ಪ್ರಮುಖಘಟನಾವಳಿಗಳು:
1659: ಬ್ರಿಟಿಷ್ ಬ್ಯಾಂಕ್ ಒಂದರಿಂದ ಚೆಕ್ ಪಡೆಯಲಾಯಿತು. ಈ ಚೆಕ್ಕಿನ ಮೂಲಪ್ರತಿಯನ್ನು ನ್ಯಾಷನಲ್ ವೆಸ್ಟ್ ಮಿನ್ ಸ್ಟರ್ ಬ್ಯಾಂಕಿನ ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.
1874: ಅಮೆರಿಕದಲ್ಲಿ ಸಿಲ್ವರ್ ಡಾಲರ್ ಅನ್ನು ಚಲಾವಣಾ ಹಣವನ್ನಾಗಿ ಬಳಸಲು ಆರಂಭಿಸಲಾಯಿತು.
1861: ಕೆನಡಾದಲ್ಲಿ ‘ಕೆನಡಿಯನ್ ಪೆಸಿಫಿಕ್ ರೈಲ್ವೇ’ ಆರಂಭಿಸಲು ಅಲ್ಲಿನ ಪಾರ್ಲಿಮೆಂಟ್ ನಿರ್ಧರಿಸಿತು.
1896: ರಿಚರ್ಡ್ ಫೆಲ್ಟನ್ ಔಟ್ ಕಾಲ್ಟ್ ಅವರ ಕಾಮಿಕ್ ಸರಣಿ ‘ದಿ ಯೆಲ್ಲೋ ಕಿಡ್’ ಮೊತ್ತ ಮೊದಲ ಬಾರಿಗೆ ಪ್ರಕಟಗೊಂಡಿತು.
1933: ಅಮೆರಿಕದಲ್ಲಿ ‘ಬ್ಲೈನ್ ಆಕ್ಟ್’ ಜಾರಿಗೆ ಬಂದು ಅಲ್ಲಿನ ಪಾನನಿರೋದ ಅಂತ್ಯಗೊಂಡಿತು.
1937: ವಾಲೇಸ್ ಹೆಚ್. ಕಾರೋತರ್ಸ್ ಅವರು ತಮ್ಮ ಸಂಶೋಧವಾದ ‘ನೈಲಾನ್’ ಬಟ್ಟೆಗೆ ಪೇಟೆಂಟ್ ಪಡೆದರು.
1962: ಪಶ್ಚಿಮ ಜರ್ಮನಿಯ ಕರಾವಳಿ ತೀರದಲ್ಲಿ ಭೀಕರ ಪ್ರವಾಹ ಉಂಟಾಗಿ 315 ಮಂದಿ ಸಾವಿಗೀಡಾಗಿ 60,000 ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡರು.
1968: ಅಲಬಾಮಾ ಪ್ರಾಂತ್ಯದ ಹ್ಯಾಲಿವಿಲ್ಲೆ ಎಂಬಲ್ಲಿ ಮೊಟ್ಟ ಮೊದಲ ತುರ್ತು ದೂರವಾಣಿ ಸೇವೆ 9-1-1 ಆರಂಭಗೊಂಡಿತು.
1978: ಚಿಕಾಗೋದ ‘ಸಿ.ಬಿ.ಬಿ.ಎಸ್’ ಸಂಸ್ಥೆಯಲ್ಲಿ ಮೊಟ್ಟ ಮೊದಲ ‘ಕಂಪ್ಯೂಟರ್ ಬುಲೆಟಿನ್ ಬೋರ್ಡ್’ ವ್ಯವಸ್ಥೆಯನ್ನು ಸೃಷ್ಟಿಸಲಾಯಿತು. ಪ್ರಮುಖ ವಿಷಯಗಳ ಸಾರಾಂಶವನ್ನು ಒಂದೆಡೆ ಸುಲಭವಾಗಿ ಗಮನಕ್ಕೆ ತರುವಂತಹ ಕಾರ್ಯ ಈ ಬುಲೆಟಿನ್ ಬೋರ್ಡ್ ವ್ಯವಸ್ಥೆಯಲ್ಲಿರುತ್ತದೆ. ಮುಂದುವರೆದ ತಂತ್ರಜ್ಞಾನ ವ್ಯವಸ್ಥೆಗಳಲ್ಲಿ ಇದನ್ನು ಡ್ಯಾಶ್ ಬೋರ್ಡ್ ಎಂಬ ಕರೆಯುವ ಪದ್ಧತಿಯೂ ಇದೆ.
