Categories
e-ದಿನ

ಫೆಬ್ರವರಿ-21

ಅಂತರರಾಷ್ಟ್ರೀಯ ಮಾತೃಭಾಷಾ ದಿನ

ಸಾಂಸ್ಕೃತಿಕ ವೈವಿಧ್ಯತೆ ಮತ್ತು ಬಹುಭಾಷೆಗಳ ಅಸ್ತಿತ್ವದ ಕುರಿತಾದ ತಿಳುವಳಿಕೆಗಳನ್ನು ಮನದಟ್ಟು ಮಾಡಿಕೊಡಲು ಫೆಬ್ರವರಿ 21ದಿನವನ್ನು ಅಂತರರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಯುನೆಸ್ಕೋ ಸಂಸ್ಥೆ ಈ ಕುರಿತಾದ ಘೋಷಣೆಯನ್ನು 1999ರ ವರ್ಷದಲ್ಲಿ ಮಾಡಿತು. ಇದನ್ನು 2008ರ ವರ್ಷದ ತನ್ನ ಜನರಲ್ ಅಸೆಂಬ್ಲಿಯಲ್ಲಿ ವಿಶ್ವಸಂಸ್ಥೆಯು ಅನುಮೋದಿಸಿತು.

ಪ್ರಮುಖಘಟನಾವಳಿಗಳು:

1245: ಫಿನ್ಲ್ಯಾಂಡಿನ ಮೊದಲ ಗೊತ್ತಿರುವ ಬಿಷಪ್ ಆದ ಥಾಮಸ್ ಎಂಬಾತ ಹಿಂಸಾತ್ಮಕವಾಗಿ ನಡೆದುಕೊಂಡು, ನಕಲಿ ಸಹಿ ಮಾಡಿದ್ದಾಗಿ ಅರಿಕೆ ಮಾಡಿಕೊಂಡು ರಾಜಿನಾಮೆ ಸಲ್ಲಿಸಿದರು.

1804: ಬ್ರಿಟಿಷ್ ತಂತ್ರಜ್ಞ ರಿಚರ್ಡ್ ಟ್ರಿವಿತಿಕ್ ಎಂಬಾತ ಪೆನ್-ವೈ-ಡಾರೆನ್ ವರ್ಕ್ಸ್ ಎಂಬಲ್ಲಿ ಹಳಿಗಳ ಮೇಲೆ ಉಗಿಯಂತ್ರವನ್ನು ಓಡಿಸಿದರು.

1842: ಅಮೆರಿಕದ ಜಾನ್ ಗ್ರೀನಫ್ ಅವರು ಹೊಲಿಗೆ ಯಂತ್ರಕ್ಕೆ ಪೇಟೆಂಟ್ ಪಡೆದರು.

1848: ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಏಂಜೆಲ್ಸ್ ಅವರು ‘ದಿ ಕಮ್ಯೂನಿಸ್ಟ್ ಮ್ಯಾನಿಫೆಸ್ಟೋ’ ರಾಜಕೀಯ ಕರಪತ್ರ ಪ್ರಕಟಿಸಿದರು.

1878: ಮೊಟ್ಟ ಮೊದಲ ಟೆಲಿಫೋನ್ ಡೈರೆಕ್ಟರಿಯನ್ನು ಕನೆಕ್ಟಿಕಟ್ ಪ್ರಾಂತ್ಯದ ನ್ಯೂ ಹ್ಯಾವೆನ್ ಎಂಬಲ್ಲಿ ವಿತರಿಸಲಾಯಿತು.

1885: ಹೊಸದಾಗಿ ಪೂರ್ಣಗೊಳಿಸಲಾದ ವಾಷಿಂಗ್ಟನ್ ಮಾನ್ಯುಮೆಂಟ್ ಅನ್ನು ಸಮರ್ಪಿಸಲಾಯಿತು.

