Categories
e-ದಿನ

ಫೆಬ್ರವರಿ-19

ಛತ್ರಪತಿ ಶಿವಾಜಿ ಜಯಂತಿ
ಫೆಬ್ರುವರಿ 19, 1630ರಂದು ಜುನ್ನಾರ್ ಸಮೀಪದ ಶಿವನೇರಿಯಲ್ಲಿ ಶಿವಾಜಿ ಜನಿಸಿದರು. ಭಾರತದ ಸಾಂಸ್ಕೃತಿಕ ಪರಂಪರೆಗಳು ಸ್ಥಳೀಯ ಭಾರತೀಯ ರಾಜರ ಕ್ಷುಲ್ಲಕತನ ಮತ್ತು ಈ ದೇಶವನ್ನು ಆಕ್ರಮಿಸಿದ ಪರಕೀಯರ ಅಂಧ ಮತಶ್ರದ್ಧೆಗಳ ದುರಾಕ್ರಮಣಕ್ಕೊಳಗಾಗಿದ್ದಾಗ ಅದನ್ನು ಚತುರತೆಯಿಂದ ಎದುರಿಸಿ ಮುಂದಿನ ಜನಾಂಗಗಳು ಭಾರತೀಯ ಸಂಸ್ಕೃತಿಯ ಗಾಳಿಯನ್ನು ಸವಿಯುವಂತೆ ಉಳಿಸಿ ಹೋದವರು ಶಿವಾಜಿ ಮಹಾರಾಜರು. ಈ ದಿನವನ್ನು ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಪ್ರಮುಖಘಟನಾವಳಿಗಳು:

1600: ಪೆರುವಿನಲ್ಲಿ ಸಂಭವಿಸಿದ ಜ್ವಾಲಾಮುಖಿಯು ದಕ್ಷಿಣ ಅಮೆರಿಕದ ಚರಿತ್ರೆಯಲ್ಲೇ ಅತ್ಯಂತ ಭೀಕರವಾದುದಾಗಿತ್ತು. 1600 ವರ್ಷದ ಫೆಬ್ರವರಿ 19ರಂದು ಪ್ರಾರಂಭಗೊಂಡ ಈ ಜ್ವಾಲಾಮುಖಿಯು ಮುಂದೆ ಮಾರ್ಚ್ ತಿಂಗಳವರೆವಿಗೂ ಮುಂದುವರೆದು 1500ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿ ಹತ್ತು ಹಳ್ಳಿಗಳು ಸುಟ್ಟು ಬೂದಿಯಾದವು. ಈ ಜ್ವಾಲಾಮುಖಿಯಲ್ಲಿ ಉಂಟಾದ ವಿಷಾನಿಲದಿಂದ ಉಂಟಾದ ದುಷ್ಪರಿಣಾಮದಿಂದ ಈ ಪ್ರದೇಶದ ಸುತ್ತಮುತ್ತಲಿನ ರೈತ ಸಮುದಾಯಗಳು ಚೇತರಿಸಿಕೊಳ್ಳಲು ಸುಮಾರು 150 ವರ್ಷಗಳೇ ಬೇಕಾದವು.

1674: ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ ‘ಮೂರನೇ ಆಂಗ್ಲೋ ಡಚ್ ಯುದ್ಧ’ವನ್ನು ಕೊನೆಗಾಣಿಸಿ ‘ಟ್ರೀಟಿ ಆಫ್ ವೆಸ್ಟ್ ಮಿನಿಸ್ಟರ್’ ಒಪ್ಪಂದಕ್ಕೆ ಸಹಿಮಾಡಿದವು. ಇದರ ಪ್ರಕಾರ ಡಚ್ ವಸಾಹತುವಾಗಿದ್ದ ನ್ಯೂ ಅಮ್ಸ್ಟರ್ಡ್ಯಾಮ್ ಅನ್ನು ಇಂಗ್ಲೆಂಡಿಗೆ ಹಸ್ತಾಂತರಿಸಲಾಯಿತು. ಮುಂದೆ ಇದರ ಹೆಸರು ನ್ಯೂಯಾರ್ಕ್ ಎಂದು ಬದಲಾಯಿತು.

