ಸೆಕ್ಸ್ ಅಥವಾ ಲೈಂಗಿಕತೆ ದಂಪತಿಗಳು ಹಂಚಿಕೊಳ್ಳಬಹುದಾದ ಬಹಳ ಮುಖ್ಯವಾದ ಅನುಭವವಾಗಿರುತ್ತದೆ. ಆದರೆ ಸೆಕ್ಸ್ ಬಗ್ಗೆ ಬೆಡ್ ರೂಮ್‌ನಲ್ಲಿ ಚರ್ಚಿಸಲು ಕೂಡ ಕೆಲವು ದಂಪತಿಗಳು ಹಿಂಜರಿಯುತ್ತಾರೆ. ದಂಪತಿಗಳ ನಡುವೆ ಪ್ರಣಯ-ಪ್ರೀತಿ ಗಟ್ಟಿಗೊಳ್ಳಬೇಕಾದರೆ, ಸಾಮರಸ್ಯ ಮೂಡಬೇಕಾದರೆ ಪರಸ್ಪರ ಅವರುಗಳು ಏಕಾಂತದಲ್ಲಿ ಮಾತನಾಡುವುದು ಅಗತ್ಯ. ಪರಸ್ಪರ ಮಾತಿಲ್ಲದಿದ್ದರೆ ಮಮತೆ-ಮಧುರತೆ ಮೂಡುವುದಿಲ್ಲ. ಮೌನ ದಂಪತಿಗಳ ನಡುವೆ ಮೂಡಿದರೆ ಅನುಕೂಲಕ್ಕಿಂತಲೂ ಅನಾನುಕೂಲ, ಮಾನಸಿಕ ಆತಂಕ, ಭಯ-ಭೀತಿ, ಖಿನ್ನತೆ ಕೂಡ ಉಂಟಾಗಬಹುದು.

ಪ್ರೀತಿ-ಪ್ರಣಯದಲ್ಲಿ ಅತೃಪ್ತಿ ಅಸಮಾಧಾನ ಉಂಟಾದರೆ, ಮೌನ ತಲೆಹಾಕಿದರೆ, ಕಹಿ ಅನುಭವದ ಅಲೆಗಳನ್ನೇ ಮನಸ್ಸು-ಮಾತು-ದೇಹದಲ್ಲಿ ಮೂಡಿಸುತ್ತದೆ. ಕೆಲವೊಮ್ಮೆ ಮೌನ ಸಹಾಯ ಮಾಡುವ ಬದಲು, ತಪ್ಪು ಅಭಿಪ್ರಾಯಗಳನ್ನು ಮೂಡಿಸುವುದಲ್ಲದೆ ಮನಸ್ಸುಗಳ ನಡುವೆ ಅಡ್ಡಗೋಡೆಯನ್ನು ನಿರ್ಮಾನ ಮಾಡುತ್ತದೆ.

ದಂಪತಿಗಳು ತಮ್ಮ ದಾಂಪತ್ಯ ಅಥವಾ ಲೈಂಗಿಕ ಸಮಸ್ಯೆಗಳ ಬಗ್ಗೆ ಪ್ರಾಮಾಣಿಕವಾಗಿ ಮಾತಾಡಿದರೆ, ಚರ್ಚಿಸಿದರೆ ಸಮಸ್ಯೆಗೆ ಪರಿಹಾರವನ್ನು ಹುಡುಕಲು ಸಾಧ್ಯವಾಗುತ್ತದೆ. ದಾಂಪತ್ಯ ಜೀವನ ತೃಪ್ತಿ ಸಮಾಧಾನಕರವಾಗಿದ್ದರೆ, ಪರಸ್ಪರ ಮಾತು-ಸಂಭಾಷಣೆ ಹೊಸತನವನ್ನು ಸಂತೋಷವನ್ನುಂಟು ಮಾಡುತ್ತದೆ.

ದಂಪತಿಗಳು ಸೆಕ್ಸ್ ಬಗ್ಗೆ ಯಾಕೆ ಚರ್ಚಿಸುವುದಿಲ್ಲ?
ವಿವಾಹಕ್ಕೆ ಮೊದಲೇ ಲೈಂಗಿಕ ವಿಜ್ಞಾನದ ಬಗ್ಗೆ ತಿಳುವಳಿಕೆ ಇಲ್ಲದೆ ಇರುವುದರಿಂದ, ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದಿರುವುದರಿಂದ ‘ಸೆಕ್ಸ್’ ಬಗ್ಗೆ ಮಾತಾಡಿದರೆ ಸಂಗಾತಿ ತಪ್ಪು ತಿಳಿದುಕೊಳ್ಳಬಹುದು ಎಂಬ ಕಾರಣದಿಂದ ವಿವಾಹದ ನಂತರವು ಸೆಕ್ಸ್ ಬಗ್ಗೆ ಚರ್ಚಿಸಲು ಸಂಕೋಚಪಡುತ್ತಾರೆ.

ಲೈಂಗಿಕ ಶಿಕ್ಷಣದಲ್ಲಿ ಬರೀ ಸಂತಾನೋತ್ಪತ್ತಿಯ ಬಗ್ಗೆ ಮಾತ್ರ ಚರ್ಚಿಸಿದರೆ ಸಾಲದು, ದಾಂಪತ್ಯ ಜೀವನದಲ್ಲಿ ಲೈಂಗಿಕ ಪಾತ್ರದ ಬಗ್ಗೆಯೂ ಸ್ವಲ್ಪ ಮಟ್ಟಿಗೆ ತಿಳುವಳಲಿಕೆ ಮೂಡಿದ್ದರೆ, ವಿವಾಹದ ನಂತರ ದಂಪತಿಗಳು ಸೆಕ್ಸ್ ಬಗ್ಗೆ ಚರ್ಚಿಸಲು ಸಹಾಯಕವಾಗುತ್ತದೆ.

ದಂಪತಿಗಳು, ಮೊಲೆಗಳು, ಶಿಶ್ನ ಯೋನಿ ಮೊದಲಾದ ಶರೀರ ರಚನೆಗೆ ಸಂಬಂಧಿಸಿದ ಪದಗಳನ್ನು ಉಪಯೋಗಿಸಲು ಕೂಡ ಸಂಕೋಚ ಪಟ್ಟರೆ, ಜನನೇಂದ್ರಿಯಗಳಿಲಗೆ ತೊಡಕು-ತೊಂದರೆ ಉಂಟಾದಾಗ ಸಮಸ್ಯೆ ಉಲ್ಬಣವಾಗುತ್ತಾ ಹೋಗುವ ಸಾಧ್ಯತೆಗಳಿವೆ.

ದಂಪತಿಗಳು ಸಂವಹಿಸುವುದನ್ನು ಕಲಿಯಬೇಕು!

ಸಂವಹನ ಅಥವಾ ಸಂಪರ್ಕ ಎಲ್ಲಿ ಆರಂಭವಾಗಬೇಕು. ದಂಪತಿಗಳು ಬೆಡ್ ರೂಂನಲ್ಲಿ ಸಂವಹಿಸುವುದರಿಂದ ಮನಸ್ಸು ಮಾತಿನಲ್ಲಿರುವ ‘ಲೈಂಗಿಕಲಹರಿ’ಗಳನ್ನು ಸಲೀಸಾಗಿ ಸುಗಮವಾಗಿ ಹಂಚಿಕೊಳ್ಳಲು ಸುಲಭವಾಗುತ್ತದೆ.

ಸಮಸ್ಯೆಯನ್ನು ತಿಳಲಿಸಲು ಗಂಡ-ಹೆಂಡತಿಯರಲ್ಲಿ ಯಾರು ಮುಂದಾಗ ಬೇಕು ಎಂಬ ಪ್ರಶ್ನೆಗಿಂತಲೂ ‘ಲೈಂಗಿಕ ಅತೃಪ್ತಿ’ಯನ್ನು ಕುರಿತು ಸಂಯಮ, ಪ್ರಶಾಂತತೆಯಿಂದ ಚರ್ಚಿಸುವುದು ಅಗತ್ಯ.

ಲೈಂಗಿಕ ತೊಂದರೆಗಳು ಮಾನಸಿಕ ಭಯದಿಂದ ಉಂಟಾಗಿದ್ದರೆ ನಿಮ್ಮ ಸಂಗಾತಿಗೆ ಸಾವಧಾನವಾಗಿ ತಿಳಿಸಿದರೆ ಸಹಾಯ ಮಾಡಲು ಅನುಕೂಲವಾಗುತ್ತದೆ. ಅಲ್ಲದೆ, ತಜ್ಞವೈದ್ಯರ ಸಲಹೆ-ಸಹಾಯ ಪಡೆಯಲು ಸಹಾಯಕವಾಗುತ್ತದೆ. ಅಷ್ಟೇ ಅಲ್ಲದೆ, ದಂಪತಿಗಳು ಏಕಾಂತದಲ್ಲಿ ‘ಲೈಂಗಿಕ ಮಾತುಕತೆ’ಯನ್ನು ಸಂಯಮದಿಂದ ಆಡುವುದರಿಂದ ದಾಂಪತ್ಯದಲ್ಲಿ ‘ಪ್ರೀತಿ’ ಉತ್ತಮಗೊಳ್ಳಲು ನೆರವಾಗುತ್ತದೆ.

* * *