Categories
e-ದಿನ

ಫೆಬ್ರವರಿ-15

ಪ್ರಮುಖಘಟನಾವಳಿಗಳು:

590: ಎರಡನೇ ಕೊಸ್ರೋ ಪರ್ಷಿಯಾದ ರಾಜನಾದ

1493: ಕ್ರಿಸ್ತೋಫರ್ ಕೊಲಂಬಸ್ ‘ನೀನಾ’ ಎಂಬ ಹಡಗಿನಲ್ಲಿ ಪಯಣಿಸುವಾಗ ಪತ್ರವೊಂದನ್ನು ಬರೆದು ಅದರಲ್ಲಿ ತನ್ನ ಅನ್ವೇಷಣೆ, ಎದುರಾದ ಆಕಸ್ಮಿಕ ವಸ್ತುಗಳು ಮತ್ತು ಕೌತುಕಗಳನ್ನು ವರ್ಣಿಸಿದ. ಈ ಪತ್ರವು ಆತ ಪೋರ್ಚುಗಲ್ಲಿಗೆ ವಾಪಸ್ಸಾದ ನಂತರದಲ್ಲಿ ವ್ಯಾಪಕವಾಗಿ ಹಂಚಲ್ಪಟ್ಟಿತು.

1870: ಅಮೆರಿಕದ ನ್ಯೂ ಜೆರ್ಸಿಯಲ್ಲಿ ಸ್ಟೀವನ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಾರಂಭಗೊಂಡಿತು. ಇದು ಮೊಟ್ಟ ಮೊದಲ ಬ್ಯಾಚಲರ್ ಆಫ್ ಮೆಕಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪ್ರಾರಂಭಿಸಿತು.

1879: ಅಮೆರಿಕದ ಅಧ್ಯಕ್ಷರಾದ ರುದರ್ ಫೋರ್ಡ್ ಬಿ. ಹೇಯ್ಸ್ ಅವರು ಸುಪ್ರೀಂ ಕೋರ್ಟಿನಲ್ಲಿ ಮಹಿಳಾ ಅಟಾರ್ನಿಗಳಿಗೆ ವಾದಿಸಲು ಅವಕಾಶವೀಯುವ ವಿದೇಯಕಕ್ಕೆ ಸಹಿ ಮಾಡಿದರು.

1903: ರಷ್ಯಾದಿಂದ ನ್ಯೂಯಾರ್ಕಿಗೆ ವಲಸೆ ಬಂದು ಬ್ರೂಕ್ಲಿನ್ನಿನ ಆಟಿಕೆಗಳ ಅಂಗಡಿಯೊಂದರ ಮಾಲೀಕರಾಗಿದ್ದ ಮೋರ್ರಿಸ್ ಮತ್ತು ರೋಸ್ ಮಿಚ್ ಟೊಮ್ ಅವರು ನ್ಯೂಯಾರ್ಕಿನಲ್ಲಿ ಮೊತ್ತ ಮೊದಲ ಬಾರಿಗೆ ‘ಟೆಡ್ಡಿ ಬೇರ್’ನ್ನು ಮಾರುಕಟ್ಟೆಗೆ ತಂದರು.
ರೂಸ್ ವೆಲ್ಟ್ ಅವರಿಗೆ ‘ಟೆಡ್ಡಿ’ ಎಂಬ ಅಡ್ಡ ಹೆಸರು ಇತ್ತು. 1902ರಲ್ಲಿ ಬೇಟೆಯಾಡುತ್ತಿದ್ದಾಗ ಅನಾಥವಾದ ಕರಡಿಮರಿಯೊಂದರ ಪ್ರಾಣ ರಕ್ಷಿಸಲು ನಿರ್ಧರಿಸಿದ್ದರಿಂದ ಈ ಅಡ್ಡ ಹೆಸರು ಅವರಿಗೆ ಬಂತು. ಇದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕ್ಕೆ ವಸ್ತುವಾಗಿತ್ತು. ಇದರಿಂದ ಸ್ಫೂರ್ತಿ ಪಡೆದ ಮಿಚ್ ಟೊಮ್ ಅವರು ಅಂಗಡಿಯ ಕಿಟಕಿಯಲ್ಲಿ ಪ್ರದರ್ಶನಕ್ಕೆ ಇಟ್ಟ ತಮ್ಮ ಆಟಿಕೆಗೆ ‘ಟೆಡ್ಡಿ ಬೇರ್’ ಎಂದು ಹೆಸರಿಟ್ಟರು.

