Categories
e-ದಿನ

ಫೆಬ್ರವರಿ-14

ದಿನಾಚರಣೆಗಳು
ವ್ಯಾಲಂಟೈನ್ಸ್ ದಿನ
ಫೆಬ್ರವರಿ 14 ದಿನವನ್ನು ಸಂತ ವ್ಯಾಲಂಟೈನ್’ರ ದಿನ ಅಥವ ಫೀಸ್ಟ್ ಆಫ್ ಸೈಂಟ್ ವ್ಯಾಲಂಟೈನ್ ಎಂದು ಕರೆಯಲಾಗುತ್ತದೆ. ಪಾಶ್ಚಿಮಾತ್ಯ ಕ್ರಿಶ್ಚಿಯನ್ನರ ಆಚರಣೆಯಾದ ಇದನ್ನು ವ್ಯಾಲಂಟಿನಸ್ ಎಂಬ ಸಂತರ ಪರಂಪರೆಗೆ ಗೌರವ ಸೂಚಕವಾದ ದಿನವೆಂದು ಭಾವಿಸಲಾಗಿದ್ದು, ಕ್ರೈಸ್ತ ಮತವಿರುವ ಬಹುತೇಕ ರಾಷ್ಟ್ರಗಳಲ್ಲಿ ಆಚರಿಸುವ ಪದ್ಧತಿಯಿದೆ.
ವ್ಯಾಲಂಟೈನ್ ದಿನಕ್ಕೆ ಹೊಂದಿಕೊಂಡಂತೆ ಕೆಲವೊಂದು ಹುತಾತ್ಮ ಭಾವಗಳುಳ್ಳ ಕತೆಗಳು ಪ್ರಚಲಿತದಲ್ಲಿದ್ದು, ಅವುಗಳಲ್ಲಿ ಪ್ರಮುಖವಾದದ್ದು ರೋಮ್ ನಗರದ ಸೈಂಟ್ ವ್ಯಾಲಂಟೈನ್ ಎಂಬ ಸಂತನ ಕತೆ. ಅಂದಿನ ರೋಮನ್ ಆಡಳಿತದಲ್ಲಿ ಸೈನಿಕರಾಗಿದ್ದವರಿಗೆ ಮದುವೆ ಆಗುವುದಕ್ಕೆ ಅವಕಾಶ ಇರಲಿಲ್ಲ. ಜೊತೆಗೆ ಈ ಆಡಳಿತ ಬಹುಜನರಿಗೆ ಕಿರುಕುಳ ನೀಡುತ್ತಿತ್ತು. ಇಂತಹ ಸಂದರ್ಭದಲ್ಲಿ ಸಂತ ವ್ಯಾಲಂಟೈನನಿಗೆ ಯುವ ಸೈನಿಕರಿಗೆ ಮದುವೆ ಮಾಡಿಸುತ್ತಿದ್ದ ಮತ್ತು ಜನರನ್ನು ಆಡಳಿತ ವ್ಯವಸ್ಥೆಯ ವಿರುದ್ಧ ಎತ್ತಿಕಟ್ಟುತ್ತಿದ್ದ ಎಂಬ ಆಪಾದನೆಯ ಮೇರೆಗೆ ಮರಣದಂಡನೆ ವಿಧಿಸಿ ಸೆರೆಮನೆ ವಾಸ ವಿಧಿಸಲಾಯಿತು. ನೇಣು ಬೀಳುವ ಮೊದಲಿನ ಕೆಲವೇ ಕೆಲವು ದಿನಗಳಲ್ಲಿ ಸೆರೆಮನೆಯಲ್ಲಿದ್ದ ಸಂದರ್ಭದಲ್ಲಿ ಈತ ಸೆರೆಮನೆಯ ಅಧಿಕಾರಿಯಾಗಿದ್ದವನ ಮಗಳಾದ ಆಸ್ಟೇರಿಯಸ್ ಅನ್ನು ಕಾಯಿಲೆಯಿಂದ ಗುಣಪಡಿಸಿದನಂತೆ. ಕಡೆಗೆ ಅವನನ್ನು ನೇಣು ಹಾಕುವ ಸಂದರ್ಭದಲ್ಲಿ ಆಸ್ಟೇರಿಯಸ್ಸಳಿಗೆ ಬರೆದ ಪತ್ರದಲ್ಲಿ ಕೊನೆಗೆ ‘ನಿನ್ನ ವ್ಯಾಲೆಂಟೈನ್’ ಎಂದು ಬರೆದಿದ್ದನಂತೆ.

ಪ್ರಮುಖಘಟನಾವಳಿಗಳು:

842: ಚಾರ್ಲ್ಸ್ ದ ಬಾಲ್ಡ್ ರಾಜಕುವರ ಫ್ರೆಂಚ್ ಭಾಷೆಯಲ್ಲಿಯೂ ಮತ್ತು ಲೂಯಿಸ್ ದ ಜರ್ಮನ್ ರಾಜಕುವರ ಜರ್ಮನೀ ಭಾಷೆಯಲ್ಲಿಯೂ ಸ್ಟ್ರಾಸ್ಬೋರ್ಗ್ ಎಂಬಲ್ಲಿ ತಮ್ಮ ರಾಜ್ಯಾಡಳಿತದ ಪ್ರಮಾಣವಚನ ಸ್ವೀಕರಿಸಿದರು.

1349: ಸ್ಟ್ರಾಸ್ಬೋರ್ಗ್ ನಗರದಲ್ಲಿನ ಜನರ ಗುಂಪು ಹಲವು ನೂರು ಜ್ಯೂ ಜನರನ್ನು ಬೆಂಕಿಯಲ್ಲಿ ಸುಟ್ಟು ಹಾಕಿ, ಉಳಿದ ಕೆಲವು ಜ್ಯೂ ಜನಾಂಗೀಯರನ್ನು ಸ್ಟ್ರಾಸ್ಬೋರ್ಗ್ ನಗರದಿಂದ ಬಲಾತ್ಕಾರವಾಗಿ ಹೊರಹೋಗುವಂತೆ ಮಾಡಿತು.

1400: ಹೆನ್ರಿ ಬೋಲಿಂಗ್ ಬ್ರೋಕ್ ಆಜ್ಞೆಯ ಮೇರೆಗೆ ಪೊಂಟಿಫ್ರಾಕ್ಟ್ ಕ್ಯಾಸೆಲ್ನಲ್ಲಿ ಆಹಾರವಿಲ್ಲದೆ ತಳ್ಳಲ್ಪಟ್ಟಿದ್ದ ಎರಡನೇ ರಿಚರ್ಡ್, ಹೊಟ್ಟೆಗಿಲ್ಲದೆ ಹಸಿವಿನಿಂದ ಮರಣಹೊಂದಿದ.

1778: ಫ್ರೆಂಚ್ ಅಧಿಕಾರಿ ಅಡ್ಮಿರಲ್ ಟೌಸ್ಸಿಯಾಂಟ್-ಗ್ವಿಲ್ಲೋಮೆ ಪಿಕೆಟ್ ಡಿ ಲಾ ಮೊಟ್ಟೆ ಎಂಬಾತ ಅಮೆರಿಕದ ಜಾನ್ ಪಾಲ್ ಜೋನ್ಸ್ ನೇತೃತ್ವದ ರೇಂಜರಿಗೆ 9 ಬಂದೂಕು ತೋಪಿನ ಗೌರವ ಸಲ್ಲಿಸಿದ. ಇದು ವಿದೇಶಿಯನೊಬ್ಬ ಅಮೆರಿಕ ಧ್ವಜಕ್ಕೆ ಮನ್ನಣೆ ಸಲ್ಲಿಸಿದ ಪ್ರಥಮ ಗೌರವವೆಂದು ದಾಖಲಾಗಿದೆ.

1849: ನ್ಯೂಯಾರ್ಕ್ ನಗರದಲ್ಲಿ ಜೇಮ್ಸ್ ನಾಕ್ಸ್ ಪೋಲ್ಕ್ ಅವರು ಕ್ಯಾಮೆರಾ ಮುಂದೆ ನಿಂತು ಫೋಟೋ ತೆಗೆಸಿಕೊಂಡ ಪ್ರಥಮ ಅಮೆರಿಕದ ಅಧ್ಯಕ್ಷರೆನಿಸಿದರು.

1852: ಗ್ರೇಟ್ ಆರ್ಮಂಡ್ ಸೈಂಟ್ ಹಾಸ್ಪಿಟಲ್ ಫಾರ್ ಸಿಕ್ ಚಿಲ್ಡ್ರನ್ ಎಂಬ ಮಕ್ಕಳ ಆಸ್ಪತ್ರೆ ಇಂಗ್ಲೆಂಡಿನಲ್ಲಿ ಪ್ರಾರಂಭಗೊಂಡಿತು. ಈ ಆಸ್ಪತ್ರೆಯು ಮೊಟ್ಟ ಮೊದಲ ಬಾರಿಗೆ ಒಳರೋಗಿ ಮಕ್ಕಳಿಗೆ ಹಾಸಿಗೆ ಸೌಲಭ್ಯವನ್ನು ಒದಗಿಸಿತು.

1855: ಟೆಕ್ಸಾಸ್ ನಗರದಲ್ಲಿ ನ್ಯೂ ಆರ್ಲಿಯನ್ಸ್ ಮತ್ತು ಮಾರ್ಷಲ್ ನಡುವೆ ಸಂಪರ್ಕ ವ್ಯವಸ್ಥೆ ನಿರ್ಮಾಣ ಪೂರ್ಣಗೊಂಡು,ಟೆಕ್ಸಾಸ್ ನಗರವು ಅಮೆರಿಕದ ಎಲ್ಲ ಕಡೆಗಳಿಂದ ಟೆಲಿಗ್ರಾಫ್ ಸಂಪರ್ಕ ಪಡೆದ ಪ್ರಥಮ ಪ್ರಾಂತ್ಯವೆನಿಸಿತು.

1876: ಅಲೆಗ್ಸಾಂಡರ್ ಗ್ರಹಾಂ ಬೆಲ್ ಅವರು ಟೆಲಿಫೋನಿಗಾಗಿ ಪೇಟೆಂಟ್ ಅರ್ಜಿ ಸಲ್ಲಿಸಿದರು. ಎಲಿಷಾ ಗ್ರೇ ಅವರು ಸಹಾ ಇದೇ ಪೇಟೆಂಟಿಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತಾದ ಹಲವು ವ್ಯಾಜ್ಯಗಳ ತೀರ್ಮಾನದಲ್ಲಿ ಈ ಪೇಟೆಂಟ್ ಗ್ರಹಾಂ ಬೆಲ್ ಅವರಿಗೇ ಸಲ್ಲಬೇಕೆಂದು ನ್ಯಾಯಾಲಯಗಳು ತೀರ್ಮಾನಿಸಿದವು.

1899: ಫೆಡರಲ್ ಚುನಾವಣೆಗಳಲ್ಲಿ ಮತಯಂತ್ರಗಳ ಬಳಕೆಗೆ ಅಮೆರಿಕದ ಕಾಂಗ್ರೆಸ್ ಅನುಮೋದನೆ ನೀಡಿತು.

1912: ಕನೆಕ್ಟಿಕಟ್ ಪ್ರಾಂತ್ಯದ ಗ್ರೋಟನ್ ಎಂಬಲ್ಲಿ ಮೊದಲ ಡೀಸೆಲ್ ಚಾಲಿತ ಸಬ್ ಮೆರಿನ್ ಬಳಕೆಗೆ ಬಂತು.

1920: ಚಿಕಾಗೊದಲ್ಲಿ ‘ಲೀಗ್ ಆಫ್ ವುಮೆನ್ ವೋಟರ್ಸ್’ ಎಂಬ ಮಹಿಳಾ ಮತದಾರರ ಒಕ್ಕೂಟ ಸ್ಥಾಪನೆಗೊಂಡಿತು.

1924: ಕಂಪ್ಯೂಟಿಂಗ್-ಟ್ಯಾಬ್ಯುಲೇಟಿಂಗ್-ರೆಕಾರ್ಡಿಂಗ್ ಕಂಪೆನಿ ತನ್ನ ಹೆಸರನ್ನು ಇಂಟರ್ ನ್ಯಾಷನಲ್ ಬ್ಯುಸಿನೆಸ್ ಮೆಷಿನ್ಸ್ ಕಾರ್ಪೋರೇಶನ್ (ಐ.ಬಿ.ಎಮ್) ಎಂದು ಬದಲಿಸಿಕೊಂಡಿತು.

1929: ಚಿಕಾಗೊದಲ್ಲಿ ಉಂಟಾದ ಸೈಂಟ್ ವ್ಯಾಲೆಂಟೈನ್ ದಿನದ ಮಾರಣ ಹೋಮದಲ್ಲಿ ಏಳು ಜನ ಕೊಲ್ಲಲ್ಪಟ್ಟರು. ಈ ಏಳು ಜನರಲ್ಲಿ ಆರು ಜನರು ಗ್ಯಾಂಗ್ಸ್ಟರ್ ಎದುರಾಳಿಗಳಾದ ಅಲ್ ಕೆಪೋನ್ ಗ್ಯಾಂಗಿಗೆ ಸೇರಿದವರಾಗಿದ್ದರು.

1946: ಬ್ಯಾಂಕ್ ಆಫ್ ಇಂಗ್ಲೆಂಡ್ ಅನ್ನು ರಾಷ್ಟ್ರೀಕರಣ ಗೋಳಿಸಲಾಯಿತು.

1956: ಸೋವಿಯತ್ ಯೂನಿಯನ್ನಿನ ಇಪ್ಪತ್ತನೇ ಕಾಂಗ್ರೆಸ್ ಆಫ್ ದಿ ಕಮ್ಮ್ಯೂನಿಸ್ಟ್ ಪಾರ್ಟಿ ಮಾಸ್ಕೋದಲ್ಲಿ ಆರಂಭಗೊಂಡಿತು. ಈ ಸಭೆಯ ಕೊನೆಯಲ್ಲಿ ನಡೆದ ರಹಸ್ಯ ಭಾಷಣದಲ್ಲಿ ಸೋವಿಯೆತ್ ಅಧ್ಯಕ್ಷ ನಿಕಿತ ಕೃಶ್ಚೇವ್ ಅವರು ಜೋಸೆಫ್ ಸ್ಟಾಲಿನ್ನನು ಎಸಗಿದ ದುಷ್ಕೃತ್ಯಗಳನ್ನು ಖಂಡಿಸಿದರು.

1981: ಡಕಾಯಿತ ರಾಣಿ ಫೂಲನ್ ದೇವಿ ಉತ್ತರ ಪ್ರದೇಶದ ಬೆಹಮಾಯಿ ಗ್ರಾಮದಲ್ಲಿ 20 ಮಂದಿ ಠಾಕೂರರನ್ನು ಗುಂಡಿಟ್ಟು ಕೊಂದಳು. ತನ್ನ ಪ್ರಿಯಕರ ವಿಕ್ರಮ್ ಮಲ್ಹನನ್ನು ಕೊಂದದ್ದಕ್ಕೆ ಸೇಡಿನ ಕ್ರಮವಾಗಿ ಆಕೆ ಈ ಕ್ರಮ ಕೈಗೊಂಡಳು.

1989: ಇರಾನಿನ ಆಯತೊಲ್ಲಾ ಖೊಮೇನಿ ಸರ್ಕಾರ ಭಾರತದಲ್ಲಿ ಜನಿಸಿದ ಬ್ರಿಟಿಷ್ ಸಾಹಿತಿ ಸಲ್ಮಾನ್ ರಷ್ದಿ ಅವರಿಗೆ ‘ಸಟಾನಿಕ್ ವರ್ಸಸ್’ ಪುಸ್ತಕ ಬರೆದುದಕ್ಕಾಗಿ ಮರಣದಂಡನೆ ಶಿಕ್ಷೆ ವಿಧಿಸಿ ಫತ್ವಾ ಹೊರಡಿಸಿತು. ಈ ಫತ್ವಾವನ್ನು 1998ರಲ್ಲಿ ಹಿಂತೆಗೆದುಕೊಳ್ಳಲಾಯಿತು.

1989: ಭೋಪಾಲ್ ದುರಂತದಲ್ಲಿ ಆದ ಅನಾಹುತಕ್ಕೆ ಭಾರತ ಸರ್ಕಾರಕ್ಕೆ 470 ಮಿಲಿಯನ್ ಡಾಲರ್ ಪರಿಹಾರ ಕೊಡಲು ಯೂನಿಯನ್ ಕಾರ್ಬೈಡ್ ಒಪ್ಪಿಕೊಂಡಿತು.

1990: ಬೆಂಗಳೂರಿನಲ್ಲಿ ಉಂಟಾದ ಇಂಡಿಯನ್ ಏರ್ಲೈನ್ಸ್ ವಿಮಾನ 605 ದುರಂತದಲ್ಲಿ 92 ಮಂದಿ ಸಾವಿಗೀಡಾದರು.