1896: ಆಸ್ಟ್ರೇಲಿಯಾದಲ್ಲಿ ಬೆಳೆಯಾದ ಬಾಬ್ ಫಿಟ್ಜ್ ಸಿಮ್ಮನ್ಸ್ ಎಂಬಾತ ಪೀಟರ್ ಮಹೇರ್ ಎಂಬ ಐರಿಷ್ ಸ್ಪರ್ಧಿಯನ್ನು ಸೋಲಿಸಿ ವಿಶ್ವ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಆದರು.

1925: ‘ದಿ ನೂಯಾರ್ಕರ್’ ಪತ್ರಿಕೆ ತನ್ನ ಪ್ರಥಮ ಸಂಚಿಕೆಯನ್ನು ಪ್ರಕಟಿಸಿತು.

1947: ನ್ಯೂಯಾರ್ಕ್ ನಗರದ ಆಪ್ಟಿಕಲ್ ಸೊಸೈಟಿ ಆಫ್ ಅಮೆರಿಕದಲ್ಲಿ, ಎಡ್ವಿನ್ ಲ್ಯಾಂಡ್ ಅವರು ಮೊಟ್ಟ ಮೊದಲ ‘ಪೋಲರೈಡ್ ಲ್ಯಾಂಡ್ ಕ್ಯಾಮರಾ’ದ ಪ್ರಾತ್ಯಕ್ಷಿಕೆ ನೀಡಿದರು. ಈ ಕ್ಯಾಮರಾವು 60 ಸೆಕೆಂಡುಗಳಲ್ಲಿ ಕಪ್ಪು ಬಿಳುಪು ಛಾಯಾಚಿತ್ರ ತೆಗೆದುಕೊಡುವ ಸಾಮರ್ಥ್ಯ ಹೊಂದಿತ್ತು.

1952: ವಿನ್ಸ್ಟನ್ ಚರ್ಚಿಲ್ ಅವರ ನೇತೃತ್ವದ ಬ್ರಿಟಿಷ್ ಸರ್ಕಾರವು ಜನರಿಗೆ ಮುಕ್ತ ಸ್ವಾತಂತ್ರ್ಯ ನೀಡುವುದಕ್ಕಾಗಿ ಗುರುತಿನ ಚೀಟಿಗಳನ್ನು ರದ್ದುಗೊಳಿಸಿತು.

1952: ಪಶ್ಚಿಮ ಪಾಕಿಸ್ತಾನದ ಡಾಕ್ಕಾ ವಿಶ್ವವಿದ್ಯಾಲಯದಲ್ಲಿ ಬೆಂಗಾಲಿ ಭಾಷಾ ಆಂದೋಲನ ನಡೆದು ವಿದ್ಯಾರ್ಥಿಗಳು ಚಳುವಳಿ ನಡೆಸಿದರು.

1972: ಸೋವಿಯತ್ ಯೂನಿಯನ್ನಿನ ಮಾನವರಹಿತ ಬಾಹ್ಯಾಕಾಶ ನೌಕೆ ‘ಲೂನಾ 20’ ಚಂದ್ರನ ಮೇಲಿಳಿಯಿತು.

1995: ಅಮೆರಿಕದ ಸ್ಟೀವ್ ಫಾಸೆಟ್ ಅವರು ದಕ್ಷಿಣಾ ಕೊರಿಯಾದಿಂದ ಬಲೂನಿನಲ್ಲಿ ಪಯಣಿಸಿ ಕೆನಡಾದ ಸಾಸ್ಕಟ್ ಚೆವನ್ ಎಂಬಲ್ಲಿ ಇಳಿದರು. ಹೀಗೆ ಅವರು, ಏಕಾಂಗಿಯಾಗಿ ಬಲೂನಿನಲ್ಲಿ ಪೆಸಿಫಿಕ್ ಸಾಗರದ ಮೇಲೆ ಪಯಣಿಸಿದ ಪ್ರಥಮರೆನಿಸಿದ್ದಾರೆ.

