ಘಟನೆಗಳು:

‘ಎರಡು ಪ್ರಮುಖ ವಿಶ್ವ ವ್ಯವಸ್ಥೆ’ಗಳ ಕುರಿತಾದ ಗೆಲಿಲಿಯೋ ಅವರ ಚಿಂತನೆ ಪ್ರಕಟಗೊಂಡಿತು.
ಜರ್ಮನಿ, ನೆದರ್ಲ್ಯಾಂಡ್ ಡೆನ್ಮಾರ್ಕ್ ಒಳಗೊಂಡ ಫ್ರಿಷಿಯನ್ ಸಾಗರ ತೀರದಲ್ಲಿ ಉಂಟಾದ ಸೈಂಟ್ ಪೀಟರ್ ಪ್ರವಾಹದಲ್ಲಿ 15,000 ಜನ ಮುಳುಗಡೆಗೊಂಡರು.
ಸ್ಪೇನ್ ದೇಶದ ಆಡಮ್ಸ್, ಓನಿಸ್ ಒಪ್ಪಂದದ ಮೂಲಕ ಫ್ಲೋರಿಡಾವನ್ನು ಅಮೆರಿಕಕ್ಕೆ 5 ದಶಲಕ್ಷ ಡಾಲರಿಗೆ ಮಾರಿದ.
ಬ್ರಿಟನ್ನಿನ ಕೆಂಟ್ ಪ್ರದೇಶದ ಟಾನ್ ಬ್ರಿಡ್ಜ್ ಎಂಬಲ್ಲಿನ ‘ಸೆಕ್ಯುರಿಟಾಸ್ ಡಿಪೋ’ದಲ್ಲಿ ಕಡೇ ಪಕ್ಷ ಆರು ಜನ ಕಳ್ಳರ ಗುಂಪು 53 ಮಿಲಿಯನ್ ಪೌಂಡುಗಳ ಬೃಹತ್ ಲೂಟಿ ಮಾಡಿತು.
ಜವಾಹರಲಾಲ್ ನೆಹರು ಉನ್ನತ ವಿಜ್ಞಾನಗಳ ಕೇಂದ್ರದ ಅಧ್ಯಕ್ಷ ಪ್ರೊ. ಸಿ. ಎನ್. ಆರ್. ರಾವ್ ಅವರು ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಡಾಕ್ಟರೇಟ್ ಗೌರವಕ್ಕೆ ಆಯ್ಕೆಯಾದರು.
ಬೆಂಗಳೂರಿನ ನೇಪಥ್ಯ ಕಲಾವಿದ ಅ.ನ. ರಮೇಶ್ ಅವರಿಗೆ ದೆಹಲಿಯ ‘ಚಮನ್ ಲಾಲ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ’ ಸಂದಿತು. ರಮೇಶ್ ಅವರು ಬೆಳಕಿನ ವಿನ್ಯಾಸ, ರಂಗಸಜ್ಜಿಕೆ, ವಸ್ತ್ರವಿನ್ಯಾಸ, ಪ್ರಸಾಧನ ಮೊದಲಾದ ಕ್ಷೇತ್ರಗಳಲ್ಲಿ ನೈಪುಣ್ಯ ಪಡೆದವರಾಗಿದ್ದಾರೆ.
ಜಾತಿ ಭೇದವಿಲ್ಲದೆ ಅನ್ನ ಹಾಗೂ ಅಕ್ಷರ ದಾಸೋಹದ ಮೂಲಕ ಸಮಾಜ ಸೇವೆ ಮಾಡುತ್ತಿರುವ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರನ್ನು, ಕರ್ನಾಟಕ ಸರ್ಕಾರವು 2007ನೇ ಸಾಲಿನ `ಕರ್ನಾಟಕ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಿತು.
ನೂರು ಜನರನ್ನು ಕೊಂಡೊಯ್ಯುತ್ತಿದ್ದ ದೋಣಿ ಪದ್ಮಾ ನದಿಯಲ್ಲಿ ಮುಳುಗಿ 70 ಜನ ಸಾವಿಗೀಡಾದರು.

ಜನನ:
‘ರಷಿ’ ಎಂಬ ಹೆಸರಿನಿಂದ ಪ್ರಖ್ಯಾತರಾದ ಫ್ರೆಂಚ್ ಬರಹಗಾರ ಮತ್ತು ರಬ್ಬಿ (ಗುರು) ಶ್ಲೋಮೋ ಯಿಟ್ಸ್ ಚಾಕಿ ಅವರು ಫ್ರಾನ್ಸಿನ ಟ್ರೋಯೆಸ್ ಎಂಬಲ್ಲಿ ಜನಿಸಿದರು.
