ಚೀನೀ ಕೊರಿಯ ಸಾಧನಗಳು ಭಾರತದ ಗಡಿ ದಾಟಿ ಬರಲು ಶುರು ಮಾಡಿದ್ದೇ ಮಾಡಿದ್ದು ವ್-ಇನ್-ಒನ್ ಟೇಪ್ರೆಕಾರ್ಡರುಗಳು, ಫೋರ್-ಇನ್-ಒನ್ ಮೊಬೈಲು ಫೋನುಗಳು, ತ್ರೀ-ಇನ್-ಒನ್ ಬ್ಯಾಟರಿ ದೀಪಗಳು ಕುಗ್ರಾಮದ ಮನೆಗಳಲ್ಲಿಯೂ ನೆಲೆಯಾಗಿವೆ. ಒಂದೇ ಸಾಧನದಲ್ಲಿ ಹಲವು ಕಾರ್ಯಗಳನ್ನು ಅಡಕಗೊಳಿಸುವ ತಂತ್ರಜ್ಞರ ಈ ಚಟ ಈಗ ಔಷಧ ಕ್ಷೇತ್ರಕ್ಕೂ ಕಾಲಿಟ್ಟಿತೇ?

 

ಆಂಗೆವಾಡ್ತೆ ಕೆಮೀ ಎನ್ನುವ ಜರ್ಮನ್ ರಾಸಾಯನಿಕ ವಿಜ್ಞಾನ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಸಂಶೋಧನಾ ಪ್ರಬಂಧವೊಂದು ಹೀಗೊಂದು ಸಂಶಯವನ್ನು ಮುಂದಿಟ್ಟಿದೆ. ಕ್ಯಾನ್ಸರ್ ಕೋಶಗಳನ್ನು ಪತ್ತೆ ಮಾಡಿ, ಅವುಗಳನ್ನೇ ಗುರಿಮಾಡಿಕೊಂಡು ಸಾಗುವ ಹಾಗೂ ಕ್ಯಾನ್ಸರ್ ಕೋಶವನ್ನು ಮುಟ್ಟಿದ ಕೂಡಲೇ ಒಳಗಿನ ಚಟುವಟಿಕೆಗಳನ್ನು ನಿಲ್ಲಿಸಿ ಕೋಶವನ್ನು ಕೊಲ್ಲುವಂತಹ ನಾಲ್ಮಡಿ ಕೆಲಸ ಮಾಡುವ ಔಷಧದ ಸೃಷ್ಟಿ ಸಾಧ್ಯವೆಂದು ಈ ಪ್ರಬಂಧ ವರದಿ ಮಾಡಿದೆ.

ಅಷ್ಟೇ ಅಲ್ಲ. ಕ್ಯಾನ್ಸರ್ ಕೋಶದೊಳಗೆ ಈ ಔಷದ ನಡೆಸುತ್ತಿರುವ ಕೆಲಸ ವಿಜ್ಞಾನಿಗಳಿಗೆ ಗೋಚರವಾಗುವಂತೆಯೂ ಔಷಧವನ್ನು ರೂಪಿಸಲಾಗಿದೆಯಂತೆ. ಹೀಗೆ ಕ್ಯಾನ್ಸರ್ ಜೀವಕೋಶಗಳನ್ನು ಗುರುತು ಹಿಡಿದು, ಅವುಗಳೊಳಗೆ ನುಸುಳಿ, ಅವನ್ನು ಕೊಂದು, ಆ ಸಾವನ್ನು ಖಾತರಿ ಪಡಿಸಿಕೊಳ್ಳುವ ನಾಲ್ಕೂ ಕೆಲಸಗಳನ್ನು ಒಂದೇ ಔಷಧ ಮಾಡಲಿದೆ. ಅಂದ ಹಾಗೆ, ಈ ಔಷಧವನ್ನು ಸೃಷ್ಟಿಸಿದ ಜಿನ್ವೂ ಶಿಯೊನ್ ದಕ್ಷಿಣ ಕೊರಿಯದ ಯೋನ್ಸಿ ವಿಶ್ವವಿದ್ಯಾನಿಲಯದ ವಿಜ್ಞಾನಿ. ನ್ಯಾನೊ ತಂತ್ರಜ್ಞಾನದ ಜೊತೆಗೆ ಜೀನ್ ಚಿಕಿತ್ಸೆ ಹಾಗೂ ಕ್ಯಾನ್ಸರ್ ಚಿಕಿತ್ಸೆಗೆ ಪರಿಣಾಮಕಾರಿ ಔಷಧಗಳನ್ನು ದೊರಕಿಸಬಲ್ಲುದು ಎಂದು ವೈದ್ಯಕೀಯ ಕ್ಷೇತ್ರದಲ್ಲಿ ಇತ್ತೀಚೆಗೆ ವಿಶ್ವಾಸವುಂಟು ಮಾಡಿರುವ ಸೂಕ್ಷ್ಮ ಆರ್ಎನ್ಎ ತಂತ್ರಗಳನ್ನು ಬೆಸೆದು ಇವರು ಇಂತಹುದೊಂದು ಬಹುಕ್ರಿಯಾಶಾಲಿ ಔಷಧವನ್ನು ರೂಪಿಸಿದ್ದಾರೆ.