1726: ರಷ್ಯಾದಲ್ಲಿ ಸುಪ್ರೀಂ ಪ್ರೈವಿ ಕೌನ್ಸಿಲ್ ಸ್ಥಾಪನೆಗೊಂಡಿತು

1807: ಅಮೆರಿಕದ ಮಾಜಿ ಉಪಾಧ್ಯಕ್ಷ ಆರೋನ್ ಬರ್ ರಾಜದ್ರೋಹದ ಆಪಾದನೆಯ ಮೇಲೆ ಅಲಬಾಮಾದ ವೇಕ್ ಫೀಲ್ಡ್ ಎಂಬಲ್ಲಿ ಬಂಧಿತನಾದ.

1878: ಥಾಮಸ್ ಆಲ್ವಾ ಎಡಿಸನ್ ಅವರು ಫೋನೋಗ್ರಾಫ್ಗೆ ಪೇಟೆಂಟ್ ಪಡೆದರು.

1948: ಆಗ್ನೇಯ ಏಷ್ಯಾದಲ್ಲಿ ಸ್ವಾತಂತ್ರ್ಯಕ್ಕಾಗಿ ಚಳುವಳಿ ನಡೆಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಯುವಕರ ಸಮಾವೇಶವು ಕೋಲ್ಕತ್ತಾದಲ್ಲಿ ಜರುಗಿತು.

1985: ವಿಲಿಯಂ ಜೆ ಶ್ರೋಡರ್ ಅವರು ಕೃತಕ ಹೃದಯವನ್ನು ಪಡೆದು ಆಸ್ಪತ್ರೆಯನ್ನು ಬಿಟ್ಟ ಮೊಟ್ಟ ಮೊದಲಿಗರೆನಿಸಿದರು. ಕೆಂಟಕಿಯ ಲೌಸಿವಿಲ್ಲೇ ಎಂಬಲ್ಲಿನ ಹ್ಯೂಮಾನಾ ಹಾರ್ಟ್ ಇನ್ಸ್ಟಿಟ್ಯೂಟ್ ಇಂಟರ್ ನ್ಯಾಷನಲ್ ಎಂಬಲ್ಲಿ ಅವರಿಗೆ ಈ ಕೃತಕ ಹೃದಯದ ಕಸಿ ನೆರವೇರಿತು. ಈ ಶಸ್ತ್ರಕ್ರಿಯೆಯ ನಂತರದಲ್ಲಿ ಅವರು 620 ದಿನಗಳವರೆಗೆ ಜೀವಿಸಿದ್ದರು.

1986: ಶ್ರೀಲಂಕಾ ಸೈನ್ಯವು 80 ತಮಿಳು ಕೃಷಿ ಕಾರ್ಮಿಕರನ್ನು ಹತ್ಯೆ ಮಾಡಿತು.

2002: ನಾಸಾದ ಮಂಗಳಗ್ರಹಕ್ಕೆ ರವಾನಿಸಲ್ಪಟ್ಟ ಒಡಿಸ್ಸಿ ತನಿಖಾ ಯಂತ್ರವು ಥರ್ಮಲ್ ಎಮಿಷನ್ ಇಮೇಜಿಂಗ್ ವ್ಯವಸ್ಥೆ ಬಳಸಿ ಮಂಗಳ ಗ್ರಹದ ಮೇಲ್ಪದರದ ಚಿತ್ರಣಗಳನ್ನು ಸೆರೆಹಿಡಿಯತೊಡಗಿತು.