ಅಮೆರಿಕನ್ ಜನರಲ್ ಜಾರ್ಜ್ ವಾಷಿಂಗ್ಟನ್ ಜನಿಸಿದರು. ಮುಂದೆ ಇವರೇ ಅಮೆರಿಕಾದ ಪ್ರಥಮ ಅಧ್ಯಕ್ಷರಾದರು.
ಸ್ಕೌಟ್ ಚಳುವಳಿಯ ಪ್ರವರ್ತಕರಾದ ಬಾಡೆನ್ ಪೊವೆಲ್ ಲಂಡನ್ನಿನಲ್ಲಿ ಜನಿಸಿದರು. ರಾಬರ್ಟ್ ಬಾಡೆನ್ ಪೊವೆಲ್ ಬ್ರಿಟಿಷ್ ಸೈನ್ಯಾಧಿಕಾರಿಯಾಗಿ ಭಾರತ ಮತ್ತು ಆಫ್ರಿಕಾಗಳಲ್ಲಿ ಸೇವೆ ಸಲ್ಲಿಸಿದ್ದರು. ತಮ್ಮ ಮಿಲಿಟರಿ ದಿನಗಳ ಕುರಿತಾಗಿ ಹಲವಾರು ಪುಸ್ತಕಗಳನ್ನು ಬರೆದಿದ್ದ ರಾಬರ್ಟ್ ಬಾಡೆನ್ ಪೊವೆಲ್ ಅವರು ಯುವ ಪೀಳಿಗೆಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಳ ಕುರಿತು ಅಪಾರ ಚಿಂತನೆ ನಡೆಸಿ ಆ ಚಿಂತನೆಗಳನ್ನು ಪ್ರಾಯೋಗಿಕವಾಗಿ ಬ್ರೌನ್ ಸೀ ಎಂಬಲ್ಲಿ ಸ್ಥಳೀಯ ಹುಡುಗರ ಕ್ಯಾಂಪ್ ಒಂದರ ಮೂಲಕ 1907ರ ವರ್ಷದಲ್ಲಿ ಮೊದಲಿಗೆ ಕಾರ್ಯರೂಪಕ್ಕೆ ತಂದರು. ಇದು ಮುಂದೆ ಸ್ಕೌಟ್ ಚಳುವಳಿಯಾಗಿ ವಿಶ್ವದೆಲ್ಲೆಡೆ ಪ್ರವರ್ತನಗೊಳ್ಳುವಲ್ಲಿ ಪ್ರಮುಖ ಹೆಜ್ಜೆಯೆನಿಸಿತು.
ತಮ್ಮ ‘ಕಿರುಗತೆ-ಕಿರುಗವನಗಳು’ ಮೂಲಕ ಹೊಸಸಾಹಿತ್ಯದ ಹರಿಕಾರರಲ್ಲಿ ಒಬ್ಬರೆಂದು ಚಿರಸ್ಮರಣೀಯರಾದ ಪಂಜೆ ಮಂಗೇಶರಾಯರು ಬಂಟವಾಳದಲ್ಲಿ ಜನಿಸಿದರು. ಶಿಕ್ಷಕರಾಗಿದ್ದ ಅವರು ಹಲವಾರು ರೀತಿಗಳಲ್ಲಿ ಬರಹಗಳನ್ನು ಮಾಡಿದ್ದರು. ಅವರು ರಾಯಚೂರು ಸಮ್ಮೇಳನದ ಅಧ್ಯಕ್ಷಭಾಷಣದಲ್ಲಿ “….ನನಗೀಗ ಇರುವುದು ಒಂದೇ ಆಶೆ, ನನ್ನ ಕಡೆಯ ಗಳಿಗೆಯಲ್ಲಿ ನನ್ನ ನಾಲಗೆ ‘ಕೃಷ್ಣ’, ‘ಕೃಷ್ಣ’ ಎಂದು ನುಡಿಯುವಂತೆಯೇ ‘ಕನ್ನಡ’, ‘ಕನ್ನಡ’ ಎಂದೂ ನುಡಿಯುತ್ತಿರಲಿ!’ ಎಂದು ಉದ್ಘರಿಸಿದಾಗ ಸಭೆ ಸ್ತಬ್ದವಾಯಿತೆಂದೂ, ಚೇತರಿಸಿಕೊಳ್ಳಲು ಎರಡು ಗಳಿಗೆ ಬೇಕಾಯಿತೆಂದೂ ಆ ಸಂದರ್ಭವನ್ನು ಡಿ.ವಿ.ಜಿಯವರು ನೆನಪಿಸಿಕೊಂಡಿದ್ದಾರೆ. 1937ರಲ್ಲಿ ಇವರು ನಿಧನರಾದ ಸಂದರ್ಭದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರು “ತುಳುನಾಡಿನ ಕನ್ನಡ ಸಾಹಿತ್ಯದ ವಿಗಡ ದೀಪಸ್ತಂಭವಾರಿತು; ಬೆಳಕು ಬೆಳಕಿಗೆ ಸಾರಿತು” ಎಂದು ಉದ್ಘರಿಸಿದರು.
ಇಟಾಲಿಯನ್ ಅಮೆರಿಕನ್ ವೈದ್ಯವಿಜ್ಞಾನಿ ರೆನಾಲ್ಟೋ ಡುಲ್ಬೆಕ್ಕೋ ಅವರು ಇಟಲಿಯ ಕ್ಯಾಟನ್ಜಾರೋ ಎಂಬಲ್ಲಿ ಜನಿಸಿದರು. ಆನ್ಕೋವೈರಸಸ್ ಕುರಿತಾದ ಸಂಶೋಧನೆ ನಡೆಸಿರುವ ಇವರಿಗೆ 1975 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.
ವಿಶ್ವದಲ್ಲೇ ಅತ್ಯಂತ ಎತ್ತರದ ಮನುಷ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಅಮೆರಿಕದ ರಾಬರ್ಟ್ ಪರ್ಶಿಂಗ್ ವಾಡ್ಲೊ ಅವರು ಇಲಿನಾಯ್ಸ್ ಪ್ರದೇಶದ ಆಲ್ಟನ್ ಎಂಬಲ್ಲಿ ಜನಿಸಿದರು. ಇವರ ಎತ್ತರ 8 ಅಡಿ 11.1 ಅಂಗುಲಗಳು.
ಚಿತ್ರ ಕಲೆಯ ಎಲ್ಲ ಪ್ರಕಾರಗಳಲ್ಲೂ ದುಡಿದ ಕಲಾವಿದ ಅ.ನ. ಸುಬ್ಬರಾಯರು ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಜನಿಸಿದರು. ಸರ್. ಎಂ. ವಿಶ್ವೇಶ್ವರಯ್ಯ ಅವರ ಸಲಹೆಯಂತೆ ಅವರು ಕಟ್ಟಿದ ಕಲಾಮಂದಿರವು ಕಲೆಯ ಜೊತೆಗೆ ಯಕ್ಷಗಾನ, ಸೂತ್ರದ ಬೊಂಬೆಯಾಟ, ಬಯಲಾಟ, ಜಾನಪದ ಇತ್ಯಾದಿ ಎಲ್ಲ ರಂಗಗಳ ಬೆಳವಣಿಗೆಗೂ ದುಡಿಯಿತು.
ಸ್ವಾತಂತ್ರ್ಯ ಹೋರಾಟಗಾರ, ತತ್ವಜ್ಞಾನಿ ಮತ್ತು ಸಮಾಜವಾದಿ ನಾಯಕರಾದ ಇಂದುಲಾಲ್ ಯಾಜ್ಞಿಕ್ ಅವರು ಗುಜರಾತಿನ ಖೇಡ ಬಳಿಯ ನಾಡಿಯಾದ್ ಎಂಬಲ್ಲಿ ಜನಿಸಿದರು. ಅಖಿಲ ಭಾರತ ಕಿಸಾನ್ ಸಭಾದ ನಾಯಕರಾಗಿದ್ದ ಅವರು ಪ್ರತ್ಯೇಕ ಗುಜರಾತಿಗಾಗಿ ‘ಮಹಾ ಗುಜರಾತ್ ಚಳುವಳಿ’ ಆರಂಭಿಸಿ ಯಶಸ್ವಿಯಾದರು. ಇವರು ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಇವರು ಬರಹಗಾರರು ಮತ್ತು ಚಿತ್ರ ತಯಾರಕರೂ ಆಗಿದ್ದರು.
ಅಮೆರಿಕದ ಜೀವವಿಜ್ಞಾನಿ ಜೆ. ಮೈಖೇಲ್ ಬಿಷಪ್ ಅವರು ಪೆನ್ಸಿಲ್ವೆನಿಯಾದಲ್ಲಿ ಜನಿಸಿದರು. ಇಮ್ಮ್ಯೂನಾಲಜಿಸ್ಟ್ ಮತ್ತು ಮೈಕ್ರೋಬಯಾಲಜಿಸ್ಟ್ ಆದ ಇವರ ಸಾಧನೆಗಳಿಗಾಗಿ 1989 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.
ಕನ್ನಡದ ಪ್ರಸಿದ್ಧ ಬರಹಗಾರ್ತಿ ಡಾ. ವೀಣಾ ಶಾಂತೇಶ್ವರ ಅವರು ಧಾರವಾಡದಲ್ಲಿ ಜನಿಸಿದರು. ಇವರ ‘ಕವಲು’ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ಅಜ್ಞೇಯರ ‘ನದೀ ಕೇ ದ್ವೀಪ್’ ಕೃತಿಯ ಕನ್ನಡ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕಾತ್ಯಾಯಿನಿ ಸಮ್ಮಾನ್ ಮುಂತಾದ ಅನೇಕ ಗೌರವಗಳು ಸಂದಿವೆ.
ಪ್ರಸಿದ್ಧ ಮೋಟಾರ್ ರೇಸಿಂಗ್ ಚಾಂಪಿಯನ್ ಅದ ನಿಕಿ ಲೌಡಾ ಅವರು ಆಸ್ಟ್ರಿಯಾದ ವಿಯೆನ್ನಾದಲ್ಲಿ ಜನಿಸಿದರು. ಫಾರ್ಮ್ಯುಲಾ ಒನ್ ಚಾಲಕರಾದ ಇವರು 1975, 1977 ಮತ್ತು 1984ರ ವರ್ಷಗಳಲ್ಲಿ ಎಫ್ 1 ವಿಶ್ವ ಡ್ರೈವರ್ಸ್ ಚಾಂಪಿಯನ್ ಆಗಿದ್ದರು. ಪ್ರಸಕ್ತದಲ್ಲಿ ಇವರು ಫೆರಾರಿ ಮತ್ತು ಮೆಕ್ಲಾರೆನ್ ಎಂಬ ಎರಡೂ ಪ್ರಸಿದ್ಧ ಮಾದರಿಯ ಚಾಲನೆಗಳಲ್ಲೂ ಚಾಂಪಿಯನ್ ಆಗಿರುವ ಏಕೈಕ ಸಾಧಕರಾಗಿದ್ದಾರೆ.

ನಿಧನ:
ತಮ್ಮ ಪತಿ ಮಹಾತ್ಮ ಗಾಂಧಿಯವರೊಂದಿಗೆ ನಿರಂತರವಾಗಿದ್ದು ಭಾರತ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಹೋರಾಟಗಾರ್ತಿಯಾಗಿ, ಸಮಾಜ ಸೇವಕಿಯಾಗಿ ಅನನ್ಯ ಸೇವೆ ಸಲ್ಲಿಸಿದ ಕಸ್ತೂರಬಾ ಗಾಂಧಿ ಅವರು ಪುಣೆಯ ಆಘಾ ಖಾನ್ ಅರಮನೆಯಲ್ಲಿ ನಿಧನರಾದರು.
ಭಾರತದ ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞ, ರಾಜನೀತಿಜ್ಞ ಮೌಲಾನಾ ಅಬುಲ್ ಕಲಂ ಅವರು ದೆಹಲಿಯಲ್ಲಿ ನಿಧನರಾದರು. ಉರ್ದು ವಿದ್ವಾಂಸರಾಗಿದ್ದ ಅವರು ತಮ್ಮ ಬರವಣಿಗೆಗಾಗಿ ‘ಆಜಾದ್’ ಎಂಬ ನಾಮಾಂಕಿತವನ್ನು ಬಳಸುತ್ತಿದ್ದರು. ಹೀಗಾಗಿ ಅವರು ಮೌಲಾನಾ ಆಜಾದ್ ಎಂದೇ ಪ್ರಸಿದ್ಧರು. 1923ರ ವರ್ಷದಲ್ಲಿ ತಮ್ಮ 35ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಕಿರು ವಯಸ್ಸಿನವರಾಗಿದ್ದರು.
ಬ್ರಿಟಿಷ್ ಸಂಜಾತ ಭಾರತೀಯ ಮಾನವ ಶಾಸ್ತ್ರಜ್ಞ ವೆರೀಯರ್ ಎಲ್ವಿನ್ ನಿಧನರಾದರು. ಗುಡ್ಡಗಾಡು ವ್ಯವಹಾರಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರಕ್ಕೆ ಸಲಹೆಗಾರರಾಗಿದ್ದ ಇವರು ಮಧ್ಯಪ್ರದೇಶದ ‘ಗೊಂಡ’ ಜನಾಂಗದ ಬಗ್ಗೆ ಅಧ್ಯಯನ ನಡೆಸಿದ್ದರು.
ಪ್ರಸಿದ್ಧ ಪಂಜಾಬಿ ಸಾಹಿತಿ ಸುಖ್ಬೀರ್ ಮುಂಬೈನಲ್ಲಿ ನಿಧನರಾದರು.