ದೇಹದ ಯಾವ್ಯಾವುದೋ ಮೂಲೆಯಲ್ಲಿ ಸಣ್ಣದಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಕೋಶಗಳನ್ನು ಹುಡುಕುವುದು ಬಣವೆಯಲ್ಲಿ ಸೂಜಿಯನ್ನು ಹುಡುಕಿದಷ್ಟೆ ಸುಲಭ. ಏಕೆಂದರೆ, ಕ್ಯಾನ್ಸರ್ ಕೋಶಗಳು ಹಾಗೂ ದೇಹದ ಇತರೆ ಕೋಶಗಳಿಗೂ ಇರುವ ವ್ಯತ್ಯಾಸ ಅತ್ಯಲ್ಪ. ಈ ವ್ಯತ್ಯಾಸಗಳನ್ನು ಗುರುತಿಸಿಯೇ ಕ್ಯಾನ್ಸರ್ ಕೋಶಗಳನ್ನು ಪತ್ತೆ ಹಚ್ಚಬೇಕು. ಕೊಯ್ದು ಹೊರತೆಗೆದ ಜೀವಕೋಶಗಳಿಗೆ ಬಣ್ಣ ಹಚ್ಚಿ ವ್ಯತ್ಯಾಸಗಳನ್ನು ಪತ್ತೆ ಹಚ್ಚಬಹುದು. ಆದರೆ ದೇಹದೊಳಗೆ ಇರುವ ಕೋಶಗಳನ್ನು ಪತ್ತೆ ಮಾಡಿದರಷ್ಟೆ ಚಿಕಿತ್ಸೆ ಫಲಕಾರಿಯಾದೀತು. ಇದಕ್ಕಾಗಿ ಈ ಹಿಂದೆ ಮಾಂತ್ರಿಕಗುಂಡು ಎನ್ನುವ ತಂತ್ರವನ್ನು ರೂಪಿಸಲಾಗಿತ್ತು. ಕ್ಯಾನ್ಸರ್ಕೋಶಗಳ ಮೇಲಷ್ಟೆ ಕಾಣಿಸುವ ಕೆಲವು ಪ್ರೋಟೀನುಗಳಿಗಷ್ಟೆ ಅಂಟಿಕೊಳ್ಳುವ ಪ್ರತಿಕಾಯದ ಅಣುಗಳನ್ನು (ಮಾನೋಕ್ಲೋನಲ್ ಆಂಟಿಬಾಡಿ) ತಯಾರಿಸಿ, ಅವು ಕ್ಯಾನ್ಸರ್ ಕೋಶಗಳನ್ನು ತಪ್ಪಿಲ್ಲದೆ ಗುರುತಿಸುತ್ತವೆಯೇ ಎಂದು ಪರೀಕ್ಷಿಸಲಾಗಿತ್ತು. ಈ ಅಣುಗಳಿಗೆ ಕೋಶವಿಷವನ್ನು ತಳುಕಿಸಿ, ಕ್ಯಾನ್ಸರ್ ಕೋಶಗಳನ್ನಷ್ಟೆ ಗುರಿಯಿಟ್ಟು ಕೊಲ್ಲುವ ಆಲೋಚನೆಯೂ ಇತ್ತು. ಆದರೆ ಇದು ನಿರೀಕ್ಷಿಸಿದಷ್ಟು ಸಫಲ ಚಿಕಿತ್ಸೆಯಾಗಲಿಲ್ಲ. ಮಾಂತ್ರಿಕಗುಂಡು ಎನ್ನುವುದು ಕೇವಲ ಹೆಸರಾಗಿ ಉಳಿಯಿತಷ್ಟೆ! ಅಲ್ಲಿ ಗುಂಡುಗಳೂ ಇರಲಿಲ್ಲ. ಆಶಿಸಿದ ಮ್ಯಾಜಿಕ್ಕೂ ಸಾಧ್ಯವಾಗಲಿಲ್ಲ.

