ಫ್ರಿಜಿಡಿಟಿ ಪದದ ನಿಘಂಟಿನ ಅರ್ಥ!

ಫ್ರಿಜಿಡಿಟಿ ಎಂಬ ಇಂಗ್ಲಿಷ್ ಪದದ ಅರ್ಥ; ಕಾವಿಲ್ಲದ, ಉತ್ಸಾಹ ಶೂನ್ಯ, ಉದಾಸೀನಭಾವದ, ಬೇಕಾಮನೆ, ಕಾಮೋದ್ರೇಕವಿಲ್ಲದಿರುವುದು, ಸಾಮಾನ್ಯ ಲೈಂಗಿಕಾಸೆಯ ಕೊರತೆ ಎಂದು. ಫ್ರಿಜಿಡಿಟಿಗೆ ಕನ್ನಡದಲ್ಲಿ ಬೇಕಾಮನೆ, ಲೈಂಗಿಕ ನಿರುತ್ಸಾಹದ ಜಡತ್ವ ಎನ್ನುತ್ತಾರೆ.

ಬೇಕಾಮನೆ ಅಥವಾ ಫ್ರಿಜಿಡಿಟಿ ಪದವನ್ನು ಮುಖ್ಯವಾಗಿ ಹೆಣ್ಣಿಗೆ ಸಂಬಂಧಿಸಿದಂತೆ ಉಪಯೋಗಿಸಲಾಗುತ್ತದೆ.

ಸಾಮಾನ್ಯವಾಗಿ ಸ್ತ್ರೀಯರಲ್ಲಿ ಲೈಂಗಿಕ ಪ್ರತಿಕ್ರಿಯೆಯ ಕೊರತೆಯನ್ನು ಫ್ರಿಜಿಡಿಟಿ ಎಂದು ಕರೆಯುತ್ತಾರೆ. ಯಾವ ಪ್ರಮಾಣದಲ್ಲಿ ಹೆಣ್ಣಿನಲ್ಲಿ ಫ್ರಿಜಿಡಿಟಿ ಇರುತ್ತದೆಂಬುದನ್ನು ಹೇಳುವುದು ವಿರೋಧಾಭಾಸದ ಉತ್ತರವಾಗುತ್ತದೆ. ಈ ಹಿಂದೆ ನಡೆದ ಅಧ್ಯಯನಗಳ ಪ್ರಕಾರ ಸ್ತ್ರೀಯರಲ್ಲಿ ಲೈಂಗಿಕ ಪ್ರತಿಕ್ರಿಯೆಯ ಕೊರತೆಗೆ ಪ್ರಾಥಮಿಕವಾಗಿ ಮನಸ್ಸೇ ಮೂಲವಾಗಿರುತ್ತದೆ.

ಫ್ರಿಜಿಡಿಟಿಯಲ್ಲಿ ಸ್ತ್ರೀ

೧. ಪೂರ್ಣವಾಗಿ ಲೈಂಗಿಕ ಉದ್ರೇಕ ಗಳಿಸಲು ಅಸಮರ್ಥಳಾಗಿರುತ್ತಾಳೆ.

೨. ಆಕೆ, ಲೈಂಗಿಕವಾಗಿ ಉದ್ರೇಕಗೊಳ್ಳುತ್ತಾಳೆ. ಆದರೆ, ಲೈಂಗಿಕ ಪರಾಕಾಷ್ಠತೆ ಅಥವಾ ಆರ್ಗ್ಯಾಸಮ್ (ಸೆಕ್ಸ್‌ಕ್ಲೈಮಾಕ್ಸ್)ನ್ನು ಅನುಭವಿಸಲು ಅಸಮರ್ಥಳಾಗುತ್ತಾಲೆ.

೩. ಲೈಂಗಿಕ ಉತ್ತೇಜನಕ್ಕೆ ಸ್ತ್ರಿ, ಕಡಿಮೆ ರೀತಿಯಲ್ಲಿ ಪ್ರತಿಕ್ರಿಯೆಯನ್ನು ತೋರುತ್ತಾಳೆ ಎಂದು ಡಾ|| ಪಾಲ್ ಜೆ.ಗಿಲ್ಲೆಟೆ ಸಂಪಾದಿಸಿರುವ ಸೆಕ್ಸ್ ನಿಘಂಟಿನಲ್ಲಿ ತಿಳಿಸಿದೆ.

ಪರಾಕಾಷ್ಠತೆಯ ಪೀಠಿಕೆ

ಸ್ತ್ರೀಯರ, ಲೈಂಗಿಕ ಇಷ್ಟ ಮತ್ತು ಕೊರತೆಯ ಬಗ್ಗೆ ನಿರ್ಲಕ್ಷ್ಯ ಮತ್ತು ಅರ್ಥ ಮಾಡಿಕೊಳ್ಳದಿರುವಿಕೆಯ ವಿಷಯಗಳನ್ನೇ ಜೀವಶಾಸ್ತ್ರ ಮತ್ತು ಮನೋವಿಜ್ಞಾನದಲ್ಲಿ ಕಾಣುತ್ತಿದ್ದೇವೆ ಎಂದು ಕೆಲವು ಲೈಂಗಿಕ ತಜ್ಞರ ಅಭಿಪ್ರಾಯ. ಖ್ಯಾತ ಮನೋವಿಜ್ಞಾನಿ ಫ್ರಾಯ್ಡ್, ಸಹಸ್ತ್ರೀಯ ಲೈಂಗಿಕ ಸ್ವಭಾವವನ್ನು ವೈಜ್ಞಾನಿಕವಾಗಿಯೂ, ನಾವು ಅಪೂರ್ಣವಾಗಿ ತಿಳಿದುಕೊಂಡಿದ್ದೇವೆ ಎಂದು ತಿಳಿಸಿದರೆ, ಡಾ|| ಎಡ್ಮಂಡ್ ಬರ್ಗಲರ್ ಕೂಡ ಸ್ತ್ರೀಯಲ್ಲಿ ಬೇಕಾಮನೆ ಮರೆತಂತಹ ಕಾಯಿಲೆಯೇ ಆಗಿದೆ ಎಂದು ತಿಳಿಸಿದ್ದಾರೆ.

ಸ್ತ್ರೀಯಲ್ಲಿ ಲೈಂಗಿಕ ಅತೃಪ್ತಿ ಬಹುಶಃ ಮಾನವ ಜನಾಂಗದ ಆರಂಭದಿಂದಲೇ ಅಸ್ತಿತ್ವದಲ್ಲಿರಬಹುದು. ಎಲ್ಕನ್ ಅನ್ನುವ ತಜ್ಞರು ಬಹುಶಃ, ಪುರುಷನ ಲೈಂಗಿಕ ಸಂತೋಷವನ್ನು ಕಂಡು, ಸ್ತ್ರೀ ಆರ್ಗ್ಯಾಸಮ್ (ಲೈಂಗಿಕ ಪರಾಕಾಷ್ಠತೆ) ಬಗ್ಗೆ ಜಾಗೃತಿಗೊಂಡಿದ್ದಾಳೆ. ಅವರ ಪ್ರಕಾರ ಲೈಂಗಿಕ ಸಂಭೋಗದಲ್ಲಿ ಪುರುಷ ಆರ್ಗ್ಯಾಸಮ್ ಪಡೆದಿದ್ದಾನೆ. ಸ್ತ್ರೀ ಅದನ್ನು ಪಡೆಯದೆ ಇರುವುದೇ ಸಮಸ್ಯೆಯ ಬೆಳವಣಿಗೆಗೆ ಕಾರಣವೆಂದು ತಿಳಿಸಿದ್ದಾರೆ.

ವಾತ್ಸ್ಯಾಯನ ಕಾಮಸೂತ್ರದಲ್ಲಿ, ಸ್ತ್ರೀ-ಪುರುಷರ ಲೈಂಗಿಕ ಸಂಬಂಧ ಹೇಗಿರಬೇಕೆಂದು ಪ್ರಸ್ತಾಪಿಸಲಾಗಿದೆ.

ಹರ್ಡೆನ್ ಬರ್ಗ್‌ರವರು ೩೦ ಮಂದಿ ವಿವಾಹಿತ ಮಹಿಳೆಯರನ್ನು ಅಧ್ಯಯನ ಮಾಡಿ, ಅವರಲ್ಲಿ ‘ಆರ್ಗ್ಯಾಸಮ್’ ಅಥವಾ ಲೈಂಗಿಕ ಪರಾಕಾಷ್ಠತೆಯ ಗುಣ-ಲಕ್ಷಣಗಳನ್ನು ಈ ರೀತಿ ತಿಳಿಸಿದ್ದಾರೆ.

“ಸಾಮಾನ್ಯವಾಗಿ ಹೆಣ್ಣಿನ ಶರೀರದಲ್ಲಿ ಉದ್ರೇಕ… ಬೆವರುವಿಕೆ.. ಉತ್ತೇಜನಕ್ಕೆ ಪ್ರತಿಕ್ರಿಯೆ. ಯೋನಿಯ ಗೋಡೆ ತೇವಗೊಂಡು ವಿಸ್ತೃತ ಗೊಂಡಿರುವುದಲ್ಲದೆ, ಆನಂದದ ಭಾವನೆಯಿರುತ್ತದೆ. ಉದ್ರೇಕ ಅಧಿಕವಾಗಿರುತ್ತದೆ. ಶಿಶ್ನದ ಒಳತೂರಿಕೆ ಆಕೆಗೆ ಇಷ್ಟವಾಗುತ್ತದೆ. ಅಲ್ಲದೆ ಪೆಲ್ವಿಸ್ (ಕೀಳ್ಗುಳಿಯ ಭಾಗ) ಮತ್ತು ಜನನೇಂದ್ರಿಯಗಳ ಮಾಂಸಖಂಡಗಳಲ್ಲಿ ಸ್ವಪ್ರೇರಣೆಯಿಂದ ಸಂಕೋಚ ಕ್ರಿಯೆ ಉಂಟಾಗುತ್ತದೆ. ಉದ್ವೇಗದಲ್ಲಿ ಹೆಚ್ಚಳಗೊಂಡು ಕೂಡಲೇ ರಿಲೀಸ್ ಆಗಿರುತ್ತದೆ.

ಹರ್ಡೆನ್ ಬರ್ಗ್ರವರ ಅಂದಾಜಿನಂತೆ ‘ಆರ್ಗ್ಯಾಸಮ್’ನ ಅವಧಿ ಹನ್ನೆರಡು ಮತ್ತು ಹದಿನೈದು ಸೆಕೆಂಡುಗಳ ಮಧ್ಯೆಯಿರುತ್ತದೆ. ಡಾ|| ಹನ್ಹಾ ಮತ್ತು ಡಾ|| ಅಬ್ರಹಾಂಸ್ಟೋನ್‌ರವರು ‘ಆರ್ಗ್ಯಾಸಮ್’ ಎಂದರೆ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಜನನೇಂದ್ರಿಯಗಳ ಭಾಗದಲ್ಲಿ ಅತಿ ಸಂಕೋಚನೆ (ಕನ್‌ಟ್ರಾಕ್ಷನ್) ಗೊಳ್ಳುವುದು. ಅಲ್ಲದೆ ಸ್ತ್ರೀಯಲ್ಲಿ ಈ ರೀತಿಯ ಲಯಬದ್ಧತೆ ಸ್ವಪ್ರೇರಣೆಯ ಸಂಕೋಚವು ಯೋನಿ ಮತ್ತು ಭಗಾಂಕುರ (ಕ್ಲೈಟೋರಿಸ್) ದಲ್ಲಿ ಕೇಂದ್ರೀಕೃತಗೊಂಡಿರುತ್ತದೆ ಎಂದು ತಿಳಿದ್ದಾರೆ.

* * *