Categories
e-ದಿನ

ಫೆಬ್ರವರಿ-26

ಪ್ರಮುಖಘಟನಾವಳಿಗಳು:

1616: ಭೂಮಿಯು ಸೂರ್ಯನ ಸುತ್ತಾ ಸುತ್ತುತ್ತಿದೆ ಎಂಬ ವಾದವನ್ನು ಸಮರ್ಥಿಸಿದ ಗೆಲಿಲಿಯೋ ಗೆಲೀಲಿಯನ್ನು ರೋಮನ್ ಕ್ಯಾಥೊಲಿಕ್ ಚರ್ಚು ಅಧಿಕೃತವಾಗಿ ಬಹಿಷ್ಕರಿಸಿತು.

1794: ಕೋಪನ್ ಹ್ಯಾಗನ್ನಿನ ಪ್ರಥಮ ಕ್ರಿಶ್ಚಿಯನ್ಸ್ಬೋರ್ಗ್ ಅರಮನೆಯು ಬೆಂಕಿಗಾಹುತಿಯಾಯಿತು.

1815: ನೆಪೋಲಿಯನ್ ಬೋನಾಪಾರ್ಟೆಯು ಎಲ್ಬಾದಿಂದ ಪರಾರಿಯಾದರು.

1826: ಬ್ರಿಟಿಷರು ಯಾಂದಬೂ ಒಪ್ಪಂದದ ಮೂಲಕ ಅಸ್ಸಾಂನ್ನು ಚಹಾ ಎಸ್ಟೇಟ್ ಆಗಿ ಪರಿವರ್ತಿಸಿಕೊಳ್ಳುವ ಸಲುವಾಗಿ ತಮ್ಮ ವಶಕ್ಕೆ ತೆಗೆದುಕೊಂಡರು.

1909: ಮೊದಲ ಯಶಸ್ವೀ ಚಲನಚಿತ್ರ ಸಂಸ್ಕರಣೆಯಾದ ಕಿನೇಮಾಕಲರ್ ಅನ್ನು ಲಂಡನ್ನಿನ ಪ್ಯಾಲೇಸ್ ಥಿಯೇಟರ್ ನಲ್ಲಿ ಪ್ರಥಮವಾಗಿ ಸಾರ್ವಜನಿಕರಿಗೆ ತೋರಿಸಲಾಯಿತು.

1919: ಗ್ರ್ಯಾಂಡ್ ಕ್ಯಾನನ್ ನ್ಯಾಷನಲ್ ಪಾರ್ಕ್ ಸ್ಥಾಪನೆಯ ಖಾಯಿದೆಗೆ ಅಧ್ಯಕ್ಷ ವುಡ್ರೋ ವಿಲ್ಸನ್ ಸಹಿ ಮಾಡಿದರು.

1929: ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ ಅವರು ವಯೋಮಿಂಗ್ ಎಂಬಲ್ಲಿ 96000 ಎಕರೆ ಟೆಟನ್ ನ್ಯಾಷನಲ್ ಪಾರ್ಕ್ ಸ್ಥಾಪಿಸುವ ಆದೇಶಕ್ಕೆ ಸಹಿ ಹಾಕಿದರು.

1935: ರಾಬರ್ಟ್ ವಾಟ್ಸನ್-ವಾಟ್ ಅವರು ಡಾವೆಂಟ್ರಿ ಎಂಬಲ್ಲಿ ಒಂದು ಪ್ರಾತ್ಯಕ್ಷಿಕೆ ನೀಡಿದರು. ಇದು ಯುನೈಟೆಡ್ ಕಿಂಗ್ಡಂನಲ್ಲಿ ರಾಡಾರ್ ತಂತ್ರಜ್ಞಾನ ಅಭಿವೃದ್ಧಿಗೆ ನಾಂದಿ ಹಾಡಿತು.