2006: ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ವೈರಾಗ್ಯಮೂರ್ತಿ ಭಗವಾನ್ ಬಾಹುಬಲಿಗೆ ನಡೆಯುವ ಹನ್ನೆರಡು ದಿನಗಳ ಮಹಾಮಸ್ತಕಾಭಿಷೇಕವು ಕೊನೆಗೊಂಡಿತು.

2006: ಪ್ರವಾದಿ ಮಹಮ್ಮದರ ವ್ಯಂಗ್ಯಚಿತ್ರವನ್ನು ಮೊತ್ತ ಮೊದಲ ಬಾರಿಗೆ ಪ್ರಕಟಿಸಿದ ಡೆನ್ಮಾರ್ಕಿನ ಡ್ಯಾನಿಷ್ ದಿನಪತ್ರಿಕೆ ‘ಜಿಲ್ಲಾಂಡ್ಸ್- ಪೋಸ್ಟೆನ್’, ಈ ವ್ಯಂಗ್ಯಚಿತ್ರಗಳಿಗೆ ಜಗತ್ತಿನಾದ್ಯಂತ ಭುಗಿಲೆದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕ್ಷಮಾಪಣೆ ಕೇಳಿತು.

2007: ಬೆಳಗಾವಿ ಜಿಲ್ಲೆಯ ರಂ.ಶಾ. ಲೋಕಾಪುರ ಅವರು ಮರಾಠಿಯಿಂದ ಕನ್ನಡಕ್ಕೆ ತಂದಿರುವ ತುಕಾರಾಂ ಅವರ ‘ಜ್ಞಾನೇಶ್ವರಿ’ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ 2006ನೇ ಸಾಲಿನ ಅನುವಾದ ಪ್ರಶಸ್ತಿಗೆ ಆಯ್ಕೆಯಾಯಿತು. ಮರಾಠಿ ಸಂತ ಜ್ಞಾನೇಶ್ವರ ಅವರು 1290ರಲ್ಲಿ ರಚಿಸಿದ್ದ ಸಾಹಿತ್ಯವನ್ನು ‘ಕನ್ನಡ ಜ್ಞಾನೇಶ್ವರಿ’ ಎಂಬ ಕೃತಿ ರಚನೆ ಮೂಲಕ ಲೋಕಾಪುರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

2008: ಅಂತರ್ಜಾತೀಯ ವಿವಾಹವಾಗುವ ಮೂಲಕ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರಿಗಿದ್ದ ಮೀಸಲಾತಿ ಸೌಲಭ್ಯ ಪಡೆಯಲು ಸಾಧ್ಯವಿಲ್ಲ ಎಂದು ಮುಂಬೈ ಉಚ್ಛ ನ್ಯಾಯಾಲಯವು ತೀರ್ಪು ನೀಡಿತು.

2008: ಖ್ಯಾತ ಸಂಸ್ಕೃತ ಕವಿ ಸ್ವಾಮಿ ರಾಮಭದ್ರಾಚಾರ್ಯ ಅವರಿಗೆ ಕೆ. ಕೆ. ಬಿರ್ಲಾ ಪ್ರತಿಷ್ಠಾನದ 2007ನೇ ಸಾಲಿನ 16ನೇ ವಾಚಸ್ಪತಿ ಪುರಸ್ಕಾರ ಘೋಷಿಸಲಾಯಿತು. ರಾಮಭದ್ರಾಚಾರ್ಯರ ‘ಶ್ರೀ ಭಾರ್ಗವಾರಾಘವೀಯಂ’ ಮಹಾಕಾವ್ಯಕ್ಕೆ ಈ ಪ್ರಶಸ್ತಿ ಲಭಿಸಿತು. 2ನೇ ವರ್ಷದಲ್ಲೇ ದೃಷ್ಟಿ ಕಳೆದುಕೊಂಡ ರಾಮಭದ್ರಾಚಾರ್ಯ ಅವರು ಹಿಂದಿ ಮತ್ತು ಸಂಸ್ಕೃತದಲ್ಲಿ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರವು ಅವರನ್ನು ಅಶಕ್ತರ ವಿ.ವಿ.ಯ ಜೀವಮಾನದ ಕುಲಪತಿಗಳನ್ನಾಗಿ ನೇಮಿಸಿದೆ.