ಇದೀಗ ಶಿಯೊನ್ ರೂಪಿಸಿರುವ ತಂತ್ರ ಈ ಮಾಂತ್ರಿಕಗುಂಡಿನಂತೆಯೇ ಕೆಲಸ ಮಾಡುತ್ತಾದೆ. ಜೊತೆಗೆ ನಿಜವಾದ ಲೋಹದ ಗುಂಡುಗಳನ್ನೂ ಬಳಸುತ್ತದೆ. ಆದರೆ ಈ ಗುಂಡುಗಳೆಲ್ಲ ನ್ಯಾನೊಯುಗದ ಗುಂಡುಗಳು.  ನ್ಯಾನೊ ಯುಗ ಅಂದರೆ ಗೊತ್ತಲ್ಲ! ಸೂಕ್ಷ್ಮಾತಿಸೂಕ್ಷ್ಮ ಅಣುಗಳು, ಸಾಧನಗಳನ್ನು ಬಳಸುವ ತಂತ್ರಗಳು ಹುಟ್ಟುತ್ತಿರುವ ಕಾಲ. ಕ್ಯಾನ್ಸರ್ ಕೋಶಗಳನ್ನು ಗುರುತಿಸುವ ಪ್ರೊಟೀನ್ ಕೊಕ್ಕೆ, ಆ ಕೋಶಗಳೊಳಗೆ ನುಸುಳಬಲ್ಲ ರಾಸಾಯನಿಕ ಅಣುಗಳು ಹಾಗೂ ಒಳಹೊಕ್ಕ ಅನಂತರ ಕೋಶದೊಳಗೆ ಪ್ರೊಟೀನ್ ತಯಾರಿಕೆ ನಡೆಯದ ಹಾಗೆ ಮಾಡುವ ಸೂಕ್ಷ್ಮ ಆರ್ಎನ್ಎ ತುಣುಕುಗಳನ್ನು ಸುಮಾರು ಹದಿನೈದು ನ್ಯಾನೋಮೀಟರು (ಒಂದು ಮಿಲಿಮೀಟರ್ ಹತ್ತು ಲಕ್ಷ ನ್ಯಾನೊಮೀಟರುಗಳಿಗೆ ಸಮಾನ)  ದಪ್ಪ ಇರುವ ಸೂಕ್ಷ್ಮಾತಿಸೂಕ್ಷ್ಮ ಗುಂಡುಗಳಿಗೆ ಶಿಯೊನ್ ಲೇಪಿಸಿದ್ದಾರೆ. ಹೀಗೆ ನಾಲ್ಮಡಿ ಕೆಲಸ ಮಾಡುವ ನ್ಯಾನೊಗುಂಡುಗಳನ್ನು ತಯಾರಿಸಿದ್ದಾರೆ. ಒಂದು ಮಿಲಿಮೀಟರಿನಲ್ಲಿ ಇಂತಹ ಐವತ್ತು ಸಾವಿರಕ್ಕೂ ಹೆಚ್ಚು ಗುಂಡುಗಳನ್ನು ಸಾಲಾಗಿ ಜೋಡಿಸಬಹುದು.