1966: ಅಪೋಲೋ ಕಾರ್ಯಕ್ರಮದಲ್ಲಿ ಸಾಟರ್ನ್ 1ಬಿ ಮುಖೇನ ಎ.ಎಸ್ – 201 ಉಡಾವಣೆ

1971: ಭೂಮಿ ದಿನ ಆಚರಣೆ ನಿರ್ಣಯಕ್ಕೆ ವಿಶ್ವಸಂಸ್ಥೆ ಕಾರ್ಯದರ್ಶಿ ಜನರಲ್ ಯು ಥಾನ್ಟ್ ಸಹಿ ಮಾಡಿದರು. ಈ ಪ್ರಕರವಾಗಿ ಪ್ರತಿ ವರ್ಷ ಏಪ್ರಿಲ್ 22 ದಿನವನ್ನು ‘ಭೂಮಿ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

1993: ನ್ಯೂಯಾರ್ಕ್ ನಗರದ ‘ವರ್ಲ್ಡ್ ಟ್ರೇಡ್ ಸೆಂಟರ್’ನ ಉತ್ತರ ವಿಭಾಗದಲ್ಲಿ ಕೆಳಗೆ ನಿಲ್ಲಿಸಿದ್ದ ಟ್ರಕ್ ಒಂದರಲ್ಲಿ ಬಾಂಬ್ ಸ್ಪೋಟಿಸಿ 6 ಜನ ನಿಧನರಾಗಿ 1000 ಮಂದಿ ಗಾಯಗೊಂಡರು.

1995: ಯುನೈಟೆಡ್ ಕಿಂಗ್ಡಂನ ಅತ್ಯಂತ ಹಳೆಯ ಬಂಡವಾಳ ಹೂಡಿಕೆ ಸಂಸ್ಥೆಯಾದ ಬಾರಿಂಗ್ಸ್ ಬ್ಯಾಂಕ್ ಪತನಗೊಂಡಿತು. ನಿಕ್ ಲೀಸನ್ ಎಂಬಾತ ಅವಿವೇಕದಿಂದ 1.4 ಬಿಲಿಯನ್ ಡಾಲರ್ಗಳನ್ನು ಭವಿಷ್ಯದ ನಿಧಿಗಳನ್ನು ಉಪಯೋಗಿಸಿ ಸಿಂಗಪೂರ್ ಮಾನಿಟರಿ ಎಕ್ಸ್ಚೇಂಜ್ ಕುರಿತಾಗಿ ಬಾಜಿಕಟ್ಟುವ ತಿಕ್ಕಲುತನ ತೋರಿದ್ದರಿಂದ ಈ ಅಧಃಪತನ ಸಂಭವಿಸಿತು.

2009: ನೇಪಾಳದ ಪ್ರಸಿದ್ಧ ಐತಿಹಾಸಿಕ ವಸ್ತುಸಂಗ್ರಹಾಲಯ ‘ನಾರಾಯಣ ಹಿತಿ’ಯನ್ನು ಅಲ್ಲಿನ ಪ್ರಧಾನಿ ಪ್ರಚಂಡ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. 2008ರಲ್ಲಿ ನೇಪಾಳದ ಅರಸರ ಆಳ್ವಿಕೆ ಕೊನೆಗೊಂಡ ನಂತರದಲ್ಲಿ,ಈ ಶತಮಾನದಷ್ಟು ಹಳೆಯದಾದ ನಾರಾಯಣ ಹಿತಿ ಅರಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಮಾಡುವ ಕಾರ್ಯ ಆರಂಭಗೊಂಡಿತ್ತು.

ಪ್ರಮುಖಜನನ/ಮರಣ:

1802: ಫ್ರೆಂಚ್ ರೊಮ್ಯಾಂಟಿಕ್ ಸಾಹಿತಿಗಳ ಪೈಕಿ ಅತ್ಯಂತ ಖ್ಯಾತಿವಂತರಾದ ವಿಕ್ಟರ್ ಹ್ಯೂಗೋ ಅವರು ಡೌಬ್ಸ್ ಬಳಿಯ ಬೆಸಾನ್ಕನ್ ಎಂಬಲ್ಲಿ ಜನಿಸಿದರು. ಕವಿ, ನಾಟಕಕಾರ, ಕಾದಂಬರಿಕಾರರಾಗಿದ್ದ ಇವರು 1862ರಲ್ಲಿ ತಮ್ಮ ಮಹತ್ವದ ಕೃತಿ ‘ಲೆಸ್ ಮಿಸೆರಬಲ್ಸ್ ಬರೆದರು. ರಾಜಕೀಯವಾಗಿ ಕ್ರಿಯಾಶೀಲರಾಗಿದ್ದ ಇವರು ಹಲವು ಬಾರಿ ಗಡೀಪಾರು ಶಿಕ್ಷೆಗೊಳಗಾಗಿದ್ದರು.

