ಪ್ರೀತಿ-ನೀತಿ ಅವಿಭಾಜ್ಯ ಅಂಗ ಆರೋಗ್ಯಕರವಾಗಿ ಪ್ರೀತಿಸುವುದು ಎಂದರೆ, ಆರೋಗ್ಯಕರ ಜೀವಿಸುವುದು ಎಂದರ್ಥ.

ಪಂಚೇಂದ್ರೀಯಗಳ ಕಾವ್ಯ ಪ್ರೀತಿ

ಲೆವಿನ್ ಎಂ.ಟೆರ್ಮಾನ್ ಎಂಬ ಮನೋವಿಜ್ಞಾನಿ ದಂಪತಿಗಳ ಬಗ್ಗೆ ನಡೆಸಿದ ಅಧ್ಯಯನದಿಂದ ಆಯ್ದ ಮುಖ್ಯಾಂಶಗಳು.

ಸಂತೋಷ ಮತ್ತು ಅಸಂತೋಷದ ಹೆಂಡತಿಯರು:

ಸಂತೋಷವುಳ್ಳ ಹೆಂಡತಿಯ ಪ್ರವೃತ್ತಿ ಕರುಣೆಯಿಂದ ಕೂಡಿರುವುದಲ್ಲದೆ, ಉತ್ತಮ ರೀತಿಯ ಸಹಕಾರ ಮನೋಭಾವನೆಯನ್ನು ಹೊಂದಿರುತ್ತದೆ. ಆರೈಕೆಯ ಚಟುವಟಿಕೆಯಲ್ಲಿ ಆಸಕ್ತಿಯುಳ್ಳವರಾಗಿರುತ್ತಾರೆ. ಅಲ್ಲದೆ, ಅವಲಂಬಿತರು ದುರ್ಬಲರ ಸೇವೆ ಮಾಡಲು ಇಷ್ಟವುಳ್ಳವರಾಗಿರುತ್ತಾರೆ. ತಮ್ಮ ಕೆಲಸ-ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಾರೆ. ಹಣವನ್ನು ದುಂದು ವೆಚ್ಚ ಮಾಡುವುದಿಲ್ಲ. ಜೀವನದಲ್ಲಿ ಆಶಾಭಾವನೆಯನ್ನು ಸುತ್ತು ಜೀವನ ಪ್ರೀತಿಯನ್ನು ಹೊಂದಿರುತ್ತಾರೆ.

ಅಸಂತೋಷವುಳ್ಳ ಪತ್ನಿಯರು ಮೂಡಿಯಾಗಿರುವುದಲ್ಲದೆ, ಕೀಳರಿಮೆಯ ಭಾವನೆಗಳನ್ನು ಹೊಂದಿರುತ್ತಾರೆ. ಕೆರಳಿಕೆಯನ್ನು ಹೊಂದಿರುವುದಲ್ಲದೆ, ಸರ್ವಾಧಿಕಾರಿತನವನ್ನು ತೋರುತ್ತಾರೆ. ಸಾಮಾಜಿಕ ಜೀವನದಲ್ಲಿ ಚಿಂತಾಪರರಾಗಿರುತ್ತಾರೆ. ಕಲ್ಯಾಣಕಾರಿ ಚಟುವಟಿಕೆಗಳ ಬಗ್ಗೆ ಆಸಕ್ತಿಯಿರುವುದಿಲ್ಲ. ಪರಸ್ಥಳದಲ್ಲಿ ತನ್ನ ಗಂಡನಿದ್ದರೂ ಪತ್ರ ವ್ಯವಹಾರ ಮಾಡಲು ಕೂಡ ಆಸಕ್ತಿ ತೋರುವುದಿಲ್ಲ. ತೊಂದರೆ, ಸಮಸ್ಯೆಗಳು ಉಂಟಾದರೆ, ಹಿರಿಯರ ಅಥವಾ ಅನುಭವಿಗಳ ಸಲಹೆಯನ್ನು ಪಡೆಯದೆ ಏಕಾಂಗಿಯಾಗಿಯೇ ತಮ್ಮ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಸಂತೋಷವುಳ್ಳ ಹೆಂಡತಿ, ತಮ್ಮ ತೊಂದರೆ, ಸಮಸ್ಯೆಗಳನ್ನು ಆತ್ಮೀಯರೊಂದಿಗೆ ತಿಳಿಸಿ ಸೂಕ್ತ ಪರಿಹಾರ ಕಂಡುಕೊಳ್ಳುತ್ತಾರೆ.