2006: ರಾಷ್ಟ್ರದ್ಯಂತ ಕುತೂಹಲ ಕೆರಳಿಸಿದ್ದ, ನೂರಾರು ಜನರ ಸಮ್ಮುಖದಲ್ಲಿ ನಡೆದಿದ್ದ ರೂಪದರ್ಶಿ ಜೆಸ್ಸಿಕಾಲಾಲ್ ಕೊಲೆ ಪ್ರಕರಣದ ಮುಖ್ಯ ಆರೋಪಿ ಮನುಶರ್ಮಾ ಸೇರಿದಂತೆ ಎಲ್ಲಾ ಒಂಬತ್ತು ಆರೋಪಿಗಳನ್ನು ದೆಹಲಿ ನ್ಯಾಯಾಲಯವು ಖುಲಾಸೆ ಮಾಡಿತು.

2008: ಬಾಹ್ಯಾಕಾಶ ವಿಜ್ಞಾನಿ ಪ್ರೊ. ಯು.ಆರ್.ರಾವ್ ಅವರಿಗೆ ಅಮೆರಿಕದ ವಿಶ್ವ ಕಲೆ ಮತ್ತು ವಿಜ್ಞಾನ ಅಕಾಡೆಮಿಯು ಫೆಲೋ ಗೌರವ ನೀಡಿತು.

2008: ಅಮೆರಿಕ ದೇಶವು 2006 ವರ್ಷದಲ್ಲಿ ತನ್ನ ಬೇಹುಗಾರಿಕಾ ಅವಶ್ಯಕತೆಗಾಗಿ ಬಾಹ್ಯಾಕಾಶಕ್ಕೆ ಕಳುಹಿಸಿ, ಸಂಪರ್ಕ ಕಳೆದುಕೊಂಡು ನಿರುಪಯೋಗಿಯಾಗಿದ್ದ ತನ್ನ ಉಪಗ್ರಹವೊಂದನ್ನು, ಅದು ವಿರೋಧಿ ಶಕ್ತಿಗಳ ಹಿಡಿತಕ್ಕೆ ಸಿಗಬಾರದೆಂಬ ಉದ್ದೇಶದಿಂದ ಕ್ಷಿಪಣಿಯ ಮೂಲಕವಾಗಿ ಹೊಡೆದುರುಳಿಸಿತು.

2009: ಅತ್ಯಂತ ಕಿರಿಯ ವಯಸ್ಸಿನಲ್ಲಿ ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿ ಲಿಮ್ಕಾ ದಾಖಲೆಗೆ ಪಾತ್ರಳಾದ 7 ವರ್ಷದ ಸುಷ್ಮಾವರ್ಮಾ ಲಖನೌನ ತನ್ನ ಸೈಂಟ್ ಮೀರಾ ಇಂಟರ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಲಿಮ್ಕಾ ಪ್ರಮಾಣ ಪತ್ರ ಪಡೆದರು.

2009: ಡಾ. ಶಿವರಾಮ ಕಾರಂತರು ರೂಪಿಸಿದ ‘ಯಕ್ಷರಂಗ’ದ ಹೊಸ ರೀತಿಯ ನೃತ್ಯ-ನಾಟಕ ಪ್ರಕಾರವಾದ ‘ಯಕ್ಷ ರಂಗ’ದ ಉಚಿತ ಪ್ರದರ್ಶನಗಳನ್ನು ಯಾವುದೇ ಹವ್ಯಾಸಿ ತಂಡವಾಗಲೀ, ಸಂಸ್ಥೆಯಾಗಲೀ ನೀಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ‘ಯಕ್ಷ ರಂಗ’ದ ಉಚಿತ ಪ್ರದರ್ಶನ ನೀಡುವುದು ಕೃತಿಸ್ವಾಮ್ಯ ಹಕ್ಕನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ ಎಂದು ಎಸ್.ಬಿ.ಸಿನ್ಹಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ಹೇಳಿತು.