ಪ್ರಮುಖಜನನ/ಮರಣ:

1473: ನಮ್ಮ ಜಗತ್ತಿಗೆ ಭೂಮಿ ಕೇಂದ್ರವಲ್ಲ, ಸೂರ್ಯನೇ ಕೇಂದ್ರ ಎಂಬ ವಾದವನ್ನು ಜನಗಳ ಮುಂದೆ ಸ್ಥಾಪಿಸಿದ ವ್ಯಕ್ತಿ ನಿಕೊಲಾಸ್ ಕೋಪರ್ನಿಕಸ್. ಖಗೋಳ ವಿಜ್ಞಾನಕ್ಕೆ ಹೊಸ ವೈಜ್ಞಾನಿಕ ತಿರುವು ಕೊಟ್ಟ ನಿಕೊಲಾಸ್ ಕೋಪರ್ನಿಕಸ್ ಪೋಲೆಂಡಿನ ಥಾರ್ನ್ ಎಂಬ ಊರಲ್ಲಿ ಜನಿಸಿದರು. ಈತ ಮೂಲತಃ ಕಲಿತದ್ದು ವೈದ್ಯಶಾಸ್ತ್ರ. ಆದರೆ ಅವರ ಆಸಕ್ತಿಯೆಲ್ಲಾ ಖಗೋಳ ವಿಜ್ಞಾನದಲ್ಲೇ. ರೋಮ್ ವಿಶ್ವವಿದ್ಯಾಲಯದಲ್ಲಿ ಖಗೋಳಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಇವರು ಮುಂದೆ ಆ ವೃತ್ತಿಯನ್ನು ಬಿಟ್ಟು ವೈದ್ಯವೃತ್ತಿ ಹಿಡಿದರು. ತುಂಬಾಬ ಕರುಣಾಮಯಿಯಾಗಿದ್ದ ಈತ ಬಡಬಗ್ಗರಿಗೆ ಪುಕ್ಕಟೆ ಔಷಧ ನೀಡುತ್ತಿದ್ದರು.

1630: ಭೋಂಸ್ಲೆ ಮನೆತನದ ರಾಜರಾದ ಛತ್ರಪತಿ ಶಿವಾಜಿ ಅವರು ಜುನ್ನಾರ್ ಸಮೀಪದ ಶಿವನೇರಿಯಲ್ಲಿ ಶಹಾಜಿರಾಜ್ ಬೋಂಸ್ಲೆ ಮತ್ತು ಜೀಜಾಬಾಯಿ ದಂಪತಿಗಳ ಮಗನಾಗಿ ಜನಿಸಿದರು.

1833: ಸ್ವಿಟ್ಜರ್ಲ್ಯಾಂಡ್ ದೇಶದ ಶಾಂತಿ ಕಾರ್ಯಕರ್ತ ಎಲಿಯೆ ಡುಕೋಮುನ್ ಅವರು ಜಿನೀವಾದಲ್ಲಿ ಜನಿಸಿದರು. ಅಂತರರಾಷ್ಟ್ರೀಯ ಶಾಂತಿಗಾಗಿ ‘ಇಂಟರ್ನ್ಯಾಷನಲ್ ಡಿ ಲಾ ಪೈಕ್ಸ್’ ಎಂಬ ಅಂತರರಾಷ್ಟ್ರೀಯ ಶಾಂತಿ ಕಚೇರಿಯನ್ನು ಸ್ಥಾಪಿಸಿದ ಇವರಿಗೆ 1902 ವರ್ಷದ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

