(ವಾಂಕೇಲ್ ಎಂಜಿನ್)

ಫೆಲಿಕ್ಸ್ ವಾಂಕೇಲ್ ಒಬ್ಬ ಜರ್ಮನ್ ಮೋಟರ್ ಎಂಜನೀಯರ್. ೧೯೧೯-೨೦ರ ಜರ್ಮನಿಯ ಹಣದುಬ್ಬರ ಬಿಕ್ಕಟ್ಟಿನ ಕಾಲದಲ್ಲಿ ಇವರ ಕುಟುಂಬ ತೀರ ಬಡತನವನ್ನು ಎದುರಿಸಬೇಕಾಯಿತು. ಕುಟುಂಬದ ಬಡತನದ ಸ್ಥಿತಿಯಿಂದಾಗಿ ಫೆಲಿಕ್ಸ್ ವಾಂಕೇಲ್‌ಗೆ ವಿಶ್ವವಿದ್ಯಾಲಯದ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಉಪಜೀವನಕ್ಕಾಗಿ ಅವರು ಕಾರು ದುರಸ್ತಿ ಕಾರ್ಯವನ್ನು ಆರಂಭಿಸಿದರು. ತನ್ನ ೨೨ನೆಯ ವಯಸ್ಸಿನಲ್ಲಿ ಸ್ವಂತ ವ್ಯವಹಾರವನ್ನೇ ಶುರು ಮಾಡಿದರು. ಆದರೆ ಅವರು ಬರಿ ವ್ಯವಹಾರದಲ್ಲೇ ತೊಡಗದೆ ಎಂಜಿನುಗಳ ಸುಧಾರಣೆಯಲ್ಲಿ ವಿಶೇಷ ಆಸಕ್ತಿ ವಹಿಸತೊಡಗಿದರು.

ಅವರು ರೋಟರಿ ಪಿಸ್ಟನ್ ಎಂಜಿನ್ ಅನ್ನು ತಯಾರು ಮಾಡುವ ಕಾರ್ಯದಲ್ಲಿ ಮಗ್ನರಾದರು. ಅವರ ಕಾರ್ಯಕ್ಕೆ ಜರ್ಮನ್ ವಿಮಾನ ಪಡೆ ನೆರವಾಯಿತು. ರೋಟರಿ ಪಿಸ್ಟನ್ ಎಂಜಿನ್‌ನ ಶೋಧನೆ ಮಾಡಿರುವುದು ಫೆಲಿಕ್ಸ್ ವಾಂಕೇಲ್‌ರ ಒಂದು ದೊಡ್ಡ ಸಾಧನೆ. ಇದನ್ನು ‘ವಾಂಕೇಲ್ ಎಂಜಿನ್’ ಎಂದು ಕರೆಯಲಾಗುತ್ತದೆ. ೧೯೫೧ರಲ್ಲಿ ಅವರು ತಮ್ಮದೇ ಆದ ಸಂಶೋಧನಾ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಭಾರೀ ಪ್ರಮಾಣದಲ್ಲಿ ಕಾರುಗಳಿಗಾಗಿ ವಾಂಕೇಲ್ ಎಂಜಿನುಗಳ ಉತ್ಪಾದನೆ ೧೯೬೭ರಲ್ಲಿ ಆರಂಭವಾಯಿತು.

ರೋಟರಿ ಪಿಸ್ಟನ್ ಎಂಜಿನ್‌ನ ಆಕಾರ ಸಣ್ಣದು, ತುಕ ಕಡಿಮೆ, ಅದಿರಾಟವೂ ಕಮ್ಮಿ. ಅದು ಅ‌ಷ್ಟು ಸದ್ದು ಮಾಡುವುದಿಲ್ಲ. ಅದರ ಉತ್ಪಾದನ ವೆಚ್ಚಗಳೂ ಅಧಿಕವಾಗುವುದಿಲ್ಲ. ಈ ಎಂಜಿನು ಔದ್ಯಮಿಕ, ಹಡಗು ಮತ್ತು ವೈಮಾನಿಕ ಕ್ಷೇತ್ರಗಳಿಗೂ ಹೆಚ್ಚು ಉಪಯುಕ್ತವಾದದ್ದು.