1922:ಹೇಗ್’ನಲ್ಲಿ ಖಾಯಂ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊದಲ ಸಮಾವೇಶ ನಡೆಯಿತು.

1923: ಗ್ರೀಸ್ ದೇಶವು ಗ್ರೆಗೋರಿಯನ್ ಕ್ಯಾಲೆಂಡರನ್ನು ಜಾರಿಗೆ ತಂದ ಕೊನೆಯ ಯೂರೋಪ್ ರಾಷ್ಟ್ರವಾಯಿತು

1933: ಮಿಯಾಮಿಯಲ್ಲಿ ಜಿಯುಸಿಪ್ಪೆ ಜಂಗಾರ ಎಂಬಾತ ಅಮೆರಿಕದ ಅಧಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ. ಆದರೆ ಆತ ಚಿಕಾಗೋದ ಮೇಯರ್ ಅಂಟನ್ ಜೆ ಸೆರ್ಮಾರ್ಕ್ ಅವರಿಗೆ ಗುಂಡಿಟ್ಟ.

1942: ಎರಡನೇ ವಿಶ್ವ ಮಹಾಯುದ್ಧದಲ್ಲಿ ಜಪಾನ್ ಆಕ್ರಮಣಕ್ಕೆ ಗುರಿಯಾದ ಸಿಂಗಪುರದಲ್ಲಿ ಬ್ರಿಟಿಷ್ ಜನರಲ್ ಆರ್ಥರ್ ಪೆರ್ಸಿವಲ್ ಶರಣಾಗತನಾದ. ಈ ಸಂದರ್ಭದಲ್ಲಿ ಭಾರತೀಯ, ಬ್ರಿಟಿಷ್ ಮತ್ತು ಆಸ್ಟ್ರೇಲಿಯನ್ ಜನಾಂಗಕ್ಕೆ ಸೇರಿದ 80,000 ಸೈನಿಕರು ಜಪಾನಿನ ಸೈನ್ಯಕ್ಕೆ ಸೆರೆಸಿಕ್ಕರು. ಇದು ಬ್ರಿಟಿಷ್ ಸೈನ್ಯ ಅನುಭವಿಸಿದ ಅತಿ ದೊಡ್ಡ ಶರಣಾಗತಿ ಎನಿಸಿದೆ.

1946: ಫಿಲಡೆಲ್ಫಿಯಾದ ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದಲ್ಲಿ ವಿಶ್ವದ ಪ್ರಥಮ ಸಾಮಾನ್ಯ ಉಪಯೋಗಿ ಗಣಕ ಯಂತ್ರವಾದ ‘ENIAC’ ಔಪಚಾರಿಕವಾಗಿ ಬಿಡುಗಡೆಗೊಂಡಿತು.

1949: ಬ್ರಿಟಿಷ್ ಪ್ರಾಚ್ಯ ಸಂಶೋಧಕರಾದ ಗೆರಾಲ್ಡ್ ಲಾಂಕೆಸ್ಟರ್ ಹಾರ್ಡಿಂಗ್ ಮತ್ತು ರೋಲ್ಯಾಂಡ್ ಡಿ ವಾಕ್ಸ್ ಅವರಿಂದ ಕುಮರನ್ ಗುಹೆಗಳಲ್ಲಿ ಮೊದಲ ಏಳು ಡೆಡ್ ಸೀ ಸ್ಕ್ರೋಲ್ಸ್ ಪತ್ತೆ.