ಪ್ರಮುಖಜನನ/ಮರಣ:

1822: ರಿಚರ್ಡ್ ಸೌತ್ ವೆಲ್ ಬೌರ್ಕೆ ಐರ್ಲ್ಯಾಂಡಿನ ಡಬ್ಲಿನ್ ಎಂಬಲ್ಲಿ ಜನಿಸಿದ. ಐರಿಷ್ ರಾಜಕಾರಣಿ ಹಾಗೂ ಮೇಯೋವಿನ ಅಧಿಕಾರಿಯಾಗಿದ್ದ ಈತ ಭಾರತದ ವೈಸ್ ರಾಯ್ ಆಗಿದ್ದ ಕಾಲದಲ್ಲಿ ಮೊತ್ತ ಮೊದಲ ಬಾರಿಗೆ ಜನಗಣತಿ ನಡೆಸಿದ. ಅಜ್ಮೀರದಲ್ಲಿ ಮೇಯೊ ಕಾಲೇಜ್ ಸ್ಥಾಪಿಸಿದ. ಕೃಷಿ ಮತ್ತು ವಾಣಿಜ್ಯಕ್ಕಾಗಿ ಪ್ರತ್ಯೇಕ ಇಲಾಖೆಗಳನ್ನು ಆರಂಭಿಸಿದ.

1878: ಶ್ರೀ ಅರವಿಂದರ ಆಧ್ಯಾತ್ಮ ಸಹಕಾರಿಯಾಗಿ ‘ಮದರ್’ ಎಂದು ಪ್ರಸಿದ್ಧರಾದ ಮೀರಾ ಅಲ್ಫಾಸ ಅವರು ಪ್ಯಾರಿಸ್ ನಗರದಲ್ಲಿ ಜನಿಸಿದರು. ಪಾಶ್ಚಾತ್ಯ ಸಿರಿವಂತ ಕುಟುಂಬದಲ್ಲಿ ವೈಭೋಗದ ಜೀವನ ನಡೆಸುತ್ತಿದ್ದ ದಂಪತಿಗಳ ಪುತ್ರಿಯಾಗಿದ್ದರೂ ಬಾಲ್ಯದಿಂದಲೂ ಕೆಲವು ಅಲೌಕಿಕ ಗುಣ ಸಂಪನ್ನರಾಗಿದ್ದ ಮೀರಾ ಅಲ್ಫಾಸಾ ಅವರು ತಮ್ಮ 36ನೆಯ ವಯಸ್ಸಿನಲ್ಲಿ ಮೊದಲ ಬಾರಿಗೆ ಪಾಂಡಿಚೇರಿಯ ಅರವಿಂದೋ ಆಶ್ರಮಕ್ಕೆ ಭೇಟಿ ಇತ್ತರು. ಮುಂದೆ ಇವರು ಅರವಿಂದರ ಆಧ್ಯಾತ್ಮಿಕ ಕಾರ್ಯವನ್ನು ಮುಂದುವರೆಸಿ ವಿಸ್ತರಿಸಿದರು.

1894: ಭಾರತೀಯ ವಿಜ್ಞಾನಿಗಳಾದ ಡಾ. ಶಾಂತಿ ಸ್ವರೂಪ್ ಭಟ್ನಾಗರ್ ಅವರು ಈಗ ಪಾಕಿಸ್ತಾನದ ಭಾಗವಾಗಿರುವ ಭೇರ ಎಂಬಲ್ಲಿ ಜನಿಸಿದರು. ಅನೇಕ ವೈಜ್ಞಾನಿಕ ಸಂಶೋಧನೆಗಳಿಗೆ ಪ್ರಸಿದ್ಧರಾಗಿದ್ದ ಭಟ್ನಾಗರ್ ಅವರು ಹಲವಾರು ವೈಜ್ಞಾನಿಕ ಸಂಶೋಧನಾಲಯಗಳನ್ನು ಸ್ಥಾಪಿಸಿ ಸ್ವತಂತ್ರ ಭಾರತದ ‘ವೈಜ್ಞಾನಿಕ ಶಿಲ್ಪಿ’ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಸಿ.ಎಸ್.ಐ.ಆರ್ ಸಂಸ್ಥೆಯ ಪ್ರಥಮ ಡೈರೆಕ್ಟರ್ ಜನರಲ್ ಹುದ್ದೆಯನ್ನು ನಿರ್ವಹಿಸಿದ್ದರಲ್ಲದೆ ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ನಿನ ಪ್ರಥಮ ಚೇರ್ಮನ್ ಆಗಿದ್ದರು. ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಶ್ರೇಷ್ಠ ಸಾಧಕರಿಗೆ ಪ್ರತಿಷ್ಟಿತ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ನೀಡಲಾಗುತ್ತಿದೆ.