1829: ಜರ್ಮನ್-ಅಮೆರಿಕನ್ ಫ್ಯಾಷನ್ ಡಿಸೈನರ್ ಲೆವಿ ಸ್ಟ್ರಾಸ್ ಅಂಡ್ ಕಂಪೆನಿ ಸ್ಥಾಪಕ ಲೆವಿ ಸ್ಟ್ರಾಸ್ ಅವರು ಕಿಂಗ್ಡಂ ಆಫ್ ಬವೇರಿಯಾದ ಬಟೆನ್ಹೀಮ್ ಎಂಬಲ್ಲಿ ಜನಿಸಿದರು.

1852: ಕಾರ್ನ್ ಫ್ಲೆಕ್ಸ್ ಸಹ ನಿರ್ಮಾತೃ ಅಮೆರಿಕದ ವೈದ್ಯ ಜಾನ್ ಹಾರ್ವೆ ಕೆಲ್ಲಾಗ್ ಮಿಚಿಗನ್ ಬಳಿಯ ಟೈರೋನ್ ಎಂಬಲ್ಲಿ ಜನಿಸಿದರು.

1857: ಮನಸ್ಸಿಗೆ ಸಕಾರಾತ್ಮಕ ಸೂಚನೆಗಳನ್ನು ನೀಡಿಕೊಳ್ಳುವ ‘ಕೊಯೆಯಿಸಂ’ ಸ್ಥಾಪಕ ಎಮಿಲ್ ಕೊಯೆ ಫ್ರಾನ್ಸಿನ ಟ್ರಾಯೇಸ್ ಎಂಬಲ್ಲಿ ಜನಿಸಿದರು. ವೈದ್ಯಶಾಸ್ತ್ರಜ್ಞರಾಗಿದ್ದ ಇವರು ಸೃಷ್ಟಿಸಿದ್ದ “ಪ್ರತಿದಿನ, ಪ್ರತಿಯೊಂದು ಮಾರ್ಗದಲ್ಲೂ ನಾನು ಸುಧಾರಿಸುತ್ತಿದ್ದೇನೆ, ಇನ್ನಷ್ಟು ಸುಧಾರಿಸುತ್ತಿದ್ದೇನೆ” ಎಂಬ ಮಾನಸಿಕ ಸೂಚನಾ ಚಿಕಿತ್ಸಾ ಪದ್ಧತಿ ಅತ್ಯಂತ ಪ್ರಸಿದ್ಧಿ ಪಡೆದಿದೆ.

1887: ಅಂತರರಾಷ್ಟ್ರೀಯ ಮಟ್ಟದ ಪ್ರಖ್ಯಾತ ಕಾನೂನು ತಜ್ಞ, ವಿಶ್ವಸಂಸ್ಥೆಯನ್ನು ಪ್ರತಿನಿಧಿಸಿದ, ಭಾರತದ ಸಂವಿಧಾನದ ಕರಡು ಪ್ರತಿ ತಯಾರಿಸಿದ, ಅಂತರರಾಷ್ತ್ರೀಯ ನ್ಯಾಯಾಲಯದ ನ್ಯಾಯಾಧೀಶ ಸ್ಥಾನದವರೆಗೆ ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದ ಸರ್ ಬೆನಗಲ್ ನರಸಿಂಗ ರಾವ್ ಅವರು ಮಂಗಳೂರಿನಲ್ಲಿ ಜನಿಸಿದರು.