2006: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು 2005ನೇ ಸಾಲಿನ ವಿಶೇಷ ಪ್ರಶಸ್ತಿಗಳಾದ ಡಾ. ಬಿ.ಎನ್. ಗದ್ಗೀಮಠ ಪ್ರಶಸ್ತಿಗೆ ಗುಲ್ಬರ್ಗದ ಡಾ. ವೀರಣ್ಣ ದಂಡೆ, ಡಾ. ಜೀಶಂ ಪ್ರಶಸ್ತಿಗೆ ಉಡುಪಿಯ ಡಾ. ರಾಘವ ನಂಬಿಯಾರ್ ಅವರನ್ನು ಆಯ್ಕೆ ಮಾಡಿತು.
2009: ಕರ್ನಾಟಕ ಲಲಿತ ಕಲಾ ಅಕಾಡೆಮಿಯು 2008ರ ಗೌರವ ಪ್ರಶಸ್ತಿಗಳನ್ನು ಪ್ರಕಟಿಸಿತು. ಬಿಜಾಪುರದ ಈಶ್ವರಪ್ಪ ಜೀವಪ್ಪ ಹಮೀದ್ ಖಾನ್, ಮೈಸೂರಿನ ಎಲ್.ಶಿವಲಿಂಗಪ್ಪ ಹಾಗೂ ಬೆಂಗಳೂರಿನ ಕೆ.ಎನ್ ರಾಮಚಂದ್ರನ್ ಅವರುಗಳು ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ.
2009: ಭಾರತೀಯ ನಟಿ, ನಿರ್ದೇಶಕಿ ನಂದಿತಾ ದಾಸ್ ಅವರು ನಿರ್ದೇಶಿಸಿದ ‘ಫಿರಾಕ್’ ಚಿತ್ರಕ್ಕೆ ಕರಾಚಿ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪ್ರಾಪ್ತವಾಯಿತು.
ಪ್ರಮುಖಜನನ/ಮರಣ:
1543: ಜಪಾನಿನ ಇತಿಹಾಸದಲ್ಲಿ ಅಸುಚಿ ಮೊಮೋಯಾಮಾ ಕಾಲಘಟ್ಟದಲ್ಲಿ ಜನಿಸಿದ ಕನೋ ಐಟೋಕು ಅವರು ಕನೋ ಚಿತ್ರಕಲೆಯ ಮಹತ್ವದ ಕಲೆಗಾರರೆನಿಸಿದ್ದಾರೆ.
1925: ಕನ್ನಡದ ಪ್ರಸಿದ್ಧ ವಿದ್ವಾಂಸ, ವಿಮರ್ಶಕ, ಉಪನ್ಯಾಸಕ, ಹೋರಾಟಗಾರ, ಅಧ್ಯಾಪಕ ಮತ್ತು ಹಿರಿಯ ಬರಹಗಾರರಾದ ಪ್ರೊ. ಎಲ್. ಎಸ್. ಶೇಷಗಿರಿರಾವ್ ಬೆಂಗಳೂರಿನಲ್ಲಿ ಜನಿಸಿದರು. ವಿಶಾಲ ವ್ಯಾಪ್ತಿಯ ಬರಹ ಮಾಡಿರುವ ಪ್ರೊ. ಎಲ್.ಎಸ್.ಎಸ್ ಅವರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ದೇವರಾಜ ಬಹದ್ದೂರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
1977: ಕನ್ನಡದ ಚಲನಚಿತ್ರ ನಟ, ನಿರ್ಮಾಪಕ ಮತ್ತು ವಿತರಕ ದರ್ಶನ್ ತೂಗುದೀಪ ಮೈಸೂರಿನಲ್ಲಿ ಜನಿಸಿದರು. ಕನ್ನಡ ಚಿತ್ರರಂಗದ ಹಿಂದಿನ ತಲೆಮಾರಿನ ನಟ ದಿವಂಗತ ತೂಗುದೀಪ ಶ್ರೀನಿವಾಸ್ ಅವರ ಪುತ್ರರಾದ ಇವರು ಕನ್ನಡ ಚಿತ್ರರಂಗದ ನಾಯಕ ನಟರಲ್ಲಿ ಒಬ್ಬರಾಗಿದ್ದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಅಭಿನಯಕ್ಕಾಗಿ ರಾಜ್ಯ ಸರ್ಕಾರದ ಚಲನಚಿತ್ರ ಶ್ರೇಷ್ಠ ನಟ ಪ್ರಶಸ್ತಿ ಪಡೆದಿದ್ದಾರೆ.
1834: ಬ್ರಿಟನ್ನಿನ ಸಂಶೋಧಕ ಮತ್ತು ಜೀವರಕ್ಷಕ ದೋಣಿ (ಲೈಫ್ ಬೋಟ್) ಸೃಷ್ಟಿಕರ್ತ ಬ್ರಿಟನ್ನಿನ ಲಯನೆಲ್ ಲ್ಯೂಕಿನ್ ಅವರು ಕೆಂಟ್ ಪ್ರದೇಶದ ಹೈಥ್ ಎಂಬಲ್ಲಿ ತಮ್ಮ 91ನೇ ವಯಸ್ಸಿನಲ್ಲಿ ಮೃತರಾದರು.