ಸಂತೋಷ ಮತ್ತು ಅಸಂತೋಷದ ಗಂಡಂದಿರು

ಸಂತೋಷವುಳ್ಳ ಗಂಡಂದಿರು, ಸಹಕಾರ ಮನೋಭಾವನೆಯನ್ನು ಹೊಂದಿರುತ್ತಾರೆ. ತಮ್ಮ ಸಹೋದ್ಯೋಗಿಗಳೊಡನೆ ಹೊಂದಿಕೊಂಡುಹೋಗುತ್ತಾರೆ. ಸ್ತ್ರೀಯರು ಕೂಡ ಪುರುಷರಷ್ಟೇ ಸಮಾನರೆಂದು ನಂಬುತ್ತಾರೆ. ಕುಟುಂಬವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ. ದುಂದ ವೆಚ್ಚ ಮಾಡದೆ ಹಣವನ್ನುಉಳಿಸುತ್ತಾರೆ. ಧಾರ್ಮಿಕ ಆಚರಣೆಗಳ ಬಗ್ಗೆ ಆಸಕ್ತಿಯನ್ನು ಹೊಂದಿರುತ್ತಾರೆ. ಅಲ್ಲದೆ ಲೈಂಗಿಕತೆಯ ಬಗೆಗೆ, ಸಮಾಜದಲ್ಲಿರುವ ನಿಯಮ-ನಿಬಂಧನೆಗಳನ್ನು ಅನುಸರಿಸುವುದಿಲ್ಲದೆ ಗೌರವಿಸುತ್ತಾರೆ.

ಅಸಂತೋಷವುಳ್ಳ ಗಂಡಂದಿರು, ಮೂಡಿಯಾಗಿರುವುದಲ್ಲದೆ, ಕೀಳರಿಮೆಯ ಭಾವನೆಗಳನ್ನು ಹೊಂದಿರುತ್ತಾರೆ. ಇತರರು ಉತ್ತಮ ಅಭಿಪ್ರಾಯಗಳನ್ನು ನೀಡಿದರು ಒಪ್ಪುವುದಿಲ್ಲ. ತಮ್ಮ ಕೆಲಸ, ಕಾರ್ಯಗಳಲ್ಲಿ ಕ್ರಮಬದ್ಧತೆಯಿರುವುದಿಲ್ಲ. ದುಂದುವೆಚ್ಚಮಾಡುತ್ತಾರೆ. ಜೂಜಾಟದ ಬಗ್ಗೆ ಹೆಚ್ಚು ಆಸಕ್ತಿಯನ್ನು ತಳೆದಿರುತ್ತಾರೆ. ಅಸಂತೋಷದ ಪತ್ನಿಯರಂತೆ ಉಪಯೋಗಕಾರಿಯಲ್ಲದ ಆಲೋಚನೆಗಳಲ್ಲಿ ತೊಡಗಿರುತ್ತಾರೆ. ಆತ್ಮ ವಿಶ್ವಾಸವಿರುವುದಿಲ್ಲ. ಅಲ್ಲದೇ ಸಂತೋಷವುಳ್ಳ ಪುರುಷರಂತೆ ಆಶಾಭಾವನೆಯನ್ನು ಹೊಂದಿರುವುದಿಲ್ಲ.

ವೈವಾಹಿಕ ಜೀವನದಲ್ಲಿ ಲೈಂಗಿಕತೆ

ವೈವಾಹಿಕ ಜೀವನದಲ್ಲಿ ಲೈಂಗಿಕತೆ, ಗಂಡ-ಹೆಂಡತಿಯರಿಬ್ಬರ ವರ್ತನೆಯನ್ನು ಅವಲಂಬಿಸಿರುತ್ತದೆ. ಪ್ರತಿಯೊಬ್ಬ ಸಂಗಾತಿಯ ಪ್ರತಿಕ್ರಿಯೆ ಪರಸ್ಪರ ಮೂಡ್‌ನ್ನು ಅವಲಂಬಿಸಿ ವ್ಯತ್ಯಾಸಗೊಂಡಿರುತ್ತದೆ. ಇದರಲ್ಲಿ ದಂಪತಿಗಳಿಬ್ಬರ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಸ್ಥಿತಿ ಚೆನ್ನಾಗಿದ್ದು, ಆರೋಗ್ಯಕರ ಲೈಂಗಿಕ ತಂತ್ರಗಳ ಬಗ್ಗೆ ಜ್ಞಾನವಿದ್ದರೆ, ಮಾನಸಿಕ ಸ್ಥಿತಿ ಉತ್ತಮರೀತಿಯಲ್ಲಿ ಜೊತೆಗೂಡಿದ್ದರೆ, ದಂಪತಿಗಳಿಬ್ಬರು ಲೈಂಗಿಕ ಕ್ರಿಯೆಯನ್ನು ಸಂತೋಷದಿಂದ ಅನುಭವಿಸಲು ಸಾಧ್ಯವಾಗುತ್ತದೆ.

ಸಹಪ್ರವರ್ತನೆಯ ಅಸ್ತಿತ್ವ ಉಂಟಾಗಬೇಕಾದರೆ, ದಂಪತಿಗಳಿಬ್ಬರು ಲೈಂಗಿಕ ಕ್ರಿಯೆಗೆ ಸ್ವಲ್ಪಮಟ್ಟಿಗಾದರೂ ತಮ್ಮದೇ ಆದ ಕಾಣಿಕೆಯನ್ನು ಸೇರ್ಪಡೆ ಮಾಡಿದರೆ ಮಾತ್ರ ಸಾಧ್ಯವೇ ಹೊರತು ಬರೀ ಅರ್ಪಿಸಿಕೊಂಡ ಮಾತ್ರಕ್ಕೆ ಸಾಧ್ಯವಾಗುವುದಿಲ್ಲ.

ದಂಪತಿಗಳಿಬ್ಬರಲ್ಲೂ ಪ್ರೀತಿಯ ಮೂಡ್ ಇಲ್ಲದಿದ್ದರೂ ಉದ್ವೇಗ (ಟೆನ್‌ಷನ್) ವನ್ನು ಪರಿಹರಿಸಿಕೊಳ್ಳಲು ಸೆಕ್ಸನ್ನು ಉಪಯೋಗಿಸಿಕೊಂಡರೆ ರಿಲೀಫ್ ಸಿಕ್ಕರೂ, ಪೂರ್ಣತೆಯನ್ನು ಹೊಂದಲಾಗುವುದಿಲ್ಲ! ಒಂದು ರೀತಿಯ ನಿರಾಶೆ ಉಂಟಾಗಬಹುದು!

ಗಂಸು, ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಕಾದರೆ, ಆತನ ಜನನೇಂದ್ರಿಯ ಉದ್ರೇಕಗೊಂಡಿರುವುದು ಅಗತ್ಯ. ಆತನಿಗೆ ಸೆಕ್ಸ್ ಬಗ್ಗೆ, ಆಸಕ್ತಿ ಇಲ್ಲದಿದ್ದರೆ, ಅಥವಾ ಲೈಂಗಿಕ ಭಯವಿದ್ದರೆ ಆತನಲ್ಲಿ ಉದ್ರೇಕ ಉಂಟಾಗುವುದಿಲ್ಲ. ಹೆಣ್ಣಿನಲ್ಲಿ ಲೈಂಗಿಕ ಪ್ರತಿಕ್ರಿಯೆಗೆ ಆಕೆಯ ಮನಸ್ಸು ದೇಹ ಒಪ್ಪಿಕೊಂಡರೆ ಮಾತ್ರ ಉದ್ರೇಕ ಸ್ಥಿತಿ ಉಂಟಾಗಲು ಸಾಧ್ಯ. ಅಲ್ಲದೆ ಗಂಡನಿಂದ ಕಾಮೋತ್ತೇಜನ ಕ್ರಿಯೆ ಸುಮಧುರವಾಗಿ ನಡೆಯುವುದು ಬಹಳ ಅಗತ್ಯ!

ವಿಕೃತವರ್ತನೆ

ಟೆಲಿಫೋನ್ ಸ್ಕಟಾಲೊಜಿ ಎಂದರೆ, ವಿಕೃತ ಕಾಮಿಗಳು ಹೆಣ್ಣಿನೊಡನೆ ಅಶ್ಲೀಲ, ಹೊಲಸುಗಳ ಸಂಭಾಷಣೆ ನಡೆಸುವುದು ಎಂದರ್ಥ. ತಮಗಿಷ್ಟವಾದ ಮಹಿಳೆಯರ ಟೆಲಿಫೋನ್ ನಂಬರನ್ನು ಪತ್ತೆ ಮಾಡಿ, ಅವರ ಧ್ವನಿ ಫೋನ್‌ನಲ್ಲಿ ಕೇಳಿ ಬಂದ ಕೂಡಲೇ ಆಶ್ಲೀಲ ಮಾತಾಡುತ್ತಾರೆ. ಇದು ವಿಕೃತಕಾಮದ ಒಂದು ವಿಧಾನ! ಇಂತಹವರನ್ನು ಪತ್ತೆ ಮಾಡಿ ಮನೋವೈದ್ಯರಲ್ಲಿ ತೋರಿಸಬೇಕು. ಇಲ್ಲವಾದರೆ ಎಷ್ಟೋ ಮಹಿಳೆಯರ ಮನಸ್ಸನ್ನು ಹಾಳು ಮಾಡುತ್ತಾರೆ.

ನವವಧುವರರು ಹನಿಮೂನ್ ಹೋಗಬೇಕೆ?

ಹನಿಮೂನ್ ಅಥವಾ ಮಧುಚಂದ್ರ, ಅನವಶ್ಯಕ, ವ್ಯರ್ಥ, ದುಂದು ವೆಚ್ಚ ಮತ್ತು ಕೃತಕ ಅಲ್ಲದೆ, ವೈವಾಹಿಕ ಜೀವನವನ್ನು ತಪ್ಪು ದಾರಿಯಿಂದ ಆರಂಭಿಸಿದಂತಾಗುತ್ತದೆ ಎಂದು ಕೆಲವು ವೈವಾಹಿಕ ಸಮಾಲೋಚಕರು ಅಭಿಪ್ರಾಯಪಡುತ್ತಾರೆ.

ಇಬ್ಬರು ತಾರುಣ್ಯರು ವಧುವರರಿಗೆ ಹನಿಮೂನ್ ನಡೆಸಲು ಸೂಕ್ತ ಸ್ಥಳವೆಂದರೆ ಮನೆಯಲ್ಲಿನ ಏಕಾಂತತೆಯನ್ನು ಹೊಂದಿರುವ ಕೊಠಡಿಯೇ ಆಗಿರುತ್ತದೆ. ಈ ಏಕಾಂತ ಸ್ಥಳದಲ್ಲಿಯೇ, ನವ-ವಧುವರರು ಒಟ್ಟು ಗೂಡಿ ಪ್ರಣಯ ಪ್ರಯೋಗಗಳನ್ನುನಿರ್ವಹಿಸಬಹುದು. ಹೋಟೆಲ್‌ನಲ್ಲಿ ರೂಂ ಮಾಡಿ, ಹನಿಮೂನ್‌ನನ್ನು ಅನುಭವಿಸುವುದು ಅಸಹಜದ ಸ್ಥಿತಿಯಾಗಿ ಇರುತ್ತದೆ. ಅಲ್ಲದೆ ಅಲ್ಲಿನ ವಾತಾವರಣ ಪ್ರತಿಬಂಧಕವನ್ನು ಹೇರುವುದರಿಂದ, ನವ ವಧು-ವರರು ಪರಸ್ಪರ ಮುಕ್ತವಾಗಿ ಕೂತು ಮಾತಾಡಲು ಓಡಾಡಲು ತೊಡಕನ್ನುಮೂಡಿಸುತ್ತದೆ.

ಅಪರಿಚಿತ ಜಾಗದಲ್ಲಿ, ನಿಜವಾದ ಪ್ರೀತಿ, ಪ್ರೇಮ ಪ್ರಣಯ ನಿರ್ವಹಣೆಗೆ ಅಡ್ಡಿ ಆತಂಕ ಉಂಟಾಗುವುದಲ್ಲದೆ, ಪರಸ್ಪರ ಗಂಡು, ಹೆಣ್ಣು ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದುದರಿಂದ ಹನಿಮೂನ್‌ಗೆ ಸೂಕ್ತ ಸ್ಥಳವೆಂದರೆ ಕೌಟುಂಬಿಕ ಸಹಜ ಪರಿಸರವನ್ನು ಪಡೆದಿರುವ, ಮನೆಯ ಏಕಾಂತವಾದ ಸ್ಥಳ. ಒಮ್ಮೊಮ್ಮೆ ಹೋಟೆಲ್‌ಗಳಲ್ಲಿ ವಿಕೃತ ಕಾಮಿಗಳಿಂದ ಅಡಚಣೆಯೂ ಸಂಭವಿಸಬಹುದು.

ಕೆಲವೊಮ್ಮೆ ಹೋಟೆಲ್‌ಗಳಲ್ಲಿ ವಸತಿ ಸೌಕರ್ಯವನ್ನು ಏರ್ಪಡಿಸಿಕೊಂಡು, ಹನಿಮೂನ್‌ಗೆ ಸಿದ್ದತೆ ಮಾಡಿಕೊಂಡಿದ್ದಾಗ, ಕೆಲವು ಗಂಡಂದಿರು ಇಸ್ಪೀಟ್ ಆಡಲು ಅಥವಾ ಕುಡಿತರ ಚಟವಿರುವ ಗಂಡಂದಿರು ಕುಡಿಯಲು ಹೋಗಿ ನವವಧುವಿನಲ್ಲಿ ಗಾಬರಿ, ಭಯ ಕಳವಳ ಮೂಡಿಸುವುದುಂಟು!

ಒಬ್ಬಾಕೆ ಹೀಗೆನ್ನುತ್ತಾಳೆ: “ನಾವು ಹನಿಮೂನ್‌ಗೆ ಅಂತ ಊಟಿಗೆ ಹೋದೆವು. ನನ್ನ ಗಂಡ ಹೋಟೆಲ್‌ವೊಂದರಲ್ಲಿ ನನ್ನನ್ನು ಕೂಡಿಸಿ ಹೋದವರು ಬೆಳಗಿನ ಜಾವ ೫ ಗಂಟೆಗೆ ರೂಮ್ ಬಾಗಿಲು ತಟ್ಟಿದರು ನನಗೆ ಯಾತಕ್ಕಾಗಿ ಹನಿಮೂನ್‌ಗೆ ಬಂದೆವೂ ಅಂತ ಬಹಳ ಬೇಸರವಾಯ್ತು.”

ಇನ್ನೊಬ್ಬಾಕೆ ಹೀಗೆನ್ನುತ್ತಾಳೆ: “ನಾನು ನನ್ನ ಗಂಡನ ಜೊತೆ ಹನಿಮೂನ್‌ಗೆ ಅಂತ ಗೋವಾಗೆ ಹೋದೆನು. ನನ್ನ ಗಂಡ ಫ್ರೆಂಡನ್ನು ನೋಡಿ ಬರುತ್ತೇನೆಂದು ಹೇಳಿ ಹೋದವರು ಇಡೀ ರಾತ್ರಿ ಬರದೇ ನನ್ನನ್ನು ಏಕಾಂಗಿ ಬಿಟ್ಟು ಬೇಸರ ಮೂಡಿಸಿದ್ರು” ಎಂದು ತಿಳಿಸಿದ್ದಾರೆ.

ಈಗ ಯೋಚಿಸಿ, ಹನಿಮೂನ್‌ಗೆ ಮನೆಯ ಏಕಾಂತದ ಪರಿಸರ ಉತ್ತಮವೋ, ಹೋಟೆಲ್ ಪರಿಸರ ಉತ್ತಮವೋ!!

* * *