1971: ಬ್ರಿಟಿಷ್ ಚಲಾವಣಾ ಹಣವನ್ನು ದಶಮಾಂಶ ರೂಪಕ್ಕೆ ತರುವ (decimalisation of British coinage) ಕೆಲಸವನ್ನು ಪೂರ್ಣಗೊಳಿಸಲಾಯಿತು

1972: ಸೌಂಡ್ ರೆಕಾರ್ಡಿಂಗ್ ಗಳಿಗೆ ಪ್ರಥಮ ಬಾರಿಗೆ ಅಮೆರಿಕದಲ್ಲಿ ರಾಷ್ಟ್ರೀಯ ಕಾಪಿ ರೈಟ್ಸ್ ಸಂರಕ್ಷಣೆ ಒದಗಿಸಲಾಯಿತು.

2003: ಇರಾಕ್ ಯುದ್ಧದ ವಿರುದ್ಧ ವಿಶ್ವದಾದ್ಯಂತ 600 ನಗರಗಳಲ್ಲಿನ ಒಟ್ಟು 30 ಮಿಲಿಯನ್ ಜನರು ಶಾಂತಿಯುತ ಪ್ರತಿಭಟನೆ ನಡೆಸಿದರು. ಇದು ವಿಶ್ವದ ಅತ್ಯಂತ ದೊಡ್ಡ ಶಾಂತಿಯುತ ಪ್ರತಿಭಟನೆ ಎಂದೆನಿಸಿದೆ.

2012: ಕೊಮಾಯಗುವ ನಗರದಲ್ಲಿನ ಹೊಂಡುರಾನ್ ಸೆರೆಮನೆಯಲ್ಲಿ ಬೆಂಕಿ ಆಕಸ್ಮಿಕದಿಂದ 360 ಜನ ಸಾವಿಗೀಡಾದರು.

1955: ಅಮೆರಿಕದಲ್ಲಿ ಅತ್ಯಂತ ಸುರಕ್ಷಿತ ಕಂಪ್ಯೂಟರುಗಳಲ್ಲಿನ ಭದ್ರತಾ ವ್ಯವಸ್ಥೆಯನ್ನು ಹಾಳುಗೆಡವಿದ ಆರೋಪದಲ್ಲಿ ಕೆವಿನ್ ಮಿಟ್ನಿಕ್ ಎಂಬಾತನನ್ನು ಎಫ್ ಬಿ ಐ ಬಂಧಿಸಿತು. ಐದು ವರ್ಷಗಳ ಸೆರೆವಾಸದ ಬಳಿಕ 2001ರ ಜನವರಿಯಲ್ಲಿ ಆತನನ್ನು ಬಿಡುಗಡೆ ಮಾಡಲಾಯಿತು.

1978: ಲಾಸ್ ವೇಗಾಸಿನಲ್ಲಿ ನಡೆದ ಪಂದ್ಯದಲ್ಲಿ ಲಿಯೋನ್ ಸ್ಫಿಂಕ್ಸ್ ಎದುರು ಸೋತ ಮಹಮ್ಮದ್ ಅಲಿ ತನ್ನ ಜಾಗತಿಕ ಬಾಕ್ಸಿಂಗ್ ಪ್ರಶಸ್ತಿಯನ್ನು ಕಳೆದುಕೊಂಡರು.

2009: ಉಕ್ರೇನಿನ ಡೊಂಟೆಸ್ಕ್‌ನಲ್ಲಿ ನಡೆದ ಬುಕ್ಕಾ ಸ್ಮಾರಕ ವಾರ್ಷಿಕ ಅಥ್ಲೆಟಿಕ್ ಚಾಂಪಿಯನ್‌ ಶಿಪ್ಪಿನಲ್ಲಿ ರಷ್ಯಾದ ಅಥ್ಲೀಟ್ ಎಲೆನಾ ಇಸಿನ್ಬಾಯೇವಾ 5 ಮೀಟರ್ ಎತ್ತರ ಜಿಗಿಯುವ ಮೂಲಕ ವಿಶ್ವದಾಖಲೆ ಮಾಡಿದರು.