ಲೋಹದ ಗುಂಡುಗಳು ಒಳಹೊಕ್ಕಾಗ ಅವನ್ನು ದೇಹ ಹೊರಗೆ ದೂಡುವುದಿಲ್ಲವೇ ಎಂದಿರಾ? ಇದು ಆಗದಿರಲಿ ಎಂದು ಗುಂಡುಗಳ ಮೇಲೆ ರಕ್ತದಲ್ಲಿರುವ ಆಲ್ಬುಮಿನ್ ಪ್ರೊಟೀನ್ ಹೊದಿಸಲಾಗುತ್ತದೆ. ಅನಂತರ ವಿಶೇಷ ರಾಸಾಯನಿಕ ತಂತ್ರಗಳಿಂದ ಆಲ್ಬುಮಿನ್ ಅಣುಗಳಿಗೆ ಗಂಧಕದ ಬಂಧಗಳನ್ನು ಜೋಡಿಸಲಾಗುತ್ತದೆ. ಇದು ಒಂದು ರೀತಿಯಲ್ಲಿ ಕೊಕ್ಕೆ ಇದ್ದ ಹಾಗೆ. ಈ ಕೊಕ್ಕೆಗಳಿಗೆ ಇತರೇ ರಾಸಾಯನಿಕಗಳು ತಗುಲಿಕೊಳ್ಳುವಂತೆ ಮಾಡುವುದು ಸುಲಭ. ಹೀಗೆ ತಯಾರಾದ ಗುಂಡುಗಳ ಜೊತೆಗೆ ಕ್ಯಾನ್ಸರ್ ಕೋಶಗಳ ಮೇಲಷ್ಟೆ ಕಾಣುವ ಆಲ್ಫ-ಗ್ಯಾಮ3 ಪ್ರೊಟೀನಿಗೆ ತೆಕ್ಕೆ ಹಾಕಿಕೊಳ್ಳಬಲ್ಲ ಪೆಪ್ಟೈಡು ಅಣು (ಪೆಪ್ಟೈಡುಗಳು ಪುಟ್ಟ ಪ್ರೊಟೀನುಗಳು), ಸೂಕ್ಷ್ಮ ಆರ್ಎನ್ಎ ಹಾಗೂ ಬೆಳಕು ಬಿದ್ದಾಗ ಹೊಳೆಯುವ ಬಣ್ಣದ ಅಣುಗಳನ್ನೂ ಬೆರೆಸಿ ಇಟ್ಟಾಗ, ಇವೆಲ್ಲವೂ ತಳುಕಿಕೊಂಡ ನ್ಯಾನೊಗುಂಡುಗಳು ತಯಾರಾಗುತ್ತವೆ.

ಅಯಸ್ಕಾಂತೀಯ ಗುಣವುಳ್ಳ ಕಬ್ಬಿಣದ ಆಕ್ಸೈಡ್ ಜೊತೆಗೆ ತುಸು ಮ್ಯಾಂಗನೀಸ್ ಬೆರೆಸಿ ಈ ಗುಂಡುಗಳನ್ನು ತಯಾರಿಸಿದ್ದಾರೆ. ಅಯಸ್ಕಾಂತದಿಂದಾಗಿ ಇವು ಆಕರ್ಷಣೆಗೊಳ್ಳುತ್ತವಷ್ಟೆ ಅಲ್ಲ, ಸ್ವಲ್ಪ ಅಯಸ್ಕಾಂತ ಗುಣವೂ ಇವುಗಳಿಗೆ ಕೂಡಿಕೊಳ್ಳುತ್ತದೆ. ಹೀಗಾಗಿ ಎಂಆರ್ಐ ತಂತ್ರದಿಂದ ಇವು ದೇಹದೊಳಗೆ ಇರುವ, ಹರಿದಾಡುವ ಜಾಗೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಜೊತೆಗೆ ಬೆಳಕು ಚೆಲ್ಲುವ ಬಣ್ಣವೂ ಇರುವುದರಿಂದ, ಎಂಆರ್ಐ ಯಂತ್ರದಡಿಯಲ್ಲಿ ಈ ಗುಂಡುಗಳಿರುವ ಸ್ಥಳ ಸ್ಪಷ್ಟವಾಗಿ ಗೋಚರಿಸುತ್ತದೆ.