1895: ಡ್ಯಾನಿಶ್ ವಿಜ್ಞಾನಿ ಹೆನ್ರಿಕ್ ಡ್ಯಾಮ್ ಅವರು ಕೋಪನ್ ಹ್ಯಾಗನ್ ಎಂಬಲ್ಲಿ ಜನಿಸಿದರು. ಕಾಗ್ಯುಲೆಶನ್ ವಿಟಮಿನ್ ಕುರಿತಾದ ಸಂಶೋಧನೆಗಾಗಿ ಇವರಿಗೆ 1943 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1896: ಆಧುನಿಕ ಹಿಂದೀ ಕವಿಗಳಲ್ಲಿ ಪ್ರಮುಖರಾದ ದೀನಬಂಧು ನಿರಾಲ ಅವರು ಬಂಗಾಳದ ಮಿದಾನ್ಪುರ್ ಎಂಬಲ್ಲಿ ಜನಿಸಿದರು.

1924: ಜಿಂಬಾಬ್ವೆಯ ಪ್ರಥಮ ಪ್ರಧಾನಿ ಮತ್ತು ಎರಡನೇ ರಾಷ್ಟ್ರಾಧ್ಯಕ್ಷರಾದ ರಾಬರ್ಟ್ ಮುಗಾಬೆ ದಕ್ಷಿಣ ರೊಡೇಶಿಯಾದ ಕುಟಾಮಾ ಎಂಬಲ್ಲಿ ಜನಿಸಿದರು. ಇವರು ಜಿಂಬಾಬ್ವೆಯ ಪ್ರಥಮ ಪ್ರಧಾನಿಯಾಗಿ 1980ರಿಂದ 1987ರ ಅವಧಿಯಲ್ಲಿ ಆಡಳಿತ ನಡೆಸಿದರು.

1976: ಪ್ರಸಿದ್ಧ ಚಲನಚಿತ್ರ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಮೈಸೂರಿನಲ್ಲಿ ಜನಿಸಿದರು. ಕನ್ನಡಿಗರಾದ ಇವರು ಬಹುತೇಕ ಭಾರತೀಯ ಭಾಷೆಗಳಲ್ಲಿ ಹಾಡಿ ನಾಡಿನ ಪ್ರಮುಖ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದಾರೆ. ಆಸ್ಕರ್ ಪ್ರಶಸ್ತಿ ಗಳಿಸಿದ ‘ಜೈ ಹೋ’ ಗೀತೆ ಹಾಡಿದ ನಾಲ್ವರು ಪ್ರಮುಖರಲ್ಲಿ ಇವರೂ ಒಬ್ಬರು. ಹಲವು ಭಾಷೆಗಳ ಗಾಯನಕ್ಕೆ ಇವರಿಗೆ ಹಲವಾರು ಪ್ರಶಸ್ತಿಗಳು ಸಂದಿವೆ.