2009: ಭಾರತೀಯ ಮೂಲಸಂಜಾತೆ ಅಮೆರಿಕದ ಶಿಕಾಗೋ ನಿವಾಸಿ 19 ವರ್ಷ ವಯಸ್ಸಿನ ನಿಖಿತಾ ಶಾ ಮರ್‌ಹವಾ ಅವರು ‘2009ರ ಮಿಸ್ ಇಂಡಿಯಾ ವರ್ಲ್ಡ್‌ವೈಡ್’ ಸ್ಪರ್ಧೆಯ ವಿಜೇತೆಯಾದರು. ಡರ್ಬಾನಿನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಈಕೆ ಭಾರತೀಯ ಶಾಸ್ತ್ರೀಯ ನೃತ್ಯದಿಂದ ಎಲ್ಲರ ಮನಸೂರೆಗೊಂಡರು.

ಪ್ರಮುಖಜನನ/ಮರಣ:

1564: ವಿಜ್ಞಾನ ಕ್ರಾಂತಿಯ ಮಹಾಪುರುಷರಲ್ಲಿ ಪ್ರಮುಖರಾದ ಭೌತಶಾಸ್ತ್ರಜ್ಞ, ಗಣಿತಜ್ಙ, ಖಗೋಳ ಶಾಸ್ತ್ರಜ್ಙ ಮತ್ತು ತತ್ವಶಾಸ್ತ್ರಜ್ಞ ಗೆಲಿಲಿಯೋ ಗೆಲೆಲಿ ಅವರು ಇಟಲಿಯ ಗ್ರಾಂಡ್ ಡಚ್ಚಿ ಆಫ್ ಫ್ಲಾರೆನ್ಸ್ ಬಳಿಯ ಪೀಸಾ ಎಂಬಲ್ಲಿ ಜನಿಸಿದರು. ಇವರು ಖಗೋಳ ಅನ್ವೇಷಣೆಗಳಿಗೆ ದೂರದರ್ಶಕವನ್ನು ಮೊತ್ತಮೊದಲ ಬಾರಿಗೆ ಬಳಸಿ, ವಿವಿಧ ಆಕಾಶ ಕಾಯಗಳ ಬಗ್ಗೆ ಅನೇಕಾನೇಕ ಸ್ವಾರಸ್ಯಕರ ವಿಷಯಗಳನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟವರಾಗಿದ್ದಾರೆ.

1845: ನೊಬೆಲ್ ಪುರಸ್ಕೃತ ಅಮೆರಿಕದ ನ್ಯಾಯವಾದಿ ಮತ್ತು ರಾಜಕಾರಣಿ ಎಲಿಹು ರೂಟ್ ನ್ಯೂಯಾರ್ಕಿನ ಕ್ಲಿಂಟನ್ ಎಂಬಲ್ಲಿ ಜನಿಸಿದರು. ಅವರಿಗೆ 1912ರ ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1858: ಅಮೆರಿಕನ್ ಖಗೋಳ ತಜ್ಞರಾದ ವಿಲಿಯಂ ಹೆನ್ರಿ ಪಿಕರಿಂಗ್ ಜನಿಸಿದರು. ಇವರು 1919ರಲ್ಲಿ ಶನಿಗ್ರಹದ ಒಂಭತ್ತನೇ ಉಪಗ್ರಹವಾದ ‘ಫೋಬೆ’ಯನ್ನು ಅನ್ವೇಷಿಸಿದರು.

1861: ಭೌತವಿಜ್ಞಾನಿ ಚಾರ್ಲ್ಸ್ ಎಡ್ವರ್ಡ್ ಗುಲ್ಲೌಮೆ ಸ್ವಿಡ್ಜರ್ಲ್ಯಾಂಡ್ ದೇಶದ ಫ್ಲೂರಿಯರ್ ಎಂಬಲ್ಲಿ ಜನಿಸಿದರು. ಅನಾಮಲೀಸ್ ಇನ್ ನಿಕ್ಕಲ್ ಸ್ಟೀಲ್ ಅಲ್ಲಾಯ್ಸ್ ಕುರಿತಾದ ಸಂಶೋಧನೆಗಾಗಿ ಅವರಿಗೆ 1920 ವರ್ಷದ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತು.

