Categories
e-ದಿನ

ಫೆಬ್ರವರಿ-24

ಪ್ರಮುಖಘಟನಾವಳಿಗಳು:

484: ಇಟಲಿಯಲ್ಲಿನ ಹ್ಯೂನರಿಕ್ ದೊರೆ ಕ್ರಿಶ್ಚಿಯನ್ ಬಿಷಪ್ಪರುಗಳನ್ನು ಅವರ ಸ್ಥಾನದಿಂದ ಕಿತ್ತೊಗೆದು ಹಲವರನ್ನು ಕಾರ್ಸಿಕಾಗೆ ಗಡೀಪಾರು ಮಾಡಿದನಲ್ಲದೆ, ‘ಅರಿಯನ್’ ಪಂಥವನ್ನು ಸ್ವೀಕರಿಸಲು ಒಪ್ಪದಿದ್ದ ವಿಕ್ಟೋರಿಯನ್ ಮತ್ತು ಫ್ರುಮೆಂಟಿಯಸ್ ಮತ್ತು ಹಲವಾರು ವ್ಯಾಪಾರಿಗಳನ್ನು ಹಡ್ರುಮೆಟಮ್ ಎಂಬಲ್ಲಿ ಕೊಲ್ಲಿಸಿದ.

1582: ಪೋಪ್ ಗ್ರೆಗೊರಿ ಅವರು ‘ಗ್ರೆಗೋರಿಯನ್ ಕ್ಯಾಲೆಂಡರ್’ ಗೆ ಸಮ್ಮತಿ ನೀಡಿ ಅಧಿಕೃತ ಪ್ರಕಟಣೆ ನೀಡಿದರು. ಈ ಕ್ಯಾಲೆಂಡರ್ ಇಟಲಿ ಮತ್ತು ಸ್ಪೇನಿನಲ್ಲಿ ಅಕ್ಟೋಬರ್ 15ರಂದು ಅನುಷ್ಠಾನಕ್ಕೆ ಬಂದಿತು.

1739: ಇರಾನಿನ ನಾದೆರ್ ಷಾ ಸೈನ್ಯವು ಭಾರತದ ಮುಘಲ್ ಚಕ್ರವರ್ತಿ ಮುಹಮ್ಮದ್ ಷಾ ಸೈನ್ಯವನ್ನು ಕರ್ನಾಲ್ ಕದನದಲ್ಲಿ ಸೋಲಿಸಿತು.

1822: ವಿಶ್ವದ ಮೊಟ್ಟ ಮೊದಲ ಸ್ವಾಮಿ ನಾರಾಯಣ ಮಂದಿರವು ಅಹಮದಾಬಾದಿನಲ್ಲಿ ಉದ್ಘಾಟನೆಗೊಂಡಿತು.

1916: ಕೊರಿಯಾದ ಗವರ್ನರ್ ಜನರಲ್ಲನು ಸೊರ್ಡೋಕೋ ಎಂಬಲ್ಲಿ ಕುಷ್ಟರೋಗಿಗಳಿಗಾಗಿ ‘ಜಾಹ್ಯೇವನ್’ ಎಂಬ ಪ್ರತ್ಯೇಕ ಆಸ್ಪತ್ರೆಯನ್ನು ಪ್ರಾರಂಭಿಸಿದನು.

1920: ಜರ್ಮನಿಯ ನಾಜಿ ಪಕ್ಷ ಪ್ರಾರಂಭಗೊಂಡಿತು.

1920: ನಾನ್ಸಿ ಆಸ್ಟರ್ ಅವರು ಯುನೈಟೆಡ್ ಕಿಂಗ್ಡಂನ ಹೌಸ್ ಆಫ್ ಕಾಮನ್ಸಿನಲ್ಲಿ ಮಾತನಾಡಿದ ಪ್ರಪಥಮ ಮಹಿಳೆ ಎನಿಸಿದರು. ಇದಕ್ಕೆ ಮೂರು ತಿಂಗಳ ಮುಂಚೆ ಅವರು ಪಾರ್ಲಿಮೆಂಟ್ ಸದಸ್ಯರಾಗಿ ಚುನಾಯಿತರಾಗಿದ್ದರು.

1938: ನ್ಯೂಜೆರ್ಸಿಯ ಅರ್ಲಿಂಗ್ಟನ್ನಿನಲ್ಲಿ ಮೊತ್ತ ಮೊದಲ ಬಾರಿಗೆ ‘ಟೂಥ್ ಬ್ರಷ್’ಗಳನ್ನು ವಾಣಿಜ್ಯ ಮಟ್ಟದಲ್ಲಿ ಉತ್ಪಾದನೆ ಮಾಡಲಾಯಿತು.

1945: ಈಜಿಪ್ಟಿನ ಪ್ರಧಾನಿ ಮಹೆರ್ ಪಾಶಾ ಅವರು ಸಂಸತ್ತಿನಲ್ಲಿ ಜರ್ಮನಿ, ಮತ್ತು ಜಪಾನ್ ವಿರುದ್ಧದ ಸಮರಘೋಷಣೆ ಓದುತ್ತಿದ್ದಾಗ ಅವರನ್ನು ಗುಂಡು ಹೊಡೆದು ಕೊಲ್ಲಲಾಯಿತು.

1989: ಇರಾನಿನ ಆಯಾತೊಲ್ಲಾಹ್ ರುಹೋಲ್ಲಾಹ್ ಖೊಮೈನಿ ಅವರು ‘ದಿ ಸಾಟಾನಿಕ್ ವರ್ಸಸ್’ ಕೃತಿ ರಚನಕಾರ ಸಲ್ಮಾನ್ ರಷ್ದಿ ತಲೆ ತೆಗೆಯಲು 3 ಮಿಲಿಯನ್ ಡಾಲರ್ ಬಹುಮಾನ ಮತ್ತು ಫತ್ವಾ ಹೊರಡಿಸಿದರು.

2006: ಗೋಧ್ರಾ ರೈಲು ದುರಂತದ ನಂತರ ಸಂಭವಿಸಿದ ಹಿಂಸಾಚಾರದಲ್ಲಿ ಭಸ್ಮವಾದ ಬೆಸ್ಟ್ ಬೇಕರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಸೆಷನ್ಸ್ ನ್ಯಾಯಾಲಯವು 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ದುಷ್ಕರ್ಮಿಗಳು 2002ರ ಮಾರ್ಚ್ 1ರಂದು ವಡೋದರಾದಲ್ಲಿನ ಬೆಸ್ಟ್ ಬೇಕರಿಗೆ ಬೆಂಕಿ ಹಚ್ಚಿದಾಗ 14 ಜನ ಸಜೀವ ದಹನಗೊಂಡಿದ್ದರು.

2009: ಕರ್ನಾಟಕದ ಗುಲ್ಬರ್ಗ ಸೇರಿದಂತೆ ದೇಶದಲ್ಲಿ ಹೊಸದಾಗಿ 12 ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಸಂಬಂಧ ರೂಪಿಸಲಾದ ಮಸೂದೆಗೆ ರಾಜ್ಯಸಭೆಯು ತನ್ನ ಸಮ್ಮತಿ ಸೂಚಿಸುವುದರೊಂದಿಗೆ ಸಂಸತ್ತಿನ ಅಂಗೀಕಾರ ದೊರಕಿತು. ಲೋಕಸಭೆಯು ಹಿಂದಿನ ವಾರವೇ ಮಸೂದೆಗೆ ಅಂಗೀಕಾರ ನೀಡಿತ್ತು.

ಪ್ರಮುಖಜನನ/ಮರಣ:

1304: ಖ್ಯಾತ ಅರಬ್ ಪ್ರವಾಸಿ ಮತ್ತು ವಿದ್ವಾಂಸ ಇಬ್ನ್ ಬಟ್ಟೂಟ ಮೊರಾಕ್ಕೋದ ಟಾಂಗಿಯರ್ ಎಂಬಲ್ಲಿ ಜನಿಸಿದರು. ವಿಶ್ವದ ಎಲ್ಲಾ ಕಾಲದ ಮಹಾನ್ ಪಯಣಿಗರಲ್ಲಿ ಒಬ್ಬರೆಂದು ಖ್ಯಾತರಾಗಿರುವ ಇವರನ್ನು ಮಧ್ಯಯುಗದ ಖ್ಯಾತ ಪ್ರವಾಸಿ ಅರಾಬ್ ವ್ಯಕ್ತಿ ಎಂದು ಗುರುತಿಸಲಾಗಿದೆ. ತಮ್ಮ ಪ್ರವಾಸದ ವಿವರಗಳನ್ನು ರಿಹ್ಲಾ ಎಂಬ ಕೃತಿಯಲ್ಲಿ ಇವರು ನಿರೂಪಿಸಿದ್ದಾರೆ. ಬಹುತೇಕ ಆಫ್ರಿಕಾ, ಮಧ್ಯ ಪೂರ್ವ, ಭಾರತ, ಮಧ್ಯ ಏಷ್ಯಾ, ದಕ್ಷಿಣಪೂರ್ವ ಏಷ್ಯಾ ಮತ್ತು ಚೀನಾ ಹೀಗೆ ಅವರು ವ್ಯಾಪಕವಾಗಿ ಸುತ್ತಿದ್ದರು.

1894: ಸಮಾಜದಲ್ಲಿ ಸ್ತ್ರೀಯರು ಮತ್ತು ಮಕ್ಕಳ ಏಳಿಗೆಗಾಗಿ ಅವಿರತವಾಗಿ ದುಡಿದ ಆರ್. ಕಲ್ಯಾಣಮ್ಮ ಅವರು ಬೆಂಗಳೂರಿನಲ್ಲಿ ಜನಿಸಿದರು. ಹತ್ತನೇ ವಯಸ್ಸಿನಲ್ಲೇ ವೈಧವ್ಯ ಪ್ರಾಪ್ತಿಯಾದರೂ ಅಂಜದೆ ಧೈರ್ಯದಿಂದ ಕನ್ನಡ ನಾಡಿನ ಸೇವೆಗೆ ಮುಂದಡಿಯಿಟ್ಟರು. ಮೂರು ದಶಕಗಳವರೆಗೆ ಸರಸ್ವತಿ ಮಾಸಪತ್ರಿಕೆಯ ಮೂಲಕ ಸಾಹಿತ್ಯ ಸೇವೆಯನ್ನೂ, ಶಾರದಾ ಸ್ತ್ರೀಸಮಾಜವನ್ನು ಸ್ಥಾಪಿಸಿ (೧೯೧೩) ಮಹಿಳಾಸೇವೆಯನ್ನೂ, ಅಖಿಲ ಕರ್ನಾಟಕ ಮಕ್ಕಳ ಕೂಟವನ್ನು ಸ್ಥಾಪಿಸಿ (೧೯೩೮) ಮಕ್ಕಳ ಸೇವೆಯನ್ನು ಸಲ್ಲಿಸಿದರು. ಇದಲ್ಲದೆ ನಗರ ಸಭೆಗೆ ಪ್ರಪ್ರಥಮ ಬಾರಿಗೆ ಮಹಿಳಾ ಸದಸ್ಯೆಯಾಗಿ, ನಗರ ಸಭೆಯ ಉಪಾಧ್ಯಕ್ಷಿಣಿಯಾಗಿದ್ದು, ಅಸೆಂಬ್ಲಿ ಮತ್ತು ಸೆನೆಟ್ಟಿನಲ್ಲಿ ಸದಸ್ಯೆಯಾಗಿದ್ದುಕೊಂಡು ಸಮಾಜ ಸೇವೆಯನ್ನೂ ಮಾಡಿ ಹೆಸರು ಗಳಿಸಿದರು. ಕಲ್ಯಾಣಮ್ಮನವರಿಗೆ ಮೈಸೂರಿನ ಶ್ರೀಮನ್ಮಹಾರಾಜರವರು ಸುವರ್ಣ ಪದಕವನ್ನಿತ್ತು ಗೌರವಿಸಿದರು.

1914: ಇಂಗ್ಲಿಷ್ ಸ್ವೀಡಿಷ್ ವಿನ್ಯಾಸಕ ರಾಲ್ಫ್ ಎರ್ಸ್ಕೈನ್ ಲಂಡನ್ನಿನಲ್ಲಿ ಜನಿಸಿದರು. ‘ದಿ ಆರ್ಕ್’ ಮತ್ತು ‘ಬೈಕರ್ ವಾಲ್’ ಕಟ್ಟಡ ವಿನ್ಯಾಸಗಳು ಇವರ ಪ್ರಸಿದ್ಧ ವಿನ್ಯಾಸಗಳಲ್ಲಿ ಸೇರಿವೆ.

1938: ಅಮೆರಿಕದ ಪ್ರಸಿದ್ಧ ವಾಪಾರೀ ಮತ್ತು ಉದಾರ ಕೊಡುಗೆದಾರ ಫಿಲ್ ನೈಟ್ ಅವರು ಅಮೆರಿಕದ ಒರಿಗಾನ್ ಬಳಿಯ ಪೋರ್ಟ್ಲ್ಯಾಂಡ್ ಎಂಬಲ್ಲಿ ಜನಿಸಿದರು. ಇವರು ಪ್ರಸಿದ್ಧ ನೈಕ್ ಇನ್ಕಾರ್ಪೋರೇಶನ್ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾಗಿದ್ದು ಅದರ ಚೇರ್ಮನ್, ಸಿ.ಇ.ಓ ಮುಂತಾದ ಹುದ್ದೆಗಳನ್ನು ನಿರ್ವಹಿಸಿದ್ದರು. ‘ಸ್ಟಾಪ್ ಮೋಷನ್’ ಚಿತ್ರಸಂಸ್ಥೆಗಳಾದ ಲೈಕಾ ಅಂತಹ ಸಂಸ್ಥೆಯ ಸ್ಥಾಪಕರೂ ಆಗಿದ್ದಾರೆ. ಇವರು ಅನೇಕ ವಿಶ್ವವಿದ್ಯಾಲಯಗಳಿಗೆ ಅತ್ಯಂತ ಬೃಹತ್ ಕೊಡುಗೆದಾರರಾಗಿಯೂ ಪ್ರಸಿದ್ಧರಾಗಿದ್ದಾರೆ.

1942: ಭಾರತೀಯ ಸಂಜಾತೆ ಗಾಯತ್ರಿ ಚಕ್ರವರ್ತಿ ಸ್ಪಿವಕ್ ಕೋಲ್ಕತ್ತಾದಲ್ಲಿ ಜನಿಸಿದರು. ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ಇವರು ಲೇಖಕಿ, ಸಾಹಿತ್ಯ ವಿಮರ್ಶಕಿ, ಹಾಗೂ ಭಾಷಾಂತರಕಾರ್ತಿಯಾಗಿ ಖ್ಯಾತಿ ಗಳಿಸಿದ್ದಾರೆ. ಇವರ ಕೃತಿಗಳಲ್ಲಿ ತತ್ವಜ್ಞಾನಿ ಜಾಕಿಸ್ ಡೆರ್ರಿಡಾ ಅವರ ಕೃತಿಯ ಇಂಗ್ಲಿಷ್ ಭಾಷಾಂತರವೂ ಸೇರಿದೆ.

1948: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಅಣ್ಣಾ ಡಿ.ಎಂ.ಕೆ ಪಕ್ಷದ ನಾಯಕಿ ಮತ್ತು ಹಿಂದಿನ ದಶಕಗಳ ಚಲನಚಿತ್ರ ನಟಿ ಜಯಲಲಿತಾ ಅವರು ಕೋಮಲವಲ್ಲಿ ಎಂಬ ಹೆಸರಿನಿಂದ ಕರ್ನಾಟಕ ಮಂಡ್ಯದಲ್ಲಿ ಜನಿಸಿದರು.

1955: ಸೃಜನಶೀಲ ಉದ್ಯಮಿ ಸ್ಟೀವ್ ಜಾಬ್ಸ್ ಅವರು ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಜನಿಸಿದರು. ಆಪಲ್ ಇನ್ಕಾರ್ಪೋರೇಷನ್, ಪಿಕ್ಸರ್ ಮುಂತಾದ ಪ್ರಸಿದ್ಧ ಸಂಸ್ಥೆಗಳ ಸಹ ಸಂಸ್ಥಾಪಕರಾದ ಇವರು ಪ್ರಸಿದ್ಧ ಐ ಫೋನ್, ಐ ಪಾಡ್, ಐ ಪ್ಯಾಡ್ , ಐ ಮ್ಯಾಕ್, ಐ ಟ್ಯೂನ್ಸ್, ಮ್ಯಾಕ್ ಓ.ಎಸ್, ಓ.ಎಸ್ ಎಕ್ಸ್ ಮುಂತಾದ ಹಲವಾರು ಕ್ರಾಂತಿಕಾರಕ ಸೃಜನೆಗಳ ಮೂಲಕ ವಿಶ್ವದ ಜನಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ.

1967: ಅಮೆರಿಕದ ಖಗೋಳ ಭೌತವಿಜ್ಞಾನಿ ಬ್ರಿಯಾನ್ ಸ್ಕ್ಮಿಡ್ಟ್ ಅವರು ಮೊಂಟಾನಾ ಬಳಿಯ ಮಿಸ್ಸೌಲಾ ಎಂಬಲ್ಲಿ ಜನಿಸಿದರು. ವಿಶ್ವದ ವಿಸ್ತಾರದ ಗತಿ ಏರುಮುಖವಾಗಿದೆ ಎಂಬುದಕ್ಕೆ ಪುರಾವೆಗಳನ್ನು ಒದಗಿಸಿದ ಸಂಶೋಧನೆಗಾಗಿ ಇವರಿಗೆ ಅವರ ಸಹ ವಿಜ್ಞಾನಿಗಳೊಂದಿಗೆ 2011 ವರ್ಷದಲ್ಲಿ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

1825: ಇಂಗ್ಲಿಷ್ ಸಂಪಾದಕ ಥಾಮಸ್ ಬೌಲ್ಡರ್ ವೇಲ್ಸ್ ಬಳಿಯ ಸ್ವಾನ್ಸಿಯಾ ಎಂಬಲ್ಲಿ ನಿಧನರಾದರು. ಷೇಕ್ಸ್ ಪಿಯರ್, ಓಲ್ಡ್ ಟೆಸ್ಟಾಮೆಂಟ್ ಸೇರಿದಂತೆ ಹಲವು ಕೃತಿಗಳನ್ನು ಇವರು ಸಂಪಾದಿಸಿದ್ದರು.

2011: ಭಾರತೀಯ ಕಾಮಿಕ್ ಸರಣಿಗಳಲ್ಲಿ ಮೊಟ್ಟ ಮೊದಲು ನೆನಪಿಗೆ ಬರುವ ಅಮರ ಚಿತ್ರ ಕಥಾ ಸೃಷ್ಟಿಕರ್ತ, ಕಾರ್ಕಳದವರಾದ ಅನಂತ ಪೈ ಅವರು ಮುಂಬೈನಲ್ಲಿ ನಿಧನರಾದರು. ‘ಅಂಕಲ್ ಪೈ’ ಎಂದೇ ಖ್ಯಾತರಾದ ಇವರು ಮಕ್ಕಳಿಗಾಗಿ ‘ಟಿಂಕಲ್’ ಕಾಮಿಕ್ ಪತ್ರಿಕೆಯನ್ನೂ ಹುಟ್ಟುಹಾಕಿದ್ದರು.