ಆಫ್ ಸ್ಪೇನ್’ನಲ್ಲಿ ಲಿಯನಾರ್ಡೋ ಡ ವಿನ್ಸಿಯ ‘ಮಾಡ್ರಿಡ್ ಕೊಡೈಸಸ್’ ಅನ್ನು ಪತ್ತೆ ಮಾಡಿದರು. ಎರಡು ಸಂಪುಟಗಳ 197 ಪುಟಗಳಲ್ಲಿರುವ ಈ ಹಸ್ತ ಬರಹದ ಕೃತಿ ಕೆಂಪು ಚರ್ಮದ ರಟ್ಟನ್ನು ಹೊಂದಿದೆ. ಇದರಲ್ಲಿ ಯಂತ್ರಶಾಸ್ತ್ರ, ಸಂಖ್ಯಾಶಾಸ್ತ್ರ, ರೇಖಾಗಣಿತ, ಕೋಟೆಗಳ ನಿರ್ಮಾಣವೇ ಮುಂತಾದ ಮಹತ್ವದ ವಿಚಾರಗಳಲ್ಲದೆ, ಲಿಯನಾರ್ಡೋ ಡ ವಿನ್ಸಿ ಅವರು ಉಪಯೋಗಿಸುತ್ತಿದ್ದ 116 ಪುಸ್ತಕಗಳ ಪಟ್ಟಿಯೂ ಇದೆ. ಈ ಪುಸ್ತಕಗಳ ಪಟ್ಟಿಯಲ್ಲಿ ಕೆಲವೊಂದು ಲ್ಯಾಟಿನ್ ವ್ಯಾಕರಣ ಪುಸ್ತಕಗಳೂ ಸೇರಿವೆ. ಇಟಾಲಿಯನ್ ಉಪಭಾಷೆಯಲ್ಲಿ ಬರೆದಿರುವ ಈ ಹಸ್ತಪ್ರತಿಯಲ್ಲಿ ಕೆಲವೊಂದು ಭಾಷಾ ತಪ್ಪುಗಳಿವೆ ಎಂದು ಹೇಳಲಾಗಿದೆ.

1990: ಎರಡೂ ಜರ್ಮನಿಗಳನ್ನು ಒಂದುಗೂಡಿಸುವ ಎರಡು ಹಂತದ ಯೋಜನೆಯ ಕುರಿತು ಒಮ್ಮತ ಏರ್ಪಟ್ಟಿತು.

1996: ಮಾವೋಗಳ ನೇತೃತ್ವದ ನೇಪಾಳದ ಕಮ್ಮೂನಿಸ್ಟ್ ಪಕ್ಷವು ದೇಶದಲ್ಲಿ ಆಂತರಿಕ ಕ್ರಾಂತಿ ನಡೆಸಲು ಮುಂದಾಯಿತು.

2004: ಹಾರ್ವರ್ಡಿನ ಸ್ಮಿತ್ ಸೋನಿಯನ್ ಆಸ್ಟ್ರೋಫಿಸಿಕ್ಸ್ ಕೇಂದ್ರವು ವಿಶ್ವದ ಅತಿ ದೊಡ್ಡ ವಜ್ರ ನಕ್ಷತ್ರವಾದ ‘ವೈಟ್ ಡ್ವಾರ್ಫ್ ಸ್ಟಾರ್ ಬಿ.ಪಿ.ಎಮ್ 37093’ ಅನ್ನು ಅನ್ವೇಷಿಸಿದುದಾಗಿ ಘೋಷಿಸಿತು. ಖಗೋಳ ವಿಜ್ಞಾನಿಗಳು ಇದನ್ನು ‘ಲೂಸಿ ಇನ್ ದಿ ಸ್ಕೈ ವಿಥ್ ಡೈಮಂಡ್ಸ್’ ಎಂಬ ‘ದಿ ಬೀಟಲ್ಸ್’ ಪ್ರಖ್ಯಾತ ಹಾಡಿನಲ್ಲಿರುವಂತೆ ‘ಲೂಸಿ’ ಎಂದು ಹೆಸರಿಸಿದ್ದಾರೆ.