1859: ಸ್ವೀಡನ್ನಿನ ಭೌತ ಮತ್ತು ರಸಾಯನಶಾಸ್ತ್ರ ತಜ್ಞರಾದ ಸ್ವಾಂಟೆ ಆಗಸ್ಟ್ ಆರ್ಹೆನಿಯಸ್ ಅವರು ವಿಲ್ಕ್ ಕ್ಯಾಸಲ್ ಎಂಬಲ್ಲಿ ಜನಿಸಿದರು. ಸ್ವೀಡಿಷ್ ಭೌತ ರಾಸಾಯನಿಕ ತಜ್ಞರಾದ ಈತ ‘ಗ್ರೀನ್ ಹೌಸ್ ಎಫೆಕ್ಟ್’ ಅಂದರೆ ಕಾರ್ಬನ್ ಡೈ ಆಕ್ಸೈಡ್ನಿಂದ ವಾತಾವರಣದ ಬಿಸಿ ಹೆಚ್ಚುವುದನ್ನು ಮೊದಲ ಬಾರಿಗೆ ಗುರುತಿಸಿದರು. 1903ರಲ್ಲಿ ರಸಾಯನ ಶಾಸ್ತ್ರದಲ್ಲಿ ನೊಬೆಲ್ ವಿಜ್ಞಾನ ಪುರಸ್ಕಾರ ಪಡೆದ ಇವರು, ಸ್ವೀಡನ್ನಿನ ಪ್ರಪ್ರಥಮ ನೊಬೆಲ್ ಪುರಸ್ಕೃತರೆನಿಸಿದರು.

1901: ಭಾರತೀಯ ಅಮೆರಿಕನ್ ಗಣಿತಜ್ಞ ಮತ್ತು ಸಂಖ್ಯಾಶಾಸ್ತ್ರಜ್ಞ ರಾಜ್ ಚಂದ್ರ ಬೋಸ್ ಅವರು ಕೋಲ್ಕತ್ತದಲ್ಲಿ ಜನಿಸಿದರು. ಇವರ ಡಿಸೈನ್ ಥಿಯರಿ. ಫೈನೈಟ್ ಜಾಮೆಟ್ರಿ ಮತ್ತು ಥಿಯರಿ ಆಫ್ ಎರರ್ ಕರೆಕ್ಟಿಂಗ್ ಕೋಡ್ಸ್ ಬಹುಜನಪ್ರಿಯಗೊಂಡಿವೆ. ಇವುಗಳಲ್ಲಿ ಬಿ.ಸಿ.ಹೆಚ್ ಕೋಡ್ಸ್ ಎಂಬುದು ಇವರ ‘ಬೋಸ್’ ಹೆಸರನ್ನು ತನ್ನದಾಗಿಸಿಕೊಂಡು ಇವರಿಗೆ ಗೌರವ ಸಲ್ಲಿಸಿದೆ.

1906: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕರಾಗಿದ್ದು, ಗುರೂಜಿ ಎಂದೇ ಜನಪ್ರಿಯರಾಗಿದ್ದ ಮಾಧವರಾವ್ ಸದಾಶಿವರಾವ್ ಗೋಲ್ವಲ್ಕರ್ ಅವರು ರಾಮ್ ಟೆಕ್ ಎಂಬಲ್ಲಿ ಜನಿಸಿದರು. ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಭಾರತದಲ್ಲಿ ಬಲಶಾಲಿಯಾಗಿ ಕಟ್ಟಿದರು.