ಕ್ಯಾನ್ಸರ್ ಕೋಶಗಳನ್ನು ಕೃಷಿ ಮಾಡಿ ಈ ಗುಂಡುಗಳು ಅವುಗಳೊಳಗೆ ನುಸುಳುತ್ತವೆಯೋ ಎಂದು ಶಿಯೊನ್ ಪರೀಕ್ಷಿಸಿದ್ದಾರೆ.  ಗುಂಡುಗಳು ಕೋಶದೊಳಗೆ ನುಸುಳಿದ್ದಷ್ಟೆ ಅಲ್ಲ, ಅವು ಬೆಳಕಿನಡಿ ಮಿಂಚಿ ಯಾವ ಕೋಶದೊಳಗೆ ತಾವಿದ್ದೇವೆ ಎಂದು ಕೂಡ ತಿಳಿಸಿಕೊಟ್ಟಿವೆ. ಗುಂಡಿನೊಡನೆ ಜೋಡಿಸಿದ ಸೂಕ್ಷ್ಮ ಆರ್ಎನ್ಎ ಕ್ಯಾನ್ಸರ್ ಕೋಶದಲ್ಲಿ ಜಿಎಫ್ಪಿ ಎನ್ನುವ ಪ್ರಮುಖ ಪ್ರೊಟೀನ್ ತಯಾರಿಕೆಯನ್ನು ಕಡಿಮೆಯಾಗಿಸಿತ್ತು. ಆಲ್ಫ-ಗ್ಯಾಮ3 ಪ್ರೊಟೀನ್ ಇಲ್ಲದ ಜೀವಕೋಶಗಳಲ್ಲಿ ಈ ಗುಂಡುಗಳು ಕಾಣಿಸಲೇ ಇಲ್ಲ! ಅರ್ಥಾತ್ ಇವು ಕೇವಲ ಆಲ್ಫ-ಗ್ಯಾಮ3 ಇರುವ ಕೋಶಗಳನ್ನಷ್ಟೆ ಗುರಿಯಾಗಿಸಿಕೊಂಡಿದ್ದುವು. ಹೀಗೆ ಒಂದೇ ಔಷಧದಿಂದ ನಾಲ್ಕು ಕೆಲಸಗಳನ್ನು ಸಾಧಿಸಬಹುದು ಎಂದು ಇವರು ತೋರಿಸಿಕೊಟ್ಟಿದ್ದಾರೆ.

ಜೀವಿಗಳಲ್ಲಿರುವ ಕ್ಯಾನ್ಸರ್ ಕೋಶಗಳ ಮೇಲೆ ಈ ಗುಂಡುಗಳನ್ನು ಗುರಿಯಿಟ್ಟು ಪರೀಕ್ಷಿಸುವುದು ಬಾಕಿ ಇದೆ. ಆಗ ಇವು ಜೀವಿಯ ದೇಹದಲ್ಲಿಯೇ ಉಳಿದು ನಾಲ್ಕೂ ಕೆಲಸಗಳನ್ನು ಸಾಧಿಸುವುವೋ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಬಹುದು. ಆ ದಿನ ಶೀ್ರವೇ ಬರಲೆಂದು ಹಾರೈಸೋಣ! ಆಗ ಫೋರ್-ಇನ್-ಒನ್ ಔಷಧದ ಕನಸು ನನಸಾದೀತು.

1 Wonjae Choi et. al.,All-in-one Target-cell-specific Magnetic Nanoparticles for Simultaneous Molecular Imaging and siRNA Delivery; Angewandte Chemie International Edition, Vol 48, Pp 1-7, 2009 DOI:10.1002/anie.200805998