1873: ಹ್ಯಾನ್ಸ್ ವಾನ್ ಯೂಲರ್ ಚೆಲ್ಪಿನ್ ಅವರು ಕಿಂಗ್ಡಂ ಆಫ್ ಬವೇರಿಯಾದ ಆಗ್ಸ್ ಬರ್ಗ್ ಎಂಬಲ್ಲಿ ಜನಿಸಿದರು. ಫರ್ಮೆಂಟೇಷನ್ ಆಫ್ ಶುಗರ್ ಅಂಡ್ ಎನ್ಸೈಮ್ಸ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1929ರ ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿತು. ಇವರ ಪುತ್ರ ಉಲ್ಫ್ ವಾನ್ ಯೂಲರ್ ಅವರು 1970ರ ವರ್ಷದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಪುರಸ್ಕಾರ ಗಳಿಸಿದರು.

1915: ಸೋರಟ್ ಅಶ್ವಥ್ ನಂಜನಗೂಡಿನಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು ಅಶ್ವಥ್ ನಾರಾಯಣ ಶಾಸ್ತ್ರಿ. ವೃತ್ತಿ ರಂಗಭೂಮಿಯಲ್ಲಿ ಕಾರ್ಯನಿರ್ವಹಿಸಿದ ನಂತರದಲ್ಲಿ 60 ಚಿತ್ರಗಳಿಗೆ ಸಂಭಾಷಣೆ, ಸುಮಾರು 160 ಚಿತ್ರಗೀತೆಗಳನ್ನು ಸೋರಟ್ ಅಶ್ವಥ್ ರಚಿಸಿದ್ದರು. 1998ರ ಫೆಬ್ರವರಿ 5ರಂದು ನಿಧನ ಹೊಂದಿದ ಇವರಿಗೆ 1994ರ ವರ್ಷದಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿತ್ತು.

1929: ಡಾ. ಪ್ರಭುಶಂಕರ ಅವರು ಚಾಮರಾಜನಗರದಲ್ಲಿ ಜನಿಸಿದರು. ಪ್ರಾಧ್ಯಾಪನ ಮತ್ತು ವಿವಿಧ ಮುಖಿ ಸಾಹಿತ್ಯ ರಚನೆಯಲ್ಲಿ ಪ್ರಸಿದ್ಧರಾದ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ವಿಶ್ವಮಾನವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಸಂದಿವೆ.

1934: ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಮೈಸೂರಿನಲ್ಲಿ ಜನಿಸಿದರು. 1953ರಲ್ಲಿ ತಂದೆ ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯನವರು ನಿಧನರಾದಾಗ, ‘ಕೆ. ಹಿರಣ್ಣಯ್ಯ ಮಿತ್ರ ಮಂಡಲಿ’ಯನ್ನು ತಾವೇ ವಹಿಸಿಕೊಂಡು ನಿರಂತರವಾಗಿ ಮುನ್ನಡೆಸಿದರು. ಮಾಸ್ಟರ್ ಹಿರಣ್ಣಯ್ಯನವರಿಗೆ ಅತ್ಯುನ್ನತ ರಂಗ ಪ್ರಶಸ್ತಿಯಾದ ಡಾ. ಗುಬ್ಬೀ ವೀರಣ್ಣ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭ್ಯವಾಗಿವೆ.

1934: ಗಣಕತಂತ್ರ ವಿಜ್ಞಾನಿ ನಿಕಲೌಸ್ ವಿರ್ಥ್ ಅವರು ಸ್ವಿಡ್ಜರ್ಲ್ಯಾಂಡ್ ದೇಶದಲ್ಲಿ ಜನಿಸಿದರು. ಅವರು ಪ್ಯಾಸ್ಕಲ್ ಪ್ರೊಗ್ರಾಮಿಂಗ್ ಲಾಂಗ್ವೇಜ್ ಸೃಷ್ಟಿಮಾಡಿದರು.