1903: ಇಟಲಿಯ ರಸಾಯನಶಾಸ್ತ್ರ ವಿಜ್ಞಾನಿ ಗಿಯುಲಿಯೋ ಅವರು ಇಂಪೀರಿಯಾ ಎಂಬಲ್ಲಿ ಜನಿಸಿದರು. ಹೈ ಪಾಲಿಮರ್ಸ್ ಕುರಿತಾದ ಸಂಶೋಧನೆಗೆ ಇವರಿಗೆ 1969 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1908: ಬಂಗಾಳಿ ಲೇಖಕಿ ಲೀಲಾ ಮಜುಂದಾರ್ ಕೋಲ್ಕತ್ತದಲ್ಲಿ ಜನಿಸಿದರು. ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಮಹತ್ವದ ಕೆಲಸ ಮಾಡಿದ್ದ ಇವರಿಗೆ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಪಶ್ಚಿಮ ಬಂಗಾಳ ಸರ್ಕಾರದ ಪುರಸ್ಕಾರ, ರಬೀಂದ್ರ ಪುರಸ್ಕಾರ, ದೇಶಿಕೊತ್ತಮ ಪುರಸ್ಕಾರಗಳು ಸಂದಿದ್ದವು.

1946: ಈಜಿಪ್ಟ್-ಅಮೆರಿಕನ್ ರಸಾಯನಶಾಸ್ತ್ರ ವಿಜ್ಞಾನಿ ಅಹಮದ್ ಜೆವೈಲ್ ಅವರು ಇಟಲಿಯ ದಮಾನಹೌರ್ ಎಂಬಲ್ಲಿ ಜನಿಸಿದರು. ‘ಫಾದರ್ ಆಫ್ ಫೆಮ್ಟೋಕೆಮಿಸ್ಟ್ರಿ’ ಎಂದು ಪ್ರಸಿದ್ಧರಾದ ಇವರಿಗೆ 1999 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1887: ದಕ್ಷಿಣ ಏಷ್ಯಾದ ಪ್ರಪ್ರಥಮ ಮಹಿಳಾ ವೈದ್ಯರಲ್ಲಿ ಒಬ್ಬರು ಎಂದು ಪ್ರಸಿದ್ಧರಾಗಿರುವ ಆನಂದಿ ಗೋಪಾಲ್ ಜೋಷಿ ಅವರು ಮುಂಬೈನಲ್ಲಿ ನಿಧನರಾದರು. ಇವರು ಅಮೆರಿಕದಲ್ಲಿ ವೈದ್ಯಕಿಯ ಪದವಿ ಪಡೆದ ಪ್ರಪ್ರಥಮ ಭಾರತೀಯ ನೆಲದ ಮಹಿಳೆ ಎಂದೆನಿಸಿದ್ದಾರೆ. ಇವರು ಅಮೆರಿಕದ ನೆಲಕ್ಕೆ ಭೇಟಿ ಕೊಟ್ಟ ಪ್ರಪ್ರಥಮ ಹಿಂದೂ ಮಹಿಳೆ ಎಂಬ ಮಾತೂ ಇದೆ.

1903: ಗ್ಯಾಟ್ಲಿಂಗ್ ಗನ್ ಸೃಷ್ಟಿಕರ್ತ ರಿಚರ್ಡ್ ಜೋರ್ಡಾನ್ ಗ್ಯಾಟ್ಲಿಂಗ್ ನ್ಯೂಯಾರ್ಕ್ ನಗರದಲ್ಲಿ ನಿಧನರಾದರು.

1931: ಜರ್ಮನ್ ರಸಾಯನಶಾಸ್ತ್ರ ವಿಜ್ಞಾನಿ ಓಟ್ಟೋ ವಲ್ಲಾಚ್ ಅವರು ಗೊಟಿನ್ಗೆನ್ ಎಂಬಲ್ಲಿ ನಿಧನರಾದರು. ‘ಅಲಿಸೈಕ್ಲಿಕ್ ಕಾಂಪೌಂಡ್ಸ್’ ಕುರಿತಾದ ಸಂಶೋಧನೆಗೆ ಇವರಿಗೆ 1910 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1966: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಬ್ಯಾರಿಸ್ಟರ್‌ ಪದವೀಧರ, ಸಂಸ್ಕೃತ ಪಂಡಿತ, ಕವಿ, ಸಮಾಜ ಸುಧಾರಕ ಮತ್ತು ದಾರ್ಶನಿಕ ವಿನಾಯಕ ದಾಮೋದರ ಸಾವರ್ಕರ್ ಮುಂಬೈನಲ್ಲಿ ನಿಧನರಾದರು.