2006: ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ವಿಶಾಖ ಪಟ್ಟಣದಿಂದ ಜಲಾಂತರ್ಗಾಮಿಯ ಮೂಲಕ ಕಡಲಾಳದ ಯಾನ ಕೈಗೊಂಡ ವೈಶಿಷ್ಟ್ಯತೆ ಸಾಧಿಸಿದರು. ಡಾ. ಕಲಾಂ ಅವರು ಭಾರತದ ನೌಕಾಪಡೆಗೆ ಸೇರಿದ ರಷ್ಯ ಮೂಲದ ಐ ಎನ್ ಎಸ್ ಸಿಂಧುರಕ್ಷಕ್ ಜಲಾಂತರ್ಗಾಮಿಯಲ್ಲಿ ಬೆಳಗ್ಗೆ 11 ಗಂಟೆಯಿಂದ ಸುಮಾರು ಮೂರೂವರೆ ತಾಸು ಕಾಲ ಪ್ರಯಾಣ ಮಾಡಿದರು.

2007: ಒರಿಯಾ ಭಾಷಾ ಸಾಹಿತಿ ಡಾ. ಜಗನ್ನಾಥ ಪ್ರಸಾದ್ ದಾಸ್ ಅವರ `ಪರಿಕ್ರಮ’ ಕವನ ಸಂಕಲನವು 2006ನೇ ಸಾಲಿನ ಪ್ರತಿಷ್ಠಿತ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿಗೆ ಆಯ್ಕೆಯಾಯಿತು.

2008: ಆಸ್ಟ್ರೇಲಿಯಾದ ಪ್ರಧಾನಿ ಕೆವಿನ್ ರುಡ್ ಅವರು ವಿದೇಶಿ ಆಕ್ರಮಣದಿಂದ ತೊಂದರೆಗೊಳಗಾದ ಸ್ಥಳೀಯ ಆಸ್ಟ್ರೇಲಿಯನ್ ಜನಾಂಗ (Indigenous Australians) ಮತ್ತು ತಮ್ಮ ಕುಟುಂಬದಿಂದ ಬಲಾತ್ಕಾರಯುತವಾಗಿ ಬೇರೆ ಮಾಡಲ್ಪಟ್ಟ (Stolen Generations) ಮೂಲ ಸಂಜಾತರ ಕ್ಷಮೆ ಯಾಚಿಸಿದರು.

2008: ಚಿತ್ರಕಲಾ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರಾದ ದಾವಣಗೆರೆಯ ಮಲ್ಲಿಕಾರ್ಜುನ ಜಾದವ್, ಬೆಂಗಳೂರಿನ ಜೆ.ಎಂ.ಎಸ್. ಮಣಿ, ಬೆಳಗಾವಿಯ ಎಸ್. ಅಪ್ಪಾಸಾಹೇಬ್ ಕಾಡಪುರಕರ ಅವರನ್ನು ಕರ್ನಾಟಕ ಲಲಿತಕಲಾ ಅಕಾಡೆಮಿಯ 2007ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅಮೂಲ್ಯ ಕಲಾ ವಸ್ತುಗಳನ್ನು ಸಂಗ್ರಹಿಸಿ, ಚಿತ್ರಕಲಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ವಿಶೇಷ ಗೌರವ ಸಮರ್ಪಣೆ ಮಾಡುವುದಕ್ಕೂ ಅಕಾಡೆಮಿ ನಿರ್ಧರಿಸಿತು.

2009: ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ ಅಭಿವೃದ್ಧಿಪಡಿಸಿದ ಐದು ‘ಧ್ರುವ’ ಹೆಲಿಕಾಪ್ಟರುಗಳನ್ನು ದಕ್ಷಿಣ ಅಮೆರಿಕಾದ ಈಕ್ವೆಡಾರ್ ದೇಶದ ವಾಯುಪಡೆಗೆ ಹಸ್ತಾಂತರಿಸಲಾಯಿತು.