1926: ಡಚ್ ವಿಜ್ಞಾನಿ ಹೀಕ್ ಕಾಮೆರ್ ಲಿಂಗ್ ಓನ್ಸ್ ಅವರು ಲೀಡನ್ ನಗರದಲ್ಲಿ ನಿಧನರಾದರು. ಇವರಿಗೆ ‘ಹ್ಯಾಂಪ್ಸನ್ ಲಿಂಡೆ’ ಸಂಶೋಧನೆಗೆ 1913 ವರ್ಷದ ನೊಬೆಲ್ ಭೌತ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1941: ಕೆನಡಾದ ವೈದ್ಯಶಾಸ್ತ್ರಜ್ಞ ಫ್ರೆಡ್ರಿಕ್ ಬ್ಯಾಂಟಿಂಗ್ ಅವರು ಡೊಮಿನಿಯನ್ ಆಫ್ ನ್ಯೂಫೌಂಡ್ ಲ್ಯಾಂಡ್ ದೇಶದ ಮುಸ್ಗ್ರೇವ್ ಹಾರ್ಬರ್ ಬಳಿಯಲ್ಲಿ ನಿಧನರಾದರು. ‘ಇನ್ಸುಲಿನ್ ’ ಸಂಶೋಧಿಸಿದವರಲ್ಲಿ ಒಬ್ಬರಾದ ಇವರಿಗೆ 1923 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1968: ಆಸ್ಟ್ರೇಲಿಯಾದ ವೈದ್ಯಶಾಸ್ತ್ರಜ್ಞ ಹೊವರ್ಡ್ ಫ್ಲೋರಿ ಅವರು ಇಂಗ್ಲೆಂಡಿನ ಆಕ್ಸ್’ಫರ್ಡ್ನಲ್ಲಿ ನಿಧನರಾದರು. ‘ಪೆನ್ಸಿಲಿನ್ ’ ಸಂಶೋಧಿಸಿದವರಲ್ಲಿ ಒಬ್ಬರಾದ ಇವರಿಗೆ 1945 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1984: ನೊಬೆಲ್ ಪುರಸ್ಕೃತ ರಷ್ಯನ್ ಸಾಹಿತಿ ಮಿಖೈಲ್ ಶೊಲೋಖೊವ್ ಅವರು ಸೋವಿಯತ್ ಯೂನಿಯನ್ನಿನ ವ್ಯೋಷೆನ್ಕಾಯಾ ಎಂಬಲ್ಲಿ ನಿಧನರಾದರು.

1999: ಅಮೆರಿಕದ ಮಹಿಳಾ ಜೈವಿಕ ವಿಜ್ಞಾನಿ ಗೆರ್ಟ್ರೂಡ್ ಬಿ. ಎಲಿಯಾನ್ ಅವರು, ನಾರ್ತ್ ಕೆರೋಲಿನಾದ ಚಾಪೆಲ್ ಹಿಲ್ ಎಂಬಲ್ಲಿ ನಿಧನರಾದರು. ಈಕೆ ಹಲವಾರು ನವೀನ ವಿಧಾನಗಳಲ್ಲಿ ಹೊಸ ಹೊಸ ಔಷಧಗಳನ್ನು ಕಂಡುಹಿಡಿದಿದ್ದು, ಇವುಗಳಲ್ಲಿ ಏಡ್ಸ್ ರೋಗಕ್ಕೆ ಸಲ್ಲುವ ‘AZT’, ಆರ್ಗನ್ ಟ್ರಾನ್ಸ್ ಪ್ಲಾಂಟ್ಗಳಲ್ಲಿ ಉಪಯೋಗಿಸುವ ‘ಅಜತಿಯೋಪ್ರೈನ್’, ‘ಇಮ್ಯುನೋ ಸಪ್ರೆಸಿವ್ ಡ್ರಗ್ಸ್’ ಮುಂತಾದವು ಪ್ರಮುಖವಾಗಿವೆ. ಇವರಿಗೆ 1988ರ ವರ್ಷದಲ್ಲಿ, ಔಷದ ಕ್ಷೇತ್ರದಲ್ಲಿನ ಮಹತ್ವದ ಸಾಧನೆಗಾಗಿನ ನೊಬೆಲ್ ಪುರಸ್ಕಾರ ಸಂದಿತ್ತು.

2007:  ಕನ್ನಡಪ್ರಭದ ಮುಖ್ಯವರದಿಗಾರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಎಚ್. ಜಿ. ಪಟ್ಟಾಭಿರಾಮ್ ತಮ್ಮ 65ನೇ ವಯಸ್ಸಿನಲ್ಲಿ ನಿಧನರಾದರು. ಅಪರಾಧ ವರದಿಗಾರಿಕೆಗೆ ಅವರು ಖ್ಯಾತರಾಗಿದ್ದರು.