1931: ಡಚ್ ಅಮೆರಿಕನ್ ಅರ್ಥಶಾಸ್ತ್ರಜ್ಞ ಟ್ಜಾಲಿಂಗ್ ಕೂಪ್ಮಾನ್ಸ್ ಅವರು ಅಮೆರಿಕದ ಕನೆಕ್ಟಿಕಟ್ ಬಳಿಯ ನ್ಯೂ ಹ್ಯಾವೆನ್ ಎಂಬಲ್ಲಿ ನಿಧನರಾದರು. ಇವರಿಗೆ 1975 ವರ್ಷದಲ್ಲಿ ನೊಬೆಲ್ ಅರ್ಥಶಾಸ್ತ್ರದ ಪ್ರಶಸ್ತಿ ಸಂದಿತ್ತು.

1998: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಥಿಯೋಡೋರ್ ಸ್ಕಲ್ಟ್ಜ್ ಇಲಿನಾಯ್ಸ್ ಬಳಿಯ ಎವಾನ್ಸ್ಟನ್ ಎಂಬಲ್ಲಿ ನಿಧನರಾದರು. ಇವರಿಗೆ 1979 ವರ್ಷದಲ್ಲಿ ನೊಬೆಲ್ ಅರ್ಥಶಾಸ್ತ್ರದ ಪ್ರಶಸ್ತಿ ಸಂದಿತ್ತು.

2004: ಎರಡು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾಗಿ, ಕೇಂದ್ರ ಸರ್ಕಾರದಲ್ಲಿ ಅರ್ಥಮಂತ್ರಿಗಳಾಗಿ ಹಾಗೂ ಗೃಹಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದ ಶಂಕರರಾವ್ ಚೌಹಾಣ್ ನಿಧನರಾದರು.

2005: 1970ರ ದಶಕದಲ್ಲಿ ಆಪಲ್ ಸಂಸ್ಥೆಗೆ ಮೆಕಿನ್ತೋಶ್ ಸೃಷ್ಟಿಸಿ ಪ್ರಸಿದ್ಧರಾದ ಜೆಫ್ ರಸ್ಕಿನ್ ಅವರು ಕ್ಯಾಲಿಫೋರ್ನಿಯಾದ ಪೆಸಿಫಿಕಾ ಎಂಬಲ್ಲಿ ನಿಧನರಾದರು.

2006: ಸಂಗೀತ ವಿದ್ವಾಂಸರಾದ ಚಿಂತಾಲಪಲ್ಲಿ ಚಂದ್ರಶೇಖರ್ ತಮ್ಮ 62ನೆಯ ವಯಸ್ಸಿನಲ್ಲಿ ನಿಧನರಾದರು. ಇವರು ಹಿಂದೂಸ್ಥಾನಿ ಸಂಗೀತ ಮತ್ತು ಸುಗಮ ಸಂಗೀತ ಗಾಯಕರಾಗಿ ಜನಪ್ರಿಯರಾಗಿದ್ದರು. ಇವರ ಎಂ.ಎಸ್.ಐ.ಎಲ್ ಪ್ರಾಯೋಜನೆಯ ‘ವಚನ ಸಾಹಿತ್ಯ’ ಮತ್ತು ರಾಜ್ಯಸರ್ಕಾರದ ಪ್ರಾಯೋಜನೆಯ ‘ದಾಸ ಸಾಹಿತ್ಯ’ ಸಂಯೋಜನೆಗಳು ಶ್ಲಾಘನೆ ಪಡೆದಿತ್ತು.