2009: ದೇಶದ ಮೊದಲ ಗಗನಯಾತ್ರಿಯಾದ ನಿವೃತ್ತ ವಿಂಗ್ ಕಮಾಂಡರ್ ರಾಕೇಶ್ ಶರ್ಮ ಅವರು, ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ, ಅಮೆರಿಕ ನಿರ್ಮಾಣದ ಬೋಯಿಂಗ್ ಎಫ್-18 ಸೂಪರ್ ಹಾರ್ನೆಟ್ ಯುದ್ಧ ವಿಮಾನದ ಹಾರಾಟ ನಡೆಸಿದ ಮೊದಲ ಭಾರತೀಯರೆನಿಸಿದರು.

ಪ್ರಮುಖಜನನ/ಮರಣ:

1469: ನವೋದಯ ಕಾಲದ ಹೀಬ್ರೂ ವ್ಯಾಕರಣಕಾರ, ವಿದ್ವಾಂಸ, ಕವಿ ಎಲಿಯಾ ಲೆವಿಟಾ ಅವರು ನ್ಯೂರೆಂಬರ್ಗ್ ಬಳಿಯ ನಿಯೋಸ್ಟಾಡ್ಟ್ ಎಂಬಲ್ಲ್ಲಿ ಜನಿಸಿದರು.

1835: ಅಹಮದ್ದೀಯ ಪಂಥದ ಸ್ಥಾಪಕ ಮಿರ್ಜಾ ಗುಲಾಮ್ ಅಹಮದ್ ಅವರು ಭಾರತದ ಸಿಖ್ಖರ ಸಾಮ್ರಾಜ್ಯದ ಭಾಗವಾಗಿದ್ದ ಕದೀಯಾನ್ ಎಂಬಲ್ಲಿ ಜನಿಸಿದರು. ಇವರು 90ಕ್ಕೂ ಹೆಚ್ಚು ಧಾರ್ಮಿಕ ಗ್ರಂಥಗಳನ್ನು ರಚಿಸಿದ್ದರು.

1849: ಬ್ರಿಟಿಷ್ ಆಡಳಿತಗಾರ ಲಾರ್ಡ್ ರಾಂಡೋಲ್ಫ್ ಚರ್ಚಿಲ್ ಲಂಡನ್ನಿನಲ್ಲಿ ಜನಿಸಿದರು. ಚಾನ್ಸೆಲರ್ ಆಫ್ ದಿ ಎಕ್ಸ್ಚೆಕರ್ ಹುದ್ಧೆಯಲ್ಲಿದ ಇವರು ಮೊದಲ ಬಾರಿಗೆ ‘ಟೋರಿ ಡೆಮಾಕ್ರೆಸಿ’ ಚಿಂತನೆಯನ್ನು ಹುಟ್ಟುಹಾಕಿದ್ದರು. ಇವರ ಮಗ ವಿನ್ ಸ್ಟನ್ ಚರ್ಚಿಲ್ ಬಹುಪ್ರಸಿದ್ಧಿ ಪಡೆದ ಬ್ರಿಟನ್ನಿನ ಪ್ರಧಾನಿಯಾಗಿದ್ದರು.

1879: ‘ಭಾರತದ ಕೋಗಿಲೆ’ ಎಂದು ಪ್ರಸಿದ್ಧರಾದ ಕವಯತ್ರಿ, ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಸ್ವಾತಂತ್ರ ಹೋರಾಟಗಾರ್ತಿ ಸರೋಜಿನಿ ನಾಯ್ಡು ಅವರು ಹೈದರಾಬಾದಿನಲ್ಲಿ ಜನಿಸಿದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಪ್ರಥಮ ಮಹಿಳಾ ಅಧ್ಯಕ್ಷೆ ಹಾಗೂ ಉತ್ತರ ಪ್ರದೇಶದ ಪ್ರಥಮ ರಾಜ್ಯಪಾಲರಾದ ಹೆಗ್ಗಳಿಕೆಗೆ ಪಾತ್ರರಾದವರು.