1930: ಸಂಗೀತ, ನೃತ್ಯ ಮತ್ತು ಸಂಸ್ಕೃತಿ ಪ್ರಧಾನ ಕಥಾನಕಗಳನ್ನು ಚಲನಚಿತ್ರಗಳಲ್ಲಿ ಪ್ರತಿಬಿಂಬಿಸಿ ಪ್ರಸಿದ್ಧರಾದ ಕೆ. ವಿಶ್ವನಾಥ್ ಅವರು ಈಗಿನ ಆಂಧ್ರಪ್ರದೇಶಕ್ಕೆ ಸೇರಿದ ರೇಪಲ್ಲೇ ಎಂಬಲ್ಲಿ ಜನಿಸಿದರು. ಐದು ರಾಷ್ಟ್ರ ಪ್ರಶಸ್ತಿಗಳು, ಆರು ಆಂಧ್ರಪ್ರದೇಶದ ನಂದಿ ಪ್ರಶಸ್ತಿಗಳು, ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ.

1941: ಅಮೆರಿಕದ ಭೌತವಿಜ್ಞಾನಿ ಡೇವಿಡ್ ಗ್ರಾಸ್ ವಾಷಿಂಗ್ಟನ್ ನಗರದಲ್ಲಿ ಜನಿಸಿದರು. ‘ಅಸಿಂಟೋಟಿಕ್ ಫ್ರೀಡಮ್’ ಕುರಿತಾದ ಸಂಶೋಧನೆಗಾಗಿ ಇವರಿಗೆ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿದೆ.

1943: ಇಂಗ್ಲಿಷ್ ಜೈವಿಕ ವಿಜ್ಞಾನಿ ಟಿಮ್ ಹಂಟ್ ಚೆಶೈರ್ ಬಳಿಯ ನೆಸ್ಟನ್ ಎಂಬಲ್ಲಿ ಜನಿಸಿದರು. ‘ಪ್ರೋಟೀನ್ ಮಾಲೆಕ್ಯುಲ್ಸ್ ಥಟ್ ಕಾಂಟ್ರೋಲ್ ದಿ ಡಿವಿಷನ್ ಆಫ್ ಸೆಲ್ಸ್’ ಸಂಶೋಧನೆಗಾಗಿ ಇವರಿಗೆ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತು.

1956: ಅಮೆರಿಕದ ಜೀವವಿಜ್ಞಾನಿ ರಾಡೆರಿಕ್ ಮೆಕಿನ್ನನ್ ಅವರು ಮೆಸಾಚುಸೆಟ್ಸ್ ಪ್ರಾಂತ್ಯದ ಬರ್ಲಿಂಗ್ ಟನ್ ಎಂಬಲ್ಲಿ ಜನಿಸಿದರು. ‘ಅಯಾನ್ ಚಾನೆಲ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 2003 ವರ್ಷದ ನೊಬೆಲ್ ಪುರಸ್ಕಾರ ಸಂದಿತು.

1915: ಸ್ವಾತಂತ್ರ್ಯಪೂರ್ವ ಭಾರತದ ಮಹಾನ್ ರಾಜಕೀಯ ನಾಯಕರೂ ಮತ್ತು ಸಮಾಜ ಸುಧಾರಕರೂ ಆದ ಗೋಪಾಲಕೃಷ್ಣ ಗೋಖಲೆಯವರು 48ನೆಯ ವಯಸ್ಸಿನಲ್ಲಿ ಮುಂಬೈನಲ್ಲಿ ಜನಿಸಿದರು. “ಅಹಿಂಸೆ ಮತ್ತು ಅಸ್ತಿತ್ವದಲ್ಲಿರುವ ಸರ್ಕಾರಿ ಸಂಸ್ಥೆಗಳ ಆಡಳಿತದಲ್ಲಿ ಮೌಲ್ಯಯುತ ಕಾರ್ಯನಿರ್ವಹಣಾ ವಿಧಾನದ ಅನುಸರಣೆ”ಗಳನ್ನು ಪ್ರತಿಪಾದಿಸಿದ ಇವರು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪಿಸಿದರು.

