(ಕ್ರಿ. ಶ. ೧೮೯೧-೧೯೪೧) (ಸಕ್ಕರೆ ರೋಗ ನಿಯಂತ್ರಣ)

ಫ್ರೆಡರಿಕ್ ಗ್ರಾಂಟ್ ಬ್ಯಾಂಟಿಂಗ್ ೧೮೯೧ರಲ್ಲಿ ಆಂಟೊರಿಯದ ಆಲಿಸ್ಟನ್ ಎಂಬ ಗ್ರಾಮದಲ್ಲಿ ಜನಿಸಿದರು. ಆತ ಟೊರ‍್ಯಂಟೊ ವಿಶ್ವವಿದ್ಯಾಲಯದಲ್ಲಿ ವೈದ್ಯಶಾಸ್ತ್ರ ವ್ಯಾಸಂಗ ಮಾಡಿ ಪದವಿ ಪಡೆದರು. ಮೊದಲನೆ ಯಜಾಗತಿಕ ಯುದ್ಧದಲ್ಲಿ ಸೇವೆ ಸಲ್ಲಿಸುವ ಉದ್ದೇಶದಿಂದ ಇಂಗ್ಲೆಂಡ್ ಫ್ರಾನ್ಸ್ ದೇಶಗಳಿಗೆ ಹೋದರು. ಆದರೆ ಗಾಯಗೊಂಡು ಹಿಂತಿರುಗಿದರು. ತರುವಾಯ ಲಂಡನ್ ನಗರದಲ್ಲಿ ಶರೀರಕ್ರಿಯಾ ಶಾಸ್ತ್ರದ ಬೋಧಕರಾಗಿ ಸೇವೆ ಸಲ್ಲಿಸತೊಡಗಿದರು.

ಲಂಡನ್ ನಗರದ ವಿಶ್ವವಿದ್ಯಾಲಯದಲ್ಲಿ ಮಧುಮೇಹದ (ಸಕ್ಕರೆ ರೋಗದ) ಬಗ್ಗೆ ಉಪನ್ಯಾಸ ನೀಡುತ್ತಿದ್ದಾಗ ಈ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಲ್ಲಂಥ ಸಂಶೋಧನೆಯೊಂದನ್ನು ಮಾಡುವುದರಲ್ಲಿ ಅವರ ಆಸಕ್ತಿ ಬೆಳೆಯಿತು. ೧೯೨೧ರ ಮೇ ತಿಂಗಳಿನಿಂದ ಅವರು ಈ ನಿಟ್ಟಿನಲ್ಲಿ ಕಾರ್ಯತತ್ಪರರಾದರು. ನಾಯಿಗಳ ಮೇಲೆ ಅನೇಕ ಪ್ರಯೋಗಗಳನ್ನು ಮಾಡಿದರು. ಅವರು ಮಾಡಿದ ಪ್ರಯೋಗಗಳಿಂದ ದೃಢಪಟ್ಟ ಅಂಶ ನಾಯಿಯ ಮಾಂಸಲಿಯಿಂದ (ಪ್ಯಾನ್ ಕ್ರಿಯಾ) ತೆಗೆಯಲಾದ ರಸವಿಶೇಷ ಸಕ್ಕರೆ ರೋಗವಿರುವ ನಾಯಿಗಳ ಜೀವವನ್ನು ದೀರ್ಘವಾಗಿಸಲು ಸಹಾಯಕವಾಗುವುದು. ಮಾಂಸಲಿಯು ಸ್ರವಿಸುವ ರಸದೂತವನ್ನು (ಹಾರ್ಮೋನ್) ಅಥವಾ ರಸವಿಶೇಷವನ್ನು ‘ಇನ್‌ಸುಲಿನ್’ ಎಂದು ಕರೆಯಲಾಯಿತು. ಆದರೆ ಈ ಇನ್‌ಸುಲಿನ್ ಅನ್ನು ಮನುಷ್ಯರಿಗೆ ಕೊಡಬೇಕಾದರೆ ಅದು ಪರಿಶುದ್ಧವಾಗಿರಬೇಕು. ಕೊಲಿಪ್ ಎಂಬ ರಸಾಯನ ಶಾಸ್ತ್ರಜ್ಞನ ಸಹಾಯದಿಂದ ಅದರ ಶುದ್ಧ ರೂಪವನ್ನು ಪಡೆಯುವಲ್ಲಿ ಬ್ಯಾಂಟಿಂಗ್ ಸಫಲರಾದರು. ಪರಿಣಾಮವಾಗಿ ೧೯೨೨ರ ಜನವರಿಯಲ್ಲಿ ಅದರ ಶುದ್ಧರೂಪ ಸಿದ್ಧವಾಯಿತು. ಸಕ್ಕರೆ ರೋಗದಿಂದ ಬಳಲುತ್ತಿದ್ದ ೧೪ ವರ್ಷದ ಹುಡುಗನೊಬ್ಬನಿಗೆ ಶುದ್ಧರೂಪದ ಮಾಂಸಲಿ ರಸವಿಶೇಷವನ್ನು ಚುಚ್ಚಲಾಯಿತು. ಹುಡುಗ ಎರಡೇ ವಾರಗಳಲ್ಲಿ ಚೇತರಿಸಿಕೊಂಡ.

ಅನೇಕ ವ್ಯಾಪಾರಿ ಸಂಸ್ಥೆಗಳು ಹಂದಿ ಮತ್ತು ದನಗಳ ಮಾಂಸಲಿಯಿಂದ ಇನ್ಸುಲಿನ್ ರಸದೂತವನ್ನು ಸಿದ್ಧಪಡಿಸಿ ಸಾರ್ವತ್ರಿಕ ಬಳಕೆಗೆ ಬಿಡುಗಡೆಮಾಡಿದವು. ಹಿಂದಿನಿಂದಲೂ ‘ಶ್ರೀಮಂತರ ಕಾಯಿಲೆ’ ಎಂದೇ ಪರಿಚಿತವಾಗಿರುವ ಮಧುಮೇಹ ರೋಗಕ್ಕೆ ಪರಿಣಾಮಕಾರಿಯಾದ ಸಿದ್ಧೌಷಧ ಕಂಡು ಹಿಡಿದವರು ಬ್ಯಾಂಟಿಂಗ್. ಅಲ್ಲಿಂದ ಈ ರೋಗಚಿಕಿತ್ಸೆಯಲ್ಲಿ ಒಂದು ಹೊಸ ಅಧ್ಯಾಯ ಪ್ರಾರಂಭವಾಯಿತು. ೧೯೨೩ರಲ್ಲಿ ಮೆಕ್ಲಿಯೋಡ್ ಎಂಬುವರ ಜತೆ ಬ್ಯಾಂಟಿಂಗ್ ಸಂಯುಕ್ತವಾಗಿ ನೊಬೆಲ್ ಪಾರಿತೋಷಕ ಪಡೆದರು.

ಬ್ಯಾಂಟಿಂಗ್ ತನ್ನ ಐವತ್ತನೆಯ ವಯಸ್ಸಿನಲ್ಲೇ ವಿಮಾನ ಅಪಘಾತವೊಂದರಲ್ಲಿ ಸಿಕ್ಕು ಅಕಾಲಿಕ ಸಾವನ್ನಪ್ಪಿದ್ದು ವಿಜ್ಞಾನಲೋಕಕ್ಕೆ ತುಂಬಲಾಗದ ನಷ್ಟವಾಯಿತು.