1910: ಭೌತಶಾಸ್ತ್ರಜ್ಞ ವಿಲಿಯಂ ಶಾಕ್ಲಿ ಅವರು ಲಂಡನ್ನಿನಲ್ಲಿ ಜನಿಸಿದರು. ಮುಂದೆ ಅಮೆರಿಕದಲ್ಲಿ ನೆಲೆಸಿ ತಮ್ಮ ಸಂಗಡಿಗರ ಒಡಗೂಡಿ ‘ಪಾಯಿಂಟ್ ಆಫ್ ಕಾಂಟ್ಯಾಕ್ಟ್ ಟ್ರಾನ್ಸಿಸ್ಟರ್’ ಕಂಡು ಹಿಡಿದ ಇವರಿಗೆ 1956ರ ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1935: ಕೃಷಿ ತಜ್ಞ, ಕರ್ನಾಟಕದ ಸಮಾಜವಾದಿ ಚಳವಳಿಯ ರೂವಾರಿ, ರೈತರ ಹಕ್ಕುಗಳಿಗಾಗಿನ ಹೋರಾಟಗಾರ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರು ಮೈಸೂರಿನಲ್ಲಿ ಜನಿಸಿದರು.

1948: ರಂಗಚಳವಳಿ, ರಂಗಯಾತ್ರೆ, ರಂಗಭೂಮಿ ಮತ್ತು ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ್ ಜಿ. ಕಪ್ಪಣ್ಣ ಅವರು ಬೆಂಗಳೂರಿನಲ್ಲಿ ಜನಿಸಿದರು. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಲ್ಲದೆ, ದೇಶ- ವಿದೇಶಗಳಲ್ಲಿ ಕನ್ನಡ ನಾಟಕಗಳನ್ನು ನಿರ್ದೇಶಿಸಿ ಖ್ಯಾತರಾದ ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

1967: ನಿಸ್ಸಾರ್ ಮೋಟಾರ್ ಕಂಪೆನಿಯನ್ನು ಸ್ಥಾಪಿಸಿದ ಯೋಶಿಸುಕೆ ಐಕವ ಅವರು ಜಪಾನಿನ ಟೋಕಿಯೋ ನಗರದಲ್ಲಿ ನಿಧನರಾದರು.

2014: ಶ್ರೀಲಂಕಾದಲ್ಲಿ ಜನಿಸಿದ ಪ್ರಸಿದ್ಧ ಭಾರತೀಯ ಚಲನಚಿತ್ರ ನಿರ್ದೇಶಕ, ಛಾಯಾಗ್ರಾಹಕ, ಚಿತ್ರಕಥಾಲೇಖಕ ಬಾಲು ಮಹೇಂದ್ರ ಅವರು ಚೆನ್ನೈ ನಗರದಲ್ಲಿ ನಿಧನರಾದರು. ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದೀ ಚಲನಚಿತ್ರಗಳನ್ನು ನಿರ್ದೇಶಿಸಿದ್ದ ಇವರಿಗೆ, ರಾಷ್ಟ್ರ ಮಟ್ಟದ ಹಾಗೂ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ರಾಜ್ಯ ಸರ್ಕಾರಗಳ ಪಶಸ್ತಿಗಳೂ ಸೇರಿದಂತೆ ಅನೇಕ ಚಲನಚಿತ್ರ ಪ್ರಶಸ್ತಿಗಳು ಸಂದಿದ್ದವು.

2016: ಪ್ರಸಿದ್ಧ ಮಲಯಾಳಂ ಭಾಷಾ ಸಾಹಿತಿ ಓ.ಎನ್.ವಿ. ಕುರುಪ್ ನಿಧನರಾದರು. ಜ್ಞಾನಪೀಠ ಪ್ರಶಸ್ತಿ, ಪದ್ಮಶ್ರೀ, ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿದ್ದವು.