1907: ಇಟಲಿಯ ಪ್ರಸಿದ್ಧ ಕವಿ ಜಿಯೋಸ್ಯೂ ಕಾರ್ಡುಸ್ಸಿ ಇಟಲಿಯ ಬೊಲೋಗ್ನ ಎಂಬಲ್ಲಿ ನಿಧನರಾದರು. ಆಧುನಿಕ ಇಟಲಿಯ ರಾಷ್ಟ್ರಕವಿ ಎಂದು ಗೌರವಿಸಲ್ಪಡುವ ಇವರಿಗೆ 1906 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.
1932: ಫ್ರಾನ್ಸಿನ ರಾಜಕಾರಣಿ ಮತ್ತು ಮಾನವತಾವಾದಿ ಫರ್ಡಿನೆಂಡ್ ಬ್ಯೂಸನ್ ಫ್ರಾನ್ಸಿನಲ್ಲಿ ನಿಧನರಾದರು. ‘ಲೀಗ್ ಆಫ್ ಎಡುಕೇಶನ್’ ಮತ್ತು ‘ಹ್ಯೂಮನ್ ರೈಟ್ಸ್ ಲೀಗ್’ ಅಧ್ಯಕ್ಷತೆಯನ್ನು ಅಲಂಕರಿಸಿದ್ದ ಇವರಿಗೆ 1927 ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರವನ್ನು ನೀಡಲಾಗಿತ್ತು.
1944: ಭಾರತೀಯ ಚಿತ್ರರಂಗದ ಪಿತಾಮಹರಾದ ದಾದಾ ಸಾಹೇಬ್ ಫಾಲ್ಕೆ ಅವರು ನಾಸಿಕ್ ಪಟ್ಟಣದಲ್ಲಿ ನಿಧನರಾದರು. ಪ್ರಸಿದ್ಧ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್ ಪದವೀಧರರಾದ ಇವರು 1913ರಲ್ಲಿ ತಯಾರಿಸಿದ ಭಾರತದ ಪ್ರಪ್ರಥಮ ಪೂರ್ಣಪ್ರಮಾಣದ ಚಿತ್ರ ‘ರಾಜಾ ಹರಿಶ್ಚಂದ್ರ’ ಸೇರಿದಂತೆ ತಮ್ಮ 19 ವರ್ಷಗಳ ಚಿತ್ರ ಜೀವನದಲ್ಲಿ 95 ಚಲನಚಿತ್ರಗಳನ್ನೂ ಮತ್ತು 26 ಕಿರುಚಿತ್ರಗಳನ್ನೂ ನಿರ್ಮಿಸಿದ್ದರು. ಭಾರತದಲ್ಲಿ ಶ್ರೇಷ್ಠ ಚಲನಚಿತ್ರರಂಗದ ಸೇವೆ ಮಾಡಿದವರಿಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
1956: ಭಾರತದ ಪ್ರಸಿದ್ಧ ಖಭೌತ ವಿಜ್ಞಾನಿ ಮೇಘನಾದ ಸಹಾ ಅವರು ನವದೆಹಲಿಯಲ್ಲಿ ತಮ್ಮ 62ನೆಯ ವಯಸ್ಸಿನಲ್ಲಿ ನಿಧನರಾದರು. ‘ಸಹಾ ಆಯೋನೈಸೇಷನ್ ಈಕ್ವೇಶನ್’ ಎಂಬುದು ವಿಜ್ಞಾನ ಲೋಕದಲ್ಲಿ ಅವರ ಹೆಸರಿರುವ ಪ್ರಸಿದ್ಧ ಸಮೀಕರಣ. ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಲೋಕಸಭಾ ಸದಸ್ಯರಾಗಿದ್ದು, ಸರ್ಕಾರ ಇವರ ಮಾತುಗಳಿಗೆ ಸದಾ ಕಿವಿಗೊಡುವಂತೆ ಪ್ರಭಾಯುತವಾದ ಚರ್ಚೆ ನಡೆಸುತ್ತಿದ್ದರು. ದೇಶದ ನದಿ ಮತ್ತು ಕಣಿವೆ ಯೋಜನೆಗಳ ಸದಸ್ಯರಾಗಿದ್ದ ಇವರು ‘ದಾಮೋದರ್ ವ್ಯಾಲಿ’ ಯೋಜನೆಯ ಮೂಲ ಯೋಜನೆಯ ಸೃಷ್ಟಿಕರ್ತರಾಗಿದ್ದರು. ರಾಯಲ್ ಸೊಸೈಟಿಯ ಫೆಲೋ ಗೌರವ ಇವರಿಗೆ ಸಂದಿತ್ತು.