2001: ನಿಯರ್ ಶೂಮೇಕರ್ ಬಾಹ್ಯಾಕಾಶ ವಾಹನವು ‘433 ಎರೋಸ್’ ಎಂಬ ಆಸ್ಟರಾಯ್ಡ್’ನ ತಡಿಯನ್ನು ಮುಟ್ಟಿ, ಹೀಗೆ ಆಸ್ಟರಾಯ್ಡ್ ಸ್ಪರ್ಶಿಸಿದ ಪ್ರಥಮ ಬಾಹ್ಯಾಕಾಶ ವಾಹನವೆಂಬ ಕೀರ್ತಿಗೆ ಪಾತ್ರವಾಯಿತು.

2005: ಕೆಲವೊಂದು ಉತ್ಸಾಹಿ ಕಾಲೇಜು ಹುಡುಗರು ಒಂದುಗೂಡಿ ‘ಯೂ ಟ್ಯೂಬ್’ ಎಂಬ ಅಂತರಜಾಲದಲ್ಲಿನ ವಿಡಿಯೋ ಹಂಚಿಕೊಳ್ಳುವ ವೆಬ್ ಸೈಟ್ ಒಂದನ್ನು ಸ್ಥಾಪಿಸಿದರು. ಇಂದು ಇದು ವಿಶ್ವದ ಅತ್ಯಂತ ಜನಪ್ರಿಯ ವಿಡಿಯೋ ಹಂಚಿಕೊಳ್ಳುವ ತಾಣವಾಗಿದೆ.

2006: ವಿವಾಹವನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು.. ನೋಂದಣಿ ಇಲ್ಲದ ವಿವಾಹಗಳಿಂದಾಗಿ ಬಹುತೇಕ ಸಂದರ್ಭಗಳಲ್ಲಿ ಮಹಿಳೆಯರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಮನ್ನಿಸಿ ಸುಪ್ರೀಂಕೋರ್ಟ್ ಈ ಕ್ರಮ ಕೈಗೊಂಡಿತು.

2007: ಚಿತ್ರಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಕಲಾವಿದರಾದ ಟಿ.ಬಿ. ಸೊಲಬಕ್ಕನವರ, ಕೆ.ಟಿ. ಶಿವಪ್ರಸಾದ ಹಾಗೂ ಎಚ್. ಎನ್. ಸುರೇಶ್ ಅವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ 2006ನೇ ಸಾಲಿನ ಗೌರವ ಪ್ರಶಸ್ತಿ ಲಭಿಸಿತು.

2007: ಮಡಗಾಂವಿನ ನೆಹರೂ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್ ಅವರು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 10,000 ರನ್ ಗಳಿಸಿದ ಆರನೇ ಆಟಗಾರನ ಗೌರವಕ್ಕೆ ಪಾತ್ರರಾದರು.

2008: 58ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಸಿದ್ಧಾರ್ಥ ಸಿನ್ಹಾ ನಿರ್ದೇಶನದ ಭಾರತೀಯ ಸಾಕ್ಷ್ಯಚಿತ್ರ ‘ಉಡೆಧ್ ಬನ್’ಗೆ ರಜತ ಪದಕ ಪ್ರಶಸ್ತಿ ಲಭಿಸಿತು.

2008: ರಾಜ್ಯಸಭೆಯ ಮಾಜಿ ಸದಸ್ಯೆ ಡಾ.ಪಿ. ಸೆಲ್ವಿದಾಸ್, ಮಾಜಿ ಅಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ್ ಪಡುಕೋಣೆ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಸಾಹಿತಿ ಸಾರಾ ಅಬೂಬಕ್ಕರ್ ಸೇರಿದಂತೆ ಐವರಿಗೆ ಗೌರವ ಡಾಕ್ಟರೇಟ್ ನೀಡಲು ಮಂಗಳೂರು ವಿಶ್ವವಿದ್ಯಾಲಯವು ತೀರ್ಮಾನಿಸಿತು.

ಪ್ರಮುಖಜನನ/ಮರಣ:

1483: ಭಾರತದಲ್ಲಿ ಮೊಘಲ್ ರಾಜವಂಶ ಸ್ಥಾಪಿಸಿದ ಬಾಬರ್ ಈಗಿನ್ ಉಜ್ಬೇಸ್ಕಿಸ್ತಾನದ ತಿಮುರಿಡ್ ಸಾಮ್ರಾಜ್ಯದ ಅಂಡಿಜಾನ್ ಎಂಬಲ್ಲಿ ಜನಿಸಿದ.

1819: ಟೈಪರೈಟರ್ ಕಂಡುಹಿಡಿದವರಲ್ಲಿ ಒಬ್ಬರಾದ ಅಮೆರಿಕದ ಕ್ರಿಸ್ಟೋಫರ್ ಲಥಾಮ್ ಶೋಲ್ಸ್ ಅವರು ಪೆನ್ಸಿಲ್ವೇನಿಯಾದ ಮೂರೆಸ್ ಬರ್ಗ್ ಎಂಬಲ್ಲಿ ಜನಿಸಿದರು. ಇವರು ರಾಜಕಾರಣಿಯೂ ಪತ್ರಿಕೋದ್ಯಮಿಯೂ ಆಗಿದ್ದರು.

1859: ಫೆರ್ರಿಸ್ ವೀಲ್ ಅಥವಾ ನಾವು ಜಾಯಿಂಟ್ ವೀಲ್ ಎನ್ನುವ ಬೃಹತ್ ಮೋಜಿನ ಚಕ್ರವನ್ನು ಮೊದಲು ನಿರ್ಮಿಸಿದ ಜಾರ್ಜ್ ವಾಷಿಂಗ್ಟನ್ ಗೆಲ್ ಫೆರ್ರಿಸ್ ಜೂನಿಯರ್ ಅವರು ಇಲಿನಾಯ್ಸ್ ಬಳಿಯ ಗೇಲ್ಸ್ ಬರ್ಗ್ ಎಂಬಲ್ಲಿ ಜನಿಸಿದರು.

1908: ಕೆಂಗಲ್ ಹನುಮಂತಯ್ಯನವರು ರಾಮನಗರದ ಬಳಿಯ ಲಕ್ಕಪ್ಪನಹಳ್ಳಿಯಲ್ಲಿ ಜನಿಸಿದರು. ಇವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕದ ಎರಡನೇ ಮುಖ್ಯಮಂತ್ರಿಗಳಾಗಿ, ಕೇಂದ್ರ ರೈಲ್ವೇ ಮತ್ತು ಕೈಗಾರಿಕಾ ಮಂತ್ರಿಗಳಾಗಿ ಮತ್ತು ವಿಧಾನಸೌಧದ ನಿರ್ಮಾಣಕ್ಕೆ ಕಾರಣಕರ್ತರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಡಿಸೆಂಬರ್ 1, 1980ರಂದು ನಿಧನರಾದರು.

1917: ಅಮೆರಿಕದ ಗಣಿತಜ್ಞ ಮತ್ತು ರಸಾಯನ ಶಾಸ್ತ್ರಜ್ಞ ಹರ್ಬರ್ಟ್ ಎ. ಹೌಪ್ಟ್ ಮ್ಯಾನ್ ಅವರು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ಇವರು ಕ್ರಿಸ್ಟಲೈಸ್ಡ್ ಮೆಟೀರಿಯಲ್ಗಳಲ್ಲಿ ಮಾಲೆಕ್ಯುಲರ್ ಸ್ಟ್ರಕ್ಚರ್ಸ್ ನಿಗಧೀಕರಣದ ಕುರಿತಾದ ಸಂಶೋಧನೆಗಾಗಿ 1985ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸ್ವೀಕರಿಸಿದರು.

1933: ಭಾರತೀಯ ಚಲನಚಿತ್ರರಂಗವನ್ನು ತನ್ನ ಅಪೂರ್ವ ಪ್ರತಿಭೆ ಮತ್ತು ಸೌಂದರ್ಯಗಳಿಂದ ಬೆಳಗಿದ ಕಲಾವಿದರಲ್ಲಿ ಒಬ್ಬರಾದ ಮಧುಬಾಲ ನವದೆಹಲಿಯಲ್ಲಿ ಜನಿಸಿದರು. ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ತಮ್ಮ ಅಭಿನಯ ಕೌಶಲ್ಯದಿಂದ ಪ್ರಸಿದ್ಧರಾಗಿದ್ದ ಇವರು ಥಿಯೇಟರ್ ಆರ್ಟ್ಸ್‌ ನಂತಹ ಹಲವು ಅಮೇರಿಕನ್ ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡರು. 1952ರ ಆಗಸ್ಟ್‌ ಸಂಚಿಕೆಯಲ್ಲಿ, ಮಧುಬಾಲಾರ ಪೂರ್ಣಪುಟದ ಭಾವಚಿತ್ರದೊಂದಿಗಿನ ದೊಡ್ಡದೊಂದು ಲೇಖನ ಪ್ರಕಟಗೊಂಡಿತ್ತು. ಆ ಲೇಖನದ ಶೀರ್ಷಿಕೆ ಹೀಗಿದೆ: “ದಿ ಬಿಗ್ಗೆಸ್ಟ್ ಸ್ಟಾರ್ ಇನ್ ದಿ ವರ್ಲ್ಡ್ (ಅಂಡ್ ಶಿ ಈಸ್ ನಾಟ್ ಇನ್ ಬೆವೆರ್ಲಿ ಹಿಲ್ಸ್)” .

1939: ಅಮೆರಿಕದ ಅರ್ಥಶಾಸ್ತ್ರಜ್ಞ ಯೊಗೇನೇ ಫಾಮಾ ಅವರು ಬೋಸ್ಟನ್ ನಗರದಲ್ಲಿ ಜನಿಸಿದರು. ಅವರು ವಿಶ್ವದ ಎಲ್ಲ ಕಾಲದ ಏಳನೇ ಪ್ರಭಾವಯುತ ಅರ್ಥಶಾಸ್ತ್ರಜ್ಞರೆಂದು ಖ್ಯಾತರಾಗಿದ್ದು 2013 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸ್ವೀಕರಿಸಿದ್ದರು.

1944: ಸಂಗೀತಾ ಮಹೇಶ್ ಎಂದೇ ಖ್ಯಾತರಾದ, ‘ಸಂಗೀತಾ ರೆಕಾರ್ಡಿಂಗ್’ ಸ್ಥಾಪಿಸಿ ಕನ್ನಡದ ಅನೇಕ ಜನಪ್ರಿಯ ಧ್ವನಿ ಸುರುಳಿಗಳನ್ನು ಮಾರುಕಟ್ಟೆಗೆ ತಂದ ಎಚ್.ಎಂ. ಮಹೇಶ್ ಅವರು ಮಂಗಳೂರು ಸಮೀಪದ ಕುಂಬಳೆಯಲ್ಲಿ ಜನಿಸಿದರು. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

1948: ಕನ್ನಡದ ಪ್ರಖ್ಯಾತ ವಿಜ್ಞಾನ ಸಾಹಿತಿ, ಪರಿಸರವಾದಿ, ಪತ್ರಕರ್ತ, ಭೂವಿಜ್ಞಾನಿ, ಅಂಕಣಕಾರ ಡಾ. ನಾಗೇಶ್ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಬಳಿಯ ಬಕ್ಕೆಮನೆ ಎಂಬಲ್ಲಿ ಜನಿಸಿದರು. ಸೌಜನ್ಯತೆಯ ನೆರಳಿನಲ್ಲೇ ತಾವು ಹೇಳಬೇಕಿದ್ದನ್ನು ಹೇಳಿ, ಪರಿಸರಕ್ಕೆ ಚ್ಯುತಿ ಬಂದಾಗಲೆಲ್ಲಾ ಧ್ವನಿ ಎತ್ತುವ ಡಾ. ನಾಗೇಶ್ ಹೆಗಡೆ ಅವರಿಗೆ ಅವರ ವಿಜ್ಞಾನ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಕೊಡುಗೆಗಳಿಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಕೃತಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಜೀವಮಾನ ಸಾಧನಾ ಗೌರವ, ಪತ್ರಿಕೋದ್ಯಮದ ಜೀವಮಾನ ಸಾಧನಾ ಗೌರವವೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

1952: ನ್ಯಾಯವಾದಿಯಾಗಿ, ರಾಜಕಾರಣಿಯಾಗಿ, ದೆಹಲಿಯ ಮುಖ್ಯಮಂತ್ರಿಯಾಗಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ, ಕೇಂದ್ರ ಸರ್ಕಾರದ ವಿವಿಧ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿರುವ ಸುಷ್ಮಾ ಸ್ವರಾಜ್ ಅವರು ಹರ್ಯಾಣಾದ ಅಂಬಾಲಾ ಕಂಟೋನ್ಮೆಂಟ್ನಲ್ಲಿ ಜನಿಸಿದರು.

1967: ಕಡಿಮೆ ಬೆಲೆಯ ಬ್ರಿಟನ್ನಿನ ಪ್ರಸಿದ್ಧ ವಿಮಾನ ಯಾನ ಸಂಸ್ಥೆಯಾದ ಈಸಿಜೆಟ್ ಸಂಸ್ಥೆಯ ಸ್ಥಾಪಕ ಸ್ಟೀಲಿಯೋಸ್ ಹಾಜಿ-ಲೋವನ್ನು ಅವರು ಗ್ರೀಸ್ ದೇಶದ ಅಥೆನ್ಸ್ ನಗರದಲ್ಲಿ ಜನಿಸಿದರು.

1972: ಸ್ಕೈಪ್ ನಿರ್ಮಿಸಿದವರಲ್ಲಿ ಒಬ್ಬರಾದ ಜಾನ್ ಟಲ್ಲಿನ್ ಅವರು ಎಸ್ಟೋನಿಯಾ ದೇಶದ ಟಲ್ಲಿನ್ ಎಂಬಲ್ಲಿ ಜನಿಸಿದರು. ಸ್ಕೈಪ್ ಎಂಬುದು ವಿಡಿಯೋ ಚಾಟ್ ವ್ಯವಸ್ಥೆ, ಮೆಸ್ಸೇಜ್ ವ್ಯವಸ್ಥೆ ಹಾಗೂ ವಿಡಿಯೋ ಕಾನ್ವರೆನ್ಸಿಂಗ್ ವ್ಯವಸ್ಥೆಗಳನ್ನು ಒದಗಿಸುತ್ತದೆ. ಇದಲ್ಲದೆ ಅವರು ಫಾಸ್ಟ್ ಟ್ರಾಕ್ / ಕಜಾ ಎಂಬ ಫೈಲ್ ಶೇರಿಂಗ್ ವ್ಯವಸ್ಥೆಯನ್ನೂ ನಿರ್ಮಿಸಿದ್ದಾರೆ.

1944: ಸಂಗೀತಾ ಮಹೇಶ್ ಎಂದೇ ಖ್ಯಾತರಾದ, ‘ಸಂಗೀತಾ ರೆಕಾರ್ಡಿಂಗ್’ ಸ್ಥಾಪಿಸಿ ಕನ್ನಡದ ಅನೇಕ ಜನಪ್ರಿಯ ಧ್ವನಿ ಸುರುಳಿಗಳನ್ನು ಮಾರುಕಟ್ಟೆಗೆ ತಂದ ಎಚ್.ಎಂ. ಮಹೇಶ್ ಅವರು ಮಂಗಳೂರು ಸಮೀಪದ ಕುಂಬಳೆಯಲ್ಲಿ ಜನಿಸಿದರು. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

1744: ಗಣಿತದಲ್ಲಿ ಆಕ್ಟೆಂಟ್ ಸಂಶೋಧಿಸಿದ ಇಂಗ್ಲಿಷ್ ಗಣಿತಜ್ಞ ಜಾನ್ ಹೇಡ್ಲಿ ಅವರು ಈಸ್ಟ್ ಬರ್ನೆಟ್ ಎಂಬಲ್ಲಿ ನಿಧನರಾದರು.

1779: ಹದಿನೆಂಟನೇ ಶತಮಾನದ ಇಂಗ್ಲಿಷ್ ಕ್ಯಾಪ್ಟನ್, ನಕ್ಷೆಗಳ ತಯಾರಕ, ಅನ್ವೇಷಕ ಜೇಮ್ಸ್ ಕುಕ್ ಹವಾಯಿ ದ್ವೀಪದಲ್ಲಿ ಅಲ್ಲಿನ ಮೂಲ ನಿವಾಸಿಗಳ ಜೊತೆಗೆ ಸಂಭವಿಸಿದ ಘರ್ಷಣೆಯಲ್ಲಿ ಮೃತನಾದ.

1975: ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF)ಸ್ಥಾಪಕರಲ್ಲಿ ಒಬ್ಬರಾದ ಜೂಲಿಯನ್ ಹಕ್ಸ್ಲೆ ಲಂಡನ್ನಿನಲ್ಲಿ ನಿಧನರಾದರು. ಈ ಸಂಸ್ಥೆ ವಿಶ್ವದಾದ್ಯಂತ ಪ್ರಾಕೃತಿಕ ಸಂಪತ್ತನ್ನು ಉಳಿಸುವ ಕ್ರಿಯೆಯಲ್ಲಿ ಮಹತ್ವದ ಕೆಲಸವನ್ನು ಮಾಡುತ್ತಿದೆ.