ಫ್ರಿಜಿಡ್ ಅಂದರೆ, ಶೀತಲ (ಕೋಲ್ಡ್) ಎಂದರ್ಥ. ಫ್ರಿಜಿಡ್ ಆಗಿರುವ ಸ್ತ್ರೀಯರಲ್ಲಿ ಲೈಂಗಿಕತೆಯ ಬಗ್ಗೆ ಆಸಕ್ತಿ ಇರುವುದಿಲ್ಲ. ಕೆಲವು ಅಧ್ಯಯನಗಳ ಪ್ರಕಾರ ಸ್ತ್ರೀಯರಲ್ಲಿ ಸೆಕ್ಸ್ ಬಗ್ಗೆ ನಿರಾಸಕ್ತಿ ಉಂಟಾಗಲು ಒಂದಲ್ಲ ಒಂದು ರೀತಿಯ ಭಯ ಭೀತಿಯೇ ಕಾರಣವೆಂದು ತಿಳಿಸಿದೆ. ಕೆಲವು ಸ್ತ್ರೀಯರಲ್ಲಿ ಕಷ್ಟ ಉಂಟಾಗಲು ಮೂಲಭೂತವಾಗಿ ಸಹಜ ಲೈಂಗಿಕತೆಯ ಬಗ್ಗೆ ಇರುವ ತಪ್ಪು ಕಲ್ಪನೆ. ಆಕೆ ಪುರುಷನನ್ನು ಅಧಿಕಾರ ಚಲಾಯಿಸುವವ, ಆಕ್ರಮಣಕಾರಿಯೆಂದು, ಸ್ತ್ರೀ ಆಕ್ರಮಣಕಾರಿಯಲ್ಲವೆಂದು ಅಥವಾ ಸ್ವೀಕರಿಸುವವಳು ಮಾತ್ರವೆಂದು ಭಾವಿಸಿರುತ್ತಾಳೆ. ಲೈಂಗಿಕ ಸಂಬಂಧ ಆದರ್ಶಕರವಾಗಿದ್ದರೆ, ತೃಪ್ತಿಕರವಾಗಿದ್ದರೆ ಲೈಂಗಿಕ ಆನಂದಕ್ಕೆ ಆಡಚಣೆಯಾಗುವುದಿಲ್ಲ. ಆಕ್ರಮಣಕಾರಿ ಲೈಂಗಿಕ ಚಟುವಟಿಕೆ ಪತ್ನಿಯಲ್ಲಿ ಭಯ, ಆತಂಕವನ್ನುಂಟು ಮಾಡುತ್ತದೆ. ಅಲ್ಲದೆ ಲೈಂಗಿಕ ಪರಾಕಾಷ್ಠತೆಯನ್ನು ತಲುಪಲು ಸಾಧ್ಯವಾಗುವುದಿಲ್ಲ.

ಪತ್ನಿಯಲ್ಲಿ ಭಯ-ಭೀತಿಯಿದ್ದರೆ ಅದನ್ನು ಗಂಡನಾದವನು, ಪ್ರೀತಿ  ಪೂರ್ವಕವಾಗಿ ನಿವಾರಿಸದಿದ್ದರೆ ಆಕೆ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಮಾನಸಿಕವಾಗಿ ಶಾರೀರಿಕವಾಗಿ ತೃಪ್ತಿಯನ್ನು ಹೊಂದುವುದಿಲ್ಲ. ಅಲ್ಲದೆ ಜಾಗೃತ ಮನಸ್ಸಿನಲ್ಲಿ ಮತ್ತು ಆಟೋನಿಮಿಕ್ ನರಗಳ ವ್ಯೂಹದಲ್ಲಿ ಉದ್ವೇಗದ ಸ್ಥಿತಿ ಉಂಟಾಗುತ್ತದೆ.

ಸ್ತ್ರೀಯರಲ್ಲಿ, ಲೈಂಗಿಕ ನಿರಾಶೆ ಅನೇಕ ಕಾರಣಗಳಿಂದ ಉಂಟಾಗುತ್ತದೆ. ಅದು ಅಜ್ಞಾನದಿಂದ, ಪ್ರೀತಿ -ಪ್ರೇಮದ ಭಾವನೆಗಳ ಕೊರತೆಯಿಂದ, ಭಯ ದಿಂದ ಅಥವಾ ಕೌಟುಂಬಿಕ ಮನಸ್ತಾಪಗಳಿಂದ ಉಂಟಾಗಬಹುದು. ಅಥವಾ ಅತ್ತೆ-ಮಾವ, ಭಾವಮೈದುನ, ನಾದಿನಿಯರ ಕಿರುಕುಳದಿಂದ ಲೈಂಗಿಕ ನಿರಾಸೆ ಉದ್ಭವಿಸಬಹುದು. ಕೆಲವೊಮ್ಮೆ ಏಕಾಂತದಲ್ಲಿ ಮುಕ್ತವಾಗಿ ಲೈಂಗಿಕತೆಯನ್ನು ಅನುಭವಿಸಲು ಸಾಧ್ಯವಾಗದಿದ್ದಾಗಲೂ ಆಕೆ ನಿರಾಶೆಗೊಳ್ಳಬಹುದು. ಅಷ್ಟೇ ಅಲ್ಲದೆ, ಹಣಕಾಸಿನ ತೊಂದರೆಗಳು, ಸಾಮಾಜಿಕ ಘರ್ಷಣೆ, ಆಂತರಿಕ ಒತ್ತಡದಿಂದಲೂ ಸ್ತ್ರೀಯ ಭಾವನೆಗಳ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಬಹುದು.

ನಿರಾಶೆಯೊಂದೇ ಸ್ತ್ರೀಯರಲ್ಲಿ ಲೈಂಗಿಕ ನಿರಾಸಕ್ತಿಯನ್ನು ಮೂಡಿಸುವುದಿಲ್ಲ. ‘ಕಾಮ’ ಪಾಪಕರವಾದುದು, ಕೆಟ್ಟದ್ದು ಎಂಬ ಭಾವನೆ ಹರೆಯದರಲ್ಲೇ ಮೂಡಿದ್ದರೆ, ಆಕೆ ವಿವಾಹವಾದ ನಂತರ ‘ಕಾಮ’ದ ಬಗ್ಗೆ ಆಸಕ್ತಿಯನ್ನು ತೋರಲು ಹಿಂಜರಿಯುತ್ತಾಳೆ.

ಲೈಂಗಿಕ ಭಯವನ್ನು ಚಿತ್ತಚಂಚಲತೆ ಅಥವಾ ನ್ಯೂರೋಸಿಸ್ ಎಂದು ಹೇಳಲಾಗುವುದಿಲ್ಲ. ಲೈಂಗಿಕತೆಯ ಬಗ್ಗೆ ಸಾಕಷ್ಟು ವೈಜ್ಞಾನಿಕ ಮಾಹಿತಿ ಸ್ತ್ರೀಗೆ ದೊರೆಯದೆ ಇರುವುದರಿಂದ ಆಕೆಯಲ್ಲಿ ಲೈಂಗಿಕ ಭಯ ಅಥವಾ ಸೆಕ್ಸ್ ಫೋಬಿಯಾ ಮೂಡುತ್ತದೆ.