1951: ಫ್ರೆಂಚ್ ಕಾದಂಬರಿಕಾರ, ಪ್ರಬಂಧಕಾರ ಮತ್ತು ನಾಟಕಕಾರ ಅಂಡ್ರೆ ಗೈಡ್ ಪ್ಯಾರಿಸ್ ನಗರದಲ್ಲಿ ನಿಧನರಾದರು. ಇವರಿಗೆ 1947ರ ವರ್ಷದಲ್ಲಿ ನೊಬೆಲ್ ಸಾಹಿತ್ಯಕ ಪುರಸ್ಕಾರ ಸಂದಿತ್ತು.

1952: ನಾರ್ವೆ ದೇಶದ ಕಾದಂಬರಿಕಾರ, ಕವಿ, ನಾಟಕಕಾರ ಕ್ನಟ್ ಹ್ಯಾಮ್ಸನ್ ಅವರು ನೊರ್ಹೋಮ್ ಬಳಿಯ ಗ್ರಿಮ್ ಸ್ಟ್ಯಾಡ್ ಎಂಬಲ್ಲಿ ನಿಧನರಾದರು. ಇವರಿಗೆ 1920ರ ವರ್ಷದಲ್ಲಿ ನೊಬೆಲ್ ಸಾಹಿತ್ಯಕ ಪುರಸ್ಕಾರ ಸಂದಿತ್ತು.

1956: ಭಾರತೀಯ ಸ್ವಾತಂತ್ರ್ಯಯೋಧರೂ, ಪ್ರಜಾ ಸೋಷಿಯಲಿಸ್ಟ್ ಪಕ್ಷದ ಅಧ್ಯಕ್ಷರೂ ಆದ ಆಚಾರ್ಯ ನರೇಂದ್ರ ದೇವ್ ನಿಧನರಾದರು.

1988: ಫ್ರೆಂಚ್ ಅಮೆರಿಕನ್ ವಿಜ್ಞಾನಿ ಅಂಡ್ರೆ ಫ್ರೆಡ್ರಿಕ್ ಕೋರ್ನಾಂಡ್ ಅವರು ಮಸಾಚುಸೆಟ್ಸ್ ಪ್ರದೇಶದ ಗ್ರೇಟ್ ಬ್ಯಾರಿಂಗ್ ಟನ್ ಎಂಬಲ್ಲಿ ನಿಧನರಾದರು. ಕಾರ್ಡಿಯಾಕ್ ಕ್ಯಾಥೀಟರೈಸೇಶನ್ ಸಂಶೋಧನೆಗಾಗಿ ಇವರಿಗೆ 1956ರಲ್ಲಿ ನೊಬೆಲ್ ವೈದ್ಯಕೀಯ ಶಾಸ್ತ್ರದ ಪುರಸ್ಕಾರ ಸಂದಿತ್ತು.

2007: ಇಂಗ್ಲಿಷ್ ಕೆನಡಾ ನೃತ್ಯ ಕಲಾವಿದೆ ಮತ್ತು ಸಂಯೋಜಕಿ ಸೇಲಿಯಾ ಫ್ರಾಂಕಾ ಒಟ್ಟಾವಾ ನಗರದಲ್ಲಿ ನಿಧನರಾದರು. ಇವರು ನ್ಯಾಷನಲ್ ಬ್ಯಾಲೆಟ್ ಆಫ್ ಕೆನಡಾ ಸ್ಥಾಪಿಸಿದರು.

2013: ಅಮೆರಿಕದ ಭೌತವಿಜ್ಞಾನಿ ರಾಬರ್ಟ್ ಕೊಲೆಮನ್ ರಿಚರ್ಡ್ ಸನ್ ಅವರು ನ್ಯೂಯಾರ್ಕಿನ ಇತಾಕಾ ಎಂಬಲ್ಲಿ ನಿಧನರಾದರು. ಇವರಿಗೆ 1996 ವರ್ಷದಲ್ಲಿ ಸೂಪರ್ ಫ್ಲೂಯಿಡಿಟಿ ಇನ್ ಹೀಲಿಯಂ-3 ಸಂಶೋಧನೆಗಾಗಿ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತು.