Categories
e-ದಿನ

ಫೆಬ್ರವರಿ-25

ಪ್ರಮುಖಘಟನಾವಳಿಗಳು:

1336: ಲಿಥುವೇನಿಯಾದ ಪಿಲೇನೈ ಎಂಬಲ್ಲಿನ ನಾಲ್ಕು ಸಾವಿರ ರಕ್ಷಣಾ ಯೋಧರು ತಾವು ‘ಟ್ಯುಟೋನಿಕ್ ನೈಟ್ಸ್’ ಸೈನಕ್ಕೆ ಬಂಧಿಯಾಗುವ ಬದಲು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡರು.

1836: ಅಮೆರಿಕದಲ್ಲಿ ಸಾಮ್ಯುಯಲ್ ಕೊಲ್ಟ್ ಅವರು ‘ಕೊಲ್ಟ್ ರಿವಾಲ್ವರ್’ಗೆ ಪೇಟೆಂಟ್ ಪಡೆದರು

1862: ಅಮೆರಿಕದಲ್ಲಿ ಅಂತರಿಕ ಕ್ರಾಂತಿ ಏರ್ಪಟ್ಟಿದ ಸಂದರ್ಭದಲ್ಲಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ಗ್ರೀನ್ ಬ್ಯಾಕ್ ನೋಟುಗಳನ್ನು ಬಿಡುಗಡೆ ಮಾಡಿದರು.

1901: ಜೆ.ಪಿ. ಮೊರ್ಗಾನ್ ಅವರು ಯುನೈಟೆಡ್ ಸ್ಟೇಟ್ಸ್ ಸ್ಟೀಲ್ ಕಾರ್ಪೊರೇಶನ್ ಸ್ಥಾಪಿಸಿದರು.

1932: ಅಡೋಲ್ಫ್ ಹಿಟ್ಲರ್ ನ್ಯಾಚುರಲೈಸೇಶನ್ ಪ್ರಕ್ರಿಯೆಯ ಮೂಲಕ ಜರ್ಮನಿಯ ಪೌರತ್ವವನ್ನು ಪಡೆದುಕೊಂಡ. ಇದರಿಂದಾಗಿ ಆತನಿಗೆ 1932 ವರ್ಷದಲ್ಲಿ ‘ರೀಚ್ಸ್ ಪ್ರೆಸಿಡೆಂಟ್’ ಸ್ಥಾನಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸಾಧ್ಯವಾಯಿತು.

1933: ಅಮೆರಿಕವು ಯು.ಎಸ್.ಎಸ್. ರೇಂಜರ್ ಸೇವೆಯನ್ನು ಆರಂಭಿಸಿತು. ಇದನ್ನು ವಿನ್ಯಾಸದ ಪ್ರಾರಂಭಿಕ ಹಂತದಿಂದಲೇ ವಿಮಾನಗಳನ್ನು ಹೊತ್ತೊಯ್ಯುವ ಅಮೆರಿಕದ ಪ್ರಥಮ ನೌಕಾ ಸೇನೆಯ ಹಡಗನ್ನಾಗಿ ರೂಪಿಸಲಾಯಿತು.

1939: ಉತ್ತರ ಇಂಗ್ಲೆಂಡಿನಲ್ಲಿ ಮೇಲಿನಿಂದ ಬೀಳಬಹುದಾದ ಬಾಂಬಿನಿಂದ ರಕ್ಷಣೆ ಒದಗಿಸಿಕೊಳ್ಳಲಿಕ್ಕಾಗಿ ಮೊದಲ 25 ಲಕ್ಷ ಸಂಖ್ಯೆ ‘ಅಂಡರ್ಸನ್ ವಾಯುದಾಳಿ ರಕ್ಷಣಾ ಗೂಡುಗಳು’ ತಲೆ ಎತ್ತಿದವು.

1964: ಮಹಮ್ಮದ್ ಅಲಿ (ಕ್ಯಾಸಿಯಸ್ ಕ್ಲೇ) ಅವರು ಮಿಯಾಮಿಯಲ್ಲಿ ಸೋನಿ ಲಿಸ್ಟನ್ ಅವರನ್ನು ಸೋಲಿಸಿ ಮೊತ್ತ ಮೊದಲ ಬಾರಿಗೆ ವಿಶ್ವ ಹೆವಿ ವೇಯ್ಟ್ ಬಾಕ್ಸಿಂಗ್ ಪ್ರಶಸ್ತಿ ಗೆದ್ದುಕೊಂಡರು.

1986: ಫಿಲಿಪ್ಪೀನ್ಸ್ ದೇಶದಲ್ಲಿ ನಡೆದ ಜನಾಂಗೀಯ ಕ್ರಾಂತಿಯಲ್ಲಿ ಅಲ್ಲಿನ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ರಾಷ್ಟ್ರ ಬಿಟ್ಟು ಓಡಿ ಹೋಗಿ ಹವಾಯಿಯಲ್ಲಿ ಆಶ್ರಯ ಪಡೆದರು. ಕೊರಜಾನ್ ಅಕ್ವಿನೋ ಆ ದೇಶದ ಪ್ರಥಮ ಮಹಿಳಾ ಅಧಕ್ಷರಾದರು.

1988: ಭಾರತದ ಮೊಟ್ಟ ಮೊದಲ ನೆಲದಿಂದ ನೆಲಕ್ಕೆ ಚಿಮ್ಮುವ ಕ್ಷಿಪಣಿಯಾದ ‘ಪೃಥ್ವಿ’ಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು.

ಪ್ರಮುಖಜನನ/ಮರಣ:

1728: ಪ್ರಸಿದ್ಧ ಇಂಗ್ಲಿಷ್ ಕಟ್ಟಡ ವಿನ್ಯಾಸಕಾರ ಜಾನ್ ವುಡ್ ದಿ ಯಂಗರ್ ಅವರು ಬಾತ್ ಅಬ್ಬೆ ಎಂಬಲ್ಲಿ ಜನಿಸಿದರು. ಇವರು ವಿನ್ಯಾಸಗೊಳಿಸಿದ ರಾಯಲ್ ಕ್ರೆಸೆಂಟ್ ಅತ್ಯಂತ ಪ್ರಸಿದ್ಧಿ ಪಡೆದಿದೆ.

1894: ‘ಮೆಹರ್ ಬಾಬಾ’ ಎಂದು ಪ್ರಖ್ಯಾತರಾದ ಭಾರತೀಯ ಅಧ್ಯಾತ್ಮಿಕ ಗುರು ಮೆರ್ವಾನ್ ಷೆರಿಯರ್ ಇರಾನಿ ಅವರು ಪುಣೆಯಲ್ಲಿ ಜನಿಸಿದರು. ಇವರು 44 ವರ್ಷಗಳ ಕಾಲ ‘ಮೌನ’ ಆಚರಿಸಿದರು.

1925: ಶಿಕ್ಷಣ ತಜ್ಞ, ವಿದ್ವಾಂಸ, ವಾಜ್ಮಿ, ವಿಮರ್ಶಕ ಮತ್ತು ಸಾಹಿತಿ ಅಕ್ಕಿ ಹೆಬ್ಬಾಳು ರಾಮಣ್ಣ ಮಿತ್ರ ಅವರು ಬೇಲೂರಿನಲ್ಲಿ ಜನಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯು ವಿಮರ್ಶಾ ಕ್ಷೇತ್ರದಲ್ಲಿನ ಅವರ ಗಣನೀಯ ಸಾಧನೆಯನ್ನು ಗೌರವದಿಂದ ಪುರಸ್ಕರಿಸಿದೆ.

1953: ಸಲಾಖೆಯ ಗೊಂಬೆಯಾಟದ ಕಲೆಗೆ ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟ ದತ್ತಾತ್ರೇಯ ಅರಳಿಕಟ್ಟೆ ಅವರು ಅರಳಿಕಟ್ಟೆ ಎಂಬಲ್ಲಿ ಜನಿಸಿದರು. ಅಂದಾಜು 9-10 ಕಿಲೋಗ್ರಾಂ ತೂಕದ ಗೊಂಬೆಗಳನ್ನು ಸಲಾಖೆಯಿಂದ ಹತೋಟಿಗೆ ಒಳಪಡಿಸಿ ಪೌರಾಣಿಕ ಪ್ರಸಂಗಗಳಿಗೆ ಕರ್ನಾಟಕ ಸಂಗೀತ, ನೃತ್ಯ, ನಾಟಕದ ಲೇಪ ಹಚ್ಚಿ, ಸರಳ ಮಾತುಗಾರಿಕೆಯ ಮೂಲಕ ಪ್ರೇಕ್ಷಕರ ಎದುರು ಕಥೆ ಬಿಚ್ಚುವ ಕಲೆಯಲ್ಲಿ ಇವರು ಮಹತ್ವದ ಸಾಧನೆ ಮಾಡಿದ್ದಾರೆ. ಭಾರತ ಸರ್ಕಾರದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಒಳಗೊಂಡಂತೆ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ.

1938: ಭಾರತದ ವಿಕೆಟ್ ಕೀಪಿಂಗ್ ಬ್ಯಾಟ್ಸ್ ಮನ್ ಫರೂಖ್ ಎಂಜಿನಿಯರ್ ಮುಂಬೈನಲ್ಲಿ ಜನಿಸಿದರು. ವಿಶ್ವಕಪ್ ಪಂದ್ಯದಲ್ಲಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಪಡೆದ ಮೊದಲ ವಿಕೆಟ್ ಕೀಪಿಂಗ್ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಇವರದ್ದಾಗಿದೆ. ಎಪ್ಪತ್ತರ ದಶಕದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡುಗಳಲ್ಲಿ ನಡೆದ ವಿಶ್ವ ಚಾಂಪಿಯನ್ ವಿರುದ್ಧದ ಇತರರ ಹನ್ನೊಂದು ಆಟಗಾರರ ತಂಡದಲ್ಲಿ ಇವರು ಪಥಮ ಆಯ್ಕೆಯ ವಿಕೆಟ್ ಕೀಪರ್ ಆಗಿರುತ್ತಿದ್ದರು.

1899: ಪ್ರಸಿದ್ಧ ಸುದ್ಧಿಸಂಸ್ಥೆ ‘ರೂಟರ್’ ಸ್ಥಾಪಕ ಪಾಲ್ ರೂಟರ್ ಅವರು ಫ್ರಾನ್ಸಿನ ನೈಸ್ ಬಳಿಯ ವಿಲ್ಲಾ ರೂಟರ್ ಎಂಬಲ್ಲಿ ನಿಧನರಾದರು. ಇವರು ಟೆಲಿಗ್ರಫಿ ಮತ್ತು ಸುದ್ಧಿ ಪ್ರಸರಣದಲ್ಲಿ ಚಾಣಾಕ್ಷರೆನಿಸಿದ್ದರು.

1914: ಇಂಗ್ಲಿಷ್ ಕಲಾವಿದ ಹಾಗೂ ‘ಅಲೀಸ್ ಇನ್ ವಂಡರ್ ಲ್ಯಾಂಡ್’ ಚಿತ್ರಕಥಾ ನಿರೂಪಕ ಜಾನ್ ಟೆನ್ನೀಲ್ ಅವರು ಲಂಡನ್ನಿನಲ್ಲಿ ನಿಧನರಾದರು.

2008: ಭಾರತದ ಪ್ರಖ್ಯಾತ ನ್ಯಾಯವಾದಿ, ನ್ಯಾಯಾಧೀಶ ಮತ್ತು ಕಾನೂನು ಸಚಿವ ಹನ್ಸ್ ರಾಜ್ ಖನ್ನಾ ನವದೆಹಲಿಯಲ್ಲಿ ನಿಧನರಾದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ‘ಹಬೀಯಾಸ್ ಕಾರ್ಪಸ್’ ಎಂಬ ಪ್ರಖ್ಯಾತ ನಿರ್ಣಯದಲ್ಲಿ ನಾಲ್ಕು ನ್ಯಾಯಾಧೀಶರ ಪೀಠದಲ್ಲಿ ಮೂವರು ನ್ಯಾಯಾಧೀಶರು, “ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವ್ಯಕ್ತಿಯ ಮೂಲಭೂತ ಹಕ್ಕುಗಳೂ ಕಸಿದುಕೊಳ್ಳಲು ಅರ್ಹವಾಗುತ್ತವೆ” ಎಂದು ಸರ್ಕಾರದ ಪರ ಒಮ್ಮತ ವ್ಯಕ್ತ ಪಡಿಸಿದರೆ, ನಾಲ್ಕನೆಯವರಾದ ಹನ್ಸ ರಾಜ್ ಖಾನ್ ಅವರು ಮಾತ್ರಾ “ಸಂವಿಧಾನವು ವ್ಯಕ್ತಿಯ ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕನ್ನು, ಆಡಳಿತವು ಕಿತ್ತುಕೊಳ್ಳುವುದನ್ನು ಒಪ್ಪುವುದಿಲ್ಲ” ಎಂದು ಅಸಮ್ಮತಿಯನ್ನು ವ್ಯಕ್ತಪಡಿಸಿದ್ದು ಪ್ರಜಾಪ್ರಭುತ್ವದ ಪರವಾದ ಶ್ರೇಷ್ಠ ನಿರ್ಣಯವೆನಿಸಿದೆ. ಈ ಕಾರಣದಿಂದ ಅವರಿಗೆ ನ್ಯಾಯಯುತವಾಗಿ ದಕ್ಕಬೇಕಿದ್ದ ಸುಪ್ರೀಂ ಕೋರ್ಟಿನ ಪ್ರಧಾನ ನ್ಯಾಯಾಧೀಶರ ಹುದ್ಧೆ ಕೈಬಿಟ್ಟುಹೋಯಿತಾದರೂ ವಿಶ್ವದೆಲ್ಲೆಡೆ ಅವರ ಹೆಸರು ಪ್ರಸಿದ್ಧಿ ಪಡೆಯಿತು. 1999ರ ವರ್ಷದಲ್ಲಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಂದಿತ್ತು.

1971: ಸ್ವೀಡಿಷ್ ವಿಜ್ಞಾನಿ ಥಿಯೋಡೋರ್ ಸ್ವೆಡ್ಬರ್ಗ್ ಅವರು ಕೊಪ್ಪಾರ್ಬರ್ಗ್ ಎಂಬಲ್ಲಿ ನಿಧನರಾದರು. ಅನಲಿಟಿಕಲ್ ಅಲ್ಟ್ರಾಸೆಂಟ್ರಿಫ್ಯುಗೇಶನ್ ಕುರಿತಾದ ಸಂಶೋಧನೆಗೆ ಇವರಿಗೆ 1926 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1971: ಅಮೆರಿಕದ ವಿಜ್ಞಾನಿ ಗ್ಲೆನ್ ಥಿಯೋಡೋರ್ ಸೀಬೋರ್ಗ್ ಅವರು ಕ್ಯಾಲಿಫೋರ್ನಿಯಾದ ಲಫಾಯೆಟ್ಟೆ ಎಂಬಲ್ಲಿ ನಿಧನರಾದರು. ‘ಟ್ರಾನ್ಸುರೇನಿಯಂ ಎಲಿಮೆಂಟ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1951 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

2001: ಇಪ್ಪತ್ತನೆಯ ಶತಮಾನದ ಶ್ರೇಷ್ಠ ಬ್ಯಾಟ್ಸ್ಮನ್ ಡೊನಾಲ್ಡ್ ಜಾರ್ಜ್ ಬ್ರಾಡ್ಮನ್ ಅವರು ತಮ್ಮ 92ನೇ ವಯಸ್ಸಿನಲ್ಲಿ ದಕ್ಷಿಣ ಆಸ್ಟ್ರೇಲಿಯಾದ ಕೆನ್ಸಿಂಗ್ ಟನ್ ಪಾರ್ಕ್ ಎಂಬಲ್ಲಿ ನಿಧನರಾದರು. ಸರಾಸರಿ 99.94 ರನ್ನುಗಳು, 10 ದ್ವಿಶತಕಗಳು ಮತ್ತು ಎರಡು ತ್ರಿಶತಕಗಳನ್ನು ಸಿಡಿಸಿದ ಅಪೂರ್ವ ಸಾಧನೆ ಇವರದ್ದಾಗಿದೆ.

2005: ಆಮ್ನೆಸ್ಟಿ ಇಂಟರ್ನ್ಯಾಶನಲ್ ಸ್ಥಾಪಕ ಪೀಟರ್ ಬೆನೆನ್ ಸನ್ ಅವರು ಆಕ್ಸ್’ಫರ್ಡಿನಲ್ಲಿ ನಿಧನರಾದರು.

2016: ಪ್ರಖ್ಯಾತ ಉದ್ಯಮಿ ಭವಾರ್ ಲಾಲ್ ಜೈನ್ ಮುಂಬೈನಲ್ಲಿ ನಿಧನರಾದರು. ಇವರು ಜೈನ್ ಇರಿಗೇಶನ್ ಸಿಸ್ಟಮ್ಸ್ ಲಿಮಿಟೆಡ್ ಸ್ಥಾಪಿಸಿದರು. ಇದು ವಿಶ್ವದ ಎರಡನೇ ದೊಡ್ಡ ಮೈಕ್ರೋ ಇರಿಗೇಶನ್ ಸಂಸ್ಥೆ ಎನಿಸಿದೆ. ಗಾಂಧೀವಾದಿ ಮತ್ತು ಉದಾರಚರಿತರಾದ ಇವರು ಗಾಂಧೀ ರಿಸರ್ಚ್ ಫೌಂಡೆಶನ್ ಸ್ಥಾಪಕರಾಗಿಯೂ ಪ್ರಸಿದ್ಧಿ ಪಡೆದಿದ್ದರು. ಇವರಿಗೆ ಪದ್ಮಶ್ರೀ, ಯುನೆಸ್ಕೋದ ‘ಯುನೆಸ್ಕೋ-ವೆಸ್ಟ್-ನೆಟ್ ವಾಟರ್ ಕನ್ಸರ್ವರ್ ಆಫ್ ಇಂಡಿಯಾ’ ಗೌರವವೂ ಸೇರಿದಂತೆ 22 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳು ಸಂದಿದ್ದವು.