1964: ಪ್ರಸಿದ್ಧ ಹಿಂದೀ ಚಿತ್ರ ನಿರ್ಮಾಪಕ ನಿರ್ದೇಶಕ ಅಶುತೋಷ್ ಗೌರೀಕರ್ ಮುಂಬೈನಲ್ಲಿ ಜನಿಸಿದರು. ಅವರ ಲಗಾನ್, ಸ್ವದೇಶ್, ಜೋಧಾ ಅಕ್ಬರ್ ಮುಂತಾದ ಚಿತ್ರಗಳು ರಾಷ್ಟ್ರ ಮತ್ತು ಅಂತರರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿವೆ.

1869: ಪರ್ಷಿಯಾ ಹಾಗೂ ಉರ್ದು ಭಾಷೆಗಳಲ್ಲಿ ಸಮಾನವಾಗಿ ಪ್ರಭುತ್ವ ಹೊಂದಿದ್ದ ಭಾರತದ ಖ್ಯಾತ ಕವಿ, ಸಾಹಿತಿ ಮಿರ್ಜಾ ಅಸದುಲ್ಲಾ ಖಾನ್ ಘಾಲಿಬ್ ದೆಹಲಿಯಲ್ಲಿ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾದರು. ಭಾರತೀಯ ಸಾಹಿತ್ಯದ ಪುನರುತ್ಥಾನದ ಮೊದಲಿಗರಲ್ಲಿ ಒಬ್ಬರೆಂದು ಇವರು ಪ್ರಖ್ಯಾತರಾಗಿದ್ದಾರೆ.

1959: ಇಂಗ್ಲಿಷ್ ಭೌತವಿಜ್ಞಾನಿ ಓವೆನ್ಸ್ ವಿಲಿಯಂಸ್ ರಿಚರ್ಡ್ಸನ್ ಇಂಗ್ಲೆಂಡಿನ ಆಲ್ಟನ್ ಎಂಬಲ್ಲಿ ನಿಧನರಾದರು. ಥರ್ಮಿಯೋನಿಕ್ ಎಮಿಷನ್ ಕುರಿತಾದ ಸಂಶೋಧನೆಗೆ ಅವರಿಗೆ 1928ರ ವರ್ಷದ ನೊಬೆಲ್ ಭೌತಶಾಸ್ತ್ರ ಪುರಸ್ಕಾರ ಸಂದಿತು. ಈ ಸಂಶೋಧನೆಯು ರಿಚರ್ಡ್ಸನ್ಸ್ ಲಾ ಎಂದೇ ಪ್ರಖ್ಯಾತಿ ಪಡೆದಿದೆ.

1988: ಅಮೆರಿಕದ ಭೌತವಿಜ್ಞಾನಿ ರಿಚರ್ಡ್ ಫೆಯ್ನ್ ಮ್ಯಾನ್ ಲಾಸ್ ಎಂಜೆಲಿಸ್ ನಗರದಲ್ಲಿ ನಿಧನರಾದರು. ಎಲೆಕ್ಟ್ರೋ ಡೈನಮಿಕ್ಸ್ ಕುರಿತಾದ ಕೊಡುಗೆಗಾಗಿ ಇವರಿಗೆ 1965ರ ವರ್ಷದಲ್ಲಿ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

1999: ಅಮೆರಿಕದ ಭೌತವಿಜ್ಞಾನಿ ಹಾಗೂ ಪರ್ವತಾರೋಹಿ ಹೆನ್ರಿ ವೇ ಕೆಂಡಾಲ್ ಫ್ಲೋರಿಡಾದಲ್ಲಿ ನಿಧನರಾದರು. ಕ್ವಾರ್ಕ್ ಮಾಡೆಲ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1990 ವರ್ಷದ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತ್ತು.

2006: ತೈವಾನಿನ ಮಾಜಿ ಪ್ರಧಾನಿ, 1980ರ ದಶಕದಲ್ಲಿ ಆ ದ್ವೀಪದ ಆರ್ಥಿಕ ವಿಸ್ತರಣಾ ಕಾರ್ಯಕ್ರಮದ ರೂವಾರಿ ಸನ್ ಯುನ್-ಸುವಾನ್ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು.